ಗೋಪಾಲದಾಸರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಗೋಪಾಲದಾಸರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಸೆಪ್ಟೆಂಬರ್ 13, 2013

ಆಪ್ತ ಮಾತಿದು ನಿಜ ಪ್ರಾಪ್ತ ಜನಕೆ : Apta Matidu Nija Prapta Janake

ಆಪ್ತ ಮಾತಿದು ನಿಜ ಪ್ರಾಪ್ತ ಜನಕೆ

ಕೀರ್ತನಕಾರರು : ಗೋಪಾಲದಾಸರು
ರಾಗ : ರೀತಿ ಗೌಳ
ತಾಳ : ಆದಿ


ಆಪ್ತ ಮಾತಿದು ನಿಜ ಪ್ರಾಪ್ತ ಜನಕೆ 
ಕುಪಿತರಾದರೆ ಕೇಳೆ ಅಪ್ರಾಪ್ತರು                          ।।ಪ॥ 

ಹರಿಯ ಪೂಜಿಸಿ ನೆಚ್ಚಿ ಪರಿವಾರ ಬಿಟ್ಟರೆ 
ನಿರಯವೇ ಪ್ರಾಪ್ತಿ ಸಂದೇಹವಿಲ್ಲ 
ಹಿರಿದು ಹರಿಗೋಲ ನಂಬಿ ಕಿರಿದ್ಹುಟ್ಟುಗಳ ಬಿಡಲು 
ಭರದಿ ಹೊಳೆದಾಟಿ ತಾ ದಾರಿಯ ಸೇರುವನೆ          ।।೧।।

ಕೃಷ್ಣನಲ್ಲಿ ದ್ವೇಷ ನಾರಾಯಣನಲ್ಲಿ ಭಕುತಿ 
ಎಷ್ಟು ಮಾಡಿದರು ಗತಿಪೊಂದುವನೆ 
ಸಿಟ್ಟಿನಲ್ಲಿ ಸರ್ಪನ ತುಟಿ ತುದಿಯ ಚಿವುಟಿದರೆ 
ಎಷ್ಟು ಸುಖ ಐದುವನು ನಷ್ಟವಿಲ್ಲದೆ                       ।।೨।।

ಹರಿಯಲ್ಲಿ ದ್ವೇಷ ಹರನಲ್ಲಿ ಭಕುತಿ ಮಾಡಿದರೆ 
ಪರಮಪದ ದೊರಕುವುದೆ ಮರುಳನಲ್ಲದೆ 
ಶರಧಿ ಆಶ್ರಯಿಸಿದ್ದ ಮಚ್ಚನ ಬಲಮಾಡಿ 
ಶರಧಿಯನು ದೂಷಿಸಲು ಹರುಷಬಡುವುದೆ             ।।೩।।

ಹರನ ದ್ವೇಷವ ಮಾಡಿ ಪೂಜೆಯ ಮಾಡೆ 
ಪರಮಗತಿಯಾಗುವುದೆ ಪತಿತನಿಗೆ 
ಹರವಿಯಿಲ್ಲದ ಪಾಕ ಕರವಿಟ್ಟು ಕಲಸಿದರೆ 
ವರ ಭೋಜನವು ಅವಗೆ ಒದಗಿ ಆಗುವುದೆ              ।।೪।।

ದೇವನಿಗೆ ಕರ್ತೃತ್ವ ಉಂಟು ಎಂದವ ಗೆದ್ದ 
ದೇವನಲ್ಲದೆ ಜೀವನೆನಲು ಬಿದ್ದ 
ಪಾವನ್ನಮೂರುತಿ ಗೋಪಾಲವಿಠಲನಂಘ್ರಿ
ಸೇವಕಗೇನು ಗತಿ ಅದವರಿಗೆ ಆಗಲಿ                     ।।೫।।

Labels: ಆಪ್ತ ಮಾತಿದು ನಿಜ ಪ್ರಾಪ್ತ ಜನಕೆ, Apta Matidu Nija Prapta Janake, ಗೋಪಾಲದಾಸರು, Gopaladasaru

ಬುಧವಾರ, ಸೆಪ್ಟೆಂಬರ್ 11, 2013

ವಾದಿರಾಜ ಮುನಿಪಾ ಹಯಮುಖ : Vadiraja Munipa Hayamukha

ವಾದಿರಾಜ ಮುನಿಪಾ ಹಯಮುಖ

ಕೀರ್ತನಕಾರರು : ಗೋಪಾಲದಾಸರು
ರಾಗ : ಖರಹರಪ್ರಿಯ
ತಾಳ : ಆದಿ

ವಾದಿರಾಜ ಮುನಿಪಾ ಹಯಮುಖ
ಪಾದಕಮಲ ಮಧುಪಾ                                   ||ಪ||

ನೀ  ದಯದಲಿ ತವ ಪಾದ ಧ್ಯಾನವನು
ಆದರದಲಿ ಕೊಟ್ಟಾದರಿಸೆನ್ನನು                         ||ಅ.ಪ||

ಮೂಷಕ ಬಿಲದಿಂದ ಉದರಪೋಷಕ ಬರಲಂದು
ವಾಸುಕಿ ಭಯದಿ ನಿಮ್ಮಾಸನದೆಡೆ ಬರೆ
ಕ್ಲೇಶ ಕಳೆದು ಸಂತೋಷಗೈಸಿದೆ                       ||೧||

ಮುಂದೆ ಭೂತನರನಾ ಪ್ರೇರಿಸಿ
ಹಿಂದೆ ಒಬ್ಬ ನರನಾ
ನಿಂದಿರಿಸಿದೆ ಆನಂದದಿಂದ ಜನ
ವೃಂದ ನೋಡುತಿರೆ ಅಂದಣ ನಡಿಸಿದ್ಯೋ          ||೨||

ಕ್ಷಿತಿಯೊಳು ಸತಿ ತನ್ನಾ ವಲ್ಲಭ
ಮೃತಿಯೈದಿರೆ ಮುನ್ನಾ
ಅತಿಶೋಕದಿ ಬಂದು ನುತಿಸಲು ಆ
ಪತಿಯನು ಬದುಕಿಸಿ ಹಿತದಿ ರಕ್ಷಿಸಿದೆ                 ||೩||

ನರಪತಿ ವ್ಯಾಧಿಯಲಿ ಬಳಲ್ವದ
ತ್ವರಿತದಿ ನೀ ಕೇಳಿ
ಹರುಷದಿ ವ್ಯಾಧಿಯ ಪರಿಹರಿಸ್ಯವನಿಗೆ
ಹರುಷದಿಂದಲಭಯದ ತೋರಿದೆ                     ||೪||

ಶಾಸ್ತ್ರ ಪ್ರಸಂಗದಲಿ ನಾರಾಯಣ ಭೂತರ ಗೆಲಿದಲ್ಲೆ
ಖ್ಯಾತಿಯಿಂದ ಬಹು ಮಾತನಾಡಿ ಶ್ರೀ
ನಾಥನ ಮಂದಿರ ಪ್ರೀತಿಲಿ ತರಿಸಿದ್ಯೋ                ||೫||

ತುರಗವದನ ಪಾದಾ ಭುಜಗಳಲಿ
ಧರಿಸಿಕೊಂಡು ಮೋದ ಕಡಲೆ ಮಡ್ಡಿಯನು
ಕರದಿಂದುಣಿಸಿದ ಗುರುವರ ಶೇಖರ                    ||೬||

ಆ ಮಹಾ ಗೋಪಾಲವಿಠ್ಠಲ ತಾಮರಸದಳಗಳ
ಧೀಮಂತರಿಗೆ ಸುಕಾಮಿತವನುಕೊಡುವ
ಆ ಮಹಾಮಹಿಮ                                            ||೭||

Labels: ವಾದಿರಾಜ ಮುನಿಪಾ ಹಯಮುಖ, Vadiraja Munipa Hayamukha, ಗೋಪಾಲದಾಸರು, Gopaladasaru

ರಥವನೇರಿದ ರಾಘವೇಂದ್ರ : Rathavanerida Raghavendra

ರಥವನೇರಿದ ರಾಘವೇಂದ್ರ

ಕೀರ್ತನಕಾರರು : ಗೋಪಾಲದಾಸರು
ರಾಗ : ಮೋಹನ
ತಾಳ : ಆದಿ

ರಥವನೇರಿದ ರಾಘವೇಂದ್ರ ಸದ್ಗುಣಗಣಸಾಂದ್ರಾ         ||ಪ||

ಸತತ ಮಾರ್ಗದಿ ಸಂತತ ಸೇವಿಪರಿಗೆ
ಅತಿ ಹಿತದಲಿ ಮನೋರಥವ ನೀಡುವೆನೆಂದು              ||ಅ.ಪ||

ಚತುರ ದಿಕ್ಕುವಿದಿಕ್ಕುಗಳಲ್ಲಿ ಹರಿವೋ ಜನರಲ್ಲಿ
ಮಿತಿಯಿಲ್ಲದೆ ಬಂದು ಓಲೈಸುತಲಿ ವರಗಳ ಬೇಡುತಲಿ
ನುತಿಸುತ ಪರಿಪರಿ ನತರಾಗಿ ಹರಿಗೆ
ಗತಿಪೇಳದೆ ಸರ್ವಥಾ ನಾ ಬಿಡೆನೆಂದು                       ||೧||

ಅತುಲ ಮಹಿಮಾನೆ ಆ ದಿನದಲ್ಲಿ ದಿತಿವಂಶದಲಿ
ಉತ್ಪತ್ತಿಯಾಗಿ ಉಚಿತದಲ್ಲಿ ಉತ್ತಮ ಮತಿಯಲ್ಲಿ
ಅತಿಶಯವಿರುತಿರೆ ಪಿತನ ಬಾಧೆಗೆ ಮನ್ಮಥ-
ಪಿತನೊಲಿಸಿದೆ ಜಿತ ಕರುಣದಲಿ                                ||೨||

ಪ್ರಥಮ ಪ್ರಹ್ಲಾದ ವ್ಯಾಸಮುನಿಯೆ ಯತಿ ರಾಘವೇಂದ್ರ
ಪ್ರತಿವಾದಿಕದಳಿವನಕರಿಯೆ ಕರ ಮುಗಿವೆನು ದೊರೆಯೆ
ಕ್ಷಿತಿಯೊಳು ಗೋಪಾಲವಿಠಲನ ಸ್ಮರಿಸುತ ವರ
ಮಂತ್ರಾಲಯದೊಳು ಶುಭವೀಯುತ                         ||೩||

Labels: ರಥವನೇರಿದ ರಾಘವೇಂದ್ರ, Rathavanerida Raghavendra, ಗೋಪಾಲದಾಸರು, Gopaladasaru

ಶನಿವಾರ, ಆಗಸ್ಟ್ 31, 2013

ದುರಿತ ವಾರಿವಾಹ ಜಂಝಾನಿಳ ಶರಣು : Durita Varivaha Jamjhanila Sharanu

ದುರಿತ ವಾರಿವಾಹ ಜಂಝಾನಿಳ ಶರಣು

ಕೀರ್ತನಕಾರರು : ಗೋಪಾಲದಾಸರು
ರಾಗ :  ಕಾಂಬೋದಿ  
 
ತಾಳ : ಝಂಪೆ 

ದುರಿತ ವಾರಿವಾಹ ಜಂಝಾನಿಳ ಶರಣು
ಶರಣು ನಮ್ಮ ಗುರುವೆ ವಿಜಯರಾಯರು                  ||ಪ||

ಆಗಾಮಿ ಸಂಚಿತ ಅಖಿಳಕರ್ಮದೂರ
ರಾಜದ್ವೇಷಾದಿ ದುರ್ಗುಣವರ್ಜಿತ
ಭೋಗಪ್ರಾಶಬ್ಧ ಭುಂಜಿಸುವ ಭೂದೇವ
ಭಾಗವತರನ್ನ ಬಿಡದೆ ಭಜಿಸುವರ                           ||೧||

ಈಷಣತ್ರಯ ದೂರ ಇಳೆಯೊಳಗೆ ಪುಣ್ಯ
ದೇಶ ಸಂಚಾರ ಪಾವನ ಶರೀರ
ದಾಸರ ನಿಜಪ್ರಿಯ ದಮೆಶಮೆಯಾದಿ ಪಾವನ
ತೋಷಭರಿತ ನಿತ್ಯ ಕೊಂಡಾಡುವ ಜನರ                 ||೨||


ಅಧ್ಯಾತ್ಮ ಅಮಿತ ಗೋಪ್ಯತತ್ವವಿಚಾರ 
ಸ್ವಾಧ್ಯಾಯ ನಿಪುಣ ಸಕಲ ಜನ್ಮದಿ 
ಅದ್ವೈತಮತಕೋಲಾಹಲ ಅಮಲಶೀಲ
ಸಿದ್ಧಾಂತ ಜ್ಞಾನನಿಧಿಯೆ ನಿಜಾಶ್ರಿತರ                       ।।೩।।

ಕಾಮಾದಿ ಷಡುರಿಪುಗಳನ ಗೆಲಿದು ಹೃದಯ 
ವ್ಯೋಮದೊಳಗೆ ನಿತ್ಯದಿ ಪೂಜಿಸುವ ಮಹಿಮ
ನೇಮದಿಂದಲಿ ನಿಮ್ಮ ಸ್ಮರಿಸುವ ಜನರ                    ।।೪।।

ಭುವನ ಮಂಡಾಲಾಧಿಪ ಕವಿಗಳ ಶಿರೋರತುನ 
ಭವದೂರ ಭಾಗ್ಯನಿಧಿಯೆ ಭಕ್ತರ 
ಪವನಾಂತರ್ಗತ ನಮ್ಮ ಗೋಪಾಲವಿಠಲನ್ನ 
ಸುವನಜಚರಣಸೇವೆಯಲಿಟ್ಟ ಗುರುರನ್ನ                   ।।೫।।

Labels: ದುರಿತ ವಾರಿವಾಹ ಜಂಝಾನಿಳ ಶರಣು, Durita Varivaha Jamjhanila Sharanu, ಗೋಪಾಲ ದಾಸರು, Gopaladasaru

ಶುಕ್ರವಾರ, ಆಗಸ್ಟ್ 30, 2013

ದಯವಿರಲಿ ದಯವಿರಲಿ ದಾಮೋದರ : Dayavirali Dayavirali Damodara

ದಯವಿರಲಿ ದಯವಿರಲಿ ದಾಮೋದರ

ಕೀರ್ತನಕಾರರು : ಗೋಪಾಲದಾಸರು
ರಾಗ :  ಬಿಲಹರಿ
 
ತಾಳ : ಝಂಪೆ 

ದಯವಿರಲಿ ದಯವಿರಲಿ ದಾಮೋದರ                      ।।ಪ॥
ಸಯವಾಗಿ ಬಿಡದೆನ್ನ ಸಾಕುವ ಶ್ರೀಕ್ರಷ್ಣ                     ।।ಅ.ಪ॥ 

ಹೋಗಿ ಬರುವೆನಯ್ಯ ಹೋದ ಹಾಂಗೆಲ್ಲ 
ಸಾಗುವವನಲ್ಲನಾ ನಿನ್ನ ಬಿಟ್ಟು 
ತೂಗಿ ತೊಟ್ಟಿಲು ಕೊನೆಗೆ ಸ್ಥಳದಲ್ಲೆ ನಿಲ್ಲುವುದು 
ಹ್ಯಾಗೆ ನೀ ನಡೆದಂತೆ ಹಾಗೆ ನಾ ನಡಕೊಂಬೆ            ।।೧।।

ಇದ್ದಲ್ಲೆ ಎನ್ನನುದ್ಧರಿಪ ಶಕ್ತಿ ಅ-
ಸಾಧ್ಯ ನಿನಗೆಂದು ನಾ ಬಂದವನಲ್ಲ 
ನದ್ಯಾದಿ ಕ್ಷೇತ್ರಮೂರ್ತಿಗಳಲ್ಲ್ಲಿ ನಿಜ ಜ್ಞಾನ 
ವೃದ್ಧ ಜನರ ಹುಡುಕಿ ನಿನ್ನ ತಿಳಿಯಲು ಬಂದೆ             ।।೨।।

ಸತತ ಇದ್ದಲ್ಲೆ ಎನ್ನ ಸಲಹೊ ಅವರೊಳಗಾಗಿ
ಅತಿಶಯವು ಉಂಟು ವಿಭೂತಿಯಲ್ಲಿ 
ಗತಿಯು ಸಾಧನಕೆ ಅಭಿವ್ಯಕ್ತ ಸಂದರ್ಶನದಿ 
ಸ್ಮೃತಿಗೆ ವಿಶೇಷ ಮಾರುತಿರಮಣ ನಿನ್ನ                    ।।೩।।

ನೋಡಿದೆನೆ ನಾ ನಿನ್ನ ನೋಡದೆ ಎಂದೆಂದು 
ಪಾಡಿದೆನೆ ಆರಾರು ಪಾಡದೊಂದು 
ಮಾಡಿದೆನೆ ಅರ್ಚನೆಯ ಮೀಸಲಾದುದು ಒಂದು 
ಮೂಢಮತಿಯಲಿ ಮುಂದೆ ನಿಂದೆ ಕೈಮುಗಿದು            ।।೪।।

ಬಂದೆನೊ ನಾನಿಲ್ಲಿ ಬಹುಜನ್ಮದ ಸುಕೃತ-
ದಿಂದ ನಿನ್ನ ಬಳಿಗೆ ಇಂದಿರೇಶ 
ಒಂದು ಮಾತ್ರವು ಇಟ್ಟು ಸಕಲವು ಅರ್ಪಿಸಿದೆ 
ಬಂಧನ ಬಡಿವ ಭಕುತಿಯು ಜ್ಞಾನ ನೀಡುವುದು           ।।೫।।

ಬಿನ್ನಪವ ಕೇಳು ಸ್ವಾಮಿ ಎನ್ನನೋಬ್ಬನ್ನೆ ಅಲ್ಲ 
ಎನ್ನ ಹೊಂದಿ ನಡೆವ ವೈಷ್ಣವರನ 
ಇನ್ನವರಿಗೆ ಬಾಹೊ ದುಷ್ಕರ್ಮಗಳ ಕೆಡಿಸಿ 
ಘನಗತಿಗೈದಿಸುವ ಭಕುತಿ ಕೊಡು ಕರುನಾಡಿ             ।।೬।।

ರಾಜರಾಜೇಶ್ವರ ರಾಜೀವದಳನಯನ 
ಮೂಜಗದೊಡೆಯ ಮುಕುಂದಾನಂದ 
ಈ ಜೀವಕೀ ದೇಹ ಬಂದದ್ದಕ್ಕು ಎನಗತಿ ನಿ 
ರ್ವ್ಯಾಜದಿ ಸುರಗಂಗೆ ಸ್ನಾನವನು ಮಾಡಿಸೊ              ।।೭।।

ಎನಗೆ ಆವುದು ಒಲ್ಲೆ ಎಲ್ಲೆಲ್ಲಿ ಪೋದರು 
ಕ್ಷಣ ಬಿಡದೆ ನಿನ್ನ ನೋಳ್ಪ ಜ್ಞಾನವ ಕೊಡೊ 
ಚಿನುಮಯ ಮೂರುತಿ ಗೋಪಾಲವಿಠಲ 
ಘನಕರುಣಿ ಮಧ್ವಮುನಿ ಮನಮಂದಿರನಿವಾಸ             ।।೮।।

Labels: ದಯವಿರಲಿ ದಯವಿರಲಿ ದಾಮೋದರ, Dayavirali Dayavirali Damodara, ಗೋಪಾಲ ದಾಸರು, Gopaladasaru

ಬುಧವಾರ, ಆಗಸ್ಟ್ 28, 2013

ಎಣೆಯಾರೊ ನಿಮಗೆ : Eneyaro Nimage

ಎಣೆಯಾರೊ ನಿಮಗೆ 

ಕೀರ್ತನಕಾರರು : ಗೋಪಾಲದಾಸರು
ರಾಗ :  ಶಂಕರಾಭರಣ
ತಾಳ : ಆದಿ


ಎಣೆಯಾರೊ ನಿಮಗೆ ಕುಂಭಿಣಿಯ ಮಧ್ಯದ 
ಲಿನ್ನು ಮನಸಿಜ ಆರಂಭಿಸಿ ಮನು 
ಮುನಿಕುಲ ಚಿಂತಾಮಣಿಯೆ ವಾದೇಂದ್ರ ಮರುತಮತ 
ವನಧಿಚಂದ್ರ ಕುಮತಗಜಗಣಕೆ ಮೃಗೇಂದ್ರ                             ।।ಪ॥ 

ಸ್ನಾನುನುಷ್ಠಾನ ಕಾಲದಲ್ಲಿ ಶ್ರೀಶರಂಗ 
ಪಾಣಿಯ ನ್ಯಾಸ ಧ್ಯಾನ ಮಾಡುವ ಧೀರ 
ದಾನಾದಿ ಕರ್ಮ ಶಮೆ ದಮೆ ನಾನಾ 
ಗುಣಾರ್ಣ ಭಜಿಸುವಂಥ ಧೀರ ಪ್ರಸನ್ನ                                    ।।೧।।

ಹರಿಯೇ ಸರ್ವೋತ್ತಮ ಮೃತ ದೇವನೆ 
ಗುರು ಎರಡುಮೂರು ಭೇದ ಸ್ಥಿರವೆಂದು ಸ್ಥಾಪಿಸಿ 
ಧರೆಯೊಳು ಮೆರೆದೆ ವಾದೆಗಳುಕ್ತಿಧುರದಿಂದ 
ತರಿದೆ ನಂಬಿದವರ ಕರುಣದಿ ಪೊರೆದೆ                                    ।।೨।।

ವೇದಾರ್ಥಗಳನೆಲ್ಲ ವ್ಯಾಖ್ಯಾನ ಮುಖದಿಂದ 
ಸಾಧಿಸಿ ಧರೆಗೆಲ್ಲ ಬೋಧಿಸಿ ಅವರಘ 
ಭೇದವ ತರಿದೆ ಮನೋಭೀಷ್ಟ ಮೋ 
ದದಿಗರೆದೆ ರಾಮನಾಮ ಸ್ವಾದ ಸವಿದೆ                                  ।।೩।।

ದರಹಾಸಸರಿತೆತೀರ ಮಂತ್ರಾಲಯದಲ್ಲಿ 
ಗುರುರಾಯ ಆಜ್ಞೆಯಿಂದವರ ಸನ್ನಿಧಿಯಲ್ಲಿ 
ಸ್ಥಿರವಾಗಿ ನಿಂದೆ ಸುಮಹಿಮೆಯಲಿ 
ಮೆರೆವೆ ನೀ ಮುಂದೆ ದಯದಲೆನ್ನ ಪೊರೆಯಯ್ಯ ತಂದೆ              ।।೪।।

ಮರುತಾಂತರ್ಗತ ಗೋಪಾಲವಿಠಲನ್ನ 
ಹರುಷದಿ ಪೂಜಿಪ ಗುರು ಉಪೇಂದ್ರ 
ತೀರ್ಥರ ಕರಕಂಜಜಾತ ಭಕ್ತರಕಾಮ ವರ 
ಪಾರಿಜಾತ ಕಾಮಧೇನು ಕರುಣಿಸೊ ದಾತ                             ।।೫।।


Labels: ಎಣೆಯಾರೊ ನಿಮಗೆ, Eneyaro Nimage, ಗೋಪಾಲ ದಾಸರು, Gopaladasaru

ಗುರುವಾರ, ಆಗಸ್ಟ್ 22, 2013

ನಿನ್ನೆ ಇರುಳಿನಲಿ ಚೆನ್ನಿಗ ಪುರುಷನು : Ninne Irulinali Chenniga Purushanu

ನಿನ್ನೆ ಇರುಳಿನಲಿ ಚೆನ್ನಿಗ ಪುರುಷನು 

ಕೀರ್ತನಕಾರರು : ಗೋಪಾಲದಾಸರು
ರಾಗ :  ಪುನ್ನಾಗವರಾಳಿ  
ತಾಳ : ಆದಿ

ನಿನ್ನೆ ಇರುಳಿನಲಿ ಚೆನ್ನಿಗ ಪುರುಷನು 
ಎನ್ನ ಮಂದಿರಕೆ ಬಂದಿರುವ ಇವನ್ಯಾರೆ ಅವ್ವ             ।।ಪ॥ 

ಕಣ್ಣು ಬಿಡುತಲೆ ಬೆನ್ನೊಳಗಡಗಿಸಿ 
ತನ್ನ ಮೋರೆತ್ತಿ ನೋಡನೆ ಬಾಯಾರಿಹನೆ 
ಮಣ್ಣು ನಲುವುತಾನೆ ತನ್ನೊಳು ಕಾದಿ ಉಣದೆ 
ಹೆಣ್ಣುಗಳನೆ ಮೋಹಿಸುವ ಹಯನೇರಿ ಮೆರೆವ             ।।೧।।

ಜಲವ ಬಿಟ್ಟರೆ ಸತತ ನೆಲನೆ ಕೆದರುತಲಿಪ್ಪ 
ಪಲ್ಗಿರಿದು ದಾನವ ಬೇಡುವ ಪೆತ್ತವಳನೆ ಜರಿವ 
ಶಿಲೆಯ ಮಾತಾಡಿಸುವ ಕೊಳಲೂದಿ ಕೃತ್ಯವೇದ 
ಹಳಿವ ಹಗೆಗಳನೆ ಸದೆಬಡಿವ ಹಯನೇರಿ ಮೆರೆವ        ।।೨।।

ಚರಣ ರೋಮಗಳಿಲ್ಲ ಮಗನ ಮುಗಿಲೆ ಬಂದ 
ಎರಡು ರೂಪದಿ ಬಾಲಕ ಬಾಹುಜಕುಲಗೊಯ್ಕ 
ಅರಸಾಗಿ ಗೋಪಾಲವಿಠಲ ಮೋಹಖಳರ ತರಿವ 
ತನ್ನಾಳಾಗನೆ ಪಾರವ ಹಯನೇರಿ ಮೆರೆವ                 ।।೩।।

Labels: ನಿನ್ನೆ ಇರುಳಿನಲಿ ಚೆನ್ನಿಗ ಪುರುಷನು, Ninne Irulinali Chenniga Purushanu, ಗೋಪಾಲ ದಾಸರು, Gopaladasaru

ಮಂಗಳವಾರ, ಆಗಸ್ಟ್ 13, 2013

ಏಕೆ ಮಲಗಿಹೆ ಹರಿಯೆ : Eke Malagihe Hariye

ಏಕೆ ಮಲಗಿಹೆ ಹರಿಯೆ 

ಕೀರ್ತನಕಾರರು : ಗೋಪಾಲದಾಸರು
ರಾಗ :  ಬಿಳಹರಿ
ತಾಳ : ಝಂಪೆ 

ಏಕೆ ಮಲಗಿಹೆ ಹರಿಯೆ ಏಸು ಆಯಾಸ 
ಜೋಕೆಮಾಡುವ  ಬಿರುದು ಸಾಕಾಯಿತೇನೊ                ।।ಪ।।

ತಮನೊಡನೆ ಹೋರಾಡಿ ತಪಿಸಿ ಮೈ ಬೆವರಿತೊ 
ಅಮೃತಮಥನದಿ ಗಿರಿಯು ಅತಿಭಾರವಾಯ್ತೊ
ರಮಣಿಯನು ತರುವಾಗ ರಣರಂಗ ಬಹಳಾಯ್ತೊ 
ಅಮರರಿಪುವನು ಸೀಳೆ ಕರ ಸೋತಿತೊ                      ।।೧।।

ಆಕಾಶ ಭೇದಿಸಲು ಆ ಕಾಲು ಉಳುಕಿತೊ 
ಕಾಕುನೃಪರನು ಸೀಳಿ ಕರ ಸೋತಿತೊ 
ಭೂದೇವಿಯನರಸಿ ಬಳಲಿಕೆಯು ಬಹಳಾಯ್ತೊ 
ಲೋಕಭಾರವ ಇಳುಹಿ ಸಾಕುಸಾಕಾಯ್ತೊ                     ।।೨।।

ಚಪಲೆಯರ ಮೋಹಿಸಲು ಉಪಟಳವು ಬಹಳಾಯ್ತೊ 
ಅಪವಿತ್ರನಡಗಿಸಲು ಅಧಿಕ ಶ್ರಮವಾಯ್ತೊ 
ಕೃಪೆಮಾಡಿ ನೋಡಯ್ಯ ಕಣ್ಣು ತೆರೆದು ಎನ್ನಕಡೆ 
ಕಪಟನಾಟಕ ಶ್ರೀ ಗೋಪಾಲವಿಠಲ                             ।।೩।।


Labels: ಏಕೆ ಮಲಗಿಹೆ ಹರಿಯೆ, Eke  Malagihe Hariye, ಗೋಪಾಲ ದಾಸರು, Gopaladasaru

ಸೋಮವಾರ, ಆಗಸ್ಟ್ 5, 2013

ಇರಬೇಕು ಸಜ್ಜನರಿಗೆ ದುರ್ಜನ : Irabeku Sajjanarige Durjana

ಇರಬೇಕು ಸಜ್ಜನರಿಗೆ ದುರ್ಜನ

ಕೀರ್ತನಕಾರರು : ಗೋಪಾಲದಾಸರು
ರಾಗ :  ಅಭೇರಿ ತಾಳ : ಆದಿ 

ಇರಬೇಕು ಸಜ್ಜನರಿಗೆ ದುರ್ಜನ 
ಪರಿಪರಿ ಪಾಲಿಪುದು ಒಂದು ಸಮಯದಿನ್ನವರ           ।।ಪ।। 

ಮೇಲಾದ ತೆಂಗು ಏಲಕ್ಕಿ ಬಾಳೆಯಾಗಿಡವ 
ಜಾಲಿಯಾದಿ ಗಿಡದ ಮುಳ್ಳುಗಳಿಂದಲೆ 
ಪಾಲನೆಯ ಮಾಡುವರು ಪ್ರಾಕಾರವನ್ನೆ ಮಾಡಿ
ಕಾಲಕಾಲಕೆ ತಂದು ಕಲಿಪರು ಬಿಡದೆ                       ।।೧।।

ತುಳಸಿಯ ಗಿಡವನ್ನು ಬೆಳೆಸಬೇಕಾದರೆ 
ಹೊಲಸು ಉಳ್ಳಿಯ ತಂದು ನಿಲಿಸುವರು
ಕೆಲಕಾಲ ಬೆಳೆದು ಪಂಟಿಯಗಟ್ಟೋದಲ್ಲದೆ 
ಹೊಲಸು ಉಳ್ಳಿಯಿಂದೇನು ಅಳುಕು ಆಗುವುದೆ          ।।೨।।

ನಯನಕ್ಕೆ ರೆಪ್ಪೆಯಿದ್ದ್ಹಾಗಪಾಯವ ನೀಗಿ ಕರನಿಟ್ಟು 
ದಯಾನಿಧಿಯ ಪರಿಪಾಲಿಸುವನು ಬಿಡದೆ 
ಭಯ ನಿವಾರಣ ರಂಗ ಗೋಪಾಲವಿಠ್ಠಲನಾಶ್ರಯಿಸಿ
ಯಿದ್ದಂಗೆ ದುರುಳರ ಭಯವೆ ಮರುಳೆ                      ।।೩।।

Labels: ಇರಬೇಕು ಸಜ್ಜನರಿಗೆ ದುರ್ಜನ, Irabeku Sajjanarige Durjana, ಗೋಪಾಲ ದಾಸರು, Gopaladasaru

ಮಂಗಳವಾರ, ಜುಲೈ 23, 2013

ಆವ ರೋಗವೊ ಎನಗೆ ದೇವ ಧನ್ವಂತ್ರಿ : Ava Rogavo Enage Deva Dhanvantri

ಆವ ರೋಗವೊ ಎನಗೆ ದೇವ ಧನ್ವಂತ್ರಿ 

ಕೀರ್ತನಕಾರರು : ಗೋಪಾಲದಾಸರು 
ರಾಗ : ಕಾನಡ 
ತಾಳ : ಖಂಡಛಾಪು 

ಆವ ರೋಗವೊ ಎನಗೆ ದೇವ ಧನ್ವಂತ್ರಿ 
ಸಾವಧಾನದಿ ಕೈಯ ಪಿಡಿದು ನೀ ನೋಡಯ್ಯ                   ।।ಪ।।

ಹರಿ ಮೂರ್ತಿಗಳು ಕಾಣಿಸವು ಎನ್ನ ಕಂಗಳಿಗೆ 
ಹರಿಯ ಕೀರ್ತನೆಯು ಕೇಳಿಸದೆನ್ನ ಕಿವಿಗೆ 
ಹರಿ ಮಂತ್ರಸ್ತೋತ್ರ ಬಾರದು ಎನ್ನ ನಾಲಿಗ್ಗೆ 
ಹರಿಪ್ರಸಾದವು ಜಿಹ್ವೆಗೆ ಸವಿಯಾಗದಯ್ಯ                        ।।೧।।

ಹರಿಪಾದ ಸೇವೆಗೆನ್ನ ಹಸ್ತಗಳು ಚಲಿಸವು 
ಗುರುಹಿರಿಯರಂಘ್ರಿಗೆ ಶಿರ ಬಾಗದು 
ಹರಿಯ ನಿರ್ಮಾಲ್ಯವಾಘ್ರಾಣಿಸದು ನಾಸಿಕವು 
ಹರಿಯಾತ್ರೆಗಳಿಗೆನ್ನ ಕಾಲೇಳದಯ್ಯ                                ।।೨।।

ಅನಾಥಬಂಧು ಗೋಪಾಲವಿಠಲರೇಯ 
ಎನ್ನಭಾಗದ ವೈದ್ಯ ನೀನೆಯಾದೆ 
ಅನಾದಿಕಾಲದ ಭವರೋಗ ಕಳೆಯಯ್ಯ 
ನಾನೆಂದಿಗು ಮರೆಯೆ ನೀ ಮಾಡಿದುಪಕಾರ                     ।।೩।।

Labels: ಆವ ರೋಗವೊ ಎನಗೆ ದೇವ ಧನ್ವಂತ್ರಿ, Ava Rogavo Enage Deva Dhanvantri
, ಗೋಪಾಲ ದಾಸರು, Gopaladasaru

ಎಂತು ತುತಿಸಲಿ ಎನ್ನದೇವನ : Entu Tutisali Ennadevana

ಎಂತು ತುತಿಸಲಿ ಎನ್ನದೇವನ 

ಕೀರ್ತನಕಾರರು : ಗೋಪಾಲದಾಸರು  
ರಾಗ : ಭೈರವಿ 
ತಾಳ : ಖಂಢಛಾಪು

ಎಂತು ತುತಿಸಲಿ ಎನ್ನದೇವನ ಸಂತತ ನಮ್ಮ ಸಲಹೋನ 
ಅಂತರಂಗದಿ ಹರಿಯ ತೋರಿಸಿ ಸಂತೋಷದಿಂದ ನಲಿವ ಪವನನ        ।।ಪ।।

ತಾನು ಮಾಡಿದ ಕರ್ಮಶೇಷವು ತಾನು ತಿಳುಹಿದ ಜ್ಞಾನಶೇಷವು 
ತಾನು ಮಾಡಿದ ಭಕುತಿಶೇಷವು ನಾನಾ ಸಾಧನಶೇಷವು 
ತಾನು ಕರುಣಿಸಿ ಜೀವಯೋಗ್ಯತೆಯೇನು ಅರಿತು ಕರ್ಮಮಾಡಿಸಿ 
ತಾನು ಸಹಿತ ಧ್ಯಾನದಲಿ ಹರಿ ಕಾಣಿಸಿ ತೋರ್ಪ ಕರುಣೆಯ                    ।।೧।।

ಇವನ ಪ್ರೇರಣೆ ಹರಿಯ ಪ್ರೇರಣೆ ಇವನ ಸೇವೆಯು ಹರಿಯ ಸೇವೆಯು 
ಇವನ ಕರುಣವೆ ಹರಿಯ ಕರುಣವು ಇವನ ಬಲವೇ ಪ್ರಬಲವು 
ಇವನು ನಂಬಲು ಹರಿಯು ನಂಬುವ ಇವನು ಒಲಿಯಲು ಹರಿಯು ಒಲಿಯುವ
ಪವನಾಖ್ಯನಾಗಿ ನಮ್ಮನು ಪವನಗತಿ ಪೊಂದಿಸುವನ                             ।।೨।।

ಜ್ಞಾನಭಕುತಿ ವೈರಾಗ್ಯಖಣಿಯು ದಾನವಾಂತಕ ಧರ್ಮಶೀಲ 
ಪೂರ್ಣಬೋಧೆಯ ಪುಣ್ಯನಾಮಕ ಪ್ರಾಣಾಪಾಣವುದಾನರಿಗೆ 
ಪ್ರಾಣ ಮುಖ್ಯಪ್ರಾಣ ಇವ ನಮ್ಮ ಪ್ರಾಣನಿಲ್ಲದು ಇವನು ಇಲ್ಲದಿರೆ 
ಪ್ರಾಣಪತಿ ಗೋಪಲವಿಠಲನ ಕಾಣಿಸಿ ತೋರ್ಪ ಕರುಣೆಯ                   ।।೩।।

Labels: ಎಂತು ತುತಿಸಲಿ ಎನ್ನದೇವನ, Entu Tutisali Ennadevana, ಗೋಪಾಲ ದಾಸರು, Gopaladasaru