ಸೋಮವಾರ, ಸೆಪ್ಟೆಂಬರ್ 9, 2013

ಎದುರಾರೊ ಗುರುವೆ ಸಮನಾರೊ : Eduraro Guruve Samanaro

ಎದುರಾರೊ ಗುರುವೆ ಸಮನಾರೊ

ಕೀರ್ತನಕಾರರು : ವ್ಯಾಸರಾಯರು
ರಾಗ : ಆನಂದಭೈರವಿ
ತಾಳ : ಆದಿ

ಎದುರಾರೊ ಗುರುವೆ ಸಮನಾರೊ                ||ಪ||

ಮದನಗೋಪಾಲನ ಪ್ರಿಯ ಜಯರಾಯ         ||ಅ.ಪ||

ಕಡುಗರ್ಜಿಸುವ ಕೇಸರಿಯಂತೆ ನಿಮ್ಮ ವಾದ-
ಗಡಣೆಯ ಕೇಳುತ ನುಡಿ ಮುಂದೋಡದೆ
ಗಡಗಡ ನಡುಗುತ ಮಾಯ್ಗೋಮಾಯ್ಗಳು
ಅಡವಿಯೋಳಡಗೋರು ನಿಮ್ಮ ಭೀತಿಯಲಿ      ||೧||

ಕುಟಿಲಮತಗಳೆಂಬೊ ಚಟುಲಂಧಕಾರಕ್ಕೆ
ಪಟುತರ ತತ್ತ್ವಪ್ರಕಾಶಿಕೆಂತೆಂಬ
ಚಟುಲಾತಪದಿಂದ ಖಂಡಿಸಿ ತೇಜೋ-
ತ್ಕಟದಿ ಮೆರೆದೆ ಬುಧಕಟಕಾಬ್ಜಮಿತ್ರ                ||೨||

ಅಮಿತದ್ವಿಜಾವಳಿಕುಮುದಗಳರಸಿ
ವಿಮತರ ಮುಖಕಮಲಂಗಳ ಬಾಡಿಸಿ
ಸ್ವಮತರ ಹೃತ್ಸಂತಾಪಗಳೋಡಿಸಿ
ವಿಮಲಸುಕೀರ್ತಿಯ ಪಡೆದೆಯೊ ಚಂದ್ರ            ||೩||

ವೇದಶಾಸ್ತ್ರಗಳೆಂಬೊ ಶೃಂಗಗಳಿಂದ ಸು-
ಧಾದಿಗ್ರಂಥಗಳೆಂಬೊ ಸ್ತನದಿಂದೊಪ್ಪುತ ತತ್ತ್ವ-
ಬೋಧೆಯೆಂಬ ದುಗ್ಧ ಶಿಷ್ಯವತ್ಸಂಗಳಿಗೆ
ಆದರದಲಿ ಕೊಟ್ಟ ಯತಿಸುರಧೇನು                  ||೪||

ವ್ಯಾಸಸೂತ್ರಗಳೆಂಬ ಮಂದರವನು ವೇದ
ರಾಶಿಯೆಂಬ ವಾರಾಶಿಯೊಳಗಿಟ್ಟು |
ಶ್ರೀಸರ್ವಜ್ಞರ ವಾಕ್ಯಪಾಶದಿ ಸುತ್ತಿ
ಭಾಸುರನ್ಯಾಯಸುಧಾ ಪಡೆದ ಯತೀಂದ್ರ          ||೫||

ವನಜನಾಭನ ಗುಣಮಣಿಗಳು  ಸರ್ವಜ್ಞ-
ಮುನಿಕೃತಗ್ರಂಥಗಳವನಿಯೊಳಡಗಿರೆ ಸ-
ಜ್ಜನರಿಗೆ ಟೀಕಾಂಜನದಿಂದ ತೋರಿಸಿ
ಘನಸುಖಸಾಧನ ಮಾಡಿದ್ಯೊ ಧೀರ                 || ೬ ||

ಅರ್ಥಿಮಂದಾರ ವೇದಾರ್ಥವಿಚಾರ ಸ-
ಮರ್ಥ ಶ್ರೀಕೃಷ್ಣ ಪಾದಾಂಬುಜಲೋಲ ಪ್ರ-
ತ್ಯರ್ಥಿಮತ್ತೇಭಕಂಠೀರವಾಕ್ಷೋಭ್ಯ-
ತೀರ್ಥಕರಜ ಜಯತೀರ್ಥಯತೀಂದ್ರ || ೭ ||

Labels: ಎದುರಾರೊ ಗುರುವೆ ಸಮನಾರೊ, Eduraro Guruve Samanaro
, ವ್ಯಾಸರಾಯರು, Vyasarayaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ