ಕನಕದಾಸರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕನಕದಾಸರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಸೆಪ್ಟೆಂಬರ್ 13, 2013

ಹೆತ್ತ ತಾಯಿಗಿಂತ ಅತ್ಯಧಿಕ ಮಾಯವುಂಟೆ : Hetta Tayiginta Atyadhika Mayavunte

ಹೆತ್ತ ತಾಯಿಗಿಂತ ಅತ್ಯಧಿಕ ಮಾಯವುಂಟೆ

ಕೀರ್ತನಕಾರರು : ಕನಕದಾಸರು 
ರಾಗ : ಮೋಹನ 
ತಾಳ : ಅಟ 

ಹೆತ್ತ ತಾಯಿಗಿಂತ ಅತ್ಯಧಿಕ ಮಾಯವುಂಟೆ 
ಉತ್ತಮ ಅಶ್ವವ ಕತ್ತೆ ಹೋಲುವುದುಂಟೆ               ।।ಪ॥ 

ವಿತ್ತವುಳ್ಳವನ ಕುಲ ಎಣಿಸುವುದುಂಟೆ 
ಸ್ವಾರ್ಥಕೆ ನ್ಯಾಯ ಎಂದಾದರೂ ಉಂಟೆ              ।।೧।।

ಅತ್ತೆಮನೆ ಸೇರುವಗೆ ಅಭಿಮಾನವುಂಟೆ 
ಬತ್ತಲೆ ತಿರುಗುವಗೆ ಭಯವು ಇನ್ನುಂಟೆ                ।।೨।।

ಪೃಥ್ವಿಯೊಳಗೆ ಕಾಗಿನೆಲೆಯಾದಿ ಕೇಶವಗೆ 
ಮರ್ತ್ಯದೊಳನ್ಯ ದೇವರು ಸರಿಯುಂಟೆ                ।।೩।।

Labels: ಹೆತ್ತ ತಾಯಿಗಿಂತ ಅತ್ಯಧಿಕ ಮಾಯವುಂಟೆ, Hetta Tayiginta Atyadhika Mayavunte, ಕನಕದಾಸರು

ಬುಧವಾರ, ಸೆಪ್ಟೆಂಬರ್ 11, 2013

ಯಾದವರಾಯ ಬೃಂದಾವನದೊಳು : Yadavaraya Brindavanadolu

ಯಾದವರಾಯ ಬೃಂದಾವನದೊಳು

ಕೀರ್ತನಕಾರರು : ಕನಕದಾಸರು
ರಾಗ : ರಾಗಮಾಲಿಕೆ

ಯಾದವರಾಯ ಬೃಂದಾವನದೊಳು
ವೇಣು ನಾದವ ಮಾಡುತಿರೆ                          ||ಪ||

ರಾಧಾ ಮುಂತಾದ ಗೋಪಿಯರೆಲ್ಲ
ಮಧುಸೂದನ ನಿನ್ನನು ಸೇವಿಸುತಿರೆ
ಸುರರು ಅಂಬರದಿ ಸಂದಣಿಸಿರೆ
ಅಪ್ಸರ ಸ್ತ್ರೀಯರು ಮೈ ಮರೆತಿರೇ ಅನುಪಲ್ಲವಿ  ||೧||

ಕರದಲಿ ಕೊಳಲನು ಊದುತ ಪಾಡುತ
ಸ ರಿ ಗ ಮ ಪ ದ ನಿ ಸ್ವರಗಳ ನುಡಿಸುತ
ಹರಿ ಹರ ಬ್ರಹ್ಮರು ನಲಿದಾಡುತಿರೆ
ತುಂಬುರು ನಾರದರು ಪಾಡುತಿರೆಚರಣ          ||೨||

ಕರುಗಳ ಸಹಿತಲೇ ಗೋಕುಲವೆಲ್ಲ
ಸಿರಿ ಕಾಗಿನೆಲೆಯಾದಿ ಕೇಶವ ರಾಯ
ತರುಗಳ ಸಹಿತಲೇ ವರಗೋಪಾಲಚರಣ        ||೩||

Labels: ಯಾದವರಾಯ ಬೃಂದಾವನದೊಳು, Yadavaraya Brindavanadolu, ಕನಕದಾಸರು, Kanakadasaru

ವರವ ಕೊಡು ಎನಗೆ ವಾಗ್ದೇವಿ : Varava Kodu Enage Vagdevi

ವರವ ಕೊಡು ಎನಗೆ ವಾಗ್ದೇವಿ

ಕೀರ್ತನಕಾರರು : ಕನಕದಾಸರು
ರಾಘ : ಕಲ್ಯಾಣಿ
ತಾಳ : ಝಂಪೆ

ವರವ ಕೊಡು ಎನಗೆ ವಾಗ್ದೇವಿ ನಿನ್ನ
ಚರಣಕಮಲಂಗಳನ ದಯಮಾಡು ದೇವಿ            ||ಪ||

ಶಶಿ ಮುಖದ ನಸುನಗೆಯ ಬಾಲೆ
ಎಸೆವ ಕರ್ಣದ ಮುತ್ತಿನೋಲೆ
ನಸುನಗುವ ಸುಲಿಪಲ್ಲ ಗುಣಶೀಲೆ ದೇವಿ
ಬಿಸಜಾಕ್ಷಿ ಎನ್ನ ಹೃದಯದೊಳು ನಿಂದು             ||೧||

ಇಂಪು ಸೊಂಪಿನ ಚಂದ್ರಬಿಂಬೆ
ಕೆಂಪು ತುಟಿಗಳ ನಾಸಿಕದ ರಂಭೆ
ಜೋಂಪು ಮದನನ ಪೂರ್ಣಶಕ್ತಿ ಗೊಂಬೆ ಒಳ್ಳೆ
ಸಂಪಿಗೆಯ ಮುಡಿಗಿಟ್ಟು ರಾಜಿಪ ಶಾರದಾಂಬೆ     ||೨||

ರವಿಕೋಟಿ ತೇಜಪ್ರಕಾಶೇ ಮಹಾ
ಕವಿಜನರ ಹ್ರಿತ್ಕಮಲ ವಾಸೇ
ಅವಿರಳಪುರಿಯ ಸಿರಿಕಾಗಿನೆಲೆಯಾದಿ ಕೇ
ಶವನ ಸುತನಿಗೆ ಸನ್ನುತ ರಾಣಿವಾಸೆ                 ||೩||

Labels: ವರವ ಕೊಡು ಎನಗೆ ವಾಗ್ದೇವಿ, Varava Kodu Enage Vagdevi, ಕನಕದಾಸರು, Kanakadasaru

ತೊರೆದು ಜೀವಿಸಬಹುದೆ : Toredu Jivisabahude

ತೊರೆದು ಜೀವಿಸಬಹುದೆ

ಕೀರ್ತನಕಾರರು : ಕನಕದಾಸರು
ರಾಗ : ಮುಖಾರಿ
ತಾಳ : ಏಕ

ತೊರೆದು ಜೀವಿಸಬಹುದೆ ಹರಿ ನಿನ್ನ ಚರಣವ
ತೊರೆದು ಜೀವಿಸಬಹುದೆ                                  ||ಪ||

ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ
ಕರಪಿಡಿದೆನ್ನನು ಕಾಯೊ ಕರುಣಾನಿಧಿ                  ||ಅ.ಪ||

ತಾಯಿ ತಂದೆಯ ಬಿಟ್ಟು ತಪವ ಮಾಡಲು ಬಹುದು
ದಾಯಾದಿ ಬಂಧುಗಳ ಬಿಡಲು ಬಹುದು
ರಾಯ ಮುನಿದರೆ ರಾಜ್ಯವ ಬಿಡಬಹುದು
ಕಾಯಜಪಿತ ನಿನ್ನಡಿಯ ಬಿಡಲಾಗದು                 ||೧||

ಒಡಲು ಹಸಿದರೆ ಅನ್ನವ ಬಿಡಬಹುದು
ಪಡೆದ ಕ್ಷೇತ್ರವ ಬಿಟ್ಟು ಹೊರಡಲು ಬಹುದು
ಮಡದಿ ಮಕ್ಕಳ ಕಡೆಗೆ ತೊಲಗಿಸಿಬಿಡಬಹುದು
ಕಡಲೊಡೆಯ ನಿಮ್ಮಡಿಯ ಘಳಿಗೆ ಬಿಡಲಾಗದು     ||೨||

ಪ್ರಾಣವ ಪರರಿಗೆ ಬೇಡಿದರೆ ಕೊಡಬಹುದು
ಮಾನಾಭಿಮಾನವ ತಗ್ಗಿಸಬಹುದು
ಪ್ರಾಣದಾಯಕನಾದ ಆದಿಕೇಶವರಾಯ
ಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದು               ||೩||

Labels: ತೊರೆದು ಜೀವಿಸಬಹುದೆ, Toredu Jivisabahude, ಕನಕದಾಸರು, Kanakadasaru

ಮಂಗಳವಾರ, ಸೆಪ್ಟೆಂಬರ್ 10, 2013

ಬಾಗಿಲನು ತೆರೆದು ಸೇವೆಯನು ಕೊಡೊ : Bagilanu Teredu Seveyanu Kodo

ಬಾಗಿಲನು ತೆರೆದು ಸೇವೆಯನು ಕೊಡೊ

ಕೀರ್ತನಕಾರರು : ಕನಕದಾಸರು
ರಾಗ : ಅಠಾಣ
ತಾಳ : ಅಟ್ಟ

ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ
ಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೇ                 ||ಪ||

ಪರಮಪದದೊಳಗೆ ವಿಷಧರನ ತಲ್ಪದಲಿ ನೀ
ಸಿರಿಸಹಿತ ಕ್ಷೀರವಾರುಧಿಯೊಳಿರಲು
ಕರಿರಾಜ ಕಷ್ಟದಲಿ ಆದಿಮೂಲಾ ಎಂದು
ಕರೆಯಲಾಕ್ಷಣ ಬಂದು ಒದಗಿದೆಯೋ ನರಹರಿಯೇ        ||೧||

ಕಡುಕೋಪದಿಂ ಖಳನು ಖಡುಗವನು ಹಿಡಿದು ನಿ
ನ್ನೊಡೆಯನೆಲ್ಲಿಹನು ಎಂದು ನುಡಿಯೆ
ದೃಢಭಕಿಯಲಿ ಶಿಶುವು ಬಿಡದೆ ನಿನ್ನನು ಭಜಿಸೆ
ಸಡಗರದಿ ಕಂಭದಿಂದೊಡೆದೆ ನರಹರಿಯೆ                    ||೨||

ಯಮಸುತನ ರಾಣಿಗೆ ಅಕ್ಷಯವಸನವಿತ್ತೆ
ಸಮಯದಲಿ ಅಜಮಿಳನ ಪೊರೆದೆ
ಸಮಯಾಸಮಯವುಂಟೆ ಭಕ್ತವತ್ಸಲ ನಿನಗೆ
ಕಮಲಾಕ್ಷ ಕಾಗಿನೆಲೆಯಾದಿ ಕೇಶವನೆ                        ||೩||

Labels: ಬಾಗಿಲನು ತೆರೆದು ಸೇವೆಯನು ಕೊಡೊ, Bagilanu Teredu Seveyanu Kodo, ಕನಕದಾಸರು, Kanakadasaru 

ಬಾರೋ ಕೃಷ್ಣಯ್ಯ ಕೃಷ್ಣಯ್ಯ ಬಾರೋ : Baro Krishnayya Krishnayya Baro

ಬಾರೋ ಕೃಷ್ಣಯ್ಯ ಕೃಷ್ಣಯ್ಯ ಬಾರೋ

ಕೀರ್ತನಕಾರರು : ಕನಕದಾಸರು
ರಾಗ : ನಾಟಕುರುಂಜಿ
ತಾಳ : ರೂಪಕ

ಬಾರೋ ಕೃಷ್ಣಯ್ಯ ಕೃಷ್ಣಯ್ಯ
ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗ                ||ಪ||

ಬಾರೋ ನಿನ್ನ ಮುಖ ತೋರೋ ನಿನ್ನ
ಸರಿ ಯಾರೋ ಜಗಧಾರ ಶೀಲನೇ                        ||ಅ.ಪ||

ಅಂದುಗೆ ಪಾದವು ಕಾಲಂದುಗೆ ಕಿರು ಗೆಜ್ಜೆ
ಧಿಂಧಿಮಿ ಧಿಮಿ ಧಿಮಿ ಧಿಮಿ ಎನುತ
ಪೊಂಗೊಳನುದುತ್ತ ಬರಿಯ ಬಾರಯ್ಯ                    ||೧||

ಕಂಕಣ ಕರದಲ್ಲಿ ಪೊನ್ನುಂಗುರ ಹೊಳೆಯುತ
ಕಿಂಕಿಣಿ ಕಿಣಿ ಕಿಣಿ ಕಿಣಿ ಎನುತ
ಪೊಂಗೊಳಲನೂದುತ್ತ ಬಾರಯ್ಯ ಬಾರೋ ಕೃಷ್ಣಯ್ಯ  ||೨||

ವಾಸ ಉಡುಪೀಲಿ ನೆಲೆಯಾದಿ ಕೇಶವನೇ
ದಾಸ ನಿನ್ನ ಪದ ದಾಸ ನಿನ್ನ ಪದ
ದಾಸ ನಿನ್ನ ಪದ ದಾಸ ಕರೆವೆನು ಬಾರಯ್ಯ             ||೩||

Labels: ಬಾರೋ ಕೃಷ್ಣಯ್ಯ ಕೃಷ್ಣಯ್ಯ ಬಾರೋ, Baro Krishnayya Krishnayya Baro, ಕನಕದಾಸರು, Kanakadasaru

ಬುಧವಾರ, ಸೆಪ್ಟೆಂಬರ್ 4, 2013

ಈತನೀಗ ವಾಸುದೇವನು ಲೋಕದೊಡೆಯ : Itaneega Vasudevanu

ಈತನೀಗ ವಾಸುದೇವನು ಲೋಕದೊಡೆಯ

ಕೀರ್ತನಕಾರರು : ಕನಕದಾಸರು
ರಾಗ : ಭೈರವಿ 

ತಾಳ : ರೂಪಕ 

ಈತನೀಗ ವಾಸುದೇವನು ಲೋಕದೊಡೆಯ
ಈತನೀಗ ವಾಸುದೇವನು                                            ।।ಪ॥ 

ಈತನೀಗ ವಾಸುದೇವ ಸಮಸ್ತ ಲೋಕದೊಡೆಯ
ದಾಸಗೊಲಿದು ತೇರನೇರಿ ತೇಜಿ ಪಿಡಿದು ನಡೆಸಿದಾತ       ।।ಅ.ಪ॥

ಧನುಜೆಯಾಳ್ದನಣ್ಣನಯ್ಯನ
ಪಿತನ ಮುoದೆ ಕೌರವೇಂದ್ರ

ನುಜೆಯಾಳಿದವನ ಶಿರವ ಕತ್ತರಿಸುತ ತನ್ನ  
ಅನುಜೆಯಾಳಿದವನ ಬೆಂಕಿ ಮುಟ್ಟದoತೆ ಕಾಯ್ದ ರುಕ್ಮ
ನುಜೆಯಾಳಿದವನ ಮೂರ್ತಿಯನ್ನು ನೋಡಿರೋ           ।।೧।।
 

ನರನ ಸುತನರಣ್ಯದಲಿ ಗಿರಿಯೊಳ್ನಿಂತು ತನ್ನ ರೋಷದಿ 
ಶರಗಳನ್ನು ತೀಡುತಿಪ್ಪನ ಯೋಚಿಸಿ 
ಭರದಲವನ ಕರೆದು ಕುರುಹು ತೋರಿ ಪತ್ರವನ್ನು ಹಾರಿಸಿದವನ 
ಶಿರವನ್ನು ಛೇದಿಸಿದ ದೇವ ಕಾಣಿರೋ                             ।।೨।।

ಸೃಷ್ಟಿಕರ್ತಗೆ ಮಗನಾದವನಿಗಿಷ್ಟ ಭೂಷಣ ಅಶನವಾದನ 
ಜ್ಯೇಷ್ಠಪುತ್ರಗೆ ವೈರಿ ತೊಡೆಯ ಛೇದಿಸೆಂದು ಬೋಧಿಸಿ
ಕಷ್ಟವನ್ನು ಕಳೆದು ಭಕ್ತರಿಷ್ಟವನು ಕಾದ ಉ
ತ್ಕೃಷ್ಟ ಮಹಿಮನಾದ ದೇವ ಕಾಣಿರೋ                            ।।೩।।

ಕ್ರೂರವಾದ ಫಣಿಪಬಾಣವನ್ನು ತರಣಿಜನೆಚ್ಚಾಗ 
ವೀರನರನತ್ತ ಬಪ್ಪುದನ್ನು ಈಕ್ಷಿಸಿ 
ಧಾರಿಣಿಯ ಪದದೊಳೌಕಿ ಚರಣಭಜಕ ನರನ ಕಾಯ್ದ
ಭಾರಕರ್ತನಾದ ದೇವನೀತ ಕಾಣಿರೋ                           ।।೪।।

ವ್ಯೋಮಕೇಶನಿಪ್ಪ ದೆಸೆಯ ಸರ್ವ ಜಗಕೆ ತೋರುತ 

ಸಾಮಜವನೇರಿ ಬರುವ ಶಕ್ತಿಯನೀಕ್ಷಿಸಿ
ಪ್ರೇಮದಿಂದ ಉರವನೊಡ್ಡಿ ಡಿoಗರಿಗನ ಕಾಯ್ದಾ ಸಾರ್ವ

ಭೌಮ ಬಾಡದಾದಿಕೇಶವನ್ನ ನೋಡಿರೋ                         ।।೫।।

Labels:  ಈತನೀಗ ವಾಸುದೇವನು ಲೋಕದೊಡೆಯ, Itaneega Vasudevanu, ಕನಕದಾಸರು, Kanakadasaru

ತಲ್ಲಣಿಸದಿರು ಕಂಡ್ಯ : Tallanisadiru Kandya

ತಲ್ಲಣಿಸದಿರು ಕಂಡ್ಯ ತಾಳು ಮನವೇ 

ಕೀರ್ತನಕಾರರು : ಕನಕದಾಸರು
ರಾಗ : ಕೇದಾರಗೌಳ
ತಾಳ : ಝಂಪೆ

ತಲ್ಲಣಿಸದಿರು ಕಂಡ್ಯ ತಾಳು ಮನವೇ
ಎಲ್ಲರನು ಸಲಹುವನು ಇದಕೆ ಸಂಶಯ ಬೇಡ          ।।ಪ॥ 

 
ಬೆಟ್ಟದ ತುದಿಯಲ್ಲಿ ಹುಟ್ಟಿದ ವೃಕ್ಷಕ್ಕೆ
ಕಟ್ಟೆಯನು
ಕಟ್ಟಿ ನೀರೆರೆದವರು ಯಾರು
ಹುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿರಲು
ಗಟ್ಯಾಗಿ
ಸಲಹುವನು ಇದಕೆ ಸಂಶಯವಿಲ್ಲ              ।।೧।।


ಅಡವಿಯೊಳಗೆ ಮೃಗ ಪಕ್ಷಿಗಳಿಗೆಲ್ಲ 
ಅಡಿಗಡಿಗೆ ಆಹಾರವಿತ್ತವರು ಯಾರೊ 
ಪಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿ 
ಬಿಡದೆ ರಕ್ಷಿಪನು ಇದಕೆ ಸಂಶಯವಿಲ್ಲ                      ।।೨।।

ನವಿಲಿಗೆ ಚಿತ್ರ ಬರೆದವರು ಯಾರು 
ಪವಳದ ಲತೆಗೆ ಕೆಂಪಿಟ್ಟವರು ಯಾರು 
ಸವಿಮಾತಿನರಗಿಳಿಗೆ ಹಸುರು ಬರೆದವರು ಯಾರು 
ಅವನೇ ಸಲಹುವನು ಇದಕೆ ಸಂಶಯವಿಲ್ಲ               ।।೩।।

ಕಲ್ಲಿನಲ್ಲಿ ಹುಟ್ಟಿ ಕೂಗುವ ಕಪ್ಪೆಗಳಿಗೆಲ್ಲ 
ಅಲ್ಲಲ್ಲಿಗಾಹಾರವನ್ನು ತಂದಿತ್ತವರು ಯಾರು
ಬಲ್ಲಿದನು ಕಾಗಿನೆಲೆಯಾದಿಕೇಶವರಾಯ
ಎಲ್ಲರನು
ಸಲಹುವನು ಇದಕೆ ಸಂಶಯವಿಲ್ಲ            ।।೪।।


Labels: ತಲ್ಲಣಿಸದಿರು ಕಂಡ್ಯ, Tallanisadiru Kandya, ಕನಕದಾಸರು, Kanakadasaru

ದಾಸದಾಸರ ಮನೆಯ : Dasadasara Maneya Dasiyara

ದಾಸದಾಸರ ಮನೆಯ ದಾಸಾನುದಾಸ 
ಕೀರ್ತನಕಾರರು : ಕನಕದಾಸರು
ರಾಗ : ಕಾಂಬೋದಿ

ತಾಳ : ಝಂಪೆ

ದಾಸದಾಸರ ಮನೆಯ ದಾಸಾನುದಾಸ ನಾನು
ಶ್ರೀಶ ಶ್ರೀರಂಗ ನಿಮ್ಮ ಮನೆಯ ದಾಸ                   ।।ಪ॥

 
ಶಂಕುದಾಸರ ಮನೆಯ ಮಂಕುದಾಸನು ನಾನಯ್ಯ
ಮಂಕುದಾಸನು ನಾನು ಮರುಳದಾಸ
ಸಂಕೀರ್ತನೆಯ ಮಾಡಿ ನೆನೆವ ಭಕ್ತರ ಮನೆಯ

ಬಿಂಕದ ಬಾಗಿಲ ಕಾಯ್ವ ಬಡದಾಸ ನಾನು              ।।೧।।

ಕಾಳಿದಾಸರ ಮನೆಯ ಕೀಳುದಾಸನು ನಾನಯ್ಯ 

ಆಳುದಾಸನು ನಾನು ಮೂಳದಾಸ
ಫಾಲಾಕ್ಷಸಖ ನಿನ್ನ ಭಜಿಪ ಭಕ್ತರ ಮನೆಯ 
ಆಳಿನಾಳಿನ ದಾಸನಡಿದಾಸ ನಾನಯ್ಯ                   ।।೨।।
 
ಹಲವು ದಾಸರ ಮನೆಯ ಹೊಲೆದಾಸ ನಾನಯ್ಯ
ಕುಲವಿಲ್ಲದ ದಾಸ ಕುರುಬದಾಸ
ಛಲದಿ ನಿನ್ನ ಭಜಿಸುವವರ ಮನೆಯ ಮಾದಿಗದಾಸ
ಸಲೆ ಮುಕ್ತಿ ಪಾಲಿಸೆನ್ನೊಡೆಯ ಆದಿಕೇಶವರಾಯ       ।।೩।।


Labels: ದಾಸದಾಸರ ಮನೆಯ, Dasadasara Maneya Dasanudasa, ಕನಕದಾಸರು, Kanakadasaru

ಕೇಶವನೊಲುಮೆಯು ಆಗುವ ತನಕ : Keshavanolumeyu Aguva Tanaka

ಕೇಶವನೊಲುಮೆಯು ಆಗುವ ತನಕ

ಕೀರ್ತನಕಾರರು : ಕನಕದಾಸರು
ರಾಗ : ಧನ್ಯಾಸಿ
ತಾಳ : ಅಟ್ಟ

ಕೇಶವನೊಲುಮೆಯು ಆಗುವ ತನಕ ಹರಿ
ದಾಸರೊಳಿರುತಿರು ಹೇ ಮನುಜ                   ||ಪ||

ಕ್ಲೇಶಪಾಶಂಗಳ ಹರಿದು ವಿಲಾಸದಿ
ಶ್ರೀಶನ ನುತಿಗಳ ಪೋಗಳುತ ಮನದೊಳು     ||ಅ.ಪ.||

ಮೋಸದಿ ಜೀವರ ಘಾಸಿ ಮಾಡಿದ ಪಾಪ
ಕಾಶಿಗೆ ಹೋದರೆ ಹೋದೀತೆ
ಶ್ರೀಶನ ಭಕುತರ ದೂಷಿಸಿದ ಫಲ
ಕಾಸು ಕೊಟ್ಟರೆ ಬಿಟ್ಟೀತೆ
ಭಾಷೆಯ ಕೊಟ್ಟು ನಿರಾಶೆಯ ಗೈದ ಫಲ
ಕ್ಲೇಶವ ಗೊಳಿಸದೆ ಇದ್ದೀತೆ
ಭೂಸುರಸರ್ವಸ್ವವ ಹ್ರಾಸ ಮಾಡಿದ ಫಲ
ಏಸೇಸು ಜನುಮಕು ಬಿಟ್ಟೀತೆ                        ||೧||

ಜೀವನ ವಶದೊಳು ನಾನಾ ದ್ರವ್ಯವಿರೆ
ದಾನ ಧರ್ಮಕೆ ಮನಸಾದೀತೆ
ಹೀನ ಮನುಜನಿಗೆ ಜ್ಞಾನವ ಭೋಧಿಸೆ
ಹೀನ ವಿಷಯ ಅಳಿದ್ಹೋದೀತೆ
ಮಾನಿನಿ ಮನಸು ನಿಧಾನವಿರದಿರೆ
ಮಾನಾಭಿಮಾನಗಳು ಉಳಿದೀತೇ
ಭಾನುಪ್ರಕಾಶನ ಭಜನೆಯ ಮಾಡದ
ಹೀನಗೆ ಮುಕುತಿಯು ದೊರಕೀತೆ                  ।।೨।।


ಸತ್ಯಧರ್ಮಗಳ ನಿತ್ಯವೂ ಬೋಧಿಸೆ 
ತೊತ್ತಿನ ಮನಸಿಗೆ ಸೊಗಸೀತೆ 
ತತ್ವದ ಅರ್ಥವ ವಿಚಿತ್ರದಿ ಪೇಳೆ 
ಕತ್ತೆಯ ಚಿತ್ತಕೆ ಹತ್ತೀತೆ 
ಪುತ್ಥಳಿ ಬೊಂಬೆಯ ಚಿತ್ರದಿ ಬಣ್ಣಿಸಿ 
ಮುತ್ತುಕೊಟ್ಟರೆ ಮಾತನಾಡೀತೆ 
ಕತ್ತುರಿ ತಿಲಕವನೊತ್ತಿ ಫಣೆಯೊಳಿಡೆ 
ಅರ್ತಿಯ ತೋರದೆ ಇದ್ದೀತೆ                         ।।೩।।

ನ್ಯಾಯವ ಬಿಟ್ಟನ್ಯಾಯವ ಪೇಳಲು
ನಾಯಿಗೆ ನರಕವು ತಪ್ಪೀತೆ 
ಬಾಯಿ ಕೊಬ್ಬಿನಲಿ ಬಯ್ಯುವ ಮನುಜಗೆ 
ಘಾಯವಾಗದೆ ಬಿಟ್ಟೀತೆ 
ತಾಯಿತಂದೆಗಳ ನೋಯಿಸಿದವನಿಗೆ 
ಮಾಯದ ಮರಣವು ತಪ್ಪೀತೆ 
ಮಾಯಾಜಾಲವ ಕಲಿತ ಮನುಜನಿಗೆ 
ಕಾಯ ಕಷ್ಟವ ಬಿಟ್ಟೀತೆ                               ।।೪।।

ಸಾಧು ಸಜ್ಜನರ ನೋಯಿಸಿದ ಮಾಯಾ 
ವಾದಿಗೆ ನರಕವು ತಪ್ಪೀತೆ 
ಬಾಧಿಸಿ ಪರರರ್ಥವ ದೋಚುವವಗೆ 
ವ್ಯಾಧಿಯು ಕಾಡದೆ ಬಿಟ್ಟೀತೆ 
ಭೇದವೆಣಿಸಿ ಬಲು ಕ್ಷುದ್ರವ ಕಲಿತರೆ 
ಮೋದವೆಂದಿಗು ಆದೀತೆ 
ಕದ್ದು ಒಡಲ ಪೊರೆವವನ ಮನೆಯೊಳು 
ಇದ್ದದ್ದು ಹೋಗದೆ ಉಳಿದೀತೆ                      ।।೫।।

ಅಂಗಜ ವಿಷಯಗಳನು ತೊರೆದಾತಗೆ 
ಅಂಗನೆಯರ ಸುಖ ಸೊಗಸೀತೆ 
ಸಂಗ ದುಃಖಗಳು ಹಿಂಗಿದ ಮನುಜಗೆ 
ಶೃಂಗಾರದ ಬಗೆ ರುಚಿಸೀತೆ 
ಇಂಗಿತವರಿತ ನಿಸ್ಸಂಗಿ ಶರೀರ ವ-
ಜ್ರಾಂಗಿಯಾಗದೆ ತಾನಿದ್ದೀತೆ 
ಮಂಗಳ ಮಹಿಮನ ಅಂಘ್ರಿಯ ಕಾಣದ 
ಮಂಗಗೆ ಮುಕುತಿಯು ದೊರಕೀತೆ               ।।೬।।

ಕರುಣಾಮೃತದಾಭರಣವ ಧರಿಸಿದ 
ಶರಣಗೆ ಸಿರಿಯು ತಪ್ಪೀತೆ
ಶರಣ ಪಾಶದುರವಣೆ ಹರಿದಾತಗೆ 

ಶರಣರ ಕರುಣವು ತಪ್ಪೀತೆ
ಅರಿತು ಶಾಸ್ತ್ರವನಾಚರಿಪ ಯೋಗ್ಯಗೆ 

ಗುರು ಉಪದೇಶವು ತಪ್ಪೀತೆ
ವರ ವೇಲಾಪುರದಾದಿಕೇಶವನ 

ಸ್ಮರಿಸುವವನಿಗೆ ಮೋಕ್ಷ ತಪ್ಪೀತೆ                ।।೭।।

Labels: ಕೇಶವನೊಲುಮೆಯು ಆಗುವ ತನಕ, Keshavanolumeyu Aguva Tanaka, ಕನಕದಾಸರು, Kanakadasaru

ಸತ್ಯವಂತರ ಸಂಗವಿರಲು : Satyavantara Sangaviralu

ಸತ್ಯವಂತರ ಸಂಗವಿರಲು ತೀರ್ಥವೇತಕೆ
ನಿತ್ಯ ಅನ್ನದಾನವಿರಲು ಭಯವು ಏತಕೆ                ।।ಪ॥


ಕೀರ್ತನಕಾರರು : ಕನಕದಾಸರು
ರಾಗ : ಪೂರ್ವಿ
ತಾಳ : ರೂಪಕ

ಗುರುಹಿರಿಯರ ಅರಿಯದವನ ಅರಿವದೇತಕೆ 
ಪರಹಿತಾರ್ಥಕಿಲ್ಲದವನ ಶರೀರವೇತಕೆ 
ಹರಿಯ ಪೂಜೆ ಮಾಡದವನ ಜನುಮವೇತಕೆ 
ಸೇರಿದವರ ಹೊರೆಯದಂಥ ದೊರೆಯು ಏತಕೆ       ।।೧।।

ಮಾತು ಕೇಳದೆ ಮಲೆತು ನಡೆವ ಮಕ್ಕಳೇತಕೆ
ಭೀತನಾಗಿ ಓಡಿಬರುವ ಬಂಟಾನೇತಕೆ 

ಪ್ರೀತಿ ಇಲ್ಲದೆ ಎಡೆಯನಲಿಕ್ಕಿದ ಊಟವೇತಕೆ
ಸೋತು ಹೆಣ್ಣಿಗೆ ಹೆದರಿ ನಡೆಯದ ಸುಗುಣನೇತಕೆ  ।।೨।।

ತಾನು ಉಣ್ಣದ ಪರರಿಗಿಕ್ಕದ ಧನವಿದ್ದೇತಕೆ
ಮಾನ ಹೀನನಾಗಿ ಬಾಳ್ವ ಮನುಜನೇತಕೆ
ನುಣ ಹೆಚ್ಚು ನೋಡುವಲ್ಲಿ ಇರುವುದೇತಕೆ 

ತನ್ನ ಬಳಗವೆರಸಿ ಉಣ್ಣದ ಭಾಗ್ಯವೇತಕೆ              ।।೩।।

ತಾನು ತನ್ನನರಿಯದಂಥ ಪ್ರೌಢನೇತಕೆ
ಸ್ನಾನ ಸಂಧ್ಯಾನವಿಲ್ಲದ ಶೀಲವೇತಕೆ 
ಜ್ಞಾನವಿಲ್ಲದೆ ನುರುಕಾಲ ಬದುಕಲೇತಕೆ 
ಧ್ಯಾನದೊಳಗೆ ಕೃಷ್ಣನಿಲ್ಲದ ತನುವಿದ್ದೇತಕೆ            ।।೪।।

ಸಂಜ್ಞೆಯರಿತು ನಡೆಯದಿರುವ ಸತಿ ಇದ್ದೇತಕೆ
ಭಿನ್ನವರಿತು ನಡೆಯದಂಥ ಸ್ನೇಹವೇತಕೆ 

ಮುನ್ನ ಕೊಟ್ಟು ಪಡೆಯಲಿಲ್ಲ ಬಯಸಲೇತಕೆ
ಚೆನ್ನ ಆದಿಕೇಶವನಿರಲು ಬೇರೆ ದೈವವೇತಕೆ          ।।೫।।


Labels: ಸತ್ಯವಂತರ ಸಂಗವಿರಲು, Satyavantara Sangaviralu, ಕನಕದಾಸರು, Kanakadasaru

ಶನಿವಾರ, ಆಗಸ್ಟ್ 31, 2013

ಲಾಲಿ ಪಾವನ ಚರಣ ಲಾಲಿ ಅಘಹರಣ : Lali Pavana Charana Lali

ಲಾಲಿ ಪಾವನ ಚರಣ ಲಾಲಿ ಅಘಹರಣ 

ಕೀರ್ತನಕಾರರು : ಕನಕದಾಸರು
ರಾಗ :  ಆನಂದಭೈರವಿ
ತಾಳ : ಆಟ


ಲಾಲಿ ಪಾವನ ಚರಣ ಲಾಲಿ ಅಘಹರಣ
ಲಾಲಿ ವೆಂಕಟರಮಣ ಲಲಿತ ಕಲ್ಯಾಣ                 ।।ಪ॥

ವನಜಾಕ್ಷ ಮಾಧವ ವಸುದೇವ ತನಯ
ಸನಕಾದಿ ಮುನಿವಂದ್ಯ ಸಾಧುಜನಪ್ರಿಯ
ಇನಕೋಟಿಶತತೇಜ ಮುನಿಕಲ್ಪ ಭೂಜ
ಕನಕಾದ್ರಿ ನಿಲಯ ವೆಂಕಟರಾಯ ಜಜೀಯ          ।।೧।।


ಜಗದೇಕನಾಯಕ ಜಲಜದಳನೇತ್ರ
ಖಗರಾಜ ವಾಹನ ಕಲ್ಯಾಣ ಚರಿತ
ಸಗರತನಯಾರ್ಚಿತ ಸನಕಾದಿ ವಿನುತ 

ರಘುವಂಶಕುತಿಲಕ ರಮಣೀಯಗಾತ್ರ                ।।೨।।
 

ನಂದಗೋಪ ಕುಮಾರ ನವನೀತ ಚೋರ
ಮಂದಾಕಿನೀ ಜನಕ ಮೋಹನಾಕಾರ
ಇಂದುಧರಸತಿ ವಿನುತ ವಿಶ್ವಸಂಚಾರ
ನಂದಗೋವಿಂದ ಮುಚುಕುಂದ ನುತಸಾರ          ।।೩।।
 

ಪಕ್ಷಿವಾಹನ ವಿಷ್ಣುಪಾಹಿ ಪರಮೇಶ 
ರಕ್ಷ ಕೌಸ್ತುಭಭೂಷ ವೈಕುಂಠವಾಸ 
ಅಕ್ಷಯ ಫಲದಾಟ ಅಖಿಳ ಲೋಕೇಶ 
ಲಕ್ಷಣ ಪರಿಪೂರ್ಣ ಲಕ್ಷ್ಮಿಪ್ರಾಣೇಶ                      ।।೪।।

ನರಮೃಗಾಕಾರಿ ಹಿರಣ್ಯಕ ವೈರಿ
ಕರಿರಾಜ ರಕ್ಷಕ ಕಾರುಣ್ಯಮೂರ್ತಿ
ಹರಿ ಆದಿಕೇಶವ ಗುರು ಅಪ್ರಮೇಯ
ಶ್ರೀಧರ ಶೇಷಗಿರಿ ವರ ತಿಮ್ಮರಾಯ                  ।।೫।।


Labels: ಲಾಲಿ ಪಾವನ ಚರಣ ಲಾಲಿ ಅಘಹರಣ, Lali Pavana Charana Lali, ಕನಕದಾಸರು, Kanakadasaru

ಏಳು ನಾರಾಯಣ ಏಳು ಲಕ್ಷ್ಮೀರಮಣ : Elu Narayana Elu Lakshmiramana

ಏಳು ನಾರಾಯಣ ಏಳು ಲಕ್ಷ್ಮೀರಮಣ

ಕೀರ್ತನಕಾರರು : ಕನಕದಾಸರು
ರಾಗ :  ಬೌಳಿ
ತಾಳ : ಖಂಡಛಾಪು


ಏಳು ನಾರಾಯಣ ಏಳು ಲಕ್ಷ್ಮೀರಮಣ                 ।।ಪ॥

ಏಳು ಶ್ರೀಗಿರಿ ಒಡೆಯ ಶ್ರೀವೆಂಕಟೇಶ
ಏಳಯ್ಯ ಬೆಳಗಾಯಿತು                                     ।।ಅ.ಪ॥

ಕಾಸಿದ್ದ ಹಾಲನ್ನು ಕಾವಡಿಯೊಳು ಹೆಪ್ಪಿಟ್ಟು
ಲೇಸಾಗಿ ಕಡೆದು ಹೊಸಬೆಣ್ಣೆ ಕೊಡುವೆ
ಶೇಷಶಯನನೆ ಏಳು ಸಮುದ್ರ ಮಥನವ ಮಾಡು
ದೇಶ ಕೆಂಪಾಯಿತು ಏಳಯ್ಯ ಹರಿಯೇ                 ।।೧।।

ಅರಳು ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳ
ಸುರರು ತಂದಿದ್ದಾರೆ ಬಲು ಭಕುತಿಯಿಂದ
ಅರವಿಂದನಾಭ ಸಿರಿ ವಿಧಿಭವಾದಿಗಳೊಡೆಯ
ಹಿರಿದಾಗಿ ಕೋಳಿ ಕೂಗಿತೇಳಯ್ಯ ಹರಿಯೇ            ।।೨।।

ದಾಸರೆಲ್ಲರು ಬಂದು ಧೂಳಿ ದರ್ಶನ ಗೊಂಡು
ಲೇಸಾಗಿ ತಾಳ ದಂಡಿಗೆಯ ಪಿಡಿದು
ಶ್ರೀಶನೆಲೆಯಾದಿ ಕೇಶವ ನಿಮ್ಮ ಪಾದವನು
ಲೇಸಾಗಿ ಸ್ಮರಿಸಿ ಪೊಗಳುವರು ಹರಿಯೇ              ।।೩।।


Labels: ಏಳು ನಾರಾಯಣ ಏಳು ಲಕ್ಷ್ಮೀರಮಣ, Elu Narayana Elu Lakshmiramana, ಕನಕದಾಸರು, Kanakadasaru

ಎಲ್ಲಿರುವನೋ ರಂಗ : Elliravano Ranga

ಎಲ್ಲಿರುವನೋ ರಂಗ 

ಕೀರ್ತನಕಾರರು : ಕನಕದಾಸರು 
ರಾಗ :  ಮುಖಾರಿ
ತಾಳ : ಝಂಪೆ  

ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ                 ।।ಪ॥

ಎಲ್ಲಿ ಭಕ್ತರು ಕರೆಯೆ ಅಲ್ಲಿ ಬಂದೊದಗುವನು                 ।।ಅ.ಪ॥ 

 
ತರಳ ಪ್ರಹ್ಲಾದ ಹರಿ ವಿಶ್ವಮಯನೆಂದು
ಭರದೊದೆಯಲವನಪಿತ ಕೋಪದಿಂದ
ಸ್ಥಿರವಾದೊಳಿ ಕಂಭದಲಿ ತೋರು ತೋರೆನಲು
ಭರದಿಂದ ಬರಲದಕೆ ವೈಕುಂಠ ನೆರೆಮನೆಯೇ               ।।೧।।

 

ಕುರುಪತಿಯು ದ್ರೌಪದಿಯ ಸೀರೆಯನು ಸೆಳೆಯುತಿರೆ
ತರುಣಿ ಹಾ ಕೃಷ್ಣ ಎಂದರೆ ಕೇಳ್ದು
ಭರದಿಂದ ಅಕ್ಷಯಾಂಬರವೀಯೆ ಹಸ್ತಿನಾ
ಪುರಿಗೆ ದ್ವಾರಾವತಿಯು ಕೂಗಳತೆಯೇ                      ।।೨।।


ಅಣುಹೊತ್ತಿನೊಳೆಲ್ಲ ಪರಿಪೂರ್ಣ ವಿಶ್ವಮಯ
ಗಣನೆಯಿಲ್ಲದ ಮಹಾಮಹಿಮನೆನಿಪ
ಘನ ಕೃಪಾನಿಧಿ ಕಾಗಿನೆಲೆಯಾದಿಕೇಶವನು
ನೆನೆವರ ಮನದೊಳಿಹನೆಂಬ ಬಿರುದುಂಟಾಗಿ                 ।।೩।।


Labels: ಎಲ್ಲಿರುವನೋ ರಂಗ, Elliravano Ranga, ಕನಕದಾಸರು, Kanakadasaru

ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ : Nee Mayeyolago Ninnolu Mayeyo

ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ

ಕೀರ್ತನಕಾರರು : ಕನಕದಾಸರು
ರಾಗ :  ಕಾಂಬೋದಿ  
ತಾಳ : ಝಂಪೆ   


ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ                  ।।ಪ॥ 

ನೀ ದೇಹದೊಳಗೊ ನಿನ್ನೊಳು ದೇಹವೊ                          ।।ಅ.ಪ॥ 


ಬಯಲುಲೊಳಗೆ ಆಲಯವೊ ಆಲಯದೊಳಗೆ ಬಯಲೊ 
ಬಯಲು ಆಲಯವೆರಡು ನಯನದೊಳಗೊ
ನಯನ ಬುದ್ಧಿಯ ಒಳಗೊ ಬುದ್ಧಿ ನಯನದೊಳಗೊ
ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ                     ।।೧।।


ಸವಿಯು ಸಕ್ಕರೆಯೊಳಗೊ ಸಕ್ಕರೆಯು ಸವಿಯೊಳಗೊ
ಸವಿಯು ಸಕ್ಕರೆಗಳೆರಡು ಜಿಹ್ವೆಯೊಳಗೊ
ಜಿಹ್ವೆ ಮನಸಿನ ಒಳಗೊ ಮನಸು ಜಿಹ್ವೆಯ ಒಳಗೊ
ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ                     ।।೨।।


ಕುಸುಮದಲಿ ಗಂಧವೊ ಗಂಧದಲಿ ಕುಸುಮವೊ
ಕುಸುಮಗಂಧಗಳೆರಡು ಆಘ್ರಾಣದೊಳಗೊ
ಅಸಮಭವ ಕಾಗಿನೆಲೆಯಾದಿ ಕೇಶವರಾಯ
ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೊ ಹರಿಯೆ                   ।।೩।।  


Labels: ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ, Nee Mayeyolago Ninnolu Mayeyo, ಕನಕದಾಸರು, Kanakadasaru

ಆವ ಸಿರಿಯಲಿ ನೀನು ಎನ್ನ ಮರೆತೆ : Ava Siriyali Ninu Enna Marete

ಆವ ಸಿರಿಯಲಿ ನೀನು ಎನ್ನ ಮರೆತೆ 

ಕೀರ್ತನಕಾರರು : ಕನಕದಾಸರು 
ರಾಗ :  ಕಾಣದ  
ತಾಳ : ಆಟ 

ಆವ ಸಿರಿಯಲಿ ನೀನು ಎನ್ನ ಮರೆತೆ ?
ದೇವ ಜಾನಕಿರಮಣ ಪೇಳು ರಘುಪತಿಯೆ ?                      ।।ಪ॥ 

ಸುರರ ಸೆರೆಯನು ಬಿಡಿಸಿ ಬಂದನೆಂಬಾ ಸಿರಿಯೆ 
ಕರಿ ಮೊರೆಯ ಲಾಲಿಸಿದೆನೆಂಬ ಸಿರಿಯೆ ?
ಶರಧಿ ಸೇತುವೆಯ ಕಟ್ಟಿದೆನೆನ್ನುವಾ ಸಿರಿಯೆ 
ಸ್ಥಿರವಾಗಿ ಹೇಳೆನಗೆ ಹೇಳು ರಘುಪತಿಯೆ                           ।।೧।।

ಕಡಲೊಳಗೆ ಮನೆ ಮಾಡಿ ಮಲಗಿದೆನೆಂಬಾ ಸಿರಿಯೆ 
ಮೃಡ ನಿನ್ನ ಸಖನಾದನೆಂಬ ಸಿರಿಯೆ ?
ಬಿಡದೆ ದ್ರೌಪದಿ ಮಾನ ಕಾಯ್ದನೆಂಬ ಸಿರಿಯೆ 
ದೃಢವಾಗಿ ಹೇಳೆನಗೆ ದೇವಕೀಸುತನೆ                                ।।೨।।

ಭೂಮಿಯನು ಮೂರಡಿಯ ಮಾಡಿದೆನೆಂಬ ಸಿರಿಯೆ 
ಕಾಮ ನಿನ್ನ ಸುತನಾದನೆಂಬ ಸಿರಿಯೆ 
ಆ ಮಹಾಲಕುಮಿ ನಿನ್ನ ಸತಿಯಾದಳೆಂಬ ಸಿರಿಯೆ 
ಪ್ರೇಮದಲಿ ಹೇಳೆನಗೆ ಸ್ವಾಮಿ ಅಚ್ಯುತನೆ                            ।।೩।।

ಮನುಜರೆಲ್ಲರು ನಿನ್ನ ಸ್ತುತಿಸುವರೆಂಬ ಸಿರಿಯೆ 
ಹನುಮ ನಿನ್ನ ಬಂಟನಾದೆನೆಂಬ ಸಿರಿಯೆ 
ಬಿನುಗುದೈವಗಳು ನಿನಗೆಣೆಯಿಲ್ಲವೆಂಬ ಸಿರಿಯೆ 
ಅನುಮಾನ ಮಾಡದೆ ಪೇಳೋ ನರಹರಿಯೆ                        ।।೪।।

ಇಂತು ಸಿರಿಯಲಿ ನೀನು ಎನ್ನ ಮರೆತರೆ ಸ್ವಾಮಿ 
ಪಂಥವೇ ನಿನಗಿದು ಆವಾ ನಡತೆ 
ಕಂತುಪಿತ ಕಾಗಿನೆಲೆಯಾದಿಕೇಶವ ರಂಗ 
ಚಿಂತೆಯನು ಬಿಡಿಸಿ ಸಂತೋಷಪಡಿಸೊ                            ।।೫।।

Labels: ಆವ ಸಿರಿಯಲಿ ನೀನು ಎನ್ನ ಮರೆತೆ, Ava Siriyali Ninu Enna Marete, ಕನಕದಾಸರು, Kanakadasaru

ಮಂಗಳವಾರ, ಆಗಸ್ಟ್ 27, 2013

ಆರು ಬಲ್ಲರು ಹರಿ ಹರರ ಮಹಿಮೆಯನು : Aru Ballaru Hari Harara Mahimeyanu

ಆರು ಬಲ್ಲರು ಹರಿ ಹರರ ಮಹಿಮೆಯನು

ಕೀರ್ತನಕಾರರು : ಕನಕದಾಸರು
ರಾಗ :  ಕಾಂಬೋದಿ
ತಾಳ : ಝಂಪೆ


ಆರು ಬಲ್ಲರು ಹರಿ ಹರರ ಮಹಿಮೆಯನು 

ವಾರಿಜೋದ್ಭವ ಸುರೇಂದ್ರಾದಿಗಳಿಗಳವಲ್ಲ                    ।।ಪ॥ 

ಪೌರತ್ರಯವ ಗೆಲುವ ಸಮಯದಲಿ ತಪವಮಾಡಿ
ನಾರಾಯಣಾಸ್ತ್ರವನು ಪಡೆದನೀತ 
ಗೌರಿಮನೋಹರನ ಘನತರಾರ್ಚನೆಗೈದು 
ಚಾರುತರ ಚಕ್ರವನು ಪಡೆದನಾ ಶೌರಿ                          ।।೧।।

ಬಲಿ ಚಕ್ರವರ್ತಿ ಭಕ್ತಿಗೆ ಮೆಚ್ಚಿ ಅವನ ಬಾ 
ಗಿಲಕಾಯ್ದನಚ್ಯುತನು ಅನುಗಾಲದಿ 
ಬಲಭುಜನು ಬಾಣಾಸುರನ ಗೃಹದ್ವಾರವನು
ಬಳಸಿ ಕಾಯ್ದನು ಹರನು ವರವ ತಾನಿತ್ತು                      ।।೨।।

ಭೋಗಿಶಯನನು ಆಗಿ ಭೋಗಿಭೂಷಣನಾಗಿ 
ವಾಗೀಶನಾಗಿ ಸೃಷ್ಟಿ ಸ್ಥಿತಿ ಲಯಗಳಿಂಗೆ 
ಆಗು ಕಾರಣ ಕಾರ್ಯ ಕರ್ಮಾದಿ ರೂಪಕ್ಕೆ 
ಕಾಗಿನೆಲೆಯಾದಿಕೇಶವನ ಮಹಿಮೆಯನು                      ।।೩।।

Labels: ಆರು ಬಲ್ಲರು ಹರಿ ಹರರ ಮಹಿಮೆಯನು, Aru Ballaru Hari Harara Mahimeyanu, ಕನಕದಾಸರು, Kanakadasaru

ಶುಕ್ರವಾರ, ಆಗಸ್ಟ್ 23, 2013

ಬಾಯಿ ನಾರಿದ ಮೇಲೆ ಏಕಾಂತವೆ : Bayi Narida Mele Ekantave

ಬಾಯಿ ನಾರಿದ ಮೇಲೆ ಏಕಾಂತವೆ 

ಕೀರ್ತನಕಾರರು : ಕನಕದಾಸರು
ರಾಗ :  ಕಾಂಬೋದಿ
ತಾಳ : ಝಂಪೆ


ಬಾಯಿ ನಾರಿದ ಮೇಲೆ ಏಕಾಂತವೆ 
ತಾಯಿ ತೀರಿದ ಮೇಲೆ ತವರಾಸೆಯೆ                         ।।ಪ॥ 

ಕಣ್ಣು ಕೆಟ್ಟ ಮೇಲೆ ಕಡುರೂಪ ಚೆಲ್ವಿಕೆಯೆ 
ಬಣ್ಣಗುಂದಿದ ಮೇಲೆ ಬಹುಮಾನವೆ 
ಪುಣ್ಯತೀರಿದ ಮೇಲೆ ಪರಲೋಕ ಸಾಧನವೆ 
ಸುಣ್ಣವಿಲ್ಲದ ವೀಳ್ಯವದು ಸ್ವಾದುಮಯವೆ                    ।।೧।।

ಕಿಲುಬಿನಾ ಬಟ್ಟಲೊಳು ಹುಳಿ ಕಲಸಿ ಉಣ ಬಹುದೆ 
ಚಳಿಯುರಿಗೆ ಚಂದನದ ಲೇಪ ಹಿತವೆ 
ಮೊಲೆಬಿದ್ದ ಹೆಣ್ಣಿನೊಳು ಮೋಹಕ್ಕೆ ಸೊಗಸಹುದೆ 
ಬೆಲೆಬಿದ್ದ ಸರಕಿನೊಳು ಲಾಭವುಂಟೆ                          ।।೨।।

ಪಥ್ಯ ಸೇರದ ಮೇಲೆ ನಿತ್ಯಸುಖವೆನಬಹುದೆ 
ಸತ್ತ್ವ ತಗ್ಗಿದ ಮೇಲೆ ಸಾಮರ್ಥ್ಯವೆ 
ಪೃಥ್ವಿಯೊಳು ಕಾಗಿನೆಲೆಯಾದಿಕೇಶವ ನಿನ್ನ 
ಭಕ್ತಿಯಿಲ್ಲದ ನರಗೆ ಮುಕ್ತಿಯುಂಟೆ?                            ।।೩।।

Labels: ಬಾಯಿ ನಾರಿದ ಮೇಲೆ ಏಕಾಂತವೆ, Bayi Narida Mele Ekantave, ಕನಕದಾಸರು, Kanakadasaru

ಸೋಮವಾರ, ಆಗಸ್ಟ್ 19, 2013

ಕೇಳಿರೈ ಶಿವಶರಣರು : Kelirai Shivasharanaru

ಕೇಳಿರೈ ಶಿವಶರಣರು

ಕೀರ್ತನಕಾರರು : ಕನಕದಾಸರು
ರಾಗ :  ಮುಖಾರಿ
ತಾಳ : ಅಟ್ಟ 

ಕೇಳಿರೈ ಶಿವಶರಣರು ಹೇಳಲಂಜಿಕೆ ಆವುದು                ।।ಪ।।

ಭಾಳನೇತ್ರನ ಭಕ್ತರಿಂತು ನೋಡಿಕೊಳ್ಳಿರೈ                  ।।ಅ.ಪ॥

ಮೂರುಲಿಂಗ ತನ್ನೊಳು ಮುಖ್ಯವಾಗಿರುವಾಗ
ಬೇರೊಂದು ಲಿಂಗ ಬೆಲೆ ಮಾಡಿ ತಂದು
ತೋರುವಂಗೈಲಿಟ್ಟು ತೋಯಪುಷ್ಪನ ನೀಡಿ
ಯಾರ ಮನಕೊಪ್ಪಿಸುವರೀ ಶೀಲವಂತರು                   ।।೧।।

ಲಿಂಗವೊಂದು ತನ್ನೊಳು ಲೀನವಾಗಿರುವಾಗ
ಅಂಗಭವಿಗಳು ಕೂಡಿ ಆಡಿಕೊಂಬರು
ಅಂಗದನುಭಾವದರ್ಥವನರಿಯದ ಇಂತಹ
ಭಂಗಿ ಹುಚ್ಚರೆಲ್ಲ ಶಿವನ ಭಕ್ತರಹರೆ                              ।।೨।।

ನಾಗಲಿಂಗ ತನ್ನೊಳು ನಾಟ್ಯವಾಡುತಿರಲು
ಆಗಮಿಸಿದ ಲಿಂಗವ ಬೆದಕಲೇತಕ್ಕೆ
ಕಾಗಿನೆಲೆಯಾದಿಕೇಶವನೆ ನಾಗಶಯನ
ನಾಗಿರಲು ಬೇರೊಂದನರಸಲೇತಕೆ                          ।।೩।।

Labels: ಕೇಳಿರೈ ಶಿವಶರಣರು, Kelirai Shivasharanaru, ಕನಕದಾಸರು, Kanakadasaru

ಅರಿತು ನಡೆಯಲು ಬೇಕು : Aritu Nadeyaklu Beku

ಅರಿತು ನಡೆಯಲು ಬೇಕು 

ಕೀರ್ತನಕಾರರು : ಕನಕದಾಸರು  
ರಾಗ :  ಮುಖಾರಿ  
ತಾಳ : ಝಂಪೆ

ಅರಿತು ನಡೆಯಲು ಬೇಕು ನರಕಾಯವೆತ್ತಿದ ಮೇಲೆ 
ಅರಿಯದಿದ್ದರೆ ನರಕವೇ ಪ್ರಾಪ್ತಿ                                              ।।ಪ।।

ದುರ್ಜನರ ಮನೆಯ ಪಾಯಸಾನ್ನಕಿಂತ 
ಸಜ್ಜನರ ಮನೆಯ ರಬ್ಬಳಿಗೆ ಲೇಸು 
ಹೆಜ್ಜೆಗೆ ಸಾವಿರಾರು ಹೊನ್ನನಿತ್ತರೂ ಬೇಡ ಬಲು 
ದುರ್ಜನರ ಸಂಗ ಬಲು ಭಂಗ ಹರಿಯೆ                                     ।।೧।।

ಭಕ್ತಿಹೀನರ ಮನೆಯ ಪಟ್ಟ ಸುಪ್ಪತಿಗೆಗಿಂತ 
ಭಕ್ತರ ಮನೆಯ ಕಡೆಬಾಗಿಲ ಕಾಯುವುದು ಲೇಸು 
ಮುಕ್ತಿ ಮಾರ್ಗವ ತೋರ್ಪ ಮುರಹರಣ ದಾಸರನು 
ಸಕ್ತಿಯಿಂ ಸೇವಿಸುವುದು ಬಲು ಸೌಖ್ಯ ಹರಿಯೆ                            ।।೨।।

ಆಶೆಕಾರರ ಮನೆಯ ವಿಳಾಸ ಸುಖಕಿಂತ 
ಆಶಾರಹಿತರ ಮನೆಯ ನಿರ್ಗತಿಕ ದೈನ್ಯ ಲೇಸು 
ಭೂಸುರ ಪ್ರಿಯ ಕಾಗಿನೆಲೆಯಾದಿಕೇಶವನ 
ಮೀಸಲಿನ ಪಾದಭಜನೆ ಕಡುಲೇಸು ಮನವೆ                              ।।೩।।

Labels: ಅರಿತು ನಡೆಯಲು ಬೇಕು , Aritu Nadeyaklu Beku, ಕನಕದಾಸರು, Kanakadasaru