ಎಂತು ಮರುಳಾದೆ
ಕೀರ್ತನಕಾರರು : ನರಹರಿ ತೀರ್ಥರು
ರಾಗ : ಆನಂದಭೈರವಿ
ತಾಳ : ಆದಿ
ಎಂತು ಮರುಳಾದೆ ನಾನೆಂತು ಮರುಳಾದೆ ||ಪ||
ಎಂತು ಮರುಳಾದೆ ಭವದೊಳು ಬಳಲಿದೆ
ಸಂತತ ಪೊರೆ ರಘುಕುಲತಿಲಕ ||ಅ.ಪ||
ಮಾತಿನಲ್ಲಿ ಹರಿದಾಸನ
ನೀತಿಯಲ್ಲಿ ಪ್ರಭುದಾಸತನ
ಪ್ರೀತಿ ಧನಾದಿ ವಿಷಯದಲ್ಲಿ ನಿ
ರ್ಭೀತಿ ದೈವ ಗುರು ದ್ರೋಹದಲಿ ||೧||
ಏಕಾಂತದಲ್ಲಿ ಧನದ ಗೋಷ್ಠಿ
ಲೋಕಾಂತದಿ ವೈರಾಗ್ಯದ ಗೋಷ್ಠಿ
ಶ್ರೀಕಾಂತನ ಸೇವೆಗೆ ಅನುಮಾನ
ಭೂಕಾಂತನ ಸೇವೆಗೆ ಸುಮ್ಮಾನ ||೨||
ಧರ್ಮಕ್ಕೆ ಒಂದು ಕಾಸು ಆ
ಧರ್ಮಕ್ಕೆ ಸಾವಿರಾರು ಹೊನ್ನು
ಧರ್ಮ ಮಾಡಲು ಬೇಸರಿಕೆ ಆ
ಧರ್ಮಮಾಡಲು ಚಚ್ಚರಿಕೆ ||೩||
ಡೊಂಬನಂತೆ ಬಯಲಿಗೆ ಹರಹಿ
ಡಂಭತನಕೆ ಕರ್ಮವ ಮಾಡಿ
ಅಂಬುಜನಾಭಗೆ ದೂರಾಗಿ
ಕುಂಭೀಪಾತಕಕೆ ಗುರಿಯಾದೆ ||೪||
ಸತಿಯರ ಬೈದರೆ ನಾ ಬೈಯ್ವೆ
ಶ್ರೀಪತಿಯ ಬೈದರೆ
ಕೇಳುತ ನಗುವೆ
ಮತಿಗೆಟ್ಟು ವಿಷಯಲಂಪಟನಾಗಿ ||೫||
ಯಾರಿಗಾಗಿ ಧಾವತಿ ಪಡುವೆ ಇ
ನ್ನಾರಿಗೆ ಒಡವೆಯ ಬಚ್ಚಿಡುವೆ
ನಾರಿ ಪುತ್ರ ಮಿತ್ರಾದಿಗಳು
ಯಾರೂ ಬಾರರೊ ಸಂಗಡದಿ ||೬||
ಭಜಿಸು ಬ್ರಹ್ಮಾದಿ ವಂದಿತ ಹರಿಯ
ತ್ಯಜಿಸು ಕಾಮಾದಿ ದುರ್ವಿಷಯ
ಸುಜನವಂದಿತನಾದ ನರಹರಿಯ
ಭಜಿಸು ಶ್ರೀಶ ಶ್ರೀ ರಘುಪತಿಯ ||೭||
Labels: ಎಂತು ಮರುಳಾದೆ, ನರಹರಿ ತೀರ್ಥರು, Entu Marulade, Narahari Teertharu, ನರಹರಿ ತೀರ್ಥರು, Narahari Teertharu
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ