ಬುಧವಾರ, ಜುಲೈ 31, 2013

ಕಾದನಾ ವತ್ಸವ ಹರಿ : Kadana Vatsava Hari

ಕಾದನಾ ವತ್ಸವ ಹರಿ 

ಕೀರ್ತನಕಾರರು : ವಿಜಯದಾಸರು 
ರಾಗ :  ಯಮನ್ ಕಲ್ಯಾಣಿ
ತಾಳ : ರೂಪಕ 

ಕಾದನಾ ವತ್ಸವ ಹರಿ ಕಾದನಾಮೋದದಿಂದ ಮಾಧವ 
ವೇದವೇದ್ಯ ಸಾಧುವಿನುತ ರಾಧಿಕಾರಮಣ ಕೃಷ್ಣ                       ।।ಪ।।

ಎಳಗರಿಕೆಯಿರುವ ಸ್ಥಳದಿ ನೆರೆದು ವಸ್ತುಗಳನೆ ನಿಲಿಸಿ 
ಕೊಳಲು ತನ್ನ ಕೈಲಿ ಪಿಡಿದು ಮುರಳಿಗಾನ ಮಾಡುವ                 ।।೧।।

ಮರದ ನೆರಳಿಗೆ ಕೃಷ್ಣ ಕರುಗಳನ್ನ ನಿಲ್ಲಿಸಿ 
ಕರೆದು ಪಾಲು ಕರೆದು ತಂದು ಬಾಯೊಳುಣಿಸುತ್ತ                       ।।೨।।

ಉಡುಗಳಂತೆ ಕರುಗಳು ನಡುವೆ ಚಂದ್ರಧಾರೆಯೊಳು
ಪೊಡವಿಯೊಳಗೆ ಬೆಳಗಲು ಆ ಮೃಡನು ಕೊಂಡಾಡಲು                ।।೩।।

ಒಂದು ತಿಂಗಳ ಕರುಗಳು ಇಂದಿರೇಶ ಮೇಯಿಸಲು 
ಒಂದು ವರುಷ ಕರುಗಳಂತೆ ಆನಂದದಿಂದಲಿ ಬೆಳೆದವು               ।।೪।।

Labels: ಕಾದನಾ ವತ್ಸವ ಹರಿ, Kadana  Vatsava  Hari, ವಿಜಯದಾಸರು, Vijayadasaru

ಕೊಡುವವನು ನೀನು ಕೊಂಬುವನು ನಾನು : Koduvavanu Neenu Kombuvanu Naanu

ಕೊಡುವವನು ನೀನು ಕೊಂಬುವನು ನಾನು 

ಕೀರ್ತನಕಾರರು : ವಿಜಯದಾಸರು 
ರಾಗ :  ಕಾಂಬೋದಿ  
ತಾಳ : ಝಂಪೆ

ಕೊಡುವವನು ನೀನು ಕೊಂಬುವನು ನಾನು 
ಬಡಮನದ ಮನುಜನ ಬೇಡಿ ಫಲವೇನು                  ।।ಪ।।

ಹದಿನಾರು ಹಲ್ಲುಗಳ ಬಾಯ್ದೆರೆದು ಬೇಡಿದರೆ
ಇದು ಸಮಯವಲ್ಲೆಂದು ಪೇಳಿ ತಾನು 
ಮದನಕೇಳಿಗೆ ನೂರನೊಂದಾಗಿ ನೋಡುವನು 
ಮದಡ ಮಾನವನೇನು ಕೊಡಬಲ್ಲ ಹರಿಯೆ              ।।೧।।

ಗತಿಯಿಲ್ಲವೆಂತೆಂದು ನಾನಾ ಪ್ರಕಾರದಲ್ಲಿ 
ಮತಿಗೆಟ್ಟು ಪೊಗಳಿದರೆ ತನ್ನ 
ಸತಿ-ಸುತರ ಕೇಳಬೇಕೆಂದು ಮೊಗತಿರುಹುವ
ಅತಿದುರುಳ ಮತ್ತೇನು ಕೊಡಬಲ್ಲ ಹರಿಯೆ                ।।೨।।

ಹೀನವೃತ್ತಿಯ ಜನರಿಗಾಸೆಯನು ಬಡುವುದು 
ಗಾಣದೆತ್ತು ತಿರುಗಿ ಬಳಲಿದಂತೆ 
ಭಾನುಕೋಟಿತೇಜ ವಿಜಯವಿಠಲರೇಯ 
ನೀನಲ್ಲದನ್ಯತ್ರ ಕೊಡುಕೊಂಬರುಂಟೇ                     ।।೩।।

Labels: ಕೊಡುವವನು ನೀನು ಕೊಂಬುವನು ನಾನು, Koduvavanu Neenu  Kombuvanu Naanu, ವಿಜಯದಾಸರು, Vijayadasaru

ಮಂಗಳವಾರ, ಜುಲೈ 30, 2013

ಎಂದಿದ್ದರೀ ಕೊಂಪೆ ಎನಗೆ ನಂಬಿಕೆಯಿಲ್ಲ : Endiddiree Kompe Enage Nambikeyilla

ಎಂದಿದ್ದರೀ ಕೊಂಪೆ ಎನಗೆ ನಂಬಿಕೆಯಿಲ್ಲ

ಕೀರ್ತನಕಾರರು : ಕನಕದಾಸರು    
ರಾಗ :  ಕಾಂಬೋದಿ 
ತಾಳ : ಝಂಪೆ 

ಎಂದಿದ್ದರೀ ಕೊಂಪೆ ಎನಗೆ ನಂಬಿಕೆಯಿಲ್ಲ 
ಮುಂದರಿತು ಹರಿಪಾದ ಹೊಂದುವುದು ಲೇಸು           ।।ಪ।।

ಎಲುವುಗಳು ತೊಳೆ ಜಂತೆ ನರಗಳವು ಬಿಗಿದಂತೆ
ಬಲಿದ ಚರ್ಮವು ಮೇಲು ಹೊದಿಕೆಯಂತೆ 
ಗಳಗಳನೆ ನುಡಿವ ನಾಲಗೆ ಗಂಟೆಯುಲಿಯಂತೆ 
ಕೆಲಕಾಲಕೀ ಕೊಂಪೆ ಕಡೆಗಾಹುದಂತೆ                      ।।೧।।

ಕಂಡಿಗಳು ಒಂಬತ್ತು ಕಳಬಂಟರೈವರು 
ಅಂಡಲೆವುದೊತ್ತಿನಲಿ ಷಡುವರ್ಗವು 
ಮಂಡಲಕೆ ಹೊಸಪರಿಯು ಮನ್ಮಥನ ಠಾಣ್ಯವಿದು 
ಮಂಡೆಹೋಗುವುದನ್ನು ಅರಿಯದೀ ಕೊಂಪೆ               ।।೨।।

ಕೊಂಪೆಯಲಿ ಶೃಂಗಾರ ಕೊಂಡಾಡಲಳವಲ್ಲ 
ಕೆಂಪುಬಣ್ಣಗಳಿಂದ ಚೆನ್ನಾಯಿತು 
ಇಂಪಿನಲಿ ಕಾಗಿನೆಲೆಯಾದಿಕೇಶವನನ್ನು 
ಸೊಂಪಿನಲಿ ನೆನೆನೆನೆದು ಸುಖಿಯಾಗೋ ಮನುಜಾ    ।।೩।। 

Labels : ಎಂದಿದ್ದರೀ ಕೊಂಪೆ ಎನಗೆ ನಂಬಿಕೆಯಿಲ್ಲ, Endiddiree Kompe Enage Nambikeyilla, ಕನಕದಾಸರು, Kanakadasaru

ಹಣ್ಣು ಕೊಂಬುವ ಬನ್ನಿರಿ : Hannu Kombuva ಬನ್ನಿರಿ

ಹಣ್ಣು ಕೊಂಬುವ ಬನ್ನಿರಿ ಹರಿದಾಸರು

ಕೀರ್ತನಕಾರರು : ಕನಕದಾಸರು  
ರಾಗ :  ಶಂಕರಾಭರಣ  
ತಾಳ : ಅಟ್ಟ 

ಹಣ್ಣು ಕೊಂಬುವ ಬನ್ನಿರಿ ಹರಿದಾಸರು 
ಹಣ್ಣು ಕೊಂಬುವ ಬನ್ನಿರಿ                                  ।।ಪ।।

ಚೆನ್ನ ಬಾಲಕೃಷ್ಣನೆಂಬ 
ಕನ್ನೆಗೊನೆಬಾಳೆಹಣ್ಣು                                     ।।ಅ.ಪ।।

ಸುತ್ತೇಳು ಲೋಕದಿ ಸುರರು ಬಿತ್ತಿದ ಹಣ್ಣು 
ಭಕ್ತರ ಬಾಯೊಳು ನೆನೆವ ಹಣ್ಣು 
ಅರ್ತಿಯುಳ್ಳವರೆಲ್ಲ ಕೊಳ್ಳಿ ಬೇಕಾದರೆ
ನಿತ್ಯ ಮಾಧವನೆಂಬ ಅಚ್ಚಮಾವಿನ ಹಣ್ಣು             ।।೧।।

ಅಜನ ಪಡೆದ ಹಣ್ಣು ಗಜವ ಕಾಯ್ದ ಹಣ್ಣು 
ನಿಜಮುನಿಗಳಿಗೆ ತೋರಿಸಿದ ಹಣ್ಣು 
ತ್ರಿಜಗವಂದಿತ ಪಾಲ್ಗಡಲೊಡೆಯನೆ ಹಣ್ಣು 
ಸುಜನಭಕ್ತರೆಲ್ಲ ಕೊಳ್ಳಬನ್ನಿರಿ ಹಣ್ಣು                     ।।೨।।

ತುರುವ ಕಾಯ್ದ ಹಣ್ಣು ತುರಗನ ತುಳಿದಾ ಹಣ್ಣು 
ಕರೆದರೆ ಕಂಬದೊಳು ಓಯೆಂಬ ಹಣ್ಣು 
ಮರುಗುವ ಧ್ರುವನಿಗೆ ಪಟ್ಟಗಟ್ಟಿದ ಹಣ್ಣು
ಕರುಣಾಳು ಕಾಗಿನೆಲೆಯಾದಿಕೇಶವ ಹಣ್ಣು             ।।೩।।

Labels : ಹಣ್ಣು ಕೊಂಬುವ ಬನ್ನಿರಿ, Hannu  Kombuva Banniri, ಕನಕದಾಸರು, Kanakadasaru

ಗುರುವಾರ, ಜುಲೈ 25, 2013

ಹರಿಯೆಂಬ ನಾಮಾಮೃತದ ಸುರುಚಿಯು : Hariyemba Namamritada Suruchiyu

ಹರಿಯೆಂಬ ನಾಮಾಮೃತದ ಸುರುಚಿಯು

ಕೀರ್ತನಕಾರರು : ಪುರಂದರದಾಸರು 
ರಾಗ :  ಆರಭಿ  
ತಾಳ : ಅಟ್ಟ  

ಹರಿಯೆಂಬ ನಾಮಾಮೃತದ ಸುರುಸಿಯು ಪರಮ ಭಕ್ತರಿಗಲ್ಲದೆ         ।।ಪ।।

ಅರಿಯದ ಕಡುಮೂರ್ಖ ನೀಚ ಜನರಿಗೆಲ್ಲ ಹರುಷವಾಗಬಲ್ಲದೆ          ।।ಅ.ಪ।।

ಅಂದಿಗೆ ಅರಳೆಲೆ ಇಟ್ಟರೆ ಕೊಡ ಕಂದನಾಗಬಲ್ಲುದೆ 
ಹಂದಿಗೆ ಸಕ್ಕರೆ ತುಪ್ಪ ತಿನಿಸಲು ಗಜೇಂದ್ರನಾಗಬಲ್ಲುದೆ 
ಚಂದಿರನ ಪೂರ್ಣ ಕಳೆಯನು ತೋರಲು ಅಂಧ ನೋಡಬಲ್ಲನೆ
ಇಂದಿರೆ ಅರಸನ ನಾಮದ ಮಹಿಮೆಯ ಮಂದಜ್ಞಾನಿ ಬಲ್ಲನೆ            ।।೧।।

ಉರಗಕ್ಕೆ ಕ್ಷೀರವನೆರೆಯಲು ಅದರ ವಿಷವು ಹೋಗಬಲ್ಲುದೆ 
ತ್ವರೆಯಿಂದ ನೀಲಿಯ ಕರದಲಿ ತೊಳೆಯಲು ಕರಿದು ಹೋಗಬಲ್ಲುದೆ 
ಪರಿಪರಿ ಬಂಗಾರವಿಟ್ಟರೆ ದಾಸಿಯು ಅರಸಿಯಾಗಬಲ್ಲಳೆ
ಭರದಿಂದ ಶ್ವಾನನ ಬಾಲವ ತಿದ್ದಲು ಸರಳವಾಗಬಲ್ಲುದೆ                  ।।೨।।

ಮೋಡಕೆ ಮಯೂರ ಕುಣಿವಂತೆ ಕುಕ್ಕುಟ ನೋಡಿ ಕುಣಿಯಬಲ್ಲುದೆ 
ಹಾಡಿನ ಸವಿಯನು ಬಧಿರನು ಕೇಳಿ ಹರುಷಪಡಲು ಬಲ್ಲನೆ 
ಗೋಡೆಯ ಮುಂದೆ ನಾಟ್ಯವನಾಡಲು ನೋಡಿ ಸುಖಿಸಬಲ್ಲುದೆ
ರೂಢಿಗೊಡೆಯ ನಮ್ಮ ಪುರಂದರವಿಠಲನ ಮೂಢಜ್ಞಾನಿ ಬಲ್ಲನೆ        ।।೩।।

Labels: ಹರಿಯೆಂಬ ನಾಮಾಮೃತದ ಸುರುಚಿಯು, Hariyemba Namamritada Suruchiyu, ಪುರಂದರದಾಸರು, Purandaradasaru

ದ್ರೋಹಿಗಳ ವಿವರವನ್ನು ನಾ ಪೇಳ್ವೆನಯ್ಯ : Drohigala Vivaravannu Naa Pelvenayya

ದ್ರೋಹಿಗಳ ವಿವರವನ್ನು ನಾ ಪೇಳ್ವೆನಯ್ಯ

ಕೀರ್ತನಕಾರರು : ಕನಕದಾಸರು
ರಾಗ :  ಮುಖಾರಿ 
ತಾಳ : ಝಂಪೆ 

ದ್ರೋಹಿಗಳ ವಿವರವನ್ನು ನಾ ಪೇಳ್ವೆನಯ್ಯ           ।।ಪ।।


ಕೂಡಿದೆಡೆಯಲಿ ಕಪಟವೆಸಗುವನೆ ದ್ರೋಹಿ 
ಮಾಡಿದುಪಕಾರವನು ಮರೆವವನೆ ದ್ರೋಹಿ 
ಚಾಡಿ ಕೊಂಡೆಗಳನಾಡಿ ನಡೆವವನೆ ದ್ರೋಹಿ 
ರೂಢಿಯೊಳು ಬಾಳುವರ ಸಹಿಸದನೆ ದ್ರೋಹಿ        ।।೧।।

ಸತಿಯಿದ್ದು ಪರಸತಿಯ ಬಯಸುವನೆ ದ್ರೋಹಿ 
ಹೆತ್ತವರೊಡನೆ ಕಲಹ ಮಾಡುವನೆ ದ್ರೋಹಿ
ಯತಿಗಳನು ಒಂದೆ ಸಮ ನಿಂದಿಸುವನೆ ದ್ರೋಹಿ 
ಸತಿಯನ್ನು ಪರರ ವಶ ಗೈವವನೆ ದ್ರೋಹಿ             ।।೨।।

ಹೊನ್ನಿದ್ದು ಅನ್ನದಾನ ಮಾಡದವನೆ ದ್ರೋಹಿ
ತನ್ನ ಗುರು ಸತಿಯ ಬಯಸುವವನೇ ದ್ರೋಹಿ 
ಸನ್ನುತಾಂಗ ಕಾಗಿನೆಲೆಯಾದಿಕೇಶವನ 
ತನ್ನೊಳಗೆ ತಾ ತಿಳಿದು ಸುಖಿಸದವ ದ್ರೋಹಿ          ।।೩।।

Labels: ದ್ರೋಹಿಗಳ ವಿವರವನ್ನು ನಾ ಪೇಳ್ವೆನಯ್ಯ, Drohigala Vivaravannu Naa Pelvenayya, ಕನಕದಾಸರು, Kanakadasaru

ನೋಡು ನೋಡು ಗೋಪಿ : Nodu Nodu Gopi

ನೋಡು ನೋಡು ಗೋಪಿ

ಕೀರ್ತನಕಾರರು : ಕನಕದಾಸರು
ರಾಗ :  ಕಲ್ಯಾಣಿ
ತಾಳ : ಏಕ 

ನೋಡು ನೋಡು ಗೋಪಿ ನಿನ್ನ ಮಗಳ ಲೂಟಿಯ 
ಮಾಡುತಾನೆ ಮನೆಗೆ ಬಂದು ಬಹಳ ಚೇಷ್ಟೆಯ       ।।ಪ।।

ಮಾನಿನಿಯರೊಳಗೆ ಪೋಕಾಟವೇನಿದು 
ಮಾನವನ್ನು ಕಳೆದ ಪರಿಯ ಹೇಳತೀರದು             ।।೧।।

ಪಿಡಿದ ಸೆರಗ ಬಿಡನು ಇನ್ನೇನ ಮಾಡಿಲಿ 
ತಡೆಯಲಾರೆನಮ್ಮ ಕೇಳೆ ಇವನ ಹಾವಳಿ              ।।೨।।

ಇನ್ನು ಚನ್ನಕೇಶವ ಕದಳಿ ರಂಗನ 
ಬಣ್ಣನೆಯ ಮಾತಾ ಕೇಳಿ ಬಿಡುವೆ ಪುರುಷನ           ।।೩।।

Labels: ನೋಡು ನೋಡು ಗೋಪಿ, Nodu Nodu Gopi, ಕನಕದಾಸರು, Kanakadasaru

ಮರೆಯಬೇಡ ಮನವೇ ನೀನು : Mareyabeda Manave Neenu

ಮರೆಯಬೇಡ ಮನವೇ ನೀನು 

ಕೀರ್ತನಕಾರರು : ಪುರಂದರದಾಸರು 
ರಾಗ :  ಪೂರ್ವಿ   
ತಾಳ : ರೂಪಕ 

ಮರೆಯಬೇಡ ಮನವೇ ನೀನು 
ಹರಿಯ ಸ್ಮರಣೆಯಾ                       ।।ಪ।।

ಯಾಗ ಯಜ್ಞ ಮಾಡಲೇಕೆ 
ಯೋಗಿ ಯತಿಯು ಆಗಲೇಕೆ 
ನಾಗಶಯನ ನಾರದವಂದ್ಯನ 
ಕೂಗಿ ಭಜನೆ ಮಾಡೊ ಬೇಗೆ            ।।೧।।

ಸತಿಯು ಸುತರು ಹಿತರು ಎಂದು 
ಮತಿಯಗೆಟ್ಟು ಕೆಡಲಿಬೇಡ 
ಗತಿಯು ತಪ್ಪಿ ಹೋಗುವಾಗ 
ಸತಿಯು ಸುತರು ಬಾಹೊರೇನು        ।।೨।।

ಹರಿಯ ಸ್ಮರಣೆ ಮಾತ್ರದಿಂದ 
ಘೋರ ದುರಿತವೆಲ್ಲ ನಾಶ 
ಪರಮಪುರುಷ ಪುರಂದರವಿಠಲ 
ಪದವಿ ಕೊಡುವ ಪವನನಯ್ಯ            ।।೩।।

Labels: ಮರೆಯಬೇಡ ಮನವೇ ನೀನು, Mareyabeda Manave Neenu, ಪುರಂದರದಾಸರು, Purandaradasaru

ಧನ್ಯನಾದೆ ವಿಠಲನ ಕಂಡು : Dhanyanaade Vithalana Kandu

ಧನ್ಯನಾದೆ ವಿಠಲನ ಕಂಡು

ಕೀರ್ತನಕಾರರು : ಜಗನ್ನಾಥದಾಸರು 
ರಾಗ :  ಪೂರ್ವಿ 
ತಾಳ : ತ್ರಿವಿಡೆ

ಧನ್ಯನಾದೆ ವಿಠಲನ ಕಂಡು                          ।।ಪ।।

ಧನ್ಯನಾದೆ ಕಾಮನಪಿತ ಲಾ 
ವಣ್ಯ ಮೂರಿತಿಯ ಕಣ್ಣಲ್ಲಿ ಕಂಡು                   ।।ಅ.ಪ।।

ದೇವವರೇಣ್ಯ ಸದಾವಿನೋದಿ ವೃಂ 
ದಾವನಸಂಕಾರ ಗೋಪನ ಕಂಡು                 ।।೧।।

ಮಂಗಳಾಂಗ ಕಾಳಿಂಗಮರ್ದನ ಮಾ 
ತಂಗವರದ ವರ ರಂಗನ ಕಂಡು                   ।।೨।।

ಹಾಟಕಾಂಬರ ಕಿರೀಟಸಾರಥಿ 
ತಾಟಾಕಾರಿ ವೈರಾಟನ ಕಂಡು                     ।।೩।।

ಚಿಂತಿತಫಲದ ಕೃತಾಂತನಾತ್ಮಜಾ
ದ್ಯಂತರಹಿತ ನಿಶ್ಚಿಂತನ ಕಂಡು                      ।।೪।।

ಮಾತುಳಾಂತಕ ವಿಧಾತಪಿತ ಜಗ 
ನ್ನಾಥವಿಠಲ ವಿಖ್ಯಾತನ ಕಂಡು                        ।।೫।।


Labels: ಧನ್ಯನಾದೆ ವಿಠಲನ ಕಂಡು, Dhanyanaade Vithalana Kandu, ಜಗನ್ನಾಥದಾಸರು, Jagannathadasaru

ಒಕ್ಕಲ ಮಾಡೆನ್ನ ಮುಕುಂದ : Okkala Madenna Mukunda

ಒಕ್ಕಲ ಮಾಡೆನ್ನ ಮುಕುಂದ

ಕೀರ್ತನಕಾರರು : ಶ್ರೀರಾಮದಾಸರು  
ರಾಗ :
ತಾಳ :  

ಒಕ್ಕಲ ಮಾಡೆನ್ನ ಮುಕುಂದ ತಂದೆ 
ಒಕ್ಕಲ ಮಾಡೆನ್ನ                                     ।।ಪ।।

ಒಕ್ಕಲ ಮಾಡೆನ್ನ ದಕ್ಕಿಸಿ ಭವದೊಳು 
ಅಕ್ಕರದಲಿ ನಿಮ್ಮ ಮಿಕ್ಕ ಪ್ರಸಾದ ನೀಡಿ        ।।ಅ.ಪ।।

ಆಸೆ ನೀಗಿಸೆನ್ನಭವದ
ಪಾಶ ತರಿಯೊ ಮುನ್ನ 
ಏಶನೆ ತವ ಪಾದ ದಾಸಾನುದಾಸರ 
ವಾಸದಿರಿಸಿ ಎನ್ನ ಪೋಷಿಸು ದಯದಿಂ          ।।೧।।

ಸೋಕ್ಕು ಮುರಿದು ಎನ್ನ ನಿಮ್ಮಯ 
ಪಕ್ಕದೆಳಕೊ ಎನ್ನ 
ತಿಕ್ಕಿ ಮುಕ್ಕುವ ಘನ ಮಕ್ಕಮಾರಿ ಸತಿಯ 
ರಕ್ಕರ‍್ಹಾರಿಸಿ ನಜರಿಕ್ಕಿ ಸಲಹು ಜೀಯ             ।।೨।।

ಜನನ ಮರಣ ಬಿಡಿಸೊ ಎನ್ನಯ 
ಮಾನವ ನಿನ್ನೊಳಿರಿಸೊ 
ವನರುಹ ಬ್ರಹ್ಮಾಂಡ ಜನನಿ ಜನಕನಾದ 
ವನಜಾಕ್ಷಿಶ್ರೀರಾಮ ಘನಮುಕ್ತಿ ಪಾಲಿಸಿ          ।।೩।।

Labels: ಒಕ್ಕಲ ಮಾಡೆನ್ನ ಮುಕುಂದ, Okkala Madenna Mukunda, ಶ್ರೀರಾಮದಾಸರು, Sriramadasaru

ಇಷ್ಟೇ ಬೇಡುವೆ ನಾ : Ishte Beduve Naa

ಇಷ್ಟೇ ಬೇಡುವೆ ನಾ

ಕೀರ್ತನಕಾರರು : ಬಾಗೇಪಲ್ಲಿ ಶೇಷದಾಸರು 
ರಾಗ : ಆನಂದಭೈರವಿ 
ತಾಳ : ಆದಿ  

ಇಷ್ಟೇ ಬೇಡುವೆ ನಾ ನಿನಗೆ ಕರವ ಮುಗಿದು    ।।ಪ।।

ಅಷ್ಟು ಸೌಭಾಗ್ಯ ಕೊಟ್ಟು ನೀ ಎನ್ನ 
ಕಷ್ಟ ಬಿಡಿಸೆಂದು ಬೇಡೆನೋ ಕೃಷ್ಣರಾಯ        ।।೧।।

ಸೃಷ್ಟಿಗೊಡೆಯ ನಿನ್ನಿಷ್ಟವಿದ್ದಂತಾಗಲಿ 
ಶಿಷ್ಟ ಜನರ ಸಂಗ ಕೊಟ್ಟು ರಕ್ಷಿಸು ಎಂದು       ।।೨।।

ಜ್ಞಾನಿಗಳರಸ ಜಾಣ ಪ್ರಾಣನಾಥವಿಠಲರಾಯ 
ಸಾನುರಾಗದಿ ನಿನ್ನ ಧ್ಯಾನ ಕೊಟ್ಟು ಬಹು ಮಾನಿಯೆಂದೆನಿಸೆಂದು   ।।೩।।

Labels: ಇಷ್ಟೇ ಬೇಡುವೆ ನಾ, Ishte Beduve Naa, ಬಾಗೇಪಲ್ಲಿ ಶೇಷದಾಸರು, Bagepalli Sheshadasaru

ಕವಳ ತಾಯಿ ಕವಳ ಅಮ್ಮ : Kavala Tayi Kavala Amma

ಕವಳ ತಾಯಿ ಕವಳ ಅಮ್ಮ

ಕೀರ್ತನಕಾರರು : ವಿದ್ಯಾಪ್ರಸನ್ನ ತೀರ್ಥರು
ರಾಗ : ಪೀಲು
ತಾಳ :   ಝಂಪೆ


ಕವಳ ತಾಯಿ ಕವಳ ಅಮ್ಮ 
ಪಾಪಿ ಪರದೇಶಿಯ ಮರಿಬೇಡಿರಮ್ಮ       ।।ಪ।।

ಸಂಜೆಯ ಕವಳಕ್ಕೆ ಸಾವಿರ ಆಪತ್ತು 
ಅಂಜಿ ಓಡುವುದೆಂದು ಕೇಳಿಲ್ಲವೇನಮ್ಮ 
ಭುಂಜಿಸಿ ನಿಮ್ಮಯ ಪತಿಯ ಪ್ರಸಾದದ 
ಎಂಜಲು ಎನಗಿಷ್ಟು ಜೋಳಿಗೆಗಿಕ್ರವ್ವ         ।।೧।।

ನಮದೊಂದು ಸಂಸಾರ ಬಲು ದೊಡ್ಡದವ್ವ 
ಶ್ರಮಿಸುವರದರೊಳಗೊಬ್ಬರಿಲ್ಲವ್ವ 
ಕಮಲವ್ವ ನಿಮ್ಮ ಅಮೃತಹಸ್ತದ ಕವಳ 
ಎಮಗೊಂದು ಕ್ಷಣದಲಿ ಅಮೃತವಾಗೋದವ್ವ   ।।೨।।

ಮಿತಿಯಿಲ್ಲದೈಶ್ವರ್ಯ ನಿಮಗಿಹುದೆಂದು 
ಕ್ಷಿತಿಯೊಳು ಜ್ಞಾನಿಗಳಾಡುತಲಿಹರು 
ಅತುಲ ಮಹಿಮಾ ನಿಮ್ಮ ಪತಿಯ ಪ್ರಸಾದವ 
ಪ್ರತಿದಿನವಿತ್ತು ಪ್ರಸನ್ನರಾಗಿರವ್ವ                    ।।೩।।

Labels: ಕವಳ ತಾಯಿ ಕವಳ ಅಮ್ಮ, Kavala Tayi Kavala Amma, ವಿದ್ಯಾಪ್ರಸನ್ನ ತೀರ್ಥರ, Vidyaprasanna Theertharu

ಬಿಡು ಬಿಡು ಚಿಂತೆಯ ಮೂಢಾ : Bidu Bidu Chinteya Moodha

ಬಿಡು ಬಿಡು ಚಿಂತೆಯ ಮೂಢಾ

ಕೀರ್ತನಕಾರರು : ತುಪಾಕಿ ವೆಂಕಟರಮಣಾಚಾರ್ಯರು 
ರಾಗ :  
ತಾಳ :  

ಬಿಡು ಬಿಡು ಚಿಂತೆಯ ಮೂಢಾ ನ 
ಮ್ಮೊಡೆಯನುಪೇಕ್ಷೆಯ ಮಾಡ 
ಬಡವರ ತಪ್ಪನು ನೋಡ ಸಂ
ಗಡಲಿಹ ಗರುಡಾರೂಢ                    ।।ಪ।।

ನೆನೆವರ ಮನದಲ್ಲಿರುವ ನಿಜ 
ಜನಕೆ ದಯಾರಸ ಸುರಿವ
ಕನವಿಕೆ ಎಂಬುದ ತರಿವ ಸ್ಮರ 
ಜನಕೆ ಸಿರಿಯ ಕರೆತರುವ                  ।।೧।।

ಮಾಡುವ ಕರ್ಮಗಳೆಲ್ಲ ಪಲ 
ಕೊಡಿಸುವನು ಸಿರಿನಲ್ಲ 
ರೂಢಿಪರೊಳಗಿರಬಲ್ಲ ಬೇ 
ರಾಡುವ ಮಾತೇನಿಲ್ಲ                        ।।೨।।

ನೋಡಲು ಸಿಕ್ಕುವನಲ್ಲ ಬೇ 
ಗೋಡಿ ಪಿಡಿಯಲೊಶನಲ್ಲ 
ದೂಡುವ ದೈತ್ಯರನೆಲ್ಲ ದಯ
ಮಾಡಲಿವಗೆ ಸರಿಯಲ್ಲ                      ।।೩।।

ಸರ್ವತ್ರದಲ್ಲಿ ಸ್ಮರಿಸುವನು ರಿಪು 
ಪರ್ವಗಣ ದುಶ್ಟ್ಯವನ 
ಗರ್ವಿ ದೈತ್ಯವನದವನ ಸುರ
ಸಾರ್ವಭೌಮನೆಂಬುವನು                  ।।೪।।

ಸತಿಸುತಗ್ರಹ ಭೂಧನಕೆ ಶ್ರೀ 
ಪತಿಯೇ ಪಾಲಕನಿದಕೆ 
ವ್ಯಥೆಗೊಳದಿರು ದಿನದಿನಕೆ ಸ 
ಮ್ಮತಿನಹಿಗಿರಿಪತಿ ಘನಕೆ                   ।।೫।।

Labels: ಬಿಡು ಬಿಡು ಚಿಂತೆಯ ಮೂಢಾ, Bidu Bidu Chinteya Moodha, ತುಪಾಕಿ ವೆಂಕಟರಮಣಾಚಾರ್ಯರು, Tupaki Venkataramanacharyaru

ನಿನ್ನ ನಂಬಿದೆ ನಾನು : Ninna Nambide Naanu

ನಿನ್ನ ನಂಬಿದೆ ನಾನು 

ಕೀರ್ತನಕಾರರು : ನೆಕ್ಕರ ಕೃಷ್ಣದಾಸರು
ರಾಗ : ಮುಖಾರಿ
ತಾಳ :   ಆದಿ 


ನಿನ್ನ ನಂಬಿದೆ ನಾನು ಎನ್ನ ನೀ ಸಲಹೋ
ಪನ್ನಗಶಯನ ಹರಿ ವೇಂಕಟರಮಣ                      ।।ಪ।।

ವರಧೃವನ ಪೊರೆದಂತೆ ಪ್ರಹ್ಲಾದಗೊಲಿದಂತೆ 
ಕರಿಯ ಸಲಹಿದಂತೆ ಕರುಣವಿರಲಂತೆ                   ।।೧।।

ತರಲೆ ದ್ರೌಪದಿಯ ಅಭಿಮಾನ ಕಾಯ್ದಂತೆ 
ಧುರದೊಳು ನರನ ಶಿರವ ಉಳುಹಿದಂತೆ               ।।೨।।

ಶೇಷಾದ್ರಿವಾಸ ಜಗದೀಶ ಲಕ್ಷ್ಮೀಶ 
ಕ್ಲೇಶಪಾಶ ವಿನಾಶ ಜನಪೋಷ ವೇಂಕಟೇಶ           ।।೩।।

ಪರಮ ಮಂಗಳಮೂರ್ತಿ ಪಾವನ ಕೀರ್ತಿ 
ಧರೆಯ ರಕ್ಷಿಪ ಆರತಿ  ದಯವಾಗು ಪೂರ್ತಿ             ।।೪।।

ಮಕರಕುಂಡಲಧರ ಮಕುಟ ಕೇಯೂರ 
ಸಕಲಾಭಾರಣ ಹಾರ ಸ್ವಾಮಿ ಉದಾರ                  ।।೫।।

ತಾಳಲಾರೆನು ನಾನು ಬಹಳ ದಾರಿದ್ರ್ಯ 
ಕೇಳುವರಿಲ್ಲ ಬಹು ಭವಭಯ ಕ್ಷುದ್ರ                        ।।೬।।

ನೋಡಬೇಡೆನ್ನವಗುಣವ ದಮ್ಮಯ್ಯ 
ಬೇಡಿದಿಷ್ಟವನಿತ್ತು ಒಡಗೂಡಿ ಸಲಹಯ್ಯ                 ।।೭।।

ಭಕ್ತಜನ ಸಂಸಾರಿ ಬಹುದುರಿತಹಾರಿ 
ಮುಕ್ತಿದಾಯಕ ದಾರಿ ಮುಂದೆ ನೀ ತೋರಿ               ।।೮।।

ವರಾಹ ತಿಮ್ಮಪ್ಪ ಒಲವಾಗೆನ್ನಪ್ಪ 
ಸಾರಿದವರ ತಪ್ಪು ಸಲಹೊ ನೀನಪ್ಪ                      ।।೯।।

Labels: ನಿನ್ನ ನಂಬಿದೆ ನಾನು, Ninna Nambide Naanu, ನೆಕ್ಕರ ಕೃಷ್ಣದಾಸರು, Nekkara Krishnadasaru

ಭೂಮ ಇಡುಬಾರೆ : Bhooma Idubaare

ಭೂಮ ಇಡುಬಾರೆ

ಕೀರ್ತನಕಾರರು : ಹರಪನಹಳ್ಳಿ ಭೀಮವ್ವ  
ರಾಗ :   
ತಾಳ :   

ಭೂಮ ಇಡುಬಾರೆ ದ್ರುಪದರಾಯನರಸಿ 
ಭೀಮಧರ್ಮಾರ್ಜುನ ನಕುಲ ಸಾದೇವ 
ದ್ರೌಪದಿ ಕುಳಿತ ಎಲೆಗೆ                                           ।।ಪ।।

ಮಂಡಿಗೆ ಗುಳ್ಳೋರಿಗೆಯು ಬುಂದ್ಯ ಚಕ್ಕುಲಿ ಕರ್ಜಿಕಾಯಿ 
ಚೆಂದದ ಶಾಲ್ಯಾನ್ನ ಶಾವಿಗೆ ಫೇಣಿಗಳು ಎಣ್ಣೋರಿಗೆಯು  ।।೧।।

ಹಪ್ಪಳ ಸಂಡಿಗೆಯು ಶಾವಿಗೆ ಬಟ್ಟವಿಮಾಲತಿಯು ಗೌಲಿ
ಬಟ್ಟಲೋಳ್ ತುಂಬಿತ್ತು ಪರಡಿ ಪಾಯಸ ಘೃತ ಸಕ್ಕರೆಯು  ।।೨।।

ಕುಂದಣದ್ಹರಿವಾಣ ಪಿಡಿದು ಕುಸುಮಮಲ್ಲಿಗೆ ಮುಡಿದು ನಡೆದು 
ಬಂದು ಭೇಮೇಶಕೃಷ್ಣನ ಸಖರ‍್ಹೊಂದಿ ಕುಳಿತರು ಕೃಷ್ಣೆಸಹಿತ  ।।೩।।

Labels: ಭೂಮ ಇಡುಬಾರೆ, Bhooma Idubaare, ಹರಪನಹಳ್ಳಿ ಭೀಮವ್ವನವರು, Harapanahalli Bheemavvanavaru

ಇಂಥಲ್ಲಿರಬೇಕು ಜನ್ಮ ಸಾರ್ಥಕ : Inthallirabeku Janma Sarthaka

ಇಂಥಲ್ಲಿರಬೇಕು ಜನ್ಮ ಸಾರ್ಥಕ

ಕೀರ್ತನಕಾರರು : ಪ್ರಾಣೇಶ ವಿಠಲರು 
ರಾಗ : ಪೂರ್ವಿ 
ತಾಳ : ಆದಿ 

ಇಂಥಲ್ಲಿರಬೇಕು ಜನ್ಮ ಸಾರ್ಥಕ ಮಾಡುವ ನರನು 
ಎಂಥೇಂಥಲ್ಲೆಮ್ದರೆ ಕೇಳ್ವುದು ಸುಜನರು ಪೇಳ್ವೆನದನು      ।।ಪ।।

ಭಾಗವತಾದಿ ಪುರಾಣ ಸಾತ್ವಿಕರು ಪೇಳುವ ಸ್ಥಳದಲ್ಲಿ 
ಭಾಗೀರಥಿ ಮೊದಲಾಗಿಹ ಸತ್ತೀರ್ಥಗಳಿಹ ಭೂಮಿಯಲಿ 
ಯಾಗ ಮಾಡುವಲ್ಲಿ ನಾಗಪಾಲಕನ ಆಲಯವಿದ್ದಲ್ಲಿ 
ಯೋಗಿಜನರು ಅಹರ್ನಿಶಿಯಲಿ ಭಗವಧ್ಯಾನ ಮಾಡುವಲ್ಲಿ  ।।೧।।

ಸತ್ಯವಚನವಿದ್ದಲ್ಲಿ ದುರ್ವಿಷಯ ಬಿಟ್ಟ ಪುರುಷರಲ್ಲಿ
ಮತ್ತರಾಗದಲೇ ಬ್ರಹ್ಮಚಾರಿ ಮಾತ್ರಕ ನಮಿಸುವರಲ್ಲಿ 
ವಿತ್ತರಾಶಿ ಕಸಕುಪ್ಪಿ ಸಮನೆಂದರಿತು ಇಹರಲ್ಲಿ 
ಮರ್ತ್ಯರಾಶ್ರಯಿಸಿ ಒಂದುಕಾಲಕುಪಜೀವಿಸದವರಲ್ಲಿ       ।।೨।।

ತತ್ವವರಿತು ನೋಳ್ಪರಿಗೆ ಹುಚ್ಚರಂದದಿ ಇದ್ದವರಲ್ಲಿ 
ಉತ್ತಮವಾಗಲಿ ಕೆಟ್ಟದೆ ಆಗಲಿ ನಗುತಲೆ ಇಹರಲ್ಲಿ 
ಕತ್ತೆಯೆ ಮೊದಲಾಗಿಹ ಪ್ರಾಣಿಗಳಲಿ ಸಮಕರುಣಿದ್ದಲ್ಲಿ 
ಸತ್ಯರಮಣ ಪ್ರಾಣೇಶವಿಠ್ಠಲನ ಮೂರ್ತಿಕಾಂಬರಲ್ಲಿ         ।।೩।।

Labels: ಇಂಥಲ್ಲಿರಬೇಕು  ಜನ್ಮ ಸಾರ್ಥಕ, Inthallirabeku Janma Sarthaka, ಪ್ರಾಣೇಶ ವಿಠಲರು, Pranesha Vithalaru

ಬಂದು ನಿಲ್ಲೋ ಕಣ್ಣ ಮುಂದೆ : Bandu Nillo Kanna Munde

ಬಂದು ನಿಲ್ಲೋ ಕಣ್ಣ ಮುಂದೆ 

ಕೀರ್ತನಕಾರರು : ವಿಜಯದಾಸರು
ರಾಗ : ಆನಂದಭೈರವಿ 
ತಾಳ : ಅಟ್ಟ

ಬಂದು ನಿಲ್ಲೋ ಕಣ್ಣ ಮುಂದೆ            ।।ಪ।।

ಬಂದು ನಿಲ್ಲೋ ನನ್ನ ಪಾದಕ್ಕೆ ವಂದಿಪೆ 
ಇಂದಿರೆಯರಸ ಗೋವಿಂದ ಮುಕುಂದ ನೀ       ।।ಅ.ಪ।।

ಅರಳಿದ ಕೆಂದಾವರೆಯ ಧಿಕ್ಕರಿಸುವ 
ಚರಣಾರವಿಂದವ ನಿರುತ ತೋರು ನೀನು         ।।೧।।

ನೀಲಾಲಕ ಭ್ರಮರಕುಂತಲಮಂಡಿತ 
ಮೇಲಾದ ರಾಕೇಂದು ಮುಖವ ತೋರಿಸುತಲಿ   ।।೨।।

ಪದುಮನೇತ್ರನೆ ನಿನ್ನ ಸದನವೆನುತ ಎನ್ನ 
ಹೃದಯದೊಳಗೆ ನಿಂತು ನಾ ಮುದದಿ ಭಜಿಸುವಂತೆ  ।।೩।।

ಕರಿಯ ಮೊರೆಯ ಕೇಳಿ ಕರುಣದಿಂ ಬಂದಂತೆ 
ಕರೆದಾಗ ನಿನ್ನ ದಿವ್ಯಚರಣವ ತೋರಿಸುತ         ।।೪।।

ಅಜಭವಾದಿಗಳಿಗೆ ನಿಜಪದವನಿತ್ತಂತೆ 
ಭಜಿಪ ಭಕ್ತರಿಗೊಲಿವ ವಿಜಯವಿಠಲರೇಯ         ।।೫।।


Labels: ಬಂದು ನಿಲ್ಲೋ ಕಣ್ಣ ಮುಂದೆ, Bandu Nillo Kanna Munde, ವಿಜಯದಾಸರು, Vijayadasaru

ನಂಬಿಕೆಟ್ಟವರಿಲ್ಲವೊ ರಂಗಯ್ಯನ : Nambikettavarillavo Rangayyana

ನಂಬಿಕೆಟ್ಟವರಿಲ್ಲವೊ ರಂಗಯ್ಯನ

ಕೀರ್ತನಕಾರರು : ವ್ಯಾಸರಾಯರು 
ರಾಗ : ಕಲ್ಯಾಣಿ 
ತಾಳ : ಮಿಶ್ರಛಾಪು 

ನಂಬಿಕೆಟ್ಟವರಿಲ್ಲವೊ ರಂಗಯ್ಯನ 
ನಂಬದೆ ಕೆಟ್ಟರೆ ಕೆಡಲಿ                             ।।ಪ।।

ಅಂಬುಜನಾಭನ ಅಖಿಳಲೋಕೇಶನ 
ಕಂಬುಕಂಧರ ಕೃಷ್ಣ ಕರುಣಾಸಾಗರನ         ।।ಅ.ಪ।।

ತರಳ ಪ್ರಹ್ಲಾದ ಸಾಕ್ಷಿ ಸರಸಿಯೊಳಿದ್ದ 
ಕರಿರಾಜನೊಬ್ಬ ಸಾಕ್ಷಿ 
ಮರಣಕಾಲದಿ ಅಜಾಮಿಳ ಮಗನ ಕರೆಯೆ 
ಗರುಡನೇರಿ ಬಂದ ಗರುವರಹಿತನ             ।।೧।।

ದೊರೆಯೂರು ಏರಬಂದ ಪುತ್ರನನ್ನು 
ಕೊರಳ್ಹಿಡದ್ಹೊರಡಿಸಲು 
ಅರಣ್ಯದೊಳಗವನಿದ್ದ ಸ್ಥಳದಲ್ಲಿ 
ಭರದಿಂದೋಡಿ ಬಂದ ಭಕ್ತವತ್ಸಲನ            ।।೨।।

ತರುಣಿ ದ್ರೌಪದಿ ಸೀರೆಯ ದುಶ್ಯಾಸನ 
ಸರಸರ ಸೆಳೆಯುತ್ತಿರೆ 
ತರಳೆಯೊಡನೆ ತಾನಾಡುವುದು ಬಿಟ್ಟು 
ತ್ವರಿತದಕ್ಷಯವಿತ್ತ ಸಿರಿಕೃಷ್ಣರಾಯನ            ।।೩।।


Labels: ನಂಬಿಕೆಟ್ಟವರಿಲ್ಲವೊ ರಂಗಯ್ಯನ, Nambikettavarillavo Rangayyana, ವ್ಯಾಸರಾಯರು, Vyasarayaru

ನ್ಯಾಯವೇ ನಿನಗೆ ಎನಗೆ ಸಿರಿಕೃಷ್ಣ, Nyayave Ninage Enage Sirikrishna

ನ್ಯಾಯವೇ ನಿನಗೆ ಎನಗೆ ಸಿರಿಕೃಷ್ಣ

ಕೀರ್ತನಕಾರರು : ವ್ಯಾಸರಾಯರು
ರಾಗ : ಕೇದಾರಗೌಳ 
ತಾಳ : ಅಟ್ಟ 

ನ್ಯಾಯವೇ ನಿನಗೆ ಎನಗೆ ಸಿರಿಕೃಷ್ಣ 
ಬಾಯಾಡಬಹುದೆ ಕೈಯೊಳಿತ್ತ ಹಣಗಳ            ।।ಪ।।

ಆರು ಅರಿಯರು ಹಾಗೆ ಒಂಬತ್ತು ಕೊಡುವಾಗ 
ತೋರಿಯಾಡಿದೆ ಒಮ್ಮೆ ನಿನ್ನ ಹೆಸರ
ಗಾರು ಮಾಡದೆ ಬಡ್ಡಿತೆತ್ತು ಬರುವೆನೆಂದು 
ಪೂರೈಸಿ ಕೊಡದೆ ಚುಂಗಡಿಯ ನಿಲಿಸುವರೆ       ।।೧।।

ಸಾಲವ ಬೇಡಿದರೆ ಕೋಪವೇ ಕಮಲಾಕ್ಷ 
ಕಾಲಿಗೆನ್ನ ಕೊರಳ ಕಟ್ಟಿಕೊಂಬೆ 
ಆಲಯದವರ ಕೇಳದೆ ಒಳಗಾದೆನೊ
ಭೋಳೆಯತನದಲಿ ನಿನ್ನ ನಂಬಿದೆ ಹರಿಯೆ        ।।೨।।

ಅಸಲು ನಿನಗೆ ಸಮರ್ಪಣೆ ಆಯಿತೆಲೊ ದೇವ 
ಮೀಸಲು ಪೊಂಬೆಸರುನಿರುತ ನಡೆಯಲಿ 
ಶಶಿಧರ ಬ್ರಹ್ಮಾದಿವಂದ್ಯ ಸತ್ಯವೆಂಬ ಬಿರುದು 
ಮೀಸಲು ಉಳುಹಿ ಎನ್ನ ಸಲಹಯ್ಯ ಸಿರಿಕೃಷ್ಣ     ।।೩।।

Labels: ನ್ಯಾಯವೇ ನಿನಗೆ ಎನಗೆ ಸಿರಿಕೃಷ್ಣ, Nyayave Ninage Enage Sirikrishna, ವ್ಯಾಸರಾಯರು, Vyasarayaru

ಒಂದು ಬಾರಿ ಸ್ಮರಣೆ ಸಾಲದೆ : Ondu Baari Smarane Saalade

ಒಂದು ಬಾರಿ ಸ್ಮರಣೆ ಸಾಲದೆ

ಕೀರ್ತನಕಾರರು : ವಾದಿರಾಜರು
ರಾಗ : ಪಂತುವರಾಳಿ
ತಾಳ : ರೂಪಕ

ಒಂದು ಬಾರಿ ಸ್ಮರಣೆ ಸಾಲದೆ ಆ-
ನಂದ ತೀರ್ಥರ ಪೂರ್ಣಪ್ರಜ್ಞರ ಸರ್ವಜ್ಞರಾಯರ ಮಧ್ವರಾಯರ    ।।ಪ।।

ಹಿಂದನೇಕ ಜನ್ಮಗಳಲಿ ನೊಂದು ಯೋನಿಯಲ್ಲಿ ಬಂದು 
ಇಂದಿರೇಶ ಹರಿಯ ಪಾದವ ಹೊಂದಬೇಕೆಂಬುವರಿಗೆ                 ।।೧।।

ಪ್ರಕೃತಿಬಂಧದಲಿ ಸಿಲುಕಿ ಸಕಲ ವಿಷಯಗಳಲಿ ನೊಂದು 
ಅಕಳಂಕ ಚರಿತ ಹರಿಯ ಪಾದಭಕುತಿ ಬೇಕೆಂಬುವರಿಗೆ             ।।೨।।

ಆರುಮಂದಿ ವೈರಿಗಳನು ಸೇರಿಸಲೀಯದಂತೆ ಜರಿದು 
ಧೀರನಾಗಿ ಹರಿಯ ಪಾದವ ಸೇರಬೇಕೆಂಬುವರಿಗೆ                      ।।೩।।

ಘೋರಸಂಸಾರಾಂಬುಧಿಗೆ ಪರಮಜ್ಞಾನವೆಂಬ ವಾಡೆ 
ಏರಿ ಮೆಲ್ಲನೆ ಹರಿಯಪಾದ ಸೇರಬೇಕೆಂಬುವರಿಗೆ                       ।।೪।।

ಹೀನಬುದ್ಧಿಯಿಂದ ಶ್ರೀಹಯವದನನ ಜರಿದು 
ತಾನು ಬದುಕಲರಿಯದಿರಲು ತೋರಿಕೊಟ್ಟ ಮಧ್ವಮುನಿಯ          ।।೫।।

Labels: ಒಂದು ಬಾರಿ ಸ್ಮರಣೆ ಸಾಲದೆ, Ondu Baari Smarane Saalade, ವಾದಿರಾಜರು, Vadirajaru

ಕೊಂಬು ಕೊಳಲನೂದುತ್ತ : Kombu Kolalanoodutta

ಕೊಂಬು ಕೊಳಲನೂದುತ್ತ

ಕೀರ್ತನಕಾರರು : ಶ್ರೀಪಾದರಾಜರು 
ರಾಗ : ಮಾಯಾಮಾಳವಗೌಳ 
ತಾಳ : ಅಟ್ಟ

ಕೊಂಬು ಕೊಳಲನೂದುತ್ತ  ನಂಬಿಸಿ ಪೋದೆನೆಯವ್ವಾ 
ಅಂಬುಜನಾಭಗೆ ಮನ ಹಂಬಲಿಸುತ್ತಿದೆಯವ್ವಾ            ।।ಪ।।

ನಡೆಯಲಾರೆನೆಯವ್ವಾ ಅಡಿಯಿಡಲೊಶವಿಲ್ಲ 
ಬೆಡಗುಗಾರನ ಕೊಡೆ ನುಡಿ ತೆರಳಿತ್ತೆಯವ್ವಾ               ।।೧।।

ಮಾತು ಮನಸು ಬಾರದವಾ ಸೋತೆವವ್ವಾ ಕೃಷ್ಣಗಾಗಿ 
ಆತನ ಕಾಣದೆ ಮನ ಕಾತರಿಸುತಿದೆಯವ್ವಾ               ।।೨।।

ಅನ್ನೋದಕ ಒಳ್ಳೆವವಾ ಕಣ್ಣಿಗೆ ನಿದ್ರೆ ಬಾರದು 
ಮನ್ನಣೆಗಾರನ ಕೂಡೆ ಹೆಣ್ಣು ಜನ್ಮ ಸಾಕೆಯವ್ವಾ          ।।೩।।

ಮನೆಮನೆ ವಾರುತೆಗೆ ಮನವೆಳಸದೆಯವ್ವಾ 
ಮನಸಿಜಪಿತನೊಡನೆ ಮನ ತೆರಳಿತೆಯವ್ವಾ              ।।೪।।

ಗೋಪಮ್ಮನ ವಾರುತೆಗೆ ತಾಪ ಹಿರಿಯದಾಯಿತವ್ವಾ 
ಗೋಪ ಜನರ ಕೂಡಿದ ಶ್ರೀಪತಿ ರಂಗವಿಠಲಾ              ।।೫।।

Labels: ಕೊಂಬು ಕೊಳಲನೂದುತ್ತ , Kombu Kolalanoodutta, ಶ್ರೀಪಾದರಾಜರು, Sripadarajaru

ನಡತೆ ಹೀನನಾದರೇನಯ್ಯ : Nadate Heenanadarenayya

ನಡತೆ ಹೀನನಾದರೇನಯ್ಯ 

ಕೀರ್ತನಕಾರರು : ಕನಕದಾಸರು 
ರಾಗ : ಕಾಪಿ 
ತಾಳ : ಅಟ್ಟ

ನಡತೆ ಹೀನನಾದರೇನಯ್ಯ ಜಗ 
ದೊಡೆಯನ ಭಕುತಿ  ಇದ್ದರೆ ಸಾಲದೆ                      ।।ಪ।।

ಪುಂಡರಾ  ಪಾಂಡುನಂದನರು ಮತ್ತದರೊಳು 
ಕಂಡೋರ್ವಳೈವರು ಭೋಗಿಪರು 
ಖಂಡಿಸಿದರು ರಣದೊಳು ಗುರುಹಿರಿಯರ 
ಪುಂಡರೀಕಾಕ್ಷನ ಒಲುಮೆಯೊಂದಲ್ಲದೆ                   ।।೧।।

ಒಂದೊಂದು ಪರಿ ಬುದ್ಧಿಯ ಹೇಳಿ ಹಿರಣ್ಯಕ 
ಕಂದನ ನಿರ್ಬಂಧಿಸುತಿರಲು 
ಅಂದು ಸಾಧಿಸಲು ಕಂಬದ ಬಳಿಯೆ ತನ್ನ 
ತಂದೆಯ ಕೊಲಿಸಿದನೆಂಬರು ಜನರು                     ।।೨।।

ದಾಸಿಯ ಜಠರದೊಳು ಜನಿಸಿದ ವಿದುರ ಸ
ನ್ಯಾಸಿಯೆಂದೆನಿಸಿಕೊಂಡ 
ಸಾಸಿರನಾಮದೊಡೆಯ ಕೃಷ್ಣ ಬಾಡದಾದಿ 
ಕೇಶವನ ಭಕುತಿಯೊಂದಿದ್ದರೆ ಸಾಲದೆ                    ।।೩।।

Labels: ನಡತೆ ಹೀನನಾದರೇನಯ್ಯ, Nadate Heenanadarenayya, ಕನಕದಾಸರು, Kanakadasaru

ಬುಧವಾರ, ಜುಲೈ 24, 2013

ಕೃಷ್ಣಾ ನೀ ಬೇಗನೆ ಬಾರೋ : Krishna Nee Begane Baro

ಕೃಷ್ಣಾ ನೀ ಬೇಗನೆ ಬಾರೋ

ಕೀರ್ತನಕಾರರು : ವ್ಯಾಸರಾಯರು
ರಾಗ : ಯಮನ್ ಕಲ್ಯಾಣಿ
ತಾಳ : ಛಾಪು

ಕೃಷ್ಣಾ ನೀ ಬೇಗನೆ ಬಾರೋ 
ಬೇಗನೆ ಬಾರೋ ಮುಖವನ್ನು ತೋರೋ        ।।ಪ।।

ಕಾಲಲಂದುಗೆ ಗೆಜ್ಜೆ ನೀಲದ ಬಾವುಲಿ 
ನೀಲವರ್ಣನೆ ನಾಟ್ಯವನಾಡುತ ಬಾರೋ        ।।೧।।

ಉಡಿಯಲ್ಲಿ ಉಡಿಗೆಜ್ಜೆ ಬೆರಳಲ್ಲಿ ಉಂಗುರ 
ಕೊರಳೊಳು ಧರಿಸಿದ ವೈಜಯಂತಿ ಮಾಲೆ      ।।೨।।

ಕಾಶಿಪೀತಾಂಬರ ಕೈಯಲ್ಲಿ ಕೊಳಲು 
ಪೂಸಿದ ಶ್ರೀಗಂಧ ಮೈಯೊಳಗಮ್ಮ                 ।।೩।।

ತಾಯಿಗೆ ಬಾಯಲ್ಲಿ ಜಗವನ್ನೇ ತೋರಿದ 
ಜಗದೋದ್ಧಾರಕ ನಮ್ಮ ಉಡುಪಿಯ ಶ್ರೀಕ್ರಷ್ಣ     ।।೪।।


Labels: ಕೃಷ್ಣಾ ನೀ ಬೇಗನೆ ಬಾರೋ, Krishna Nee Begane Baro, ವ್ಯಾಸರಾಯರು, Vyasarayaru

ಅನುಭವದಡುಗೆಯ ಮಾಡಿ : Anubhavadadugeya Maadi

ಅನುಭವದಡುಗೆಯ ಮಾಡಿ

ಕೀರ್ತನಕಾರರು : ಪುರಂದರದಾಸರು 
ರಾಗ : ನಾದನಾಮಕ್ರಿಯೆ 
ತಾಳ : ಛಾಪು

ಅನುಭವದಡುಗೆಯ ಮಾಡಿ ಅದ 
ಕ್ಕನುಭವಿಗಳು ಬಂದು ನೀವೆಲ್ಲ ಕೂಡಿ         ।।ಪ।।

ತನುವೆಂಬ ಭಾಂಡವ ತೊಳೆದು ಕೆಟ್ಟ 
ಮನದ ಚಂಚಲವೆಂಬ ಮುಸುರೆಯ ಕಳೆದು 
ಘನವಾಗಿ ಮನೆಯನ್ನು ಬಳಿದು ಅಲ್ಲಿ 
ಮಿನುಗುವ ತ್ರಿಗುಣವ ಒಲೆಗುಂಡನೆಡೆದು     ।।೧।।

ವಿರಕ್ತಿಯೆಂಬುವ ಮಡಿಯುಟ್ಟು ಪೂರ್ಣ 
ಹರಿಭಕ್ತಿಯೆಂಬ ನೀರನ್ನೆಸರಿಟ್ಟು
ಅರಿವೆಂಬ ಬೆಂಕಿಯ ಕೊಟ್ಟು ಮಾಯಾ 
ಮರೆವೆಂಬ ಕಾಷ್ಟವ ಮುದದಿಂದ ಸುಟ್ಟು      ।।೨।।

ಶರಣೆಂಬೊ ಸಾಮಗ್ರಿ ಹೂಡಿ ಮೋಕ್ಷ 
ಪರಿಕರವಾದಂಥ ಪಾಕವ ಮಾಡಿ 
ಗುರು ಶರಣರು ಸವಿದಾಡಿ ನಮ್ಮ ಪುರಂ 
ದರವಿಠಲನ ಬಿಡದೆ ಕೊಂಡಾಡಿ                ।।೩।।

Labelas: ಅನುಭವದಡುಗೆಯ ಮಾಡಿ, Anubhavadadugeya Maadi, ಪುರಂದರದಾಸರು, Purandaradasaru

ಬಿನ್ನಹಕೆ ಬಾಯಿಲ್ಲವಯ್ಯಾ : Biinahake Bayillavayya

ಬಿನ್ನಹಕೆ ಬಾಯಿಲ್ಲವಯ್ಯಾ 

ಕೀರ್ತನಕಾರರು : ಪುರಂದರದಾಸರು  
ರಾಗ : ಕಾಂಬೋದಿ
ತಾಳ : ಝಂಪೆ


ಬಿನ್ನಹಕೆ ಬಾಯಿಲ್ಲವಯ್ಯಾ 
ಅನಂತ ಅಪರಾಧ ಎನ್ನಲ್ಲಿ ಇರಲಾಗಿ                      ।।ಪ।।
ಅಸುರಾರಿ ನಿನ್ನ ಮರೆತೆನೊ ಕಾಯೊ ಹರಿಯೇ          ।।ಅ.ಪ।।

ಶಿಶುಮೋಹ ಸತಿಮೋಹ ಜನನಿಜನಕರ ಮೋಹ 
ರಸಿಕ ಭ್ರಾಂತಿಯ ಮೋಹ ರಜಮನ್ನಣೆ ಮೋಹ 
ಪಶುಮೋಹ ಭೂಮೋಹ ಬಂಧುವರ್ಗದ ಮೋಹ 
ಹಸುನುಳ್ಳ ಆಭರಣಗಳ ಮೋಹದಿಂದ                     ।।೧।।

ಅನ್ನಮದ ಅರ್ಥಮದ ಅಖಿಳ ವೈಭವದ ಮದ 
ಮುನ್ನ ಪ್ರಾಯದ ಮದವು ರೂಪಮದವು 
ತನ್ನ ಸತ್ವದ ಮದ ಧಾತ್ರಿ ವಶವಾದ ಮದ 
ಇನ್ನು ತನಗೆದುರಿಲ್ಲವೆಂತೆಂಬ ಮದದಿಂದ                 ।।೨।।

ಇಷ್ಟು ದೊರಕಿದರೆ ಮತ್ತಿಷ್ಟು ಬೇಕೆಂಬಾಸೆ 
ಅಷ್ಟು ದೊರಕಿದರು ಮತ್ತಷ್ಟರಾಸೆ
ಕಷ್ಟ ಬೇಡೆಂಬಾಸೆ ಕಡುಸುಖವ ಕಾಂಬಾಸೆ 
ನಷ್ಟ ಜೀವನದಾಸೆ ಪುರಂದರವಿಠಲ                        ।।೩।।

Labels: ಬಿನ್ನಹಕೆ ಬಾಯಿಲ್ಲವಯ್ಯಾ , Biinahake Bayillavayya, ಪುರಂದರದಾಸರು, Purandaradasaru

ಆರು ಹಿತವರು ಎಂದು ನಂಬಬೇಡ : Aru Hitavaru Endu Nambabeda

ಆರು ಹಿತವರು ಎಂದು ನಂಬಬೇಡ

ಕೀರ್ತನಕಾರರು : ಕನಕದಾಸರು
ರಾಗ : ಕಾಂಬೋದಿ
ತಾಳ : ಝಂಪೆ


ಆರು ಹಿತವರು ಎಂದು ನಂಬಬೇಡ                      ।।ಪ।।
ಯಾರಿಗ್ಯಾರಿಲ್ಲ ಆಪತ್ತು ಬಂದೊದಗಿದಡೆ               ।।ಅ.ಪ।।

ಜನಕ ಹಿತದವನೆಂದು ನಂಬಬಹುದೇ ಹಿಂದೆ 
ತನಯ ಪ್ರಹ್ಲಾದನಿಗೆ ಪಿತ ಮುನಿದನು 
ಜನನಿಯೇ ರಕ್ಷಿಪಳೆಂತೆಂಬೆನೆ ಅ ಕುಂತಿ 
ತನಯ ರಾಧೇಯನಿಗೆ ಎರಡೆಣಿಸಿದ ಮೇಲೆ            ।।೧।

ಮಗನು ತೆತ್ತಿಗನೆನಲು ಕಂಸ ತನ್ನಯ ಪಿತನ 
ವಿಗಡ ಬಂಧನದಿಂದ ಬಂಧಿಸಿದನು 
ಜಗವರಿಯೇ ಸೋದರನು ಮಮತೆಯುಳ್ಳವನೆನಲು 
ಹಗೆವರಸಿ ವಾಲಿಯನು ಅನುಜ ಕೊಲಿಸಿದ ಮೇಲೆ    ।।೨।।

ತನಗೆ ದೇಹಾನುಬಂಧುಗಳೇ ಬಂಧುಗಳೆಂದು 
ಮನದಿ ನಿಶ್ಚಯವಾಗಿ ನಂಬಬೇಡ 
ಘನಕೃಪಾನಿಧಿ ಕಾಗಿನೆಲೆಯಾದಿ ಕೇಶವ 
ಅನುದಿನ ನಂಬಿದವಗಿಹಪರದಿ ಸುಖವು                   ।।೩।।

Labels: ಆರು ಹಿತವರು ಎಂದು ನಂಬಬೇಡ, Aru Hitavaru Endu Nambabeda, ಕನಕದಾಸರು, Kanakadasaru

ವಿಠಲಾ ನಿನ್ನ ನಂಬಿದೆ ಎನ್ನ ಕಾಯೊ : Vithala Ninna Nambide Enna Kayo

ವಿಠಲಾ ನಿನ್ನ ನಂಬಿದೆ ಎನ್ನ ಕಾಯೊ 

ಕೀರ್ತನಕಾರರು : ವಿಜಯದಾಸರು 
ರಾಗ : ಸಾರಂಗ 
ತಾಳ : ಝಂಪೆ

ವಿಠಲಾ ನಿನ್ನ ನಂಬಿದೆ ಎನ್ನ ಕಾಯೊ 
ಪುಟ್ಟುವದು ಬಿಡಿಸೊ ನಿನ್ನವರೊಳಗಿರಿಸೊ              ।।ಪ।।

ಬಹುಕಾಲ ಮಲಮೂತ್ರ ಡೊಳ್ಳಿನೊಳು ಬಿದ್ದು 
ಹಲುಬಿದೆ ಒಂದಿಷ್ಟು ನೆಲೆಗಾಣದೆ ನಾನು 
ಹಲವು ಮಾತೇನು ಎನಗೆ ಬಿಡದು 
ಸಲಹಬೇಕಯ್ಯಾ ಸಮುದ್ರಶಯ್ಯಾ                        ।।೧।।

ಕರಪಿಡಿದು ಎತ್ತುವ ಬಿರುದು ಪರಾಕ್ರಮ 
ಮರಳಿ ಮಿಗಿಲೊಂದು ದೇವರಿಗೆ ಉಂಟೆ 
ಮರೆವು ಮಾಡದೆ ಮಹಾದುರಿತವ ಪರಿ 
ಹರಿಸು ಸ್ಮರಣೆಯನ್ನು ಇತ್ತು ಕೀರ್ತನೆ ಪೇಳಿಸೋ      ।।೨।।

ಬಿನ್ನಹ ಲಾಲಿಸು ಚೆನ್ನ ಲಕುಮಿಪತಿ 
ಚೆನ್ನಾಗಿಡು ನಿತ್ಯ ಪ್ರಾಣನಾಥಾ ಅಭಯಹಸ್ತಾ 
ಅನ್ನದಾತಾ ಸಿರಿ ವಿಜಯವಿಠ್ಠಲರೇಯಾ 
ಸನ್ನಿಧಿಯಲ್ಲಿ ಎನ್ನ ಸಂತೋಷಪಡಿಸೊ                    ।।೩।।

Labels: ವಿಠಲಾ ನಿನ್ನ ನಂಬಿದೆ ಎನ್ನ ಕಾಯೊ, Vithala Ninna Nambide Enna Kayo, ವಿಜಯದಾಸರು, Vijayadasaru


ಬಾರನ್ಯಾತಕೆ ನೀರೆ ನೀ ಕರತಾರೆ : Baaranyatake Neere Nee Karatare

ಬಾರನ್ಯಾತಕೆ ನೀರೆ ನೀ 

ಕೀರ್ತನಕಾರರು : ಹೆಳವನಕಟ್ಟೆ ಗಿರಿಯಮ್ಮ 
ರಾಗ : ಮುಖಾರಿ
ತಾಳ : ರೂಪಕ


ಬಾರನ್ಯಾತಕೆ ನೀರೆ ನೀ ಕರತಾರೆ ಸುಗುಣಗಂಭೀರನಾ                       ।।ಪ।।

ಮೂರು ಲೋಕ ಸಂಚಾರ ಕರುಣಾಸಾಗರ ತೇಜಿಯನೇರಿ ಮೆರೆವನಾ        ।।ಅ.ಪ।।

ಕೋಮಲಾಂಗನ ಕಂತುದಹನನು ಸೋಮಾರ್ಕ ಶಿಖಿನೇತ್ರನು 
ವಾಮದೇವನು ವನಜಭವ ಸಂಭವ ಮುನಿಸ್ತೋಮವಿನುತ ಎನ್ನ ಪ್ರೇಮನ   ।।೧।।

ನೀಲಕಂಠನ ನಿಗಮಸಾರನ ಬಾಲಶಶಿಧರ ಭರ್ಗನ 
ಶೀಲಸದ್ಗುಣ ಫಾಲನೇತ್ರನ ಕಾಲಾಂತಕ ಎನ್ನ ಕಾಯವನ                      ।।೨।।

ಮಂಗಳಾತ್ಮನ ಮಲ್ಲರಿಪುದಲ್ಲಣ ದೇವೋತ್ತುಂಗ ಹೆಳವನಕಟ್ಟೆಯ 
ರಂಗಗತಿಸಖನಾದ ನೀಲಗಿರಿ ಲಿಂಗಮೂರುತಿಯ                               ।।೩।।

Labels: ಬಾರನ್ಯಾತಕೆ ನೀರೆ ನೀ ಕರತಾರೆ, Baaranyatake Neere Nee Karatare,  ಹೆಳವನಕಟ್ಟೆ ಗಿರಿಯಮ್ಮ,  Helavanakatte Giriyamma

ಕೆಡಬ್ಯಾಡಲೋ ಪ್ರಾಣಿ : Kedabyadalo Prani

ಕೆಡಬ್ಯಾಡಲೋ ಪ್ರಾಣಿ

ಕೀರ್ತನಕಾರರು : ಹನುಮೇಶ ವಿಠಲ
ರಾಗ : ಆನಂದಭೈರವಿ
ತಾಳ : ಬಿಲಂದಿ


ಕೆಡಬ್ಯಾಡಲೋ ಪ್ರಾಣಿ ಕೆಡಬ್ಯಾಡಾ
ನಮ್ಮ ಕಡಲ ಶಯನನ ಭಜನೆ ಬಿಡಬ್ಯಾಡಾ          ।।ಪ।।

ಪರನಿಂದೆ ಮಾಡಿ ಕೆಡಬ್ಯಾಡಾ 
ನನ್ನ ಸರಿ ಯಾರಿಲ್ಲೆಂದು ಮೆರೆಯಬೇಡಾ
ಪರಹಿಂಸಾಮಾಡಿ ನೀ ಕೆಡಬ್ಯಾಡಾ 
ಶ್ರೀ ಹರಿ ಸರ್ವೋತ್ತಮನೆನದೆ ಕೆಡಬ್ಯಾಡಾ            ।।೧।।

ಪರದ್ರವ್ಯವನಪಹರಿಸಲಿ ಬ್ಯಾಡಾ 
ಪರಸತಿಯರ ಮೋಹಕ್ಕೊಳಗಾಗಬ್ಯಾಡಾ 
ದುರಿತ ಕಾರ್ಯಕೆ ಮನ ಕೊಡಬ್ಯಾಡಾ 
ಒಳ್ಳೆ ಪರೋಪಕಾರ ಮಾಡದೇ ಕೆಡಬ್ಯಾಡಾ          ।।೨।।

ಮಾತಾಪಿತರ ಸೇವೆ ಬಿಡಬ್ಯಾಡಾ 
ಯಮದೂತರಂದದಿ ಅವರನು ಕಾಡಬ್ಯಾಡಾ 
ಕೆಟ್ಟ ಮಾರ್ಗವ ಹಿಡಿದು ಹೋಗಬ್ಯಾಡಾ 
ನಿನ್ನ ಸತಿಸುತರಾಮೋಹಕ್ಕೊಳಗಾಗಬ್ಯಾಡಾ    ।।೩।।

Labels: ಕೆಡಬ್ಯಾಡಲೋ ಪ್ರಾಣಿ, Kedabyadalo Prani, ಹನುಮೇಶ ವಿಠಲ, Ranga Hanumesha Vithala

ಡಂಬಕದ ಭಕುತಿಯನು ಬಿಡು : Dhambada Bhakutiyanu Bidu

ಡಂಬಕದ ಭಕುತಿಯನು ಬಿಡು 

ಕೀರ್ತನಕಾರರು : ಮೋಹನದಾಸರು
ರಾಗ : ಕಾಂಬೋದಿ 

ತಾಳ : ಝಂಪೆ 

ಡಂಬಕದ ಭಕುತಿಯನು ಬಿಡು ಕಂಡ್ಯ ಮನವೆ 
ಅಂಬುಜಾಕ್ಷನು ಒಲಿಯ ಅನಂತ ಕಾಲಕ್ಕು          ।।ಪ।।

ಬಹಿರ ಅಂಗಡಿ ಹೂಡಿ ಜನರ ವಂಚಿಸಿದರೆ
ಐಹಿಕ ಫಲವಲ್ಲದೆ ಮೋಕ್ಷವುಂಟೆ?
ವಿಹಿತಾವಿಹತವ ತಿಳಿದು ಸತ್ಕರ್ಮ ಕಿಂಚಿತು ಮಾಡೆ 
ದಹಿಸುವುದು ಅಘರಾಶಿ ಅಹಿಶಾಯಿ ಒಲಿವ          ।।೧।।

ವರ ವೈಷ್ಣವರು ಬಂದು ನಿಲಲು ವಂದಿಸದಲೆ 
ಹರಿ ಪೂಜೆ ಮಾಳ್ವೆನೆಂದು ಕುಳಿತುಕೊಂಬೆ 
ಅರಿಯದ ಊರೊಳಗೆ ಅಗಸರ ಮಾಳಿಯೇ 
ಹಿರಿಯ ಮುತ್ತೈದೆಯು ಎಂದು ಕರೆಸುವಂತೆ          ।।೨।।

ಜಪವ ಮಾಡುವನೆಂದು ಮುಸಕನಿಟ್ಟು ಕುಳಿತು 
ತಪಿಸುವ ಒಳಗೆ ನೀ ಧನದಾಸೆಯಿಂದ 
ಕುಪಿತ ಬುದ್ಧಿಯ ಬಿಟ್ಟು ಮಹೋನ್ನ ವಿಠ್ಠಲನ 
ಗುಪಿತ ಮಾರ್ಗದಿ ಭಜಿಸಿ ಸುಪಥವನುಸರಿಸೆ        ।।೩।।

Labels: ಡಂಬಕದ ಭಕುತಿಯನು ಬಿಡು, Dhambada Bhakutiyanu Bidu, ಮೋಹನದಾಸರು, Mohanadasaru

ಅಂಬಾತನಯ ಹೇರಂಬ : Ambatanaya Heramba

ಅಂಬಾತನಯ ಹೇರಂಬ

ಕೀರ್ತನಕಾರರು : ಜಗನ್ನಾಥದಾಸರು
ರಾಗ : ಕಾಚ್
ತಾಳ : ಆದಿ


ಅಂಬಾತನಯ ಹೇರಂಬ 
ಕರುಣಾಂಬುಧೆ ತವ ಚರಣಾಂಬುಜಕೆರಗುವೆ           ।।ಪ।।

ದಶನ ಮೋದಕ ಪಾಶಾಂಕುಶ ಪಾಣಿ 
ಅಸಮ ಚಾರುದೇಷ್ಣ ಕುಸುಮನಾಭನ ಪುತ್ರ          ।।೧।।

ವೃಂದಾರಕವೃಂದವಂದಿತ ಚರಣಾರ-
ವಿಂದಯುಗಳ ದಯದಿಂದ ನೋಡೆನ್ನ                   ।।೨।।

ಯೂಥಪವದನ ಪ್ರದ್ಯೋತಸನ್ನಿಭ ಜಗ 
ನ್ನಾಥವಿಠಲನ ಸಂಪ್ರೀತಿ ವಿಷಯ                         ।।೩।।

Labels:  ಅಂಬಾತನಯ ಹೇರಂ, Ambatanaya Heramba, ಜಗನ್ನಾಥದಾಸರು, Jagannathadasaru

ಅಂಗಡಿ ಗೋವಿಂದನ್ಹಣ ವಿಂಗಡಿಸಿರೊ : Angadi Govindanhana Vingadisiro

ಅಂಗಡಿ ಗೋವಿಂದನ್ಹಣ ವಿಂಗಡಿಸಿರೊ 

ಕೀರ್ತನಕಾರರು : ನೆಕ್ಕರ ಕೃಷ್ಣದಾಸರು
ರಾಗ : ಕಾಂಬೋದಿ
ತಾಳ : ಆದಿ


ಅಂಗಡಿ ಗೋವಿಂದನ್ಹಣ ವಿಂಗಡಿಸಿರೊ 
ಸಂಗಡಿಕ್ಕ ಬೇಡ ನೀವು ಭಂಗಬಡುವಿರಿ            ।।ಪ।।

ಮುಂಗಡದ ಬಡ್ಡಿಯನು ಮುಂದೆ ಕಳುಹಿಸಿ 
ಅಂಗಡಿ ಗೋವಿಂದನ್ಹಣ ವಿಂಗಡಿಸಿರೊ             ।।ಅ.ಪ।।

ಕೋಲುಗಾರನೊಬ್ಬನಲ್ಲಿ ಹೊರಟನಂತೆ 
ಬೇಳುವ ಶಂಖದ ಧ್ವನಿಯ ತೋರ್ಪನಂತೆ 
ಹೀಲಿಯ ಕುಂಚವು ಕಯ್ಯೊಳಿಪ್ಪುದಂತೆ 
ಮೇಲೆ ಮೂರು ನಾಮವ ಧರಿಸಿ ಬಪ್ಪನಂತೆ         ।।೧।।

ಮೂರುಗಡುಬ ಸುಳ್ಳನಾಡಿ ಮೀರಿ ಹೋಯಿತೀ 
ಸಾರಿ ಬಂದು ದೂತರಿಂಗೆ ಲಂಚ ನಡೆಯದು 
ಭಾರಿಯಿಕ್ಕಿ ಕೈಗೆ ಚಿಪ್ಪಳೇರಿಸುವುದು 
ಸಾರಿ ಕಂಡು ಬದುಕುವರೆ ದಾರಿವೊಳ್ಳೆಯದು        ।।೨।।

ಮೊದಲ ಪತ್ರದ್ಹಣವ ಕೊಟ್ಟು ಬದಲು ಪತ್ರವ 
ಸದರ ಬಡ್ಡಿಯಿಂದ ಬರೆದು ಚದುರತನದಲಿ 
ಇದಿರು ಬಿದ್ದು ಕೈಯ ಮುಗಿದುವೊದಗಿನಿಂದಲೆ 
ಗದರಬೇಡ ಬನ್ನಿ ಚಿನ್ನವರದನಲ್ಲಿಗೆ                   ।।೩।।

ದುಡ್ಡು ಕೊಟ್ಟು ಮಡ್ಡಿಯನ್ನು ತೆಗೆದು ಉಂಬೆವು
ಅಡ್ಡಕೊಂಡು ಅತಿರಸವ ತೆಗೆದುಕೊಂಬೆವು 
ದೊಡ್ಡ ದೋಸೆ ವ್ಯವಹಾರವ ಮಾಡಿಕೊಂಬೆವು 
ಕಡ್ಡಾಯದ ಸರಕನೆಲ್ಲ ಕಂಡು ಬಿಡುವೆವು            ।।೪।।

ಗಂಧಿಕಾರನಂಗಡಿ ಗೋವಿಂದನಲ್ಲಿ 
ಚಂದದ ಔಷಧವನ್ನು ತಿಂಬೆವಲ್ಲಿ 
ಬಂದ ಭವದ ರೋಗ ಕೊಂದೆವಲ್ಲಿ ಆತ 
ಮಿಂದ ತೀರ್ಥವನ್ನು ಊರಿಗೆಂದೆವಲ್ಲಿ                ।।೫।।

ಸಾಲವನ್ನು ತಿದ್ದಿ ಮುದದ ಸಾಲವನ್ನು 
ನಾಲಿಗೆಯ ಪತ್ರದಿಂದ ತಂದೆವಿನ್ನು 
ನಿಲ್ದ ಮಣಿಯನೊಂದ ಕದ್ದುದನ್ನು 
ಆಲಿಯೊಳಗಿಟ್ಟುಕೊಂದು ಬಂದುದನ್ನು               ।।೬।।

ಅಂಗಡಿ ಗೋವಿಂದ ಬಹಳ ಅಂಗವುಳ್ಳವ 
ಮಂಗಳವ ಮಾರುವಲ್ಲಿ ಶೃಂಗಾರವುಳ್ಳವ 
ಬಂಗಾರ ವ್ಯಾಪಾರದಲ್ಲಿ ತುಂಗ ವಿಕ್ರಮ 
ಮುಂಗುಡಿಯ ಅಂತರಂಗ ಕೊಡುವವ             ।।೭।।

ದಾಸರಿಗೆ ಧರ್ಮವನ್ನು ಕೊಡುವವನಲ್ಲದೆ 
ಕಾಸು ಹೊರತು ಮೀಸಲನ್ನು ನೀಡಲರಿಯನು 
ಶೇಷಗಿರಿವಾಸನೆಂದು ಹಾಸಿಕೊಂಬನು 
ಬೇಸರನ್ನು ಕಂಡು ಸಂತೋಷವೀವನು             ।।೮।।

ಸ್ವಾಮಿಯೆಂಬ ತೀರ್ಥದೊಳಗೆ ಮಿಂದೆವಲ್ಲಿ 
ಭೂಮಿ ವರಾಹ ತಿಮ್ಮಪ್ಪನ ಧ್ಯಾನದಿಂದಲಿ 
ಕಾಮಿತ ವ್ಯಾಪಾರವನ್ನು ತಂದೆವಿಲ್ಲಿ
ಆ ಮಹಾಚಂದ್ರಾರ್ಕವಾಗಿ ಬಾಳುವಲ್ಲಿ              ।।೯।।

Labels: ಅಂಗಡಿ ಗೋವಿಂದನ್ಹಣ ವಿಂಗಡಿಸಿರೊ, Angadi Govindanhana Vingadisiro, ನೆಕ್ಕರ ಕೃಷ್ಣದಾಸರು, Nekkara Krishnadasaru

ಮಂಗಳವಾರ, ಜುಲೈ 23, 2013

ಹಣ್ಣು ಬಂದಿದೆ ಕೊಳ್ಳಿರಿ : Hannu Bandide Kolliri

ಹಣ್ಣು ಬಂದಿದೆ ಕೊಳ್ಳಿರಿ

ಕೀರ್ತನಕಾರರು : ಪುರಂದರದಾಸರು
ರಾಗ : ಹಿಂದೋಳ
ತಾಳ : ರೂಪಕ

ಹಣ್ಣು ಬಂದಿದೆ ಕೊಳ್ಳಿರಿ ನೀವೀಗ
ಚೆನ್ನಬಾಲಕೃಷ್ಣನೆಂಬೊ ಚೆನ್ನಾದ ಬಾಳೆಯಹಣ್ಣು        ||ಪ||

ಹವ್ಯಕವ್ಯದ ಹಣ್ಣು ಸವಿವ ಸಕ್ಕರೆಹಣ್ಣು
ಭವರೋಗಗಳನೆಲ್ಲ ಕಳೆವ ಹಣ್ಣು
ನವನೀತ ಚೋರನೆಂಬ ಯಮನ ಅಂಜಿಪ ಹಣ್ಣು
ಅವನಿಯೊಳು ಶ್ರೀರಾಮನೆಂಬೊ ಹಣ್ಣು                 ||೧||

ಕೊಳೆತು ಹೋಗುವುದಲ್ಲ ಹುಳಿತು ಹೋಗುವುದಲ್ಲ
ಕಳೆದು ಬಿಸಾಡಿಸಿ ಕೊಳ್ಳುವುದಲ್ಲ
ಅಳೆದು ಕೊಂಬುವುದಲ್ಲ ಗಿಳಿ ಕಚ್ಚಿ ತಿಂಬೊದಲ್ಲ
ಒಳಿತಾದ ಹರಿಯೆಂಬೊ ಮಾವಿನಹಣ್ಣು                ||೨||

ಕೆಟ್ಟು ನಾರುವುದಲ್ಲ ಬಿತ್ತಿ ಬೆಳೆಯೋದಲ್ಲ
ಕಷ್ಟದಿ ಹಣಕೊಟ್ಟು ಕೊಂಬುವುದಲ್ಲ
ಸೃಷ್ಟಿಯೊಳಗೆ ನಮ್ಮ ಪುರಂದರವಿಠಲ
ಕೃಷ್ಣರಾಯನೆಂಬೊ ಶ್ರೇಷ್ಠವಾದ ಹಣ್ಣು                ||೩||


Labels: ಹಣ್ಣು ಬಂದಿದೆ ಕೊಳ್ಳಿರಿ, Hannu Bandide Kolliri, ಪುರಂದರದಾಸರು, Purandaradasaru

ಇಟ್ಹಾಂಗೆ ಇರುವೆನೋ ಹರಿಯೇ : Ithange Iruveno Hariye

ಇಟ್ಹಾಂಗೆ ಇರುವೆನೋ ಹರಿಯೇ

ಕೀರ್ತನಕಾರರು : ಶ್ರೀಪಾದರಾಜರು
ರಾಗ : ಸಾವೇರಿ
ತಾಳ : ಆದಿ

ಇಟ್ಹಾಂಗೆ ಇರುವೆನೋ ಹರಿಯೇ                    ||ಪ||
ಸೃಷ್ಟಿವಂದಿತ ಪಾದಪದುಮ ಶ್ರೀಹರಿಯೇ            ||ಅ.ಪ||

ಸಣ್ಣ ಶಾಲ್ಯೋದನ ಬೆಣ್ಣೆ ಕಾಸಿದ ತುಪ್ಪ
ಚಿನ್ನದ ಹರಿವಾಣದಲ್ಲಿ ಭೋಜನ
ಘನ್ನಮಹಿಮ ನಿನ್ನ ಕರುಣ ತಪ್ಪಿದ ಮ್ಯಾಲೆ ಕ
ದನ್ನ ಕಾಣದೆ ಬಾಯ್ಬಿಡಿಸುವಿ ಹರಿಯೇ                ||೧||

ಕೆಂಪಿಲಿ ಪೊಳೆವ ಪೀತಾಂಬರ ಉಡಿಸುವಿ
ಸೊಂಪಿನಂಚಿನ ಶಾಲು ಹೊದಿಸುವಿಯೋ
ಕಪಿಲಹರೇ ನಿನ್ನ ಕೃಪೆಯು ತಪ್ಪಿದ ಮ್ಯಾಲೆ
ಕಪರ್ದಕ ಕೌಪೀನವು ದೊರೆಯದೊ ಹರಿಯೇ        ||೨||

ಚಂದ್ರಶಾಲೆಲಿ ಚಂದ್ರಕಿರಣದಂತೊಪ್ಪುವ
ಚಂದದ ಮಂಚದೊಳ್ಮಲಗಿಸುವಿ
ಮಂದರೋದ್ಧರ ನಿನ್ನ ಮಮತೆ ತಪ್ಪಲು ಧರ್ಮ
ಮಂದಿರದೊಳು ತೋಳ್ತಲೆಗಿಂಬು ಹರಿಯೇ            ||೩||

ನರಯಾನದೊಳು ಕ್ಷಣ ನರವರನೆನಿಸುವೆ
ವರಛತ್ರ ಚಾಮರ ಹಾಕಿಸುವೆ
ಕರುಣಾನಿಧೇ ನಿನ್ನ ಕರುಣ ತಪ್ಪಿದ ಮ್ಯಾಲೆ
ಚರಣರಕ್ಷೆಯು ದೊರೆಯದು ಶ್ರೀಹರಿಯೇ            ||೪||

ಗಂಗಾಜನಕ ಪಾಂಡುರಂಗ ನಿನ್ನಯ ಭಕ್ತರ
ಸಂಗವಿರಲಿ ದುಷ್ಟ ಸಂಗ ಬ್ಯಾಡ
ಅಂಗನೆಯರ ಕೂಡಿ ಅನಂಗಬಾಣಕೆ ಸಿಲುಕಿ
ಭಂಗವ ಪಡಲಾರೆ ಶ್ರೀರಂಗವಿಠಲ ಹರಿಯೇ        ||೫||


Labels: ಇಟ್ಹಾಂಗೆ ಇರುವೆನೋ ಹರಿಯೇ, Ithange Iruveno Hariye, ಶ್ರೀಪಾದರಾಜರು, Sripadarajaru

ಆವಳಂಜಿಸಿದಳವಳು ಪೇಳು ರಂಗಮ್ಮಾ : Avalanjisidalavalu Pelu Rangamma

ಆವಳಂಜಿಸಿದಳವಳು ಪೇಳು ರಂಗಮ್ಮಾ

ಕೀರ್ತನಕಾರರು : ಪ್ರಸನ್ನ ವೆಂಕಟದಾಸರು
ರಾಗ : ಶ್ರೀ
ತಾಳ : ತ್ರಿಪುಟ

ಆವಳಂಜಿಸಿದಳವಳು ಪೇಳು ರಂಗಮ್ಮಾ ನಾ
ನವಳ ಗಾರುಮಾಡುವೆ ನಡೆ ಕೃಷ್ಣಮ್ಮಾ                ||ಪ||

ದೂರುವಿರ‍್ಯಾದರೆ ಮಗನ ಹಾದಿಗೆ ಹೋಗದಿರಿ ಎಂದು
ಸಾರಿಕೈಯ ಕಡ್ಡಿಕೊಟ್ಟೆ ಜಾರೆಯರಿಗೆ
ಸಾರಿಸಾರಿಗೆನ್ನ ಮನ ರಟ್ಟು ಮಾಡುವ ಮಾತೇನು
ಆರಿಗೆ ಮಕ್ಕಳಿಲ್ಲೆ ನಾನೇ ಹಡದವಳೇನೋ                ||೧||

ಇದ್ದರಿರಲೀ ಕೂಸಿನ ಆಡುವಾಟಕೊಪ್ಪಿದರೆ
ಎದ್ದು ಹೋಗೆಮ್ದರೆ ಹೋಗಲಿಲ್ಲ ಪಳ್ಳಿಂದಾ
ಕದ್ದು ತಿಂದನೆಂಬ ಸುಳ್ಳು ಸುದ್ದಿಗೆ ಕಾರಣವೇನೋ
ಮುದ್ದೆಬೆಣ್ಣೆ ಕೈಯಲಿತ್ತಾರೊಲ್ಲದೆ ಚಲ್ಲುವ ಕಂದಗ        ||೨||

ಏನು ಪುಣ್ಯರಾಶಿ ಕೂಡಿತೆಂದು ನಿನ್ನಾಟವ ನೋಡಿ
ಬೀಸಿ ಬಿಗಿದಪ್ಪುವಂಥ ಭಾಗ್ಯವನುಂಡೆ
ಕೂಸೆ ನಿನ್ನ ಕಂಡಸೂಯಾ ಬಡುವಾರ ಅಳಿಯಲಮ್ಮಾ
ದಾಸರಿಂಗೆ ಲೇಸಾಗಲಿ ಪ್ರಸನ್ನವೆಂಕಟ ಕೃಷ್ಣಾ                ||೩||


Labels: ಆವಳಂಜಿಸಿದಳವಳು ಪೇಳು ರಂಗಮ್ಮಾ, Avalanjisidalavalu Pelu Rangamma, ಪ್ರಸನ್ನ ವೆಂಕಟದಾಸರು, Prasanna Venkatadasaru

ಏನು ಮಾಡಿದರೇನು ಭವ ಹಿಂಗದು : Enu Madidarenu Bhava Hingadu

ಏನು ಮಾಡಿದರೇನು ಭವ ಹಿಂಗದು 

ಕೀರ್ತನಕಾರರು : ಪುರಂದರದಾಸರು 
ರಾಗ : ಮುಖಾರಿ 
ತಾಳ : ಝಂಪೆ 

ಏನು ಮಾಡಿದರೇನು ಭವ ಹಿಂಗದು
ದಾನವಾಂತಕ ನಿನ್ನ ದಯವಾಗದನಕ                      ।।ಪ।।

ಅರುಣೋದಯದಲೆದ್ದು ಅತಿಸ್ನಾನ ಮಾಡಿ 
ಬೆರಳನೆಣಿಸಿದೆ ಅದರ ನಿಜವರಿಯದೆ 
ಚರಣ ಸಾಷ್ಟಾಂಗವನು ಮಾಡಿ ನಾ ದಣಿದೆನೊ 
ಹರಿ ನಿನ್ನ ಕರುಣಾಕಟಾಕ್ಷವಾಗದನಕ                       ।।೧।।

ಶ್ರುತಿಶಾಸ್ತ್ರ ಪುರಾಣಗಳನೋದಿ ಬೆಂಡಾದೆ
ಅತಿಶೀಲಗಳನೆಲ್ಲ ಮಾಡಿ ದಣಿದೆ 
ಗತಿಯ ಪಡೆವೆನೆಂದು ಕಾಯ ದಂಡಿದಿಸಿದೆನೊ 
ರತಿಪತಿಪಿತ ನಿನ್ನ ದಯವಾಗದನಕ                         ।।೨।।

ಧ್ಯಾನವನು ಮಾಡಿದೆನು ಮೌನವನು ತಾಳಿದೆನು 
ನಾನು ಪುರುಷಾರ್ಥಕೆ ಮನವನಿಕ್ಕಿ
ಅನಾಥ ಬಂಧು ಶ್ರೀ ಪುರಂದರವಿಠಲನ 
ಧ್ಯಾನಿಸುವರೊಡಗೂಡಿ ನೆಲೆಗಾಣದನಕ                   ।।೩।।

Labels: ಏನು ಮಾಡಿದರೇನು ಭವ ಹಿಂಗದು, Enu Madidarenu Bhava Hingadu, ಪುರಂದರದಾಸರು, Purandaradasaru

ಆವ ರೋಗವೊ ಎನಗೆ ದೇವ ಧನ್ವಂತ್ರಿ : Ava Rogavo Enage Deva Dhanvantri

ಆವ ರೋಗವೊ ಎನಗೆ ದೇವ ಧನ್ವಂತ್ರಿ 

ಕೀರ್ತನಕಾರರು : ಗೋಪಾಲದಾಸರು 
ರಾಗ : ಕಾನಡ 
ತಾಳ : ಖಂಡಛಾಪು 

ಆವ ರೋಗವೊ ಎನಗೆ ದೇವ ಧನ್ವಂತ್ರಿ 
ಸಾವಧಾನದಿ ಕೈಯ ಪಿಡಿದು ನೀ ನೋಡಯ್ಯ                   ।।ಪ।।

ಹರಿ ಮೂರ್ತಿಗಳು ಕಾಣಿಸವು ಎನ್ನ ಕಂಗಳಿಗೆ 
ಹರಿಯ ಕೀರ್ತನೆಯು ಕೇಳಿಸದೆನ್ನ ಕಿವಿಗೆ 
ಹರಿ ಮಂತ್ರಸ್ತೋತ್ರ ಬಾರದು ಎನ್ನ ನಾಲಿಗ್ಗೆ 
ಹರಿಪ್ರಸಾದವು ಜಿಹ್ವೆಗೆ ಸವಿಯಾಗದಯ್ಯ                        ।।೧।।

ಹರಿಪಾದ ಸೇವೆಗೆನ್ನ ಹಸ್ತಗಳು ಚಲಿಸವು 
ಗುರುಹಿರಿಯರಂಘ್ರಿಗೆ ಶಿರ ಬಾಗದು 
ಹರಿಯ ನಿರ್ಮಾಲ್ಯವಾಘ್ರಾಣಿಸದು ನಾಸಿಕವು 
ಹರಿಯಾತ್ರೆಗಳಿಗೆನ್ನ ಕಾಲೇಳದಯ್ಯ                                ।।೨।।

ಅನಾಥಬಂಧು ಗೋಪಾಲವಿಠಲರೇಯ 
ಎನ್ನಭಾಗದ ವೈದ್ಯ ನೀನೆಯಾದೆ 
ಅನಾದಿಕಾಲದ ಭವರೋಗ ಕಳೆಯಯ್ಯ 
ನಾನೆಂದಿಗು ಮರೆಯೆ ನೀ ಮಾಡಿದುಪಕಾರ                     ।।೩।।

Labels: ಆವ ರೋಗವೊ ಎನಗೆ ದೇವ ಧನ್ವಂತ್ರಿ, Ava Rogavo Enage Deva Dhanvantri
, ಗೋಪಾಲ ದಾಸರು, Gopaladasaru

ದಯಮಾಡು ದಯಮಾಡು ಎನ್ನ ಮೇಲೆ : Dayamadu Dayamadu Enna Mele

ದಯಮಾಡು ದಯಮಾಡು ಎನ್ನ ಮೇಲೆ

ಕೀರ್ತನಕಾರರು : ವಿಜಯದಾಸರು 
ರಾಗ : ಪಾಡಿ 
ತಾಳ : ಝಂಪೆ 

ದಯಮಾಡು ದಯಮಾಡು ಎನ್ನ ಮೇಲೆ 
ಅಂತರಂಗದೊಳಿಪ್ಪ ಅಚ್ಯುತ ಮೂರ್ತಿ                     ।।ಪ।।

ಗಂಧ ಪರಿಮಳ ಕುಸುಮ ಜಾತಿ ಮಲ್ಲಿಗೆ ಮಾಲೆ 
ಮಂದಾರ ಹಾರ ಕೊರಳೊಳಿಡಲೂ 
ಚಂದವಿಲ್ಲವೆಂದು ತೆಗೆದು ಬಿಸಾಟಿ ಊರ 
ಹಂದಿಯಂದದಿ ಇಲ್ಲಿ ಇಪ್ಪ ನರಗೆ                            ।।೧।।

ಹೆತ್ತತುಪ್ಪ ಸಣ್ಣಶಾವಿಗೆ ಪರಮಾನ್ನ 
ಹೆತ್ತತಾಯಿ ತಂದು ಉಣ್ಣಬಡಿಸಲು 
ಅತ್ತ ಮೊಗವಗಚಿ ತೊಟ್ಟು ಉಣಬಡಿಸಿದ 
ಹೊತ್ತು ಓಗರ ತಿಂದು ಇಪ್ಪೆನೆಂಬ ನರಗೆ                  ।।೨।।

ತುಂಬಿದ ಹೊಳೆಯಲ್ಲಿ ಹರಿಗೋಲಿಟ್ಟುಕೊಂಡು 
ಅಂಬಿಗ ತಡೆಯದೆ ದಾಟಿಸಲು 
ಅಂಬುವಾಸನೆ ನೋಡಿ ದಾಟಿ ಪೋಗುವೆನೆಂ 
ದೆಂಬ ಮಾನವನಾದೆ ವಿಜಯವಿಠ್ಠಲ ಕರುಣೀ            ।।೩।।

Labels: ದಯಮಾಡು ದಯಮಾಡು ಎನ್ನ ಮೇಲೆ, Dayamadu Dayamadu Enna Mele, ವಿಜಯದಾಸರು, Vijayadasaru

ಯಾಕೆ ಮೂಕನಾದ್ಯೋ : Yake Mookanadyo

ಯಾಕೆ ಮೂಕನಾದ್ಯೋ

ಕೀರ್ತನಕಾರರು : ಜಗನ್ನಾಥದಾಸರು
ರಾಗ : ಪೂರ್ವಿಕಲ್ಯಾಣಿ 
ತಾಳ : ಮಠ್ಯ

ಯಾಕೆ ಮೂಕನಾದ್ಯೋ ಗುರುವೇ ನೀ
ನ್ಯಾಕೆ ಮೂಕನಾದ್ಯೋ                            ।।ಪ।।

ಲೋಕಪಾಲಕ ಎನ್ನ ಸಾಕುವರ್ಯಾರಯ್ಯ
ಶ್ರೀಕರ ರಾಘವೇಂದ್ರ                                  ।।ಅ.ಪ।।

ಹಿಂದಕ್ಕೆ ನೀ ಎನ್ನ ಮುಂದೆ ಸುಳಿದಾಡಿದೆ
ಮಂದಿಯೊಳಗೆನ್ನ ಮಂದನ್ನ ಮಾಡಿದ್ಯೂ          ।।೧।।

ಬೇಕಾಗದಿದ್ದರಿನ್ಯಾಕೆ ಕೈಯನು ಪಿಡಿದೆ
ಕಾಕುಜನರೊಳೆನ್ನ ನೂಕಿಬಿಟ್ಟು ನೀನು              ।।೨।।

ಹೀಂಗೆ ಪಾಲಿಸಿದರೆ ಯೋಗಿಕುಲವರ್ಯ ರಾಗ
ವೇಂದ್ರನೆ ಭವ ಸಾಗುವದ್ಹ್ಯಾಂಗಯ್ಯ                 ।।೩।।

ನಿನ್ನಂಥ ಕರುಣಿಲ್ಲ ಎನ್ನಂಥ ಕೃಪಣಿಲ್ಲ
ಘನ್ನಮಹಿಮ ನೀ ಎನ್ನನು ಬಿಟ್ಟೀಗ                     ।।೪।।

ಜನನಿಯು ನೀ ಎನ್ನ ಜನಕನಯ್ಯ
ಮನ್ನಿಸೊ ನೀ ನಿತ್ಯಾನನ್ಯ ಶರಣನೆ                    ।।೫।।

ಎಂದಿಗಾದರು ನಿನ್ನ ಪೊಂದಿಕೊಂಡವನೆಲೊ
ಇಂದು ನೀ ಕೈಬಿಟ್ಟರೆನ್ನ ಮುಂದೆ ಕಾಯುವರ್ಯಾರೊ       ।।೬।।

ನಾಥನು ನೀ ಅನಾಥನು ನಾನಯ್ಯ
ಪಾತಕರರಿ ಜಗನ್ನಾಥವಿಠಲದೂತ                    ।।೭।।

Labels:  ಯಾಕೆ ಮೂಕನಾದ್ಯೋ, Yake Mookanadyo, ಜಗನ್ನಾಥದಾಸರು, Jagannathadasaru





ಡೊಂಕು ಬಾಲದ ನಾಯಕರೆ : Donku Balada Nayakare

ಡೊಂಕು ಬಾಲದ ನಾಯಕರೆ

ಕೀರ್ತನಕಾರರು : ಪುರಂದರದಾಸರು 
ರಾಗ : ನವರೋಜು
ತಾಳ : ಆದಿ

ಡೊಂಕು ಬಾಲದ ನಾಯಕರೆ ನೀವೇನೂಟವ ಮಾಡಿದಿರಿ              ।।ಪ।।


ಕಣಕ ಕುಟ್ಟೋ ಅಲ್ಲಿಗೆ ಹೋಗಿ
ಹಣಿಕಿ ಇಣಿಕಿ ನೋಡುವಿರಿ
ಕಣಕ ಕುಟ್ಟೋ ಒನಕೆಲಿ ಬಡಿದರೆ
ಕುಂಯಿ ಕುಂಯಿ ರಾಗವ ಹಾಡುವಿರಿ                     ।।೧।।

ಹುಗ್ಗಿ ಮಾಡೋ ಅಲ್ಲಿಗೆ ಹೋಗಿ
ತಗ್ಗಿ ಬಗ್ಗಿ ನೋಡುವಿರಿ
ಹುಗ್ಗಿ ಮಾಡೋ ಸೌಟಲಿ ಬಡಿದರೆ
ಕುಂಯಿ ಕುಂಯಿ ರಾಗವ ಮಾಡುವಿರಿ                     ।।೨।।

ಹಿರೇ ಬೀದಿಯಲಿ ಓಡುವಿರಿ
ಕರೇ ಬೂದಿಯಲಿ ಹೊರಳುವಿರಿ
ಪುರಂದರವಿಠ್ಠಲರಾಯನ ಈ ಪರಿ
ಮರೆತು ಸದಾ ನೀವು ಚರಿಸುವಿರಿ                           ।।೩।।

Labels: ಡೊಂಕು ಬಾಲದ ನಾಯಕರೆ, Donku Balada Nayakare, ಪುರಂದರದಾಸರು, Purandaradasaru

ಡಂಗುರವ ಸಾರಿ ಹರಿಯ ಡಿಂಗರಿಗರೆಲ್ಲರು : Dangurava Saari Hariya Dingarigarellaru

ಡಂಗುರವ ಸಾರಿ ಹರಿಯ ಡಿಂಗರಿಗರೆಲ್ಲರು 

ಕೀರ್ತನಕಾರರು : ಪುರಂದರದಾಸರು 
ರಾಗ : ಪೂರ್ವಿ 
ತಾಳ : ಆದಿ

ಡಂಗುರವ ಸಾರಿ ಹರಿಯ ಡಿಂಗರಿಗರೆಲ್ಲರು ಭೂ
ಮಂಡಲಕ್ಕೆ ಪಾಂಡುರಂಗವಿಠಲನೆ ಪರದೈವವೆಂದು            ।।ಪ।।

ಹರಿಯು ಮುಡಿದ ಹೂವು ಹರಿವಾಣದೊಳಗಿಟ್ಟುಕೊಂಡು 
ಹರುಷದಿಂದ ಹಾಡಿ ಪಾಡಿ ಕುಣಿದು ಚಪ್ಪಾಳಿಕ್ಕುತ                 ।।೧।।

ಒಡಲ ಜಾಗಟೆಯ ಮಾಡಿ ನುಡಿವ ನಾಲಿಗೆಯ ಪಿಡಿದು 
ಢಂಢಂ ಢಣಾ ಢಣಾರೆಂದು ಹೊಡೆದು ಚಪ್ಪಾಳಿಕ್ಕುತ               ।।೨।।

ಇಂತು ಜಗಕೆಲ್ಲ ಲಕ್ಷ್ಮೀಕಾಂತನಲ್ಲದಿಲ್ಲವೆಂದು 
ಸಂತತ ಶ್ರೀ ಪುರಂದರವಿಠಲ ಪರದೈವವೆಂದು                     ।।೩।।

Labels: ಡಂಗುರವ ಸಾರಿ ಹರಿಯ ಡಿಂಗರಿಗರೆಲ್ಲರು, Dangurava Saari Hariya Dingarigarellaru, ಪುರಂದರದಾಸರು, Purandaradasaru

ಅರಿತುಕೊಳ್ಳಿರೊ ಬ್ಯಾಗ : Aritukolliro Byaga

ಅರಿತುಕೊಳ್ಳಿರೊ ಬ್ಯಾಗ 

ಕೀರ್ತನಕಾರರು : ಕಾಖಂಡಕಿ ಕೃಷ್ಣರಾಯರು 
ರಾಗ : ಕಾಪಿ 
ತಾಳ : ತೀನ್ ತಾಲ 

ಅರಿತುಕೊಳ್ಳಿರೊ ಬ್ಯಾಗ ಹರಿಯ ನಾಮಾಮೃತ 
ದೊರಕುವುದಲ್ಲಿದು ನೋಡಿ ಸರ್ಕನೆ ಸರ್ವರಿಗೆಲ್ಲಾ           ।।ಪ।।

ಗುರುಕರುಣ ಕೃಪೆಯಿಂದ ಪರಮ ದಿವ್ಯಾಮೃತವು 
ಸುರಿಸುರಿದು ಚಪ್ಪರಿದು ಸೂರ್ಯಾಡಿ ಸಾರಸವ              ।।೧।।

ಅನುದಿನ ಸೇವಿಸುವ ಅನುಭವಿಗಳೂಟ 
ಏನೆಂದುಸುರಲಿ ನಾ ಆನಂದೋಬ್ರಹ್ಮವ                       ।।೨।।

ಎಂದಿಗೆ ಬಾಹುದು ನೋಡಿ ಸಂದಿಸಿ ಮಾನವಜನ್ಮ 
ಚಂದಮಾಡಿಕೊಳ್ಳಿರೋ ಬಂದ ಕೈಯಲಿ ಬೇಗ                 ।।೩।।

ಆಲಸ್ಯ ಮಾಡಬ್ಯಾಡಿ ವಾಲ್ಗೈಸಿಕೊಳ್ಳಲಿಕ್ಕೆ 
ಸುಲಲಿತವಾಗಿಹುದು ತಿಳಿದು ಕೊಂಬವರಿಗೆ                    ।।೪।।

ಇರುಳ್ಹಗಲ ಪೂರ್ಣ ಸುರವುತಿಹ ಅಮೃತ 
ತರಳ ಮಹಿಪತಿ ಪ್ರಾಣ ಹೊರೆವ ಸಂಜೀವನ                   ।।೫।।

Labels: ಅರಿತುಕೊಳ್ಳಿರೊ ಬ್ಯಾಗ, Aritukolliro Byaga, ಕಾಖಂಡಕಿ ಕೃಷ್ಣರಾಯರು,  Kakhandaki Krishnarayaru