ಅಕಟಕಟ ಸಂಸಾರವನು ನೆಚ್ಚಿ ಕೆಡಬ್ಯಾಡ
ಕೀರ್ತನಕಾರರು : ಶ್ರೀಪಾದರಾಜರು
ರಾಗ : ಕಲ್ಯಾಣಿ
ತಾಳ : ಝಂಪೆ
ಅಕಟಕಟ ಸಂಸಾರವನು ನೆಚ್ಚಿ ಕೆಡಬ್ಯಾಡ
ವಿಕಟದಲಿ ಮಾನವರು ಕೆಟ್ಟರೆಲ್ಲರು ನಿಜ ||ಪ||
ಮುನ್ನ ನರಕಾಸುರನು ಬಡಿದು ಚಿಂತಾಮಣಿಯ
ತನ್ನ ಮನೆಯಲಿ ತಂದು ನಿಲ್ಲಿಸಿ ನೃಪರ
ಕನ್ನೆಯರ ಷೋಡಶಸಹಸ್ರವನೆ ತಂದಾತ
ಹೆಣ್ಣನೊಬ್ಬಳನೊಯ್ದುದಿಲ್ಲವೋ ನೋಡೋ ||೧||
ಸಾವಿರಾರು ಕರ ಪಡೆದ ಕಾರ್ತವೀರ್ಯಾರ್ಜುನನು
ಭೂವಲಯದೊಳಗೊಬ್ಬನೇ ವೀರನೆನಿಸಿ
ರಾವಣನ ಸೆರೆಯಿಟ್ಟು ಕಾಮಧೇನುವ ಬಯಸಿ
ಸಾವಾಗ ಏನು ಕೊಂಡೊಯ್ದನೋ ನೋಡೋ ||೨||
ಕೌರವನು ಧರೆಯೆಲ್ಲ ತನಗಾಗಬೇಕೆಂದು
ವೀರಪಾಂಡವರೊಡನೆ ಕದನಮಾಡಿ
ಮಾರಿಯ ವಶವೈದಿ ಹೋಹಾಗ ತನ್ನೊಡನೆ
ಶ್ಯಾರೆ ಭೂಮಿಯ ಒಯ್ದುದಿಲ್ಲವೋ ನೋಡೊ ||೩||
ವರಯಜ್ಞಗಳ ಮಾಡಿ ನಹುಷ ಸುರಪತಿಯೆನಿಸಿ
ಪರಮಮುನಿಗಳ ಕೈಲೆ ದಂಡಿಗೆಯ ಹೊರಿಸಿ
ಉರಗ ಜನುಮವನೈದಿ ಹೋಹಾಗ ತನ್ನೊಡನೆ
ಸುರಲೋಕದೊಳಗೇನ ಕೊಂಡ್ಹೋದ ನೋಡೋ ||೪||
ತುಂಗಗುಣ ಧ್ರುವ ವಿಭೀಷಣ ಹನುಮಾದಿಗಳು
ಮಂಗಳಾತ್ಮಕ ಹರಿಯನರಿತು ಭಜಿಸಿ
ಭಂಗವಿಲ್ಲದೆ ಹೊರೆದರೈ ಸಕಲ ಭಾಗ್ಯವನು
ರಂಗವಿಠಲರೇಯನ ನೆರೆ ನಂಬಿರೊ ||೫||
Labels: ಅಕಟಕಟ ಸಂಸಾರವನು ನೆಚ್ಚಿ ಕೆಡಬ್ಯಾಡ, Akatakata Samsaravanu Necchi Kedabyada, ಶ್ರೀಪಾದರಾಜರು, Sripadarajaru
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ