ಸೋಮವಾರ, ಅಕ್ಟೋಬರ್ 7, 2013

ಜಗನ್ಮೋಹನನೇ ಕೃಷ್ಣ : Jaganmohanane Krishna

ಜಗನ್ಮೋಹನನೇ ಕೃಷ್ಣ

ಕೀರ್ತನಕಾರರು : ಪುರಂದರದಾಸರು
ರಾಗ : ಬೇಹಾಗ್
ತಾಳ : ಆದಿ

ಜಗನ್ಮೋಹನನೇ ಕೃಷ್ಣ ಜಗವಂ ಪಾಲಿಪನೆ    ॥ಪ॥

ಒಬ್ಬಳ ಬಸುರಿಂದಲಿ ಬಂದೆ ಮ
ತ್ತೊಬ್ಬಳ ಕೈಯಲಿ ನೀ ಬೆಳೆದೆ
ಕೊಬ್ಬಿದ ದೈತ್ಯರ ಒಡಲ ಸೀಳಿದೆ ಇಂಥ
ತಬ್ಬಿಬ್ಬಾಟವನೆಲ್ಲಿ ಕಲಿತೆಯೊ ರಂಗ             ॥೧॥

ಲೋಕದೊಳಗೆ ನೀ ಶಿಶುವಾಗಿ ಮೂ
ರ್ಲೋಕವನೆಲ್ಲ ಬಾಯಲಿ ತೋರಿದೆ
ಆಕಳ ಕಾಯುವ ಚಿಣ್ಣನೆಂದೆನಿಸಿದೆ
ಈ ಕುಟಿಲವನೆಲ್ಲಿ ಕಲಿತೆಯೊ ರಂಗ             ॥೨॥

ಮಗುವಾಗಿ ಪೂತನಿಯ ಮೊಲೆಯನುಂಡೆ ಅವಳು
ಜಗದಗಲಕೆ ಬೀಳಲು ಕೆಡಹಿ
ನಗುತ ನಗುತ ಗೋಪಿ ಮೊಲೆಯುಂಡೆ ಇಂಥ
ತಗಿಬಿಗಿಯಾಟಗಳೆಲ್ಲಿ ಕಲಿತೆಯೊ ರಂಗ  ॥೩॥

ಮಾಡುವ ಧುಮುಕಿ ಕಾಳಿಂಗನ ಶಿರದಲ್ಲಿ
ಮೃಡಸುರಪಾದ್ಯರು ಪೊಗಳುತಿರೆ
ಹೆಡೆಯ ಮೇಲೆ ಕುಣಿದಾಡುತ ಆಡುತ
ಕಡೆ ಸಾರೆಂಬುದನೆಲ್ಲಿ ಕಲಿತೆಯೊ ರಂಗ   ॥೪॥

ಒಂದು ಪಾದವ ಭೂಮಿಯಲೂರಿ ಮ-
ತ್ತೊಂದು ಪಾದವ ಗಗನವನಳೆದು
ಒಂದು ಪಾದವ ಬಲಿ ಶಿರದಲಿಟ್ಟೆ ಇಂತ
ಚೆಂದದ ವಿದ್ಯೆಯನೆಲ್ಲಿ ಕಲಿತೆಯೊ ರಂಗ   ॥೫॥

ನಂಬಿದ ಪ್ರಹ್ಲಾದನು ಸ್ತುತಿಸೆ ನೀ
ಕಂಭವನೊಡೆದು ಬಂದಾಕ್ಷಣದಿ
ದೊಂಬಿಲಿ ದೈತ್ಯನ ಒಡಲ ಸೀಳಿದೆ ಇಂಥ
ಡಂಬರಾಟವನೆಲ್ಲಿ ಕಲಿತೆಯೊ ರಂಗ  ॥೬॥

ಅಂಬರೀಷ ದ್ವಾದಶಿ ಸಾಧಿಸುತಿರೆ ಅಗ
ಬಂದು ದುರ್ವಾಸರು ಶಾಪ ಕೊಡಲು
ಮುಂದಕೆ ಸಾಧನವಹುದೆಂದು ಚಕ್ರವ
ಹಿಂದಟ್ಟಿಸುವುದನೆಲ್ಲಿ ಕಲಿತೆಯೊ ರಂಗ  ॥೭॥

ವರಬಲದಿಂದಲಿ ಭಸ್ಮಾಸುರನು
ಹರಣ ಶಿರಡಿ ಕರವಿಡೆ ಬರಲು
ತರುಣಿಯ ರೂಪವ ತಾಳಿ ಆ ದೈತ್ಯನ
ಹರಣವನಳಿದುದನೆಲ್ಲಿ ಕಲಿತೆಯೊ ರಂಗ ॥೮॥

ವೇದಗಳರಸಿ ಕಾಣದ ಪರಬ್ರಹ್ಮ ನೀ
ಮೋದದಿಂದ ವಿದುರನ ಮನೆಯೈದಿ
ಆದರದಿ ಪಾಲ ಕುಡಿದುಳಿದುದ ನೀ
ಮೇದಿನಿಗಿಳಿಸುವುದೆಲ್ಲಿ ಕಲಿತೆಯೊ ರಂಗ  ॥೯॥

ದುರ್ಯೋಧನ ತನ್ನೊಡ್ಡೋಲಗದೊಳು
ಹರಿಯನು ಕರೆಸೆಂದರುಹಲು ಬಂದು
ಧರಣಿಯುಂಗುಷ್ಟದೊಲೊತ್ತುತ ಅವನನು
ಉರುಳಿಸಿದಾಟವನೆಲ್ಲಿ ಕಲಿತೆಯೊ ರಂಗ  ॥೧೦॥
ಆ ಸಭೆಯಲ್ಲಿ ಖಳ ದುರ್ಯೋಧನನಾಗ
ಮೋಸದಿ ಕೃಷ್ಣನ ಕಟ್ಟೆನಲು
ಸಾಸಿರರೂಪಿನ ಕೃಷ್ಣನೆಂದೆನಿಸಿದ
ವೇಷವನೆಲ್ಲಿ ಕಲಿತೆಯೊ ರಂಗ   ॥೧೧॥

ಸರ್ಪಬಾಣ ಮೊರೆಯುತ ಬರಲು ಕಂ-
ದರ್ಪ ಪಿತನೆ ಕರುಣದಿ ನೀನು
ಒಪ್ಪುವ ಪಾರ್ಥನ ರಥವ ನೆಲಕೆ ಒತ್ತಿ
ತಪ್ಪಿಸಿದಾಟವನೆಲ್ಲಿ ಕಲಿತೆಯೊ ರಂಗ  ॥೧೨॥

ದ್ರೋಣನ ಸಂಗ್ರಾಮದಿ ಹರಿಚಕ್ರವ
ಮಾಣದೆ ಸೂರ್ಯಗೆ ಮರೆಮಾಡಿ
ಕಾಣಿಸಿ ಸೈಂಧವನನು ಕೊಲಿಸಲಾದೆ ಇಂಥ
ಜಾಣತನವ ನೀನೆಲ್ಲಿ ಕಲಿತೆಯೊ ರಂಗ  ॥೧೩॥

ಆ ಶಿರವಾತನ ತಂದೆಯು ಕರದಲಿ
ಸೂಸುತ ರಕುತವು ಬೀಳಲು ಅದನು
ಬೀಸಿ ಬಿಸಾಡಲು ಅವನ ಶಿರವನಾಗ
ಸಾಸಿರ ಮಾಡಿದುದೆಲ್ಲಿ ಕಲಿತೆಯೊ ರಂಗ  ॥೧೪॥

ಅಡಿ ಮೂಲನೆ ಎಂದು ಕರಿರಾಜ ಕರೆಯಲು
ಯಾದವರಾಯ ನೀ ನಗುತಲಿ ಬಂದು
ಆದರದಿಂದ ಗಜೇಂದ್ರನ ಸಲಹಿದೆ
ಆ ದಿವ್ಯಾಟಗಳೆಲ್ಲಿ ಕಲಿತೆಯೊ ರಂಗ   ॥೧೫॥

ಎಂದೆಂದಿಗು ನಿಮ್ಮ ಗುಣಗಳ ಪೊಗಳಲು
ಇಂದ್ರಾದಿಗಳಿಗೆ ಅಳವಲ್ಲ
ಮಂದರಧರ ಶ್ರೀ ಪುರಂದರವಿಠಲನೆ
ಒಂದೊಂದಾಟವನೆಲ್ಲಿ ಕಲಿತೆಯೋ ರಂಗ  ॥೧೬॥

Labels: ಜಗನ್ಮೋಹನನೇ ಕೃಷ್ಣ, Jaganmohanane Krishna, ಪುರಂದರದಾಸರು, Purandaradasaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ