ಶುಕ್ರವಾರ, ಸೆಪ್ಟೆಂಬರ್ 13, 2013

ಹೆತ್ತ ತಾಯಿಗಿಂತ ಅತ್ಯಧಿಕ ಮಾಯವುಂಟೆ : Hetta Tayiginta Atyadhika Mayavunte

ಹೆತ್ತ ತಾಯಿಗಿಂತ ಅತ್ಯಧಿಕ ಮಾಯವುಂಟೆ

ಕೀರ್ತನಕಾರರು : ಕನಕದಾಸರು 
ರಾಗ : ಮೋಹನ 
ತಾಳ : ಅಟ 

ಹೆತ್ತ ತಾಯಿಗಿಂತ ಅತ್ಯಧಿಕ ಮಾಯವುಂಟೆ 
ಉತ್ತಮ ಅಶ್ವವ ಕತ್ತೆ ಹೋಲುವುದುಂಟೆ               ।।ಪ॥ 

ವಿತ್ತವುಳ್ಳವನ ಕುಲ ಎಣಿಸುವುದುಂಟೆ 
ಸ್ವಾರ್ಥಕೆ ನ್ಯಾಯ ಎಂದಾದರೂ ಉಂಟೆ              ।।೧।।

ಅತ್ತೆಮನೆ ಸೇರುವಗೆ ಅಭಿಮಾನವುಂಟೆ 
ಬತ್ತಲೆ ತಿರುಗುವಗೆ ಭಯವು ಇನ್ನುಂಟೆ                ।।೨।।

ಪೃಥ್ವಿಯೊಳಗೆ ಕಾಗಿನೆಲೆಯಾದಿ ಕೇಶವಗೆ 
ಮರ್ತ್ಯದೊಳನ್ಯ ದೇವರು ಸರಿಯುಂಟೆ                ।।೩।।

Labels: ಹೆತ್ತ ತಾಯಿಗಿಂತ ಅತ್ಯಧಿಕ ಮಾಯವುಂಟೆ, Hetta Tayiginta Atyadhika Mayavunte, ಕನಕದಾಸರು

ಆಪ್ತ ಮಾತಿದು ನಿಜ ಪ್ರಾಪ್ತ ಜನಕೆ : Apta Matidu Nija Prapta Janake

ಆಪ್ತ ಮಾತಿದು ನಿಜ ಪ್ರಾಪ್ತ ಜನಕೆ

ಕೀರ್ತನಕಾರರು : ಗೋಪಾಲದಾಸರು
ರಾಗ : ರೀತಿ ಗೌಳ
ತಾಳ : ಆದಿ


ಆಪ್ತ ಮಾತಿದು ನಿಜ ಪ್ರಾಪ್ತ ಜನಕೆ 
ಕುಪಿತರಾದರೆ ಕೇಳೆ ಅಪ್ರಾಪ್ತರು                          ।।ಪ॥ 

ಹರಿಯ ಪೂಜಿಸಿ ನೆಚ್ಚಿ ಪರಿವಾರ ಬಿಟ್ಟರೆ 
ನಿರಯವೇ ಪ್ರಾಪ್ತಿ ಸಂದೇಹವಿಲ್ಲ 
ಹಿರಿದು ಹರಿಗೋಲ ನಂಬಿ ಕಿರಿದ್ಹುಟ್ಟುಗಳ ಬಿಡಲು 
ಭರದಿ ಹೊಳೆದಾಟಿ ತಾ ದಾರಿಯ ಸೇರುವನೆ          ।।೧।।

ಕೃಷ್ಣನಲ್ಲಿ ದ್ವೇಷ ನಾರಾಯಣನಲ್ಲಿ ಭಕುತಿ 
ಎಷ್ಟು ಮಾಡಿದರು ಗತಿಪೊಂದುವನೆ 
ಸಿಟ್ಟಿನಲ್ಲಿ ಸರ್ಪನ ತುಟಿ ತುದಿಯ ಚಿವುಟಿದರೆ 
ಎಷ್ಟು ಸುಖ ಐದುವನು ನಷ್ಟವಿಲ್ಲದೆ                       ।।೨।।

ಹರಿಯಲ್ಲಿ ದ್ವೇಷ ಹರನಲ್ಲಿ ಭಕುತಿ ಮಾಡಿದರೆ 
ಪರಮಪದ ದೊರಕುವುದೆ ಮರುಳನಲ್ಲದೆ 
ಶರಧಿ ಆಶ್ರಯಿಸಿದ್ದ ಮಚ್ಚನ ಬಲಮಾಡಿ 
ಶರಧಿಯನು ದೂಷಿಸಲು ಹರುಷಬಡುವುದೆ             ।।೩।।

ಹರನ ದ್ವೇಷವ ಮಾಡಿ ಪೂಜೆಯ ಮಾಡೆ 
ಪರಮಗತಿಯಾಗುವುದೆ ಪತಿತನಿಗೆ 
ಹರವಿಯಿಲ್ಲದ ಪಾಕ ಕರವಿಟ್ಟು ಕಲಸಿದರೆ 
ವರ ಭೋಜನವು ಅವಗೆ ಒದಗಿ ಆಗುವುದೆ              ।।೪।।

ದೇವನಿಗೆ ಕರ್ತೃತ್ವ ಉಂಟು ಎಂದವ ಗೆದ್ದ 
ದೇವನಲ್ಲದೆ ಜೀವನೆನಲು ಬಿದ್ದ 
ಪಾವನ್ನಮೂರುತಿ ಗೋಪಾಲವಿಠಲನಂಘ್ರಿ
ಸೇವಕಗೇನು ಗತಿ ಅದವರಿಗೆ ಆಗಲಿ                     ।।೫।।

Labels: ಆಪ್ತ ಮಾತಿದು ನಿಜ ಪ್ರಾಪ್ತ ಜನಕೆ, Apta Matidu Nija Prapta Janake, ಗೋಪಾಲದಾಸರು, Gopaladasaru

ರಂಗ ನಮ್ಮನೆಗೆ ಬಂದ : Ranga Nammanege Banda

ರಂಗ ನಮ್ಮನೆಗೆ ಬಂದ 

ಕೀರ್ತನಕಾರರು : ಗಲಗಲಿ ಅವ್ವನವರು

ರಂಗ ನಮ್ಮನೆಗೆ ಬಂದ ಮತ್ತೇನು ತಂದ                                     ।।ಪ॥ 

ಜಗದೋದ್ಧಾರನ ಸಭೆಗೆ ಬಂದ ನಗುವ ಪರಿಯ ಹೇಳಿದ್ದು ತಂದ
ಬಗೆ ಬಗೆ ವಸ್ತ್ರಕೊಳ್ಳಿರೆಂದ ಪಗಡಿ ಧರ್ಮಗೆ ತರಲಿಲ್ಲೆಂದ                 ।।೧।।

ವಾಣಿ ಮಾವ ಮನೆಗೆ ಬಂದ ಜಾಣತನವ ಹೇಳಿದ್ದು ತಂದ 
ಮಾಣಿಕ ಮುತ್ತುಕೊಳ್ಳಿರೆಂದ ಕ್ವಾಣವ ಧರ್ಮಗೆ ತರಲಿಲ್ಲಂದ            ।।೨।।

ಕೃಷ್ಣರಾಯ ಸಭೆಗೆ ಬಂದ ಎಷ್ಟು ಜಂಬ ಹೇಳಿದ್ದು ತಂದ 
ಪಟ್ಟಾವಳಿ ಕೊಳ್ಳಿರೆಂದ ಹುಟ್ಟು ಭೀಮಗೆ ತರಲಿಲ್ಲೆಂದ                     ।।೩।।

ನಳಿನಾಕ್ಷಸಭೆಯೊಳು ಬಂದ ಹೊಳೆವೊ ಎಷ್ಟು ಹೇಳಿದ್ದು ತಂದ 
ಝಳಿಸೋ ವಸ್ತ್ರಕೊಳ್ಳಿರೆಂದ ಬಳೆ ಪಾರ್ಥಗೆ ತರಲಿಲ್ಲೆಂದ               ।।೪।।

ರಾಜ್ಯ ಲಕ್ಷ್ಮಣನಿಗಿಲ್ಲೆಂದ ಮಾಜುದಾ ಕುಲ ಧರ್ಮ ಕುಂದ 
ತೇಜ ಮುಂದೆ ಓಡಿದ್ದು ಚೆಂದ ಸೋಜಿಗವಲ್ಲ ನಕುಲನೆಂದ              ।।೫।।


ಸುಮನಸರು ನಗುವೊರೆಂದ ಭ್ರಮೆಯ ಕಳೆದ್ಯೋ ಸಹದೇವ ಎಂದ 
ಅಮಿತದನವ ಕಾಯ್ವೋಛಂದ  ರಮಿಯರಸು ನಗುವನೆಂದ            ।।೬।।

ಅಂದ ಮಾತಿಗೆ ಬಲರಾಮ ಹೀಗೆಂದ ಚಂದವಾಯಿತು ಕುಶಲವೆಂದ 
ನಿಂದ್ಯವ ನೀ ಮಾಡಿಕೊ ಎಂದ ಇಂದಿರೇಶಗೆ ತಿಳಿಸಿರೆಂದ              ।।೭।।


Labels: ರಂಗ ನಮ್ಮನೆಗೆ ಬಂದ, Ranga Nammanege Banda, ಗಲಗಲಿ ಅವ್ವನವರು, Galagali Avvanavaru 

ಗುರುವಾರ, ಸೆಪ್ಟೆಂಬರ್ 12, 2013

ಹತ್ತೆಂಟು ಸಾಲಿನ ಬತ್ತಾಸದಂಗಡಿ : Hattentu Salina Battasadangadi

ಹತ್ತೆಂಟು ಸಾಲಿನ ಬತ್ತಾಸದಂಗಡಿ

ಕೀರ್ತನಕಾರರು : ಗಲಗಲಿ ಅವ್ವನವರು

ಹತ್ತೆಂಟು ಸಾಲಿನ ಬತ್ತಾಸದಂಗಡಿ 
ಭತ್ತದ ಅರಳು ಮೊದಲಾಗಿ 
ಭತ್ತದ ಅರಳು ಮೊದಲಾಗಿ ಸಕ್ಕರಿ ಬೊಂಬೆಯ 
ತಂದಿಟ್ಟು ಮಾರುವವರು ಕಡಿಮೆಯಿಲ್ಲ                          ।।ಪ॥ 

ಕುಂಕುಮ ಬುಕ್ಕಿಟ್ಟುಗಳ ಸಾಲು ಅಂಗಡಿ ಕುರಿತಾಗಿ 
ಕುಂಕುಮ ಅರಿಷಿಣ ಅಲಂಕಾರ ದ್ರವ್ಯವ ಅಂಕ ಅಂಕಣಕ ನೆರೆವ್ಯಾರೆ 
ಅಂಕ ಅಂಕಣಕ ನೆರೆವ್ಯಾರೆ ಬೆಲಿ ಮಾಡೊ 
ಕಂಕಣದ ಕೈಯ ಕೆಲದೆಯರು ಕಡಿಮೆಯಿಲ್ಲ                   ।।೧।।

ಬುಕ್ಕಿಟ್ಟು ಪರಿಮಳ ದ್ರವ್ಯ ಪೊಟ್ಟಣವ  ಕಟ್ಟಿ ಥರಥರವು 
ದ್ರವ್ಯವ ಕೊಟ್ಟು ಕೊಂಬುವರು ಕಡಿಮೆಯಿಲ್ಲ 
ಸೋಜಿಗವಾಗಿದ್ದ ಜಾಜಿ ಮಲ್ಲಿಗೆ ಹೂ ಸೂಜಿ ಮಲ್ಲಿಗೆ ಸರಗಳು 
ರಂಗ ಪೂಜೆಗೆ ಒಯ್ಯೋ ಪುರುಷರು                             ।।೨।।

ನಾಲ್ಕು ದಿಕ್ಕಿಗೆ ದಿವ್ಯ ಅಕಾಲ ಹಿಂಡುಗಳು ಸಾಕುವ ಎರಳೆ 
ಎಳಿಗಾವು ಎತ್ತೆತ್ತ ನೋಡಿದರು ಮುತ್ತಿನ ಪಲ್ಲಕ್ಕಿ 
ಉತ್ತಮ ರಥವು ಹಿಡಿದೇಜಿಯ 
ಹಿಡಿದೇಜಿಯ ಮ್ಯಾಲಿನ್ನು ಹತ್ತಿಬಾಹುವರು ಕಡಿಮೆಯಿಲ್ಲ   ।।೩।।

ಬಾಜಾರದೊಳಗಿನ್ನು ರಾಜ ಸಿಂಹಾಸನ 
ರಾಜ ರಮೇಶ ಕುಳಿತಲ್ಲಿಯೆ 
ರಾಜ ರಮೇಶ ಕುಳಿತು ಪೂಜಿಗೊಂಬೊ 
ಮೂರ್ಜಗವು ಮುದದಿಂದ                                         ।।೪।।

Labels: ಹತ್ತೆಂಟು ಸಾಲಿನ ಬತ್ತಾಸದಂಗಡಿ, Hattentu Salina Battasadangadi, ಗಲಗಲಿ ಅವ್ವನವರು, Galagali Avvanavaru

ಪಾಲಿಸೆ ಸರಸ್ವತಿ ಪಾಲಿಸೆ : Palise Saraswati Palise

ಪಾಲಿಸೆ ಸರಸ್ವತಿ ಪಾಲಿಸೆ

ಕೀರ್ತನಕಾರರು : ಗಲಗಲಿ ಅವ್ವನವರು

ಪಾಲಿಸೆ ಸರಸ್ವತಿ ಪಾಲಿಸೆ ಪಾಲಿಸೆ ನಿನ್ನಯ ಪಾಲಿಗೆ ಬಂದೆನು 
ಕಾಲಕಾಲಕೆ ನಿನ್ನಯ ಕಾಲಿಗೆರಗುವೆ ಪಾಲಿಸೆ                  ।।ಪ॥ 

ಆದಿ ಬ್ರಹ್ಮನ ರಾಣಿಯೆ ವೇದಕ್ಕಭಿಮಾನಿಯೆ 
ಮೋದ ಗಾಯನ ಕುಶಳಲೆ 
ಮೋದ ಗಾಯನ ಕುಶಳಲೆ ಸರಸ್ವತಿ 
ನೀ ದಯಮಾಡಿ ಮತಿಯ ಕೊಡು                                  ।।೧।।

ಹೊನ್ನವರೆ ಹೊಸ ಕಪ್ಪುಬೆನ್ನಿನ ಮ್ಯಾಲಿನ ಹೆರಳು 
ಕಿನ್ನರಿ ನಿನ್ನ ಬಲಗೈಯ
ಕಿನ್ನರಿ ನಿನ್ನ ಬಲಗೈಯಲಿ ಹಿಡಕೊಂಡು 
ಖನಿ ಬಾ ನಮ್ಮ ವಚನಕ್ಕೆ                                            ।।೨।।

ಮಿತ್ರಿ ಸರಸ್ವತಿಗೆ  ಮುತ್ತಿನ ಉಡಿಯಕ್ಕಿ 
ಮತ್ತೆ ಮಲ್ಲಿಗೆಯ ನೆನೆದಂಡೆ 
ಮತ್ತೆ ಮಲ್ಲಿಗೆಯ ನೆನೆದಂಡೆ ತಂದಿದೆ 
ಪ್ರತ್ಯಕ್ಷವಾಗ ಸಭೆಯೊಳು                                            ।।೩।।

ಹರದಿ ಸರಸ್ವತಿಗೆ ಹವಳದ ಉಡಿಯಕ್ಕಿ 
ಅರಳು ಮಲ್ಲಿಗೆ ನೆನೆದಂಡೆ
ಅರಳು ಮಲ್ಲಿಗೆ ನೆನೆದಂಡೆ ತಂದಿದೆ 
ತಡೆಯದೆ ನಮಗೆ ವರವಕೊಡು                                    ।।೪।।

ಗುಜ್ಜಿಸರಸ್ವತಿಗೆ ಗೆಜ್ಜಿಸರಪಳಿಯಿಟ್ಟು 
ವಜ್ರ ಮಾಣಿಕ್ಯದಾಭರಣ 
ವಜ್ರ ಮಾಣಿಕ್ಯದಾಭರಣ ಭೂಷಿತಳಾಗಿ 
ನಿರ್ಜರೊಳುತ್ತಮಳೆ ನಡೆ ಮುಂದೆ                                 ।।೫।।

ಹರಡಿ ಸರಸ್ವತಿ-ಸರಿಗೆ ದಾರಿಗಳಿಟ್ಟು 
ಜರದ ಸೀರೆಯನೆ ನಿರಿದಿಟ್ಟು 
ಜರದ ಸೀರೆಯನೆ ನಿರಿದಿಟ್ಟು ಬಾರಮ್ಮ
ದೊರೆ ರಾಮೇಶನ ಅರಮನೆಗೆ                                     ।।೬।।

Labels: ಪಾಲಿಸೆ ಸರಸ್ವತಿ ಪಾಲಿಸೆ, Palise Saraswati Palise, ಗಲಗಲಿ ಅವ್ವನವರು, Galagali Avvanavaru 

ಕೋಲೆನ್ನಿ ಕೋಮಲೆಯರು : Kolenni Komaleyaru

ಕೋಲೆನ್ನಿ ಕೋಮಲೆಯರು

ಕೀರ್ತನಕಾರರು : ಗಲಗಲಿ ಅವ್ವನವರು 

ಕೋಲೆನ್ನಿ ಕೋಮಲೆಯರು ಅಮ್ಮಯ್ಯ 
ಮುಯ್ಯ ಮೇಲೆನ್ನಿ ಮೇಲೆನ್ನಿರಿ ಅಕ್ಕಯ್ಯ          ।।ಪ॥ 

ಇಂದು ಗುರುಗಳಂಘ್ರಿಗೆರಗಿ ಅಮ್ಮಯ್ಯ
ಸುಭದ್ರೆ ತಂದ ಮುಯ್ಯ ರಚಿಪೆನಕ್ಕಯ್ಯ           ।।೧।।

ನಿಷ್ಠಿಲೆ ಗುರುಗಳಿಗೆ ನಮಿಸಿ ಅಮ್ಮಯ್ಯ 
ದ್ರೌಪದಿ ಕೊಟ್ಟ ಮುಯ್ಯವ ರಚಿಪೆ ಅಕ್ಕಯ್ಯ       ।।೨।।

ಅರ್ಚಿಸಿ ಗುರುಗಳ ಪಾದ ಅಮ್ಮಯ್ಯ 
ಭಾವೆ ಚರ್ಚಾ ಮಾತುಗಳನ್ನೆ ರಚಿಪೆನಕ್ಕಯ್ಯ   ।।೩।।

ಮುಖ್ಯ ಗುರುಗಳಂಘ್ರಿಗೆರಗಿ ಅಮ್ಮಯ್ಯ 
ರುಕ್ಮಿಣಿ ನಕ್ಕು ನುಡಿದ ನುಡಿಯ ರಚಿಪೆನಕ್ಕಯ್ಯ  ।।೪।।

ನಮ್ಮ ಗುರುಗಳಂಘ್ರಿಗೆರಗಿ ಅಮ್ಮಯ್ಯ 
ಪಾರ್ಥ ರಮಿಯರಸನ ಮಹಿಮೆ ರಚಿಪೆನಕ್ಕಯ್ಯ   ।।೫।।

Lables: ಕೋಲೆನ್ನಿ ಕೋಮಲೆಯರು, Kolenni Komaleyaru, ಗಲಗಲಿ ಅವ್ವನವರು, Galagali Avvanavaru

ಆನೆ ಬಂತಾನೆ ಬಂತಾನೆ : Ane Bantane Bantane

ಆನೆ ಬಂತಾನೆ ಬಂತಾನೆ

ಕೀರ್ತನಕಾರರು : ಪ್ರಸನ್ನ ವೆಂಕಟದಾಸರು

ಆನೆ ಬಂತಾನೆ ಬಂತಾನೆ ಬಂತಮ್ಮಮ್ಮ
ದಾನವ ಕದಳಿಯಕಾನನ ಮುರಿಯುತ              ||ಪ||

ಗುಂಗುರುಗುರುಳ ನೀಲಾಂಗ ಚೆಲ್ವಾನೆ
ಕಂಗಳಿಗೊಳೆವ ವ್ಯಾಂಘ್ರಾಗುಳಿ ಆನೆ
ಬಂಗಾರದಣುಗಂಟೆ ಶೃಂಗಾರದಾನೆ
ಮಂಗಳ ತಿಲಕದ ರಂಗನೆಂಬಾನೆ                    ||೧||

ಕೆಳದಿ ಗೋಪಿಯರೊಳು ಗೆಳೆತನದಾನೆ
ಸುಲಭದಿಂದಲಿಯುವ ಎಳೆಮರಿ ಆನೆ
ಘಲಿರುಘಲಿರುರವದಿ ನಲಿದಾಡೋ ಆನೆ
ಮಲೆತವರೆದೆಮ್ಯಾಲೆ ತುಳಿದಾಡೋ ಆನೆ         ||೨||

ನಳಿನಜಭವರಿಗೆ ಸಿಲುಕದ ಆನೆ
ಒಲವಿಂದ ಭಕುತರ ಸಲಹುವ ಆನೆ
ಹಲವು ಕವಿಗಳೀಗೆ ನಿಲುಕದ ಆನೆ
ಬಲ ಪ್ರಸನ್ವೆಂಕಟ ನಿಲಯನೆಂಬಾನೆ               ||೩||

Labels: ಆನೆ ಬಂತಾನೆ ಬಂತಾನೆ, Ane Bantane Bantane, ಪ್ರಸನ್ನ ವೆಂಕಟದಾಸರು, Prasanna Venkatadasaru

ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ, Sharanembe Vani Poreye Kalyani

ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ

ಕೀರ್ತನಕಾರರು : ಪುರಂದರದಾಸರು
ರಾಗ : ಕಲ್ಯಾಣಿ

ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ                                 ||ಪ||

ವಾಗಭಿಮಾನಿ ವರ ಬ್ರಹ್ಮಾಣಿ ಸುಂದರವೇಣಿ ಸುಚರಿತ್ರಾಣಿ   ||ಅ.ಪ||

ಜಗದೊಳು ನಿಮ್ಮ ಪೊಗಳುವೆನಮ್ಮ
ಹರಿಯ ತೋರಿಸೆಂದು ಪ್ರಾರ್ಥಿಪೆನಮ್ಮ                            ||೧||

ಪಾಡುವೆ ಶ್ರುತಿಯ ಬೇಡುವೆ ಮತಿಯ
ಪುರಂದರವಿಠಲನ ಸೋದರ                                         ||೨||

Labels: ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ, Sharanembe Vani Poreye Kalyani, ಪುರಂದರದಾಸರು, Purandaradasaru

ಕೃಷ್ಣ ಬಾರೊ ಕೃಷ್ಣ ಬಾರೋ : Krishna Baro Krishna Baro

ಕೃಷ್ಣ ಬಾರೊ ಕೃಷ್ಣ ಬಾರೋ

ಕೀರ್ತನಕಾರರು : ಪುರಂದರದಾಸರು

ಕೃಷ್ಣ ಬಾರೊ ಕೃಷ್ಣ ಬಾರೋ
ಕೃಷ್ಣಯ್ಯ ನೀ ಬಾರಯ್ಯ                             ||ಪ||

ಸಣ್ಣ ಹೆಜ್ಜೆಯನಿಟ್ಟು ಗೆಜ್ಜೆನಾದಗಳಿಂದ           ||ಅ||

ಮನ್ಮಥಜನಕನೆ ಬೇಗನೆ ಬಾರೊ
ಕಮಲಾಪತಿ ನೀ ಬಾರೊ
ಅಮಿತಪರಾಕ್ರಮ ಶಂಕರ ಬಾರೊ
ಕಮನೀಯ ಗಾತ್ರನೆ ಬಾರಯ್ಯ ದೊರೆಯೆ       ।।೧।।

ಸುರುಳು ಕೇಶಗಳ ಒಲಿವ ಅಂದ
ಭರದ ಕಸ್ತೂರಿ ತಿಲಕದ ಚಂದ
ಶಿರದಿ ಒಪ್ಪುವ ನವಿಲುಕಣ್ಗಳಿಂದ
ತರತರದ ಆಭರಣಗಳ ಧರಿಸಿ ನೀ ಬಾರೊ      ।।೨।।

ಹಾಲುಬೆಣ್ಣೆಗಳ ಕೈಯಲಿ ಕೊಡುವೆ
ಮೇಲಾಗಿ ಭಕ್ಷ್ಯಗಳ ಮುಚ್ಚಿಟ್ಟು ತರುವೆ
ಜಾಲ ಮಾಡದೆ ಬಾರಯ್ಯ ಮರಿಯೆ
ಬಾಲ ಎನ್ನ ತಂದೆ ಪುರಂದರವಿಠಲ                ।।೩।।

Labels: ಕೃಷ್ಣ ಬಾರೊ ಕೃಷ್ಣ ಬಾರೋ, Krishna Baro Krishna Baro, ಪುರಂದರದಾಸರು, Purandaradasaru

ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿ : Hyange Bareditto Prachinadalli

ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿ

ಕೀರ್ತನಕಾರರು : ಪುರಂದರದಾಸರು
ರಾಗ : ಮೋಹನ
ತಾಳ : ಛಾಪು

ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿ
ಹಾಂಗೆ ಇರಬೇಕು ಸಂಸಾರದಲ್ಲಿ           ||ಪ||

ಪಕ್ಷಿ ಅಂಗಳದಲ್ಲಿ ಬಂದು ಕೂತಂತೆ
ಆ ಕ್ಷಣದಲ್ಲಿ ಅದು ಹಾರಿಹೋದಂತೆ        ||೧||

ಸಂತೆ ನೆರೆಯಿತು ನಾನಾ ಪರಿ
ತಿರುಗಿ ಹಿಡಿಯಿತು ತಮ್ಮ ತಮ್ಮ ದಾರಿ   ||೨||

ಆಡುವ ಮಕ್ಕಳು ಮನೆಯ ಕಟ್ಟಿದರು
ಆಟ ಸಾಕೆಂದು ಮುರಿದೋಡಿದರು         ||೩||

ವಸತಿಕಾರನು ವಸತಿಗೆ ಬಂದಂತೆ
ಹೊತ್ತಾರೆದ್ದು ಹೊರಟು ಹೋದಂತೆ        ||೪||

ಸಂಸಾರ ಪಾಶವ ನೀನೇ ಬಿಡಿಸಯ್ಯ
ಕಂಸಾರಿ ಪುರಂದರವಿಠ್ಠಲರಾಯ           ||೫||

Labels: ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿ, Hyange Bareditto Prachinadalli, ಪುರಂದರದಾಸರು, Purandaradasaru

ಬುಧವಾರ, ಸೆಪ್ಟೆಂಬರ್ 11, 2013

ವೆಂಕಟರಮಣನೆ ಬಾರೋ : Venkataramanane Baro

ವೆಂಕಟರಮಣನೆ ಬಾರೋ

ಕೀರ್ತನಕಾರರು : ಪುರಂದರದಾಸರು
ರಾಗ : ನಾಟಕುರುಂಜಿ
ತಾಳ : ರೂಪಕ

ವೆಂಕಟರಮಣನೆ ಬಾರೋ ಶೇಷಾಚಲವಾಸನೆ ಬಾರೋ              ||ಪ||

ಪಂಕಜನಾಭ ಪರಮ ಪವಿತ್ರ ಶಂಕರ ಮಿತ್ರನೇ ಬಾರೋ              ||ಅ.ಪ||

ಮುದ್ದು ಮುಖದ ಮಗುವೆ ನಿನಗೆ ಮುತ್ತು ಕೊಡುವೆನು ಬಾರೋ
ನಿರ್ದಯವೇಕೋ ನಿನ್ನೊಳಗೆ ನಾನು ಪೊಂದಿದ್ದೇನು ಬಾರೋ         ||೧||

ಮಂದರ ಗಿರಿಯನೆತ್ತಿದ ಆನಂದ ಮೂರ್ತಿಯೇ ಬಾರೋ
ನಂದನ ಕಂದ ಗೋವಿಂದ ಮುಕುಂದ ಇಂದಿರೆಯರಸನೆ ಬಾರೋ    ||೨||

ಕಾಮನಯ್ಯ ಕರುಣಾಳು ಶ್ಯಾಮಲ ವರ್ಣನೆ ಬಾರೋ
ಕೋಮಾಳಾಂಗ ಶ್ರೀಪುರಂದರ ವಿಠಲನೆ ಸ್ವಾಮಿರಾಯನೆ ಬಾರೋ  ||೩||

Labels: ವೆಂಕಟರಮಣನೆ ಬಾರೋ, Venkataramanane Baro, ಪುರಂದರದಾಸರು, Purandaradasaru

ರಾಯಬಾರೊ ತಂದೆತಾಯಿ ಬಾರೊ : Raya Baro Tande Tayi Baro

ರಾಯಬಾರೊ ತಂದೆತಾಯಿ ಬಾರೊ

ಕೀರ್ತನಕಾರರು : ಜಗನ್ನಾಥದಾಸರು
ರಾಗ : ಪೂರ್ವಿ
ತಾಳ : ಆದಿ

ರಾಯಬಾರೊ ತಂದೆತಾಯಿ ಬಾರೊ
ನಮ್ಮ ಕಾಯಿ ಬಾರೊ
ಮಾಯಿಗಳ ಮರ್ದಿಸಿದ ರಾಘವೇಂದ್ರ                          ||ಪ||

ವಂದಿಪ ಜನರಿಗೆ ಮಂದಾರ ತರುವಂತೆ
ಕುಂದದಭೀಷ್ಟೆಯ ಸಲಿಸುತಿಪ್ಪ ಸುರಮುನಿ
ಮಂದನ ಮತಿಗೆ ರಾಘವೇಂದ್ರ ರಾಯಬಾರೊ               ||೧||

ಭಾಸುರಚರಿತನೆ ಭೂಸುರವಂದ್ಯನೆ
ಶ್ರೀಸುಧೀಂದ್ರಾರ್ಯರ ವರಪುತ್ರನೆನಿಸಿದ
ದೇಶಿಕರೊಡೆಯ ರಾಘವೇಂದ್ರ ರಾಯಬಾ                     ||೨||

ರಾಮಪದಸರಸೀರುಹಭೃಂಗ ಕೃಪಾಂಗ
ಭ್ರಾಮಕಜನರ ಮತಭಂಗ ಮಾಡಿದ
ಧೀಮಂತರೊಡೆಯನೆ ರಾಘವೇಂದ್ರ ರಾಯಬಾರೊ         ||೩||

ಆರು ಮೂರೇಳು ನಾಲ್ಕೆಂಟು ಗ್ರಂಥಸಾರಾರ್ಥ
ತೋರಿಸಿದೆ ಸರ್ವರಿಗೆ ಸರ್ವಜ್ಞ
ಸೂರಿಗಳರಸನೆ ರಾಘವೇಂದ್ರ ರಾಯಬಾರೊ                 ||೪||

ಭೂತಳನಾಥನ ಭೀತಿಯ ಬಿಡಿಸಿದೆ
ಪ್ರೇತತ್ವ ಕಳೆದೆ ಮಹಿಷಿಯ ಶ್ರೀಜಗ
ನ್ನಾಥವಿಠಲನ ಪ್ರೀತಿಪಾತ್ರ ರಾಘವೇಂದ್ರ ರಾಯಬಾರೊ  ||೫||

Labels: ರಾಯಬಾರೊ ತಂದೆತಾಯಿ ಬಾರೊ, Raya Baro Tande Tayi Baro, ಜಗನ್ನಾಥದಾಸರು, Jagannathadasaru

ಮಂಗಳಾರತಿ ತಂದು ಬೆಳಗಿರೆ : Mangalarati Tandu Belagire

ಮಂಗಳಾರತಿ ತಂದು ಬೆಳಗಿರೆ

ಕೀರ್ತನಕಾರರು : ಹರಪನಹಳ್ಳಿ ಭೀಮವ್ವನವರು

ಮಂಗಳಾರತಿ ತಂದು ಬೆಳಗಿರೆ
ಅಂಬುಜಾಸನ ರಾಣಿಗೆ
ಅಂಬೆಗೆ ಜಗದಾಂಬೆಗೆ ಮೂಕಾಂಬೆಗೆ
ಶಶಿ ಬಿಂಬೆಗೆ                                            ||ಪ||

ಶುದ್ಧ ಸ್ನಾನವ ಮಾಡಿ ನದಿಯಲಿ
ವಜ್ರಪೀಠದಿ ನೆಲೆಸಿರೆ
ತಿದ್ದಿ ತಿಲಕವ ತೀಡಿದಂಥ
ಮುದ್ದು ಮಂಗಳ ಗೌರಿಗೆ                             ||೧||

ಎರೆದು ಪೀತಾಂಬರವನುಡಿಸಿ
ಸರ್ವಾಭರಣವ ರಚಿಸಿದ
ಹರಳಿನೋಲೆ ವಜ್ರಮೂಗುತಿ
ವರಮಹಾಲಕ್ಷ್ಮಿ ದೇವಿಗೆ                              ||೨||

ಹುಟ್ಟುಬಡವೆಯ ಕಷ್ಟಕಳೆದು
ಕೊಟ್ಟಳರಸನ ಸಿರಿಯನು
ಹೆತ್ತ ಕುಮರನ ತೋರಿದಂಥ
ಶುಕ್ರವಾರದ ಲಕ್ಷ್ಮಿಗೆ                                   ||೩||

ನಿಗಮ ವೇದ್ಯಳೆ ನಿನ್ನ ಗುಣಗಳ
ಬಗೆಬಗೆಯಲಿ ವರ್ಣಿಪೆ
ತೆಗೆದು ಭಾಗ್ಯವ ನೀಡು ಏನುತ
ಜಗದೊಡೆಯನ ಭೀಮೇಶ ಕೃಷ್ಣನ ರಾಣಿಗೆ      ||೪||

Labels: ಮಂಗಳಾರತಿ ತಂದು ಬೆಳಗಿರೆ, Mangalarati Tandu Belagire
, ಹರಪನಹಳ್ಳಿ ಭೀಮವ್ವನವರು, Harapanahalli Bheemavvanavaru

ನಮೋ ನಮಸ್ತೇ ನರಸಿಂಹ : Namo Namaste Narasimha Deva

ನಮೋ ನಮಸ್ತೇ ನರಸಿಂಹ ದೇವಾ

ಕೀರ್ತನಕಾರರು : ಜಗನ್ನಾಥ ದಾಸರು

ನಮೋ ನಮಸ್ತೇ ನರಸಿಂಹ ದೇವಾ ಸ್ಮರಿಸುವವರ ಕಾವ
ಸುಮಹಾತ್ಮ ನಿನಗೆಣೆ ಲೋಕದೊಳಗಾವ ತ್ರಿಭುವನ ಸಂಜೀವಾ
ಉಮೆಯರಸ ಹೃತ್ಕಮಲದ್ಯುಮಣಿ
ಮಾ ರಮಣ ಕನಕ ಸಂಯಮಿವರವರದಾ                     
||ಪ||

ಅಪರಾಜಿತ ಅನಘ ಅನಿರ್ವಿಣ್ಣ ಲೋಕೈಕಶರಣ್ಯ
ಶಫರಕೇತುಕೋಟಿಲಾವಣ್ಯ ದೈತ್ಯೇಂದ್ರ ಹಿರಣ್ಯ
ಕಶಿಪುತನಯನ ಕಾಯ್ದೆಪೆನೆನುತಲಿ
ನಿಷ್ಕಪಟ ಮನುಜಹರಿವಪುಷ ನೀನಾದೆ                         ||೧||

ವೇದವೇದಾಂಗವೇದ್ಯ ಸಾಧ್ಯ ಅಸಾಧ್ಯ
ಶ್ರೀದ ಮುಕ್ತಾಮುಕ್ತಾರಾಧ್ಯ
ಅನುಪಮ ಅನವದ್ಯ ಮೋದಮಯನೆ ಪ್ರಹ್ಲಾದ
ವರದ ನಿತ್ಯೋದಯ ಮಂಗಳ ಪಾದಕಮಲಕೆ                   ||೨||

ಅನಿಮಿತ್ತ ಬಂಧು ಜಗನ್ನಾಥ ವಿಠಲ ಸಾಂಪ್ರತ
ನಿನಗೆ ಬಿನ್ನೈಪೆ ಎನ್ನಯ ಮಾತ ಲಾಲಿಸುವದು ತಾತ
ಗಣನೆಯಿಲ್ಲದವಗುಣವೆನಿಸಿದೆ ಪ್ರತಿ
ಕ್ಷಣಕೆ ಕಥಾಮೃತ ಉಣಿಸು ಕರುಣದಿ                             ||೩||

Labels: ನಮೋ ನಮಸ್ತೇ ನರಸಿಂಹ, Namo Namaste Narasimha Deva, ಜಗನ್ನಾಥ ದಾಸರು, Jagannathadasaru

ವೀರ ಹನುಮ ಬಹು ಪರಾಕ್ರಮಾ : Veera Hanuma Baru Parakrama

ವೀರ ಹನುಮ ಬಹು ಪರಾಕ್ರಮಾ

ಕೀರ್ತನಕಾರರು : ಪುರಂದರದಾಸರು
ರಾಗ : ರೇಗುಪ್ತಿ
ತಾಳ : ಅಟ್ಟ

ವೀರ ಹನುಮ ಬಹು ಪರಾಕ್ರಮಾ                                   ||ಪ||

ಸುಜ್ಞಾನವಿತ್ತು ಪಾಲಿಸೆನ್ನ ಜೀವರೋತ್ತಮ                        ||ಅ.ಪ||

ರಾಮ ದೂತನೆನೆಸಿಕೊಂಡೆ ನೀ
ರಾಕ್ಷಸರ ವನವನೆಲ್ಲ ಕಿತ್ತು ಬಂದೆ ನೀ
ಜಾನಕಿಗೆ ಮುದ್ರೆ ಇತ್ತು ಜಗತಿಗೆಲ್ಲ ಹರುಷವಿತ್ತು
ಚೂಡಾಮಣಿಯ ರಾಮಗಿತ್ತು ಲೋಕಕೆ ಮುತ್ತೆನಿಸಿಬರುವ     ||೧||

ಗೋಪಿಸುತನ ಪಾದಪೂಜಿಸಿ
ಗದೆಯ ಧರಿಸಿ ಬಕಾಸುರನ ಸಂಹರಿಸಿದೆ
ದ್ರೌಪದಿಯ ಮೊರೆಯ ಕೇಳಿ ಮತ್ತೆ ಕೀಚಕನ್ನ ಕೊಂದು
ಭೀಮನೆಂಬ ನಾಮ ಧರಿಸಿ ಸಂಗ್ರಾಮ ಧೀರನಾಗಿ ಜಗದಿ      ||೨||

ಮಧ್ಯಗೆಹನಲ್ಲಿ ಜನಿಸಿ ನೀ
ಬಾಲ್ಯದಲ್ಲಿ ಮತ್ಸರಿಯ ರೂಪಗೊಂಡೆ ನೀ
ಸತ್ಯವತಿಯ ಸುತನ ಭಜಿಸಿ ಸಮ್ಮುಖದಿ ಭಾಷ್ಯ ಮಾಡಿ
ಸಜ್ಜನರ ಪೊರೆವ ಮುದ್ದು ಪುರಂದರವಿಠಲನ ದಾಸ             ||೩||

Labels: ವೀರ ಹನುಮ ಬಹು ಪರಾಕ್ರಮಾ, Veera Hanuma Baru Parakrama, ಪುರಂದರದಾಸರು, Purandaradasaru

ವೆಂಕಟೇಶ ಬೇಡಿಕೊಂಬೆ : Venkatesha Bedikombe

ವೆಂಕಟೇಶ ಬೇಡಿಕೊಂಬೆ

ಕೀರ್ತನಕಾರರು : ಪುರಂದರದಾಸರು

ವೆಂಕಟೇಶ ಬೇಡಿಕೊಂಬೆ ಕೃಪೆಯ ಪಾಲಿಸೋ
ಬ್ರಹ್ಮಶಂಕರಾದಿ ವಂದ್ಯ ಎನಗೆ ಮುಕ್ತಿ ತೋರಿಸೊ    ||ಪ||

ನಷ್ಟ ಮೊದಲಾದಂಥ ಕಷ್ಟ ಬಿಡಿಸೊ
ನಿನ್ನ ಪಟ್ಟದ ರಾಣಿಗೆ ಹೇಳಿ ಪದವಿ ಕೊಡಿಸೊ
ಇಷ್ಟ ಭಕ್ತಜನರೊಳು ಎನ್ನ ಸೇರಿಸೊ
ಈ ಸೃಷ್ಟಿಯೊಳು ನಿನ್ನ ದಾಸಾನು ದಾಸನೆನಿಸೊ       ||೧||

ಉಟ್ಟು ಉಂಡು ಮಿಕ್ಕಿದ್ದೆಲ್ಲ ಎನಗೆ ಹಾಕಿಸೊ
ಪೊಂಬಟ್ಟಲೊಳಗಿನ ಹಾಲು ಉಚ್ಚಿಷ್ಟ ಹಾಕಿಸೊ
ಗಟ್ಯಾಗಿ ಸಕ್ಕರೆ ತುಪ್ಪ ರೊಟ್ಟಿ ಉಣ್ಣಿಸೊ
ಮುಂದೆ ಹುಟ್ಟಿ ಇಹ ಜನ್ಮಂಗಳ ಎನಗೆ ಬಿಡಿಸೊ       ||೨||

ಕಿಟ್ಟಗಟ್ಟಿದ ಕಬ್ಬಿಣಕ್ಕೆ ಪುಟವ ಹಾಕಿಸೊ
ಉತ್ಕೃಷ್ಟ ಬಂಗಾರದೊಳು ಎನ್ನ ಸೇರಿಸೊ
ಬೆಟ್ಟಿಗೆ ಉಂಗುರ ಮಾಡಿ ಎನ್ನ ಧರಿಸೊ ಸ್ವಾಮಿ
ದಿಟ್ಟ ಪುರಂದರ ವಿಠಲನೆ ದಯದಿ ಪಾಲಿಸೊ          ||೩||

Labels: ವೆಂಕಟೇಶ ಬೇಡಿಕೊಂಬೆ, Venkatesha Bedikombe, ಪುರಂದರದಾಸರು, Purandaradasaru

ಲಂಬೋದರ ಲಕುಮಿ ಕರಾ : Lambodara Lakumi Kara

ಲಂಬೋದರ ಲಕುಮಿ ಕರಾ

ಕೀರ್ತನಕಾರರು : ಪುರಂದರದಾಸರು
ರಾಗ : ಮಲಹರಿ
ತಾಳ : ರೂಪಕ

ಲಂಬೋದರ ಲಕುಮಿ ಕರಾ ಅಂಬಾ ಸುತ ಅಮರ ವಿನುತ         ||ಪ||

ಶ್ರೀ ಗಣನಾಥ ಸಿಂಧೂರ ವರ್ಣ ಕರುಣ ಸಾಗರ ಕರಿ ವಾದನ      ||೧||

ಸಿದ್ಧ ಚರಣ ಗಣ ಸೇವಿತ ಸಿದ್ಧಿ ವಿನಾಯಕ ತೇ ನಮೋ ನಮೋ   ||೨||

ಸಕಲ ವಿದ್ಯಾ ಆದಿ ಪೂಜಿತ ಸರ್ವೋತ್ತಮ ತೇ ನಮೋ ನಮೋ  ||೩||

Labels: ಲಂಬೋದರ ಲಕುಮಿ ಕರಾ, Lambodara Lakumi Kara, ಪುರಂದರದಾಸರು, Purandaradasaru

ನೀಕರುಣಿಸೋ ವಿಠ್ಠಲ : Nee Karuniso Vithala

ನೀಕರುಣಿಸೋ ವಿಠ್ಠಲ

ಕೀರ್ತನಕಾರರು : ಪ್ರಸನ್ನ ವೆಂಕಟದಾಸರು

ನೀಕರುಣಿಸೋ ವಿಠ್ಠಲ ನಮ್ಮ ಸಾಕೋ ಪಂಡರಿ ವಿಠ್ಠಲಾ                  ||ಪ||

ದೋಷಿಗಳೊಳಗೆ ಹಿರಿಯನು ನಾ ನಿರ್ದೋಷಿಗಳರಸನೇ ವಿಠ್ಠಲಾ
ನಾಸುವೆಯಷ್ಟು ಬಕುತಿಯನರಿಯೆನು ಶೇಷಶಯನ ಹರಿ ವಿಠಲಾ       ||೧||

ಭವಸಾಗರದೊಳು ಮುಳಿಗುವೆ ಸುಮ್ಮನೆ ಅವಲೋಕಿಪರೆ ವಿಠ್ಠಲಾ
ನವನವ ವಿಷಯಕೆ ಹಿಗ್ಗುತಲಿಹ ಮನದವಸರ ಕಾಯೊ ವಿಠ್ಠಲಾ          ||೨||

ನಿಶಿದಿನ ಅಶನಾ ವಸನಕೆ ಹೆಣಗಿ ಹುಸಿಯ ಸಂಗ್ರಹಿಸಿದೆ ವಿಠ್ಠಲಾ
ನಿಷೇಧ ಮಾಯ ಇಲ್ಲವು ನರಕದ ಗಸಣಿಗೆ ಅಂಜುವೆ ವಿಠ್ಠಲಾ            ||೩||

ತನು ಸಂಬಂಧಿಗಳತಿಕಾಯಾರ್ಥರು ಎನಗ್ಯಾರಿಲ್ಲೊ ವಿಠ್ಠಲಾ
ಬಿನುಗುಮಾನವರ ಅನುಸರಣಿಯಲಿ ದಣಿಸದಿರಯ್ಯ ವಿಠ್ಠಲಾ            ||೪||

ಝವಕೆ ಮಾಡುವೆ ಸಾವಿರ ತಪ್ಪನು ಕಾಯೋ ದಯಾಂಬುದಿ ವಿಠ್ಠಲಾ
ಶ್ರೀವರ ಪ್ರಸನ್ನವೆಂಕಟವಿಠಲಾ ಜೀವಕೆ ಹೊಣೆ ನೀ ವಿಠಲಾ             ||೫||

Labels: ನೀಕರುಣಿಸೋ ವಿಠ್ಠಲ, Nee Karuniso Vithala, ಪ್ರಸನ್ನ ವೆಂಕಟದಾಸರು, Prasanna Venkatadasaru

ವಂದಿಸುವದಾದಿಯಲಿ ಗಣನಾಥನ : Vandisuvadadiyali Gananathana

ವಂದಿಸುವದಾದಿಯಲಿ ಗಣನಾಥನ

ಕೀರ್ತನಕಾರರು : ಪುರಂದರದಾಸರು
ರಾಗ : ನಾಟ
ತಾಳ : ಖಂಡಛಾಪು

ವಂದಿಸುವದಾದಿಯಲಿ ಗಣನಾಥನ                    ||ಪ||

ಸಂದೇಹ ಸಲ್ಲ ಶ್ರೀ ಹರಿಯಾಜ್ಞೆಯಿದಕುಂಟು         ||ಅ.ಪ||

ಹಿಂದೆ ರಾವಣ ತಾನು ವಂದಿಸದೆ ಗಜಮುಖನ
ನಿಂದು ತಪವನು ಕೈದು ವರ ಪಡೆಯಲು
ಒಂದು ನಿಮಿಷದಿ ಬಂದು ವಿಘ್ನವನು ಆಚರಿಸಿ
ತಂದ ವರಗಳನೆಲ್ಲ ಧರೆಗೆ ಇಳಿಸಿದನು                ||೧||

ಅಂದಿನಾ ಬಗೆಯರಿತು ಬಂದು ಹರಿ ಧರ್ಮಜಗೆ
ಮುಂದೆ ಗಣಪನ ಪೂಜಿಸೆಂದು ಪೇಳೆ
ಒಂದೇ ಮನದಲಿ ಬಂದು ಪೂಜಿಸಲು ಗಣನಾಥ
ಹೊಂದಿಸಿದ ನಿರ್ವಿಘ್ನದಿಂದ ರಾಜ್ಯವನು               ||೨||

ಇಂದು ಜಗವೆಲ್ಲ ಉಮೆನಂದನನ ಪೂಜಿಸಲು
ಚೆಂದದಿಂದಲಿ ಸಕಲ ಸಿದ್ಧಿಗಳನಿತ್ತು
ತಂದೆ ಸಿರಿಪುರಂದರವಿಠಲನ ಸೇವೆಯೊಳು
ಬಂದ ವಿಘ್ನವ ಕಳೆದಾನಂದವನು ಕೊಡುವ            ||೩||

Labels: ವಂದಿಸುವದಾದಿಯಲಿ ಗಣನಾಥನ, Vandisuvadadiyali Gananathana, ಪುರಂದರದಾಸರು, Purandaradasaru

ರಾಮ ಮಂತ್ರವ ಜಪಿಸೋ : Rama Mantrava Japiso

ರಾಮ ಮಂತ್ರವ ಜಪಿಸೋ

ಕೀರ್ತನಕಾರರು : ಪುರಂದರದಾಸರು
ರಾಗ : ಜೌನ್ ಪುರಿ
ತಾಳ : ಆದಿ

ರಾಮ ಮಂತ್ರವ ಜಪಿಸೋ ಹೇ ಮನುಜ                 ||ಪ||

ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ
ಸೋಮಶೇಖರ ತನ್ನ ಭಾಮೆಗೆ ಪೇಳಿದ ಮಂತ್ರ       ||ಅ.ಪ||

ಕುಲಹೀನನಾದರು ಕೂಗಿ ಜಪಿಸುವ ಮಂತ್ರ
ಸಲೆ ಬೀದಿ ಬೀದಿಯೊಳು ನುಡಿವ ಮಂತ್ರ
ಹಲವು ಪಾಪಂಗಳ ಹತಗೊಳಿಸುವ ಮಂತ್ರ
ಸುಲಭದಿಂದಲಿ ಸ್ವರ್ಗ ಸೂರೆ ಕೊಂಬುವ ಮಂತ್ರ      ||೧||

ಜ್ಞಾನನಿಧಿ ನಮ್ಮ ಆನಂದತೀರ್ಥರು
ಸಾನುರಾಗದಿ ನಿತ್ಯ ಸೇವಿಪ ಮಂತ್ರ
ಭಾನುಕುಲಾಂಬುಧಿ ಸೋಮನೆನಿಪ ನಮ್ಮ
ದೀನರಕ್ಷಕ ಪುರಂದರವಿಠಲನ ಮಂತ್ರ                  ||೨||

Labels: ರಾಮ ಮಂತ್ರವ ಜಪಿಸೋ, Rama Mantrava Japiso, ಪುರಂದರದಾಸರು, Purandaradasaru

ಸ್ಮರಿಸೊ ಸರ್ವದ ಹರಿಯ : Smariso Sarvada Hariya

ಸ್ಮರಿಸೊ ಸರ್ವದ ಹರಿಯ

ಕೀರ್ತನಕಾರರು : ಪುರಂದರದಾಸರು
ರಾಗ : ಹಮೀರ್ ಕಲ್ಯಾಣಿ
ತಾಳ : ಆದಿ

ಸ್ಮರಿಸೊ ಸರ್ವದ ಹರಿಯ                     ||ಪ||

ಸುರವರ ದೊರೆಯ ಕರುಣಾನಿಧಿಯ         ||ಅ.ಪ||

ಮುನಿಜನ ವಂದ್ಯನ ಮನಸಿಜನಯ್ಯನ
ಮನದಲಿ ಅನುದಿನ ನೆನೆಯೊ ಹರಿಯ       ||೧||

ವರಗುಣಪೂರ್ಣನ ಸರಸಿಜನೇತ್ರನ
ಪರವಾಸುದೇವನ ಪ್ರಾಣದ ಪ್ರಿಯನ         ||೨||

ವೆಂಕಟರಮಣನ ಸಂಕಟಹರಣನ
ಲಕ್ಷ್ಮೀರಮಣನ ಪುರಂದರವಿಠಲನ           ||೩||

Labels: ಸ್ಮರಿಸೊ ಸರ್ವದ ಹರಿಯ, Smariso Sarvada Hariya, ಪುರಂದರದಾಸರು, Purandaradasaru

ರಾಮ ರಾಮ ರಾಮ ಎನ್ನಿರೋ : Rama Rama Rama Enniro

ರಾಮ ರಾಮ ರಾಮ ಎನ್ನಿರೋ

ಕೀರ್ತನಕಾರರು : ಪುರಂದರದಾಸರು
ರಾಗ : ಚಾರುಕೇಶಿ
ತಾಳ : ಆದಿ

ರಾಮ ರಾಮ ರಾಮ ಎನ್ನಿರೋ ಇಂಥ
ಸ್ವಾಮಿಯ ನಾಮವ ಮರೆಯದಿರೋ           ||ಪ||

ತುಂಬಿದ ಪಟ್ಟಣಕೊಂಭತ್ತು ಭಾಗಿಲು
ಸಂಭ್ರಮದರಸರು ಐದು ಮಂದಿ
ಡಂಭಕತನದಿಂದ ತಿರುಗುವ ಕಾಯವ
ನಂಬಿ ನೆಚ್ಚಿ ನೀವು ಕೆಡಬೇಡಿರೊ               ||೧||

ನೆಲೆ ಇಲ್ಲದ ಕಾಯ ಎಲುವಿನ ಪಂಜರ
ಬಲಿದು ಸುತ್ತಿದ ಚರ್ಮದ ಹೊದಿಕೆ
ಮಲಮೂತ್ರಂಗಳು ಕೀವು ಕ್ರಿಮಿಗಳಿಂದ
ಭರಿತ ದೇಹವ ನೆಚ್ಚಿ ಕೆಡಬೇಡಿರೊ            ||೨||

ಹರಿ ಬ್ರಹ್ಮ ಸುರರಿಂದ ವಂದಿತ ಆಗಿಪ್ಪ
ಹರಿ ಸರ್ವೋತ್ತಮನೆಂದೆನ್ನಿರೊ
ಪುರಂದರವಿಠಲನ ಚರಣವ ಭಜಿಸಿರೊ
ದುರಿತ ಭಯಗಳಿಂದ ದೂರಾಗಿರೊ           ||೩||

Labels: ರಾಮ ರಾಮ ರಾಮ ಎನ್ನಿರೋ, Rama Rama Rama Enniro, ಪುರಂದರದಾಸರು, Purandaradasaru

ನರಸಿಂಹನ ಪಾದ ಭಜನೆಯ : Narasimhana Pada Bhajaneya

ನರಸಿಂಹನ ಪಾದ ಭಜನೆಯ

ಕೀರ್ತನಕಾರರು : ಪುರಂದರದಾಸರು

ನರಸಿಂಹನ ಪಾದ ಭಜನೆಯ ಮಾಡೋ          ||ಪ ||
ದುರಿತ ಪರ್ವತವ ಖಂಡಿಸುವ ಕುಲಿಶದಂತೆ      ||ಅ.ಪ||

ಸುರರೆಲ್ಲ ನಡುಗಲು ಸಿರಿದೇವಿ ಮೊರೆಯಿಡೆ
ವರ ಕಂಭದಿಂ ಬಂದ ಸಿರಿ ನರಹರಿ ನಮ್ಮ         ||೧||

ತರಳನ ಮೊರೆ ಕೇಳಿ ತ್ವರಿತದಲಿ ಬಂದು
ದುರುಳನ ಕರುಳ ತನ್ನ ಕೊರಳಲ್ಲಿ ಧರಿಸಿದ        ||೨||

ಹರಿ ವಿರಿಂಚಾರಾದ್ಯರು ಕರವೆತ್ತಿ ಮುಗಿಯಲು
ಪರಮ ಶಾಂತನಾದ ಪುರಂದರವಿಠಲ             ||೩||

Labels: ನರಸಿಂಹನ ಪಾದ ಭಜನೆಯ, Narasimhana Pada Bhajaneya, ಪುರಂದರದಾಸರು, Purandaradasaru

ಪಿಳ್ಳಂಗೋವಿಯ ಚೆಲುವ ಕೃಷ್ಣನ : Pillangoviya Chelva Krishnana

ಪಿಳ್ಳಂಗೋವಿಯ ಚೆಲುವ ಕೃಷ್ಣನ

ಕೀರ್ತನಕಾರರು : ಪುರಂದರದಾಸರು
ರಾಗ : ಕಲ್ಯಾಣಿ
ತಾಳ : ತ್ರಿವಿಡೆ

ಪಿಳ್ಳಂಗೋವಿಯ ಚೆಲುವ ಕೃಷ್ಣನ
ಎಲ್ಲಿ ನೋಡಿದಿರಿ ರಂಗನ ಎಲ್ಲಿ ನೋಡಿದಿರಿ                 ||ಪ||

ಎಲ್ಲಿ ನೋಡಿದರಲ್ಲಿ ತನಿಲ್ಲದಿಲ್ಲವೆಂದು ಬಲ್ಲ ಜಾಣರು     ||ಅ.ಪ||

ನಂದಗೋಪನ ಮಂದಿರಗಳ ಸಂದುಗೊಂದಿನಲಿ
ಚಂದ ಚಂದದ ಗೋಪಬಾಲರ ವೃಂದ್ವೃಂದದಲಿ
ಸುಂದರಾಂಗದ ಸುಂದರಿಯರ ಹಿಂದುಮುಂದಿನಲಿ
ಅಂದದಾಕಳ ಕಂದ ಕರುಗಳ ಮಂದೆ ಮಂದೆಯಲಿ        ||೧||

ಶ್ರೀ ಗುರುಕ್ತ ಸದಾ ಸುಮಂಗಳ ಯೋಗ ಯೋಗದಲಿ
ಅಗಮಾರ್ಥದೊಳಗೆ ಮಾಡುವ ಯಾಗ ಯಾಗದಲಿ
ಶ್ರೀಗೆ ಭಾಗ್ಯನಾಗಿ ವರ್ತಿಪ ಭೋಗ ಭೋಗದಲಿ
ಭಾಗವತರು ಸದಾ ಬಾಗಿ ಪಡುವ ರಾಗ ರಾಗದಲಿ        ||೨||

ಈ ಚರಾಚರದೊಳಗೆ ಜನಂಗಳಾಚೆ ಈಚೆಯಲಿ
ಖೇಚರೇಂದ್ರನ ಸುತನ ರಥದ ಚೌಕ ಪೀಠದಲಿ
ನಾಚದೆ ಮಾಧವ ಎಂಬ ಭಕ್ತರ ವಾಚಕಂಗಳಲಿ
ವೀಚುಕೊಂಡದ ಪುರಂದರವಿಠಲನ ಲೋಚನಾಗ್ರದಲಿ    ||೩||

Labels: ಪಿಳ್ಳಂಗೋವಿಯ ಚೆಲುವ ಕೃಷ್ಣನ, Pillangoviya Chelva Krishnana, ಪುರಂದರದಾಸರು, Purandaradasaru

ಲಾಲಿಸಿದಳು ಮಗನ ಯಶೋದೆ : Lalisidalu Magana Yashode

ಲಾಲಿಸಿದಳು ಮಗನ ಯಶೋದೆ

ಕೀರ್ತನಕಾರರು : ಪುರಂದರದಾಸರು
ರಾಗ : ಆರಭಿ
ತಾಳ : ಆದಿ

ಲಾಲಿಸಿದಳು ಮಗನ ಯಶೋದೆ
ಲಾಲಿಸಿದಳು ಮಗನ                                        ||ಪ||

ಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟು
ತರಳನ ಮೈಸಿರಿ ತರುಣಿ ನೋಡುತ ಹಿಗ್ಗಿ              ||೧||

ಬಾಲಕನೆ ಕೆನೆ ಹಾಲು ಮೊಸರನೀವೇ
ಲೀಲೆಯಿಂದಲಿ ಎನ್ನ ತೋಳ ಮೇಲೆ ಮಲಗೆಂದು     ||೨||

ಮುಗುಳುನಗೆಯಿಂದ ಮುದ್ದು ತಾತಾರೆಂದು
ಜಗದೊಡೆಯನೇ ಶ್ರೀಪುರಂದರವಿಠಲನ               ||೩||

Labels: ಲಾಲಿಸಿದಳು ಮಗನ ಯಶೋದೆ, Lalisidalu Magana Yashode, ಪುರಂದರದಾಸರು, Purandaradasaru

ತುಂಗಾತೀರ ವಿರಾಜಂ ಶ್ರೀಗುರು : Tungateera Virajam

ತುಂಗಾತೀರ ವಿರಾಜಂ ಶ್ರೀಗುರು

ಕೀರ್ತನಕಾರರು : ಕಮಲೇಶ ವಿಠಲ

ತುಂಗಾತೀರ ವಿರಾಜಂ ಶ್ರೀಗುರು
ರಾಘವೇಂದ್ರ ಯತಿರಾಜಂ ಭಜಮನ               ||ಪ||

ಮಂಗಲಕರ ಮಂತ್ರಾಲಯವಾಸಂ
ಶೃಂಗಾರಾನನ ವಿಲಸಿತಹಹಾಸಂ
ರಾಘವೇಂದ್ರ ಯತಿರಾಜಂ ಭಜಮನ               ||೧||

ಕರಧೃತ ದಂಡ ಕಮಂಡಲು ಮಾಲಂ
ಸುರುಚಿರ ಚೇಲಮ್ ಧೃತ ಮಣಿ ಮಾಲಂ
ನಿರುಪಮ ಸುಂದರ ಕಾಯಂ ಸುಶೀಲಂ
ವರಕಮಲೇಶಾರ್ಪಿತ ನಿಜ ಸಕಲಂ
ರಾಘವೇಂದ್ರ ಯತಿರಾಜಂ ಭಜಮನ               ||೨||

Labels: ತುಂಗಾತೀರ ವಿರಾಜಂ ಶ್ರೀಗುರು, Tungateera Virajam, ಕಮಲೇಶ ವಿಠಲ, Kamalesha Vithala

ವಾದಿರಾಜ ಮುನಿಪಾ ಹಯಮುಖ : Vadiraja Munipa Hayamukha

ವಾದಿರಾಜ ಮುನಿಪಾ ಹಯಮುಖ

ಕೀರ್ತನಕಾರರು : ಗೋಪಾಲದಾಸರು
ರಾಗ : ಖರಹರಪ್ರಿಯ
ತಾಳ : ಆದಿ

ವಾದಿರಾಜ ಮುನಿಪಾ ಹಯಮುಖ
ಪಾದಕಮಲ ಮಧುಪಾ                                   ||ಪ||

ನೀ  ದಯದಲಿ ತವ ಪಾದ ಧ್ಯಾನವನು
ಆದರದಲಿ ಕೊಟ್ಟಾದರಿಸೆನ್ನನು                         ||ಅ.ಪ||

ಮೂಷಕ ಬಿಲದಿಂದ ಉದರಪೋಷಕ ಬರಲಂದು
ವಾಸುಕಿ ಭಯದಿ ನಿಮ್ಮಾಸನದೆಡೆ ಬರೆ
ಕ್ಲೇಶ ಕಳೆದು ಸಂತೋಷಗೈಸಿದೆ                       ||೧||

ಮುಂದೆ ಭೂತನರನಾ ಪ್ರೇರಿಸಿ
ಹಿಂದೆ ಒಬ್ಬ ನರನಾ
ನಿಂದಿರಿಸಿದೆ ಆನಂದದಿಂದ ಜನ
ವೃಂದ ನೋಡುತಿರೆ ಅಂದಣ ನಡಿಸಿದ್ಯೋ          ||೨||

ಕ್ಷಿತಿಯೊಳು ಸತಿ ತನ್ನಾ ವಲ್ಲಭ
ಮೃತಿಯೈದಿರೆ ಮುನ್ನಾ
ಅತಿಶೋಕದಿ ಬಂದು ನುತಿಸಲು ಆ
ಪತಿಯನು ಬದುಕಿಸಿ ಹಿತದಿ ರಕ್ಷಿಸಿದೆ                 ||೩||

ನರಪತಿ ವ್ಯಾಧಿಯಲಿ ಬಳಲ್ವದ
ತ್ವರಿತದಿ ನೀ ಕೇಳಿ
ಹರುಷದಿ ವ್ಯಾಧಿಯ ಪರಿಹರಿಸ್ಯವನಿಗೆ
ಹರುಷದಿಂದಲಭಯದ ತೋರಿದೆ                     ||೪||

ಶಾಸ್ತ್ರ ಪ್ರಸಂಗದಲಿ ನಾರಾಯಣ ಭೂತರ ಗೆಲಿದಲ್ಲೆ
ಖ್ಯಾತಿಯಿಂದ ಬಹು ಮಾತನಾಡಿ ಶ್ರೀ
ನಾಥನ ಮಂದಿರ ಪ್ರೀತಿಲಿ ತರಿಸಿದ್ಯೋ                ||೫||

ತುರಗವದನ ಪಾದಾ ಭುಜಗಳಲಿ
ಧರಿಸಿಕೊಂಡು ಮೋದ ಕಡಲೆ ಮಡ್ಡಿಯನು
ಕರದಿಂದುಣಿಸಿದ ಗುರುವರ ಶೇಖರ                    ||೬||

ಆ ಮಹಾ ಗೋಪಾಲವಿಠ್ಠಲ ತಾಮರಸದಳಗಳ
ಧೀಮಂತರಿಗೆ ಸುಕಾಮಿತವನುಕೊಡುವ
ಆ ಮಹಾಮಹಿಮ                                            ||೭||

Labels: ವಾದಿರಾಜ ಮುನಿಪಾ ಹಯಮುಖ, Vadiraja Munipa Hayamukha, ಗೋಪಾಲದಾಸರು, Gopaladasaru

ಹೊಸಗಣ್ಣು ಎನಗೆ ಹಚ್ಚಲಿಬೇಕು : Hosagannu Enage Hachchalibeku

ಹೊಸಗಣ್ಣು ಎನಗೆ ಹಚ್ಚಲಿಬೇಕು

ಕೀರ್ತನಕಾರರು : ಇಂದಿರೇಶರು

ಹೊಸಗಣ್ಣು ಎನಗೆ ಹಚ್ಚಲಿಬೇಕು ಜಗದಂಬಾ
ವಸುದೇವ ಸುತನ ಕಾಂಬುದಕೆ                            ||ಪ||

ಘಸಣಿಯಾಗುವೆ ಭವ ವಿಷಯ ವಾರುಧಿಯೊಳು
ಶಶಿಮುಖಿಯೆ ಕರುಣದಿ ಕಾಯೆ                             ||ಅ.ಪ||

ಪರರ ಅನ್ನವನುಂಡು ಪರರ ಧನವ ಕೊಂಡು
ಪರಿ ಪರಿಯ ಕ್ಲೇಶಗಳನುಂಡು
ವರಲಕ್ಷ್ಮೀ ನಿನ್ನ ಚಾರು ಚರಣಗಳ
ಮೊರೆಹೊಕ್ಕೆ ಕರುಣದಿ ಕಣ್ಣೆತ್ತಿ ನೋಡೆ                   ||೧||

ಮಂದಹಾಸಿನಿ ಭವಸಿಂಧುವಿನೊಳಗಿಟ್ಟು
ಚಂದವೇ ಎನ್ನ ನೋಡುವುದು
ಕಂದನಂದದಿ ಬಾಲ್ಯದಿಂದ ಸೇರಿದೆ ನಿನ್ನ
ಮಂದರಧರನ ತೋರಮ್ಮ                                ||೨||

ಅಂದಚಂದಗಳೊಲ್ಲೆ ಬಂಧುಬಳಗ ಒಲ್ಲೆ
ಬಂಧನಕೆಲ್ಲ ಕಾರಣವು
ಇಂದಿರೇಶನ ಪಾದದ್ವಂದ್ವವ ತೋರಿ ಹೃ
ನ್ಮಂದಿರದೊಳು ಬಂದು ಬೇಗ                            ||೩||

Labels: ಹೊಸಗಣ್ಣು ಎನಗೆ ಹಚ್ಚಲಿಬೇಕು, Hosagannu Enage Hachchalibeku, ಇಂದಿರೇಶರು, Indiresharu

ರಥವನೇರಿದ ರಾಘವೇಂದ್ರ : Rathavanerida Raghavendra

ರಥವನೇರಿದ ರಾಘವೇಂದ್ರ

ಕೀರ್ತನಕಾರರು : ಗೋಪಾಲದಾಸರು
ರಾಗ : ಮೋಹನ
ತಾಳ : ಆದಿ

ರಥವನೇರಿದ ರಾಘವೇಂದ್ರ ಸದ್ಗುಣಗಣಸಾಂದ್ರಾ         ||ಪ||

ಸತತ ಮಾರ್ಗದಿ ಸಂತತ ಸೇವಿಪರಿಗೆ
ಅತಿ ಹಿತದಲಿ ಮನೋರಥವ ನೀಡುವೆನೆಂದು              ||ಅ.ಪ||

ಚತುರ ದಿಕ್ಕುವಿದಿಕ್ಕುಗಳಲ್ಲಿ ಹರಿವೋ ಜನರಲ್ಲಿ
ಮಿತಿಯಿಲ್ಲದೆ ಬಂದು ಓಲೈಸುತಲಿ ವರಗಳ ಬೇಡುತಲಿ
ನುತಿಸುತ ಪರಿಪರಿ ನತರಾಗಿ ಹರಿಗೆ
ಗತಿಪೇಳದೆ ಸರ್ವಥಾ ನಾ ಬಿಡೆನೆಂದು                       ||೧||

ಅತುಲ ಮಹಿಮಾನೆ ಆ ದಿನದಲ್ಲಿ ದಿತಿವಂಶದಲಿ
ಉತ್ಪತ್ತಿಯಾಗಿ ಉಚಿತದಲ್ಲಿ ಉತ್ತಮ ಮತಿಯಲ್ಲಿ
ಅತಿಶಯವಿರುತಿರೆ ಪಿತನ ಬಾಧೆಗೆ ಮನ್ಮಥ-
ಪಿತನೊಲಿಸಿದೆ ಜಿತ ಕರುಣದಲಿ                                ||೨||

ಪ್ರಥಮ ಪ್ರಹ್ಲಾದ ವ್ಯಾಸಮುನಿಯೆ ಯತಿ ರಾಘವೇಂದ್ರ
ಪ್ರತಿವಾದಿಕದಳಿವನಕರಿಯೆ ಕರ ಮುಗಿವೆನು ದೊರೆಯೆ
ಕ್ಷಿತಿಯೊಳು ಗೋಪಾಲವಿಠಲನ ಸ್ಮರಿಸುತ ವರ
ಮಂತ್ರಾಲಯದೊಳು ಶುಭವೀಯುತ                         ||೩||

Labels: ರಥವನೇರಿದ ರಾಘವೇಂದ್ರ, Rathavanerida Raghavendra, ಗೋಪಾಲದಾಸರು, Gopaladasaru

ಕ್ಷೀರಾಬ್ಧಿ ಕನ್ನಿಕೆ ಶ್ರೀಮಹಾಲಕ್ಷ್ಮಿ : Ksheerabdhi Kannike Srimahalakshmi

ಕ್ಷೀರಾಬ್ಧಿ ಕನ್ನಿಕೆ ಶ್ರೀಮಹಾಲಕ್ಷ್ಮಿ

ಕೀರ್ತನಕಾರರು : ಪುರಂದರದಾಸರು
ರಾಗ : ರಾಗಮಾಲಿಕೆ
ತಾಳ : ಆದಿ

ಕ್ಷೀರಾಬ್ಧಿ ಕನ್ನಿಕೆ ಶ್ರೀಮಹಾಲಕ್ಷ್ಮಿ
ಯಾರಿಗೆ ವಧುವಾಗುವೇ ನೀನು                          ||ಪ||

ಶರಧಿ ಬಂಧನ ರಾಮಚಂದ್ರ ಮೂರ್ತಿಗೋ
ಪರಮಾತ್ಮ ಅನಂತ ಪದ್ಮನಾಭಗೋ
ಸರಸಿಜನಾಭ ಶ್ರೀ ಜನಾರ್ಧನ ಮೂರ್ತಿಗೋ
ಉಭಯಕಾವೇರಿ ರಂಗ ಪಟ್ಟಣದರಸಗೋ            ||೧||

ಚೆಲುವ ಮೂರುತಿ ಬೇಲೂರ ಚೆನ್ನಿಗರಾಯನಿಗೋ
ಗೆಳತಿ ಹೇಳು ಉಡುಪಿ ಶ್ರೀ ಕ್ರಿಷ್ಣರಾಯನಿಗೋ
ಇಳೆಯೊಳು ಪಾಂಡುರಂಗ ವಿಠಲ ರಾಯಗೋ
ನಳಿನಾಕ್ಷಿ ಹೇಳಮ್ಮ ಬದರಿ ನಾರಾಯಣಗೋ         ||೨||

ಮಲಯಜ ಗಂಧೀ ಬಿಂದು ಮಾಧವರಾಯಗೋ
ಸುಲಭ ದೇವರು ಪುರುಷೋತ್ತಮಗೋ
ಫಲದಾಯಕ ನಿತ್ಯ ಮಂಗಳದಾಯಕಗೋ
ಚೆಲುವೆ ನಾಚದೆ ಪೇಳು ಶ್ರೀವೆಂಕಟೇಶಗೋ          ||೩||

ವಾಸವಾರ್ಚಿತ ಕಂಚಿ ವರದರಾಜನಿಗೋ
ಆ ಶ್ರೀಮುಷ್ಣದಲ್ಲಿ ಆದೀವರಾಯನಿಗೋ
ಶೇಷಶಾಯಿಯಾದ ಶ್ರೀಮನ್ ನಾರಾಯಣಗೋ
ಸಾಸಿರ ನಾಮದೊಡೆಯ ಅಳಗಿರಿಶಗೋ              ||೪||

ಶರಣಾಗತ ರಕ್ಷಕ ಸಾರಂಗ ಪಾಣಿಗೋ
ವರಗಳ ನೀಡುವ ಶ್ರೀನಿವಾಸಗೋ
ಕುರುಕುಲಾಂತಕ ರಾಜಗೋಪಾಲ ಮೂರ್ತಿಗೋ
ಸ್ಥಿರವಾಗಿ ಪುರಂದರ ವಿಠ್ಠಲರಾಯನಿಗೋ             ||೫||

Labels: ಕ್ಷೀರಾಬ್ಧಿ ಕನ್ನಿಕೆ ಶ್ರೀಮಹಾಲಕ್ಷ್ಮಿ, Ksheerabdhi Kannike Srimahalakshmi, ಪುರಂದರದಾಸರು, Purandaradasaru

ಬದುಕಿದೆನು ಬದುಕಿದೆನು : Badukidenu Badukidenu

ಬದುಕಿದೆನು ಬದುಕಿದೆನು

ಕೀರ್ತನಕಾರರು : ಪುರಂದರದಾಸರು
ರಾಗ : ಚಾರುಕೇಶಿ
ತಾಳ : ಖಂಡಛಾಪು

ಬದುಕಿದೆನು ಬದುಕಿದೆನು ಭವವೆನಗೆ ಹಿಂಗಿತು
ಪದುಮನಾಭನ ಪಾದದೊಲುಮೆ ಎನಗಾಯಿತು       ||ಪ||

ಮುಕ್ತರಾದರು ಎನ್ನ ನೂರೊಂದು ಕುಲದವರು
ಮುಕ್ತಿ ಮಾರ್ಗಕೆ ಯೋಗ್ಯ ನಾನಾದೆನು
ಮುಕ್ತಿದಾಯಕನ ಭಕ್ತಿಗೆ ಮನವು ನೆಲೆಸಿತು
ವ್ಯಕ್ತವಾಯಿತು ನಾಲಿಗೆಯೊಳು ಹರಿನಾಮ              ||೧||

ಹರಿಯ ತೀರ್ಥ ಪ್ರಸಾದವಿಂದೆನಗೆ ದೊರಕಿತು
ಹರಿಕಥಾಮೃತವೆನ್ನ ಕಿವಿಗೊದಗಿತೋ
ಹರಿದಾಸರು ಎನ್ನ ಬಂಧು ಬಳಗಾದರು
ಹರಿಮುದ್ರೆ ಎನಗಾಭರಣವಾಯಿತು                      ||೨||

ಹಿಂದೆನ್ನ ಸಂತತಿಗೆ ಸಕಲ ಸಾಧನವಾಯಿತು
ಮುಂದೆನ್ನ ಜನ್ಮವು ಸಫಲವಾಯಿತು
ತಂದೆ ಪುರಂದರ ವಿಠಲನೆಂದೆಂಬ ಪರದೈವ
ಬಂದು ಹೃದಯದಲಿ ನೆಲೆಯಾಗಿ ನಿಂತ                ||೩||

Labels: ಬದುಕಿದೆನು ಬದುಕಿದೆನು, Badukidenu Badukidenu, ಪುರಂದರದಾಸರು, Purandaradasaru

ಯಾದವರಾಯ ಬೃಂದಾವನದೊಳು : Yadavaraya Brindavanadolu

ಯಾದವರಾಯ ಬೃಂದಾವನದೊಳು

ಕೀರ್ತನಕಾರರು : ಕನಕದಾಸರು
ರಾಗ : ರಾಗಮಾಲಿಕೆ

ಯಾದವರಾಯ ಬೃಂದಾವನದೊಳು
ವೇಣು ನಾದವ ಮಾಡುತಿರೆ                          ||ಪ||

ರಾಧಾ ಮುಂತಾದ ಗೋಪಿಯರೆಲ್ಲ
ಮಧುಸೂದನ ನಿನ್ನನು ಸೇವಿಸುತಿರೆ
ಸುರರು ಅಂಬರದಿ ಸಂದಣಿಸಿರೆ
ಅಪ್ಸರ ಸ್ತ್ರೀಯರು ಮೈ ಮರೆತಿರೇ ಅನುಪಲ್ಲವಿ  ||೧||

ಕರದಲಿ ಕೊಳಲನು ಊದುತ ಪಾಡುತ
ಸ ರಿ ಗ ಮ ಪ ದ ನಿ ಸ್ವರಗಳ ನುಡಿಸುತ
ಹರಿ ಹರ ಬ್ರಹ್ಮರು ನಲಿದಾಡುತಿರೆ
ತುಂಬುರು ನಾರದರು ಪಾಡುತಿರೆಚರಣ          ||೨||

ಕರುಗಳ ಸಹಿತಲೇ ಗೋಕುಲವೆಲ್ಲ
ಸಿರಿ ಕಾಗಿನೆಲೆಯಾದಿ ಕೇಶವ ರಾಯ
ತರುಗಳ ಸಹಿತಲೇ ವರಗೋಪಾಲಚರಣ        ||೩||

Labels: ಯಾದವರಾಯ ಬೃಂದಾವನದೊಳು, Yadavaraya Brindavanadolu, ಕನಕದಾಸರು, Kanakadasaru

ಪಾಲಿಸೆಮ್ಮ ಮುದ್ದು ಶಾರದೆ : Palisemma Muddu Sharade

ಪಾಲಿಸೆಮ್ಮ ಮುದ್ದು ಶಾರದೆ

ಕೀರ್ತನಕಾರರು : ಪುರಂದರದಾಸರು
ರಾಗ : ಮುಖಾರಿ
ತಾಳ : ಆದಿ

ಪಾಲಿಸೆಮ್ಮ ಮುದ್ದು ಶಾರದೆ
ಎನ್ನ ನಾಲಿಗೆಯಲಿ ನಿಲ್ಲ ಬಾರದೆ                    ||ಪ||

ಲೋಲಲೋಚನೆ ತಾಯೆ
ನಿರುತ ನಂಬಿದೆ ನಿನ್ನ                                  ||ಅ.ಪ||

ಅಕ್ಷರಕ್ಷರ ವಿವೇಕವಾ ನಿನ್ನ ಕುಕ್ಷಿಯೊಳಿರೆ
ಏಳು ಲೋಕವ ಸಾಕ್ಷಾತ್ ರೂಪದಿಂದ
ಒಲಿದು ರಕ್ಷಿಸು ತಾಯೆ                                 ||೧||

ಶೃಂಗಾರಪುರ ನೆಲೆವಾಸಿನೀ ದೇವಿ
ಸಂಗೀತಗಾನ ವಿಲಾಸಿನೀ
ಮಂಗಳಗಾತ್ರೆ ತಾಯೆ ಭಳಿರೆ ಬ್ರಹ್ಮನ ರಾಣಿ    ||೨||

ಸರ್ವಾಲಂಕಾರ ದಯಾಮೂರುತಿ ನಿನ್ನ
ಚರಣವ ಸ್ಮರಿಸುವೆ ಕೀರುತಿ
ಗುರುಮೂರ್ತಿ ಪುರಂದರ ವಿಠಲನ್ನ ಸ್ಮರಿಸುವೆ  ||೩||

Labels: ಪಾಲಿಸೆಮ್ಮ ಮುದ್ದು ಶಾರದೆ, Palisemma Muddu Sharade, ಪುರಂದರದಾಸರು, Purandaradasaru

ಶರಣು ಸಕಲೋದ್ಧಾರ : Sharanu Sakaloddhara

ಶರಣು ಸಕಲೋದ್ಧಾರ

ಕೀರ್ತನಕಾರರು : ಪುರಂದರದಾಸರು

ಶರಣು ಸಕಲೋದ್ಧಾರ ಅಸುರ ಕುಲ ಸಂಹಾರ
ಶರಣು ದಶರಥ ಬಾಲ ಜಾನಕೀಲೋಲ                     ||ಪ||

ಈ ಮುದ್ದು ಈ ಮುಖವು ಈ ತನುವಿನಾ ಕಾಂತಿ
ಈ ಬಿಲ್ಲು ಈ ಬಾಣ ಈ ನಿಂತ ಈ ಭಾವ
ಈ ತಮ್ಮ ಈ ಸೀತೆ ಈ ಬಂಟ ಈ ಭಾಗ್ಯ
ಯಾವ ದೇವರಿಗೆ ಉಂಟು ಮೂರುಲೋಕದೊಳಗೆ       ||೧||

ಉಟ್ಟ ಪೀತಾಂಬಾರವು ಉಡಿಗೆಜ್ಜೆ ಮಾಣಿಕವೂ
ದೊಡ್ಡ ನವರತ್ನದ ಆಭರಣ ಇರಲು
ಕೊಟ್ಟ ಭಾಷೆಗೆ ತಪ್ಪ ನಿಜಭಕ್ತರಿಗೆ ಒಲಿವ
ಸೃಷ್ಟಿಯೊಳಗೆ ಕಾಣೆ ಕೌಸಲ್ಯರಾಮ                         ||೨||

ಪಾಲಿಸಲು ಅಯೋಧ್ಯ ಪಟ್ಟಣದಲ್ಲಿ ಪುರವಾಸ
ಬೇಡಿದ ಇಷ್ಟಾರ್ಥಗಳ ಕೊಡುವೆನೆನುತ
ಭಾವ ಶುದ್ಧಿಯುಳ್ಳ ತನ್ನ ಭಕುತರ ಪೊರೆವ
ಪುರಂದರ ವಿಟ್ಟಲನೆ ಅಯೋಧ್ಯ ರಾಮ                    ||೩||

Labels: ಶರಣು ಸಕಲೋದ್ಧಾರ, Sharanu Sakaloddhara, ಪುರಂದರದಾಸರು, Purandaradasaru

ತೂಗಿರೆ ರಂಗನ ತೂಗಿರೆ ಕೃಷ್ಣನ : Tugire Rangana Tugire Krishnana

ತೂಗಿರೆ ರಂಗನ ತೂಗಿರೆ ಕೃಷ್ಣನ

ಕೀರ್ತನಕಾರರು : ಪುರಂದರದಾಸರು
ರಾಗ : ಶಂಕರಾಭರಣ
ತಾಳ : ಛಾಪು

ತೂಗಿರೆ ರಂಗನ ತೂಗಿರೆ ಕೃಷ್ಣನ
ತೂಗಿರೆ ಅಚ್ಯುತ ಅನಂತನ                      ||ಪ||

ತೂಗಿರೆ ವರಗಿರಿಯಪ್ಪ ತಿಮ್ಮಪ್ಪನ
ತೂಗಿರೆ ಕಾವೇರಿ ರಂಗಯ್ಯನ                   ||ಅ.ಪ||

ನಾಗಲೋಕದಲ್ಲಿ ನಾರಾಯಣ ಮಲಗ್ಯಾನೆ
ನಾಗಕನ್ನಿಕೆಯರು ತೂಗಿರೇ
ನಾಗವೇಣಿಯರು ನೇಣು ಪಿಡಿದುಕೊಂಡು
ಬೇಗನೆ ತೊಟ್ಟಿಲ ತೂಗಿರೆ                        ||೧||

ಇಂದ್ರ ಲೋಕದಲ್ಲುಪೇಂದ್ರ ಮಲಗ್ಯಾನೆ
ಇಂದು ಮುಖಿಯರೆಲ್ಲ ತೂಗಿರೆ
ಇಂದ್ರ ಕನ್ನಿಕೆಯರು ಬಂದು
ಮುಕುಂದನ ತೊಟ್ಟಿಲ ತೂಗಿರೆ                  ||೨||

ಆಲದೆಲೆಯ ಮೇಲೆ ಶ್ರೀಲೋಲ ಮಲಗ್ಯಾನೆ
ನೀಲ ಕುಂತಳೆಯರು ತೂಗಿರೆ
ವ್ಯಾಳ ಶಯನ ಹರಿ ಮಲಗು ಮಲಗು ಎಂದು
ಬಾಲ ಕೃಷ್ಣಯ್ಯನ ತೂಗಿರೆ                        ||೩||

ಸಾಸಿರ ನಾಮದ ಸರ್ವೋತ್ತಮನೆಂದು
ಸೂಸುತ್ತ ತೊಟ್ಟಿಲ ತೂಗಿರೆ
ಲೇಸಾಗಿ ಮಡುವಿನೊಳು ಶೇಷನ ತುಳಿದಿಟ್ಟ
ದೋಷ ವಿದೂರನ ತೂಗಿರೆ                       ||೪||

ಅರಳೆಲೆ ಮಾಗಾಯಿ ಕೊರಳ ಮುತ್ತಿನಹಾರ
ತರಳನ ತೊಟ್ಟಿಲ ತೂಗಿರೇ
ಸಿರಿದೇವಿ ರಮಣನ ಪುರಂದರ ವಿಠಲನೆ
ಕರುಣದಿ ಮಲಗೆಂದು ತೂಗಿರೆ                    ||೫||

Labels: ತೂಗಿರೆ ರಂಗನ ತೂಗಿರೆ ಕೃಷ್ಣನ, Tugire Rangana Tugire Krishnana, ಪುರಂದರದಾಸರು, Purandaradasaru

ರಾಮ ನಾಮ ಪಾಯಸಕ್ಕೆ : Rama Nama Payasakke

ರಾಮ ನಾಮ ಪಾಯಸಕ್ಕೆ

ಕೀರ್ತನಕಾರರು : ಪುರಂದರದಾಸರು
ರಾಗ : ಆನಂದಭೈರವಿ
ತಾಳ : ರೂಪಕ

ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ
ವಿಠಲ ನಾಮ ತುಪ್ಪವ ಕಲಸಿ ಬಾಯ ಚಪ್ಪರಿಸಿರೋ              ||ಪ||

ಒಮ್ಮಾನ ಗೋಧಿಯ ತಂದು ವೈರಾಗ್ಯ ಕಲ್ಲಲಿ ಬೀಸಿ
ಸುಮ್ಮಾನೆ ಸಜ್ಜಿಗೆಯ ತೆಗೆದು ಸಣ್ಣ ಶಾವಿಗೆಯ ಹೊಸೆದು       ||೧||

ಹೃದಯವೆಂಬೊ ಮಡಕೆಯಲಿ ಭಾವವೆಂಬೊ ಎಸರನಿಟ್ಟು
ಬುದ್ಧಿಯಿಂದ ಪಾಕ ಮಾಡಿ ಹರಿವಾಣಕೆ ಬಡಿಸಿಕೊಂಡು          ||೨||

ಆನಂದ ಆನಂದವೆಂಬೊ ತೇಗು ಬಂದಿತು ಕಾಣಿರೊ
ಆನಂದ ಮೂರುತಿ ನಮ್ಮ ಪುರಂದರ ವಿಠಲನ ನೆನೆಯಿರೊ    ||೩||

Labels: ರಾಮ ನಾಮ ಪಾಯಸಕ್ಕೆ, Rama Nama Payasakke, ಪುರಂದರದಾಸರು, Purandaradasaru

ಮೂರುತಿಯನೆ ನಿಲ್ಲಿಸೋ : Murutiyane Nilliso

ಮೂರುತಿಯನೆ ನಿಲ್ಲಿಸೋ

ಕೀರ್ತನಕಾರರು : ಪುರಂದರದಾಸರು
ರಾಗ : ಖಮಾಚ್
ತಾಳ : ರೂಪಕ

ಮೂರುತಿಯನೆ ನಿಲ್ಲಿಸೋ ಮಾಧವ ನಿನ್ನ          ||ಪ||

ಎಳೆ ತುಳಸಿಯ ವನಮಾಲೆಯು ಕೊರಳೊಳು
ಹೊಳೆವ ಪೀತಾಂಬರದಿಂದಲೊಪ್ಪುವ ನಿನ್ನ        ||೧||

ಮುತ್ತಿನ ಸರ ನವರತ್ನದುಂಗುರವಿಟ್ಟು
ಮತ್ತೆ ಶ್ರೀ ಲಕುಮಿಯ ಉರದೊಳೊಪ್ಪುವ ನಿನ್ನ   ||೨||

ಭಕ್ತರ ಕಲ್ಪತರು ಭಾಗ್ಯದ ಸುರಧೇನು
ಮುಕ್ತಿದಾಯಕ ಸಿರಿ ಪುರಂದರ ವಿಠಲ ನಿನ್ನ        ||೩||

Labels: ಮೂರುತಿಯನೆ ನಿಲ್ಲಿಸೋ, Murutiyane Nilliso, ಪುರಂದರದಾಸರು, Purandaradasaru

ಜಯತು ಕೋದಂಡರಾಮ ಜಯತು : Jyatu Kodandarama Jayatu

ಜಯತು ಕೋದಂಡರಾಮ ಜಯತು

ಕೀರ್ತನಕಾರರು : ಪುರಂದರದಾಸರು
ರಾಗ : ಶಹನ
ತಾಳ : ಖಂಡಛಾಪು

ಜಯತು ಕೋದಂಡರಾಮ ಜಯತು ದಶರಥರಾಮ
ಜಯತು ಸೀತಾರಾಮ ಜಯತು ರಘುರಾಮ ಜಯತು ಜಯತು     ||ಪ||

ತಮದೈತ್ಯನನು ಮಡುಹಿ ಮಂದರಾಚಲ ನೆಗಹಿ
ಪ್ರೀತಿಯಿಂದಲಿ ತಂದು ಸಕಲ ಭೂತಳವ
ಕ್ಷೇತ್ರದಿಂದುದ್ಭವಿಸಿ ಮೊರೆಯಿಡುವ ಬಾಲಕನ
ಭೀತಿಯನು ಬಿಡಿಸಿ ನೆರೆಕಾಯ್ದ ರಘುರಾಮ                              ||೧||

ಬಲಿಯೊಳ್ ದಾನವ ಮಾಡಿ ನೆಲನ ಈರಡಿ ಮಾಡಿ
ಛಲದಿಂದ ಕ್ಷತ್ರಿಯರ ಕುಲವ ಹೋಗಾಡಿ
ಲಲನೆಗೋಸುಗ ಬಂದ ನೆವದಿಂದ ರಾವಣನ
ತಲೆಗಳನು ಚೆಂಡಾದಿ ಮೆರೆದ ರಘುರಾಮ                              ||೨||

ವಸುದೇವಸುತನೆನಿಸಿ ವನಿತೆಯರ ವ್ರತಗೆಡಿಸಿ
ಎಸೆವ ತುರಗವನೇರಿ ಮಲ್ಲರನು ಸವರಿ
ವಸುಧೆಯೊಳು ಪುರಂದರವಿಠಲ ನೀ ಪಾಲಿಸೈ
ಬಿಸಜಾಕ್ಷಯೋಧ್ಯಪುರವಾಸ ರಘುರಾಮ                               ||೩||

Labels: ಜಯತು ಕೋದಂಡರಾಮ ಜಯತು, Jyatu Kodandarama Jayatu,
ಪುರಂದರದಾಸರು, Purandaradasaru

ಆವನಾವನು ಕಾಯ್ದ ಅವನಿಯೊಳಗೆ : Avanavanu Kayda Avaniyolage

ಆವನಾವನು ಕಾಯ್ದ ಅವನಿಯೊಳಗೆ

ಕೀರ್ತನಕಾರರು : ಪುರಂದರದಾಸರು

ಆವನಾವನು ಕಾಯ್ದ ಅವನಿಯೊಳಗೆ
ದೇವ ದೇವೇಶ ಶ್ರೀ ಹರಿಯಲ್ಲದೆ                    ||ಪ||

ಆವ ತಂದೆಯು ಸಲಹಿದನು ಪ್ರಹ್ಲಾದನ
ಆವ ತಾಯಿ ಕಾಯ್ದೆಳು ಧ್ರುವರಾಯನ
ಆವ ಮಗ ಸಲಹಿದನು ಆ ಉಗ್ರ ಸೇನನ
ಜೀವಂಗೆ ಪೋಷಕನು ಶ್ರೀ ಹರಿಯಲ್ಲದೆ          ||೧||

ಆವ ಬಾಂಧವರು ಸಲಹಿದರು ಆ ಗಜರಾಜನ
ಆವ ಪತಿ ಕಾಯ್ದ ದ್ರೌಪದಿಯ ಮಾನ
ಆವ ಸೋದರ ಸಲಹಿದನು ಆ ವಿಭೀಷಣನ
ಜೀವರಿಗೆ ದಾತೃ ಶ್ರೀ ಹರಿಯಲ್ಲದೇ               ||೨||

ಆವನಾಧಾರ ಅಡವಿಯೊಳಿಪ್ಪ ಮೃಗಗಳಿಗೆ
ಆವ ರಕ್ಷಕನು ಪಶು ಜಾತಿಗಳಿಗೆ
ಆವ ಪೋಷಕನು ಗರ್ಭದಲ್ಲಿಪ್ಪ ಶಿಶುವಿಗೆ
ದೇವ ಸಿರಿ ಪುರಂದರವಿಠಲನಲ್ಲದಲೆ             ||೩||

Labels: ಆವನಾವನು ಕಾಯ್ದ ಅವನಿಯೊಳಗೆ, Avanavanu Kayda Avaniyolage,
ಪುರಂದರದಾಸರು, Purandaradasaru

ಯತಿಕುಲಮುಕುಟ ಶ್ರೀಜಯತೀರ್ಥ : Yatikulamukuta Sri Jayathiratha

ಯತಿಕುಲಮುಕುಟ ಶ್ರೀಜಯತೀರ್ಥ

ಕೀರ್ತನಕಾರರು : ಜಯತೀರ್ಥರು

ಯತಿಕುಲಮುಕುಟ ಶ್ರೀಜಯತೀರ್ಥ ಸದ್ಗುಣಭರಿತ             ||ಪ||

ಅತಿಸದ್ಭಕುತಿಲಿ ನುತಿಪ ಜನರ ಸಂ
ತತ ಪಾಲಿಸುತಲಿ ಪೃಥಿವಿಲಿ ಮೆರೆವ                               ||ಅ.ಪ||

ಶ್ರೀಮಧ್ವಮತವಾರಿಧಿ ನಿಜಸೋಮ ಅಗಣಿತಸನ್ಮಹಿಮ
ಆ ಮಹಾ ಭಕ್ತಾರ್ತಿಹ ನಿಷ್ಕಾಮ ಮುನಿಸಾರ್ವಭೌಮ
ರಾಮಪದಾರ್ಚಕ ಈ ಮಹೀಸುರರನು
ಪ್ರೇಮದಿ ಪಾಲಿಪ ಕಾಮಿತಫಲದ                                   ||೧||

ಮಧ್ವಮುನಿಗಳ ಗ್ರಂಥಕೆ ವ್ಯಾಖ್ಯಾನ ರಚಿಸಿದ ಸುಜ್ಞಾನ
ವಿದ್ಯಾರಣ್ಯನ ಸದ್ವಾದದಿ ನಿಧನ ಗೈಸಿದ ಸುಖಸದನ
ಅದ್ವೈತಾಟವಿದಗ್ಧ ಕೃತಾನಲ
ಸದ್ವೈಷ್ಣವಹೃತ್ಪದ್ಮಸುನಿಲಯ                                        ||೨||

ಲಲಿತ ಮಂಗಳವೇಡಿಸ್ಥ ರಘುನಾಥ ವನಿತಾಸಂಜಾತ
ನಿಲಯ ಮಳಖೇಡ ಕಾಗಿಣಿ ತೀರ ವಾಸ ತಾಪತ್ರಯದೂರ
ನಲಿವ ವರದೇಶವಿಠಲನ ಒಲುಮೆಯ
ಇಳೆಯೊಳು ಬೋಧಿಪ ಅಲವಬೋಧಾಪ್ತಾ                       ||೩||

Labels: ಯತಿಕುಲಮುಕುಟ ಶ್ರೀಜಯತೀರ್ಥ, Yatikulamukuta Sri Jayathiratha, ಜಯತೀರ್ಥರು, Jayateertharu

ವರವ ಕೊಡು ಎನಗೆ ವಾಗ್ದೇವಿ : Varava Kodu Enage Vagdevi

ವರವ ಕೊಡು ಎನಗೆ ವಾಗ್ದೇವಿ

ಕೀರ್ತನಕಾರರು : ಕನಕದಾಸರು
ರಾಘ : ಕಲ್ಯಾಣಿ
ತಾಳ : ಝಂಪೆ

ವರವ ಕೊಡು ಎನಗೆ ವಾಗ್ದೇವಿ ನಿನ್ನ
ಚರಣಕಮಲಂಗಳನ ದಯಮಾಡು ದೇವಿ            ||ಪ||

ಶಶಿ ಮುಖದ ನಸುನಗೆಯ ಬಾಲೆ
ಎಸೆವ ಕರ್ಣದ ಮುತ್ತಿನೋಲೆ
ನಸುನಗುವ ಸುಲಿಪಲ್ಲ ಗುಣಶೀಲೆ ದೇವಿ
ಬಿಸಜಾಕ್ಷಿ ಎನ್ನ ಹೃದಯದೊಳು ನಿಂದು             ||೧||

ಇಂಪು ಸೊಂಪಿನ ಚಂದ್ರಬಿಂಬೆ
ಕೆಂಪು ತುಟಿಗಳ ನಾಸಿಕದ ರಂಭೆ
ಜೋಂಪು ಮದನನ ಪೂರ್ಣಶಕ್ತಿ ಗೊಂಬೆ ಒಳ್ಳೆ
ಸಂಪಿಗೆಯ ಮುಡಿಗಿಟ್ಟು ರಾಜಿಪ ಶಾರದಾಂಬೆ     ||೨||

ರವಿಕೋಟಿ ತೇಜಪ್ರಕಾಶೇ ಮಹಾ
ಕವಿಜನರ ಹ್ರಿತ್ಕಮಲ ವಾಸೇ
ಅವಿರಳಪುರಿಯ ಸಿರಿಕಾಗಿನೆಲೆಯಾದಿ ಕೇ
ಶವನ ಸುತನಿಗೆ ಸನ್ನುತ ರಾಣಿವಾಸೆ                 ||೩||

Labels: ವರವ ಕೊಡು ಎನಗೆ ವಾಗ್ದೇವಿ, Varava Kodu Enage Vagdevi, ಕನಕದಾಸರು, Kanakadasaru

ಲಾಲಿ ಲಾಲಿ ನಮ್ಮ ಹರಿಯೆ ಲಾಲಿ : Lali Lalli Namma Hariye Lali

ಲಾಲಿ ಲಾಲಿ ನಮ್ಮ ಹರಿಯೆ ಲಾಲಿ

ಕೀರ್ತನಕಾರರು : ಪುರಂದರದಾಸರು

ಲಾಲಿ ಲಾಲಿ ನಮ್ಮ ಹರಿಯೆ ಲಾಲಿ                                  ||ಪ||

ಸುರ ನರರಿಗೆ ಒಲಿದು ಕರುಣವ ಬೀರುವ ದೊರೆಯೆ ಲಾಲಿ    ||ಅ.ಪ||

ರಾಮ ಲಾಲಿ ಮೇಘಶ್ಯಾಮ ಲಾಲಿ
ರಮಾ ಮನೋಹರ ಅಮಿತ ಸದ್ಗುಣ ಧಾಮ ಲಾಲಿ              ||೧||

ಕೃಷ್ಣ ಲಾಲಿ ಸರ್ವೋತ್ಕೃಷ್ಟ ಲಾಲಿ
ದುಷ್ಟರ ಶಿಕ್ಷಿಸಿ ಶಿಷ್ಟರ ಪೊರೆವ ಸಂತುಷ್ಟ ಲಾಲಿ                   ||೨||

ರಂಗ ಲಾಲಿ ಮಂಗಳಾಂಗ ಲಾಲಿ
ಗಂಗೆಯ ಪಡೆದ ತುಂಗ ಮಹಿಮ ನರಸಿಂಗ ಲಾಲಿ              ||೩||

ನಂದ ಲಾಲಿ ಗೋಪಿ ಕಂದ ಲಾಲಿ
ಮಂದರ ಗಿರಿಧರ ಮಧುಸೂದನ ಮುಕುಂದ ಲಾಲಿ             ||೪||

ಶೂರ ಲಾಲಿ ರಣಧೀರ ಲಾಲಿ
ಮಾರನಯ್ಯ ನಮ್ಮ ವರ ಪುರಂದರವಿಠಲ ಲಾಲಿ               ||೫||

Labels: ಲಾಲಿ ಲಾಲಿ ನಮ್ಮ ಹರಿಯೆ ಲಾಲಿ, Lali Lalli Namma Hariye Lali,
ಪುರಂದರದಾಸರು, Purandaradasaru

ಹರಿ ಕುಣಿದಾ ನಮ್ಮ ಹರಿ ಕುಣಿದ : Hari Kunida Namma Hari Kunida

ಹರಿ ಕುಣಿದಾ ನಮ್ಮ ಹರಿ ಕುಣಿದ

ಕೀರ್ತನಕಾರರು : ಪುರಂದರದಾಸರು
ರಾಗ : ಬೇಹಾಗ್
ತಾಳ : ಆದಿ

ಹರಿ ಕುಣಿದಾ ನಮ್ಮ ಹರಿ ಕುಣಿದ                 ||ಪ||

ಅರಳೆಲೆಮಾಗಾಯಿ ಕೊರಳ ಮುತ್ತಿನ ಸರ
ತರಳೆಯರೊಡಗೂಡಿ ಹರಿ ಕುಣಿದ               ||೧||

ಅಂದುಗೆ ಅರಳೆಲೆ ಬಿಂದುಲ್ಲಿ ಬಾಪುರಿ
ಚೆಂದದಿ ನಲಿಯುತ ಹರಿ ಕುಣಿದ                  ||೨||

ಅಕಳಂಕಚರಿತ ಮಕರಕುಂಡಲಧರ
ಸಕಲರ ಪಾಲಿಪ ಹರಿ ಕುಣಿದ                     ||೩||

ಉಟ್ಟ ಪಟ್ಟೆಯ ದಟ್ಟಿ ಇಟ್ಟ ಕಾಂಚಿಯ ಧಾಮ
ದಿಟ್ಟ ಮಲ್ಲರ ಗಂಡ ಹರಿ ಕುಣಿದ                  ||೪||

ಪರಮಭಾಗವತರ ಕೇರಿಯೊಳಾಡುವ
ಪುರಂದರವಿಠಲ ಹರಿ ಕುಣಿದ                     ||೫||

Labels: ಹರಿ ಕುಣಿದಾ ನಮ್ಮ ಹರಿ ಕುಣಿದ, Hari Kunida Namma Hari Kunida, ಪುರಂದರದಾಸರು, Purandaradasaru

ಜಯ ಮಂಗಳಂ ನಿತ್ಯ : Jaya Mangalam Nitya Shubha Mangalam

ಜಯ ಮಂಗಳಂ ನಿತ್ಯ ಶುಭ ಮಂಗಳಂ

ಕೀರ್ತನಕಾರರು : ಪುರಂದರದಾಸರು
 

ಜಯ ಮಂಗಳಂ ನಿತ್ಯ ಶುಭ ಮಂಗಳಂ    ||ಪ||

ಮುಕುಟಕ್ಕೆ ಮಂಗಳ ಮತ್ಸ್ಯವತಾರಗೆ
ಮುಖಕ್ಕೆ ಮಂಗಳ ಮುದ್ದು ಕೂರ್ಮಗೆ
ಸುಕಂಠಕೆ ಮಂಗಳ ಸೂಕರ ರೂಪಗೆ
ನಖಕ್ಕೆ ಮಂಗಳ ನರಸಿಂಹಗೆ                  ||೧||

ವಕ್ಷಕ್ಕೆ ಮಂಗಳ ವಟು ವಾಮನಗೆ
ಪಕ್ಷಕ್ಕೆ ಮಂಗಳ ಪರಶುರಾಮಗೆ
ಕಕ್ಷಕ್ಕೆ ಮಂಗಳ ಕಾಕುತ್ಸ್ಥರಾಮಗೆ
ಕುಕ್ಷಿಗೆ ಮಂಗಳ ಶ್ರೀಕೃಷ್ಣಗೆ                     ||೨||

ಊರುಗಳಿಗೆ ಮಂಗಳ ಉತ್ತಮಬೌದ್ಧಗೆ
ಚರಣಕ್ಕೆ ಮಂಗಳ ಚೆಲುವ ಕಲ್ಕಿಗೆ
ಪರಿಪರಿ ರೂಪಗೆ ಪರಮಾನಂದಗೆ
ಪುರಂದರವಿಠಲಗೆ ಜಯಮಂಗಳಂ         ||೩||

Labels: ಜಯ ಮಂಗಳಂ ನಿತ್ಯ, Jaya Mangalam Nitya Shubha Mangalam, ಪುರಂದರದಾಸರು, Purandaradasaru

ಎಂಥಾ ಬಲವಂತನೊ : Entha Balavantano

ಎಂಥಾ ಬಲವಂತನೊ ಕುಂತಿಯ ಸುಜಾತನೊ

ಕೀರ್ತನಕಾರರು : ಪುರಂದರದಾಸರು
ರಾಗ : ಶಹನ
ತಾಳ : ಆದಿ

ಎಂಥಾ ಬಲವಂತನೊ ಕುಂತಿಯ ಸುಜಾತನೊ                 ||ಪ||

ಭಾರತಿಗೆ ಕಾಂತನೊ ನಿತ್ಯ ಶ್ರೀಮಂತನೊ                      ||ಅ.ಪ||

ರಾಮಚಂದ್ರನ ಪ್ರಾಣನೊ ಅಸುರಹೃದಯಬಾಣನೊ
ಖಳರ ಗಂಟಲಗಾಣನೊ ಜಗದೊಳಗೆ ಪ್ರವೀಣನೊ             ||೧||

ಕುಂತಿಯ ಕಂದನೊ ಸೌಗಂಧಿಕವ ತಂದನೊ
ಕುರುಕ್ಷೇತ್ರಕೆ ಬಂದನೊ ಕೌರವರ ಕೊಂದನೊ                  ||೨||

ಭಂಡಿ ಅನ್ನವನುಂಡನೊ ಬಕನ ಪ್ರಾಣವ ಕೊಂಡನೊ
ಭೀಮ ಪ್ರಚಂಡನೊ ದ್ರೌಪದಿಗೆ ಗಂಡನೊ                     ||೩||

ವೈಷ್ಣವಾಗ್ರಗಣ್ಯನೊ ಸಂಚಿತಾಗ್ರಪುಣ್ಯನೊ
ದೇವವರೇಣ್ಯನೊ ದೇವಶರಣ್ಯನೊ                           ||೪||

ಮಧ್ವಶಾಸ್ತ್ರವ ರಚಿಸಿದನೊ ಸದ್ವೈಷ್ಣವರ ಸಲಹಿದನೊ
ಉಡುಪಿಲಿ ಕೃಷ್ಣನ ನಿಲಿಸಿದನೊ ಪುರಂದರವಿಠಲಗೆ ದಾಸನೊ   ||೫||

Labels: ಎಂಥಾ ಬಲವಂತನೊ, Entha Balavantano, ಪುರಂದರದಾಸರು, Purandaradasaru

ಕಲ್ಯಾಣಂ ತುಳಸಿ ಕಲ್ಯಾಣಂ : Kalyanam Tulasi Kalyanam

ಕಲ್ಯಾಣಂ ತುಳಸಿ ಕಲ್ಯಾಣಂ 

ಕೀರ್ತನಕಾರರು : ಪುರಂದರದಾಸರು

ಕಲ್ಯಾಣಂ ತುಳಸಿ ಕಲ್ಯಾಣಂ                      ||ಪ||

ಕಲ್ಯಾಣವೇ ನಮ್ಮ ಕೃಷ್ಣ ಶ್ರೀತುಳಸಿಗೆ
ಬಲ್ಲಿದ ಶ್ರೀ ವಾಸುದೇವನಿಗೆ                       ||ಅ.ಪ||

ಅಂಗಳದೊಳಗೆಲ್ಲ ತುಳಸಿಯ ವನಮಾಡಿ
ಶೃಂಗಾರವ ಮಾಡಿ ಶೀಘ್ರದಿಂದ
ಕಂಗಳ ಪಾಪವ ಪರಿಹರಿಸುವ
ಮುದ್ದುರಂಗ ಬಂದಲ್ಲಿ ತಾ ನೆಲೆಸಿದನು          ||೧||

ಮಿಂದು ಮಡಿಯನುಟ್ಟು ಸಂದೇಹವ ಬಿಟ್ಟು
ತಂದ ಶ್ರೀಗಂಧಾಕ್ಷತೆಗಳಿಂದ
ಸಿಂಧುಶಯನನ ವೃಂದಾವನದಿ ಪೂಜಿಸೆ
ಕುಂದದ ಭಾಗ್ಯವ ಕೊಡುತಿಹಳು                 ||೨||

ಭಕ್ಷ್ಯ ಭೋಜ್ಯಂಗಳ ನೈವೇದ್ಯವನಿತ್ತು
ಲಕ್ಷ ಬತ್ತಿಯ ದೀಪವ ಹಚ್ಚಿ
ಅಧೋಕ್ಷಜ ಸಹಿತ ವೃಂದಾವನ ಪೂಜಿಸೆ
ಸಾಕ್ಷಾತ್ ಮೋಕ್ಷವ ಕೊಡುತಿಹಳು              ||೩||

ಉತ್ಥಾನ ದ್ವಾದಶಿ ದಿವಸದಿಂದಲಿ ಕೃಷ್ಣ
ಉತ್ತಮ ತುಳಸಿಗೆ ವಿವಾಹವ
ಚಿತ್ತನಿರ್ಮಲರಾಗಿ ಮಾಡಿದವರಿಗೆ
ಉತ್ತಮ ಗತಿ ಈವ ಪುರಂದರವಿಠಲ           ||೪||

Labels: ಕಲ್ಯಾಣಂ ತುಳಸಿ ಕಲ್ಯಾಣಂ, Kalyanam Tulasi Kalyanam, ಪುರಂದರದಾಸರು, Purandaradasaru

ಹನುಮ ನಮ್ಮ ತಾಯಿ ತಂದೆ : Hanuma Namma Tayi Tande

ಹನುಮ ನಮ್ಮ ತಾಯಿ ತಂದೆ

ಕೀರ್ತನಕಾರರು : ಪುರಂದರದಾಸರು

ಹನುಮ ನಮ್ಮ ತಾಯಿ ತಂದೆ                                    ||ಪ||

ಭೀಮ ನಮ್ಮ ಬಂಧು ಬಳಗ
ಆನಂದ ತೀರ್ಥರೆ ನಮ್ಮ ಗತಿ ಗೋತ್ರವಯ್ಯ                 ||ಅ.ಪ||

ತಾಯಿತಂದೆ ಹಸುಳೆಗಾಗಿ ಸಹಾಯ ಮಾಡಿ ಸಾಕುವಂತೆ
ಆಯಾಸವಿಲ್ಲದೆ ಸಂಜೀವನವ ತಂದೆ
ಗಾಯಗೊಂಡ ಕಪಿಗಳನು ಸಾಯದಂತೆ ಪೊರೆದ
ರಘು ರಾಯನಂಘ್ರಿಗಳೇ ಸಾಕ್ಷಿ ತ್ರೇತಾಯುಗದಿ             ||೧||

ಬಂಧುಬಳಗದಂತೆ ಆಪದ್ಭಾಂಧವನಾಗಿ ಪಾರ್ಥನಿಗೆ
ಬಂದ ಬಂದ ದುರಿತಗಳ ಪರಿಹರಿಸಿ
ಅಂಧಕಜಾತಕರ ಕೊಂದು ನಂದ ಕಂದಾರ್ಪನೆಂದು
ಗೋವಿಂದನಂಘ್ರಿಗಳೇ ಸಾಕ್ಷಿ ದ್ವಾಪರ ಯುಗದಿ             ||೨||

ಗತಿಗೋತ್ರರಂತೆ ಸಾಧುತತಿಗಳಿಗೆ ಮತಿಯ ತೋರಿ
ಮತಿಗೆಟ್ಟ ಇಪ್ಪತ್ತೊಂದು ಮತವ ಖಂಡಿಸಿ
ಗತಿಗೆಟ್ಟ ಸದ್ವೈಷ್ಣವರಿಗೆ ಸದ್ಗತಿಯ ತೋರಿದ ಪರಮಾತ್ಮ
ಗತಿ ಪುರಂದರವಿಠಲನೆ ಸಾಕ್ಷಿ ಕಲಿಯುಗದಲಿ                ||೩||

Labels: ಹನುಮ ನಮ್ಮ ತಾಯಿ ತಂದೆ, Hanuma Namma Tayi Tande, ಪುರಂದರದಾಸರು, Purandaradasaru

ಜಗದೋದ್ಧಾರನ ಆಡಿಸಿದಳೆಶೋದಾ : Jagadoddharana Adisidaleshodhe

ಜಗದೋದ್ಧಾರನ ಆಡಿಸಿದಳೆಶೋದಾ

ಕೀರ್ತನಕಾರರು : ಪುರಂದರದಾಸರು 
ರಾಗ : ಕಾಪಿ
ತಾಳ : ಕಾನಡ

ಜಗದೋದ್ಧಾರನ ಆಡಿಸಿದಳೆಶೋದಾ                ||ಪ||

ಜಗದೋದ್ಧಾರನ ಮಗನೆಂದು ತಿಳಿಯುತ
ಸುಗುಣಾಂತ ರಂಗನ ಆಡಿಸಿದಳೆಶೋದೆ            ||ಅ.ಪ||

ನಿಗಮಕೆ ಸಿಲುಕದ ಅಗಣಿತ ಮಹಿಮನ
ಮಗುಗಳ ಮಾಣಿಕ್ಯನ ಆಡಿಸಿದಳೆ ಯಶೋದೆ      ||೧||

ಅಣೋರಣೀಯನ ಮಹತೋ ಮಹಿಮನ
ಅಪ್ರಮೇಯನ ಆಡಿಸಿದಳೆಶೋದಾ                   ||೨||

ಪರಮ ಪುರುಷನ ಪರವಾಸುದೇವನ
ಪುರಂದರ ವಿಠಲನ ಆಡಿಸಿದಳೆಶೋದಾ            ||೩||

Labels: ಜಗದೋದ್ಧಾರನ ಆಡಿಸಿದಳೆಶೋದಾ, Jagadoddharana Adisidaleshodhe, ಪುರಂದರದಾಸರು, Purandaradasaru

ಎನಗೂ ಆಣೆ ರಂಗ : Enagu Ane Ranga

ಎನಗೂ ಆಣೆ ರಂಗ ನಿನಗೂ ಆಣೆ

ಕೀರ್ತನಕಾರರು : ಪುರಂದರದಾಸರು

ರಾಗ : ಶಂಕರಾಭರಣ
ತಾಳ : ತ್ರಿವಿಡೆ

ಎನಗೂ ಆಣೆ ರಂಗ ನಿನಗೂ ಆಣೆ                                 ||ಪ||

ಎನಗೂ ನಿನಗೂ ಇಬ್ಬರಿಗೂ ಭಕ್ತರಾಣೆ                          ||ಅ.ಪ||

ನಿನ್ನ ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ ರಂಗ
ಎನ್ನ ನೀ ಕೈ ಬಿಟ್ಟು ಪೋದರೆ ನಿನಗೆ ಆಣೆ                       ||೧||

ತನುಮನಧನದಲಿ ವಂಚಕನಾದರೆ ನಿನಗೆ ಆಣೆ ರಂಗ
ಮನಸು ನಿನ್ನಲಿ ನಿಲಿಸದಿದ್ದರೆ ನಿನಗೆ ಆಣೆ                      ||೨||

ಕಾಕು ಮನುಜರ ಸಂಗವ ಮಾಡದಿದ್ದರೆ ಎನಗೆ ಆಣೆ ರಂಗ
ಲೌಕಿಕವ ಬಿಡಿಸದಿದ್ದರೆ ನಿನಗೆ ಆಣೆ                               ||೩||

ಶಿಷ್ಟರ ಸಂಗ ಮಾಡದಿದ್ದರೆ ಎನಗೆ ಆಣೆ ರಂಗ
ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆ                      ||೪||

ಹರಿ ನಿನ್ನಾಶ್ರಾಯ ಮಾಡದಿದ್ದರೆ ಎನಗೆ ಆಣೆ ರಂಗ
ಪುರಂದರವಿಠಲ ನೀನೊಲಿಯದಿದ್ದರೆ ನಿನಗೆ ಆಣೆ             ||೫||

Labels: ಎನಗೂ ಆಣೆ ರಂಗ, Enagu Ane Ranga, ಪುರಂದರದಾಸರು, Purandaradasaru

ಆಡಿದನೋ ರಂಗ ಅದ್ಭುತದಿಂದಲಿ : Adidano Ranga Adbhutadindali

ಆಡಿದನೋ ರಂಗ ಅದ್ಭುತದಿಂದಲಿ

ಕೀರ್ತನಕಾರರು : ಪುರಂದರದಾಸರು
ರಾಗ :  ಅರಭಿ
ತಾಳ : ಆದಿ

ಆಡಿದನೋ ರಂಗ ಅದ್ಭುತದಿಂದಲಿ
ಕಾಳಿಂಗನ ಫಣೆಯಲಿ                                      ||ಪ||

ಪಾಡಿದವರಿಗೆ ಬೇಡಿದ ವರಗಳ
ನೀಡುತಲಿ ದಯ ಮಾಡುತಲಿ
ನಲಿದಾಡುತಲಿ ಬೆಣ್ಣೆ ಬೇಡುತಲಿ ಕೃಷ್ಣ                 ||ಅ.ಪ||

ಅಂಬುರುಹೋದ್ಭವ ಅಖಿಳ ಸುರರು ಕೂಡಿ
ಅಂಬರದಲಿ ನಿಂತು ಅವರ ಸ್ತುತಿಸೆ
ರಂಭೆ ಊರ್ವಶಿ ರಮಣಿಯರೆಲ್ಲರು
ಚಂದದಿಂ ಭರತನಾಟ್ಯವ ನಟಿಸೆ
ಝಂತಟ ತಕಧಿಮಿ ತಧಿಗಿಣಿ ತೋಂ ಎಂದು
ಝಂಪೆ ತಾಳದಿ ತುಂಬುರುನೊಪ್ಪಿಸೆ
ಧಾ ಮ ಪ ಧ ಸ ರೀ ಎಂದು ಧ್ವನಿಯಿಂದ ನಾರದ
ತುಂಬುರು ಗಾನವ ಮಾಡಲು ನಂದಿಯು ಮದ್ದಲೆ
ಚೆಂದದಿ ಹಾಕಲು                                              ||೧||

ಫಣವ ಮೆಟ್ಟಿ ಬಾಲವ ಕೈಯಲಿ ಪಿಡಿದು
ಫಳಫಳಿಸುತ್ತ ನಾಟ್ಯವನಾಡೆ
ಚಂದ್ರಮಂಡಲದಂತೆ ಪೊಳೆಯುವ
ಮುಖದೊಳು ಚಲಿಸುವ ನೀಲಕೇಶಗಳಾಡೆ
ಕಾಲಲಂದುಗೆ ಗೆಜ್ಜೆ ಘಲು ಘಲು ಘಲುರೆನುತ
ಉಡಿಗೆಜ್ಜೆ ಘಂಟೆಗಳಾಡೆ
ದುಷ್ಟ ಕಾಳಿಂಗನ ಮೆಟ್ಟಿ ಭರದಿಂದ
ಪುಟ್ಟ ಪಾದವ ಇಟ್ಟು ಶ್ರೀ ಕೃಷ್ಣನು
ಮೆಟ್ಟಿದನು ತಕ ಧಿಮಿ ತಧಿಕೆನುತ                         ||೨||

ಸುರರು ಪುಷ್ಪದ ವೃಷ್ಟಿಯ ಕರೆಯಲು
ಸುದತಿಯರೆಲ್ಲರು ಪಾಡಲು
ನಾಗಕನ್ನಿಕೆಯರು ನಾಥನ ಬೇಡಲು
ನಾನಾ ವಿಧದಿ ಸ್ತುತಿ ಮಾಡಲು
ರಕ್ಕಸರೆಲ್ಲರು ಕಕ್ಕಸವನೆ ಕಂಡು
ದಿಕ್ಕು ದಿಕ್ಕುಗಳಿಗೆ ಓಡಲು
ಚಿಕ್ಕವನಿವನಲ್ಲ ಪುರಂದರವಿಠ್ಠಲ
ವೆಂಕಟರಮಣ ಬೇಗ ಯಶೋದೆ
ಬಿಂಕದೊಳೆತ್ತಿ ಮುದ್ದಾಡೆ ಶ್ರೀ ಕೃಷ್ಣನ                   ||೩||

Labels: ಆಡಿದನೋ ರಂಗ ಅದ್ಭುತದಿಂದಲಿ , Adidano Ranga Adbhutadindali, ಪುರಂದರದಾಸರು, Purandaradasaru

ಅರವಿಂದಾಲಯೇ ತಾಯೇ ಶರಣು : Aravindalaye Taye Sharanu

ಅರವಿಂದಾಲಯೇ ತಾಯೇ ಶರಣು

ಕೀರ್ತನಕಾರರು : ಪುರಂದರದಾಸರು
ರಾಗ :  ಕೇದಾರಗೌಳ
ತಾಳ : ತ್ರಿಪುಟ

ಅರವಿಂದಾಲಯೇ ತಾಯೇ
ಶರಣು ಹೊಕ್ಕೆನು ಕಾಯೇ
ಸಿರಿ ರಮಣನ ಪ್ರಿಯೇ ಜಗನ್ಮಾತೇ                   ||ಪ||

ಕಮಲ ಸುಗಂಧಿಯೇ ಕಮಲದಳ ನೇತ್ರೆಯೆ
ಕಮಲವಿಮಲ ಶೋಭಿತೇ
ಕಮನೀಯ ಹಸ್ತಪಾದ ಕಮಲವಿರಾಜಿತೇ
ಕಮಲೇ ಕಾಯೇ ಎನ್ನನು                               ||೧||

ನಿನ್ನ ಕರುಣ ಕಟಾಕ್ಷ ವಿಕ್ಷಣದಿಂದಲಿ
ತನುಮನಗಳನಿತ್ತೆ ಧನ್ಯ ವಿರಾಜಿತೇ
ಅಜಭಾವಾದಿಗಳ ಪ್ರಸನ್ನೇ ಕಾಯೇ ಎನ್ನನು      ||೨||

ಹರಿ ನಿನ್ನ ಉರದಲ್ಲಿ ಧರಿಸಿದನೆಂಬಂತ
ಕರುವದಿ ಮರೆಯದಿರೆ
ನಿರತ ನಿನ್ನಯ ಮುದ್ದು
ಪುರಂದರವಿಠಲನ ಚರಣಕಮಲವ ತೋರಿಸೆ    ||೩||

Labels: ಅರವಿಂದಾಲಯೇ ತಾಯೇ ಶರಣು, Aravindalaye Taye Sharanu, ಪುರಂದರದಾಸರು, Purandaradasaru

ದಾಸನ ಮಾಡಿಕೊ ಎನ್ನ : Dasana Madiko Enna

ದಾಸನ ಮಾಡಿಕೊ ಎನ್ನ

ಕೀರ್ತನಕಾರರು : ಪುರಂದರದಾಸರು
ರಾಗ : ನಾದನಾಮಕ್ರಿಯ
ತಾಳ : ಆದಿ

ದಾಸನ ಮಾಡಿಕೊ ಎನ್ನ ಇಷ್ಟು
ಘಾಸಿ ಮಾಡುವರೇನೊ ಕರುಣಾಸಂಪನ್ನ          ||ಪ||    

ದುರುಳ ಬುದ್ಧಿಗಳೆಲ್ಲ ಬಿಡಿಸೊ ನಿನ್ನ
ಕರುಣ-ಕವಚವೆನ್ನ ಹರಣಕ್ಕೆ ತೊಡಿಸೊ
ಚರಣಸೇವೆ ಎನಗೆ ಕೊಡಿಸೊ ಅಭಯ
ಕರಪುಷ್ಪವ ಎನ್ನ ಶಿರದಲ್ಲಿ ಮುಡಿಸೊ               ||೧||

ದೃಢಭಕ್ತಿ ನಿನ್ನಲ್ಲಿ ಬೇಡಿ ನಾ
ಅಡಿಗೆರಗುವೆನಯ್ಯ ಅನುದಿನ ಪಾಡಿ
ಕಡೆಗಣ್ಣಲೇಕೆನ್ನ ನೋಡಿ ಬಿಡುವೆ
ಕೊಡು ನಿನ್ನ ಧ್ಯಾನವ ಮನಶುಚಿ ಮಾಡಿ          ||೨||

ಮೊರೆಹೊಕ್ಕವರ ಕಾಯುವ ಬಿರುದು ಎನ್ನ
ಮರೆಯದೆ ರಕ್ಷಣೆ ಮಾಡಯ್ಯ ಪೊರೆದು
ದುರಿತ ರಾಶಿಗಳೆಲ್ಲ ತರಿದು ಸಿರಿ
ಪುರಂದರ ವಿಠಲ ಕರುಣದಿ ಕರೆದು                 ||೩||

Labels: ದಾಸನ ಮಾಡಿಕೊ ಎನ್ನ, Dasana Madiko Enna, ಪುರಂದರದಾಸರು, Purandaradasaru

ಬಿಡುವೇನೇನಯ್ಯ ಹನುಮ : Biduvanenayya Hanuma

ಬಿಡುವೇನೇನಯ್ಯ ಹನುಮ

ಕೀರ್ತನಕಾರರು : ಪುರಂದರದಾಸರು

ಬಿಡುವೇನೇನಯ್ಯ ಹನುಮ ಸುಮ್ಮನೆ ಬಿಡುವೇನೇನಯ್ಯ              ||ಪ||

ಬಿಡುವೆನೇನೋ ಹನುಮ ನಿನ್ನ ಆಡಿಗಳಿಗೆ ಶಿರವ ಬಾಗಿ
ಒಡೆಯನಲ್ಲಿ ಜ್ಞಾನ ಭಕುತಿಯ ಕೊಡುವ ತನಕ ಸುಮ್ಮನೇ ನಿನ್ನ      ||೧||

ಹಸ್ತವನ್ನು ಎತ್ತಿದರೇನು ಹಾರಗಳನ್ನು ಇಟ್ಟರೆ ಏನು
ಭೃತ್ಯನು ನಿನ್ನವನು ನಾನು ಹಸ್ತಿವರ್ಧನ ತೋರುವ ತನಕ             ||೨||

ಹಲ್ಲುಮುಡಿಯ ಕಚ್ಚಿದರೇನು ಅಂಜುವೆನೇನೋ ನಿನಗೆ ನಾನು
ಫುಲ್ಲನಾಭ ನಲ್ಲಿ ಎನ್ನ ಮನಸಾ ನೀ ನಿಲ್ಲಿಸುವ ತನಕ                    ||೩||

ಡೊಂಕು ಮೋರೆಯ ಬಾಲವ ತಿದ್ದಿ ಹೂಂಕರಿಸಿದರೆ ಅಂಜುವನಲ್ಲ
ಕಿಂಕರ ನಿನ್ನವನು ನಾನು ಪುರಂಧರ ವಿಠಲನ ತೋರುವ ತನಕ     ||೪||

Labels: ಬಿಡುವೇನೇನಯ್ಯ ಹನುಮ, Biduvanenayya Hanuma, ಪುರಂದರದಾಸರು, Purandaradasaru

ಹರಿನಾಮದರಗಿಣಿಯು ಹಾರುತಿದೆ : Harinamadaraginiyu Harutide

ಹರಿನಾಮದರಗಿಣಿಯು ಹಾರುತಿದೆ ಜಗದಿ

ಕೀರ್ತನಕಾರರು : ಪುರಂದರದಾಸರು
ರಾಗ :  ಕಾಂಬೋದಿ
ತಾಳ : ಅಟ್ಟ

ಹರಿನಾಮದರಗಿಣಿಯು ಹಾರುತಿದೆ ಜಗದಿ
ಪರಮ ಭಾಗವತರು ಬಲೆಯ ಬೀಸುವರು           ||ಪ||

ಕೋಪವೆಂಬ ಮಾರ್ಜಾಲ ಕಂಡರೆ ನುಂಗುವುದು
ತಾಪವೆಂಬುವ ಹುಲಿಯ ಕೊಂಡೊಯ್ವುದು
ಕಾಪಾಡಲದನೊಯ್ದು ಹೃದಯದೊಳಗಿಂಬಿಟ್ಟು
ಆಪತ್ತಿಗೊದಗುವುದು ಆ ಮುದ್ದು ಅರಗಿಣಿಯು      ||೧||

ದಾರಿಯಲಿ ನಡೆವಾಗ ಚೋರರುಪಟಳವಿಲ್ಲ
ಮಾರಿ ಬಂದರೆ ಅದನು ಹೊಡೆದು ನೂಕುವುದು
ಕ್ರೂರ ಯಮಭಟರನು ಮೂಗು ರೆಕ್ಕಿಲಿ ಬಡಿದು
ದಾರಿ ತೋರುವುದು ಮುರಾರಿ ಪಟ್ಟಣಕೆ            ||೨||

ಎಷ್ಟು ವರ್ಣಿಸಲಿ ನಾ ಈ ಮುದ್ದು ಅರಗಿಣಿಯ
ಹೊಟ್ಟೆಯೊಳಗೀರೇಳು ಜಗವನಿಂಬಿಟ್ಟು
ಸೃಷ್ಟೀಶ ಪುರಂದರ ವಿಠಲನ ನೆನೆ ನೆನೆದು
ಮುಟ್ಟಿ ಭಜಿಸುವುದು ಈ ಮುದ್ದು ಅರಗಿಣಿಯು     ||೩||

Labels: ಹರಿನಾಮದರಗಿಣಿಯು ಹಾರುತಿದೆ, Harinamadaraginiyu Harutide, ಪುರಂದರದಾಸರು, Purandaradasaru

ತುಂಗಾತೀರದಿ ನಿಂತ ಸುಯತಿವರನ್ಯಾರೆ : Tunga Teeradi Ninta Suyativaranyare

ತುಂಗಾತೀರದಿ ನಿಂತ ಸುಯತಿವರನ್ಯಾರೆ ಪೇಳಮ್ಮ

ಕೀರ್ತನಕಾರರು : ಜನಾರ್ದನ ವಿಠಲದಾಸರು

ತುಂಗಾತೀರದಿ ನಿಂತ ಸುಯತಿವರನ್ಯಾರೆ ಪೇಳಮ್ಮ                              ||ಪ||

ಸಂಗೀತಪ್ರಿಯ ಮಂಗಳ ಸುಗಣತರಂಗ ಮುನಿಕುಲೋತ್ತುಂಗ ಕಣಮ್ಮ         ||ಅ.ಪ||

ಚೆಲುವ ಸುಮುಖ ಫಣೆಯಲ್ಲಿ ತಿಲಕ ನಾಮಗಳು ನೋಡಮ್ಮ
ಜಲಜಮಣಿಯ ಕೊರಳಲ್ಲಿ ತುಳಸಿಮಾಲೆಗಳು ಪೇಳಮ್ಮ
ಸುಲಲಿತ ಕಮಂಡಲು ದಂಡವನೆ ಧರಿಸಿಹನೆ ನೋಡಮ್ಮ
ಕ್ಷುಲ್ಲ ಹಿರಣ್ಯಕನಲ್ಲಿ ಜನಿಸಿದ ಪ್ರಹ್ಲಾದನು ತಾನಿಲ್ಲಿಹನಮ್ಮ                        ||೧||

ಸುಂದರ ಚರಣಾರವಿಂದಕೆ ಭಕುತಿಯಲಿಂದ ನೋಡಮ್ಮ
ವಂದಿಸಿ ಸ್ತುತಿಸುವ ಭೂಸುರವೃಂದ ನೋಡಮ್ಮ
ಚಂದದಲ೦ಕೃತಿಯಿಂದ ಶೋಭಿಸುವಾನಂದ ನೋಡಮ್ಮ
ಹಿಂದೆ ವ್ಯಾಸಮುನಿಯೆಂದೆನಿಸಿದ ಕರ್ಮಂದಿಗಳರಸಘದಿಂದ ರಹಿತನೆ          ||೨||

ಅಭಿನವ ಜನಾರ್ಧನ ವಿಠಲನ ಧ್ಯಾನಿಸುವ ನೋಡಮ್ಮ
ಅಭಿವಂದಿಸಿದವರಿಗೆ ಅಖಿಲಾರ್ಥವ ಸಲ್ಲಿಸುವ ನೋಡಮ್ಮ
ನಭಮಣಿಯಂದದಿ ವಿವಿಧದಿ ಶೋಭಿಸುವ ನೋಡಮ್ಮ
ಶುಭಗುಣಗಣನಿಧಿ ರಾಘವೇಂದ್ರ ಗುರು ಅಬುಜಭವಾಂಡದಿ ಪ್ರಬಲ ಕಾಣಮ್ಮ ||೩||

Labels: ತುಂಗಾತೀರದಿ ನಿಂತ ಸುಯತಿವರನ್ಯಾರೆ, Tunga Teeradi Ninta Suyativaranyare, ಜನಾರ್ದನ ವಿಠಲದಾಸರು, Janardana Vithaladasaru

ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ : Tarakka Bindige

ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ

ಕೀರ್ತನಕಾರರು : ಪುರಂದರದಾಸರು
ರಾಗ : ಸೌರಾಷ್ಟ್ರ
ತಾಳ : ಛಾಪು

ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ ತಾರೇ ಬಿಂದಿಗೆಯ     ||ಪ||

ಬಿಂದಿಗೆ ಒಡೆದರೆ ಒಂದೇ ಕಾಸು ತಾರೇ ಬಿಂದಿಗೆಯ               ||ಅ.ಪ||

ರಾಮನಾಮವೆಂಬ ರಸವುಳ್ಳ ನೀರಿಗೆ ತಾರೇ ಬಿಂದಿಗೆಯ
ಕಾಮಿನಿಯರ ಕೂಡೆ ಏಕಾಂತವಾಡೆನು ತಾರೇ ಬಿಂದಿಗೆಯ      ||೧||

ಗೋವಿಂದ ನೀರಿಗೆ ಗುಣವುಳ್ಳ ನೀರಿಗೆ ತಾರೇ ಬಿಂದಿಗೆಯ
ಆವಾವ ಪರಿಯಲ್ಲಿ ಅಮೃತದ ನೀರಿಗೆ ತಾರೇ ಬಿಂದಿಗೆಯ        ||೨||

ಬಿಂದುಮಾಧವನ ಘಟ್ಟಕ್ಕೆ ಹೋಗುವ ತಾರೇ ಬಿಂದಿಗೆಯ ಪು
ರಂದರ ವಿಠಲಗೆ ಅಭಿಷೇಕ ಮಾಡುವ ತಾರೇ ಬಿಂದಿಗೆಯ        ||೩||

Labels: ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ, Tarakka Bindige, ಪುರಂದರದಾಸರು, Purandaradasaru

ಲೋಕಭರಿತನೋ ರಂಗಾನೇಕ ಚರಿತನೋ : Lokabharitano Ranganekacharitano

ಲೋಕಭರಿತನೋ ರಂಗಾನೇಕ ಚರಿತನೋ

ಕೀರ್ತನಕಾರರು : ವಾದಿರಾಜರು
ರಾಗ : ಪೂರ್ವಿಕಲ್ಯಾಣಿ
ತಾಳ : ಛಾಪು

ಲೋಕಭರಿತನೋ ರಂಗಾನೇಕ ಚರಿತನೋ                     ||ಪ||

ಕಾಕುಜನರ ಮುರಿದು ತನ್ನ ಏಕಾಂತ ಭಕ್ತರ ಪೊರೆವ ಕೃಷ್ಣ   ||ಅ.ಪ||

ರಾಜಸೂಯ ಯಾಗದಲ್ಲಿ ರಾಜರಾಜರಿರಲು ಧರ್ಮ-
ರಾಜಸುತನು ಈತನೇ ಸರ್ವ ಪೂಜೆಗರ್ಹನೆನಿಸಿದಾತ        ||೧||

ಮಿಕ್ಕ ನೃಪರ ಜರಿದು ಅಮಿತ ವಿಕ್ರಮ ಯದುವರನೆ ತನಗೆ
ತಕ್ಕ ರಮಣನೆಂದು ರುಕ್ಮಿಣಿ ಉಕ್ಕಿ ಮಾಲೆಯಿಕ್ಕಿದಳಾಗ       ||೨||

ಜ್ಞಾನಶೂನ್ಯನಾಗಿ ಸೊಕ್ಕಿ ತಾನೆ ವಾಸುದೇವನೆನಲು
ಹೀನ ಪೌಂಡ್ರಕನ ಶಿರವ ಜಾಣರಾಯ ತರಿದನಾಗ              ||೩||

ಉತ್ತರೆಯ ಗರ್ಭದಲ್ಲಿ ಸುತ್ತಿ ಮುತ್ತಿದಸ್ಟ್ರವನ್ನು
ಒತ್ತಿ ಚಕ್ರದಿಂದ ನಿಜ ಭಕ್ತ ಪರೀಕ್ಷಿತನ ಕಾಯ್ದ                     ||೪||

ತನ್ನ ಸೇವಕ ಜನರಿಗೊಲಿದು ಉನ್ನತ ಉಡುಪಿಯಲ್ಲಿ ನಿಂತು
ಘನ್ನ ಮಹಿಮೆಯಿಂದ ಪೊರೆವ ಪ್ರಸನ್ನ ಹಯವದನ ಕೃಷ್ಣ      ||೫||

Labels: ಲೋಕಭರಿತನೋ ರಂಗಾನೇಕ ಚರಿತನೋ, Lokabharitano Ranganekacharitano, ವಾದಿರಾಜರು, Vadirajaru

ಶರಣು ಬೆನಕನೆ ಕನಕರೂಪನೆ : Sharanu Benakane Kanakarupane

ಶರಣು ಬೆನಕನೆ ಕನಕರೂಪನೆ

ಕೀರ್ತನಕಾರರು : ಪುರಂದರದಾಸರು

ಶರಣು ಬೆನಕನೆ ಕನಕರೂಪನೆ ಕಾಮಿನಿ ಸಂಗದೂರನೇ
ಶರಣು ಸಾಂಬನ ಪ್ರೀತಿ ಪುತ್ರನೆ ಶರಣು ಜನರಿಗೆ ಮಿತ್ರನೆ            ||ಪ||

ಏಕದಂತನೆ ಲೋಕಖ್ಯಾತನೆ ಏಕವಾಕ್ಯ ಪ್ರವೀಣನೇ
ಏಕವಿಂಶತಿ ಪತ್ರಪೂಜಿತನೇಕ ವಿಘ್ನ ವಿನಾಯಕ                         ||೧||

ಲಂಬಕರ್ಣನೆ ನಾಸಿಕಾಧರನೆ ಗಾಂಭೀರ್ಯಯುತ ಗುಣಸಾರನೇ
ಕಂಬುಕಂಧರ ಇಂದುಮೌಳಿಜ ಚಂದನಚರ್ಚಿತಾಂಗನೇ               ||೨||

ಚತುರ್ಬಾಹು ಚರಣ ತೊಡಲನೆ ಚತುರ ಆಯುಧ ಧಾರನೇ
ಮತಿಯವಂತನೆ ಮಲಿನ ಜಲಿತನೆ ಅತಿಯ ಮಧುರಾಹಾರನೇ      ||೩||

ವಕ್ರತುಂಡನೆ ಮಹಾಕಾಯನೆ ಅರ್ಕಕೋಟಿ ಪ್ರದೀಪನೇ
ಚಕ್ರಧರ ಹರಬ್ರಹ್ಮಪೂಜಿತ ರಕ್ತ ವಸ್ತ್ರಾಧಾರನೇ                         ||೪||

ಮೂಷಿಕಾಸನ ಶೇಷಭೂಷಣ ಅಶೇಷ ವಿಘ್ನವಿನಾಯಕ
ದಾಸ ಪುರಂದರವಿಠ್ಠಲೇಶನ ಈಶಗುಣಗಳ ಪೊಗಳುವೆ               ||೫||

Labels: ಶರಣು ಬೆನಕನೆ ಕನಕರೂಪನೆ, Sharanu Benakane Kanakarupane, ಪುರಂದರದಾಸರು, Purandaradasaru

ಮನ್ನಾರು ಕೃಷ್ಣಗೆ ಮಂಗಳ : Mannaru Krishnage Mangala

ಮನ್ನಾರು ಕೃಷ್ಣಗೆ ಮಂಗಳ

ಕೀರ್ತನಕಾರರು : ಪುರಂದರದಾಸರು

ಮನ್ನಾರು ಕೃಷ್ಣಗೆ ಮಂಗಳ
ಜಗವ ಮನ್ನಿಸಿದೊಡೆಯಗೆ ಮಂಗಳ           ||ಪ||

ಬೊಮ್ಮನ ಪಡೆದಗೆ ಭಕ್ತರುದ್ಧಾರಿಗೆ
ಕಮ್ಮಗೋಲನಯ್ಯಗೆ ಮಂಗಳ
ಧರ್ಮರಕ್ಷಕನಿಗೆ ದಾನವಶಿಕ್ಷಗೆ
ನಮ್ಮ ರಕ್ಷಕನಿಗೆ ಮಂಗಳ                        ||೧||

ತುರುಗಳ ಕಾಯ್ದಗೆ ಕರುಣಾಕರನಿಗೆ
ಗಿರಿಯನೆತ್ತಿದವಗೆ ಮಂಗಳ
ವರದ ತಿಮ್ಮಪ್ಪಗೆ ವಾರಿಜನಾಭಗೆ
ಹರಿ ಸರ್ವೋತ್ತಮನಿಗೆ ಮಂಗಳ               ||೨||

ದೇವಕಿದೇವಿಯ ತನಯಗೆ ಮಂಗಳ
ದೇವ ತಿಮ್ಮಪ್ಪಗೆ ಮಂಗಳ
ಮಾವನ ಕೊಂದು ಮಲ್ಲರ ಮಡುಹಿದ
ಪುರಂದರವಿಠಲಗೆ ಮಂಗಳ                   ||೩||

Labels: ಮನ್ನಾರು ಕೃಷ್ಣಗೆ ಮಂಗಳ, Mannaru Krishnage Mangala, ಪುರಂದರದಾಸರು, Purandaradasaru

ಕೊಡು ಬೇಗ ದಿವ್ಯಮತಿ ಸರಸ್ವತಿ : Kodu Bega Divyamati

ಕೊಡು ಬೇಗ ದಿವ್ಯಮತಿ

ಕೀರ್ತನಕಾರರು : ಪುರಂದರದಾಸರು
ರಾಗ : ವಸಂತ
ತಾಳ : ಆದಿ

ಕೊಡು ಬೇಗ ದಿವ್ಯಮತಿ ಸರಸ್ವತಿ                    ||ಪ||

ಮೃಡ ಹರಿಹರ ಮುಖರೊಡೆಯಳೆ ನಿನ್ನಯ
ಅಡಿಗೆರಗುವೆ ಅಮ್ಮ ಬ್ರಹ್ಮನ ರಾಣಿ                 ||ಅ.ಪ||

ಇಂದಿರಾ ರಮಣನ ಹಿರಿಯ ಸೋಸಯು ನಿನು
ಬಂದೆನ್ನ ವದನದಿ ನಿಂದು ನಾಮವ ನುಡಿಸೆ      ||೧||

ಅಖಿಲ ವಿದ್ಯಾಭಿಮಾನಿ ಅಜನ ಪಟ್ಟದರಾಣಿ
ಸುಖವಿತ್ತು ಪಾಲಿಸೆ ಸುಜನ ಶಿರೋಮಣಿ          ||೨||

ಪತಿತ ಪಾವನೆ ನೀ ಗತಿಯೆಂದು ನಂಬಿದೆ
ಸತತ ಪುರಂದರ ವಿಠಲನ ತೋರೆ                 ||೩||

Labels: ಕೊಡು ಬೇಗ ದಿವ್ಯಮತಿ ಸರಸ್ವತಿ, Kodu Bega Divyamati, ಪುರಂದರದಾಸರು, Purandaradasaru

ಜೋ ಜೋ ಶ್ರೀಕೃಷ್ಣ ಪರಮಾನಂದ : Jo Jo Sri Krishna Paramananda

ಜೋ ಜೋ ಶ್ರೀಕೃಷ್ಣ ಪರಮಾನಂದ

ಕೀರ್ತನಕಾರರು : ಪುರಂದರದಾಸರು
ರಾಗ : ಚಂದ್ರ
ತಾಳ : ಆದಿ

ಜೋ ಜೋ ಶ್ರೀಕೃಷ್ಣ ಪರಮಾನಂದ
ಜೋ ಜೋ ಗೋಪಿಯ ಕಂದ ಮುಕುಂದ ಜೋಜೋ       ||ಪ||

ಪಾಲಗಡಲೊಳು ಪವಡಿಸಿದವನೆ
ಆಲದೆಲೆಯ ಮೇಲೆ ಮಲಗಿದ ಶಿಶುವೆ
ಶ್ರೀಲತಾಂಗಿಯರ ಚಿತ್ತದೊಲ್ಲಭನೆ
ಬಾಲ ನಿನ್ನನು ಪಾಡಿ ತೂಗುವೆನಯ್ಯ ಜೋಜೋ            ||೧||

ಹೊಳೆವಂಥ ರನ್ನದ ತೊಟ್ಟಿಲ ಮೇಲೆ
ಥಳಥಳಿಸುವ ಗುಲಗಂಜಿಯ ಮಾಲೆ
ಅಳದೆ ನೀ ಪಿಡಿದಾಡೆನ್ನಯ ಮುದ್ದು ಬಾಲ
ನಳಿನನಾಭನೆ ನಿನ್ನ ಪಾಡಿ ತೂಗುವೆನು ಜೋಜೋ         ||೨||

ಯಾರ ಕಂದ ನೀನಾರ ನಿಧಾನಿ
ಆರ ರತ್ನವೊ ನೀನಾರ ಮಾಣಿಕವೊ
ಸೇರಿತು ಎನಗೊಂದು ಚಿಂತಾಮಣಿ ಎಂದು
ಪೋರ ನಿನ್ನನು ಪಾಡಿ ತೂಗುವೆನಯ್ಯ ಜೋಜೋ           ||೩||

ಗುಣನಿಧಿಯೆ ನಿನ್ನ ಎತ್ತಿಕೊಂಡಿದ್ದರೆ
ಮನೆಯ ಕೆಲಸವಾರು ಮಾಡುವರಯ್ಯ
ಮನಕೆ ಸುಖನಿದ್ರೆಯ ತಂದುಕೋ ಬೇಗ
ಫಣಿಶಯನನೆ ನಿನ್ನ ಪಾಡಿ ತೂಗುವೆನು ಜೋಜೋ         ||೪||

ಅಂಡಜವಾಹನ ಅನಂತಮಹಿಮ
ಪುಂಡರೀಕಾಕ್ಷ ಶ್ರೀ ಪರಮಪಾವನ
ಹಿಂಡು ದೈವದ ಗಂಡ ಉದ್ದಂಡನೆ
ಪಾಂಡುರಂಗ ಶ್ರೀ ಪುರಂದರ ವಿಠಲ ಜೋಜೋ          ||೫||

Labels: ಜೋ ಜೋ ಶ್ರೀಕೃಷ್ಣ ಪರಮಾನಂದ, Jo Jo Sri Krishna Paramananda, ಪುರಂದರದಾಸರು, Purandaradasaru

ಕಂಡೆ ನಾ ಗೋವಿಂದನಾ : Kande Na Govindana

ಕಂಡೆ ನಾ ಗೋವಿಂದನಾ

ಕೀರ್ತನಕಾರರು : ಪುರಂದರದಾಸರು
ರಾಗ : ಚಂದ್ರಕೌಂಸ
ತಾಳ : ಆದಿ

ಕಂಡೆ ನಾ ಗೋವಿಂದನಾ
ಪುಂಡರೀಕಾಕ್ಷ ಪಾಂಡವಪಕ್ಷ ಕೃಷ್ಣನ         ||ಪ||

ಕೇಶವ ನಾರಾಯಣ ಶ್ರೀಕೃಷ್ಣನ
ವಾಸುದೇವ ಅಚ್ಯುತಾನಂತನ
ಸಾಸಿರ ನಾಮದ ಶ್ರೀಹೃಷೀಕೇಶನ
ಶೇಷಶಯನ ನಮ್ಮ ವಸುದೇವಸುತನ      ||೧||

ಮಾಧವ ಮಧುಸೂದನ ತ್ರಿವಿಕ್ರಮ
ಯಾದವಕುಲ ಜನ ಮುನಿವಂದ್ಯನ
ವೇದಾಂತವೇದ್ಯನ ಇಂದಿರಾರಮಣನ
ಆದಿಮೂರುತಿ ಪ್ರಹ್ಲಾದವರದನ                ||೨||

ಪುರುಷೋತ್ತಮ ನರಹರಿ ಶ್ರೀಕೃಷ್ಣನ
ಶರಣಾಗತ ವಜ್ರಪಂಜರನ
ಕರುಣಾಕರ ನಮ್ಮ ಪುರಂದರವಿಠಲನ
ನೆರೆ ನಂಬಿದೆನು ಬೇಲೂರ ಚೆನ್ನಿಗನ          ||೩||

Labels: ಕಂಡೆ ನಾ ಗೋವಿಂದನಾ, Kande Na Govindana, ಪುರಂದರದಾಸರು, Purandaradasaru

ನಾರಾಯಣ ನಿನ್ನ ನಾಮದ : Narayana Ninna Namada

ನಾರಾಯಣ ನಿನ್ನ ನಾಮದ

ಕೀರ್ತನಕಾರರು : ಪುರಂದರದಾಸರು
ರಾಗ : ಆನಂದಭೈರವಿ
ತಾಳ : ಅಟ್ಟ

ನಾರಾಯಣ ನಿನ್ನ ನಾಮದ ಸ್ಮರಣೆಯ
ಸಾರಾಮೃತವೆನ್ನ ನಾಲಿಗೆಗೆ ಬರಲಿ                   ||ಪ ||

ಕೂಡುವಾಗಲಿ ನಿಂತಾಡುವಾಗಲಿ ಮತ್ತೆ
ಹಾಡುವಾಗಲಿ ಹರಿದಾಡುವಾಗಲಿ
ಕೋಟಿ ವಿನೋದದಿ ನೋಡದೆ ನಾ
ಮಾಡಿದ ಪಾಪ ಬಿಟ್ಟೋಡಿ ಹೋಗೋ ಹಾಗೆ        ||೧||

ಊರಿಗೆ ಹೋಗಲಿ ಊರೊಳಗಿರಲಿ
ಕಾರಣಾರ್ಥಂಗಳೆಲ್ಲ ಕಾದಿರಲಿ
ವಾರಿಜನಾಭ ನರಸಾರಥಿ ಸನ್ನುತ 
ಸಾರಿಸಾರಿಗೆ ನಾ ಬೀಸರದ್ಹಾಂಗೆ                      ||೨||

ಹಸಿದಿದ್ದಾಗಲಿ ಹಸಿವಿಲ್ಲದಾಗಲಿ
ಕಸವಿಸಿಯಿರಲಿ ಹರುಷಿರಲಿ
ವಸುದೇವಾತ್ಮಕ ಶಿಶುಪಾಲಕ್ಷಯ
ಅಸುರಾಂತಕ ನಿನ್ನ ಹೆಸರು ಮರೆಯದ್ಹಾಂಗೆ       ||೩||

ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿ
ಎಷ್ಟಾದರೂ ಮತಿಗೆಟ್ಟಿರಲಿ
ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ
ಅಷ್ಟಾಕ್ಷರ ಮಹಾಮಂತ್ರದ ನಾಮವ                  ||೪||

ಕನಸಿನೊಳಾಗಲಿ ಕಳವಳಿಕಾಗಲಿ
ಮನಸುಗೊಟ್ಟಿರಲಿ ಮುನಿದಿರಲಿ
ಜನಕಜಾಪತಿ ನಿನ್ನ ಚರಣಕಮಲವನು
ಮನಸಿನೊಳಗೆ ಒಮ್ಮೆ ನೆನಸಿಕೊಳ್ಳೋ ಹಾಂಗೆ    ||೫||

ಜ್ವರ ಬಂದಾಗಲಿ ಚಲಿ ಬಂದಾಗಲಿ
ಮರಳಿ ಮರಳಿ ಮತ್ತೆ ನಡುಗವಾಗಲಿ
ಹರಿನಾರಾಯಣ ದುರಿತನಿವಾರಣೆಂದು
ಇರುಳು ಹಗಲು ನಿನ್ನ ಸ್ಮರಣೆ ಮರೆಯದ್ಹಾಂಗೆ       ||೬||

ಸಂತತ ಹರಿ ನಿನ್ನ ಸಾಸಿರನಾಮವ
ಅಂತರಂಗದ ಒಳಗಿರಿಸಿ
ಎಂತೋ ಪುರಂದರವಿಠ್ಠಲರಾಯನ
ಅಂತ್ಯಕಾಲದಲ್ಲಿ ಚಿಂತಿಸೋ ಹಾಂಗೆ                   ||೭||

Labels: ನಾರಾಯಣ ನಿನ್ನ ನಾಮದ, Narayana Ninna Namada, ಪುರಂದರದಾಸರು, Purandaradasaru

ಕಂಡೆ ಕರುಣಾನಿಧಿಯ : Kande Karunanidhiya

ಕಂಡೆ ಕರುಣಾನಿಧಿಯ

ಕೀರ್ತನಕಾರರು : ಪುರಂದರದಾಸರು
ರಾಗ : ನಾದನಾಮಕ್ರಿಯ
ತಾಳ : ಆದಿ

ಕಂಡೆ ಕರುಣಾನಿಧಿಯ ಗಂಗೆಯ ಮಂಡೆಯೊಳಿಟ್ಟ ದೊರೆಯ ಶಿವನ      ||ಪ||

ರುಂಡಮಾಲೆ ಸಿರಿಯ ನೊಸಲೊಳು ಕೆಂಡಗಣ್ಣಿನ ಬಗೆಯ ಹರನ         ||ಅ.ಪ||

ಕಪ್ಪುಗೊರಳ ಹರನ ಕಂದರ್ಪ ಪಿತನ ಸಖನ
ಮುಪ್ಪುರ ಗೆಲಿದವನ ಮುನಿನುತ ಸರ್ಪಭೂಷಣ ಶಿವನ ಹರನ             ||೧||

ಭಸಿತ ಭೂಷಿತ ಶಿವನ ಭಕ್ತರ ವಶದೊಳಗಿರುತಿಹನ
ಪಶುಪತಿಯೆನಿಸುವನ ವಸುಧೆಯೊಳು ಶಶಿಶೇಖರ ಶಿವನ ಹರನ          ||೨||

ಗಜ ಚರ್ಮಾಂಬರನ ಗೌರೀವರ ತ್ರಿಜಗದೀಶ್ವರನ
ತ್ರಿಜಗನ್ಮೋಹನನ ತ್ರಿಲೋಚನ ತ್ರಿಪುರಾಂತಕ ಶಿವನ ಹರನ              ||೩||

ಕಾಮಿತ ಫಲವೀವನ ಭಕ್ತರ ಪ್ರೇಮದಿ ಸಲಹುವನ
ರಾಮನಾಮಸ್ಮರನ ರತಿಪತಿ ಕಾಮನ ಸಂಹರನ ಶಿವನ                   ||೪||

ಧರೆಗೆ ದಕ್ಷಿಣಕಾಶಿ ಎನಿಸುವ ಪುರ ಪಂಪಾವಾಸಿ
ತಾರಕ ಉಪದೇಶಿ ಪುರಂದರವಿಠಲ ಭಕ್ತರ ಪೋಷಿ                          ||೫||

Labels: ಕಂಡೆ ಕರುಣಾನಿಧಿಯ, Kande Karunanidhiya, ಪುರಂದರದಾಸರು, Purandaradasaru

ಗುರುಭಕುತಿಯೆಂತೆಂಬ ಗಮಕದೋಲೆಯನಿಟ್ಟು : Gurubhakutiyemba Gamakadoleyanittu

ಗುರುಭಕುತಿಯೆಂತೆಂಬ ಗಮಕದೋಲೆಯನಿಟ್ಟು

ಕೀರ್ತನಕಾರರು : ಪುರಂದರದಾಸರು

ಗುರುಭಕುತಿಯೆಂತೆಂಬ ಗಮಕದೋಲೆಯನಿಟ್ಟು
ಹರಿಧ್ಯಾನವೆಂಬ ಆಭರಣವಿಟ್ಟು
ಪರತತ್ವವೆಂತೆಂಬ ಪಾರಿಜಾತವ ಮುಡಿದು
ಪರಮಾತ್ಮ ಹರಿಗೆ ಆರುತಿ ಎತ್ತಿರೆ                   ||ಪ||

ಆದಿ ಮೂರಿತಿ ಎಂಬ ಅಚ್ಚ ಆರಿಸಿನ ಬಳಿದು
ವೇದ ಮುಖ ನೆಂಬ ಕುಂಕುಮವನಿಟ್ಟು
ಸಾಧು ಸಜ್ಜನ ಸೇವೆ ಎಂಬ ಸಂಪಿಗೆ ಮುಡಿದು
ಮೋದದಿಂ ಲಕ್ಷ್ಮಿಗಾರುತಿ ಎತ್ತಿರೇ                   ||೧||

ತನುವೆಂಬ ತಟ್ಟೆಯಲಿ ಮನಸೊಡಿಲನು ಇರಿಸಿ
ಘನಶ್ಯಾಂತಿ ಎಂಬ ಆಜ್ಯವನು ತುಂಬಿ
ಆನಂದ ವೆಂತೆಂಬ ಬತ್ತಿಯನು ಹಚ್ಚಿಟ್ಟು
ಚನುಮಯ ಹರಿಗೆ ಆರುತಿ ಎತ್ತಿರೆ                   ||೨||

ಕಾಮಂಧವಳಿದಂತ ಕಮಲದ ತಟ್ಟೆಯಲಿ
ನೇಮವೆಂತೆಂಬ ಹರಿದ್ರವನು ಕದಡಿ
ಆಮಹಾ ಸುಜ್ಞಾನ ಎಂಬ ಸುಣ್ಣವ ಬೆರಸಿ
ಸೋಮಧರ ವಂದ್ಯಗಾರುತಿ ಎತ್ತಿರೆ                ||೩||

ನಾರದ ವಂದ್ಯಗೆ ನವನೀತ ಚೋರಗೆ
ನಾರಯಣಗೆ ಶ್ರೀ ವರಲಕ್ಷ್ಮಿಗೆ
ಸಾರಿದವರನು ಪೊರೆವ ಪುರಂದರವಿಠಲನಿಗೆ
ನೀರಜಾ ಮುಖಿಯರಾರುತಿ ಎತ್ತಿರೆ                 ||೪||

Labels: ಗುರುಭಕುತಿಯೆಂತೆಂಬ ಗಮಕದೋಲೆಯನಿಟ್ಟು, Gurubhakutiyemba Gamakadoleyanittu, ಪುರಂದರದಾಸರು, Purandaradasaru

ದಾಸೋಹಂ ತವ ದಾಸೋಹಂ : Dasoham Tava Dasoham

ದಾಸೋಹಂ ತವ ದಾಸೋಹಂ

ಕೀರ್ತನಕಾರರು : ಪುರಂದರದಾಸರು

ದಾಸೋಹಂ ತವ ದಾಸೋಹಂ               ||ಪ||

ವಾಸುದೇವ ವಿತತಾಘ ಸಂಘತವ           ||ಅ.ಪ||

ಜೀವಾಂತರ್ಗತ ಜೀವ ನಿಯಾಮಕ
ಜೀವ ವಿಲಕ್ಷಣ ಜಿವನದ
ಜೀವಾಧಾರಕ ಜೀವರೂಪ
ರಾಜೀವ ಭವ ಜನಕ ಜೀವೇಶ್ವರ ತವ       ||೧||

ಕಾಲಂತರ್ಗತ ಕಾಲನಿಯಮಕ
ಕಾಲಾತೀತ ತ್ರಿಕಾಲಙ್ಞ
ಕಾಲಪ್ರವರ್ತಕ ಕಾಲನಿವರ್ತಕ
ಕಾಲೋತ್ಪಾದಕ ಕಾಲ ಮೂರ್ತಿ ತವ       ||೨||

ಕರ್ಮಕರ್ಮಕೃತ ಕರ್ಮಾ ಕೃತಾಗಮ
ಕರ್ಮ ಫಲಪ್ರದ ಕರ್ಮಜಿತ
ಕರ್ಮ ಬಂಧಮಹ ಕರ್ಮವಿಮೋಚಕ
ಕರ್ಮನಿಗ್ರನ ವಿಕರ್ಮನಾಶತವ            ||೩||

ಧರ್ಮಯೂಪಮಹ ಧರ್ಮವಿವರ್ಧನ
ಧರ್ಮವಿದುತ್ತಮ ಧರ್ಮನಿಧೇ
ಧರ್ಮ ಸೂಕ್ಷಮ ಹ ಧರ್ಮಸಂರಕ್ಷಕ
ಧರ್ಮಸಾಕ್ಷಿ ಯಮಧರ್ಮ ಪುತ್ರತವ     ||೪||

ಮಂತ್ರ ಯಂತ್ರ ಮಹ ಮಂತ್ರ ಬೀಜ
ಮಹ ಮಂತ್ರ ರಾಜಗುರು ಮಂತ್ರ ತವ
ಮಂತ್ರ ಮೇಯ ಮಹ ಮಂತ್ರಗಮ್ಯವರ
ಮಂತ್ರ ದೇವ ಜಗನ್ನಾಥ ವಿಠಲತವ       ||೫||

Labels: ದಾಸೋಹಂ ತವ ದಾಸೋಹಂ, Dasoham Tava Dasoham, ಪುರಂದರದಾಸರು, Purandaradasaru

ಅಲ್ಲಿ ನೋಡಲು ರಾಮ : Alli Nodalu Rama

ಅಲ್ಲಿ ನೋಡಲು ರಾಮ

ಕೀರ್ತನಕಾರರು : ಪುರಂದರದಾಸರು
ರಾಗ : ನಾಟಕುರುಂಜಿ
ತಾಳ : ರೂಪಕ

ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ
ಎಲ್ಲಿಲ್ಲಿ ನೋಡಿದರೂ ಅಲ್ಲಿ ಶ್ರೀರಾಮ                ||ಪ||

ರಾವಣನ ಮೂಲಬಲ ಕಂಡು ಕಪಿಸೇನೆ
ಆವಾಗಲೇ ಬೆದರಿ ಓಡಿದವು
ಈವೇಳೆ ನರನಾಗಿ ಇರಬಾರದೆಂದೆಣಿಸಿ
ದೇವ ರಾಮಚಂದ್ರ ಜಗವೆಲ್ಲ ತಾನಾದ             ||೧||

ಅವನಿಗೆ ಇವ ರಾಮ ಇವನಿಗೆ ಅವ ರಾಮ
ಅವನಿಯೊಳೀಪರಿ ರೂಪ ಉಂಟೆ
ಲವ ಮಾತ್ರದಿ ಅಸುರ ದುರುಳರೆಲ್ಲರು
ಅವರವರೆ ಹೊಡೆದಾಡಿ ಹತರಾಗಿ ಹೋದರು     ||೨||

ಹನುಮಾದಿ ಸಾಧು ಜನರು ಅಪ್ಪಿಕೊಂಡು
ಕುಣಿಕುಣಿದಾಡಿದರು ಅತಿ ಹರುಷದಲಿ
ಕ್ಷಣದಲ್ಲಿ ಪುರಂದರವಿಠಲರಾಯನು
ಕೊನೆಗೊಡೆಯನು ತಾನೊಬ್ಬನಾಗಿ ನಿಂತ         ||೩||

Labels: ಅಲ್ಲಿ ನೋಡಲು ರಾಮ, Alli Nodalu Rama, ಪುರಂದರದಾಸರು, Purandaradasaru