ನರಹರಿ ತೀರ್ಥರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ನರಹರಿ ತೀರ್ಥರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಏಪ್ರಿಲ್ 22, 2013

ಎಂತು ಮರುಳಾದೆ : Entu Marulade


ಎಂತು ಮರುಳಾದೆ

ಕೀರ್ತನಕಾರರು : ನರಹರಿ ತೀರ್ಥರು
ರಾಗ : ಆನಂದಭೈರವಿ
ತಾಳ : ಆದಿ

ಎಂತು ಮರುಳಾದೆ ನಾನೆಂತು ಮರುಳಾದೆ ||ಪ||

ಎಂತು ಮರುಳಾದೆ ಭವದೊಳು ಬಳಲಿದೆ
ಸಂತತ ಪೊರೆ ರಘುಕುಲತಿಲಕ ||ಅ.ಪ||

ಮಾತಿನಲ್ಲಿ ಹರಿದಾಸನ
ನೀತಿಯಲ್ಲಿ ಪ್ರಭುದಾಸತನ
ಪ್ರೀತಿ ಧನಾದಿ ವಿಷಯದಲ್ಲಿ ನಿ
ರ್ಭೀತಿ ದೈವ ಗುರು ದ್ರೋಹದಲಿ ||೧||

ಏಕಾಂತದಲ್ಲಿ ಧನದ ಗೋಷ್ಠಿ
ಲೋಕಾಂತದಿ ವೈರಾಗ್ಯದ ಗೋಷ್ಠಿ
ಶ್ರೀಕಾಂತನ ಸೇವೆಗೆ ಅನುಮಾನ
ಭೂಕಾಂತನ ಸೇವೆಗೆ ಸುಮ್ಮಾನ ||೨||

ಧರ್ಮಕ್ಕೆ ಒಂದು ಕಾಸು ಆ
ಧರ್ಮಕ್ಕೆ ಸಾವಿರಾರು ಹೊನ್ನು
ಧರ್ಮ ಮಾಡಲು ಬೇಸರಿಕೆ ಆ
ಧರ್ಮಮಾಡಲು ಚಚ್ಚರಿಕೆ ||೩||

ಡೊಂಬನಂತೆ ಬಯಲಿಗೆ ಹರಹಿ
ಡಂಭತನಕೆ ಕರ್ಮವ ಮಾಡಿ
ಅಂಬುಜನಾಭಗೆ ದೂರಾಗಿ
ಕುಂಭೀಪಾತಕಕೆ ಗುರಿಯಾದೆ ||೪||

ಸತಿಯರ ಬೈದರೆ ನಾ ಬೈಯ್ವೆ
ಶ್ರೀಪತಿಯ ಬೈದರೆ
ಕೇಳುತ ನಗುವೆ
ಮತಿಗೆಟ್ಟು ವಿಷಯಲಂಪಟನಾಗಿ ||೫||

ಯಾರಿಗಾಗಿ ಧಾವತಿ ಪಡುವೆ ಇ
ನ್ನಾರಿಗೆ ಒಡವೆಯ ಬಚ್ಚಿಡುವೆ
ನಾರಿ ಪುತ್ರ ಮಿತ್ರಾದಿಗಳು
ಯಾರೂ ಬಾರರೊ ಸಂಗಡದಿ ||೬||

ಭಜಿಸು ಬ್ರಹ್ಮಾದಿ ವಂದಿತ ಹರಿಯ
ತ್ಯಜಿಸು ಕಾಮಾದಿ ದುರ್ವಿಷಯ
ಸುಜನವಂದಿತನಾದ ನರಹರಿಯ
ಭಜಿಸು ಶ್ರೀಶ ಶ್ರೀ ರಘುಪತಿಯ ||೭||

Labels: ಎಂತು ಮರುಳಾದೆ, ನರಹರಿ ತೀರ್ಥರು, Entu Marulade, Narahari Teertharu, ನರಹರಿ ತೀರ್ಥರು, Narahari Teertharu

ಶನಿವಾರ, ಏಪ್ರಿಲ್ 20, 2013

ಹರಿಯೇ ಇದು ಸರಿಯೇ : Hariye Idu Sariye




ಹರಿಯೇ ಇದು ಸರಿಯೇ

ಕೀರ್ತನಕಾರರು : ನರಹರಿ ತೀರ್ಥರು
ರಾಗ : ಕೇದಾರ
ತಾಳ : ಆದಿ

ಹರಿಯೇ ಇದು ಸರಿಯೇ
ಚರಣಸೇವಕನಲ್ಲಿ ಕರುಣೆ ಬಾರದ್ಯಾಕೆ ||ಪ||

ಪತಿತನೆಂದು ಶ್ರೀಪತಿ ರಕ್ಷಿಸದಿರೆ
ವಿತತವಾಹುದೆ ನಿನ್ನ ಪತಿತಪಾವನ ಕೀರ್ತಿ? ||೧||

ಶಕ್ತ ನೀನಾಗಿದ್ದು ಭಕ್ತನುಪೇಕ್ಷಿಸೆ
ಭಕ್ತವತ್ಸಲ ನಾಮ ವ್ಯರ್ಥವಾಗದೆ? ||೨||

ದಿಗಿಲಿಲ್ಲದೆ ಒದ್ದ ಭೃಗುವ ಪಾಲಿಸಿದೆ
ನಗಧರ ಎನ್ನ ಬಿಡುವ ಬಗೆ ಏನಿದು? ||೩||

ಹೇಯ ಅಜಾಮಿಳನ ಕಾಯಲಿಲ್ಲೆ ಸ್ವ
ಕೀಯನೆ ನಾ ಪರಕೀಯನೆ ನಿನಗೆ? ||೪||

ಉಂಟು ಹಿರಣ್ಯಕನ ಕಂಟಕ ಬಿಡಿಸಿದ್ದು
ನಂಟನೆ ನಿನಗೆ ಬಂಟ ನಾನಲ್ಲವೆ? ||೫||

ಕೆಟ್ಟ ಅಹಲ್ಯೆಯ ದಿಟ್ಟ ಪಾಲಿಸಿದೆ
ಕೊಟ್ಟಳು ಅವಳೇನ ಬಿಟ್ಟದ್ದು ನಾನೇನ? ||೬||

ದೊರೆ ನಿನ್ನ ಮನಸಿಗೆ ಸರಿಬಂದಂತೆ ಮಾಡು
ಮೊರೆಹೊಕ್ಕೆನು ನಾ ನರಹರಿಪೂರ್ಣನೆ ||೭||

Labels: Hariye Idu Sariye, Narahari Teertharu, ನರಹರಿ ತೀರ್ಥರು, ಹರಿಯೇ ಇದು ಸರಿಯೇ, ನರಹರಿ ತೀರ್ಥರು, Narahari Teertharu