ಮಂಗಳವಾರ, ಜುಲೈ 23, 2013

ಮನವೆ ನೀ ದೃಢವಾದರೆ : Manave Nee Drudhavadare

ಮನವೆ ನೀ ದೃಢವಾದರೆ

ಕೀರ್ತನಕಾರರು : ವಿಜಯದಾಸರು 
ರಾಗ : ಸಾವೇರಿ 
ತಾಳ : ಆದಿ

ಮನವೆ ನೀ ದೃಢವಾದರೆ ಮನಸಿ-
ಜನಯ್ಯನ ಚರಣ ಕಾಂಬೆನೊ ನಾನು             ।।ಪ।।

ಹಂಬಲವನ್ನು ಮಾಡದಿದ್ದರೆ ಹರಿ 
ಎಂಬ ನಾಮಪೀಯೂಷ ದೊರಕುವುದು            ।।೧।।

ಚಂಚಲವುಳ್ಳವನಾಗದಿದ್ದರೆ ದುಷ್ಟ
ಪಂಚೇಂದ್ರಿಯಗಳನ್ನು ಸ್ಥಿರವಾಗಿ ನಿಲ್ಲಿಸುವೆ            ।।೨।।

ಅತ್ತಲಿತ್ತಲಿ ಪೋಗದಿರು ಎ-
ನ್ನತ್ತ ವಿಜಯವಿಠಲ ಬರಲಿ                      ।।೩।।

Labels: ಮನವೆ ನೀ ದೃಢವಾದರೆ, Manave Nee Drudhavadare, ವಿಜಯದಾಸರು, Vijayadasaru

ಕರೆದಳು ತನ್ನ ಮಗನ ಯಶೋದೆ : Karedalu Tanna Magana

ಕರೆದಳು ತನ್ನ ಮಗನ ಯಶೋದೆ 

ಕೀರ್ತನಕಾರರು : ಹೆಳವನಕಟ್ಟೆ ಗಿರಿಯಮ್ಮ
ರಾಗ : ಮಾಂಜಿ ತಾಳ : ಅಟ್ಟ

ಕರೆದಳು ತನ್ನ ಮಗನ ಯಶೋಧೆ 
ಕರೆದಳು ತನ್ನ ಮಗನ                                         ।।ಪ।।

ಪರಮಪುರುಷ ಹರಿ ಶರಣರ ಸುರತರು 
ತುರು ತುರುಯೆಂಬ ಕೊಳಲನೂದುತ ಬಾರೆಂದು      ।।ಅ.ಪ।।

ಅಂದುಗೆ ಕಿರುಗೆಜ್ಜೆ ಘಲಘಲುಕೆನುತಲಿ 
ಚಂದದಿ ಕುಣಿವ ಮುಕುಂದನೆ ಬಾರೆಂದು                 ।।೧।।

ಹೊನ್ನುಂಗುರುಡಿದಾರ ರನ್ನಕಾಂಚಿಯದಾಮ 
ಚೆನ್ನಾಗಿ ಹೊಳೆವ ಮೋಹನನೆ ಬಾರೆಂದು                ।।೨।।

ಸಾಮಗಾನವಿಲೋಲ ಜಾಲವ ಮಾಡದೆ 
ಸ್ವಾಮಿ ಹೆಳವನಕಟ್ಟೆರಂಗ ನೀ ಬಾರೆಂದು                ।।೩।।

Labels: ಕರೆದಳು ತನ್ನ ಮಗನ ಯಶೋದೆ, Karedalu Tanna Magana,  ಹೆಳವನಕಟ್ಟೆ ಗಿರಿಯಮ್ಮ,  Helavanakatte Giriyamma 

ಎಂತು ತುತಿಸಲಿ ಎನ್ನದೇವನ : Entu Tutisali Ennadevana

ಎಂತು ತುತಿಸಲಿ ಎನ್ನದೇವನ 

ಕೀರ್ತನಕಾರರು : ಗೋಪಾಲದಾಸರು  
ರಾಗ : ಭೈರವಿ 
ತಾಳ : ಖಂಢಛಾಪು

ಎಂತು ತುತಿಸಲಿ ಎನ್ನದೇವನ ಸಂತತ ನಮ್ಮ ಸಲಹೋನ 
ಅಂತರಂಗದಿ ಹರಿಯ ತೋರಿಸಿ ಸಂತೋಷದಿಂದ ನಲಿವ ಪವನನ        ।।ಪ।।

ತಾನು ಮಾಡಿದ ಕರ್ಮಶೇಷವು ತಾನು ತಿಳುಹಿದ ಜ್ಞಾನಶೇಷವು 
ತಾನು ಮಾಡಿದ ಭಕುತಿಶೇಷವು ನಾನಾ ಸಾಧನಶೇಷವು 
ತಾನು ಕರುಣಿಸಿ ಜೀವಯೋಗ್ಯತೆಯೇನು ಅರಿತು ಕರ್ಮಮಾಡಿಸಿ 
ತಾನು ಸಹಿತ ಧ್ಯಾನದಲಿ ಹರಿ ಕಾಣಿಸಿ ತೋರ್ಪ ಕರುಣೆಯ                    ।।೧।।

ಇವನ ಪ್ರೇರಣೆ ಹರಿಯ ಪ್ರೇರಣೆ ಇವನ ಸೇವೆಯು ಹರಿಯ ಸೇವೆಯು 
ಇವನ ಕರುಣವೆ ಹರಿಯ ಕರುಣವು ಇವನ ಬಲವೇ ಪ್ರಬಲವು 
ಇವನು ನಂಬಲು ಹರಿಯು ನಂಬುವ ಇವನು ಒಲಿಯಲು ಹರಿಯು ಒಲಿಯುವ
ಪವನಾಖ್ಯನಾಗಿ ನಮ್ಮನು ಪವನಗತಿ ಪೊಂದಿಸುವನ                             ।।೨।।

ಜ್ಞಾನಭಕುತಿ ವೈರಾಗ್ಯಖಣಿಯು ದಾನವಾಂತಕ ಧರ್ಮಶೀಲ 
ಪೂರ್ಣಬೋಧೆಯ ಪುಣ್ಯನಾಮಕ ಪ್ರಾಣಾಪಾಣವುದಾನರಿಗೆ 
ಪ್ರಾಣ ಮುಖ್ಯಪ್ರಾಣ ಇವ ನಮ್ಮ ಪ್ರಾಣನಿಲ್ಲದು ಇವನು ಇಲ್ಲದಿರೆ 
ಪ್ರಾಣಪತಿ ಗೋಪಲವಿಠಲನ ಕಾಣಿಸಿ ತೋರ್ಪ ಕರುಣೆಯ                   ।।೩।।

Labels: ಎಂತು ತುತಿಸಲಿ ಎನ್ನದೇವನ, Entu Tutisali Ennadevana, ಗೋಪಾಲ ದಾಸರು, Gopaladasaru

ರಂಗ ಕೊಳಲನೂದಲಾಗಿ : Ranga Kolalanoodalagi

ರಂಗ ಕೊಳಲನೂದಲಾಗಿ

ಕೀರ್ತನಕಾರರು : ಪ್ರಸನ್ನ ವೆಂಕಟದಾಸರು 
ರಾಗ : ನೀಲಾಂಬರಿ 
ತಾಳ : ಅಟ್ಟ

ರಂಗ ಕೊಳಲನೂದಲಾಗಿ ರಂಗಯ್ಯ ಕೊಳಲನೂದಲು 
ಮಂಗಳಮಯವಾಯಿತು                                       ।।ಪ।।

ಧರೆಯ ಜನಂಗಳು ಜೀವ ಚೇತನ ಮರೆದು ಶ್ರೀರಂಗ 
ಧ್ಯಾನಪರರಾದರೊ                                             ।।ಅ. ಪ।।

ಬಾಡಿದ ಬಳ್ಳಿ ಮರ ಗೊನೆವಡಿದು 
ತೀಡುವ ಮಂದಮಾರುತನ ಕೂಡಿ ತೂ 
ಗ್ಯಾಡುವ ವನದ ಫಲದಗೊಂಚಲದಿ 
ಪಾಡಲೊಲ್ಲವಳಿಕುಲಗಳು 
ಹೇಡಿಗೊಂಡವು ಜಾಣಕ್ಕಿ ಗಿಣಿಯು ಮಾ 
ತಾಡದೆ ಕಳೆಗುಂದಿದವು ಕೋಗಿಲೆ 
ಓಡ್ಯಾಟ ವೈರಾಟ ಜರಿದು ಖಗಮೃಗ 
ಗಾಢ ನಿದ್ರಾವಶವಾದವೊ                               ।।೧।।

ಕೆಳಗಿನುದಕ ಉಕ್ಕೇರಿ ಬಂದವು 
ತುಳುಕಿ ಚೆಲ್ಲಾಡಿ ನಿಂತಳು ಯಮುನೆ ಮ್ಯಾಲೆ ಮಾ 
ದೊಡ್ಡಿ ಮೇಘಾಳಿ ಬೋರಿಟ್ಟುವು 
ಕಲ್ಲು ಕರಗಿ ನೀರಾದವೋ 
ನಳಿನ ಚಂಪಕ ನಾಗ ಪುನ್ನಾಗ ಪಾ 
ಟಾಲ ಶಾವಂತಿಗಿ ಕೂಡ ಬಕುಳವು 
ಮಾಲತಿ ಜಾಜಿಯು ಪರಿಮಳಂಗೂಡಿ 
ನೀಲಾಂಗನಂಘ್ರಿಗೆ ಎರಗಿದವೋ                         ।।೨।।

ಕೆಚ್ಚಲಾ ಬಿಗಿದು ತೊರೆದ ಮೊಲೆಯ 
ವತ್ಸದೊಡಲಾಸೆ ಜರಿದೆಳೆಹುಲ್ಲು 
ಕಚ್ಚಿ ಅಲ್ಲಿಗಲ್ಲಿ ನಿಂದವು ತಲೆಯ ಮೇಲೆ 
ಪುಚ್ಛವ ನೆಗಹಿ ನೀಂಟಿಸಿ 
ಅಚ್ಯುತಾನಾಕೃತಿ ನೋಡಲು ಸುರರಿ 
ಗಚ್ಚರವಾಯಿತು ಆವು ಕಂಡಾನಂದ 
ಪೆಚ್ಚಿ ಮುಕುಂದನ ಲೇಲಾವಿನೋದಕ್ಕೆ 
ಮೆಚ್ಚಿ ಕುಸುಮವ ಸುರಿದರೊ                          ।।೩।।

ಮುದ್ದುಮೋಹನನ್ನ ಮಂಜುಳ ಸಂಗೀತ 
ಸದ್ದನಾಲಿಸಿ ಗೋಪಾಂಗನೆರೆಲ್ಲರೂ 
ಬುದ್ಧಿ ಸುರ್ಯಾಡಿದರಂಗಜಶರಕೆ 
ಬಿದ್ದು ಪರವಶರಾದರೊ
ಸಿದ್ಧ ಮುನಿಜನರಿದ್ದ ಸಮಾಧಿಯೊಳೆ 
ದ್ದೆದ್ದು ಕುಣಿದರೆದೆ ತಾವರೆಯ 
ಗದ್ದುಗಿಯರಸನೊಲಿಸಿಕೊಂಡರು 
ಗೆದ್ದರೊ ಭವಸಮುದ್ರವ                                ।।೪।।

ಶ್ರೀ ಮನೋಹರಮೂರ್ತಿ ಗೋಪಾಲನು 
ಆ ಮಧುಕುಂಜವನದಿ ತ್ರಿಭಂಗಿಲಿ 
ಹೇಮಾಂಬರುಟ್ಟು ಗೀರುಗಂಧ ಕಸ್ತೂರಿ 
ನಾಮ ಮುಕುಟ ಕುಂಡಲ ಬೆಳಗೀಲಿ 
ದಾಮ ವನಮಾಲೆ ರತುನಾಭರಣ 
ಸ್ವಾಮಿ ಶ್ರೀ ಪ್ರಸನ್ವೆಂಕಟಕೃಷ್ಣನ 
ನಾಮ ಗುಂಡಕ್ರಿಯ ಮೇಘರಾಗವ ಮಾಡೆ 
ಸಾಮಗಾಯನದಿ ನಮೋ ಎಂದರು                     ।।೫।।

Labels: ರಂಗ ಕೊಳಲನೂದಲಾಗಿ, Ranga Kolalanoodalagi, ಪ್ರಸನ್ನ ವೆಂಕಟದಾಸರು, Prasanna Venkatadasaru

ಇಂದಿನಿರುಳಿನ ಕನಸಿನಲಿ ಬಂದು : Indinirulina Kanasinali Bandu

ಇಂದಿನಿರುಳಿನ ಕನಸಿನಲಿ ಬಂದು

ಕೀರ್ತನಕಾರರು : ಶ್ರೀಪಾದರಾಜರು
ರಾಗ : ಶುದ್ಧಸಾವೇರಿ
ತಾಳ : ಅಟ್ಟ

ಇಂದಿನಿರುಳಿನ ಕನಸಿನಲಿ ಬಂದು
ಮುಂದೆ ನಿಂದುದ ಕಂಡೆನೆ ಗೋವಳನ                ||ಪ||

ಆಣಿಮುತ್ತಿನ ಪೆಂಡೆಯದ ಕಾಲಂದುಗೆ ಗೆಜ್ಜೆ
ಜಾಣನಂಗಜನ ಪಿತನ ಕೈಯ ವೇಣು
ಮಾಣಿಕ್ಯದ ಕಂಕಣ ಹೊನ್ನುಡಿ ಘಂಟೆ
ವಾಣಿಯ ರಚನೆ ಎಲ್ಲಿಯು ಈ ಗೋವಳನ            ||೧||

ಮೊಲ್ಲೆ ಮಲ್ಲಿಗೆ ಜೊಲ್ಲೆಯದ ಚಲ್ಲಣದ ಶಿರ
ದಲ್ಲಿ ಗುಂಜಿಯ ದಂಡೆಯ ಚೆಲ್ವ ಕಂಗಳ
ಗೋಪಿಯರ ಮೇಲೆ ಕಡೆಗಣ್ಣ
ಚೆಲ್ಲುತೊಯ್ಯನೆ ನಡೆದ ಗೋವಳನ                ||೨||

ತಿತ್ತಿ ಮೌರಿ ಕೊಂಬು ಸುತ್ತಿದ ಕತ್ತ ತಾವಿಲಿ
ತುತ್ತೂರು ತೂರು ತೂರೆನುತ
ಚಿತ್ತವ ಮರುಳು ಮಾಡಿದನೆ ಪೊಂಗೊಳಲೂದಿ
ಮೊತ್ತದ ಗೋಪಿಯರನೆಲ್ಲ ಗೋವಳನ            ||೩||

ಎಸಳುಕಂಗಳ ಢಾಳ ಶಶಿ ನೊಸಲ ತಿಲಕ
ಎಸೆವ ಬಿಂಬಾಧರದ
ಪೊಸ ಮುತ್ತಿನೋಲೆ ಮೂಕುತಿ ಹೊನ್ನುಡಿ ಘಂಟೆ
ಎಸೆವ ನೂಪುರ ಹಾಹೆಯ ಗೋವಳನ                ||೪||

ಉಂಗುಟದಲಿ ಗಂಗೆಯಂಗಾಲಲವುಂಕೆ
ತುಂಗವೃಕ್ಷದ ಲಕ್ಷುಮೀ
ಮಂಗಳ ಮಹಿಮ ಭುಜಂಗಶಯನ ಸಿರಿ
ರಂಗವಿಠಲ ನೆರೆದ ಗೋವಳನ                    ||೫||


Labels: ಇಂದಿನಿರುಳಿನ ಕನಸಿನಲಿ ಬಂದು, Indinirulina Kanasinali Bandu, ಶ್ರೀಪಾದರಾಜರು, Sripadarajaru

ಯಾತರವೆಂದುಸುರಲಿ : Yaataravanendusurali

ಯಾತರವನೆಂದುಸುರಲಿ

ಕೀರ್ತನಕಾರರು : ಕನಕದಾಸರು 
ರಾಗ : ಪೂರ್ವಿ 
ತಾಳ : ಅಟ್ಟ

ಯಾತರವನೆಂದುಸುರಲಿ ಜಗ 
ನ್ನಾಥ ಮಾಡಿದ ಒಂದು ನರರೂಪವಯ್ಯ     ||ಪ||

ಮುಟ್ಟು ಹುಟ್ಟಿನೊಳು ನೆಟ್ಟನೆ ನಾ ಬಂದೆ 
ತೊಟ್ಟಿದ್ದೆನಾಗ ತೊಗಲಬಕ್ಕಣ 
ಇಷ್ಟರೊಳಗೆ ಒಂದು ವಿವರವರಿಯದಿಂಥ 
ಭ್ರಷ್ಟಗೆ ನನಗಿನ್ಯಾತರ ಕುಲವಯ್ಯ          ।।೧।।

ಇಂದ್ರಿಯ ಸುತಕ ದುರ್ಗಂಧದ ಮಲಮೂತ್ರ 
ನಿಂದ ಠಾವಲಿ ತನ್ನ ನಿಜವರಿಯದೆ 
ಬಂದದ್ದು ಬಚ್ಚಲಗುಣಿ ತಿಂದದ್ದು ಮೊಲೆ ಮಾಂಸ ಇಂಥ 
ಅಂಧಕಗೆ ನನಗಿನ್ಯಾತರ ಕುಲವಯ್ಯ       ।।೩।।

ಒಂಬತ್ತು ಎಜ್ಜದೊಳೊಸರುವ ಹೊಲಸದು 
ತುಂಬಿ ತುಳುಕುವ ಕೊಡವಾಗಿರಲು 
ಇಂಬಿಲ್ಲದೆ ಹೊಲೆಗೊಂಡ ಠಾವಿನಲಿ ಬಂದಂಥ 
ಡಂಬಕ ನನಗಿನ್ಯಾತರ ಕುಲವಯ್ಯ          ।।೩।।

ಕರುಳು ಖಂಡ ನಾರುವ ಚರ್ಮ ರೋಹಿತ 
ನರಪಂಜರದೀ ಹುರುಳಿಲ್ಲದ 
ನರದೇಹ ಹೊತ್ತು ತಿರುಗುವಂತ 
ತಿರುಕ ನನಗಿನ್ಯಾತರ ಕುಲವಯ್ಯ             ।।೪।।

ಹಚ್ಚಡದ ಮೇಲೆ ಲಚ್ಚಿಕೆಯಿಟ್ಟಂತೆ 
ಹೆಚ್ಚು ಕಡಮೆ ಎಂದು ಹೆಣಗಾಡುತ 
ನಿಚ್ಚ ಕಾಗಿನೆಲೆಯಾದಿಕೇಶವನ 
ಹುಚ್ಚಗೆ ನನಗಿನ್ಯಾತರ ಕುಲವಯ್ಯ             ।।೫।।

Labels: ಯಾತರವನೆಂದುಸುರಲಿ, Yaataravanendusurali, ಕನಕದಾಸರು, Kanakadasaru

ಊಟಕ್ಕೆ ಬಂದೆವು ನಾವು : Ootakke Bandevu Naavu

ಊಟಕ್ಕೆ ಬಂದೆವು ನಾವು 

ಕೀರ್ತನಕಾರರು : ಪುರಂದರದಾಸರು
ರಾಗ : ನಾದನಾಮಕ್ರಿಯೆ
ತಾಳ : ಅಟ್ಟ


ಊಟಕ್ಕೆ ಬಂದೆವು ನಾವು ನಿಮ್ಮ 
ಆಟ ಪಾಟವ ಬಿಟ್ಟು ಅಡುಗೆ ಮಾಡಮ್ಮ     ||ಪ|| 

ಕತ್ತಲಿಟ್ಟಾವಮ್ಮ ಕಣ್ಣು ಬಾಯಿ 
ಬತ್ತಿ ಬರುತಲಿದೆ ಕೈಕಾಲು ಝುಮ್ಮ
ಹೊತ್ತ ಹೋಗಿಸಬೇಡವಮ್ಮ 
ಒಂದು ತುತ್ತಾದರು ಇತ್ತು ಸಲಹು ನಮ್ಮಮ್ಮ    ।।೧।।

ಒಡಲೊಳಗೆ ಉಸಿರಿಲ್ಲ ಒಂದು 
ಕ್ಷಣವಾದರೆ ಜೀವ ನಿಲ್ಲುವುದಿಲ್ಲ 
ಮಡಿದರೆ ದೋಷ ತಟ್ಟುವುದು ಒಂದು 
ಹಿಡಿ ಅಕ್ಕಿಯಿಂದಲೆ ಕೀರ್ತಿ ಬಾಹೋದು     ।।೨।।

ಹೊನ್ನರಾಶಿಯ ತಂದು ಸುರಿಯೆ ಕೋಟಿ 
ಕನ್ನಿಕೆಯರ ತಂದು ಧಾರೆಯನೆರೆಯೆ
ಅನ್ನದಾನಕ್ಕಿನ್ನು ಸರಿಯೆ ಪ್ರ 
ಸನ್ನ ಪುರಂದರ ವಿಠಲ ದೊರೆಯೆ            ।।೩।।

Labels: ಊಟಕ್ಕೆ ಬಂದೆವು ನಾವು,Ootakke Bandevu Naavu, ಪುರಂದರದಾಸರು, Purandaradasaru