ಮಂಗಳವಾರ, ಜುಲೈ 23, 2013

ಯಾತರವೆಂದುಸುರಲಿ : Yaataravanendusurali

ಯಾತರವನೆಂದುಸುರಲಿ

ಕೀರ್ತನಕಾರರು : ಕನಕದಾಸರು 
ರಾಗ : ಪೂರ್ವಿ 
ತಾಳ : ಅಟ್ಟ

ಯಾತರವನೆಂದುಸುರಲಿ ಜಗ 
ನ್ನಾಥ ಮಾಡಿದ ಒಂದು ನರರೂಪವಯ್ಯ     ||ಪ||

ಮುಟ್ಟು ಹುಟ್ಟಿನೊಳು ನೆಟ್ಟನೆ ನಾ ಬಂದೆ 
ತೊಟ್ಟಿದ್ದೆನಾಗ ತೊಗಲಬಕ್ಕಣ 
ಇಷ್ಟರೊಳಗೆ ಒಂದು ವಿವರವರಿಯದಿಂಥ 
ಭ್ರಷ್ಟಗೆ ನನಗಿನ್ಯಾತರ ಕುಲವಯ್ಯ          ।।೧।।

ಇಂದ್ರಿಯ ಸುತಕ ದುರ್ಗಂಧದ ಮಲಮೂತ್ರ 
ನಿಂದ ಠಾವಲಿ ತನ್ನ ನಿಜವರಿಯದೆ 
ಬಂದದ್ದು ಬಚ್ಚಲಗುಣಿ ತಿಂದದ್ದು ಮೊಲೆ ಮಾಂಸ ಇಂಥ 
ಅಂಧಕಗೆ ನನಗಿನ್ಯಾತರ ಕುಲವಯ್ಯ       ।।೩।।

ಒಂಬತ್ತು ಎಜ್ಜದೊಳೊಸರುವ ಹೊಲಸದು 
ತುಂಬಿ ತುಳುಕುವ ಕೊಡವಾಗಿರಲು 
ಇಂಬಿಲ್ಲದೆ ಹೊಲೆಗೊಂಡ ಠಾವಿನಲಿ ಬಂದಂಥ 
ಡಂಬಕ ನನಗಿನ್ಯಾತರ ಕುಲವಯ್ಯ          ।।೩।।

ಕರುಳು ಖಂಡ ನಾರುವ ಚರ್ಮ ರೋಹಿತ 
ನರಪಂಜರದೀ ಹುರುಳಿಲ್ಲದ 
ನರದೇಹ ಹೊತ್ತು ತಿರುಗುವಂತ 
ತಿರುಕ ನನಗಿನ್ಯಾತರ ಕುಲವಯ್ಯ             ।।೪।।

ಹಚ್ಚಡದ ಮೇಲೆ ಲಚ್ಚಿಕೆಯಿಟ್ಟಂತೆ 
ಹೆಚ್ಚು ಕಡಮೆ ಎಂದು ಹೆಣಗಾಡುತ 
ನಿಚ್ಚ ಕಾಗಿನೆಲೆಯಾದಿಕೇಶವನ 
ಹುಚ್ಚಗೆ ನನಗಿನ್ಯಾತರ ಕುಲವಯ್ಯ             ।।೫।।

Labels: ಯಾತರವನೆಂದುಸುರಲಿ, Yaataravanendusurali, ಕನಕದಾಸರು, Kanakadasaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ