ಬುಧವಾರ, ಜನವರಿ 8, 2014

ಲಾಲಿ ಗೋವಿಂದ ಲಾಲಿ : Laali Govinda Laali

ಲಾಲಿ ಗೋವಿಂದ ಲಾಲಿ

ಕೀರ್ತನಕಾರರು : ಶ್ರೀಪಾದರಾಜರು
ರಾಗ : ಆನಂದಭೈರವಿ
ತಾಳ : ಝಂಪೆ

ಲಾಲಿ ಗೋವಿಂದ ಲಾಲಿ ಕೌಸಲ್ಯ
ಬಾಲ ಶ್ರೀರಾಮ ಲಾಲಿ  ||ಪ||

ಲಾಲಿ ಮುನಿವಂದ್ಯ  ಲಾಲಿ  ಜಾನಕಿ
ರಮಣ  ಶ್ರೀ ರಾಮ  ಲಾಲಿ            ||ಅ. ಪ||

ಕನಕರತ್ನಗಳಲ್ಲಿ  ಕಾಲ್ಗಳನೆ ಹೂಡಿ
ನಾಲ್ಕು ವೇದಗಳನ್ನು ಸರಪಣಿಯ ಮಾಡಿ
ಅನೇಕ ಭೂಮಂಡಲವ ಹಲಗೆಯ ಮಾಡಿ
ಶ್ರೀಕಾಂತನ ಉಯ್ಯಾಲೆಯನು ವಿರಚಿಸಿದರು ||೧||

ಆಶ್ಚರ್ಯಜನಕವಾಗಿ  ನಿರ್ಮಿಸಿದ
ಪಚ್ಚೆಯ ತೊಟ್ಟಿಲಲ್ಲಿ
ಅಚ್ಯುತಾನಂತನಿರಲು  ತೂಗಿದರು
ಮತ್ಸ್ಯಾವತಾರ ಹರಿಯ                           ||೨||

ಧರ್ಮಸ್ಥಾಪಕನು ಎಂದು ನಿರವಧಿಕ
ನಿರ್ಮಲ ಚರಿತ್ರನೆಂದು
ಮರ್ಮ ಕರ್ಮಗಳ ಪಾಡಿ ತೂಗಿದರು
ಕೂರ್ಮಾವತಾರ  ಹರಿಯ                    ||೩||

ಸರಸಿಜಾಕ್ಷಿಯರೆಲ್ಲರು ಜನವಶೀ
ಕರ ದಿವ್ಯರೂಪನೆಂದು
ಪರಮ ಹರುಷದಲಿ ಪಾಡಿ ತೂಗಿದರು
ವರಾಹವತಾರ  ಹರಿಯ                   ||೪||

ಕರಿ ಕುಂಭಗಳ  ಪೋಲುವ ಕುಚದಲ್ಲಿ
ಹಾರ  ಪದಕವು ಹೊಳೆಯಲು
ವರವರ್ಣಿನಿಯರು ಪಾಡಿ ತೂಗಿದರು
ನರಸಿಂಹಾವತಾರ ಹರಿಯ           ||೫||

ಭಾಮಾಮಣಿಯರೆಲ್ಲರು ಯದುವಂಶ
ಸೋಮನಿವನೆಂದು ಪೊಗಳಿ
ನೇಮದಿಂದಲಿ ಪಾಡಿ ತೂಗಿದರು
ವಾಮನವತಾರ ಹರಿಯ              ||೬||

ಸಾಮಜವರದನೆಂದು ಅತುಳ ಭೃಗು
ರಾಮವತಾರನೆಂದು
ಶ್ರೀಮದಾನಂದ ಹರಿಯ ತೂಗಿದರು
ಪ್ರೇಮಾತಿರೇಕದಿಂದ         ||೭||

ಕಾಮನಿಗೆ ಕಾಮನೆಂದು ಸುರಸಾರ್ವ
ಭೌಮ ಗುಣಧಾಮನೆಂದು
ವಾಮನೇತ್ರೆಯರು ಪಾಡಿ ತೂಗಿದರು
ರಾಮಾವತಾರಿಯ ಹರಿಯ   ||೮||

ಸೃಷ್ಟಿಯ ಕರ್ತನೆಂದು ಜಗದೊಳಗೆ
ಶಿಷ್ಟ ಸಂತುಷ್ಟನೆಂದು
ದೃಷ್ಟಾಂತರಹಿತನೆಂದು ತೂಗಿದರು
ಕೃಷ್ಣಾವತಾರ  ಹರಿಯ           ||೯||

ವೃದ್ಧ  ನಾರಿಯರೆಲ್ಲರು ಜಗದೊಳಗೆ ಪ್ರ
ಸಿದ್ಧನಿವನೆಂದು ಪೊಗಳಿ
ಬದ್ಧಾನುರಾಗದಿಂದ ತೂಗಿದರು
ಬೌದ್ಧಾವಾತಾರಿಯ ಹರಿಯ           ||೧೦||

ತಲತಲಾಂತರದಿಂದ ರಂಜಿಸುವ
ಮಲಯಜಲೇಪದಿಂದ
ಜಲಜಗಂಧಿಯರು ಪಾಡಿ ತೂಗಿದರು
ಕಲ್ಕ್ಯಾವತಾರಿಯ ಹರಿಯ           ||೧೧||

ಕನಕಮಯ ಖಚಿತವಾದ ತಲ್ಪದಲಿ
ವನಜಭವ ಜನಕನಿರಲು
ವನಜನಾಭನ್ನ ಪಾಡಿ ತೂಗಿದರು
ವನಿತಮಣಿಯರೆಲ್ಲರು          ||೧೨||

ಪದ್ಮರಾಗವ ಪೋಲುವ ಹರಿಪಾದ
ಪದ್ಮವನುತ್ತಮ ಹೃದಯ
ಪದ್ಮದಲಿ ನಿಲ್ಲಿಸಿ ಪಾಡಿ ತೂಗಿದರು
ಪದ್ಮಿನೀ ಭಾಮಿನಿಯರು         ||೧೩||

ಹಸ್ತಭೂಷಣವ ಮೆರೆಯಲು ದಿವ್ಯತಾರ
ಹಸ್ತಳಗವಗಳಿಂದ
ಹಸ್ತಗಳ ಪಿಡಿದುಕೊಂಡು ತೂಗಿದರು
ಹಸ್ತಿನೀ ಭಾಮಿನಿಯರು         ||೧೪||

ಮತ್ತಗಜಗಾಮಿನಿಯರು ದಿವ್ಯತರ
ಚಿತ್ರ ವಸ್ತ್ರಗಳನುಟ್ಟು
ಚಿತ್ತ ಸಂತೋಷದಿಂದ ತೂಗಿದರು
ಚಿತ್ತಿನಿ ಭಾಮಿನಿಯರು     ||೧೫||

ಕಂಕಣ ಧ್ವನಿಗಳಿಂದ ರಂಜಿಸುವ
ಕಿಂಕಿಣೀಸ್ವರಗಳಿಂದ
ಪಂಕಜಾಕ್ಷಿಯರು ಪಾಡಿ ತೂಗಿದರು
ಶಂಕಿಣಿ ಭಾಮಿನಿಯರು     ||೧೬||

ಚೊಕ್ಕ ಕಸ್ತೂರಿ ಪಂಕದಿಂ ರಂಜಿಸುವ
ಮಾಕರಿಕಾ ಪತ್ರ ಬರೆದು
ಲಿಕುಚಸ್ತನಿಯರು ಪಾಡಿ ತೂಗಿದರು
ಅಕಳಂಕಚರಿತ ಹರಿಯ      ||೧೭||

ಪಲ್ಲವಧಾರೆಯರೆಲ್ಲ ಈ ಶಿಶುವು
ತುಲ್ಯವರ್ಜಿತವೆನುತಲಿ
ಸಲ್ಲಲಿತಗಾನದಿಂದ ತೂಗಿದರು
ಕಲ್ಯಾಣಿರಾಗದಿಂದ           ||೧೮||

ಆನಂದ ಸದನದೊಳಗೆ ಗೋಪಿಯರು
ಆ ನಂದಸುತನ ಕಂಡು
ಆನಂದಭರಿತರಾಗಿ ತೂಗಿದರು
ಆನಂದಭೈರವಿಯಿಂದ        ||೧೯||

ದೇವಾದಿದೇವನೆಂದು ಈ ಶಿಶುವು
ಭಾವನಾತೀತನೆಂದು
ದೇವಗಂಧರ್ವರು ಪಾಡಿ ತೂಗಿದರು
ದೇವಗಾಂಧಾರದಿಂದ            ||೨೦||

ನೀಲಘನಲೀಲ ಜೋ ಜೋ ಕರುಣಲ
ವಾಲ ಶ್ರೀಕೃಷ್ಣ ಜೋ ಜೋ
ಲೀಲಾವತಾರ  ಜೋ ಜೋ ಪರಮಾತ್ಮ
ಬಾಲಗೋಪಾಲ  ಜೋ ಜೋ      ||೨೧||

ಇಂಧುಧರಮಿತ್ರ ಜೋ ಜೋ ಶ್ರೀಕೃಷ್ಣ
ಇಂಧು ರವಿನೇತ್ರ ಜೋ ಜೋ
ಇಂಧು  ಕುಲಪುತ್ರ ಜೋ ಜೋ  ಪರಮಾತ್ಮ
ಇಂದಿರಾರಮಣ  ಜೋ ಜೋ         ||೨೨||

ತುಂಗ ಭವಭಂಗ  ಜೋ ಜೋ ಪರಮಾತ್ಮ
ರಂಗ  ಕೃಪಾಂಗ ಜೋ ಜೋ
ಮಂಗಳಾಪಾಂಗ ಜೋ ಜೋ ಮೋಹನಾಂಗ
ರಂಗವಿಠಲನೆ  ಜೋ ಜೋ         ||೨೩||


Labels: ಲಾಲಿ ಗೋವಿಂದ ಲಾಲಿ, Laali Govinda Laali, ಶ್ರೀಪಾದರಾಜರು, Sripadarajaru

ಹರಿ ಹರಿ ಹರಿ ಎನ್ನದೆ : Hari Hari Hari Ennade

ಹರಿ ಹರಿ ಹರಿ ಎನ್ನದೆ

ಕೀರ್ತನಕಾರರು : ಹರಪನಹಳ್ಳಿ ಭೀಮವ್ವನವರು

ಹರಿ ಹರಿ ಎನ್ನದೆ ಈ ನಾಲಿಗಿ-
ನ್ನಿರುವುದ್ಯಾತಕೆ ಸುಮ್ಮನೆ                                    ॥ಪ॥

ಸರಸಿಜಾಕ್ಷನ ದಿವ್ಯ ಸಾಸಿರನಾಮ ಬಿಟ್ಟು
ಪರರ ವಾರ್ತ್ಯೇಲಾಸಕ್ತಿ ಪಾಮರನಾಗುವುದ್ಯಾಕೆ        ॥೧॥

ಕಲ್ಲು ಹಿಟ್ಟಾಗಿ ರಂಗವಾಲಿ ಎನಿಸುವುದು
ಕಲ್ಲಿಗೆ ಕಡೆಯಾದೆ ಮಲ್ಲರಂತಕಗೆ ಬ್ಯಾಗ                  ॥೨॥

ಮಧುರ ಪದಾರ್ಥದಲ್ಲಿ ಮನಸನಿಕ್ಕಲು ಬ್ಯಾಡ
ಮಧುವೈರಿ ಹರಿನಾಮ ಕ್ಷುಧೆಯ ಬೇಡುತಲೀಗ          ॥೩॥

ಅರ್ಕಸುತನ ಭಯ ಅಂಕೆಯಿಲ್ಲದಂತಿರೆ
ಸಿಕ್ಕು ಸಿಗದಂತಿರೆ ಯುಕ್ತಿ ರಕ್ಕಸಾಂತಕನಲ್ಲಿಟ್ಟು          ॥೪॥

ಈಸು ಮತ್ಯಾಕೆ ಯಶೋದೆಕೂಸಿನಾಲಾಪ್ವೊಂದಿರಲಿ
ಲೇಸು ಕಾಂಬುವುದು ಭೀಮೇಶಕೃಷ್ಣಗೆ ಬ್ಯಾಗ            ॥೫॥


Labels: ಹರಿ ಹರಿ ಹರಿ ಎನ್ನದೆ, Hari Hari Hari Ennade, ಹರಪನಹಳ್ಳಿ ಭೀಮವ್ವನವರು, Harapanahalli Bheemavvanavaru