ಸೋಮವಾರ, ಅಕ್ಟೋಬರ್ 7, 2013

ಎರವಿನ ಸಿರಿಗೆ ಬಿಮ್ಮನೆ ಬೆರೆತರೆ : Eravina Sirige Bimmane Beretare

ಎರವಿನ ಸಿರಿಗೆ ಬಿಮ್ಮನೆ ಬೆರೆತರೆ

ಕೀರ್ತನಕಾರರು : ಪುರಂದರದಾಸರು
ರಾಗ : ಸೌರಾಷ್ಟ್ರ
ತಾಳ : ಅಟ್ಟ

ಎರವಿನ ಸಿರಿಗೆ ಬಿಮ್ಮನೆ ಬೆರೆತರೆ ನೀರ
ಕಡೆದರುಂಟೆ ಬೆಣ್ಣೆ ಜೀವವೆ
ಉರಗನ ಹೆಡೆಯ ನೆಳಲ ಸೇರಿದ ಕಪ್ಪೆ
ಸ್ಥಿರಕಾಲ ಬಾಳ್ವುದೆ ಜೀವವೆ                          ॥ಪ॥

ಸತಿ ಸುತರೆಂದು ನೆಚ್ಚಲು ಬೇಡ ಮನದೊಳು
ಹಿತವರೊಬ್ಬರ ಕಾಣೆ ಜೀವವೆ
ವೃಥಾ ನೀನು ಕೆಡಬೇಡ ಮರಣವು ತಪ್ಪದು
ನಾಥ ದಶಕಂಠಗಾದರು ಜೀವವೆ                    ॥೧॥

ಅಸೆ ಮಾಡಲು ಬೇಡ ಭಾಷೆ ತಪ್ಪಲು ಬೇಡನ್ಯ
ಸ್ತ್ರೀಸಂಗವು ಬೇಡ ಜೀವವೆ
ಏಸೇಸು ಜನ್ಮಾಂತರ ಕಳೆದುಳಿದರು
ಈ ಸಾವು ತಪ್ಪದು ಜೀವವೆ                           ॥೨॥

ಆನೆ ಕುದುರೆ ಮಂದಿ ಶಾನೆ ಭಂಡಾರವು
ಏನು ಪಡೆದರಿಲ್ಲ ಜೀವವೆ
ಮಾನ ಸಹ ಸರ್ವ ಹರಿಗೆ ಅರ್ಪಣ ಮಾಡಿ
ಪುನೀತನಾಗಿರು ಜೀವವೆ                             ॥೩॥

ಕೆರೆಯ ಕಟ್ಟಿಸು ಮತ್ತೆ ಪೂದೋಟ ಹಾಕಿಸು
ಸೆರೆಯ ಬಿಡಿಸಲದು ಪುಣ್ಯ ಜೀವವೆ
ಕರೆಯದೆ ಮನೆಗೆ ಬಂದವರಿಗನ್ನವ ನೀಡು
ಪರಲೋಕ ಸಾಧನವದು ಜೀವವೆ                  ॥೪॥

ಸತ್ಯವಂತರ ಸಂಗದೊಳಗೆ ಚರಿಸೆ ಮೃತ್ಯು
ಅತ್ತತ್ತಲಿರುವಳು ಜೀವವೆ
ಸತ್ಯವಂತ ಸಿರಿಪುರಂದರವಿಠಲನೆನ್ನು
ಸತ್ತು ಹುಟ್ಟುವುದಿಲ್ಲ ಜೀವವೆ                         ॥೫॥

Labels: ಎರವಿನ ಸಿರಿಗೆ ಬಿಮ್ಮನೆ ಬೆರೆತರೆ, Eravina Sirige Bimmane Beretare, ಪುರಂದರದಾಸರು, Purandaradasaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ