ವ್ಯಾಸರಾಯರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವ್ಯಾಸರಾಯರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಅಕ್ಟೋಬರ್ 7, 2013

ಎಲ್ಲಿ ಮಾಯವಾದನೆ ರಂಗಯ್ಯನು : Elli Mayavadane Rangayyanu

ಎಲ್ಲಿ ಮಾಯವಾದನೆ ರಂಗಯ್ಯನು

ಕೀರ್ತನಕಾರರು : ವ್ಯಾಸರಾಯರು  
ರಾಗ : ಆನಂದ ಭೈರವಿ
ತಾಳ : ಆದಿ

ಎಲ್ಲಿ ಮಾಯವಾದನೆ ರಂಗಯ್ಯನು       ||ಪ||

ಎಲ್ಲಿ ಮಾಯವಾದ ಫುಲನಾಭ ಕೃಷ್ಣ
ಚಲ್ವಗಂಗಳೆಯರು ಹುಡುಕಹೋಗುವ ಬನ್ನಿ  ||ಅ.ಪ||

ಮಂದಗಮನೆಯರೆಲ್ಲ ಕೃಷ್ಣನ ಕೂಡೆ
ಚಂದದಿ ಇದ್ದೆವಲ್ಲ
ಕಂದರ್ಪನ ಬಾಧೆಗೆ ಗುರಿಯ ಮಾಡಿದನಲ್ಲ
ಮಂದಮತಿಯು ನಮಗೆ ಬಂದು ಒದಗಿತಲ್ಲ ||೧||

ಸರಸಿಜಾಕ್ಷಿಯರು ಕೂಡಿ ಕೃಷ್ಣನ ಕೂಡೆ
ಸರಸವಾಡುತಲಿದ್ದೆವೆ
ಕರೆಕರೆಗೊಳಿಸಿ ಮನ್ಮಥ ಬಾಧೆಗೊಪ್ಪಿಸಿ
ಚರಣ ಸೇವಕರಾದ ತರುಣಿರಿಲ್ಲೆ ಬಿಟ್ಟು     ||೨||

ಭಕ್ತವತ್ಸಲದೇವನು ತನ್ನವರನು
ಅಕ್ಕರಿಂದಲಿ ಪೋರೆವೇನು
ಸಿಕ್ಕದೆ ಹೋಗನು ಹುಡುಕುತ್ತ ಹೋಗುವ
ಅಕ್ಕಯ್ಯ ಬನ್ನಿರೆ ಉಡುಪಿ ಶ್ರೀಕೃಷ್ಣನು      ||೩||

Labels: ಎಲ್ಲಿ ಮಾಯವಾದನೆ ರಂಗಯ್ಯನು, Elli Mayavadane Rangayyanu, ವ್ಯಾಸರಾಯರು, Vyasarayaru

ಬುಧವಾರ, ಸೆಪ್ಟೆಂಬರ್ 11, 2013

ಅಂತರಂಗದಲ್ಲಿ ಹರಿಯ ಕಾಣದವ : Antarangadalli Hariya Kanadava

ಅಂತರಂಗದಲ್ಲಿ ಹರಿಯ ಕಾಣದವ

ಕೀರ್ತನಕಾರರು : ವ್ಯಾಸರಾಯರು
ರಾಗ : ಮೋಹನ
ತಾಳ : ಛಾಪು

ಅಂತರಂಗದಲ್ಲಿ ಹರಿಯ ಕಾಣದವ ಹುಟ್ಟು ಕುರುಡನೋ                               ||ಪ||

ಸಂತತ ಶ್ರೀ ಕೃಷ್ಣ ಚರಿತೆ ಕೇಳದವ ಜಡಮತಿ ಕಿವುಡನೋ ಎಂದೆಂದಿಗೂ         ||ಅ.ಪ||

ಹರುಷದಿಂದಲಿ ನರಹರಿಯ ಪೂಜೆ ಮಾಡದವನೆ ಕೈ ಮುರಿದವನೊ
ಕುರುವರಸೂತನ ಮುಂದೆ ಕೃಷ್ಣಾಯೆಂದು ಕುಣಿಯದವನೆ ಕುಂಟನೊ
ನರಹರಿ ಚರಣೋದಕವ ಧರಿಸದ ಶಿರ ನಾಯುಂಡ ಹೆಂಚು ಕಾಣೊ
ಸುರವರ ಕೃಷ್ಣ ಪ್ರಸಾದವಿಲ್ಲದ ಊಟ ಸೂಕರ ಭೋಜನವೊ ಎಂದೆಂದಿಗೂ       ||೧||

ಅಮರೇಶ ಕೃಷ್ಣಗರ್ಪಿತವಲ್ಲದ ಕರ್ಮ ಆಸತಿಯ ವ್ರತನೇಮವೊ
ರಮಯರಸಗೆ ಪ್ರೀತಿಯಿಲ್ಲದ ವಿತರಣೆ ರಂಡೆಕೊರಳ ಸೂತ್ರವೊ
ಕಮಲನಾಭನ ಪಾಡಿ ಪೊಗಳದ ಸಂಗೀತ ಗಾರ್ಧಭರೋಧನವೋ
ಮಮತೆ ಇಂದಲಿ ಕೇಶವಗೆ ನಮಸ್ಕಾರ ಮಾಡದವನೆ ಮೃಗವೊ ಎಂದೆಂದಿಗೂ ||೨||

ಜರೆ ಪುಟ್ಟು ಮರಣವ ತೊಡೆವ ಸುಧೆಯ ಬಿಟ್ಟು ಸುರೆಯ ಸೇವಿಸಬೇಡವೊ
ಸುರಧೇನುವಿರಲಾಗಿ ಸೂಕರ ಮೊಲೆಹಾಲು ಕರೆದು ಕುಡಿಯಬೇಡವೊ
ಕರಿ ರಥ ತುರಗವಿರಲು ಬಿಟ್ಟು ಕೆಡಹುವ ಕತ್ತೆಯೇರಲು ಬೇಡವೊ
ಪರಮಪದವನೀವ ಸಿರಿಕೃಷ್ಣನಿರಲಾಗಿ ನರರ ಸೇವಿಸಬೇಡವೊ ಎಂದೆಂದಿಗೂ   ||೩||

Labels: ಅಂತರಂಗದಲ್ಲಿ ಹರಿಯ ಕಾಣದವ, Antarangadalli Hariya Kanadava, ವ್ಯಾಸರಾಯರು, Vyasarayaru

ಸೋಮವಾರ, ಸೆಪ್ಟೆಂಬರ್ 9, 2013

ದಾಸರೆಂದರೆ ಪುರಂದರದಾಸರಯ್ಯ : Dasarendare Purandaradasarayya

ದಾಸರೆಂದರೆ ಪುರಂದರದಾಸರಯ್ಯ

ಕೀರ್ತನಕಾರರು : ವ್ಯಾಸರಾಯರು
ರಾಗ : ಕಾಂಬೋಧಿ
ತಾಳ : ಝಂಪೆ

ದಾಸರೆಂದರೆ ಪುರಂದರದಾಸರಯ್ಯ                 ||ಪ||

ವಾಸುದೇವ ಕೃಷ್ಣನ್ನ ಸೂಸಿ ಪೂಜಿಸುವ             ||ಅ.ಪ||

ಗ್ರಾಸಕಿಲ್ಲದೇ ಪೋಗಿ ಪರರ ಮನೆಗಳ ಪೊಕ್ಕು
ದಾಸನೆಂದೂ ತುಲಸಿಮಾಲೆ ಧರಿಸೀ
ಬ್ಯಾಸರಿಲ್ಲದೆ ಅವರ ಕಾಡಿ ಬೇಡಿ ಬಳಲಿಸುತ
ಕಾಸುಗಳಿಸುವ ಅವನು ಹರಿದಾಸನೇ               ||೧||

ಡಂಭಕದಿ ಹರಿಸ್ಮರಣೆ ಮಾಡಿ ಜನರಾ ಮುಂದೆ
ಸಂಭ್ರಮದಿ ತಾನುಂಬ ಊಟ ಬಯಸಿ
ಅಂಬುಜೋದ್ಭವಪಿತನ ಆಗಮಗಳರಿಯದೆಲೆ
ತಂಬೂರಿ ಮೀಟಲವ ಹರಿದಾಸನೇ                 ||೨||

ಯಾಯಿವಾರವಮಾಡಿ ವಿಪ್ರರಿಗೆ ಮೃಷ್ಟಾನ್ನ
ಪ್ರೀಯದಲಿ ತಾನೊಂದು ಕೊಡದೆ ಲೋಭಿ
ಮಾಯ ಸಂಸಾರದಲಿ ಮಮತೆ ಹೆಚ್ಚಾಗಿಟ್ಟು
ಗಾಯನವ ಮಾಡಲವ ಹರಿದಾಸನೇ               ||೩||

ಪಾಠಕನ ತೆರೆನಂತೆ ಪದಗಳನು ತಾ ಬೊಗಳಿ
ಕೂಟಜನರಾ ಮನವ ಸಂತೋಷಪಡಿಸಿ
ಗೂಟನಾಮಗಳಿಟ್ಟು ಕೊಟ್ಟರಿಯೇ ತಾನೆನುತ
ತೂಟಕವ ಮಾಡಲವ ಹರಿದಾಸನೇ                ||೪||

ನೀತಿಯೆಲ್ಲವನರಿತು ನಿಗಮವೇದ್ಯನ ನಿತ್ಯ
ವಾತಸುತನಲ್ಲಿಹನ ವರ್ಣಿಸುತ
ಗೀತ ನರ್ತನದಿಂದ ಕೃಷ್ಣನ್ನ ಪೂಜಿಸುವ
ಪೂತಾತ್ಮ ಪುರಂದರದಾಸರಿವರಯ್ಯ             ||೫||

Labels: ದಾಸರೆಂದರೆ ಪುರಂದರದಾಸರಯ್ಯ, Dasarendare Purandaradasarayya,
ವ್ಯಾಸರಾಯರು, Vyasarayaru

ಎದುರಾರೊ ಗುರುವೆ ಸಮನಾರೊ : Eduraro Guruve Samanaro

ಎದುರಾರೊ ಗುರುವೆ ಸಮನಾರೊ

ಕೀರ್ತನಕಾರರು : ವ್ಯಾಸರಾಯರು
ರಾಗ : ಆನಂದಭೈರವಿ
ತಾಳ : ಆದಿ

ಎದುರಾರೊ ಗುರುವೆ ಸಮನಾರೊ                ||ಪ||

ಮದನಗೋಪಾಲನ ಪ್ರಿಯ ಜಯರಾಯ         ||ಅ.ಪ||

ಕಡುಗರ್ಜಿಸುವ ಕೇಸರಿಯಂತೆ ನಿಮ್ಮ ವಾದ-
ಗಡಣೆಯ ಕೇಳುತ ನುಡಿ ಮುಂದೋಡದೆ
ಗಡಗಡ ನಡುಗುತ ಮಾಯ್ಗೋಮಾಯ್ಗಳು
ಅಡವಿಯೋಳಡಗೋರು ನಿಮ್ಮ ಭೀತಿಯಲಿ      ||೧||

ಕುಟಿಲಮತಗಳೆಂಬೊ ಚಟುಲಂಧಕಾರಕ್ಕೆ
ಪಟುತರ ತತ್ತ್ವಪ್ರಕಾಶಿಕೆಂತೆಂಬ
ಚಟುಲಾತಪದಿಂದ ಖಂಡಿಸಿ ತೇಜೋ-
ತ್ಕಟದಿ ಮೆರೆದೆ ಬುಧಕಟಕಾಬ್ಜಮಿತ್ರ                ||೨||

ಅಮಿತದ್ವಿಜಾವಳಿಕುಮುದಗಳರಸಿ
ವಿಮತರ ಮುಖಕಮಲಂಗಳ ಬಾಡಿಸಿ
ಸ್ವಮತರ ಹೃತ್ಸಂತಾಪಗಳೋಡಿಸಿ
ವಿಮಲಸುಕೀರ್ತಿಯ ಪಡೆದೆಯೊ ಚಂದ್ರ            ||೩||

ವೇದಶಾಸ್ತ್ರಗಳೆಂಬೊ ಶೃಂಗಗಳಿಂದ ಸು-
ಧಾದಿಗ್ರಂಥಗಳೆಂಬೊ ಸ್ತನದಿಂದೊಪ್ಪುತ ತತ್ತ್ವ-
ಬೋಧೆಯೆಂಬ ದುಗ್ಧ ಶಿಷ್ಯವತ್ಸಂಗಳಿಗೆ
ಆದರದಲಿ ಕೊಟ್ಟ ಯತಿಸುರಧೇನು                  ||೪||

ವ್ಯಾಸಸೂತ್ರಗಳೆಂಬ ಮಂದರವನು ವೇದ
ರಾಶಿಯೆಂಬ ವಾರಾಶಿಯೊಳಗಿಟ್ಟು |
ಶ್ರೀಸರ್ವಜ್ಞರ ವಾಕ್ಯಪಾಶದಿ ಸುತ್ತಿ
ಭಾಸುರನ್ಯಾಯಸುಧಾ ಪಡೆದ ಯತೀಂದ್ರ          ||೫||

ವನಜನಾಭನ ಗುಣಮಣಿಗಳು  ಸರ್ವಜ್ಞ-
ಮುನಿಕೃತಗ್ರಂಥಗಳವನಿಯೊಳಡಗಿರೆ ಸ-
ಜ್ಜನರಿಗೆ ಟೀಕಾಂಜನದಿಂದ ತೋರಿಸಿ
ಘನಸುಖಸಾಧನ ಮಾಡಿದ್ಯೊ ಧೀರ                 || ೬ ||

ಅರ್ಥಿಮಂದಾರ ವೇದಾರ್ಥವಿಚಾರ ಸ-
ಮರ್ಥ ಶ್ರೀಕೃಷ್ಣ ಪಾದಾಂಬುಜಲೋಲ ಪ್ರ-
ತ್ಯರ್ಥಿಮತ್ತೇಭಕಂಠೀರವಾಕ್ಷೋಭ್ಯ-
ತೀರ್ಥಕರಜ ಜಯತೀರ್ಥಯತೀಂದ್ರ || ೭ ||

Labels: ಎದುರಾರೊ ಗುರುವೆ ಸಮನಾರೊ, Eduraro Guruve Samanaro
, ವ್ಯಾಸರಾಯರು, Vyasarayaru

ಭಾನುವಾರ, ಆಗಸ್ಟ್ 4, 2013

ಹರಿಸ್ಮರಣೆಯೆಂಬೊ : Harismaraneyembo

ಹರಿಸ್ಮರಣೆಯೆಂಬ

ಕೀರ್ತನಕಾರರು : ವ್ಯಾಸರಾಯರು 
ರಾಗ :  ಕಾಂಬೋದಿ ತಾಳ : ಝಂಪೆ

ಹರಿಸ್ಮರಣೆಯೆಂಬೊ ಹಿರಿಪುತ್ರನಿರಲಿಕ್ಕೆ ಈ 
ನರಪುತ್ರರಿಂದ ಗತಿಯಾಹುದೇನಯ್ಯ                                ।।ಪ।।

ಹೊಟ್ಟೆಯಲಿ ಹುಟ್ಟಿದವ ಪುತ್ರನೆಂದೆನಿಸುವನು 
ಹೊಟ್ಟೆ ಕಾದರೆ ಹೊಳೆಯ ಮನೆ ಹೊಗಿಸುವನು 
ಎಷ್ಟೊಂದು ಪೇಳಲಿ ಕಷ್ಟನಿಷ್ಠುರಗಳು
ಬತ್ತ ಬಯಲು ಸಂಸಾರ ಸಹ್ಯವಲ್ಲ ಮನುಜಾ                        ।।೧।।

ಜರೆ ಬಂದು ಕವಿದಾಗ ಜರೆವರು ಸತಿ ಸುತರು 
ಹೊರಗೊಳಗೆ ತಾವು ಅಸಹ್ಯಿಸಿಕೊಂಬರು 
ಘೋರ ಯಮನವರು ಬಂದು ಗುದಿಕಟ್ಟಿ ಒಯ್ವಾಗ 
ನರಹರಿಯ ನಾಮ ದೊರಕೊಂಬುದೇನಯ್ಯ                         ।।೨।।

ಸಂತತ ನಿಮ್ಮ ನಾಮ ಒಂದು ದಿನ ನೆನೆಯದೆ 
ಚಿಂತಿಸಿ ಬರಿದೆ ಬಳಲಿದೆನೊ ಸ್ವಾಮಿ 
ಕಂತು ಪಿತ ನಿಮ್ಮ ನಾಮ ಕೈವಲ್ಯ ಸಾಧನವು
ಎಂತು ಪೇಳಲಿ ಅನಂತಮೂರುತಿ ಕೃಷ್ಣ                               ।।೩।।


Labels : ಹರಿಸ್ಮರಣೆಯೆಂಬೊ, Harismaraneyembo, ವ್ಯಾಸರಾಯರು, Vyasarayaru

ಗುರುವಾರ, ಜುಲೈ 25, 2013

ನಂಬಿಕೆಟ್ಟವರಿಲ್ಲವೊ ರಂಗಯ್ಯನ : Nambikettavarillavo Rangayyana

ನಂಬಿಕೆಟ್ಟವರಿಲ್ಲವೊ ರಂಗಯ್ಯನ

ಕೀರ್ತನಕಾರರು : ವ್ಯಾಸರಾಯರು 
ರಾಗ : ಕಲ್ಯಾಣಿ 
ತಾಳ : ಮಿಶ್ರಛಾಪು 

ನಂಬಿಕೆಟ್ಟವರಿಲ್ಲವೊ ರಂಗಯ್ಯನ 
ನಂಬದೆ ಕೆಟ್ಟರೆ ಕೆಡಲಿ                             ।।ಪ।।

ಅಂಬುಜನಾಭನ ಅಖಿಳಲೋಕೇಶನ 
ಕಂಬುಕಂಧರ ಕೃಷ್ಣ ಕರುಣಾಸಾಗರನ         ।।ಅ.ಪ।।

ತರಳ ಪ್ರಹ್ಲಾದ ಸಾಕ್ಷಿ ಸರಸಿಯೊಳಿದ್ದ 
ಕರಿರಾಜನೊಬ್ಬ ಸಾಕ್ಷಿ 
ಮರಣಕಾಲದಿ ಅಜಾಮಿಳ ಮಗನ ಕರೆಯೆ 
ಗರುಡನೇರಿ ಬಂದ ಗರುವರಹಿತನ             ।।೧।।

ದೊರೆಯೂರು ಏರಬಂದ ಪುತ್ರನನ್ನು 
ಕೊರಳ್ಹಿಡದ್ಹೊರಡಿಸಲು 
ಅರಣ್ಯದೊಳಗವನಿದ್ದ ಸ್ಥಳದಲ್ಲಿ 
ಭರದಿಂದೋಡಿ ಬಂದ ಭಕ್ತವತ್ಸಲನ            ।।೨।।

ತರುಣಿ ದ್ರೌಪದಿ ಸೀರೆಯ ದುಶ್ಯಾಸನ 
ಸರಸರ ಸೆಳೆಯುತ್ತಿರೆ 
ತರಳೆಯೊಡನೆ ತಾನಾಡುವುದು ಬಿಟ್ಟು 
ತ್ವರಿತದಕ್ಷಯವಿತ್ತ ಸಿರಿಕೃಷ್ಣರಾಯನ            ।।೩।।


Labels: ನಂಬಿಕೆಟ್ಟವರಿಲ್ಲವೊ ರಂಗಯ್ಯನ, Nambikettavarillavo Rangayyana, ವ್ಯಾಸರಾಯರು, Vyasarayaru

ನ್ಯಾಯವೇ ನಿನಗೆ ಎನಗೆ ಸಿರಿಕೃಷ್ಣ, Nyayave Ninage Enage Sirikrishna

ನ್ಯಾಯವೇ ನಿನಗೆ ಎನಗೆ ಸಿರಿಕೃಷ್ಣ

ಕೀರ್ತನಕಾರರು : ವ್ಯಾಸರಾಯರು
ರಾಗ : ಕೇದಾರಗೌಳ 
ತಾಳ : ಅಟ್ಟ 

ನ್ಯಾಯವೇ ನಿನಗೆ ಎನಗೆ ಸಿರಿಕೃಷ್ಣ 
ಬಾಯಾಡಬಹುದೆ ಕೈಯೊಳಿತ್ತ ಹಣಗಳ            ।।ಪ।।

ಆರು ಅರಿಯರು ಹಾಗೆ ಒಂಬತ್ತು ಕೊಡುವಾಗ 
ತೋರಿಯಾಡಿದೆ ಒಮ್ಮೆ ನಿನ್ನ ಹೆಸರ
ಗಾರು ಮಾಡದೆ ಬಡ್ಡಿತೆತ್ತು ಬರುವೆನೆಂದು 
ಪೂರೈಸಿ ಕೊಡದೆ ಚುಂಗಡಿಯ ನಿಲಿಸುವರೆ       ।।೧।।

ಸಾಲವ ಬೇಡಿದರೆ ಕೋಪವೇ ಕಮಲಾಕ್ಷ 
ಕಾಲಿಗೆನ್ನ ಕೊರಳ ಕಟ್ಟಿಕೊಂಬೆ 
ಆಲಯದವರ ಕೇಳದೆ ಒಳಗಾದೆನೊ
ಭೋಳೆಯತನದಲಿ ನಿನ್ನ ನಂಬಿದೆ ಹರಿಯೆ        ।।೨।।

ಅಸಲು ನಿನಗೆ ಸಮರ್ಪಣೆ ಆಯಿತೆಲೊ ದೇವ 
ಮೀಸಲು ಪೊಂಬೆಸರುನಿರುತ ನಡೆಯಲಿ 
ಶಶಿಧರ ಬ್ರಹ್ಮಾದಿವಂದ್ಯ ಸತ್ಯವೆಂಬ ಬಿರುದು 
ಮೀಸಲು ಉಳುಹಿ ಎನ್ನ ಸಲಹಯ್ಯ ಸಿರಿಕೃಷ್ಣ     ।।೩।।

Labels: ನ್ಯಾಯವೇ ನಿನಗೆ ಎನಗೆ ಸಿರಿಕೃಷ್ಣ, Nyayave Ninage Enage Sirikrishna, ವ್ಯಾಸರಾಯರು, Vyasarayaru

ಬುಧವಾರ, ಜುಲೈ 24, 2013

ಕೃಷ್ಣಾ ನೀ ಬೇಗನೆ ಬಾರೋ : Krishna Nee Begane Baro

ಕೃಷ್ಣಾ ನೀ ಬೇಗನೆ ಬಾರೋ

ಕೀರ್ತನಕಾರರು : ವ್ಯಾಸರಾಯರು
ರಾಗ : ಯಮನ್ ಕಲ್ಯಾಣಿ
ತಾಳ : ಛಾಪು

ಕೃಷ್ಣಾ ನೀ ಬೇಗನೆ ಬಾರೋ 
ಬೇಗನೆ ಬಾರೋ ಮುಖವನ್ನು ತೋರೋ        ।।ಪ।।

ಕಾಲಲಂದುಗೆ ಗೆಜ್ಜೆ ನೀಲದ ಬಾವುಲಿ 
ನೀಲವರ್ಣನೆ ನಾಟ್ಯವನಾಡುತ ಬಾರೋ        ।।೧।।

ಉಡಿಯಲ್ಲಿ ಉಡಿಗೆಜ್ಜೆ ಬೆರಳಲ್ಲಿ ಉಂಗುರ 
ಕೊರಳೊಳು ಧರಿಸಿದ ವೈಜಯಂತಿ ಮಾಲೆ      ।।೨।।

ಕಾಶಿಪೀತಾಂಬರ ಕೈಯಲ್ಲಿ ಕೊಳಲು 
ಪೂಸಿದ ಶ್ರೀಗಂಧ ಮೈಯೊಳಗಮ್ಮ                 ।।೩।।

ತಾಯಿಗೆ ಬಾಯಲ್ಲಿ ಜಗವನ್ನೇ ತೋರಿದ 
ಜಗದೋದ್ಧಾರಕ ನಮ್ಮ ಉಡುಪಿಯ ಶ್ರೀಕ್ರಷ್ಣ     ।।೪।।


Labels: ಕೃಷ್ಣಾ ನೀ ಬೇಗನೆ ಬಾರೋ, Krishna Nee Begane Baro, ವ್ಯಾಸರಾಯರು, Vyasarayaru

ಸೋಮವಾರ, ಏಪ್ರಿಲ್ 22, 2013

ಬಾರೋ ಬೇಗ ನೀರಜಾಕ್ಷ : Baro Bega Nirajaksha


ಬಾರೋ ಬೇಗ ನೀರಜಾಕ್ಷ

ಕೀರ್ತನಕಾರರು : ವ್ಯಾಸರಾಯರು
ರಾಗ : ಫರಜು
ತಾಳ : ರೂಪಕ

ಬಾರೋ ಬೇಗ ನೀರಜಾಕ್ಷ
ದೂರು ಇದು ಏತಕೋ ||ಪ||

ಮೊಸರು ಮಾರುವ ಗೊಲ್ಲತಿಯರ
ಅಸವಳಿಸಿ ನೀ ಕೈಯಪಿಡಿದು
ವಶವಾಗು ಎಂದು ಪೇಳಿ
ನಸುನಗುತಲಿದ್ದೆಯಂತೆ ||೧||

ಕುಸುಮಶರನ ಪೆತ್ತವನೆ
ಬಸವನಾದೆ ಊರೊಳಗೆ
ಶಶಿಮುಖಿಯರ ದೂರು ಬಹು
ಪಸರಿಸಿತು ನಾ ಪೇಳಲಾರೆ ||೨||

ಕಂದ ಕೇಳು ಇಂದುಮುಖಿಯರ
ಹೊಂದಿ ನೀನಾಡಲ್ಯಾಕೆ
ಮಂದಿರದೊಳಾಡಿ ಸಲಹೊ
ತಂದೆ ಉಡುಪಿ ಸಿರಿಕೃಷ್ಣ ||೩||

Labels: ಬಾರೋ ಬೇಗ ನೀರಜಾಕ್ಷ, ವ್ಯಾಸರಾಯರು, Vyasarayaru, Baro Bega Nirajaksha, ವ್ಯಾಸರಾಯರು, Vyasarayaru