ಗಲಗಲಿ ಅವ್ವನವರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಗಲಗಲಿ ಅವ್ವನವರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಸೆಪ್ಟೆಂಬರ್ 13, 2013

ರಂಗ ನಮ್ಮನೆಗೆ ಬಂದ : Ranga Nammanege Banda

ರಂಗ ನಮ್ಮನೆಗೆ ಬಂದ 

ಕೀರ್ತನಕಾರರು : ಗಲಗಲಿ ಅವ್ವನವರು

ರಂಗ ನಮ್ಮನೆಗೆ ಬಂದ ಮತ್ತೇನು ತಂದ                                     ।।ಪ॥ 

ಜಗದೋದ್ಧಾರನ ಸಭೆಗೆ ಬಂದ ನಗುವ ಪರಿಯ ಹೇಳಿದ್ದು ತಂದ
ಬಗೆ ಬಗೆ ವಸ್ತ್ರಕೊಳ್ಳಿರೆಂದ ಪಗಡಿ ಧರ್ಮಗೆ ತರಲಿಲ್ಲೆಂದ                 ।।೧।।

ವಾಣಿ ಮಾವ ಮನೆಗೆ ಬಂದ ಜಾಣತನವ ಹೇಳಿದ್ದು ತಂದ 
ಮಾಣಿಕ ಮುತ್ತುಕೊಳ್ಳಿರೆಂದ ಕ್ವಾಣವ ಧರ್ಮಗೆ ತರಲಿಲ್ಲಂದ            ।।೨।।

ಕೃಷ್ಣರಾಯ ಸಭೆಗೆ ಬಂದ ಎಷ್ಟು ಜಂಬ ಹೇಳಿದ್ದು ತಂದ 
ಪಟ್ಟಾವಳಿ ಕೊಳ್ಳಿರೆಂದ ಹುಟ್ಟು ಭೀಮಗೆ ತರಲಿಲ್ಲೆಂದ                     ।।೩।।

ನಳಿನಾಕ್ಷಸಭೆಯೊಳು ಬಂದ ಹೊಳೆವೊ ಎಷ್ಟು ಹೇಳಿದ್ದು ತಂದ 
ಝಳಿಸೋ ವಸ್ತ್ರಕೊಳ್ಳಿರೆಂದ ಬಳೆ ಪಾರ್ಥಗೆ ತರಲಿಲ್ಲೆಂದ               ।।೪।।

ರಾಜ್ಯ ಲಕ್ಷ್ಮಣನಿಗಿಲ್ಲೆಂದ ಮಾಜುದಾ ಕುಲ ಧರ್ಮ ಕುಂದ 
ತೇಜ ಮುಂದೆ ಓಡಿದ್ದು ಚೆಂದ ಸೋಜಿಗವಲ್ಲ ನಕುಲನೆಂದ              ।।೫।।


ಸುಮನಸರು ನಗುವೊರೆಂದ ಭ್ರಮೆಯ ಕಳೆದ್ಯೋ ಸಹದೇವ ಎಂದ 
ಅಮಿತದನವ ಕಾಯ್ವೋಛಂದ  ರಮಿಯರಸು ನಗುವನೆಂದ            ।।೬।।

ಅಂದ ಮಾತಿಗೆ ಬಲರಾಮ ಹೀಗೆಂದ ಚಂದವಾಯಿತು ಕುಶಲವೆಂದ 
ನಿಂದ್ಯವ ನೀ ಮಾಡಿಕೊ ಎಂದ ಇಂದಿರೇಶಗೆ ತಿಳಿಸಿರೆಂದ              ।।೭।।


Labels: ರಂಗ ನಮ್ಮನೆಗೆ ಬಂದ, Ranga Nammanege Banda, ಗಲಗಲಿ ಅವ್ವನವರು, Galagali Avvanavaru 

ಗುರುವಾರ, ಸೆಪ್ಟೆಂಬರ್ 12, 2013

ಹತ್ತೆಂಟು ಸಾಲಿನ ಬತ್ತಾಸದಂಗಡಿ : Hattentu Salina Battasadangadi

ಹತ್ತೆಂಟು ಸಾಲಿನ ಬತ್ತಾಸದಂಗಡಿ

ಕೀರ್ತನಕಾರರು : ಗಲಗಲಿ ಅವ್ವನವರು

ಹತ್ತೆಂಟು ಸಾಲಿನ ಬತ್ತಾಸದಂಗಡಿ 
ಭತ್ತದ ಅರಳು ಮೊದಲಾಗಿ 
ಭತ್ತದ ಅರಳು ಮೊದಲಾಗಿ ಸಕ್ಕರಿ ಬೊಂಬೆಯ 
ತಂದಿಟ್ಟು ಮಾರುವವರು ಕಡಿಮೆಯಿಲ್ಲ                          ।।ಪ॥ 

ಕುಂಕುಮ ಬುಕ್ಕಿಟ್ಟುಗಳ ಸಾಲು ಅಂಗಡಿ ಕುರಿತಾಗಿ 
ಕುಂಕುಮ ಅರಿಷಿಣ ಅಲಂಕಾರ ದ್ರವ್ಯವ ಅಂಕ ಅಂಕಣಕ ನೆರೆವ್ಯಾರೆ 
ಅಂಕ ಅಂಕಣಕ ನೆರೆವ್ಯಾರೆ ಬೆಲಿ ಮಾಡೊ 
ಕಂಕಣದ ಕೈಯ ಕೆಲದೆಯರು ಕಡಿಮೆಯಿಲ್ಲ                   ।।೧।।

ಬುಕ್ಕಿಟ್ಟು ಪರಿಮಳ ದ್ರವ್ಯ ಪೊಟ್ಟಣವ  ಕಟ್ಟಿ ಥರಥರವು 
ದ್ರವ್ಯವ ಕೊಟ್ಟು ಕೊಂಬುವರು ಕಡಿಮೆಯಿಲ್ಲ 
ಸೋಜಿಗವಾಗಿದ್ದ ಜಾಜಿ ಮಲ್ಲಿಗೆ ಹೂ ಸೂಜಿ ಮಲ್ಲಿಗೆ ಸರಗಳು 
ರಂಗ ಪೂಜೆಗೆ ಒಯ್ಯೋ ಪುರುಷರು                             ।।೨।।

ನಾಲ್ಕು ದಿಕ್ಕಿಗೆ ದಿವ್ಯ ಅಕಾಲ ಹಿಂಡುಗಳು ಸಾಕುವ ಎರಳೆ 
ಎಳಿಗಾವು ಎತ್ತೆತ್ತ ನೋಡಿದರು ಮುತ್ತಿನ ಪಲ್ಲಕ್ಕಿ 
ಉತ್ತಮ ರಥವು ಹಿಡಿದೇಜಿಯ 
ಹಿಡಿದೇಜಿಯ ಮ್ಯಾಲಿನ್ನು ಹತ್ತಿಬಾಹುವರು ಕಡಿಮೆಯಿಲ್ಲ   ।।೩।।

ಬಾಜಾರದೊಳಗಿನ್ನು ರಾಜ ಸಿಂಹಾಸನ 
ರಾಜ ರಮೇಶ ಕುಳಿತಲ್ಲಿಯೆ 
ರಾಜ ರಮೇಶ ಕುಳಿತು ಪೂಜಿಗೊಂಬೊ 
ಮೂರ್ಜಗವು ಮುದದಿಂದ                                         ।।೪।।

Labels: ಹತ್ತೆಂಟು ಸಾಲಿನ ಬತ್ತಾಸದಂಗಡಿ, Hattentu Salina Battasadangadi, ಗಲಗಲಿ ಅವ್ವನವರು, Galagali Avvanavaru

ಪಾಲಿಸೆ ಸರಸ್ವತಿ ಪಾಲಿಸೆ : Palise Saraswati Palise

ಪಾಲಿಸೆ ಸರಸ್ವತಿ ಪಾಲಿಸೆ

ಕೀರ್ತನಕಾರರು : ಗಲಗಲಿ ಅವ್ವನವರು

ಪಾಲಿಸೆ ಸರಸ್ವತಿ ಪಾಲಿಸೆ ಪಾಲಿಸೆ ನಿನ್ನಯ ಪಾಲಿಗೆ ಬಂದೆನು 
ಕಾಲಕಾಲಕೆ ನಿನ್ನಯ ಕಾಲಿಗೆರಗುವೆ ಪಾಲಿಸೆ                  ।।ಪ॥ 

ಆದಿ ಬ್ರಹ್ಮನ ರಾಣಿಯೆ ವೇದಕ್ಕಭಿಮಾನಿಯೆ 
ಮೋದ ಗಾಯನ ಕುಶಳಲೆ 
ಮೋದ ಗಾಯನ ಕುಶಳಲೆ ಸರಸ್ವತಿ 
ನೀ ದಯಮಾಡಿ ಮತಿಯ ಕೊಡು                                  ।।೧।।

ಹೊನ್ನವರೆ ಹೊಸ ಕಪ್ಪುಬೆನ್ನಿನ ಮ್ಯಾಲಿನ ಹೆರಳು 
ಕಿನ್ನರಿ ನಿನ್ನ ಬಲಗೈಯ
ಕಿನ್ನರಿ ನಿನ್ನ ಬಲಗೈಯಲಿ ಹಿಡಕೊಂಡು 
ಖನಿ ಬಾ ನಮ್ಮ ವಚನಕ್ಕೆ                                            ।।೨।।

ಮಿತ್ರಿ ಸರಸ್ವತಿಗೆ  ಮುತ್ತಿನ ಉಡಿಯಕ್ಕಿ 
ಮತ್ತೆ ಮಲ್ಲಿಗೆಯ ನೆನೆದಂಡೆ 
ಮತ್ತೆ ಮಲ್ಲಿಗೆಯ ನೆನೆದಂಡೆ ತಂದಿದೆ 
ಪ್ರತ್ಯಕ್ಷವಾಗ ಸಭೆಯೊಳು                                            ।।೩।।

ಹರದಿ ಸರಸ್ವತಿಗೆ ಹವಳದ ಉಡಿಯಕ್ಕಿ 
ಅರಳು ಮಲ್ಲಿಗೆ ನೆನೆದಂಡೆ
ಅರಳು ಮಲ್ಲಿಗೆ ನೆನೆದಂಡೆ ತಂದಿದೆ 
ತಡೆಯದೆ ನಮಗೆ ವರವಕೊಡು                                    ।।೪।।

ಗುಜ್ಜಿಸರಸ್ವತಿಗೆ ಗೆಜ್ಜಿಸರಪಳಿಯಿಟ್ಟು 
ವಜ್ರ ಮಾಣಿಕ್ಯದಾಭರಣ 
ವಜ್ರ ಮಾಣಿಕ್ಯದಾಭರಣ ಭೂಷಿತಳಾಗಿ 
ನಿರ್ಜರೊಳುತ್ತಮಳೆ ನಡೆ ಮುಂದೆ                                 ।।೫।।

ಹರಡಿ ಸರಸ್ವತಿ-ಸರಿಗೆ ದಾರಿಗಳಿಟ್ಟು 
ಜರದ ಸೀರೆಯನೆ ನಿರಿದಿಟ್ಟು 
ಜರದ ಸೀರೆಯನೆ ನಿರಿದಿಟ್ಟು ಬಾರಮ್ಮ
ದೊರೆ ರಾಮೇಶನ ಅರಮನೆಗೆ                                     ।।೬।।

Labels: ಪಾಲಿಸೆ ಸರಸ್ವತಿ ಪಾಲಿಸೆ, Palise Saraswati Palise, ಗಲಗಲಿ ಅವ್ವನವರು, Galagali Avvanavaru 

ಕೋಲೆನ್ನಿ ಕೋಮಲೆಯರು : Kolenni Komaleyaru

ಕೋಲೆನ್ನಿ ಕೋಮಲೆಯರು

ಕೀರ್ತನಕಾರರು : ಗಲಗಲಿ ಅವ್ವನವರು 

ಕೋಲೆನ್ನಿ ಕೋಮಲೆಯರು ಅಮ್ಮಯ್ಯ 
ಮುಯ್ಯ ಮೇಲೆನ್ನಿ ಮೇಲೆನ್ನಿರಿ ಅಕ್ಕಯ್ಯ          ।।ಪ॥ 

ಇಂದು ಗುರುಗಳಂಘ್ರಿಗೆರಗಿ ಅಮ್ಮಯ್ಯ
ಸುಭದ್ರೆ ತಂದ ಮುಯ್ಯ ರಚಿಪೆನಕ್ಕಯ್ಯ           ।।೧।।

ನಿಷ್ಠಿಲೆ ಗುರುಗಳಿಗೆ ನಮಿಸಿ ಅಮ್ಮಯ್ಯ 
ದ್ರೌಪದಿ ಕೊಟ್ಟ ಮುಯ್ಯವ ರಚಿಪೆ ಅಕ್ಕಯ್ಯ       ।।೨।।

ಅರ್ಚಿಸಿ ಗುರುಗಳ ಪಾದ ಅಮ್ಮಯ್ಯ 
ಭಾವೆ ಚರ್ಚಾ ಮಾತುಗಳನ್ನೆ ರಚಿಪೆನಕ್ಕಯ್ಯ   ।।೩।।

ಮುಖ್ಯ ಗುರುಗಳಂಘ್ರಿಗೆರಗಿ ಅಮ್ಮಯ್ಯ 
ರುಕ್ಮಿಣಿ ನಕ್ಕು ನುಡಿದ ನುಡಿಯ ರಚಿಪೆನಕ್ಕಯ್ಯ  ।।೪।।

ನಮ್ಮ ಗುರುಗಳಂಘ್ರಿಗೆರಗಿ ಅಮ್ಮಯ್ಯ 
ಪಾರ್ಥ ರಮಿಯರಸನ ಮಹಿಮೆ ರಚಿಪೆನಕ್ಕಯ್ಯ   ।।೫।।

Lables: ಕೋಲೆನ್ನಿ ಕೋಮಲೆಯರು, Kolenni Komaleyaru, ಗಲಗಲಿ ಅವ್ವನವರು, Galagali Avvanavaru

ಸೋಮವಾರ, ಆಗಸ್ಟ್ 5, 2013

ಸಾಕೊರಂಗ ಅರಸುತನ : Sakoranga Arasutana

ಸಾಕೊರಂಗ ಅರಸುತನ 

ಕೀರ್ತನಕಾರರು : ಗಲಗಲಿ ಅವ್ವನವರು

ಸಾಕೊರಂಗ ಅರಸುತನ ಯಾಕೊ ಯಾಕೊ 
ಗೋಕುಲದ ಗೊಲ್ಲರು ನುಗಿಸಿ ಗಲ್ಲವ ಹಿಂಡಿ 
ಕಾಕು ಮಾಡಿದ್ದು ನಿನಗೆ ಬೇಕೋ ಬೇಕೋ                   ।।ಪ।।

ರುದ್ರ ಬ್ರಹ್ಮಹತ್ಯಾಕಾರ ಕ್ಷುದ್ರ ಬಲೀಂದ್ರನು 
ಕದ್ದೊಯ್ದ ಸುವರ್ಣ ಮುಕುಟವ 
ಕದ್ದೊಯ್ದ ಸುವರ್ಣ ಮುಕುಟವ ಬಲರಾಮ 
ಮದ್ಯಪಾನಿ ಎಂದು ನುಡಿದನು ನುಡಿದನು                   ।।೧।।

ಮಗನ ಮಗನು ಬಲು ಕೊಂಡೆಗಾರನಾದ 
ಮಗಳ ಮಗ ನಿನ್ನ ಹಣೆಗಚ್ಚಿದ 
ಮಗಳ ಮಗ ನಿನ್ನ ಹಣೆಗಚ್ಚಿದ್ದು ಕಂಡು 
ನಗತಾರೋ ನಿನ್ನ ಸರಿಯವರು ಸರಿಯವರು               ।।೨।।

ಮಾತೃದ್ರೋಹಿ ಶುಕ ಪಿತೃದ್ರೋಹಿ ಪ್ರಲ್ಹಾದ 
ಭ್ರಾತೃದ್ರೋಹಿ ವಿಭೀಷಣ  
ಭ್ರಾತೃದ್ರೋಹಿ ವಿಭೀಷಣ ಇವರು ಮುಖ್ಯ 
ಪಾತ್ರರೋ ನಿನ್ನ ಕರುಣಕೆ ಕರುಣಕೆ                           ।।೩।।

ಸ್ವಾಮಿ ದ್ರೋಹಿ ಅಕ್ರೂರ ಗುರು ದ್ರೋಹಿ ಪ್ರಲ್ಹಾದ 
ಬ್ರಾಹ್ಮಣರ ದ್ರೋಹಿಗಳು ಯಾದವರು 
ಬ್ರಾಹ್ಮಣರ ದ್ರೋಹಿಗಳು ಯಾದವರು  ನಿನ್ನ ಮುಖ್ಯ 
ಪ್ರೇಮಕ್ಕೆ ವಿಷಯರೋ ವಿಷಯರೋ                          ।।೪।।

ಅರಿಯದಲೆ ನಿನ್ನ ಎದೆಯಲೊದ್ದ ಭೃಗು ಋಷಿ 
ದುರುಳ ಶಿಶುಪಾಲ ಸಭೆಯೊಳು
ದುರುಳ ಶಿಶುಪಾಲ ಸಭೆಯೊಳು ಬೈದದ್ದು 
ಸರಿಬಂತೇ ರಾಮೇಶನ ಮನಸಿಗೆ ಮನಸಿಗೆ                ।।೫।।

Labels: ಸಾಕೊರಂಗ ಅರಸುತನ, Sakoranga Arasutana, ಗಲಗಲಿ ಅವ್ವನವರು, Galagali Avvanavaru