ವಿಜಯದಾಸರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವಿಜಯದಾಸರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಆಗಸ್ಟ್ 31, 2013

ಪವಮಾನ ಪವಮಾನ ಜಗದಾ ಪ್ರಾಣಾ : Pavamana Pavamana Jagada Prana

ಪವಮಾನ ಪವಮಾನ ಜಗದಾ ಪ್ರಾಣಾ 

ಕೀರ್ತನಕಾರರು : ವಿಜಯದಾಸರು
ರಾಗ : 
ಪಂತುವರಾಳಿ 
ತಾಳ : ಆದಿ 

ಪವಮಾನ ಪವಮಾನ ಜಗದಾ ಪ್ರಾಣಾ
ಸಂಕರುಷಣ ಭವಭಯಾರಣ್ಯ ದಹನ                          ।।ಪ॥

ಶ್ರವಣವೆ ಮೊದಲಾದ ನವವಿಧ ಭಕುತಿಯ
ತವಕದಿಂದಲಿ ಕೊಡು ಕವಿಗಳ ಪ್ರಿಯ                         ।।ಅ.ಪ॥

ಹೇಮ ಕಚ್ಚುಟ ಉಪವೀತ ಧರಿಪ ಮಾರುತಾ 

ಕಾಮಾದಿ ವರ್ಗರಹಿತಾ
ವ್ಯೋಮಾದಿ ಸರ್ವವ್ಯಾವೃತಾ ನಿರ್ಭೀತಾ 

ರಾಮಚಂದ್ರನ ನಿಜದೂತಾ 
ಯಾಮ ಯಾಮಕೆ ನಿನ್ನಾರಾಧಿಪುದಕೆ
ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ ಈ

ಮನಸಿಗೆ ಸುಖಸ್ತೋಮವ ತೋರುತ
ಪಾಮರ ಮತಿಯನು ನೀ ಮಾಣಿಪುದು
                       ।।೧।।

ವಜ್ರ ಶರೀರ ಗಂಭೀರ ಮುಕುಟಧರ 

ದುರ್ಜನವನ ಕುಠಾರ ನಿರ್ಜರ ಮಣಿದಯಾ 
ಪಾರಾವಾರ ಉದಾರಾ ಸಜ್ಜನರಘ ಪರಿಹಾರಾ 
ಅರ್ಜುನಗೊಲಿದಂದು ಧ್ವಜವಾಗಿ ನೀ ನಿಂದು
ಮೂರ್ಜಗ ಬಿರಿವಂತೆ ಗರ್ಜನೆ ಮಾಡಿದಿ
ಹೆಜ್ಜೆಹೆಜ್ಜೆಗೆ ನಿನ್ನಬ್ಜ ಪಾದಧೂಳಿ
ಮೂಜಗದಲಿ ಭವವರ್ಜಿತನೆನಿಸೊ
                           ।।೨।।

ಪ್ರಾಣ ಅಪಾನ ವ್ಯಾನೋದಾನ ಸಮಾನ 

ಆನಂದ ಭಾರತೀರಮಣ ನೀನೆ ಶರ್ವಾದಿ 
ಗೀರ್ವಾಣಾದ್ಯಮರರಿಗೆ ಜ್ಞಾನಧನ ಪಾಲಿಪ ವರೇಣ್ಯ
ನಾನು ನಿರುತದಲಿ ಏನೆಸಗುವೆ
ಮಾನಸಾದಿ ಕರ್ಮ ನಿನಗೊಪ್ಪಿಸಿದೆನೋ 

ಪ್ರಾಣನಾಥಾ ಶ್ರೀವಿಜಯವಿಠ್ಠಲನ
ಕರುಣಿಸಿ ಕೊಡುವ ಭಾನಪ್ರಕಾಶಾ                            ।।೩।।


Labels: ಪವಮಾನ ಪವಮಾನ ಜಗದಾ ಪ್ರಾಣಾ, Pavamana Pavamana Jagada Prana, ವಿಜಯದಾಸರು, Vijayadasaru

ಸದಾ ಎನ್ನ ಹೃದಯದಲ್ಲಿ : Sada Enna Hridayadalli

ಸದಾ ಎನ್ನ ಹೃದಯದಲ್ಲಿ

ಕೀರ್ತನಕಾರರು : ವಿಜಯದಾಸರು
ರಾಗ : 
ಪಂತುವರಾಳಿ 
ತಾಳ : ಆದಿ

ಸದಾ ಎನ್ನ ಹೃದಯದಲ್ಲಿ ವಾಸ ಮಾಡೋ ಶ್ರೀ ಹರಿ
ನಾದಮೂರ್ತಿ ನಿನ್ನ ಪಾದ ಮೋದದಿಂದ ಭಜಿಸುವೆನೋ             ।।ಪ।।

ಙ್ಞಾನವೆಂಬೋ ನವರತ್ನದ ಮಂಟಪದ ಮಧ್ಯದಲ್ಲಿ
ವೇಣುಗಾನ ಲೋಲನ ಕುಳ್ಳಿರಿಸಿ ಧ್ಯಾನದಿಂದ ಭಜಿಸುವೇನೋ     ।।೧।।

ಭಕ್ತಿರಸವೆಂಬೋ ಮುತ್ತು ಮಾಣಿಕ್ಯದಾ ಹರಿವಾಣದಿ 

ಮುಕ್ತನಾಗಬೇಕು ಎಂದು ಮುತ್ತಿನಾರತಿ ಎತ್ತುವೇನೋ               ।।೨।।

ನಿನ್ನ ನಾನು ಬಿಡುವನಲ್ಲ ಎನ್ನ ನೀನು ಬಿಡಲು ಸಲ್ಲ
ಘನ ಮಹಿಮ ವಿಜಯವಿಠಲ ನಿನ್ನ ಭಕುತರ ಕೇಳೋ ಸೊಲ್ಲ        ।।೩।।


Labels:
ಸದಾ ಎನ್ನ ಹೃದಯದಲ್ಲಿ, Sada Enna Hridayadalli, ವಿಜಯದಾಸರು, Vijayadasaru

ಗಜವದನ ಪಾಲಿಸೋ : Gajavadana Paliso

ಗಜವದನ ಪಾಲಿಸೋ

ಕೀರ್ತನಕಾರರು : ವಿಜಯದಾಸರು
ರಾಗ :  ಬೇಗದೆ


ಗಜವದನ ಪಾಲಿಸೋ
ತ್ರಿಜಗದೊಡೆಯ ಶ್ರೀ ಭುಜಗ ಭೂಷಣ                        ।।ಪ॥

ಏಸು ದಿನಕೆ ನಿನ್ನ ವಾಸವ ಪೊಗಳುವೆ
ಲೇಸ ಪಾಲಿಸೊ ನಿತ್ಯ ವಾಸವನುತನೆ                        ।।೧।।

ಭಕ್ತಿಯೊಳು ಭಜಿಪೆನು ರಕ್ತಾಂಬರಧರ
ಮುಕ್ತಿ ಪಥವೀಯೋ ಶಕ್ತಿ ಸ್ವರೂಪ                              ।।೨।।

ಪೊಡವಿಯೊಳಗೆ ನಿನ್ನ ಬಿಡುವರಾರೋ ರನ್ನ
ಕಡು ಹರುಷದಿ ಕಾಯೋ ವಿಜಯ ವಿಟ್ಟಲ ದಾಸ             ।।೩।।


Labels: ಗಜವದನ ಪಾಲಿಸೋ, Gajavadana Paliso, ವಿಜಯದಾಸರು, Vijayadasaru

ಎಲ್ಲಿದ್ದರೇನು ಶ್ರೀಹರಿಗಲ್ಲದವನು : Ellidarenu Sriharigalladavanu

ಎಲ್ಲಿದ್ದರೇನು ಶ್ರೀಹರಿಗಲ್ಲದವನು

ಕೀರ್ತನಕಾರರು : ವಿಜಯದಾಸರು
ರಾಗ :  ಕಾಂಬೋದಿ  

ತಾಳ : ಝಂಪೆ 
 
ಎಲ್ಲಿದ್ದರೇನು ಶ್ರೀಹರಿಗಲ್ಲದವನು                           ।।ಪ।।

ನಿಲ್ಲದೆ  ಜಪಿಸಿದರೆ ಸಲ್ಲುವನೆ ಸದ್ಗತಿಗೆ 
ಕಪ್ಪೆ ಕಮಲದ ಬಳಿಯೆ ತಪ್ಪದೆ ಅನುಗಾಲ 
ಇಪ್ಪುದೈ ಒಂದು ಅರೆಘಳಿಗೆ ಬಿಡದೆ 
ಒಪ್ಪದಿಂದಲಿ ಅದರ ಪರಿಮಳದ ಸೊಬಗನೀ 
ಕಪ್ಪೆ ವಾಸನೆಗೊಂಡು ಹರುಷಪಡಬಲ್ಲುದೆ               ।।೧।।

ಹಾಲುಕೆಚ್ಚಲು ಬಳಿಯೆ ತೊಣಸಿ ಹತ್ತಿಕೊಂಡು 
ಕಾಲವನು ಕಳೆವ ಬಗೆ ಬಲ್ಲಿರೆಲ್ಲ 
ವೇಳೆ ವೇಳೆಗೆ ಹಸುವ ಕರೆದುಂಬ ನರನಂತೆ 
ಕೀಳು ತೊಣಸಿಯು ಉಂಡು ಹರುಷಪಡಬಲ್ಲುದೆ       ।।೨।।

ತುಳಸಿ ಸಾನ್ನಿಧ್ಯದಲಿ ನೀರುಳ್ಳಿಯನು ಹಾಕಿ 
ಹೊಲಸು ಹೋಗ್ವುದೆ ಹಲವು ಕಾಲಿದ್ದರೆ 
ತಿಳಿವಳಿಕೆ ಇಲ್ಲದವ ಸಿರಿ ವಿಜಯವಿಠ್ಠಲನ 
ಬಳಿಯಲಿದ್ದರೇನು ದೂರಿದ್ದರೇನು                         ।।೩।।

Labels: ಎಲ್ಲಿದ್ದರೇನು ಶ್ರೀಹರಿಗಲ್ಲದವನು, Ellidarenu Sriharigalladavanu, ವಿಜಯದಾಸರು, Vijayadasaru

ಶುಕ್ರವಾರ, ಆಗಸ್ಟ್ 30, 2013

ಹರಿಯ ಮರೆದುದಕಿಂತ ಪಾಪವಿಲ್ಲ, Hariya Maredudakinta Papavilla

ಹರಿಯ ಮರೆದುದಕಿಂತ ಪಾಪವಿಲ್ಲ

ಕೀರ್ತನಕಾರರು : ವಿಜಯದಾಸರು
ರಾಗ :  ಕಾಂಬೋದಿ
 
ತಾಳ : ಝಂಪೆ 

ಹರಿಯ ಮರೆದುದಕಿಂತ ಪಾಪವಿಲ್ಲ 
ಹರಿಸ್ಮರಣೆಯಿಂದಧಿಕ ಪುಣ್ಯ ಮತ್ತೊಂದಿಲ್ಲ            ।।ಪ॥ 

ಗೋಹತ್ಯ ಸುರಾಪಾನ ಕನಕತಸ್ಕರ ಸುಜನ-
ದ್ರೋಹ ಗುರುತಲ್ಪಗಮನ ಬಲು ಕಪಟ ವ್ಯಸನ 
ಬಾಹಿರವಾಗ್ ದ್ವೇಷ ಪರದಾರಗಮನ ವಿ-
ವಾಹಗಳ ಮಾಣಿಸುವ ಪಾಪಕಿಂತಲು ಮೇಲು        ।।೧।।

ಗಂಗಾನದಿಯಲ್ಲಿ ಸ್ನಾನ ಪ್ರಣವ ಆಚಮನ 
ಹಿಂಗದಲೆ ಗಾಯತ್ರಿಮಂತ್ರ ಮೌನ 
ತುಂಗ ದಾನ ಧರ್ಮ ವೃತ್ತಿಕ್ಷೇತ್ರ ರತುನ 
ಬಂಗಾರಯಿತ್ತಧಿಕ ಬಹಳ ಪುಣ್ಯ ಮೇಲು                ।।೨।।

ಹಾಸ್ಯವಿರೋಧ ಮದ ಮತ್ಸರ ಪರಕಾರ್ಯ 
ದಾಸ್ಯದಲಿ ಕೆಡಿಸುವ ಶಠನ ಲೋಭಿ 
ವೈಶ್ವದೇವಾಹಿತ ಅತಿಥಿಗಳ ನಿಂದ್ಯ ರ 
ಹಸ್ಯ ದೂರುವ ಬಲು ಪಾಪಕಿಂತಲು ಮೇಲು         ।।೩।।

ತೀರ್ಥಯಾತ್ರೆ ವೇದ ಭಾಗವತ ಪುರಾಣ 
ಸಾರ್ಥಕ್ಯವಾದ ಪ್ರವಚನ ಶಾಸ್ತ್ರ 
ಪ್ರಾರ್ಥನೆ ಸ್ತೋತ್ರಗೀತ ಸಾರ ಪ್ರಬಂಧ 
ಅರ್ಥ ಪೇಳುವ ಬಲು ಪುಣ್ಯಕಿಂತಲು ಮೇಲು           ।।೪।।

ಮಿತ್ರಘ್ನಗರಳಪ್ರಯೋಗ ಗರ್ಭಿಣಿವಧ 
ಗೋತ್ರಸಂಸರ್ಗ ಬಲು ಪ್ರಾಣಹಿಂಸಾ 
ಕ್ಷೇತ್ರ ಅಪಹಾರ ಕ್ಷುದ್ರವಾಣಿ ನಿಜಕ-
ಳತ್ರಾದಿ ದ್ರೋಹ ಬಲು ಪಾಪಕಿಂತಲು ಮೇಲು        ।।೫।।

ವೇದಾದಿ ಕರ ಸರ್ವದಲ್ಲಿ ಗಯಾಶ್ರಾದ್ಧ 
ಭೂಧರ ಸಮಾಗಮ ಸತ್ ಶ್ರವಣಾ 
ಆದಿತ್ಯಚಂದ್ರ ಉಪರಾಗ ಪರ್ವಣಿ ನಾನಾ-
ರಾಧನೆಯಲಿ ಬಲು ಪುಣ್ಯಕಿಂತಲು ಮೇಲು             ।।೬।।

ಆವಾವ ಪಾಪ ಪುಣ್ಯಗಳದರ ಕಿಂಕರವು 
ದೇವನ ನೆನೆಸಿದಂಥ ನೆನೆಯದಂಥ 
ಜೀವರೊಳಗೊಬ್ಬ ಮುಕ್ತನು ಒಬ್ಬ ತಮಯೋಗ್ಯ 
ಕೈವಲ್ಯಪತಿ ನಮ್ಮ ವಿಜಯವಿಠ್ಠಲ ಪ್ರೇರಕಾ           ।।೭।।

Labels: ಹರಿಯ ಮರೆದುದಕಿಂತ ಪಾಪವಿಲ್ಲ, Hariya Maredudakinta Papavilla, ವಿಜಯದಾಸರು, Vijayadasaru

ಕೈಲಾಸವಾಸ ಗೌರೀಶ ಈಶ : Kailasavasa Gourisha Isha

ಕೈಲಾಸವಾಸ ಗೌರೀಶ ಈಶ

ಕೀರ್ತನಕಾರರು : ವಿಜಯದಾಸರು

ಕೈಲಾಸವಾಸ ಗೌರೀಶ ಈಶ                                   ।।ಪ॥

ತೈಲಧಾರೆಯಂತೆ ಮನಸು ಕೊಡೊ ಹರಿಯಲ್ಲಿ            ।।ಅ.ಪ॥ 

ಅಹೋರಾತ್ರಿಯಲ್ಲಿ ನಾನು ಅನುಚರಾಗ್ರಣಿವಾಗಿ 
ಮಹಿಯೊಳಗೆ ಚರಿಸಿದೆನೊ ಮಹದೇವನೆ 
ಅಹಿಭೂಷಣನೆ ಎನ್ನವಗುಣಗಳೆಣಿಸಿದಲೆ 
ವಿಹಿತಧರ್ಮದಲಿಡು ವಿಷ್ಣುಭಕುತಿ ಕೊಡೊ ಶಂಭೋ     ।।೧।।

ಮನಸು ಕಾರಣವಲ್ಲ ಪಾಪಪುಣ್ಯಂಗಳಿಗೆ 
ಅನಲಾಕ್ಷ ನಿನ್ನ ಪ್ರೇರಣೆ ಅಲ್ಲದೆ 
ದನುಜ ಗಜ ಹಾರಿಯೆ ದಂಡ ಪ್ರಣಮವ ಮಾಳ್ಪೆ 
ಮಣಿಸು ಈ ಮನಸು ಸಜ್ಜನರ ಸಿರಿ ಚರಣದಲ್ಲಿ             ।।೨।।

ಭಾಗೀರಥೀಧರನೆ ಭಯವ ಪರಿಹರಿಸೊ ಲೇ-
ಸಾಗಿ ಒಲಿದು ನೀ ಸತತ ಶರ್ವದೇವ 
ಭಾಗವತಜನಪ್ರೀಯ ವಿಜಯವಿಠಲನಂಘ್ರಿ 
ಜಗು ಮಾಡದೆ ಭಾಜಿಪ ಭಾಗ್ಯವನು ಕೊಡೊ ಶಂಭೋ  ।।೩।।

Labels: ಕೈಲಾಸವಾಸ ಗೌರೀಶ ಈಶ, Kailasavasa Gourisha Isha, ವಿಜಯದಾಸರು, Vijayadasaru

ಎಂದಿಗಾಹುದೋ ನನ್ನ ದರುಶನ : Endihahudo Nanna Darushana

ಎಂದಿಗಾಹುದೋ ನನ್ನ ದರುಶನ 

ಕೀರ್ತನಕಾರರು : ವಿಜಯದಾಸರು
ರಾಗ :  ತೋಡಿ
 
ತಾಳ : ರೂಪಕ
 
ಎಂದಿಗಾಹುದೋ ನನ್ನ ದರುಶನ          ।।ಪ॥

ಇಂದಿರೇಶ ಮುಕುಂದ ಕೇಶವ              ।।ಅ.ಪ॥

ಗಾನಲೋಲನೆ ದೀನವತ್ಸಲ 
ಮಾನದಿಂದಲಿ ನೀನೆ ಪಾಲಿಸೋ          ।।೧।।

ಯಾರಿಗೆ ಮೊರೆ ಇಡುವೆ ಶ್ರೀಹರಿ 
ಸಾರಿ ಬಂದು ನೀ ಈಗಲೇ ಪೊರಿ          ।।೨।।

ಗಜವ ಪಾಲಿಸೊ ಗರುವದಿಂದಲಿ 
ಭುಜಗಶಯನ ಶ್ರೀ ವಿಜಯವಿಠಲಾ       ।।೩।।

Labels: ಎಂದಿಗಾಹುದೋ ನನ್ನ ದರುಶನ, Endihahudo Nanna Darushana, ವಿಜಯದಾಸರು, Vijayadasaru

ಬುಧವಾರ, ಆಗಸ್ಟ್ 28, 2013

ಪರದೇಶಿ ನೀನು ಸ್ವದೇಶಿ ನಾನು : Paradesi Ninu Svadeshi Nanu

ಪರದೇಶಿ ನೀನು ಸ್ವದೇಶಿ ನಾನು

ಕೀರ್ತನಕಾರರು : ವಿಜಯದಾಸರು
ರಾಗ :  ಕಾಂಬೋದಿ
ತಾಳ : ಝಂಪೆ


ಪರದೇಶಿ ನೀನು ಸ್ವದೇಶಿ ನಾನು                                    ।।ಪ॥

ಪರಮ ಭಾಗವತರ ಬಾ ಹೋಗಿ ಕೇಳೋಣ                      ।।ಅ.ಪ॥

ಎನಗೆ ಜನಕನು ನೀನು ನಿನಗಾವ ಜನಕನೊ 
ಜನನಿ ಇಂದಿರೆದೇವಿ ನಿನಗಾವಳೋ 
ವನಜಪೀಠನು ಭ್ರಾತ ನಿನಗಾವ ಭ್ರಾತನೋ 
ಇನ ಸೋಮ ಮಾತುಳರು ನಿನಗಾವ ಮಾತುಳರೊ            ।।೧।।

ಸುರನದೀ ಅಗ್ರಜಳು ನಿನಗೆ ಅಗ್ರಜಳಾರು 
ಶರನಿಧಿ ಭಾವ ನಿನಗಾರು ಭಾವ 
ಸ್ಮರನು ಕಿರಿಸಹಭವನು ನಿನಗೆ ಸಹಭವನಾರೊ 
ಸುರರು ಬಂಧುಗಳೆನಗೆ ನಿನಗಾರು ಬಾಂಧವರೊ                ।।೨।।

ವರ ಇಳಾ ಸಾಮಾತೆ ನಿನಗೆ ಸಾಮಾತೆ ಯಾರೊ 
ಮರುತ ದೇವರು ಗುರು ನಿನಗಾರು ಗುರುವೊ 
ಸಿರಿಯರಸ ವಿಜಯವಿಠ್ಠಲರೇಯನೆ ನಿನ್ನ 
ಚರಣಸೇವಕ ನಾನು ನೀನಾರ ಸೇವಕನೊ                         ।।೩।।

Labels: ಪರದೇಶಿ ನೀನು ಸ್ವದೇಶಿ ನಾನು, Paradesi Ninu Svadeshi Nanu, ವಿಜಯದಾಸರು, Vijayadasaru

ಗುರುವಾರ, ಆಗಸ್ಟ್ 22, 2013

ಯಾಕೆ ಬಂದೆಯೊ ಎಲೆ ಜೀವ : Yake Bandeyo Ele Jiva

ಯಾಕೆ ಬಂದೆಯೊ ಎಲೆ ಜೀವ

ಕೀರ್ತನಕಾರರು : ವಿಜಯದಾಸರು
ರಾಗ :  ಸಿಂಧುಭೈರವಿ  
ತಾಳ : ಆದಿ

ಯಾಕೆ ಬಂದೆಯೊ ಎಲೆ ಜೀವ ನೀ-                        ।।ಪ॥

ನ್ಯಾಕೆ ಬಂದೆಯೋ ಎಲೆ ಜೀವ ಈ 
ಲೋಕದ ಅನುಭವ ಬೇಕಾಯ್ತೆ ನಿನಗೆ                     ।।ಅ.ಪ॥

ಮೇರು ಪರ್ವತದಲ್ಲಿ ವಾರಣವಂತನಾಗಿ 
ಮಾರಮಣನ ಪಾದ ಭಜನೆಯ ಬಿಟ್ಟು ನೀ               ।।೧।।

ಹೊನ್ನು ಹೆಣ್ಣ ಮಣ್ಣು ಮೂರು ತನ್ನದಾದೀತೆಂದು 
ಬಣ್ಣ ಸುಖವ ನಂಬಿ ಬಂದೆಯಾ ಜೀವ                     ।।೨।।

ಆದದ್ದೆಲ್ಲಾಯಿತು ಹೋದ ಮಾತುಗಳ್ಯಾಕೆ 
ಶ್ರೀದ ವಿಜಯವಿಠಲನ ನೆನೆಕಂಡ್ಯ ಮನವೇ             ।।೩।।

Labels: ಯಾಕೆ ಬಂದೆಯೊ ಎಲೆ ಜೀವ, Yake Bandeyo Ele Jiva, ವಿಜಯದಾಸರು, Vijayadasaru

ಬುಧವಾರ, ಆಗಸ್ಟ್ 21, 2013

ಮೊಸರು ತಂದಿನೊ ರಂಗಾ : Mosaru Tandino Ranga

ಮೊಸರು ತಂದಿನೊ ರಂಗಾ

ಕೀರ್ತನಕಾರರು : ವಿಜಯದಾಸರು  
ರಾಗ :  ಶಂಕರಾಭರಣ  
ತಾಳ : ಆದಿ 

ಮೊಸರು ತಂದಿನೊ ರಂಗಾ ಮಾರ್ಗವ ಬಿಡೊ 
ಕಿಸರು ಹೊರಲಿ ಬೇಡ ಕಲಕೆ ಸಾರೊ                                  ।।ಪ॥ 

ಪಶುಗಾವಿ ನೀ ಎನ್ನ ಹೆಸರುಗೊಳಲಿಬೇಡ 
ಹಸನಾದ ಮುತ್ತಿನ ಸರಗಳು ಹರಿದಾವೋ
ನಿಶೆಯ ವೇಳೆಯು ಅಲ್ಲಾ ನಿನಗೆ ಬುದ್ಧಿಯು ಸಲ್ಲಾ 
ವಶಕರವಾಗುವಳೆ ಒಲವು ಇಲ್ಲದೆ                                      ।।೧।।

ಎದೆಯ ಮುಟ್ಟಲಿ ಬೇಡ ಎಳೆನಗೆ ನಗಲಿ ಬೇಡ 
ಬದಿ ಬಗಲು ಪಿಡಿದು ನೋಡವರೆ ಹೀಗೆ 
ಕದವ ಮುಚ್ಚಿಕೊಂಡು ಕಾಕು ಎಬ್ಬಿಸುವರೆ 
ಸದನಕ್ಕೆ ಹೋಗಬೇಕು ಸರಸವೆಕೋ                                   ।।೨।।

ಹಿಂದೆ ಬಂದವರು ಏನೆಂದು ಒಲಿದರೊ ಕಾಣೆ 
ಒಂದಿಷ್ಟು ಚೆಂದವಿಲ್ಲ ಚೆಲುವಿಕೆಯಿಲ್ಲಾ 
ಕಂದರ್ಪಕೋಟಿ ತೇಜ ವಿಜಯವಿಠ್ಠಲ ಎನ್ನ 
ಮಂದಿರಕೆ ಬಾರೊ ನಿನ್ನ ಮನಸು ದಣಿಸುವೆ                           ।।೩।।

Labels: ಮೊಸರು ತಂದಿನೊ ರಂಗಾ , Mosaru Tandino Ranga, ವಿಜಯದಾಸರು, Vijayadasaru 

ಸೋಮವಾರ, ಆಗಸ್ಟ್ 19, 2013

ಯಾಚಕರು ಪರರ ಸಂಕಟ ಬಲ್ಲರೆ : Yachakaru Parara Sankata Ballare

ಯಾಚಕರು ಪರರ ಸಂಕಟ ಬಲ್ಲರೆ 

ಕೀರ್ತನಕಾರರು : ವಿಜಯದಾಸರು  

ಯಾಚಕರು ಪರರ ಸಂಕಟ ಬಲ್ಲರೆ                                    ।।ಪ।।

ಭೂಚಕ್ರದೊಳು ಗಾಳಿಯಂತೆ ತಿರುಗಲು ಬಿಡರು                  ।।ಅ.ಪ।।

ಕೌಪೀನವನೆ ಧರಿಸಿ ಮುಖವ ಡೊಂಕನೆ ಮಾಡಿ 
ಕೋಪದಿಂದಲಿ ಕರವೆತ್ತಲ್ಯಾಕೋ 
ವಾಪಿ ಕೂಪವ ಮೀರಿ ಸಮುದ್ರ ದಾಟಿ ತಾ 
ರೂಪಾಂತರವ ತಾಳಿ ಮನೆ ಮನೆ ಪೊಕ್ಕರು ಬಿಡರು             ।।೧।।

ವಿಷವ ಸವಿದುಂಡು ಮಹಾಮಡುವ ಪ್ರವೇಶಿಸಿ 
ವಸುಧೆಯೊಳು ತಿರಿಕೆಬೇಡಿ ತಿಂದರು 
ಬೆಸನೆ ವನವನ ತಿರುಗಿ ಅಜ್ಞಾತವಾಗಿ ಮಾ-
ನಸದಲ್ಲಿ ಇದ್ದುಗ್ರಕರ್ಮಮಾಡಲು ಬಿಡರು                           ।।೨।।

ಜುಟ್ಟು ಜನಿವಾರ ಕಿತ್ತುಕೊಂಡು ಯತಿಯಾಗಿ 
ಕಟ್ಟಕಡೆಯಲಿ ಗೃಹಸ್ಥಧರ್ಮ ತೊರೆದು 
ಹುಟ್ಟುಗತಿಯಿಲ್ಲೆನುತ ಕೃಷ್ಣ ಕೃಷ್ಣಾ ವಿಜಯ 
ವಿಠಲನ ಪಾದಕ್ಕೆ ಮೊರೆಯಿಟ್ಟರೂ ಬಿಡರು                         ।।೩।। 

Labels: ಯಾಚಕರು ಪರರ ಸಂಕಟ ಬಲ್ಲರೆ , Yachakaru Parara Sankata Ballare, ವಿಜಯದಾಸರು, Vijayadasaru

ಆನಂದ ಆನಂದ ಮತ್ತೆ ಪರಮಾನಂದ : Ananda Ananda Matte Paramananda

ಆನಂದ ಆನಂದ ಮತ್ತೆ ಪರಮಾನಂದ

ಕೀರ್ತನಕಾರರು : ವಿಜಯದಾಸರು    
ರಾಗ :  ಶಂಕರಾಭರಣ 
ತಾಳ : ಆದಿ 

ಆನಂದ ಆನಂದ ಮತ್ತೆ ಪರಮಾನಂದ                                                 ।।ಪ।।
ಆ ನಂದನ ನಂದನೊಲಿಯೆ ಏನಂದದ್ದೆ ವೇದವೃಂದಾ                              ।।ಅ.ಪ।।

ಆ ಮೊದಲು ಕ್ಷ ಕಾರಾಂತ ಈ ಮಹಾ ವರ್ಣಗಳೆಲ್ಲ
ಸ್ವಾಮಿಯಾದ ವಿಷ್ಣುವಿನ ನಾಮವೆಂದು ತಿಳಿದವರಿಗೆ                                ।।೧।।

ಪೋಪುದು ಬರುತಿಪ್ಪುದು ಕೋಪ ಮತ್ತೆ ಶಾಂತಿ ಮಾಡುವುದು  
ರೂಪ ಲಾವಣ್ಯವು ಹರಿವ್ಯಾಪಾರವೆಂದರಿತವರಿಗೆ                                   ।।೨।।

ಜಲ ಕಾಷ್ಠ ಶೈಲ ಗಗನ ನೆಲ ಪಾವಕ ವಾಯು ತರು 
ಫಲ ಪುಷ್ಪ ಬಳ್ಳಿಲಿ ಹರಿ ಒಳಗೆ ವ್ಯಾಪ್ತನೆಂದವಗೆ                                     ।।೩।।

ತಾರೋ ಬಾರೋ ಬೀರೊ ಸಾರೊ ಮಾರೊ ತೋರೊ ಹಾರೊ ಹೋರೊ
ಸೇರೋ ತೋರೆಂಬುದೀಶಪ್ರೇರಣೆ ಎಂದವರಿಗೆ                                     ।।೪।।

ಮಧ್ವಶಾಸ್ತ್ರ ಪ್ರವಚನ ಮುದ್ದುಕೃಷ್ಣನ ದರುಶನ 
ಸಿದ್ಧ ವಿಜಯವಿಠಲನ್ನ ಪೊಂದಿ ಕೊಂಡಾಡುವವರಿಗೆ                                ।।೫।।

Labels: ಆನಂದ ಆನಂದ ಮತ್ತೆ ಪರಮಾನಂದ , Ananda Ananda Matte Paramananda, ವಿಜಯದಾಸರು, Vijayadasaru

ಎಲೆ ಮನ ಮುರಾರಿಯನೆ ಕೊಂಡಾಡು : Ele Mana Murariyane Kondadu

ಎಲೆ ಮನ ಮುರಾರಿಯನೆ ಕೊಂಡಾಡು

ಕೀರ್ತನಕಾರರು : ವಿಜಯದಾಸರು  
ರಾಗ :  ಪೂರ್ವ ಕಲ್ಯಾಣಿ
ತಾಳ : ಆದಿ 

ಎಲೆ ಮನ ಮುರಾರಿಯನೆ ಕೊಂಡಾಡು                    ।।ಪ।।
ಸಾಧನಕಿದು ಉಪಾಯ ನೋಡು                            ।।ಅ.ಪ।।

ಕಾಲನ ದೂತರ ಕಾಲಿಗೆ ಬಿದ್ದರೆ 
ನಾಳೆಗೆ ನಿಲುವರೆ ನೋಡು                                   ।।೧।।

ಮಂದಿಯ ಮಾತಿಗೆ ಎಂದೆಂದು ಮರುಗದೆ
ಮುಂದಿನ ಗತಿ ನೀ ನೋಡು                                  ।।೨।।

ರಾಜೀವಮುಖಿಯರ ಸೋಜಿಗ ಮೆಚ್ಚದೆ 
ವಿಜಯವಿಠಲನ ಪಾಡು                                        ।।೩।।

Labels: ಎಲೆ ಮನ ಮುರಾರಿಯನೆ ಕೊಂಡಾಡು, Ele Mana Murariyane Kondadu, ವಿಜಯದಾಸರು, Vijayadasaru

ಮಂಗಳವಾರ, ಆಗಸ್ಟ್ 13, 2013

ಚರಣವ ತೋರೈ : Charanava Torai

ಚರಣವ ತೋರೈ

ಕೀರ್ತನಕಾರರು : ವಿಜಯದಾಸರು

ಚರಣವ ತೋರೈ ಚೆಲುವರ ಅರಸನೆ 
ಚರಣವ ತೋರೈ                                                                ।।ಪ।। 

ಸ್ಮರಣೆ ಮಾತ್ರದಲಿ ಮುಕುತಿಯ ಕೊಡುವ 
ಚರಣವ ತೋರೈ                                                                ।।ಅ.ಪ।।

ರಮ್ಮೆಯ ಮನಕೆ ಬೆಡಗು ತೋರಿದ ಚರಣವ ತೋರೈ 
ಬೊಮ್ಮಾದಿಗಳ ಮನಕೆ ನಿಲುಕದ ಚರಣವ ತೋರೈ 
ಚಿಮ್ಮಿ ರಾವಣನ ಬಲುದೂರವ ಗೈದ ಚರಣವ ತೋರೈ 
ಘಮ್ಮನೆ ಮೊಸರ ಮೆದ್ದು ನಡೆದ ಚರಣವ ತೋರೈ                      ।।೧।।

ಗೋಕುಲಭೂಮಿಯ ಪಾವನಮಾಡಿದ ಚರಣವ ತೋರೈ 
ಲೋಕವನೆಲ್ಲ ಅಡಗಿಸಿಕೊಂಡ ಚರಣವ ತೋರೈ 
ಬೇಕೆಂದು ಕುಬುಜೆಯ ಮನೆಗೆ ಪಾದ ಚರಣವ ತೋರೈ 
ನೂಕಿಭವಾಬ್ಧಿಯ ಬತ್ತಿಸಿಬಿಡುವ ಚರಣವ ತೋರೈ                       ।।೨।।

ಬಿಡದಲೆ ಸರ್ವಜ್ಞತೀರ್ಥರಿಗೊಲಿದ ಚರಣವ ತೋರೈ 
ಬಡವರಾಧಾರ ದಿವ್ಯಭೂಷಣವಿಟ್ಟ ಚರಣವ ತೋರೈ 
ಕಡುಮುದ್ದು ಸಿರಿಕೃಷ್ಣ ವಿಜಯವಿಠಲ ನಿನ್ನ ಚರಣವ ತೋರೈ 
ಉಡುಪಿಯ ಸ್ಥಳದಲಿ ನಿಂದು ಪೂಜೆಯಗೊಂಬ ಚರಣವ ತೋರೈ    ।।೩।।

Labels: ಚರಣವ ತೋರೈ, Charanava Torai, ವಿಜಯದಾಸರು, Vijayadasaru 

ಬುಧವಾರ, ಜುಲೈ 31, 2013

ಕಾದನಾ ವತ್ಸವ ಹರಿ : Kadana Vatsava Hari

ಕಾದನಾ ವತ್ಸವ ಹರಿ 

ಕೀರ್ತನಕಾರರು : ವಿಜಯದಾಸರು 
ರಾಗ :  ಯಮನ್ ಕಲ್ಯಾಣಿ
ತಾಳ : ರೂಪಕ 

ಕಾದನಾ ವತ್ಸವ ಹರಿ ಕಾದನಾಮೋದದಿಂದ ಮಾಧವ 
ವೇದವೇದ್ಯ ಸಾಧುವಿನುತ ರಾಧಿಕಾರಮಣ ಕೃಷ್ಣ                       ।।ಪ।।

ಎಳಗರಿಕೆಯಿರುವ ಸ್ಥಳದಿ ನೆರೆದು ವಸ್ತುಗಳನೆ ನಿಲಿಸಿ 
ಕೊಳಲು ತನ್ನ ಕೈಲಿ ಪಿಡಿದು ಮುರಳಿಗಾನ ಮಾಡುವ                 ।।೧।।

ಮರದ ನೆರಳಿಗೆ ಕೃಷ್ಣ ಕರುಗಳನ್ನ ನಿಲ್ಲಿಸಿ 
ಕರೆದು ಪಾಲು ಕರೆದು ತಂದು ಬಾಯೊಳುಣಿಸುತ್ತ                       ।।೨।।

ಉಡುಗಳಂತೆ ಕರುಗಳು ನಡುವೆ ಚಂದ್ರಧಾರೆಯೊಳು
ಪೊಡವಿಯೊಳಗೆ ಬೆಳಗಲು ಆ ಮೃಡನು ಕೊಂಡಾಡಲು                ।।೩।।

ಒಂದು ತಿಂಗಳ ಕರುಗಳು ಇಂದಿರೇಶ ಮೇಯಿಸಲು 
ಒಂದು ವರುಷ ಕರುಗಳಂತೆ ಆನಂದದಿಂದಲಿ ಬೆಳೆದವು               ।।೪।।

Labels: ಕಾದನಾ ವತ್ಸವ ಹರಿ, Kadana  Vatsava  Hari, ವಿಜಯದಾಸರು, Vijayadasaru

ಕೊಡುವವನು ನೀನು ಕೊಂಬುವನು ನಾನು : Koduvavanu Neenu Kombuvanu Naanu

ಕೊಡುವವನು ನೀನು ಕೊಂಬುವನು ನಾನು 

ಕೀರ್ತನಕಾರರು : ವಿಜಯದಾಸರು 
ರಾಗ :  ಕಾಂಬೋದಿ  
ತಾಳ : ಝಂಪೆ

ಕೊಡುವವನು ನೀನು ಕೊಂಬುವನು ನಾನು 
ಬಡಮನದ ಮನುಜನ ಬೇಡಿ ಫಲವೇನು                  ।।ಪ।।

ಹದಿನಾರು ಹಲ್ಲುಗಳ ಬಾಯ್ದೆರೆದು ಬೇಡಿದರೆ
ಇದು ಸಮಯವಲ್ಲೆಂದು ಪೇಳಿ ತಾನು 
ಮದನಕೇಳಿಗೆ ನೂರನೊಂದಾಗಿ ನೋಡುವನು 
ಮದಡ ಮಾನವನೇನು ಕೊಡಬಲ್ಲ ಹರಿಯೆ              ।।೧।।

ಗತಿಯಿಲ್ಲವೆಂತೆಂದು ನಾನಾ ಪ್ರಕಾರದಲ್ಲಿ 
ಮತಿಗೆಟ್ಟು ಪೊಗಳಿದರೆ ತನ್ನ 
ಸತಿ-ಸುತರ ಕೇಳಬೇಕೆಂದು ಮೊಗತಿರುಹುವ
ಅತಿದುರುಳ ಮತ್ತೇನು ಕೊಡಬಲ್ಲ ಹರಿಯೆ                ।।೨।।

ಹೀನವೃತ್ತಿಯ ಜನರಿಗಾಸೆಯನು ಬಡುವುದು 
ಗಾಣದೆತ್ತು ತಿರುಗಿ ಬಳಲಿದಂತೆ 
ಭಾನುಕೋಟಿತೇಜ ವಿಜಯವಿಠಲರೇಯ 
ನೀನಲ್ಲದನ್ಯತ್ರ ಕೊಡುಕೊಂಬರುಂಟೇ                     ।।೩।।

Labels: ಕೊಡುವವನು ನೀನು ಕೊಂಬುವನು ನಾನು, Koduvavanu Neenu  Kombuvanu Naanu, ವಿಜಯದಾಸರು, Vijayadasaru

ಗುರುವಾರ, ಜುಲೈ 25, 2013

ಬಂದು ನಿಲ್ಲೋ ಕಣ್ಣ ಮುಂದೆ : Bandu Nillo Kanna Munde

ಬಂದು ನಿಲ್ಲೋ ಕಣ್ಣ ಮುಂದೆ 

ಕೀರ್ತನಕಾರರು : ವಿಜಯದಾಸರು
ರಾಗ : ಆನಂದಭೈರವಿ 
ತಾಳ : ಅಟ್ಟ

ಬಂದು ನಿಲ್ಲೋ ಕಣ್ಣ ಮುಂದೆ            ।।ಪ।।

ಬಂದು ನಿಲ್ಲೋ ನನ್ನ ಪಾದಕ್ಕೆ ವಂದಿಪೆ 
ಇಂದಿರೆಯರಸ ಗೋವಿಂದ ಮುಕುಂದ ನೀ       ।।ಅ.ಪ।।

ಅರಳಿದ ಕೆಂದಾವರೆಯ ಧಿಕ್ಕರಿಸುವ 
ಚರಣಾರವಿಂದವ ನಿರುತ ತೋರು ನೀನು         ।।೧।।

ನೀಲಾಲಕ ಭ್ರಮರಕುಂತಲಮಂಡಿತ 
ಮೇಲಾದ ರಾಕೇಂದು ಮುಖವ ತೋರಿಸುತಲಿ   ।।೨।।

ಪದುಮನೇತ್ರನೆ ನಿನ್ನ ಸದನವೆನುತ ಎನ್ನ 
ಹೃದಯದೊಳಗೆ ನಿಂತು ನಾ ಮುದದಿ ಭಜಿಸುವಂತೆ  ।।೩।।

ಕರಿಯ ಮೊರೆಯ ಕೇಳಿ ಕರುಣದಿಂ ಬಂದಂತೆ 
ಕರೆದಾಗ ನಿನ್ನ ದಿವ್ಯಚರಣವ ತೋರಿಸುತ         ।।೪।।

ಅಜಭವಾದಿಗಳಿಗೆ ನಿಜಪದವನಿತ್ತಂತೆ 
ಭಜಿಪ ಭಕ್ತರಿಗೊಲಿವ ವಿಜಯವಿಠಲರೇಯ         ।।೫।।


Labels: ಬಂದು ನಿಲ್ಲೋ ಕಣ್ಣ ಮುಂದೆ, Bandu Nillo Kanna Munde, ವಿಜಯದಾಸರು, Vijayadasaru

ಬುಧವಾರ, ಜುಲೈ 24, 2013

ವಿಠಲಾ ನಿನ್ನ ನಂಬಿದೆ ಎನ್ನ ಕಾಯೊ : Vithala Ninna Nambide Enna Kayo

ವಿಠಲಾ ನಿನ್ನ ನಂಬಿದೆ ಎನ್ನ ಕಾಯೊ 

ಕೀರ್ತನಕಾರರು : ವಿಜಯದಾಸರು 
ರಾಗ : ಸಾರಂಗ 
ತಾಳ : ಝಂಪೆ

ವಿಠಲಾ ನಿನ್ನ ನಂಬಿದೆ ಎನ್ನ ಕಾಯೊ 
ಪುಟ್ಟುವದು ಬಿಡಿಸೊ ನಿನ್ನವರೊಳಗಿರಿಸೊ              ।।ಪ।।

ಬಹುಕಾಲ ಮಲಮೂತ್ರ ಡೊಳ್ಳಿನೊಳು ಬಿದ್ದು 
ಹಲುಬಿದೆ ಒಂದಿಷ್ಟು ನೆಲೆಗಾಣದೆ ನಾನು 
ಹಲವು ಮಾತೇನು ಎನಗೆ ಬಿಡದು 
ಸಲಹಬೇಕಯ್ಯಾ ಸಮುದ್ರಶಯ್ಯಾ                        ।।೧।।

ಕರಪಿಡಿದು ಎತ್ತುವ ಬಿರುದು ಪರಾಕ್ರಮ 
ಮರಳಿ ಮಿಗಿಲೊಂದು ದೇವರಿಗೆ ಉಂಟೆ 
ಮರೆವು ಮಾಡದೆ ಮಹಾದುರಿತವ ಪರಿ 
ಹರಿಸು ಸ್ಮರಣೆಯನ್ನು ಇತ್ತು ಕೀರ್ತನೆ ಪೇಳಿಸೋ      ।।೨।।

ಬಿನ್ನಹ ಲಾಲಿಸು ಚೆನ್ನ ಲಕುಮಿಪತಿ 
ಚೆನ್ನಾಗಿಡು ನಿತ್ಯ ಪ್ರಾಣನಾಥಾ ಅಭಯಹಸ್ತಾ 
ಅನ್ನದಾತಾ ಸಿರಿ ವಿಜಯವಿಠ್ಠಲರೇಯಾ 
ಸನ್ನಿಧಿಯಲ್ಲಿ ಎನ್ನ ಸಂತೋಷಪಡಿಸೊ                    ।।೩।।

Labels: ವಿಠಲಾ ನಿನ್ನ ನಂಬಿದೆ ಎನ್ನ ಕಾಯೊ, Vithala Ninna Nambide Enna Kayo, ವಿಜಯದಾಸರು, Vijayadasaru


ಮಂಗಳವಾರ, ಜುಲೈ 23, 2013

ದಯಮಾಡು ದಯಮಾಡು ಎನ್ನ ಮೇಲೆ : Dayamadu Dayamadu Enna Mele

ದಯಮಾಡು ದಯಮಾಡು ಎನ್ನ ಮೇಲೆ

ಕೀರ್ತನಕಾರರು : ವಿಜಯದಾಸರು 
ರಾಗ : ಪಾಡಿ 
ತಾಳ : ಝಂಪೆ 

ದಯಮಾಡು ದಯಮಾಡು ಎನ್ನ ಮೇಲೆ 
ಅಂತರಂಗದೊಳಿಪ್ಪ ಅಚ್ಯುತ ಮೂರ್ತಿ                     ।।ಪ।।

ಗಂಧ ಪರಿಮಳ ಕುಸುಮ ಜಾತಿ ಮಲ್ಲಿಗೆ ಮಾಲೆ 
ಮಂದಾರ ಹಾರ ಕೊರಳೊಳಿಡಲೂ 
ಚಂದವಿಲ್ಲವೆಂದು ತೆಗೆದು ಬಿಸಾಟಿ ಊರ 
ಹಂದಿಯಂದದಿ ಇಲ್ಲಿ ಇಪ್ಪ ನರಗೆ                            ।।೧।।

ಹೆತ್ತತುಪ್ಪ ಸಣ್ಣಶಾವಿಗೆ ಪರಮಾನ್ನ 
ಹೆತ್ತತಾಯಿ ತಂದು ಉಣ್ಣಬಡಿಸಲು 
ಅತ್ತ ಮೊಗವಗಚಿ ತೊಟ್ಟು ಉಣಬಡಿಸಿದ 
ಹೊತ್ತು ಓಗರ ತಿಂದು ಇಪ್ಪೆನೆಂಬ ನರಗೆ                  ।।೨।।

ತುಂಬಿದ ಹೊಳೆಯಲ್ಲಿ ಹರಿಗೋಲಿಟ್ಟುಕೊಂಡು 
ಅಂಬಿಗ ತಡೆಯದೆ ದಾಟಿಸಲು 
ಅಂಬುವಾಸನೆ ನೋಡಿ ದಾಟಿ ಪೋಗುವೆನೆಂ 
ದೆಂಬ ಮಾನವನಾದೆ ವಿಜಯವಿಠ್ಠಲ ಕರುಣೀ            ।।೩।।

Labels: ದಯಮಾಡು ದಯಮಾಡು ಎನ್ನ ಮೇಲೆ, Dayamadu Dayamadu Enna Mele, ವಿಜಯದಾಸರು, Vijayadasaru

ಮನವೆ ನೀ ದೃಢವಾದರೆ : Manave Nee Drudhavadare

ಮನವೆ ನೀ ದೃಢವಾದರೆ

ಕೀರ್ತನಕಾರರು : ವಿಜಯದಾಸರು 
ರಾಗ : ಸಾವೇರಿ 
ತಾಳ : ಆದಿ

ಮನವೆ ನೀ ದೃಢವಾದರೆ ಮನಸಿ-
ಜನಯ್ಯನ ಚರಣ ಕಾಂಬೆನೊ ನಾನು             ।।ಪ।।

ಹಂಬಲವನ್ನು ಮಾಡದಿದ್ದರೆ ಹರಿ 
ಎಂಬ ನಾಮಪೀಯೂಷ ದೊರಕುವುದು            ।।೧।।

ಚಂಚಲವುಳ್ಳವನಾಗದಿದ್ದರೆ ದುಷ್ಟ
ಪಂಚೇಂದ್ರಿಯಗಳನ್ನು ಸ್ಥಿರವಾಗಿ ನಿಲ್ಲಿಸುವೆ            ।।೨।।

ಅತ್ತಲಿತ್ತಲಿ ಪೋಗದಿರು ಎ-
ನ್ನತ್ತ ವಿಜಯವಿಠಲ ಬರಲಿ                      ।।೩।।

Labels: ಮನವೆ ನೀ ದೃಢವಾದರೆ, Manave Nee Drudhavadare, ವಿಜಯದಾಸರು, Vijayadasaru