ಬುಧವಾರ, ಸೆಪ್ಟೆಂಬರ್ 11, 2013

ಅಂತರಂಗದಲ್ಲಿ ಹರಿಯ ಕಾಣದವ : Antarangadalli Hariya Kanadava

ಅಂತರಂಗದಲ್ಲಿ ಹರಿಯ ಕಾಣದವ

ಕೀರ್ತನಕಾರರು : ವ್ಯಾಸರಾಯರು
ರಾಗ : ಮೋಹನ
ತಾಳ : ಛಾಪು

ಅಂತರಂಗದಲ್ಲಿ ಹರಿಯ ಕಾಣದವ ಹುಟ್ಟು ಕುರುಡನೋ                               ||ಪ||

ಸಂತತ ಶ್ರೀ ಕೃಷ್ಣ ಚರಿತೆ ಕೇಳದವ ಜಡಮತಿ ಕಿವುಡನೋ ಎಂದೆಂದಿಗೂ         ||ಅ.ಪ||

ಹರುಷದಿಂದಲಿ ನರಹರಿಯ ಪೂಜೆ ಮಾಡದವನೆ ಕೈ ಮುರಿದವನೊ
ಕುರುವರಸೂತನ ಮುಂದೆ ಕೃಷ್ಣಾಯೆಂದು ಕುಣಿಯದವನೆ ಕುಂಟನೊ
ನರಹರಿ ಚರಣೋದಕವ ಧರಿಸದ ಶಿರ ನಾಯುಂಡ ಹೆಂಚು ಕಾಣೊ
ಸುರವರ ಕೃಷ್ಣ ಪ್ರಸಾದವಿಲ್ಲದ ಊಟ ಸೂಕರ ಭೋಜನವೊ ಎಂದೆಂದಿಗೂ       ||೧||

ಅಮರೇಶ ಕೃಷ್ಣಗರ್ಪಿತವಲ್ಲದ ಕರ್ಮ ಆಸತಿಯ ವ್ರತನೇಮವೊ
ರಮಯರಸಗೆ ಪ್ರೀತಿಯಿಲ್ಲದ ವಿತರಣೆ ರಂಡೆಕೊರಳ ಸೂತ್ರವೊ
ಕಮಲನಾಭನ ಪಾಡಿ ಪೊಗಳದ ಸಂಗೀತ ಗಾರ್ಧಭರೋಧನವೋ
ಮಮತೆ ಇಂದಲಿ ಕೇಶವಗೆ ನಮಸ್ಕಾರ ಮಾಡದವನೆ ಮೃಗವೊ ಎಂದೆಂದಿಗೂ ||೨||

ಜರೆ ಪುಟ್ಟು ಮರಣವ ತೊಡೆವ ಸುಧೆಯ ಬಿಟ್ಟು ಸುರೆಯ ಸೇವಿಸಬೇಡವೊ
ಸುರಧೇನುವಿರಲಾಗಿ ಸೂಕರ ಮೊಲೆಹಾಲು ಕರೆದು ಕುಡಿಯಬೇಡವೊ
ಕರಿ ರಥ ತುರಗವಿರಲು ಬಿಟ್ಟು ಕೆಡಹುವ ಕತ್ತೆಯೇರಲು ಬೇಡವೊ
ಪರಮಪದವನೀವ ಸಿರಿಕೃಷ್ಣನಿರಲಾಗಿ ನರರ ಸೇವಿಸಬೇಡವೊ ಎಂದೆಂದಿಗೂ   ||೩||

Labels: ಅಂತರಂಗದಲ್ಲಿ ಹರಿಯ ಕಾಣದವ, Antarangadalli Hariya Kanadava, ವ್ಯಾಸರಾಯರು, Vyasarayaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ