ಬುಧವಾರ, ಜುಲೈ 24, 2013

ಅಂಗಡಿ ಗೋವಿಂದನ್ಹಣ ವಿಂಗಡಿಸಿರೊ : Angadi Govindanhana Vingadisiro

ಅಂಗಡಿ ಗೋವಿಂದನ್ಹಣ ವಿಂಗಡಿಸಿರೊ 

ಕೀರ್ತನಕಾರರು : ನೆಕ್ಕರ ಕೃಷ್ಣದಾಸರು
ರಾಗ : ಕಾಂಬೋದಿ
ತಾಳ : ಆದಿ


ಅಂಗಡಿ ಗೋವಿಂದನ್ಹಣ ವಿಂಗಡಿಸಿರೊ 
ಸಂಗಡಿಕ್ಕ ಬೇಡ ನೀವು ಭಂಗಬಡುವಿರಿ            ।।ಪ।।

ಮುಂಗಡದ ಬಡ್ಡಿಯನು ಮುಂದೆ ಕಳುಹಿಸಿ 
ಅಂಗಡಿ ಗೋವಿಂದನ್ಹಣ ವಿಂಗಡಿಸಿರೊ             ।।ಅ.ಪ।।

ಕೋಲುಗಾರನೊಬ್ಬನಲ್ಲಿ ಹೊರಟನಂತೆ 
ಬೇಳುವ ಶಂಖದ ಧ್ವನಿಯ ತೋರ್ಪನಂತೆ 
ಹೀಲಿಯ ಕುಂಚವು ಕಯ್ಯೊಳಿಪ್ಪುದಂತೆ 
ಮೇಲೆ ಮೂರು ನಾಮವ ಧರಿಸಿ ಬಪ್ಪನಂತೆ         ।।೧।।

ಮೂರುಗಡುಬ ಸುಳ್ಳನಾಡಿ ಮೀರಿ ಹೋಯಿತೀ 
ಸಾರಿ ಬಂದು ದೂತರಿಂಗೆ ಲಂಚ ನಡೆಯದು 
ಭಾರಿಯಿಕ್ಕಿ ಕೈಗೆ ಚಿಪ್ಪಳೇರಿಸುವುದು 
ಸಾರಿ ಕಂಡು ಬದುಕುವರೆ ದಾರಿವೊಳ್ಳೆಯದು        ।।೨।।

ಮೊದಲ ಪತ್ರದ್ಹಣವ ಕೊಟ್ಟು ಬದಲು ಪತ್ರವ 
ಸದರ ಬಡ್ಡಿಯಿಂದ ಬರೆದು ಚದುರತನದಲಿ 
ಇದಿರು ಬಿದ್ದು ಕೈಯ ಮುಗಿದುವೊದಗಿನಿಂದಲೆ 
ಗದರಬೇಡ ಬನ್ನಿ ಚಿನ್ನವರದನಲ್ಲಿಗೆ                   ।।೩।।

ದುಡ್ಡು ಕೊಟ್ಟು ಮಡ್ಡಿಯನ್ನು ತೆಗೆದು ಉಂಬೆವು
ಅಡ್ಡಕೊಂಡು ಅತಿರಸವ ತೆಗೆದುಕೊಂಬೆವು 
ದೊಡ್ಡ ದೋಸೆ ವ್ಯವಹಾರವ ಮಾಡಿಕೊಂಬೆವು 
ಕಡ್ಡಾಯದ ಸರಕನೆಲ್ಲ ಕಂಡು ಬಿಡುವೆವು            ।।೪।।

ಗಂಧಿಕಾರನಂಗಡಿ ಗೋವಿಂದನಲ್ಲಿ 
ಚಂದದ ಔಷಧವನ್ನು ತಿಂಬೆವಲ್ಲಿ 
ಬಂದ ಭವದ ರೋಗ ಕೊಂದೆವಲ್ಲಿ ಆತ 
ಮಿಂದ ತೀರ್ಥವನ್ನು ಊರಿಗೆಂದೆವಲ್ಲಿ                ।।೫।।

ಸಾಲವನ್ನು ತಿದ್ದಿ ಮುದದ ಸಾಲವನ್ನು 
ನಾಲಿಗೆಯ ಪತ್ರದಿಂದ ತಂದೆವಿನ್ನು 
ನಿಲ್ದ ಮಣಿಯನೊಂದ ಕದ್ದುದನ್ನು 
ಆಲಿಯೊಳಗಿಟ್ಟುಕೊಂದು ಬಂದುದನ್ನು               ।।೬।।

ಅಂಗಡಿ ಗೋವಿಂದ ಬಹಳ ಅಂಗವುಳ್ಳವ 
ಮಂಗಳವ ಮಾರುವಲ್ಲಿ ಶೃಂಗಾರವುಳ್ಳವ 
ಬಂಗಾರ ವ್ಯಾಪಾರದಲ್ಲಿ ತುಂಗ ವಿಕ್ರಮ 
ಮುಂಗುಡಿಯ ಅಂತರಂಗ ಕೊಡುವವ             ।।೭।।

ದಾಸರಿಗೆ ಧರ್ಮವನ್ನು ಕೊಡುವವನಲ್ಲದೆ 
ಕಾಸು ಹೊರತು ಮೀಸಲನ್ನು ನೀಡಲರಿಯನು 
ಶೇಷಗಿರಿವಾಸನೆಂದು ಹಾಸಿಕೊಂಬನು 
ಬೇಸರನ್ನು ಕಂಡು ಸಂತೋಷವೀವನು             ।।೮।।

ಸ್ವಾಮಿಯೆಂಬ ತೀರ್ಥದೊಳಗೆ ಮಿಂದೆವಲ್ಲಿ 
ಭೂಮಿ ವರಾಹ ತಿಮ್ಮಪ್ಪನ ಧ್ಯಾನದಿಂದಲಿ 
ಕಾಮಿತ ವ್ಯಾಪಾರವನ್ನು ತಂದೆವಿಲ್ಲಿ
ಆ ಮಹಾಚಂದ್ರಾರ್ಕವಾಗಿ ಬಾಳುವಲ್ಲಿ              ।।೯।।

Labels: ಅಂಗಡಿ ಗೋವಿಂದನ್ಹಣ ವಿಂಗಡಿಸಿರೊ, Angadi Govindanhana Vingadisiro, ನೆಕ್ಕರ ಕೃಷ್ಣದಾಸರು, Nekkara Krishnadasaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ