ಗುರುವಾರ, ಏಪ್ರಿಲ್ 25, 2013

ಕೇಶವ ಮಾಧವ ಗೋವಿಂದ : Keshava Madhava Govinda

ಕೇಶವ ಮಾಧವ ಗೋವಿಂದ

ಕೀರ್ತನಕಾರರು : ಪುರಂದರದಾಸರು
ರಾಗ : ಸೌರಾಷ್ಟ್ರ
ತಾಳ : ಆಟ


ಕೇಶವ ಮಾಧವ ಗೋವಿಂದ ವಿಠಲೆಂಬ
ದಾಸಯ್ಯ ಬಂದ ಕಾಣಿರೆ
ದೋಷರಹಿತ ನರವೇಷ ಧರಿಸಿದ
ದಾಸಯ್ಯ ಬಂದ ಕಾಣಿರೇ      ||ಪ||


ಖಳನು ವೇದವನೊಯ್ಯೆ ಪೊಳೆವಕಾಯನಾದ
ಘಳಿಲಾನೆ ಕೂರ್ಮ ತಾನಾಗಿ ಗಿರಿಯ ಪೊತ್ತ
ಇಳೆಯ ಕದ್ದಸುರನ ಕೋರೆದಾಡೀಲಿ ಕೊಂದ
ಛಲದಿ ಕಂಬದಿ ಬಂದು ಅಸುರನ ಕೊಂದ   ||೧||


ಲಲನೆಯನೊಯ್ಯೆ ತಾ ತಲೆಹತ್ತರನ ಕೊಂದ
ನೆಲಕೊತ್ತಿ ಕಂಸನ ಬಲವ ಸಂಹರಿಸಿದ
ಪುಂಡತನದಿ ಪೋಗಿ ಪುರವಾನುರಪಿ ಬಂದ
ಭಂಡರ ಸದೆಯಲು ತುರುಗವನೇರಿದ    ||೨||


ಹಿಂಡು ವೇದಗಳೆಲ್ಲ ಅರಸಿ ನೋಡಲು ಸಿಗದೆ
ದಾಸಯ್ಯ ಬಂದ ಕಾಣಿರೇ
ಪಾಂಡುರಂಗ ನಮ್ಮ ಪುರಂದರವಿಠಲ
ದಾಸಯ್ಯ ಬಂದ ಕಾಣಿರೇ      ||೩||


Labels: ಕೇಶವ ಮಾಧವ ಗೋವಿಂದ, Keshava Madhava Govinda, ಪುರಂದರದಾಸರು, Purandaradasaru

ಅಲ್ಲಿದೆ ನಮ್ಮನೆ : Allide Nammane

ಅಲ್ಲಿದೆ ನಮ್ಮನೆ

ಕೀರ್ತನಕಾರರು : ಪುರಂದರದಾಸರು
ರಾಗ : ದುರ್ಗಾ
ತಾಳ : ಆದಿ


ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ,
ಅಲ್ಲಿದೆ ನಮ್ಮ ಮನೆ       ||ಪ||


ಕದಬಾಗಿಲಿರಿಸಿಹ ಕಳ್ಳ ಮನೆ ಇದು
ಮುದದಿಂದ ಓಲ್ಯಾಡೊ ಸುಳ್ಳು ಮನೆ
ವೈಕುಂಠವೆಂಬುದೆ ನಮ್ಮ ಸ್ವಂತ ಮನೆ
ಇದ್ದು ಇಲ್ಲದೆ ಹೋಗೋ ಕನಸಿನ ಮನೆ ಇದು  ||೧||


ಮಾಳಿಗೆಮನೆಯೆಂದು ನೆಚ್ಚಿ ಕೆಡಲು ಬೇಡ
ಕೇಳಯ್ಯ ಹರಿಕಥೆ ಶ್ರವಣಂಗಳ
ನಾಳೆ ಯಮದೂತರು ಬಂದೆಳೆದೊಯ್ಯುವಾಗ
ಮಾಳಿಗೆ ಮನೆ ಸಂಗಡ ಬಾರದಯ್ಯ    ||೨||


ಮಡದಿಮಕ್ಕಳು ಎಂಬೋ ಹಂಬಲ ನಿನಗ್ಯಾಕೋ
ಕಡುಗೊಬ್ಬುತನದಲಿ ಕೊಬ್ಬಿನಡೆಯದಿರೋ
ಒಡೆಯ ಶ್ರೀಪುರಂದರವಿಠಲರಾಯನ
ಧೃಡಭಕ್ತಿಯಿಂದಲಿ ಭಜಿಸಿಕೋ ಮನುಜ   ||೩||


Labels: ಅಲ್ಲಿದೆ ನಮ್ಮನೆ, Allide Nammane, ಪುರಂದರದಾಸರು, Purandaradasaru

ಬುಧವಾರ, ಏಪ್ರಿಲ್ 24, 2013

ಒಲ್ಲನೋ ಹರಿ ಕೊಳ್ಳನೋ : Ollano Hari Kollano

ಒಲ್ಲನೋ ಹರಿ ಕೊಳ್ಳನೋ

ಕೀರ್ತನಕಾರರು : ಪುರಂದರದಾಸರು
ರಾಗ : ಕಲ್ಯಾಣಿ
ತಾಳ : ಛಾಪು


ಒಲ್ಲನೋ ಹರಿ ಕೊಳ್ಳನೋ
ಎಲ್ಲ ಸಾಧನವಿದ್ದು ತುಳಸಿ ಇಲ್ಲದ ಪೂಜೆ   ||ಪ||


ಸಿಂಧು ಶತಕೋಟಿ ಗಂಗೋದಕವಿದ್ದು
ಗಂಧ ಸುಪರಿಮಳ ವಸ್ತ್ರವಿದ್ದು
ಚಂದುಳ್ಳ ಆಭರಣ ಧೂಪ ದೀಪಗಳಿದ್ದು
ಬೃಂದಾವನ ಶ್ರೀ ತುಳಸಿ ಇಲ್ಲದ ಪೂಜೆ   ||೧||


ದಧಿಕ್ಷೀರ ಮೊದಲಾದ ಅಭಿಷೇಕಗಳಿದ್ದು
ಮಧುಪರ್ಕ ಪಂಚೋಪಚಾರವಿದ್ದು
ಮುದದಿಂದ ಮುದ್ದು ಶ್ರೀಕೃಷ್ಣನ ಪೂಜೆಗೆ
ಸದಮಲಳಾದ ಶ್ರೀತುಳಸಿ ಇಲ್ಲದ ಪೂಜೆ   ||೨||


ಮಂತ್ರ ಮಹಾಮಂತ್ರ ಪುರುಷಸೂಕ್ತಗಳಿದ್ದು
ತಂತು ತಪ್ಪದೆ ತಂತ್ರಸಾರವಿದ್ದು
ಸಂತತ ಸುಖ ಸಂಪೂರ್ಣನ ಪೂಜೆಗೆ
ಅತ್ಯಂತ ಪ್ರಿಯಳಾದ ತುಳಸಿ ಇಲ್ಲದ ಪೂಜೆ  ||೩||


ಕಮಲ ಮಲ್ಲಿಗೆ ಜಾಜಿ ಸಂಪಿಗೆ ಕೇದಿಗೆ
ವಿಮಲ ಘಂಟೆ ಪಂಚವಾದ್ಯವಿದ್ದು
ಅಮಲ ಪಂಚಭಕ್ಷ್ಯ ಪರಮಾನ್ನಗಳಿದ್ದು
ಕಮಲನಾಭನು ತನ್ನ ತುಳಸಿ ಇಲ್ಲದ ಪೂಜೆ  ||೪||


ಪೂಜೆಯ ಮಾಡದೆ ತುಳಸಿ ಮಂಜರಿಯಿಂದ
ಮೂರ್ಜಗದೊಡೆಯ ಮುರಾರಿಯನು
ರಾಜಾಧಿರಾಜನೆಂಬ ಮಂತ್ರಪುಷ್ಪಗಳಿಂದ
ಪೂಜಿಸಿದರು ಒಲ್ಲ ಪುರಂದರವಿಠಲ    ||೫||


Labels: ಒಲ್ಲನೋ ಹರಿ ಕೊಳ್ಳನೋ, Ollano Hari Kollano, ಪುರಂದರದಾಸರು, Purandaradasaru

ಸೋಮವಾರ, ಏಪ್ರಿಲ್ 22, 2013

ಬಾರೋ ಬೇಗ ನೀರಜಾಕ್ಷ : Baro Bega Nirajaksha


ಬಾರೋ ಬೇಗ ನೀರಜಾಕ್ಷ

ಕೀರ್ತನಕಾರರು : ವ್ಯಾಸರಾಯರು
ರಾಗ : ಫರಜು
ತಾಳ : ರೂಪಕ

ಬಾರೋ ಬೇಗ ನೀರಜಾಕ್ಷ
ದೂರು ಇದು ಏತಕೋ ||ಪ||

ಮೊಸರು ಮಾರುವ ಗೊಲ್ಲತಿಯರ
ಅಸವಳಿಸಿ ನೀ ಕೈಯಪಿಡಿದು
ವಶವಾಗು ಎಂದು ಪೇಳಿ
ನಸುನಗುತಲಿದ್ದೆಯಂತೆ ||೧||

ಕುಸುಮಶರನ ಪೆತ್ತವನೆ
ಬಸವನಾದೆ ಊರೊಳಗೆ
ಶಶಿಮುಖಿಯರ ದೂರು ಬಹು
ಪಸರಿಸಿತು ನಾ ಪೇಳಲಾರೆ ||೨||

ಕಂದ ಕೇಳು ಇಂದುಮುಖಿಯರ
ಹೊಂದಿ ನೀನಾಡಲ್ಯಾಕೆ
ಮಂದಿರದೊಳಾಡಿ ಸಲಹೊ
ತಂದೆ ಉಡುಪಿ ಸಿರಿಕೃಷ್ಣ ||೩||

Labels: ಬಾರೋ ಬೇಗ ನೀರಜಾಕ್ಷ, ವ್ಯಾಸರಾಯರು, Vyasarayaru, Baro Bega Nirajaksha, ವ್ಯಾಸರಾಯರು, Vyasarayaru

ಇದನಾದರು ಕೊಡದಿದ್ದರೆ : Idanadaru Kodadiddare


ಇದನಾದರು ಕೊಡದಿದ್ದರೆ

ಕೀರ್ತನಕಾರರು : ಶ್ರೀಪಾದರಾಜರು
ರಾಗ : ಕೇದಾರಗೌಳ
ತಾಳ : ಆದಿ

ಇದನಾದರು ಕೊಡದಿದ್ದರೆ ನಿನ್ನ
ಪದಕಮಲವ ನಂಬಿ ಭಜಿಸುವದೆಂತೊ ||ಪ||

ಗ್ರಾಸವಾಸಗಳಿಗೆ ಇಲ್ಲವೆಂದು ನಿನ್ನ
ಬೇಸರಿಸಿ ಬೇಡಬಂದುದಿಲ್ಲ
ವಾಸುದೇವನೆ ನಿನ್ನ ದಾಸರ ದಾಸರ
ದಾಸರ ದಾಸ್ಯವ ಕೊಡು ಸಾಕೆಂದರೆ ||೧||

ಸತಿಸುತರುಗಳ ಸಹಿತನಾಗಿ ನಾ
ಹಿತದಿಂದ ಇರಬೇಕೆಂಬೊದಿಲ್ಲ
ಇತರ ವಿಷಯಂಗಳಿಗೆರಗಿಸದೆ ಮನಕೆ ನಿನ್ನ
ಕಥಾಮೃತವನೆ ಕೊಡು ಸಾಕೆಂದರೆ ||೨||

ಸಾಲವಾಯಿತೆಂದು ಸಂಬಳ ಎನಗೆ
ಸಾಲದೆಂದು ಬೇಡಬಂದುದಿಲ್ಲ
ನಾಲಗೆಯಲಿ ನಿನ್ನ ನಾಮದುಚ್ಚರಣೆಯ
ಪಾಲಿಸಬೇಕೆಂದು ಬೇಡಿದೆನಲ್ಲದೆ ||೩||

ಒಡವೆಗಳಿಲ್ಲ ಒಡ್ಯಾಣಗಳಿಲ್ಲೆಂದು
ಬಡವನೆಂದು ಬೇಡಬಂದುದಿಲ್ಲ
ಒಡೆಯ ನಿನ್ನಡಿಗಳಿಗೆರಗುವುದಕೆ ಮನ
ಬಿಡದಿಹದೊಂದನು ಕೊಡು ಸಾಕೆಂದರೆ ||೪||

ಆಗಬೇಕು ರಾಜ್ಯಭೋಗಗಳೆನಗೆಂದು
ಈಗ ನಾನು ಬೇಡಬಂದುದಿಲ್ಲ
ನಾಗಶಯನ ರಂಗವಿಠಲ ನಾ ನಿನ್ನ
ಬಾಗಿಲ ಕಾಯುವ ಭಾಗ್ಯ ಸಾಕೆಂದರೆ ||೫||

Labels: ಇದನಾದರು ಕೊಡದಿದ್ದರೆ, ಶ್ರೀಪಾದರಾಜರು,  Idanadaru Kodadiddare, Sripadarajaru, ಶ್ರೀಪಾದರಾಜರು, Sripadarajaru

ಅಂಬಿಗ ನಾ ನಿನ್ನ ನಂಬಿದೆ : Ambiga Na Ninna Nambide


ಅಂಬಿಗ ನಾ ನಿನ್ನ ನಂಬಿದೆ

ಕೀರ್ತನಕಾರರು : ಪುರಂದರದಾಸರು
ರಾಗ : ಶಂಕರಾಭರಣ
ತಾಳ : ಅಟ್ಟ

ಅಂಬಿಗ ನಾ ನಿನ್ನ ನಂಬಿದೆ ಜಗ
ದಂಬಾರಮಣ ನಿನ್ನ ನಂಬಿದೆ ||ಪ||

ತುಂಬಿದ ಹರಿಗೋಲಂಬಿಗ ಅದ
ಕೊಂಭತ್ತು ಛಿದ್ರ ನೋಡಂಬಿಗ
ಸಂಭ್ರಮದಿಂದ ನೀನಂಬಿಗ ಅದ
ರಿಂಬು ನೋಡಿ ನಡೆಸಂಬಿಗ ||೧||

ಹೊಳೆಯ ಭರವ ನೋಡಂಬಿಗ ಅದಕೆ 
ಸೆಳವು ಘನವಯ್ಯ ಅಂಬಿಗ
ಸುಳಿಯೊಳು ಮುಳುಗಿದೆ ಅಂಬಿಗ ಎನ್ನ 
ಸೆಳೆದುಕೊಂಡೊಯ್ಯೊ ನೀನಂಬಿಗ ||೨||

ಆರು ತೆರೆಯ ನೋಡಂಬಿಗ ಅದು 
ಮೀರಿ ಬರುತಲಿದೆ ಅಂಬಿಗ
ಯಾರಿಂದಲಾಗದು ಅಂಬಿಗ ಅದ ನಿ
ವಾರಿಸಿ ದಾಟಿಸೋ ಅಂಬಿಗ ||೩||

ಹೊತ್ತು ಹೋಯಿತು ನೋಡಂಬಿಗ ಅಲ್ಲಿ
ಮತ್ತೈವರೀರ್ವರು ಅಂಬಿಗ
ಒತ್ತಿನಡೆಸು ನೋಡಿ ಅಂಬಿಗ
ಎನ್ನ ಸತ್ಯಲೋಕಕ್ಕೆ ಒಯ್ಯೊ ಅಂಬಿಗ ||೪||

ಸತ್ವಪಥದೊಳಗೆ ಅಂಬಿಗ ಪರಾ 
ಭಕ್ತಿ ಹುಟ್ಟನು ಹಾಕಿ ಅಂಬಿಗ
ಮುಕ್ತಿದಾಯಕ ನಮ್ಮ ಪುರಂದರವಿಠಲನ
ಮುಕ್ತಿ ಮಂಟಪಕೊಯ್ಯೋ ಅಂಬಿಗ ||೫||

Labels: ಅಂಬಿಗ ನಾ ನಿನ್ನ ನಂಬಿದೆ, Ambiga Na Ninna Nambide, ಪುರಂದರದಾಸರು, Purandaradasaru

ಎಂತು ಮರುಳಾದೆ : Entu Marulade


ಎಂತು ಮರುಳಾದೆ

ಕೀರ್ತನಕಾರರು : ನರಹರಿ ತೀರ್ಥರು
ರಾಗ : ಆನಂದಭೈರವಿ
ತಾಳ : ಆದಿ

ಎಂತು ಮರುಳಾದೆ ನಾನೆಂತು ಮರುಳಾದೆ ||ಪ||

ಎಂತು ಮರುಳಾದೆ ಭವದೊಳು ಬಳಲಿದೆ
ಸಂತತ ಪೊರೆ ರಘುಕುಲತಿಲಕ ||ಅ.ಪ||

ಮಾತಿನಲ್ಲಿ ಹರಿದಾಸನ
ನೀತಿಯಲ್ಲಿ ಪ್ರಭುದಾಸತನ
ಪ್ರೀತಿ ಧನಾದಿ ವಿಷಯದಲ್ಲಿ ನಿ
ರ್ಭೀತಿ ದೈವ ಗುರು ದ್ರೋಹದಲಿ ||೧||

ಏಕಾಂತದಲ್ಲಿ ಧನದ ಗೋಷ್ಠಿ
ಲೋಕಾಂತದಿ ವೈರಾಗ್ಯದ ಗೋಷ್ಠಿ
ಶ್ರೀಕಾಂತನ ಸೇವೆಗೆ ಅನುಮಾನ
ಭೂಕಾಂತನ ಸೇವೆಗೆ ಸುಮ್ಮಾನ ||೨||

ಧರ್ಮಕ್ಕೆ ಒಂದು ಕಾಸು ಆ
ಧರ್ಮಕ್ಕೆ ಸಾವಿರಾರು ಹೊನ್ನು
ಧರ್ಮ ಮಾಡಲು ಬೇಸರಿಕೆ ಆ
ಧರ್ಮಮಾಡಲು ಚಚ್ಚರಿಕೆ ||೩||

ಡೊಂಬನಂತೆ ಬಯಲಿಗೆ ಹರಹಿ
ಡಂಭತನಕೆ ಕರ್ಮವ ಮಾಡಿ
ಅಂಬುಜನಾಭಗೆ ದೂರಾಗಿ
ಕುಂಭೀಪಾತಕಕೆ ಗುರಿಯಾದೆ ||೪||

ಸತಿಯರ ಬೈದರೆ ನಾ ಬೈಯ್ವೆ
ಶ್ರೀಪತಿಯ ಬೈದರೆ
ಕೇಳುತ ನಗುವೆ
ಮತಿಗೆಟ್ಟು ವಿಷಯಲಂಪಟನಾಗಿ ||೫||

ಯಾರಿಗಾಗಿ ಧಾವತಿ ಪಡುವೆ ಇ
ನ್ನಾರಿಗೆ ಒಡವೆಯ ಬಚ್ಚಿಡುವೆ
ನಾರಿ ಪುತ್ರ ಮಿತ್ರಾದಿಗಳು
ಯಾರೂ ಬಾರರೊ ಸಂಗಡದಿ ||೬||

ಭಜಿಸು ಬ್ರಹ್ಮಾದಿ ವಂದಿತ ಹರಿಯ
ತ್ಯಜಿಸು ಕಾಮಾದಿ ದುರ್ವಿಷಯ
ಸುಜನವಂದಿತನಾದ ನರಹರಿಯ
ಭಜಿಸು ಶ್ರೀಶ ಶ್ರೀ ರಘುಪತಿಯ ||೭||

Labels: ಎಂತು ಮರುಳಾದೆ, ನರಹರಿ ತೀರ್ಥರು, Entu Marulade, Narahari Teertharu, ನರಹರಿ ತೀರ್ಥರು, Narahari Teertharu

ಹೂವ ತರುವರ ಮನೆಗೆ : Hoova Taruvara Manege


ಹೂವ ತರುವರ ಮನೆಗೆ ಹುಲ್ಲ ತರುವ

ಕೀರ್ತನಕಾರರು : ಪುರಂದರದಾಸರು
ರಾಗ : ಕಾಂಬೋದಿ
ತಾಳ : ಝಂಪೆ

ಹೂವ ತರುವರ ಮನೆಗೆ ಹುಲ್ಲ ತರುವ
ಅವ್ವೆ ಲಕುಮೀರಮಣ ಇವಗಿಲ್ಲ ಗರುವ ||ಪ||

ಒಂದು ದಳ ಶ್ರೀ ತುಳಸಿ ಬಿಂದು ಗಂಗೋದಕವ
ಇಂದಿರಾರಮಣಗರ್ಪಿತವೆನ್ನಲು
ಒಂದೆ ಮನದಲಿ ಸಿಂಧುಶಯನ ಮುಕುಂದಯೆನೆ
ಎಂದೆಂದು ವಾಸಿಪನಾ ಮಂದಿರದೊಳಗೆ ||೧||

ಪರಿಪರಿಯ ಪುಷ್ಪಗಳ ಪರಮಾತ್ಮಗರ್ಪಿಸಿ
ಪರಿಪೂರ್ಣನೆಂದು ಪೂಜೆಯನು ಮಾಡೆ
ಸರಸಿಜಾಕ್ಷನು ತನ್ನ ಸಕಲ ಸ್ವಾತಂತ್ರ್ಯದಲಿ
ಸರಿಭಾಗ ಕೊಡುವ ತನ್ನರಮನೆಯ ಒಳಗೆ ||೨||

ಪಾಂಡವರ ಮನೆಯೊಳಗೆ ಕುದುರೆಗಳ ತಾ ತೊಳೆದು
ಪುಂಡರೀಕಾಕ್ಷ ತಾ ಹುಲ್ಲ ತಂದ
ಅಂಡಜಾಧಿಪ ನಮ್ಮ ಪುರಂದರವಿಠಲನು
ತೊಂಡರಿಗೆ ತೊಂಡನಾಗಿ ಸಂಚರಿಸುತಿಹನು ||೩||

Labels: ಹೂವ ತರುವರ ಮನೆಗೆ, Hoova Taruvara Manege, ಪುರಂದರದಾಸರು, Purandaradasaru

ಹಣ್ಣು ಕೊಂಬುವ ಬನ್ನಿರಿ : Hannu Kombuva Banniri


ಹಣ್ಣು ಕೊಂಬುವ ಬನ್ನಿರಿ

ಕೀರ್ತನಕಾರರು : ಕನಕದಾಸರು
ರಾಗ : ಶಂಕರಾಭರಣ
ತಾಳ : ಅಟ್ಟ

ಹಣ್ಣು ಕೊಂಬುವ ಬನ್ನಿರಿ ಹರಿದಾಸರು
ಹಣ್ಣು ಕೊಂಬುವ ಬನ್ನಿರಿ
ಚಿನ್ನ ಬಾಲಕೃಷ್ಣನೆಂಬ
ಕನ್ನೆಗೊನೆಬಾಳೆಹಣ್ಣು ||ಪ||

ಸುತ್ತೇಳು ಲೋಕದಿ ಸುರರು ಬಿತ್ತಿದ ಹಣ್ಣು
ಭಕ್ತರ ಬಾಯೊಳು ನೆನೆವ ಹಣ್ಣು
ಅರ್ತಿಯುಳ್ಳವರೆಲ್ಲ ಕೊಳ್ಳಿ ಬೇಕಾದರೆ
ನಿತ್ಯ ಮಾಧವನೆಂಬ ಅಚ್ಚಮಾವಿನ ಹಣ್ಣು ||೧||

ಅಜನ ಪಡೆದ ಹಣ್ಣು ಗಜವ ಕಾಯ್ದ ಹಣ್ಣು
ನಿಜಮುನಿಗಳಿಗೆ ತೋರಿಸಿದ ಹಣ್ಣು
ತ್ರಿಜಗವಂದಿತ ಪಾಲ್ಗಡಲೊಡೆಯನೆ ಹಣ್ಣು
ಸುಜನಭಕ್ತರೆಲ್ಲ ಕೊಳ್ಳಬನ್ನಿರಿ ಹಣ್ಣು ||೨||

ತುರುವ ಕಾಯ್ದ ಹಣ್ಣು ಉರಗನ ತುಳಿದಾ ಹಣ್ಣು
ಕರೆದರೆ ಕಂಬದೊಳು ಓಯೆಂಬ ಹಣ್ಣು
ಮರುಗುವ ಧ್ರುವನಿಗೆ ಪಟ್ಟಗಟ್ಟಿದ ಹಣ್ಣು
ಕರುಣಾಳು ಕಾಗಿನೆಲೆಯಾದಿಕೇಶವ ಹಣ್ಣು ||೩||

Labels: ಹಣ್ಣು ಕೊಂಬುವ ಬನ್ನಿರಿ, ಕನಕದಾಸರು, Hannu Kombuva Banniri, Kanakadasaru, 

ಶನಿವಾರ, ಏಪ್ರಿಲ್ 20, 2013

ಹರಿಯೇ ಇದು ಸರಿಯೇ : Hariye Idu Sariye




ಹರಿಯೇ ಇದು ಸರಿಯೇ

ಕೀರ್ತನಕಾರರು : ನರಹರಿ ತೀರ್ಥರು
ರಾಗ : ಕೇದಾರ
ತಾಳ : ಆದಿ

ಹರಿಯೇ ಇದು ಸರಿಯೇ
ಚರಣಸೇವಕನಲ್ಲಿ ಕರುಣೆ ಬಾರದ್ಯಾಕೆ ||ಪ||

ಪತಿತನೆಂದು ಶ್ರೀಪತಿ ರಕ್ಷಿಸದಿರೆ
ವಿತತವಾಹುದೆ ನಿನ್ನ ಪತಿತಪಾವನ ಕೀರ್ತಿ? ||೧||

ಶಕ್ತ ನೀನಾಗಿದ್ದು ಭಕ್ತನುಪೇಕ್ಷಿಸೆ
ಭಕ್ತವತ್ಸಲ ನಾಮ ವ್ಯರ್ಥವಾಗದೆ? ||೨||

ದಿಗಿಲಿಲ್ಲದೆ ಒದ್ದ ಭೃಗುವ ಪಾಲಿಸಿದೆ
ನಗಧರ ಎನ್ನ ಬಿಡುವ ಬಗೆ ಏನಿದು? ||೩||

ಹೇಯ ಅಜಾಮಿಳನ ಕಾಯಲಿಲ್ಲೆ ಸ್ವ
ಕೀಯನೆ ನಾ ಪರಕೀಯನೆ ನಿನಗೆ? ||೪||

ಉಂಟು ಹಿರಣ್ಯಕನ ಕಂಟಕ ಬಿಡಿಸಿದ್ದು
ನಂಟನೆ ನಿನಗೆ ಬಂಟ ನಾನಲ್ಲವೆ? ||೫||

ಕೆಟ್ಟ ಅಹಲ್ಯೆಯ ದಿಟ್ಟ ಪಾಲಿಸಿದೆ
ಕೊಟ್ಟಳು ಅವಳೇನ ಬಿಟ್ಟದ್ದು ನಾನೇನ? ||೬||

ದೊರೆ ನಿನ್ನ ಮನಸಿಗೆ ಸರಿಬಂದಂತೆ ಮಾಡು
ಮೊರೆಹೊಕ್ಕೆನು ನಾ ನರಹರಿಪೂರ್ಣನೆ ||೭||

Labels: Hariye Idu Sariye, Narahari Teertharu, ನರಹರಿ ತೀರ್ಥರು, ಹರಿಯೇ ಇದು ಸರಿಯೇ, ನರಹರಿ ತೀರ್ಥರು, Narahari Teertharu

ಅಕಟಕಟ ಸಂಸಾರವನು ನೆಚ್ಚಿ ಕೆಡಬ್ಯಾಡ : Akatakata Samsaravanu


ಅಕಟಕಟ ಸಂಸಾರವನು ನೆಚ್ಚಿ ಕೆಡಬ್ಯಾಡ

ಕೀರ್ತನಕಾರರು : ಶ್ರೀಪಾದರಾಜರು
ರಾಗ : ಕಲ್ಯಾಣಿ
ತಾಳ : ಝಂಪೆ

ಅಕಟಕಟ ಸಂಸಾರವನು ನೆಚ್ಚಿ ಕೆಡಬ್ಯಾಡ
ವಿಕಟದಲಿ ಮಾನವರು ಕೆಟ್ಟರೆಲ್ಲರು ನಿಜ ||ಪ||

ಮುನ್ನ ನರಕಾಸುರನು ಬಡಿದು ಚಿಂತಾಮಣಿಯ
ತನ್ನ ಮನೆಯಲಿ ತಂದು ನಿಲ್ಲಿಸಿ ನೃಪರ
ಕನ್ನೆಯರ ಷೋಡಶಸಹಸ್ರವನೆ ತಂದಾತ
ಹೆಣ್ಣನೊಬ್ಬಳನೊಯ್ದುದಿಲ್ಲವೋ ನೋಡೋ ||೧||

ಸಾವಿರಾರು ಕರ ಪಡೆದ ಕಾರ್ತವೀರ್ಯಾರ್ಜುನನು
ಭೂವಲಯದೊಳಗೊಬ್ಬನೇ ವೀರನೆನಿಸಿ
ರಾವಣನ ಸೆರೆಯಿಟ್ಟು ಕಾಮಧೇನುವ ಬಯಸಿ
ಸಾವಾಗ ಏನು ಕೊಂಡೊಯ್ದನೋ ನೋಡೋ ||೨||

ಕೌರವನು ಧರೆಯೆಲ್ಲ ತನಗಾಗಬೇಕೆಂದು
ವೀರಪಾಂಡವರೊಡನೆ ಕದನಮಾಡಿ
ಮಾರಿಯ ವಶವೈದಿ ಹೋಹಾಗ ತನ್ನೊಡನೆ
ಶ್ಯಾರೆ ಭೂಮಿಯ ಒಯ್ದುದಿಲ್ಲವೋ ನೋಡೊ ||೩||

ವರಯಜ್ಞಗಳ ಮಾಡಿ ನಹುಷ ಸುರಪತಿಯೆನಿಸಿ
ಪರಮಮುನಿಗಳ ಕೈಲೆ ದಂಡಿಗೆಯ ಹೊರಿಸಿ
ಉರಗ ಜನುಮವನೈದಿ ಹೋಹಾಗ ತನ್ನೊಡನೆ
ಸುರಲೋಕದೊಳಗೇನ ಕೊಂಡ್ಹೋದ ನೋಡೋ ||೪||

ತುಂಗಗುಣ ಧ್ರುವ ವಿಭೀಷಣ ಹನುಮಾದಿಗಳು
ಮಂಗಳಾತ್ಮಕ ಹರಿಯನರಿತು ಭಜಿಸಿ
ಭಂಗವಿಲ್ಲದೆ ಹೊರೆದರೈ ಸಕಲ ಭಾಗ್ಯವನು
ರಂಗವಿಠಲರೇಯನ ನೆರೆ ನಂಬಿರೊ ||೫||

Labels: ಅಕಟಕಟ ಸಂಸಾರವನು ನೆಚ್ಚಿ ಕೆಡಬ್ಯಾಡ, Akatakata Samsaravanu Necchi Kedabyada, ಶ್ರೀಪಾದರಾಜರು, Sripadarajaru

ನೀನ್ಯಾಕೋ ನಿನ್ನ ಹಂಗ್ಯಾಕೋ : Neenyako Ninna Hangyako

ನೀನ್ಯಾಕೋ ನಿನ್ನ ಹಂಗ್ಯಾಕೋ

ಕೀರ್ತನಕಾರರು : ಪುರಂದರದಾಸರು
ರಾಗ : ಕಾನಡ
ತಾಳ : ಆದಿ

ನೀನ್ಯಾಕೋ ನಿನ್ನ ಹಂಗ್ಯಾಕೋ
ನಿನ್ನ ನಾಮದ ಬಲವೊಂದಿದ್ದರೆ ಸಾಕೊ   ||ಪ||

ಆ ಮರ ಈ ಮರ ಧ್ಯಾನಿಸುತಿರುವಾಗ
ರಾಮ ರಾಮ ಎಂಬ ನಾಮವೆ ಕಾಯ್ತೊ    ||೧||

ಬಾಲೆಯ ಸಭೆಯಲಿ ಸೀರೆಯ ಸೆಳೆವಾಗ
ಬಾಲಕೃಷ್ಣನೆಂಬ ನಾಮವೆ ಕಾಯ್ತೊ         ||೨||

ಕರಿಮಕರಿಗೆ ಸಿಕ್ಕಿ ಮೊರೆಯಿಡುತಿರುವಾಗ
ಆದಿಮೂಲನೆಂಬ ನಾಮವೆ ಕಾಯ್ತೊ        ||೩||

ಪ್ರಹ್ಲಾದನ ಪಿತ ಬಾಧಿಸುತಿರುವಾಗ
ನಾರಸಿಂಹನೆಂಬ ನಾಮವೆ ಕಾಯ್ತೊ        ||೪||

ಹಸುಳೆ ಆ ಧ್ರುವರಾಯ ಅಡವಿಗೆ ಪೋಪಾಗ
ವಾಸುದೇವನೆಂಬ ನಾಮವೆ ಕಾಯ್ತೊ         ||೫||

ನಿನ್ನ ನಾಮಕೆ ಸರಿ ಯಾವುದು ಕಾಣೆನೊ
ಘನ್ನ ಮಹಿಮ ಸಿರಿ ಪುರಂದರವಿಠಲ       ||೬||

Labels: Neenyako Ninna Hangyako, ನೀನ್ಯಾಕೋ ನಿನ್ನ ಹಂಗ್ಯಾಕೋ, ಪುರಂದರದಾಸರು, Purandaradasaru

ಈಶ ನಿನ್ನ ಚರಣಭಜನೆ : Isha Ninna Charana Bhajane

ಈಶ ನಿನ್ನ ಚರಣಭಜನೆ

ಕೀರ್ತನಕಾರರು : ಕನಕದಾಸರು
ರಾಗ : ಸಾವೇರಿ
ತಾಳ : ರೂಪಕ

ಈಶ ನಿನ್ನ ಚರಣಭಜನೆ ಆಶೆಯಿಂದ ಮಾಡುವೆನು
ದೋಷರಾಶಿ ನಾಶಮಾಡು ಶ್ರೀಶ ಕೇಶವ                         ||ಪ||

ಶರಣುಹೊಕ್ಕೆನಯ್ಯ ಎನ್ನ ಮರಣಸಮಯದಲ್ಲಿ ನಿನ್ನ
ಚರಣಸ್ಮರಣೆ ಕರುಣಿಸಯ್ಯ ನಾರಾಯಣ                           ||೧||

ಶೋಧಿಸೆನ್ನ ಭವದ ಕಲುಷ ಬೋಧಿಸಯ್ಯ ಜ್ಞಾನವೆನಗೆ
ಬಾಧಿಸುವಾ ಯಮನ ಬಾಧೆ ಬಿಡಿಸು ಮಾಧವಾ                ||೨||

ಹಿಂದನೇಕ ಯೋನಿಗಳಲಿ ಬಂದು ಬಂದು ನೊಂದೆ ನಾನು
ಎಂದು ಭವದ ಬಂದ ಬಿಡಿಸು ತಂದೆ ಗೋವಿಂದಾ               ||೩||

ಭ್ರಷ್ಟನೆನಿಸಬೇಡ ಕೃಷ್ಣ ಇಷ್ಟು ಮಾತ್ರ ಬೇಡಿಕೊಂಬೆ
ಶಿಷ್ಟರೊಡನೆ ಇಟ್ಟು ಕಷ್ಟ ಬಿಡಿಸು ವಿಷ್ಣುವೆ                         ||೪||

ಮೊದಲು ನಿನ್ನ ಪಾದಪೂಜೆ ಮುದದಿ ಮಾಡುವೆನೈ ನಾನು
ಹೃದಯದೊಳಗೆ ಹುದುಗಿಸಯ್ಯ ಮಧುಸೂದನಾ                ||೫||

ಕವಿದುಕೊಂಡು ಇರುವ ಪಾಪ ಸವೆದು ಪೋಗುವಂತೆ ಮಾಡಿ
ಜವನ ಬಾಧೆಯನ್ನು ಬಿಡಿಸು ತವೆ ತ್ರಿವಿಕ್ರಮಾ                  ||೬||

ಕಾಮಜನಕ ನಿನ್ನ ನಾಮ ಪ್ರೇಮದಿಂದ ಪಾಡುವಂಥ
ನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನಾ                     ||೭||

ಮದನನಯ್ಯ ನಿನ್ನ ಮಹಿಮೆ ವದನದಲಿಯೆ ಇರುವಂತೆ
ಹೃದಯದಲ್ಲಿ ಸದನ ಮಾಡು ಮುದದಿ ಶ್ರೀಧರಾ                 ||೮||

ಹುಸಿಯನಾಡಿ ಹೊಟ್ಟೆ ಹೊರೆವ ವಿಷಯದಲ್ಲಿ ರಸಿಕನೆಂದು
ಹುಸಿಗೆ ನೀನು ಹಾಕದಿರೋ ಹೃಷಿಕೇಶನೆ                        ||೯||

ಅಬ್ದಿಯೊಳಗೆ ಬಿದ್ದು ನಾನು ಒದ್ದು ಕೊಂಬೆನಯ್ಯ ಭವದಿ
ಗೆದ್ದು ಪೋಪ ಬುದ್ಧಿ ತೋರು ಪದ್ಮನಾಭನೆ                        ||೧೦||

ಕಾಮ-ಕ್ರೋಧ ಬಿಡಿಸಿ ನಿನ್ನ ನಾಮ ಜಿಹ್ವೆಯೊಳಗೆ ನುಡಿಸು
ಶ್ರೀ ಮಹಾನುಭಾವನಾದ ದಾಮೋದರಾ                        ||೧೧||

ಪಂಕಜಾಕ್ಷ ನೀನು ಎನ್ನ ಮಂಕುಬುದ್ಧಿ ಬಿಡಿಸಿ ನಿನ್ನ
ಕಿಂಕರನನು ಮಾಡಿಕೊಳ್ಳು ಸಂಕರುಷಣ                       ||೧೨||

ಏಸು ಜನ್ಮ ಬಂದರೇನು ದಾಸನಾಗಲಿಲ್ಲ ನಾನು
ಗಾಸಿಮಾಡದಿರು ಇನ್ನು ವಾಸುದೇವನೆ                        ||೧೩||

ಬುದ್ಧಿಶೂನ್ಯನಾಗಿ ನಾನು ಕದ್ದ ಕಳ್ಳನಾದೆ ಎನ್ನ
ತಿದ್ದಿ ಹೃದಯ ಶುದ್ಧಮಾಡು ಪ್ರದ್ಯುಮ್ನನೆ                          ||೧೪||

ಜನನಿ ಜನಕ ನೀನೆಯೆಂದು ಎನುವೆನಯ್ಯ ದೀನಬಂಧು
ಎನಗೆ ಮುಕ್ತಿ ಚರಣದಲ್ಲಿ ಪುರುಷೋತ್ತಮಾ                      ||೧೫||

ಸಾಧುಸಂಗ ಕೊಟ್ಟು ನಿನ್ನ ಪಾದಭಜಕನೆನಿಸು ಎನ್ನ
ಭೇಧಮಾಡಿ ನೋಡದಿರು ಅಧೋಕ್ಷಜಾ                       ||೧೬||

ಚಾರುಚರಣ ತೋರಿ ಎನಗೆ ಪಾರುಗಾಣಿಸಯ್ಯ ಕೊನೆಗೆ
ಭಾರಹಾಕಿರುವೆ ನಿನಗೆ ನಾರಸಿಂಹನೆ                         ||೧೭||

ಸಂಚಿತಾರ್ಥ ಪಾಪಗಳನು ಕಿಂಚಿತಾದರಿಡದಂತೆ
ಮುಂಚಿತಾಗಿ ಕಳೆಯಬೇಕು ಸ್ವಾಮಿ ಅಚ್ಯುತ                 ||೧೮||

ಜ್ಞಾನಭಕ್ತಿ ಕೊಟ್ಟು ನಿನ್ನ ಧ್ಯಾನದಲ್ಲಿ ಇಟ್ಟು ಎನ್ನ
ಹೀನಬುದ್ಧಿ ಬಿಡಿಸೂ ಮುನ್ನ ಜನಾರ್ದನಾ                     ||೧೯||

ಜಪತಪಾನುಷ್ಠಾನ ನೀನು ಒಪ್ಪುವಂತೆ ಮಾಡಲಿಲ್ಲ
ತಪ್ಪಕೋಟಿ ಕ್ಷಮಿಸಬೇಕು ಉಪೇಂದ್ರನೆ                     ||೨೦||

ಮೊರೆಯ ಇಡುವೆನಯ್ಯ ನಿನಗೆ ಸೆರೆಯ ಬಿಡಿಸು ಭವದ ಎನಗೆ
ಇರಿಸು ಭಕ್ತರೊಳಗೆ ಪರಮ ಪುರುಷ ಶ್ರೀಹರೆ              ||೨೧||

ಪುಟ್ಟಿಸಲು ಬೇಡವಿನ್ನು ಪುಟ್ಟಿಸಿದಕೆ ಪಾಲ್ಲಿಸಿನ್ನು
ಇಷ್ಟು ಬೇಡಿಕೊಂಬೆ ನಾನು ಶ್ರೀಕೃಷ್ಣನೆ                      ||೨೩||

ಸತ್ಯವಾದ ನಾಮಗಳನು ನಿತ್ಯದಲ್ಲಿ ಪಠಿಸುವವನ
ಅರ್ಥಿಯಿಂದ ಸಲಹುವನು ಕರ್ತು ಕೇಶವ                   ||೨೪||

ಮರೆದು ಬಿಡದೆ ಹರಿಯನಾಮ ಬರೆದು ಓದಿ ಕೇಳಿದರಿಗೆ
ಕರೆದು ಕೊಡುವ ಮುಕ್ತಿ ಬಾಡದಾದಿಕೇಶವ                 ||೨೫||

Isha Ninna Charana Bhajane, Kanakadasaru, ಈಶ ನಿನ್ನ ಚರಣಭಜನೆ, ಕನಕದಾಸರು

ಮಾನವ ಜನ್ಮ ದೊಡ್ಡದು : Manava Janma Doddadu


ಮಾನವ ಜನ್ಮ ದೊಡ್ಡದು

ಕೀರ್ತನಕಾರರು : ಪುರಂದರದಾಸರು
ರಾಗ : ಪಂತುವರಾಳಿ
ತಾಳ : ಅಟ್ಟ

ಮಾನವ ಜನ್ಮ ದೊಡ್ಡದು ಇದ
ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ ||ಪ||

ಕಣ್ಣು ಕೈ ಕಾಲ್ಕಿವಿ ನಾಲಗೆ ಇರಲಿಕ್ಕೆ
ಮಣ್ಣುಮುಕ್ಕಿ ಮರಳಾಗುವರೆ
ಹೊನ್ನು ಹೆಣ್ಣಿಗಾಗಿ ಹರಿನಾಮಾಮೃತವನು
ಉಣ್ಣದೆ ಉಪವಾಸವಿರುವರೇನೋ ||೧||

ಕಾಲನವರು ಬಂದು ಕರಪಿಡೆದೆಳೆದಾಗ
ತಾಳು ತಾಳೆಂದರೆ ಕೇಳುವರೆ?
ವೇಳೆ ಹೋಗದ ಮುನ್ನ ಧರ್ಮವ ಗಳಿಸಿರೊ
ಸುಳ್ಳಿನ ಸಂಸಾರ ಸುಳಿಗೆ ಸಿಲುಕಬೇಡಿ ||೨||

ಏನು ಕಾರಣ ಯದುಪತಿಯನ್ನು ಮರೆತಿರಿ
ಧನ ಧಾನ್ಯ ಸತಿ ಸುತರಿವು ನಿತ್ಯವೆ?
ಇನ್ನಾದರು ಶ್ರೀ ಪುರಂದರವಿಠಲನ
ಚೆನ್ನಾಗಿ ಭಜಿಸಿ ನೀವು ಸುಖಿಯಾಗಿರಯ್ಯ ||೩||

Manava Janma Doddadu, ಮಾನವ ಜನ್ಮ ದೊಡ್ಡದು, ಪುರಂದರದಾಸರು, Purandaradasaru