ಸೋಮವಾರ, ಅಕ್ಟೋಬರ್ 7, 2013

ಆವ ರೀತಿಯಿಂದ ನೀಯೆನ್ನ ಪಾಲಿಸೊ : Ava Ritiyinda Niyenna Paliso

ಆವ ರೀತಿಯಿಂದ ನೀಯೆನ್ನ ಪಾಲಿಸೊ

ಕೀರ್ತನಕಾರರು : ವಾದಿರಾಜರು 
ರಾಗ : ಮೋಹನ
ತಾಳ : ರೂಪಕ

ಆವ ರೀತಿಯಿಂದ ನೀಯೆನ್ನ ಪಾಲಿಸೊ
ಶ್ರೀವಿಭು ಹಯವದನ                    ||ಪ||

ಈ ವಿಧ ಭವದೊಳು ಇಷ್ಟು ಬವಣೆಪಟ್ಟೆ
ತಾವರೆದಳನಯನ ಹಯವದನ       ||ಅ.ಪ||

ಕಾಮನ ಬಾಧೆಯ ತಡೆಯಲಾರದೆ ಕಂಡ
ಕಾಮಿನಿಯರನೆ ಕೂಡಿ
ನೇಮನಿಷ್ಠೆಯಿಂದ ನಿನ್ನನು ಭಜಿಸದೆ
ಪಾಮರನಾದೆನೊ ಹಯವದನ  ||೧||

ಅಂಗನೆಯರಲ್ಲಿ ಅಧಿಕ ಮೋಹದಿಂದ
ಶೃಂಗಾರಗಳನೆ ಮಾಡಿ
ಮಂಗಳಾಂಗನೆ ನಿನ್ನ ಮಹಿಮೆಯ ಪೊಗಳದೆ
ಭಂಗಕ್ಕೆ ಒಳಗಾದೆನೊ ಹಯವದನ ||೨||

ಹೀನಸಂಗವನೆಲ್ಲ ಹಯಮುಖದೇ-
ವನೆ ವರ್ಜಿಸುವಂತೆ ಮಾಡೊ
ಜ್ಞಾನಿಗಳರಸನೆ ದಯವಿಟ್ಟು ನಿನ್ನನು
ಧ್ಯಾನಿಸುವಂತೆ ಮಾಡೊ ಹಯವದನ ||೩||

Labels: ಆವ ರೀತಿಯಿಂದ ನೀಯೆನ್ನ ಪಾಲಿಸೊ, Ava Ritiyinda Niyenna Paliso, ವಾದಿರಜರು, Vadirajaru

ಅಂಬೆಗಾಲಿಕ್ಕುತಲಿ ಬಂದ ಗೋವಿಂದ : Ambegalikkkutali Banda Govinda

ಅಂಬೆಗಾಲಿಕ್ಕುತಲಿ ಬಂದ ಗೋವಿಂದ

ಕೀರ್ತನಕಾರರು : ಪುರಂದರದಾಸರು
ರಾಗ : ಧನ್ಯಾಸಿ
ತಾಳ : ಅಟ್ಟ

ಅಂಬೆಗಾಲಿಕ್ಕುತಲಿ ಬಂದ ಗೋವಿಂದ                 ॥ಪ॥

ಅಂಬುಜನಾಭ ದಯದಿಂದ ಮನೆಗೆ                    ॥ಅ.ಪ॥

ಜಲಚರ ಜಲವಾಸ ಧರಣಿಧರ ಮೃಗರೂಪ
ನೆಲನೆಳೆದು ಮೂರಡಿ ಮಾಡಿಬಂದ
ಕುಲನಾಶ ವನವಾಸ ನವನೀತ ಚೋರನಿವ
ಲಲನೆಯರ ವ್ರತಭಂಗ ವಾಹನ ತುರಂಗ             ॥೧॥

ಕಣ್ಣಬಿಡುವನು ತನ್ನ ಬೆನ್ನ ತಗ್ಗಿಸುವನು
ಮಣ್ಣು ಕೆದರಿ ಕೋರೆ ಬಾಯ ತೆರೆದು
ಚಿಣ್ಣ ಭಾರ್ಗವ ಲಕ್ಷ್ಮಣನನ್ನ ಬೆಣ್ಣೆಯಕಳ್ಳ
ಮಾನವ ಬಿಟ್ಟು ಕುದುರೆಯನೇರಿದ                      ॥೨॥

ನೀರ ಪೋಕ್ಕನು ಗಿರಿಯನೆಗಹಿ ಧರಣಿಯ ತಂದು
ನರಮೃಗ ಬಲಿಬಂಧ ಕೊರಳುಗೊಯಿಕ
ಶರಮುರಿದೊರಳೆಳೆದು ನಿರವಾಣಿ ಹಾಯ ಹತ್ತಿ
ಪುರಂದರವಿಠಲ ಮನೆಗೆ ತಾ ಬಂದ                    ॥೩॥

Labels: ಅಂಬೆಗಾಲಿಕ್ಕುತಲಿ ಬಂದ ಗೋವಿಂದ, Ambegalikkkutali Banda Govinda,
ಪುರಂದರದಾಸರು, Purandaradasaru

ಏಕೆ ಚಿಂತಿಸುತಿದ್ದಿ ಕೋತಿ ಮನವೆ : Eke Chintisutiddi Koti Manave

ಏಕೆ ಚಿಂತಿಸುತಿದ್ದಿ ಕೋತಿ ಮನವೆ

ಕೀರ್ತನಕಾರರು : ಪುರಂದರದಾಸರು 
ರಾಗ : ಭೈರವಿ 
ತಾಳ : ಝಂಪೆ 

ಏಕೆ ಚಿಂತಿಸುತಿದ್ದಿ ಕೋತಿ ಮನವೆ                      ।।ಪ॥ 

ಲೋಕನಾಥನ ನೆನೆದು ಸುಖಿಯಾಗು ಮನವೆ       ।।ಅ.ಪ॥ 

ಹುಟ್ಟುವಾಗಾಪತ್ತಿಗಾರು ಚಿಂತಿಸಿದವರು 
ಕಟ್ಟ ಕಡೆಯಲಿ ಲಯಕೆ ಯಾರ ಚಿಂತೆ 
ನಟ್ಟನಡುವಿನ ಬಾಳಿಗೇಕೆ ಚಿಂತಿಸುತಿರುವೆ 
ಹುಟ್ಟಿದವರಿಗೆ ಮೂರು ಬಟ್ಟಿಲ್ಲವೆ ಮರುಳೆ             ।।೧।।

ನವಿಲಿಂಗೆ ಚಿತ್ರಪತ್ರವನಾರು ಬರೆದವರು 
ಪವಳದಾ ಲತೆಗೆ ಕೆಂಪಿಟ್ಟವರು ಯಾರು 
ಸವಿಮಾತಿನರಗಿಣಿಗೆ ಹಸುರು ಬಳಿದವರಾರು 
ಆವ ಮಾಡಿದವ ನಮ್ಮ ಮರೆತಿಹನೆ ಮರುಳೆ       ।।೨।।

ಬಸಿರೊಳಗೆ ಶಿಶುವನು ಆದಾರು ಸಲಹಿದವರು 
ವಸುಧೆಯನು ಬಸಿರೊಳಿಟ್ಟಿರುವರಾರು 
ಹಸಗೆಡದೆ ನಮ್ಮ ಶ್ರೀಪುರಂದರವಿಠಲನ 
ಬಿಸಜಪಾದವ ನಂಬಿ ಸುಖಿಯಾಗು ಮರುಳೆ         ।।೩।। 

Labels: ಏಕೆ ಚಿಂತಿಸುತಿದ್ದಿ ಕೋತಿ ಮನವೆ, Eke Chintisutiddi Koti Manave, ಪುರಂದರದಾಸರು, Purandaradasaru 

ಕೇಳಲೊಲ್ಲನೆ ಎನ್ನ ಮಾತನು : Kelalollane Enna Matanu

ಕೇಳಲೊಲ್ಲನೆ ಎನ್ನ ಮಾತನು

ಕೀರ್ತನಕಾರರು : ಪುರಂದರದಾಸರು

ಕೇಳಲೊಲ್ಲನೆ ಎನ್ನ ಮಾತನು ರಂಗ   ॥ಪ॥

ಕಾಳಿಯಮರ್ದನ ಕೃಷ್ಣಗೆ
ಪೇಳೆ ಗೋಪ್ಯಮ್ಮ ಬುದ್ಧಿ        ॥ಅ.ಪ॥

ಬಿಟ್ಟ ಕಂಗಳ ಮುಚ್ಚಲೊಲ್ಲನೆ ಬೇಗ
ಬೆಟ್ಟಕ್ಕೆ ಬೆನ್ನೊಡ್ಡಿ ನಿಂತನೆ
ಸಿಟ್ಟಿಸಿ ಕೋರೆ ಹಲ್ಲ ತೋರ್ದನೆ ಅತಿ
ಗಟ್ಟಿ ಉಕ್ಕಿನ ಕಂಭವನೊಡೆದು ಬಂದನೆ ॥೧॥

ಮೂರಡಿ ಭೂಮಿಯ ಬೇಡಿದನೆ ಅರಸರ
ಬೇರ ಕಡಿಯೆ ಕೊಡಲಿ ತಂದನೆ
ನಾರ ಸೀರೆಯನಿಟ್ಟುಕೊಂಡನೆ ಬೇಗ
ಚೋರತನದಿ ಹರವಿ ಹಾಲ ಕುಡಿದನಮ್ಮ  ॥೨॥

ಬತ್ತಲೆ ನಾರಿಯರನಪ್ಪಿದ ಬೇಗ
ಉತ್ತಮ ಅಶ್ವವ ಹತ್ತಿದ
ಹತ್ತವತಾರವ ತಾಳಿದ ನಮ್ಮ
ದಿಟ್ಟ ಮೂರುತಿ ಪುರಂದರ ವಿಠಲ   ॥೩॥

Labels: ಕೇಳಲೊಲ್ಲನೆ ಎನ್ನ ಮಾತನು, Kelalollane Enna Matanu, ಪುರಂದರದಾಸರು, Purandaradasaru

ವನಜನಯನನ ಮನವ ಮಧುಪ ನಂಬುವರೆ : Vanajanayanana Manava

ವನಜನಯನನ ಮನವ ಮಧುಪ ನಂಬುವರೆ

ಕೀರ್ತನಕಾರರು : ಶ್ರೀಪಾದರಾಜರು
ರಾಗ : ಆಹರಿ
ತಾಳ : ಝಂಪೆ

ವನಜನಯನನ ಮನವ ಮಧುಪ ನಂಬುವರೆ
ಮನದೆಗೆದ ಮದನಪಿತ ವಿಠಲರೇಯಾ                   ||ಪ||

ಅರಿಯದ ಬಾಲೇರಿಗೆ ತನ್ನ ಪರಿಯನರುಹಿಸಿ ಮುನ್ನ
ನೆರೆದು ರತಿಪತಿಯ ಸುಖ ನೆರೆದೋರಿದ
ತೊರೆದು ಬದುಕುವೆವೆಂತೋ ರತಿಪತಿಯ ಪಿತನಗಲಿ
ವಿರಹದುರಿ ತಾನಳವಡರಿ ಸುಡುತಿಹುದು               ||೧||

ನಡೆ ನಗೆಯ ತುದಿನೋಟ ಬಲೆಯನೆಮ್ಮೊಳು ಬೀಸಿ
ಬಿಡದೆಯೆಮ್ಮನು ತನ್ನ ವಶಮಾಡಿದ
ಪಡಿಯಿಲ್ಲದನುಭವದ ಸುಖದ ಸವಿಯನೆ ತೋರಿ
ಮಡದಿ ತಡೆದಳೊ ಮಧುರೆಯಲಿ ನಲ್ಲನ  ||೨||

ಎಂದೆಂದು ನಿಮ್ಮ ವಶದಲ್ಲಿಹೆನೆಂದಭಯವಿತ್ತು
ಇಂದುಮುಖಿ ನಾರಿಯರ ನೆರೆ ನಂಬಿಸಿ
ನಂದನಂದನ ನಮ್ಮ ಕಾನನದೊಳೀಡ್ಯಾಡಿ
ಇಂದು ಮಧುರೆಯ ನಾರಿಯರ ನೆಚ್ಚಿದ   ||೩||

ಇವನ ವಚನದ ಕಪಟ ತಿಳಿಯಲರಿಯದೆ ನಾವು
ನವ ಹರಿಣಿಯಂತೆ ಮರುಳಾಗಿ ಕೇಳಿ
ವಿವರವರಿಯದೆ ನಾವು ಕಡು ನೊಂದೆವೆಲೊ ಮಧುಪ
ಇವನ ಗುಣವರಿಯದೆ ಕಡು ಕರುಣಿ ಎಂಬುವರು ಬರಿದೆ ||೪||

ಪತಿಸುತರ ಭವಬಂಧನಗಳೆಲ್ಲ ಈಡ್ಯಾಡಿ
ಗತಿ ನಮಗೆ ಅವನೆಂದು ಮನಸೋತೆವೋ
ಕೃತಕವರಿಯದೆ ನಮ್ಮ ವನದೊಳು ನಿಲ್ಲಿಸಿ ಪೋದ
ಪತಿಯೊಡನೆ ಸಂಧಾನವೆಂತೊ ಎಲೊ ಮಧುಪ ||೫||

ಮರುಳುಗಳು ನಾವು ಶ್ರೀಪತಿಯ ಕೂಟವ ಬಯಸಿ
ಇರುಳು ಹಗಲು ಜರಿ ಜರಿದಳಲುವೆವು
ಸಿರಿಯವನ ಉಂಗುಟದ ಉಗುರು ಗುಣ ಕಾಣಳೆಲೊ
ಹರಿ ನಮ್ಮ ನೆರೆದುದಚರಿಯಲ್ಲವೇ ಜಗದಿ ||೬||

ತುಂಗಗುಣ ನಿಲಯ ಅಂಗಜನ ಪಿತನೆಂದು
ರಂಗನಿಗೆ ಮನಸೋತು ಮರುಳಾದೆವೋ
ಹಿಂಗು ಬದುಕುವುದೆಂತೋ ಘೃಂಗ ಮಧುರೆಗೆ ಪೋಗಿ
ರಂಗವಿಠಲನ ತಂದೆಮ್ಮನುಳುಹುವುದೋ ||೭||

Labels: ವನಜನಯನನ ಮನವ ಮಧುಪ ನಂಬುವರೆ, Vanajanayanana Manava, ಶ್ರೀಪಾದರಾಜರು, Sripadarajaru

ಈಸಬೇಕು ಇದ್ದು ಜಯಿಸಬೇಕು : Isabeku Iddu Jayisabeku

ಈಸಬೇಕು ಇದ್ದು ಜಯಿಸಬೇಕು

ಕೀರ್ತನಕಾರರು : ಪುರಂದರದಾಸರು
ರಾಗ : ಧನ್ಯಾಸಿ
ತಾಳ : ಆದಿ

ಈಸಬೇಕು ಇದ್ದು ಜಯಿಸಬೇಕು
ಹೇಸಿಗೆ ಸ೦ಸಾರದಲ್ಲಿ ಆಸೆ ಲೇಶ ಇಡದ್ಹಾ೦ಗೆ     ||ಪ||

ತಾಮರಸ ಜಲದ೦ತೆ
ಪ್ರೇಮವಿಟ್ಟು ಭವದೊಳು
ಸ್ವಾಮಿ ರಾಮನೆನುತ ಪಾಡಿ
ಕಾಮಿತ ಕೈಗೊ೦ಬರೆಲ್ಲ                                ||೧||

ಗೇರು ಹಣ್ಣಿನಲ್ಲಿ ಬೀಜ
ಸೇರಿದ೦ತೆ ಸ೦ಸಾರದಿ
ಮೀರೀ ಆಸೆ ಮಾಡದಂತೆ
ಧೀರ ಕೃಷ್ಣನ ಭಕುತರೆಲ್ಲ                               ||೨||

ಮಾ೦ಸದಾಸೆಗೆ ಮತ್ಸ್ಯ ಸಿಲುಕಿ
ಹಿ೦ಸೆಪಟ್ಟ ಪರಿಯಂತೆ
ಮೋಸ ಹೋಗದ್ಹಾ೦ಗೆ ಜಗ-
ದೀಶ ಪುರಂದರವಿಠಲನ ನೆನೆದು                    ||೩||

Labels: ಈಸಬೇಕು ಇದ್ದು ಜಯಿಸಬೇಕು, Isabeku Iddu Jayisabeku, ಪುರಂದರದಾಸರು, Purandaradasaru

ಇಷ್ಟು ದಯವುಳ್ಳವನ ಯಾಕೆ ಬರಬೇಡಂದಿ : Ishtu Dayavullavana Yake Barabedendi

ಇಷ್ಟು ದಯವುಳ್ಳವನ

ಕೀರ್ತನಕಾರರು : ವಾದಿರಾಜರು 
ರಾಗ : ಕಲ್ಯಾಣಿ
ತಾಳ : ಆದಿ

ಇಷ್ಟು ದಯವುಳ್ಳವನ ಯಾಕೆ ಬರಬೇಡಂದಿ
ಎಷ್ಟು ನಿರ್ದಯಳೆ ನೀನು                     ||ಪ||

ಮುಟ್ಟುಕೋಪವ ದೂರಬಿಟ್ಟು ಸಂತೋಷದಲಿ
ಕೃಷ್ಣನ ಬಳಿಗೆ ಬಾರೆ                        ||ಅ.ಪ||

ನಿನ್ನಲ್ಲಿ ಭೋಗಲೋಲತೆ ಇಲ್ಲದಿದ್ದರೆ ನಿನಗೆ ಪೂಮಾಲೆಯ ಕೊಡುವನೆ
ಸಣ್ಣ ಕಮಲದಲೈದು ಬಣ್ಣಗಿಳಿಗಳ ಬರೆದ ಸಣ್ಣ ಸೀರೆಯ ಕೊಡುವನೆ
ಕಣ್ಣಿಗೆ ಬೇಕಾದ ಕನಕಮಯ ಕರೆದು ಕೈಯಲಿ ಕೊಡುವನೆ
ಬಿನ್ನಾಣವಾಡುತಲಿ ಬಗೆಬಗೆಯ ಮಾತಿನಲಿ ಬಾಯಿಮುದ್ದನೆ ಕೊಡುವನೆ ಓ ಸಖಿಯೆ ||೧||

ಕಳಿಯಡಿಕೆ ಅಲಗು ಕರ್ಪೂರ ಕಾಚನ ಗುಳಿಗೆ ಕರೆದು ಕೈಯಲಿ ಕೊಡುವನೆ
ಬೆಳದಿಂಗಳಲ್ಲಿ ಶೋಭಿಸುವ ಹೊಂಬಣ್ಣದ ಬಿಳಿಯೆಲೆಯ ನಿನಗೀವನೆ
ತಳಿತ ಮಾವಿನ ಚಿಗುರು ಇರುವ ರುಮಾಲೆಯ ತಲೆಯಲ್ಲಿ ಕಟ್ಟಿ ಬರುವನೆ
ಥಳಿಥಳಿಪ ನವಿಲಗರಿ ಮುತ್ತಿನ ತುರಾಯಿಯಿಟ್ಟು ತರುಣಿ ನಿನ್ನಲಿ ಬರುವನೆ ಓ ಸಖಿಯೆ   ||೨||

ಉರುಟಾಣಿ ಮುತ್ತು ಸರ ಉಚಿತವಾಗಿತ್ತು ನಿನ್ನ ಉರುಟು ಕುಚಗಳ ಪಿಡಿವನೆ
ಕಿರುನಗೆಯ ನಗುತಲಿ ಸರಸವಾಡುತ ನಿನ್ನ ಸೆರಗ ಪಿಡಿದು ಸೆಳೆವನೆ
ಕರಕಮಲದಿಂದಲಿ ಕಿರುಬೆವರು ಒರಸುತ ಕಸ್ತೂರಿಯ ಬೊಟ್ಟಿಡುವನೆ
ಸಿರಿಯರಸ ಹಯವದನ ಕೃಷ್ಣನ ಚರಣಕ್ಕೆ ಶರಣಿಪೊಕ್ಕಿನ್ನು ಸುಖಿಸೆ ಓ ಸಖಿಯೆ    ||೩||

Labels: ಇಷ್ಟು ದಯವುಳ್ಳವನ ಯಾಕೆ ಬರಬೇಡಂದಿ, Ishtu Dayavullavana Yake Barabedendi, ವಾದಿರಜರು, Vadirajaru