ಮಂಗಳವಾರ, ಜುಲೈ 15, 2014

ಒಂಭತ್ತು ಬಾಗಿಲೊಳು ಒಂದೇ ದೀವಿಗೆ ಹಚ್ಚಿ : Ombhattu Bagilolu Onde Divige Hachchi

ಒಂಭತ್ತು ಬಾಗಿಲೊಳು ಒಂದೇ ದೀವಿಗೆ ಹಚ್ಚಿ

ಕೀರ್ತನಕಾರರು : ಪುರಂದರದಾಸರು
ರಾಗ : ಮಾಯಾಮಾಳವ ಗೌಳ
ತಾಳ : ಆದಿ

ಒಂಭತ್ತು ಬಾಗಿಲೊಳು ಒಂದೇ ದೀವಿಗೆ ಹಚ್ಚಿ
ನಂಬಿಕಿಲ್ಲದ ಸಂಸಾರ ಮಾಡಿದೆನೆ ಸೂವಿಯಾ ಬೀಬಿ ॥ಪ॥ 

ತನುವೆಂಬ ಕಲ್ಲಿನೊಳು ಮನವೆಂಬ ಧಾನ್ಯವ ತುಂಬಿ
ವನವನದು ನವಬೇಳೆ ಬೀಸಿದೆನೆ  ॥೧॥

ಅಷ್ಟಕರ್ತೃಗಳೆಂಬೋ ಅಷ್ಟನವಧಾನ್ಯವ ತಂದು
ಕುಟ್ಟಿತಟ್ಟಿ ಕಜ್ಜಾಯ ಕರಿದೆನೆ  ॥೨॥

ಅಷ್ಟಕರ್ಮಗಳೆಂಬೋ ಕಾಷ್ಠವನ್ನುರುಹಿ ನಾನು
ನಿಷ್ಥೆಯಿಂದಲಿ ಅನ್ನವ ಬಾಗಿದೆನೆ  ॥೩॥

ಅಷ್ಟರೊಳಗೆನ್ನ ಗಂಡ ಬಂದು ಅಡುವ ಮಡಿಕೆಯ ಒಡೆದು
ಮುಟ್ಟಿಮುರಿದು ಮೂಲೆಗೆ ಹಾಕಿದನೆ  ॥೪

ಉಡುವ ಸೀರೆಯ ಸೆಳೆದು ಗಿಡದ ತೊಪ್ಪಲ ಸುತ್ತಿ
ತಿರುಗಿ ಬಾರದ್ಹಾಂಗೆ ಮಾಡಿದನೆ  ॥೫॥

ಮಾಡಿದೆ ಒಗೆತನವ ನಂಬಿಕಿಲ್ಲದ ಸಂಸಾರವ ನೆಚ್ಚಿ
ಕೂಡಿದೆ ಪುರಂದರವಿಠಲನ್ನ ದಾಸರ  ॥ ೬॥

Labels: ಒಂಭತ್ತು ಬಾಗಿಲೊಳು ಒಂದೇ ದೀವಿಗೆ ಹಚ್ಚಿ, Ombhattu Bagilolu Onde Divige Hachchi, ಪುರಂದರದಾಸರು, Purandaradasaru

ಒಂದೆ ಕೂಗಳತೆ ವೈಕುಂಠಕೆ : Onde Kugalate Vaikunthake

ಒಂದೆ ಕೂಗಳತೆ ವೈಕುಂಠಕೆ 

ಕೀರ್ತನಕಾರರು : ಪುರಂದರದಾಸರು
ರಾಗ : ಕಲ್ಯಾಣಿ
ತಾಳ : ಅಟ್ಟ

ಒಂದೆ ಕೂಗಳತೆ ವೈಕುಂಠಕೆ ॥ಪ॥ 
ಸಂದೇಹವಿಲ್ಲವೋ ಸಾಧು ಸಜ್ಜನರಿಗೆ ॥ಅ.ಪ॥ 

ಸರಸಿಯಲಿ ಆನೆ ಪೊರೆಯೆಂದು ಕರೆಯಲು
ತ್ವರಿತದಿ ಬಂದು ಕಾಯ್ದಾ
ನರಹರಿ ಕೃಷ್ಣಾ ಸಲಹೆಂದು ಚೀರಲು
ತರಳ ಪ್ರಹ್ಲಾದಗೆ ಕಂಬದಿಂದಲಿ ಬಂದ ॥೧॥

ಅಂಬರೀಷ ದ್ವಾದಶೀವ್ರತ ಮಾಡಲು
ದೊಂಬಿ ಮಾಡಿದ ದುರ್ವಾಸಮುನಿ
ಕುಂಭಿನೀಪತಿ ಕೃಷ್ಣಾ ಕಾಯೆಂದು ಮೊರೆಯಿಡೆ
ಬೆಂಬತ್ತಿ ಚಕ್ರದಿ ಮುನಿಶಾಪವನು ಕಳೆದ ॥೨॥

ದ್ರುಪದರಾಯನ ಪುತ್ರಿಯಾಪತ್ತ ಕಳೆಯೆನೆ
ಕೃಪೆಯಿಂದ ಅಕ್ಷಯವಿತ್ತ ತಾನು
ಕಪಟನಾಟಕ ಕೃಷ್ಣ ಪುರಂದರವಿಠಲನ
ಗುಪಿತದಿ ನೆನೆವರ ಹೃದಯವೇ ವೈಕುಂಠವು ॥೩॥

Labels: ಒಂದೆ ಕೂಗಳತೆ ವೈಕುಂಠಕೆ, Onde Kugalate Vaikunthake, ಪುರಂದರದಾಸರು, Purandaradasaru 

ಬುಧವಾರ, ಜನವರಿ 8, 2014

ಲಾಲಿ ಗೋವಿಂದ ಲಾಲಿ : Laali Govinda Laali

ಲಾಲಿ ಗೋವಿಂದ ಲಾಲಿ

ಕೀರ್ತನಕಾರರು : ಶ್ರೀಪಾದರಾಜರು
ರಾಗ : ಆನಂದಭೈರವಿ
ತಾಳ : ಝಂಪೆ

ಲಾಲಿ ಗೋವಿಂದ ಲಾಲಿ ಕೌಸಲ್ಯ
ಬಾಲ ಶ್ರೀರಾಮ ಲಾಲಿ  ||ಪ||

ಲಾಲಿ ಮುನಿವಂದ್ಯ  ಲಾಲಿ  ಜಾನಕಿ
ರಮಣ  ಶ್ರೀ ರಾಮ  ಲಾಲಿ            ||ಅ. ಪ||

ಕನಕರತ್ನಗಳಲ್ಲಿ  ಕಾಲ್ಗಳನೆ ಹೂಡಿ
ನಾಲ್ಕು ವೇದಗಳನ್ನು ಸರಪಣಿಯ ಮಾಡಿ
ಅನೇಕ ಭೂಮಂಡಲವ ಹಲಗೆಯ ಮಾಡಿ
ಶ್ರೀಕಾಂತನ ಉಯ್ಯಾಲೆಯನು ವಿರಚಿಸಿದರು ||೧||

ಆಶ್ಚರ್ಯಜನಕವಾಗಿ  ನಿರ್ಮಿಸಿದ
ಪಚ್ಚೆಯ ತೊಟ್ಟಿಲಲ್ಲಿ
ಅಚ್ಯುತಾನಂತನಿರಲು  ತೂಗಿದರು
ಮತ್ಸ್ಯಾವತಾರ ಹರಿಯ                           ||೨||

ಧರ್ಮಸ್ಥಾಪಕನು ಎಂದು ನಿರವಧಿಕ
ನಿರ್ಮಲ ಚರಿತ್ರನೆಂದು
ಮರ್ಮ ಕರ್ಮಗಳ ಪಾಡಿ ತೂಗಿದರು
ಕೂರ್ಮಾವತಾರ  ಹರಿಯ                    ||೩||

ಸರಸಿಜಾಕ್ಷಿಯರೆಲ್ಲರು ಜನವಶೀ
ಕರ ದಿವ್ಯರೂಪನೆಂದು
ಪರಮ ಹರುಷದಲಿ ಪಾಡಿ ತೂಗಿದರು
ವರಾಹವತಾರ  ಹರಿಯ                   ||೪||

ಕರಿ ಕುಂಭಗಳ  ಪೋಲುವ ಕುಚದಲ್ಲಿ
ಹಾರ  ಪದಕವು ಹೊಳೆಯಲು
ವರವರ್ಣಿನಿಯರು ಪಾಡಿ ತೂಗಿದರು
ನರಸಿಂಹಾವತಾರ ಹರಿಯ           ||೫||

ಭಾಮಾಮಣಿಯರೆಲ್ಲರು ಯದುವಂಶ
ಸೋಮನಿವನೆಂದು ಪೊಗಳಿ
ನೇಮದಿಂದಲಿ ಪಾಡಿ ತೂಗಿದರು
ವಾಮನವತಾರ ಹರಿಯ              ||೬||

ಸಾಮಜವರದನೆಂದು ಅತುಳ ಭೃಗು
ರಾಮವತಾರನೆಂದು
ಶ್ರೀಮದಾನಂದ ಹರಿಯ ತೂಗಿದರು
ಪ್ರೇಮಾತಿರೇಕದಿಂದ         ||೭||

ಕಾಮನಿಗೆ ಕಾಮನೆಂದು ಸುರಸಾರ್ವ
ಭೌಮ ಗುಣಧಾಮನೆಂದು
ವಾಮನೇತ್ರೆಯರು ಪಾಡಿ ತೂಗಿದರು
ರಾಮಾವತಾರಿಯ ಹರಿಯ   ||೮||

ಸೃಷ್ಟಿಯ ಕರ್ತನೆಂದು ಜಗದೊಳಗೆ
ಶಿಷ್ಟ ಸಂತುಷ್ಟನೆಂದು
ದೃಷ್ಟಾಂತರಹಿತನೆಂದು ತೂಗಿದರು
ಕೃಷ್ಣಾವತಾರ  ಹರಿಯ           ||೯||

ವೃದ್ಧ  ನಾರಿಯರೆಲ್ಲರು ಜಗದೊಳಗೆ ಪ್ರ
ಸಿದ್ಧನಿವನೆಂದು ಪೊಗಳಿ
ಬದ್ಧಾನುರಾಗದಿಂದ ತೂಗಿದರು
ಬೌದ್ಧಾವಾತಾರಿಯ ಹರಿಯ           ||೧೦||

ತಲತಲಾಂತರದಿಂದ ರಂಜಿಸುವ
ಮಲಯಜಲೇಪದಿಂದ
ಜಲಜಗಂಧಿಯರು ಪಾಡಿ ತೂಗಿದರು
ಕಲ್ಕ್ಯಾವತಾರಿಯ ಹರಿಯ           ||೧೧||

ಕನಕಮಯ ಖಚಿತವಾದ ತಲ್ಪದಲಿ
ವನಜಭವ ಜನಕನಿರಲು
ವನಜನಾಭನ್ನ ಪಾಡಿ ತೂಗಿದರು
ವನಿತಮಣಿಯರೆಲ್ಲರು          ||೧೨||

ಪದ್ಮರಾಗವ ಪೋಲುವ ಹರಿಪಾದ
ಪದ್ಮವನುತ್ತಮ ಹೃದಯ
ಪದ್ಮದಲಿ ನಿಲ್ಲಿಸಿ ಪಾಡಿ ತೂಗಿದರು
ಪದ್ಮಿನೀ ಭಾಮಿನಿಯರು         ||೧೩||

ಹಸ್ತಭೂಷಣವ ಮೆರೆಯಲು ದಿವ್ಯತಾರ
ಹಸ್ತಳಗವಗಳಿಂದ
ಹಸ್ತಗಳ ಪಿಡಿದುಕೊಂಡು ತೂಗಿದರು
ಹಸ್ತಿನೀ ಭಾಮಿನಿಯರು         ||೧೪||

ಮತ್ತಗಜಗಾಮಿನಿಯರು ದಿವ್ಯತರ
ಚಿತ್ರ ವಸ್ತ್ರಗಳನುಟ್ಟು
ಚಿತ್ತ ಸಂತೋಷದಿಂದ ತೂಗಿದರು
ಚಿತ್ತಿನಿ ಭಾಮಿನಿಯರು     ||೧೫||

ಕಂಕಣ ಧ್ವನಿಗಳಿಂದ ರಂಜಿಸುವ
ಕಿಂಕಿಣೀಸ್ವರಗಳಿಂದ
ಪಂಕಜಾಕ್ಷಿಯರು ಪಾಡಿ ತೂಗಿದರು
ಶಂಕಿಣಿ ಭಾಮಿನಿಯರು     ||೧೬||

ಚೊಕ್ಕ ಕಸ್ತೂರಿ ಪಂಕದಿಂ ರಂಜಿಸುವ
ಮಾಕರಿಕಾ ಪತ್ರ ಬರೆದು
ಲಿಕುಚಸ್ತನಿಯರು ಪಾಡಿ ತೂಗಿದರು
ಅಕಳಂಕಚರಿತ ಹರಿಯ      ||೧೭||

ಪಲ್ಲವಧಾರೆಯರೆಲ್ಲ ಈ ಶಿಶುವು
ತುಲ್ಯವರ್ಜಿತವೆನುತಲಿ
ಸಲ್ಲಲಿತಗಾನದಿಂದ ತೂಗಿದರು
ಕಲ್ಯಾಣಿರಾಗದಿಂದ           ||೧೮||

ಆನಂದ ಸದನದೊಳಗೆ ಗೋಪಿಯರು
ಆ ನಂದಸುತನ ಕಂಡು
ಆನಂದಭರಿತರಾಗಿ ತೂಗಿದರು
ಆನಂದಭೈರವಿಯಿಂದ        ||೧೯||

ದೇವಾದಿದೇವನೆಂದು ಈ ಶಿಶುವು
ಭಾವನಾತೀತನೆಂದು
ದೇವಗಂಧರ್ವರು ಪಾಡಿ ತೂಗಿದರು
ದೇವಗಾಂಧಾರದಿಂದ            ||೨೦||

ನೀಲಘನಲೀಲ ಜೋ ಜೋ ಕರುಣಲ
ವಾಲ ಶ್ರೀಕೃಷ್ಣ ಜೋ ಜೋ
ಲೀಲಾವತಾರ  ಜೋ ಜೋ ಪರಮಾತ್ಮ
ಬಾಲಗೋಪಾಲ  ಜೋ ಜೋ      ||೨೧||

ಇಂಧುಧರಮಿತ್ರ ಜೋ ಜೋ ಶ್ರೀಕೃಷ್ಣ
ಇಂಧು ರವಿನೇತ್ರ ಜೋ ಜೋ
ಇಂಧು  ಕುಲಪುತ್ರ ಜೋ ಜೋ  ಪರಮಾತ್ಮ
ಇಂದಿರಾರಮಣ  ಜೋ ಜೋ         ||೨೨||

ತುಂಗ ಭವಭಂಗ  ಜೋ ಜೋ ಪರಮಾತ್ಮ
ರಂಗ  ಕೃಪಾಂಗ ಜೋ ಜೋ
ಮಂಗಳಾಪಾಂಗ ಜೋ ಜೋ ಮೋಹನಾಂಗ
ರಂಗವಿಠಲನೆ  ಜೋ ಜೋ         ||೨೩||


Labels: ಲಾಲಿ ಗೋವಿಂದ ಲಾಲಿ, Laali Govinda Laali, ಶ್ರೀಪಾದರಾಜರು, Sripadarajaru

ಹರಿ ಹರಿ ಹರಿ ಎನ್ನದೆ : Hari Hari Hari Ennade

ಹರಿ ಹರಿ ಹರಿ ಎನ್ನದೆ

ಕೀರ್ತನಕಾರರು : ಹರಪನಹಳ್ಳಿ ಭೀಮವ್ವನವರು

ಹರಿ ಹರಿ ಎನ್ನದೆ ಈ ನಾಲಿಗಿ-
ನ್ನಿರುವುದ್ಯಾತಕೆ ಸುಮ್ಮನೆ                                    ॥ಪ॥

ಸರಸಿಜಾಕ್ಷನ ದಿವ್ಯ ಸಾಸಿರನಾಮ ಬಿಟ್ಟು
ಪರರ ವಾರ್ತ್ಯೇಲಾಸಕ್ತಿ ಪಾಮರನಾಗುವುದ್ಯಾಕೆ        ॥೧॥

ಕಲ್ಲು ಹಿಟ್ಟಾಗಿ ರಂಗವಾಲಿ ಎನಿಸುವುದು
ಕಲ್ಲಿಗೆ ಕಡೆಯಾದೆ ಮಲ್ಲರಂತಕಗೆ ಬ್ಯಾಗ                  ॥೨॥

ಮಧುರ ಪದಾರ್ಥದಲ್ಲಿ ಮನಸನಿಕ್ಕಲು ಬ್ಯಾಡ
ಮಧುವೈರಿ ಹರಿನಾಮ ಕ್ಷುಧೆಯ ಬೇಡುತಲೀಗ          ॥೩॥

ಅರ್ಕಸುತನ ಭಯ ಅಂಕೆಯಿಲ್ಲದಂತಿರೆ
ಸಿಕ್ಕು ಸಿಗದಂತಿರೆ ಯುಕ್ತಿ ರಕ್ಕಸಾಂತಕನಲ್ಲಿಟ್ಟು          ॥೪॥

ಈಸು ಮತ್ಯಾಕೆ ಯಶೋದೆಕೂಸಿನಾಲಾಪ್ವೊಂದಿರಲಿ
ಲೇಸು ಕಾಂಬುವುದು ಭೀಮೇಶಕೃಷ್ಣಗೆ ಬ್ಯಾಗ            ॥೫॥


Labels: ಹರಿ ಹರಿ ಹರಿ ಎನ್ನದೆ, Hari Hari Hari Ennade, ಹರಪನಹಳ್ಳಿ ಭೀಮವ್ವನವರು, Harapanahalli Bheemavvanavaru

ಮಂಗಳವಾರ, ಡಿಸೆಂಬರ್ 3, 2013

ಇಂದು ಶುಕ್ರವಾರ ಶುಭವ ತರುವ ವಾರ : Indu Shukravara

ಇಂದು ಶುಕ್ರವಾರ ಶುಭವ ತರುವ ವಾರ

ಕೀರ್ತನಕಾರರು :
ರಾಗ :
ತಾಳ :


ಸರ್ವ ಮಂಗಲ ಮಾಂಗಲ್ಯೇ ಶಿವೇ ಸರ್ವಾರ್ತ ಸಾಧಕೇ
ಶರಣ್ಯೇ ತ್ರಯ೦ಬಕೇ ಗೌರಿ ನಾರಾಯಣೀ ನಮೋಸ್ತುತೇ ||ಧೃ||


ಇಂದು ಶುಕ್ರವಾರ ಶುಭವ ತರುವ ವಾರ
ಸುಮಂಗಲಿಯರೆಲ್ಲಾ ನಿನ್ನ
ಪೂಜಿಸುವ ಪುಣ್ಯವಾರ ||ಪ||

ಮುಂಜಾನೆಯ ಮಡಿಯುಟ್ಟು
ಕುಂಕುಮವ ಹಣೆಗಿಟ್ಟು
ರಂಗೋಲಿಯನು ಬಾಗಿಲಿಗಿಟ್ಟು

ಹಣ್ಣುಕಾಯಿ ನೀಡುವ ವಾರ ||೧||

ಮಲ್ಲಿಗೆ ಜಾಜಿ ಹೂಮಾಲೆ ಹಾಕಿ
ಚಂದನ ಹಚ್ಚಿ ಸಿಂಗಾರ ಮಾಡಿ
ಕರ್ಪೂರದಾರತಿ ನಿನಗೆ ಬೆಳಗಿ

ಭಕ್ತಿಯಿ೦ದಲಿ ಭಜಿಸುವ ವಾರ ||೨||

ಸುವಾಸಿನಿಯರಿಗೆ ಕುಂಕುಮ ಹಚ್ಚಿ
ಸಂಭ್ರಮದಿ೦ದ ಬಾಗಿನ ನೀಡಿ
ಸರ್ವ ಮಂಗಲೆಯ ಕೀರ್ತಿಯ ಹಾಡಿ

ಸಕಲ ಭಾಗ್ಯವ ಬೇಡುವ ವಾರ  ||೩||

Labels: ಇಂದು ಶುಕ್ರವಾರ ಶುಭವ ತರುವ ವಾರ, Indu Shukravara

ಸೋಮವಾರ, ಅಕ್ಟೋಬರ್ 7, 2013

ಚಿತ್ತಜನಯ್ಯನ ಚಿಂತಿಸು ಮನವೇ : Chittajanayyana Chintisu Manave

ಚಿತ್ತಜನಯ್ಯನ ಚಿಂತಿಸು ಮನವೇ

ಕೀರ್ತನಕಾರರು : ಶ್ರೀಪಾದರಾಜರು
ರಾಗ : ಕಾಂಬೋದಿ
ತಾಳ : ಆದಿ

ಚಿತ್ತಜನಯ್ಯನ ಚಿಂತಿಸು ಮನವೇ
ಹೊತ್ತು ಕಳೆಯದೆ ಸರ್ವೋತ್ತಮನ ನೆನೆ ಮನವೆ ||ಪ||

ಕಾಲನ ದೂತರು ನೂಲು ಹಗ್ಗವ ತಂದು
ಕಾಲು ಕೈಗಳ ಕಟ್ಟಿ ಮ್ಯಾಲೆ ಕುಟ್ಟಿ
ಕಾಲಪಾಶದೊಳಿಟ್ಟು ಶೂಲದಿಂದಿರುವಾಗ
ಪಾಲಿಸುವರುಂಟೆ ಜಾಲವ ಮಾಡದೆ ||೧||

ದಂಡಧರನ ಭಟರು ಚಂಡಕೋಪದಿ ಬಂದು
ಕೆಂಡದ ನದಿಯ ತಡೆಗೆ ಕೊಂಡೊಯ್ದು
ಖಂಡಖಂಡವ ಕಿತ್ತು ಕೆಂಡದೊಳಿಡುವಾಗ
ಹೆಂಡಿರು ಮಕ್ಕಳು ಬಂದು ಬಿಡಿಸಬಲ್ಲರೆ ಮರುಳೆ ||೨||

ಅಂಗಳಿಗೆ ಡಬ್ಬಣಂಗಳ ಸೇರಿಸಿ ಎರಡು
ಕಂಗಳಿಗೆ ಸೀಸವ ಕಾಸಿ ಪೊಯ್ಯಲು
ತಂಗಿ ಅಕ್ಕ ಬಂದು ಭಂಗವ ಬಿಡಿಸುವರೆ
ಅಂಗವು ಸ್ಥಿರವಲ್ಲ ರಂಗವಿಠಲ ಬಲ್ಲ ||೩||

Labels: ಚಿತ್ತಜನಯ್ಯನ ಚಿಂತಿಸು ಮನವೇ, Chittajanayyana Chintisu Manave, ಶ್ರೀಪಾದರಾಜರು, Sripadarajaru

ಜಗನ್ಮೋಹನನೇ ಕೃಷ್ಣ : Jaganmohanane Krishna

ಜಗನ್ಮೋಹನನೇ ಕೃಷ್ಣ

ಕೀರ್ತನಕಾರರು : ಪುರಂದರದಾಸರು
ರಾಗ : ಬೇಹಾಗ್
ತಾಳ : ಆದಿ

ಜಗನ್ಮೋಹನನೇ ಕೃಷ್ಣ ಜಗವಂ ಪಾಲಿಪನೆ    ॥ಪ॥

ಒಬ್ಬಳ ಬಸುರಿಂದಲಿ ಬಂದೆ ಮ
ತ್ತೊಬ್ಬಳ ಕೈಯಲಿ ನೀ ಬೆಳೆದೆ
ಕೊಬ್ಬಿದ ದೈತ್ಯರ ಒಡಲ ಸೀಳಿದೆ ಇಂಥ
ತಬ್ಬಿಬ್ಬಾಟವನೆಲ್ಲಿ ಕಲಿತೆಯೊ ರಂಗ             ॥೧॥

ಲೋಕದೊಳಗೆ ನೀ ಶಿಶುವಾಗಿ ಮೂ
ರ್ಲೋಕವನೆಲ್ಲ ಬಾಯಲಿ ತೋರಿದೆ
ಆಕಳ ಕಾಯುವ ಚಿಣ್ಣನೆಂದೆನಿಸಿದೆ
ಈ ಕುಟಿಲವನೆಲ್ಲಿ ಕಲಿತೆಯೊ ರಂಗ             ॥೨॥

ಮಗುವಾಗಿ ಪೂತನಿಯ ಮೊಲೆಯನುಂಡೆ ಅವಳು
ಜಗದಗಲಕೆ ಬೀಳಲು ಕೆಡಹಿ
ನಗುತ ನಗುತ ಗೋಪಿ ಮೊಲೆಯುಂಡೆ ಇಂಥ
ತಗಿಬಿಗಿಯಾಟಗಳೆಲ್ಲಿ ಕಲಿತೆಯೊ ರಂಗ  ॥೩॥

ಮಾಡುವ ಧುಮುಕಿ ಕಾಳಿಂಗನ ಶಿರದಲ್ಲಿ
ಮೃಡಸುರಪಾದ್ಯರು ಪೊಗಳುತಿರೆ
ಹೆಡೆಯ ಮೇಲೆ ಕುಣಿದಾಡುತ ಆಡುತ
ಕಡೆ ಸಾರೆಂಬುದನೆಲ್ಲಿ ಕಲಿತೆಯೊ ರಂಗ   ॥೪॥

ಒಂದು ಪಾದವ ಭೂಮಿಯಲೂರಿ ಮ-
ತ್ತೊಂದು ಪಾದವ ಗಗನವನಳೆದು
ಒಂದು ಪಾದವ ಬಲಿ ಶಿರದಲಿಟ್ಟೆ ಇಂತ
ಚೆಂದದ ವಿದ್ಯೆಯನೆಲ್ಲಿ ಕಲಿತೆಯೊ ರಂಗ   ॥೫॥

ನಂಬಿದ ಪ್ರಹ್ಲಾದನು ಸ್ತುತಿಸೆ ನೀ
ಕಂಭವನೊಡೆದು ಬಂದಾಕ್ಷಣದಿ
ದೊಂಬಿಲಿ ದೈತ್ಯನ ಒಡಲ ಸೀಳಿದೆ ಇಂಥ
ಡಂಬರಾಟವನೆಲ್ಲಿ ಕಲಿತೆಯೊ ರಂಗ  ॥೬॥

ಅಂಬರೀಷ ದ್ವಾದಶಿ ಸಾಧಿಸುತಿರೆ ಅಗ
ಬಂದು ದುರ್ವಾಸರು ಶಾಪ ಕೊಡಲು
ಮುಂದಕೆ ಸಾಧನವಹುದೆಂದು ಚಕ್ರವ
ಹಿಂದಟ್ಟಿಸುವುದನೆಲ್ಲಿ ಕಲಿತೆಯೊ ರಂಗ  ॥೭॥

ವರಬಲದಿಂದಲಿ ಭಸ್ಮಾಸುರನು
ಹರಣ ಶಿರಡಿ ಕರವಿಡೆ ಬರಲು
ತರುಣಿಯ ರೂಪವ ತಾಳಿ ಆ ದೈತ್ಯನ
ಹರಣವನಳಿದುದನೆಲ್ಲಿ ಕಲಿತೆಯೊ ರಂಗ ॥೮॥

ವೇದಗಳರಸಿ ಕಾಣದ ಪರಬ್ರಹ್ಮ ನೀ
ಮೋದದಿಂದ ವಿದುರನ ಮನೆಯೈದಿ
ಆದರದಿ ಪಾಲ ಕುಡಿದುಳಿದುದ ನೀ
ಮೇದಿನಿಗಿಳಿಸುವುದೆಲ್ಲಿ ಕಲಿತೆಯೊ ರಂಗ  ॥೯॥

ದುರ್ಯೋಧನ ತನ್ನೊಡ್ಡೋಲಗದೊಳು
ಹರಿಯನು ಕರೆಸೆಂದರುಹಲು ಬಂದು
ಧರಣಿಯುಂಗುಷ್ಟದೊಲೊತ್ತುತ ಅವನನು
ಉರುಳಿಸಿದಾಟವನೆಲ್ಲಿ ಕಲಿತೆಯೊ ರಂಗ  ॥೧೦॥
ಆ ಸಭೆಯಲ್ಲಿ ಖಳ ದುರ್ಯೋಧನನಾಗ
ಮೋಸದಿ ಕೃಷ್ಣನ ಕಟ್ಟೆನಲು
ಸಾಸಿರರೂಪಿನ ಕೃಷ್ಣನೆಂದೆನಿಸಿದ
ವೇಷವನೆಲ್ಲಿ ಕಲಿತೆಯೊ ರಂಗ   ॥೧೧॥

ಸರ್ಪಬಾಣ ಮೊರೆಯುತ ಬರಲು ಕಂ-
ದರ್ಪ ಪಿತನೆ ಕರುಣದಿ ನೀನು
ಒಪ್ಪುವ ಪಾರ್ಥನ ರಥವ ನೆಲಕೆ ಒತ್ತಿ
ತಪ್ಪಿಸಿದಾಟವನೆಲ್ಲಿ ಕಲಿತೆಯೊ ರಂಗ  ॥೧೨॥

ದ್ರೋಣನ ಸಂಗ್ರಾಮದಿ ಹರಿಚಕ್ರವ
ಮಾಣದೆ ಸೂರ್ಯಗೆ ಮರೆಮಾಡಿ
ಕಾಣಿಸಿ ಸೈಂಧವನನು ಕೊಲಿಸಲಾದೆ ಇಂಥ
ಜಾಣತನವ ನೀನೆಲ್ಲಿ ಕಲಿತೆಯೊ ರಂಗ  ॥೧೩॥

ಆ ಶಿರವಾತನ ತಂದೆಯು ಕರದಲಿ
ಸೂಸುತ ರಕುತವು ಬೀಳಲು ಅದನು
ಬೀಸಿ ಬಿಸಾಡಲು ಅವನ ಶಿರವನಾಗ
ಸಾಸಿರ ಮಾಡಿದುದೆಲ್ಲಿ ಕಲಿತೆಯೊ ರಂಗ  ॥೧೪॥

ಅಡಿ ಮೂಲನೆ ಎಂದು ಕರಿರಾಜ ಕರೆಯಲು
ಯಾದವರಾಯ ನೀ ನಗುತಲಿ ಬಂದು
ಆದರದಿಂದ ಗಜೇಂದ್ರನ ಸಲಹಿದೆ
ಆ ದಿವ್ಯಾಟಗಳೆಲ್ಲಿ ಕಲಿತೆಯೊ ರಂಗ   ॥೧೫॥

ಎಂದೆಂದಿಗು ನಿಮ್ಮ ಗುಣಗಳ ಪೊಗಳಲು
ಇಂದ್ರಾದಿಗಳಿಗೆ ಅಳವಲ್ಲ
ಮಂದರಧರ ಶ್ರೀ ಪುರಂದರವಿಠಲನೆ
ಒಂದೊಂದಾಟವನೆಲ್ಲಿ ಕಲಿತೆಯೋ ರಂಗ  ॥೧೬॥

Labels: ಜಗನ್ಮೋಹನನೇ ಕೃಷ್ಣ, Jaganmohanane Krishna, ಪುರಂದರದಾಸರು, Purandaradasaru