ಪುರಂದರದಾಸರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪುರಂದರದಾಸರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಜುಲೈ 15, 2014

ಒಂಭತ್ತು ಬಾಗಿಲೊಳು ಒಂದೇ ದೀವಿಗೆ ಹಚ್ಚಿ : Ombhattu Bagilolu Onde Divige Hachchi

ಒಂಭತ್ತು ಬಾಗಿಲೊಳು ಒಂದೇ ದೀವಿಗೆ ಹಚ್ಚಿ

ಕೀರ್ತನಕಾರರು : ಪುರಂದರದಾಸರು
ರಾಗ : ಮಾಯಾಮಾಳವ ಗೌಳ
ತಾಳ : ಆದಿ

ಒಂಭತ್ತು ಬಾಗಿಲೊಳು ಒಂದೇ ದೀವಿಗೆ ಹಚ್ಚಿ
ನಂಬಿಕಿಲ್ಲದ ಸಂಸಾರ ಮಾಡಿದೆನೆ ಸೂವಿಯಾ ಬೀಬಿ ॥ಪ॥ 

ತನುವೆಂಬ ಕಲ್ಲಿನೊಳು ಮನವೆಂಬ ಧಾನ್ಯವ ತುಂಬಿ
ವನವನದು ನವಬೇಳೆ ಬೀಸಿದೆನೆ  ॥೧॥

ಅಷ್ಟಕರ್ತೃಗಳೆಂಬೋ ಅಷ್ಟನವಧಾನ್ಯವ ತಂದು
ಕುಟ್ಟಿತಟ್ಟಿ ಕಜ್ಜಾಯ ಕರಿದೆನೆ  ॥೨॥

ಅಷ್ಟಕರ್ಮಗಳೆಂಬೋ ಕಾಷ್ಠವನ್ನುರುಹಿ ನಾನು
ನಿಷ್ಥೆಯಿಂದಲಿ ಅನ್ನವ ಬಾಗಿದೆನೆ  ॥೩॥

ಅಷ್ಟರೊಳಗೆನ್ನ ಗಂಡ ಬಂದು ಅಡುವ ಮಡಿಕೆಯ ಒಡೆದು
ಮುಟ್ಟಿಮುರಿದು ಮೂಲೆಗೆ ಹಾಕಿದನೆ  ॥೪

ಉಡುವ ಸೀರೆಯ ಸೆಳೆದು ಗಿಡದ ತೊಪ್ಪಲ ಸುತ್ತಿ
ತಿರುಗಿ ಬಾರದ್ಹಾಂಗೆ ಮಾಡಿದನೆ  ॥೫॥

ಮಾಡಿದೆ ಒಗೆತನವ ನಂಬಿಕಿಲ್ಲದ ಸಂಸಾರವ ನೆಚ್ಚಿ
ಕೂಡಿದೆ ಪುರಂದರವಿಠಲನ್ನ ದಾಸರ  ॥ ೬॥

Labels: ಒಂಭತ್ತು ಬಾಗಿಲೊಳು ಒಂದೇ ದೀವಿಗೆ ಹಚ್ಚಿ, Ombhattu Bagilolu Onde Divige Hachchi, ಪುರಂದರದಾಸರು, Purandaradasaru

ಒಂದೆ ಕೂಗಳತೆ ವೈಕುಂಠಕೆ : Onde Kugalate Vaikunthake

ಒಂದೆ ಕೂಗಳತೆ ವೈಕುಂಠಕೆ 

ಕೀರ್ತನಕಾರರು : ಪುರಂದರದಾಸರು
ರಾಗ : ಕಲ್ಯಾಣಿ
ತಾಳ : ಅಟ್ಟ

ಒಂದೆ ಕೂಗಳತೆ ವೈಕುಂಠಕೆ ॥ಪ॥ 
ಸಂದೇಹವಿಲ್ಲವೋ ಸಾಧು ಸಜ್ಜನರಿಗೆ ॥ಅ.ಪ॥ 

ಸರಸಿಯಲಿ ಆನೆ ಪೊರೆಯೆಂದು ಕರೆಯಲು
ತ್ವರಿತದಿ ಬಂದು ಕಾಯ್ದಾ
ನರಹರಿ ಕೃಷ್ಣಾ ಸಲಹೆಂದು ಚೀರಲು
ತರಳ ಪ್ರಹ್ಲಾದಗೆ ಕಂಬದಿಂದಲಿ ಬಂದ ॥೧॥

ಅಂಬರೀಷ ದ್ವಾದಶೀವ್ರತ ಮಾಡಲು
ದೊಂಬಿ ಮಾಡಿದ ದುರ್ವಾಸಮುನಿ
ಕುಂಭಿನೀಪತಿ ಕೃಷ್ಣಾ ಕಾಯೆಂದು ಮೊರೆಯಿಡೆ
ಬೆಂಬತ್ತಿ ಚಕ್ರದಿ ಮುನಿಶಾಪವನು ಕಳೆದ ॥೨॥

ದ್ರುಪದರಾಯನ ಪುತ್ರಿಯಾಪತ್ತ ಕಳೆಯೆನೆ
ಕೃಪೆಯಿಂದ ಅಕ್ಷಯವಿತ್ತ ತಾನು
ಕಪಟನಾಟಕ ಕೃಷ್ಣ ಪುರಂದರವಿಠಲನ
ಗುಪಿತದಿ ನೆನೆವರ ಹೃದಯವೇ ವೈಕುಂಠವು ॥೩॥

Labels: ಒಂದೆ ಕೂಗಳತೆ ವೈಕುಂಠಕೆ, Onde Kugalate Vaikunthake, ಪುರಂದರದಾಸರು, Purandaradasaru 

ಸೋಮವಾರ, ಅಕ್ಟೋಬರ್ 7, 2013

ಜಗನ್ಮೋಹನನೇ ಕೃಷ್ಣ : Jaganmohanane Krishna

ಜಗನ್ಮೋಹನನೇ ಕೃಷ್ಣ

ಕೀರ್ತನಕಾರರು : ಪುರಂದರದಾಸರು
ರಾಗ : ಬೇಹಾಗ್
ತಾಳ : ಆದಿ

ಜಗನ್ಮೋಹನನೇ ಕೃಷ್ಣ ಜಗವಂ ಪಾಲಿಪನೆ    ॥ಪ॥

ಒಬ್ಬಳ ಬಸುರಿಂದಲಿ ಬಂದೆ ಮ
ತ್ತೊಬ್ಬಳ ಕೈಯಲಿ ನೀ ಬೆಳೆದೆ
ಕೊಬ್ಬಿದ ದೈತ್ಯರ ಒಡಲ ಸೀಳಿದೆ ಇಂಥ
ತಬ್ಬಿಬ್ಬಾಟವನೆಲ್ಲಿ ಕಲಿತೆಯೊ ರಂಗ             ॥೧॥

ಲೋಕದೊಳಗೆ ನೀ ಶಿಶುವಾಗಿ ಮೂ
ರ್ಲೋಕವನೆಲ್ಲ ಬಾಯಲಿ ತೋರಿದೆ
ಆಕಳ ಕಾಯುವ ಚಿಣ್ಣನೆಂದೆನಿಸಿದೆ
ಈ ಕುಟಿಲವನೆಲ್ಲಿ ಕಲಿತೆಯೊ ರಂಗ             ॥೨॥

ಮಗುವಾಗಿ ಪೂತನಿಯ ಮೊಲೆಯನುಂಡೆ ಅವಳು
ಜಗದಗಲಕೆ ಬೀಳಲು ಕೆಡಹಿ
ನಗುತ ನಗುತ ಗೋಪಿ ಮೊಲೆಯುಂಡೆ ಇಂಥ
ತಗಿಬಿಗಿಯಾಟಗಳೆಲ್ಲಿ ಕಲಿತೆಯೊ ರಂಗ  ॥೩॥

ಮಾಡುವ ಧುಮುಕಿ ಕಾಳಿಂಗನ ಶಿರದಲ್ಲಿ
ಮೃಡಸುರಪಾದ್ಯರು ಪೊಗಳುತಿರೆ
ಹೆಡೆಯ ಮೇಲೆ ಕುಣಿದಾಡುತ ಆಡುತ
ಕಡೆ ಸಾರೆಂಬುದನೆಲ್ಲಿ ಕಲಿತೆಯೊ ರಂಗ   ॥೪॥

ಒಂದು ಪಾದವ ಭೂಮಿಯಲೂರಿ ಮ-
ತ್ತೊಂದು ಪಾದವ ಗಗನವನಳೆದು
ಒಂದು ಪಾದವ ಬಲಿ ಶಿರದಲಿಟ್ಟೆ ಇಂತ
ಚೆಂದದ ವಿದ್ಯೆಯನೆಲ್ಲಿ ಕಲಿತೆಯೊ ರಂಗ   ॥೫॥

ನಂಬಿದ ಪ್ರಹ್ಲಾದನು ಸ್ತುತಿಸೆ ನೀ
ಕಂಭವನೊಡೆದು ಬಂದಾಕ್ಷಣದಿ
ದೊಂಬಿಲಿ ದೈತ್ಯನ ಒಡಲ ಸೀಳಿದೆ ಇಂಥ
ಡಂಬರಾಟವನೆಲ್ಲಿ ಕಲಿತೆಯೊ ರಂಗ  ॥೬॥

ಅಂಬರೀಷ ದ್ವಾದಶಿ ಸಾಧಿಸುತಿರೆ ಅಗ
ಬಂದು ದುರ್ವಾಸರು ಶಾಪ ಕೊಡಲು
ಮುಂದಕೆ ಸಾಧನವಹುದೆಂದು ಚಕ್ರವ
ಹಿಂದಟ್ಟಿಸುವುದನೆಲ್ಲಿ ಕಲಿತೆಯೊ ರಂಗ  ॥೭॥

ವರಬಲದಿಂದಲಿ ಭಸ್ಮಾಸುರನು
ಹರಣ ಶಿರಡಿ ಕರವಿಡೆ ಬರಲು
ತರುಣಿಯ ರೂಪವ ತಾಳಿ ಆ ದೈತ್ಯನ
ಹರಣವನಳಿದುದನೆಲ್ಲಿ ಕಲಿತೆಯೊ ರಂಗ ॥೮॥

ವೇದಗಳರಸಿ ಕಾಣದ ಪರಬ್ರಹ್ಮ ನೀ
ಮೋದದಿಂದ ವಿದುರನ ಮನೆಯೈದಿ
ಆದರದಿ ಪಾಲ ಕುಡಿದುಳಿದುದ ನೀ
ಮೇದಿನಿಗಿಳಿಸುವುದೆಲ್ಲಿ ಕಲಿತೆಯೊ ರಂಗ  ॥೯॥

ದುರ್ಯೋಧನ ತನ್ನೊಡ್ಡೋಲಗದೊಳು
ಹರಿಯನು ಕರೆಸೆಂದರುಹಲು ಬಂದು
ಧರಣಿಯುಂಗುಷ್ಟದೊಲೊತ್ತುತ ಅವನನು
ಉರುಳಿಸಿದಾಟವನೆಲ್ಲಿ ಕಲಿತೆಯೊ ರಂಗ  ॥೧೦॥
ಆ ಸಭೆಯಲ್ಲಿ ಖಳ ದುರ್ಯೋಧನನಾಗ
ಮೋಸದಿ ಕೃಷ್ಣನ ಕಟ್ಟೆನಲು
ಸಾಸಿರರೂಪಿನ ಕೃಷ್ಣನೆಂದೆನಿಸಿದ
ವೇಷವನೆಲ್ಲಿ ಕಲಿತೆಯೊ ರಂಗ   ॥೧೧॥

ಸರ್ಪಬಾಣ ಮೊರೆಯುತ ಬರಲು ಕಂ-
ದರ್ಪ ಪಿತನೆ ಕರುಣದಿ ನೀನು
ಒಪ್ಪುವ ಪಾರ್ಥನ ರಥವ ನೆಲಕೆ ಒತ್ತಿ
ತಪ್ಪಿಸಿದಾಟವನೆಲ್ಲಿ ಕಲಿತೆಯೊ ರಂಗ  ॥೧೨॥

ದ್ರೋಣನ ಸಂಗ್ರಾಮದಿ ಹರಿಚಕ್ರವ
ಮಾಣದೆ ಸೂರ್ಯಗೆ ಮರೆಮಾಡಿ
ಕಾಣಿಸಿ ಸೈಂಧವನನು ಕೊಲಿಸಲಾದೆ ಇಂಥ
ಜಾಣತನವ ನೀನೆಲ್ಲಿ ಕಲಿತೆಯೊ ರಂಗ  ॥೧೩॥

ಆ ಶಿರವಾತನ ತಂದೆಯು ಕರದಲಿ
ಸೂಸುತ ರಕುತವು ಬೀಳಲು ಅದನು
ಬೀಸಿ ಬಿಸಾಡಲು ಅವನ ಶಿರವನಾಗ
ಸಾಸಿರ ಮಾಡಿದುದೆಲ್ಲಿ ಕಲಿತೆಯೊ ರಂಗ  ॥೧೪॥

ಅಡಿ ಮೂಲನೆ ಎಂದು ಕರಿರಾಜ ಕರೆಯಲು
ಯಾದವರಾಯ ನೀ ನಗುತಲಿ ಬಂದು
ಆದರದಿಂದ ಗಜೇಂದ್ರನ ಸಲಹಿದೆ
ಆ ದಿವ್ಯಾಟಗಳೆಲ್ಲಿ ಕಲಿತೆಯೊ ರಂಗ   ॥೧೫॥

ಎಂದೆಂದಿಗು ನಿಮ್ಮ ಗುಣಗಳ ಪೊಗಳಲು
ಇಂದ್ರಾದಿಗಳಿಗೆ ಅಳವಲ್ಲ
ಮಂದರಧರ ಶ್ರೀ ಪುರಂದರವಿಠಲನೆ
ಒಂದೊಂದಾಟವನೆಲ್ಲಿ ಕಲಿತೆಯೋ ರಂಗ  ॥೧೬॥

Labels: ಜಗನ್ಮೋಹನನೇ ಕೃಷ್ಣ, Jaganmohanane Krishna, ಪುರಂದರದಾಸರು, Purandaradasaru

ರಂಗನ ನೋಡಿರೆ ರಾಜಕುವರ : Rangana Nodire Rajakuvara

ರಂಗನ ನೋಡಿರೆ ರಾಜಕುವರ

ಕೀರ್ತನಕಾರರು : ಪುರಂದರದಾಸರು

ರಂಗನ ನೋಡಿರೆ ರಾಜಕುವರ ನರ
ಸಿಂಗ ದೇವ ನಮ್ಮ ದೇವಕಿ ಸುತನ ||ಪ||

ಹಮ್ಮಿನ ತಾಯಿತ ತೋಳ ಭಾಪುರಿಯೊ
ಘಮ್ಮನೆ ಘಲ್ಲೆಂಬ ಗೆಜ್ಜೆಯ ಧ್ವನಿಯೊ
ಸುಮ್ಮಹಿಮನ ಕಿವಿಯಲ್ಲಿ ಚೌಕುಲಿಯೊ
ತಿಮ್ಮರಾಯ ನಿಟ್ಟ ಸೊಬಗಿನ ಬಗೆಯೊ  ||೧||

ಶುಕ್ರವಾರದ ಪೂಜೆಗೊಂಬವನ
ಸಕ್ಕರೆ ಪಾಲ್ ಮೊಸರು ಬೆಣ್ಣೆ ಮೆಲ್ಲುವನ
ಘಕ್ಕನೆ ಸುರರಿಗೆ ಅಮೃತವಿತ್ತವನ
ರಕ್ಕಸ ಕುಲವೈರಿ ರಾವಣಾಂತಕನ  ||೨||

ಪಾಪವಿನಾಶಿನಿ ಸ್ನಾನವ ಮಾಡಿ
ಪಾಪಗಳೆಲ್ಲವು ಬೇಗಬಿಟ್ಟೋಡಿ
ಈ ಪರಿ ದಿನ ದಿನ ಮೂರುತಿ ನೋಡಿ
ಶ್ರೀಪತಿ ಪುರಂದರ ವಿಠಲನ ಪಾಡಿ  ||೩||

Labels: ರಂಗನ ನೋಡಿರೆ ರಾಜಕುವರ, Rangana Nodire Rajakuvara, ಪುರಂದರದಾಸರು, Purandaradasaru

ಎರವಿನ ಸಿರಿಗೆ ಬಿಮ್ಮನೆ ಬೆರೆತರೆ : Eravina Sirige Bimmane Beretare

ಎರವಿನ ಸಿರಿಗೆ ಬಿಮ್ಮನೆ ಬೆರೆತರೆ

ಕೀರ್ತನಕಾರರು : ಪುರಂದರದಾಸರು
ರಾಗ : ಸೌರಾಷ್ಟ್ರ
ತಾಳ : ಅಟ್ಟ

ಎರವಿನ ಸಿರಿಗೆ ಬಿಮ್ಮನೆ ಬೆರೆತರೆ ನೀರ
ಕಡೆದರುಂಟೆ ಬೆಣ್ಣೆ ಜೀವವೆ
ಉರಗನ ಹೆಡೆಯ ನೆಳಲ ಸೇರಿದ ಕಪ್ಪೆ
ಸ್ಥಿರಕಾಲ ಬಾಳ್ವುದೆ ಜೀವವೆ                          ॥ಪ॥

ಸತಿ ಸುತರೆಂದು ನೆಚ್ಚಲು ಬೇಡ ಮನದೊಳು
ಹಿತವರೊಬ್ಬರ ಕಾಣೆ ಜೀವವೆ
ವೃಥಾ ನೀನು ಕೆಡಬೇಡ ಮರಣವು ತಪ್ಪದು
ನಾಥ ದಶಕಂಠಗಾದರು ಜೀವವೆ                    ॥೧॥

ಅಸೆ ಮಾಡಲು ಬೇಡ ಭಾಷೆ ತಪ್ಪಲು ಬೇಡನ್ಯ
ಸ್ತ್ರೀಸಂಗವು ಬೇಡ ಜೀವವೆ
ಏಸೇಸು ಜನ್ಮಾಂತರ ಕಳೆದುಳಿದರು
ಈ ಸಾವು ತಪ್ಪದು ಜೀವವೆ                           ॥೨॥

ಆನೆ ಕುದುರೆ ಮಂದಿ ಶಾನೆ ಭಂಡಾರವು
ಏನು ಪಡೆದರಿಲ್ಲ ಜೀವವೆ
ಮಾನ ಸಹ ಸರ್ವ ಹರಿಗೆ ಅರ್ಪಣ ಮಾಡಿ
ಪುನೀತನಾಗಿರು ಜೀವವೆ                             ॥೩॥

ಕೆರೆಯ ಕಟ್ಟಿಸು ಮತ್ತೆ ಪೂದೋಟ ಹಾಕಿಸು
ಸೆರೆಯ ಬಿಡಿಸಲದು ಪುಣ್ಯ ಜೀವವೆ
ಕರೆಯದೆ ಮನೆಗೆ ಬಂದವರಿಗನ್ನವ ನೀಡು
ಪರಲೋಕ ಸಾಧನವದು ಜೀವವೆ                  ॥೪॥

ಸತ್ಯವಂತರ ಸಂಗದೊಳಗೆ ಚರಿಸೆ ಮೃತ್ಯು
ಅತ್ತತ್ತಲಿರುವಳು ಜೀವವೆ
ಸತ್ಯವಂತ ಸಿರಿಪುರಂದರವಿಠಲನೆನ್ನು
ಸತ್ತು ಹುಟ್ಟುವುದಿಲ್ಲ ಜೀವವೆ                         ॥೫॥

Labels: ಎರವಿನ ಸಿರಿಗೆ ಬಿಮ್ಮನೆ ಬೆರೆತರೆ, Eravina Sirige Bimmane Beretare, ಪುರಂದರದಾಸರು, Purandaradasaru

ಊರದೇವರ ಮಾಡಬೇಕಣ್ಣ : Uradevara Madabekanna

ಊರದೇವರ ಮಾಡಬೇಕಣ್ಣ 

ಕೀರ್ತನಕಾರರು : ಪುರಂದರದಾಸರು
ರಾಗ : ನಾದನಾಮಕ್ರಿಯೆ
ತಾಳ : ಅಟ್ಟ

ಊರದೇವರ ಮಾಡಬೇಕಣ್ಣ ತನ್ನೊಳಗೆ ತಾನೆ                               ॥ಪ॥ ಊರ ದೇವರ ಮಾಡಿರೆಂದು ಸಾರುತಿದೆ ಶ್ರುತಿ ಇರುಳು ಹಗಲು

ದ್ವಾರಗಳೊಂಭತ್ತು ಮುಚ್ಚಿ ನಿಲ್ಲಿಸಿ ಭ್ರೂಮಧ್ಯದಲ್ಲಿ                            ॥ಅ.ಪ॥

ಎಷ್ಟು ಯುಗಗಳು ತೀರಿ ಹೋಯ್ತಣ್ಣ ದೇವರ ಮಾಡದೆ
ಕಷ್ಟದಿಂದ ನೊಂದೆ ಕಾಣಣ್ಣ
ಅಷ್ಟ ದಳದ ಕಂಭ ನಿಲ್ಲಿಸಿ ಕಟ್ಟಿ ಚಕ್ರಂಗಳನು ಹಾಕಿ
ಸೃಷ್ಟಿದೇವರ ತಂದು ನಿಲ್ಲಿಸಿ ದುಷ್ಟ ಕೋಣನ ಶಿರವ ತರಿದು                ॥೧॥

ಕಷ್ಟಕರ್ತವೆಂಬ ಕುರಿಯಣ್ಣ ಅದನ್ನು ತಂದು
ಕಟ್ಟಿ ತಲೆಯನು ಹೊಡೆಯಬೇಕಣ್ಣ
ಅಷ್ಟಮದದ ಕುರಿಗಳನ್ನು ಕಟ್ಟಿ ತಲೆಯನು ಚಂಡನಾಡಿ
ಅಟ್ಟಿ ತಿರುಗುವ ಕೋಳಿಯನ್ನು ಕುಟ್ಟಿ ಸೂರೆ ಹಾಕುತಲ್ಲಿ                      ॥೨॥

ನಾನು ಎಂಬುವ ಮೇಕೆ ಹೋತಣ್ಣ ಅದಕ್ಕೆ ತಕ್ಕ
ಜ್ಞಾನವೆಂಬುವ ಪೋತರಾಜಣ್ಣ
ಮಾನವೆಂಬ ಚಾಟಿ ಹೊಡೆದು ಹೀನ ಹೋತನ ಸೀಳಿ ಬಿಸುಟು
ಧ್ಯಾನ ಗುಡಿಸಲು ಸೂರೆಗೊಂಡು ತಾನೆ ಬೆಳಗುವ ಜ್ಯೋತಿ ನಿಲ್ಲಿಸಿ       ।೩॥

ನಾಳೆ ನೋಡೋಣ್ಣೆನ್ನಬೇಡಣ್ಣ ಕೇಳಣ್ಣ ನಿನ್ನ
ಬಾಳು ಅಸ್ಥಿರವೆಂದು ತಿಳಿಯಣ್ಣ
ಪಾಳ್ಯಗಾರನಂತೆ ಬಹನು ಬಾಳುವ ಕಾಲದಿ ಯಮನು
ಕೋಳಿ ಪಿಳ್ಳೆಯಾಡುವಾಗ ಹಾಳುಹದ್ದು ಒಯ್ಯುವಂತೆ                        ॥೪॥

ಹೆಂಡಿರು ಮಕ್ಕಳು ಸುಳ್ಳು ಕೇಳಣ್ಣ ನಿನ್ನ
ಮಂಡೆ ತುಂಬ ಬಳಗ ಕಾಣಣ್ಣ
ದಂಡಧಾರಿ ಯಮನು ಬಂದು ಮಂಡೆ ಮೇಲೆ ಹೊಯ್ಯುವಾಗ
ಹೆಂಡಿರು ಮಕ್ಕಳು ನಿನ್ನ ಕಂಡು ಭಂಗಬಿಡಿಸಬಲ್ಲರೇನಣ್ಣ                    ॥೫॥

ಸತ್ತ ಪೆಣವ ನೋಡುವಿಯಲ್ಲ ನೀ ಗಳಿಸಿದಂಥ
ಬುತ್ತಿನೋಡಿ ಉಬ್ಬುವಿಯಲ್ಲೊ
ಮೃತ್ಯುವಿನ ಬಾಯಿಯೊಳಗೆ ತುತ್ತು ಆಗಿ ಹೋಗಬೇಡ
ತೊತ್ತು ಆಗಿ ಗುರುವಿಗೆ ನೀ ಹತ್ತಿ ನೋಡೋ ಗುಡ್ಡವನು                      ॥೬॥

ಮುಂದೆ ಇಂಥ ಜನ್ಮ ಬರದಣ್ಣ ನೋಡಣ್ಣ ನಿನಗೆ
ಮಂದಮತಿಯು ಬೇಡ ಕಾಣಣ್ಣ
ಹಿಂದಿನ ಕಷ್ಟವ ಮರೆದು ಕಾಣಣ್ಣ
ತಂದೆ ಪುರಂದರವಿಠಲನ್ನ ಹೊಂದಲು ನೀ ಮುಕ್ತನಣ್ಣ                        ॥೭॥

Labels: ಊರದೇವರ ಮಾಡಬೇಕಣ್ಣ, Uradevara Madabekanna, ಪುರಂದರದಾಸರು, Purandaradasaru

ಅಂಜಿಕಿನ್ಯಾತಕಯ್ಯ ಸಜ್ಜನರಿಗೆ : Anjikinyatakayya Sajjanarige

ಅಂಜಿಕಿನ್ಯಾತಕಯ್ಯ ಸಜ್ಜನರಿಗೆ

ಕೀರ್ತನಕಾರರು : ಪುರಂದರದಾಸರು
ರಾಗ : ಕಲ್ಯಾಣಿ
ತಾಳ : ಅಟ್ಟ

ಅಂಜಿಕಿನ್ಯಾತಕಯ್ಯ ಸಜ್ಜನರಿಗೆ
ಭಯವು ಇನ್ಯಾತಕಯ್ಯ                                  ॥ಪ॥

ಸಂಜೀವರಾಯರ ಸ್ಮರಣೆ ಮಾಡಿದ ಮೇಲೆ         ॥ಅ.ಪ॥
ಕನಸಿಲಿ ಮನಸಿಲಿ ಕಳವಳವಾದರೆ
ಹನುಮನ ನೆನೆದರೆ ಹಾರಿಹೋಗದೆ ಭೀತಿ          ॥೧॥

ರೋಮ ರೋಮಕೆ  ಕೋಟಿ ಲಿಂಗವುದುರಿಸಿದ
ಭೀಮನ ನೆನೆದರೆ ಬಿಟ್ಟು ಹೋಗದೆ ಭೀತಿ           ॥೨॥

ಪುರಂದರವಿಠಲನ ಪೂಜೆಯ ಮಾಡುವ
ಗುರು ಮಧ್ವರಾಯರ ಸ್ಮರಣೆ ಮಾಡಿದ ಮೇಲೆ     ॥೩॥

Labels: ಅಂಜಿಕಿನ್ಯಾತಕಯ್ಯ ಸಜ್ಜನರಿಗೆ, Anjikinyatakayya Sajjanarige, ಪುರಂದರದಾಸರು, Purandaradasaru

ಅಂಬೆಗಾಲಿಕ್ಕುತಲಿ ಬಂದ ಗೋವಿಂದ : Ambegalikkkutali Banda Govinda

ಅಂಬೆಗಾಲಿಕ್ಕುತಲಿ ಬಂದ ಗೋವಿಂದ

ಕೀರ್ತನಕಾರರು : ಪುರಂದರದಾಸರು
ರಾಗ : ಧನ್ಯಾಸಿ
ತಾಳ : ಅಟ್ಟ

ಅಂಬೆಗಾಲಿಕ್ಕುತಲಿ ಬಂದ ಗೋವಿಂದ                 ॥ಪ॥

ಅಂಬುಜನಾಭ ದಯದಿಂದ ಮನೆಗೆ                    ॥ಅ.ಪ॥

ಜಲಚರ ಜಲವಾಸ ಧರಣಿಧರ ಮೃಗರೂಪ
ನೆಲನೆಳೆದು ಮೂರಡಿ ಮಾಡಿಬಂದ
ಕುಲನಾಶ ವನವಾಸ ನವನೀತ ಚೋರನಿವ
ಲಲನೆಯರ ವ್ರತಭಂಗ ವಾಹನ ತುರಂಗ             ॥೧॥

ಕಣ್ಣಬಿಡುವನು ತನ್ನ ಬೆನ್ನ ತಗ್ಗಿಸುವನು
ಮಣ್ಣು ಕೆದರಿ ಕೋರೆ ಬಾಯ ತೆರೆದು
ಚಿಣ್ಣ ಭಾರ್ಗವ ಲಕ್ಷ್ಮಣನನ್ನ ಬೆಣ್ಣೆಯಕಳ್ಳ
ಮಾನವ ಬಿಟ್ಟು ಕುದುರೆಯನೇರಿದ                      ॥೨॥

ನೀರ ಪೋಕ್ಕನು ಗಿರಿಯನೆಗಹಿ ಧರಣಿಯ ತಂದು
ನರಮೃಗ ಬಲಿಬಂಧ ಕೊರಳುಗೊಯಿಕ
ಶರಮುರಿದೊರಳೆಳೆದು ನಿರವಾಣಿ ಹಾಯ ಹತ್ತಿ
ಪುರಂದರವಿಠಲ ಮನೆಗೆ ತಾ ಬಂದ                    ॥೩॥

Labels: ಅಂಬೆಗಾಲಿಕ್ಕುತಲಿ ಬಂದ ಗೋವಿಂದ, Ambegalikkkutali Banda Govinda,
ಪುರಂದರದಾಸರು, Purandaradasaru

ಏಕೆ ಚಿಂತಿಸುತಿದ್ದಿ ಕೋತಿ ಮನವೆ : Eke Chintisutiddi Koti Manave

ಏಕೆ ಚಿಂತಿಸುತಿದ್ದಿ ಕೋತಿ ಮನವೆ

ಕೀರ್ತನಕಾರರು : ಪುರಂದರದಾಸರು 
ರಾಗ : ಭೈರವಿ 
ತಾಳ : ಝಂಪೆ 

ಏಕೆ ಚಿಂತಿಸುತಿದ್ದಿ ಕೋತಿ ಮನವೆ                      ।।ಪ॥ 

ಲೋಕನಾಥನ ನೆನೆದು ಸುಖಿಯಾಗು ಮನವೆ       ।।ಅ.ಪ॥ 

ಹುಟ್ಟುವಾಗಾಪತ್ತಿಗಾರು ಚಿಂತಿಸಿದವರು 
ಕಟ್ಟ ಕಡೆಯಲಿ ಲಯಕೆ ಯಾರ ಚಿಂತೆ 
ನಟ್ಟನಡುವಿನ ಬಾಳಿಗೇಕೆ ಚಿಂತಿಸುತಿರುವೆ 
ಹುಟ್ಟಿದವರಿಗೆ ಮೂರು ಬಟ್ಟಿಲ್ಲವೆ ಮರುಳೆ             ।।೧।।

ನವಿಲಿಂಗೆ ಚಿತ್ರಪತ್ರವನಾರು ಬರೆದವರು 
ಪವಳದಾ ಲತೆಗೆ ಕೆಂಪಿಟ್ಟವರು ಯಾರು 
ಸವಿಮಾತಿನರಗಿಣಿಗೆ ಹಸುರು ಬಳಿದವರಾರು 
ಆವ ಮಾಡಿದವ ನಮ್ಮ ಮರೆತಿಹನೆ ಮರುಳೆ       ।।೨।।

ಬಸಿರೊಳಗೆ ಶಿಶುವನು ಆದಾರು ಸಲಹಿದವರು 
ವಸುಧೆಯನು ಬಸಿರೊಳಿಟ್ಟಿರುವರಾರು 
ಹಸಗೆಡದೆ ನಮ್ಮ ಶ್ರೀಪುರಂದರವಿಠಲನ 
ಬಿಸಜಪಾದವ ನಂಬಿ ಸುಖಿಯಾಗು ಮರುಳೆ         ।।೩।। 

Labels: ಏಕೆ ಚಿಂತಿಸುತಿದ್ದಿ ಕೋತಿ ಮನವೆ, Eke Chintisutiddi Koti Manave, ಪುರಂದರದಾಸರು, Purandaradasaru 

ಕೇಳಲೊಲ್ಲನೆ ಎನ್ನ ಮಾತನು : Kelalollane Enna Matanu

ಕೇಳಲೊಲ್ಲನೆ ಎನ್ನ ಮಾತನು

ಕೀರ್ತನಕಾರರು : ಪುರಂದರದಾಸರು

ಕೇಳಲೊಲ್ಲನೆ ಎನ್ನ ಮಾತನು ರಂಗ   ॥ಪ॥

ಕಾಳಿಯಮರ್ದನ ಕೃಷ್ಣಗೆ
ಪೇಳೆ ಗೋಪ್ಯಮ್ಮ ಬುದ್ಧಿ        ॥ಅ.ಪ॥

ಬಿಟ್ಟ ಕಂಗಳ ಮುಚ್ಚಲೊಲ್ಲನೆ ಬೇಗ
ಬೆಟ್ಟಕ್ಕೆ ಬೆನ್ನೊಡ್ಡಿ ನಿಂತನೆ
ಸಿಟ್ಟಿಸಿ ಕೋರೆ ಹಲ್ಲ ತೋರ್ದನೆ ಅತಿ
ಗಟ್ಟಿ ಉಕ್ಕಿನ ಕಂಭವನೊಡೆದು ಬಂದನೆ ॥೧॥

ಮೂರಡಿ ಭೂಮಿಯ ಬೇಡಿದನೆ ಅರಸರ
ಬೇರ ಕಡಿಯೆ ಕೊಡಲಿ ತಂದನೆ
ನಾರ ಸೀರೆಯನಿಟ್ಟುಕೊಂಡನೆ ಬೇಗ
ಚೋರತನದಿ ಹರವಿ ಹಾಲ ಕುಡಿದನಮ್ಮ  ॥೨॥

ಬತ್ತಲೆ ನಾರಿಯರನಪ್ಪಿದ ಬೇಗ
ಉತ್ತಮ ಅಶ್ವವ ಹತ್ತಿದ
ಹತ್ತವತಾರವ ತಾಳಿದ ನಮ್ಮ
ದಿಟ್ಟ ಮೂರುತಿ ಪುರಂದರ ವಿಠಲ   ॥೩॥

Labels: ಕೇಳಲೊಲ್ಲನೆ ಎನ್ನ ಮಾತನು, Kelalollane Enna Matanu, ಪುರಂದರದಾಸರು, Purandaradasaru

ಈಸಬೇಕು ಇದ್ದು ಜಯಿಸಬೇಕು : Isabeku Iddu Jayisabeku

ಈಸಬೇಕು ಇದ್ದು ಜಯಿಸಬೇಕು

ಕೀರ್ತನಕಾರರು : ಪುರಂದರದಾಸರು
ರಾಗ : ಧನ್ಯಾಸಿ
ತಾಳ : ಆದಿ

ಈಸಬೇಕು ಇದ್ದು ಜಯಿಸಬೇಕು
ಹೇಸಿಗೆ ಸ೦ಸಾರದಲ್ಲಿ ಆಸೆ ಲೇಶ ಇಡದ್ಹಾ೦ಗೆ     ||ಪ||

ತಾಮರಸ ಜಲದ೦ತೆ
ಪ್ರೇಮವಿಟ್ಟು ಭವದೊಳು
ಸ್ವಾಮಿ ರಾಮನೆನುತ ಪಾಡಿ
ಕಾಮಿತ ಕೈಗೊ೦ಬರೆಲ್ಲ                                ||೧||

ಗೇರು ಹಣ್ಣಿನಲ್ಲಿ ಬೀಜ
ಸೇರಿದ೦ತೆ ಸ೦ಸಾರದಿ
ಮೀರೀ ಆಸೆ ಮಾಡದಂತೆ
ಧೀರ ಕೃಷ್ಣನ ಭಕುತರೆಲ್ಲ                               ||೨||

ಮಾ೦ಸದಾಸೆಗೆ ಮತ್ಸ್ಯ ಸಿಲುಕಿ
ಹಿ೦ಸೆಪಟ್ಟ ಪರಿಯಂತೆ
ಮೋಸ ಹೋಗದ್ಹಾ೦ಗೆ ಜಗ-
ದೀಶ ಪುರಂದರವಿಠಲನ ನೆನೆದು                    ||೩||

Labels: ಈಸಬೇಕು ಇದ್ದು ಜಯಿಸಬೇಕು, Isabeku Iddu Jayisabeku, ಪುರಂದರದಾಸರು, Purandaradasaru

ಗುರುವಾರ, ಸೆಪ್ಟೆಂಬರ್ 12, 2013

ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ, Sharanembe Vani Poreye Kalyani

ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ

ಕೀರ್ತನಕಾರರು : ಪುರಂದರದಾಸರು
ರಾಗ : ಕಲ್ಯಾಣಿ

ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ                                 ||ಪ||

ವಾಗಭಿಮಾನಿ ವರ ಬ್ರಹ್ಮಾಣಿ ಸುಂದರವೇಣಿ ಸುಚರಿತ್ರಾಣಿ   ||ಅ.ಪ||

ಜಗದೊಳು ನಿಮ್ಮ ಪೊಗಳುವೆನಮ್ಮ
ಹರಿಯ ತೋರಿಸೆಂದು ಪ್ರಾರ್ಥಿಪೆನಮ್ಮ                            ||೧||

ಪಾಡುವೆ ಶ್ರುತಿಯ ಬೇಡುವೆ ಮತಿಯ
ಪುರಂದರವಿಠಲನ ಸೋದರ                                         ||೨||

Labels: ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ, Sharanembe Vani Poreye Kalyani, ಪುರಂದರದಾಸರು, Purandaradasaru

ಕೃಷ್ಣ ಬಾರೊ ಕೃಷ್ಣ ಬಾರೋ : Krishna Baro Krishna Baro

ಕೃಷ್ಣ ಬಾರೊ ಕೃಷ್ಣ ಬಾರೋ

ಕೀರ್ತನಕಾರರು : ಪುರಂದರದಾಸರು

ಕೃಷ್ಣ ಬಾರೊ ಕೃಷ್ಣ ಬಾರೋ
ಕೃಷ್ಣಯ್ಯ ನೀ ಬಾರಯ್ಯ                             ||ಪ||

ಸಣ್ಣ ಹೆಜ್ಜೆಯನಿಟ್ಟು ಗೆಜ್ಜೆನಾದಗಳಿಂದ           ||ಅ||

ಮನ್ಮಥಜನಕನೆ ಬೇಗನೆ ಬಾರೊ
ಕಮಲಾಪತಿ ನೀ ಬಾರೊ
ಅಮಿತಪರಾಕ್ರಮ ಶಂಕರ ಬಾರೊ
ಕಮನೀಯ ಗಾತ್ರನೆ ಬಾರಯ್ಯ ದೊರೆಯೆ       ।।೧।।

ಸುರುಳು ಕೇಶಗಳ ಒಲಿವ ಅಂದ
ಭರದ ಕಸ್ತೂರಿ ತಿಲಕದ ಚಂದ
ಶಿರದಿ ಒಪ್ಪುವ ನವಿಲುಕಣ್ಗಳಿಂದ
ತರತರದ ಆಭರಣಗಳ ಧರಿಸಿ ನೀ ಬಾರೊ      ।।೨।।

ಹಾಲುಬೆಣ್ಣೆಗಳ ಕೈಯಲಿ ಕೊಡುವೆ
ಮೇಲಾಗಿ ಭಕ್ಷ್ಯಗಳ ಮುಚ್ಚಿಟ್ಟು ತರುವೆ
ಜಾಲ ಮಾಡದೆ ಬಾರಯ್ಯ ಮರಿಯೆ
ಬಾಲ ಎನ್ನ ತಂದೆ ಪುರಂದರವಿಠಲ                ।।೩।।

Labels: ಕೃಷ್ಣ ಬಾರೊ ಕೃಷ್ಣ ಬಾರೋ, Krishna Baro Krishna Baro, ಪುರಂದರದಾಸರು, Purandaradasaru

ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿ : Hyange Bareditto Prachinadalli

ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿ

ಕೀರ್ತನಕಾರರು : ಪುರಂದರದಾಸರು
ರಾಗ : ಮೋಹನ
ತಾಳ : ಛಾಪು

ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿ
ಹಾಂಗೆ ಇರಬೇಕು ಸಂಸಾರದಲ್ಲಿ           ||ಪ||

ಪಕ್ಷಿ ಅಂಗಳದಲ್ಲಿ ಬಂದು ಕೂತಂತೆ
ಆ ಕ್ಷಣದಲ್ಲಿ ಅದು ಹಾರಿಹೋದಂತೆ        ||೧||

ಸಂತೆ ನೆರೆಯಿತು ನಾನಾ ಪರಿ
ತಿರುಗಿ ಹಿಡಿಯಿತು ತಮ್ಮ ತಮ್ಮ ದಾರಿ   ||೨||

ಆಡುವ ಮಕ್ಕಳು ಮನೆಯ ಕಟ್ಟಿದರು
ಆಟ ಸಾಕೆಂದು ಮುರಿದೋಡಿದರು         ||೩||

ವಸತಿಕಾರನು ವಸತಿಗೆ ಬಂದಂತೆ
ಹೊತ್ತಾರೆದ್ದು ಹೊರಟು ಹೋದಂತೆ        ||೪||

ಸಂಸಾರ ಪಾಶವ ನೀನೇ ಬಿಡಿಸಯ್ಯ
ಕಂಸಾರಿ ಪುರಂದರವಿಠ್ಠಲರಾಯ           ||೫||

Labels: ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿ, Hyange Bareditto Prachinadalli, ಪುರಂದರದಾಸರು, Purandaradasaru

ಬುಧವಾರ, ಸೆಪ್ಟೆಂಬರ್ 11, 2013

ವೆಂಕಟರಮಣನೆ ಬಾರೋ : Venkataramanane Baro

ವೆಂಕಟರಮಣನೆ ಬಾರೋ

ಕೀರ್ತನಕಾರರು : ಪುರಂದರದಾಸರು
ರಾಗ : ನಾಟಕುರುಂಜಿ
ತಾಳ : ರೂಪಕ

ವೆಂಕಟರಮಣನೆ ಬಾರೋ ಶೇಷಾಚಲವಾಸನೆ ಬಾರೋ              ||ಪ||

ಪಂಕಜನಾಭ ಪರಮ ಪವಿತ್ರ ಶಂಕರ ಮಿತ್ರನೇ ಬಾರೋ              ||ಅ.ಪ||

ಮುದ್ದು ಮುಖದ ಮಗುವೆ ನಿನಗೆ ಮುತ್ತು ಕೊಡುವೆನು ಬಾರೋ
ನಿರ್ದಯವೇಕೋ ನಿನ್ನೊಳಗೆ ನಾನು ಪೊಂದಿದ್ದೇನು ಬಾರೋ         ||೧||

ಮಂದರ ಗಿರಿಯನೆತ್ತಿದ ಆನಂದ ಮೂರ್ತಿಯೇ ಬಾರೋ
ನಂದನ ಕಂದ ಗೋವಿಂದ ಮುಕುಂದ ಇಂದಿರೆಯರಸನೆ ಬಾರೋ    ||೨||

ಕಾಮನಯ್ಯ ಕರುಣಾಳು ಶ್ಯಾಮಲ ವರ್ಣನೆ ಬಾರೋ
ಕೋಮಾಳಾಂಗ ಶ್ರೀಪುರಂದರ ವಿಠಲನೆ ಸ್ವಾಮಿರಾಯನೆ ಬಾರೋ  ||೩||

Labels: ವೆಂಕಟರಮಣನೆ ಬಾರೋ, Venkataramanane Baro, ಪುರಂದರದಾಸರು, Purandaradasaru

ವೀರ ಹನುಮ ಬಹು ಪರಾಕ್ರಮಾ : Veera Hanuma Baru Parakrama

ವೀರ ಹನುಮ ಬಹು ಪರಾಕ್ರಮಾ

ಕೀರ್ತನಕಾರರು : ಪುರಂದರದಾಸರು
ರಾಗ : ರೇಗುಪ್ತಿ
ತಾಳ : ಅಟ್ಟ

ವೀರ ಹನುಮ ಬಹು ಪರಾಕ್ರಮಾ                                   ||ಪ||

ಸುಜ್ಞಾನವಿತ್ತು ಪಾಲಿಸೆನ್ನ ಜೀವರೋತ್ತಮ                        ||ಅ.ಪ||

ರಾಮ ದೂತನೆನೆಸಿಕೊಂಡೆ ನೀ
ರಾಕ್ಷಸರ ವನವನೆಲ್ಲ ಕಿತ್ತು ಬಂದೆ ನೀ
ಜಾನಕಿಗೆ ಮುದ್ರೆ ಇತ್ತು ಜಗತಿಗೆಲ್ಲ ಹರುಷವಿತ್ತು
ಚೂಡಾಮಣಿಯ ರಾಮಗಿತ್ತು ಲೋಕಕೆ ಮುತ್ತೆನಿಸಿಬರುವ     ||೧||

ಗೋಪಿಸುತನ ಪಾದಪೂಜಿಸಿ
ಗದೆಯ ಧರಿಸಿ ಬಕಾಸುರನ ಸಂಹರಿಸಿದೆ
ದ್ರೌಪದಿಯ ಮೊರೆಯ ಕೇಳಿ ಮತ್ತೆ ಕೀಚಕನ್ನ ಕೊಂದು
ಭೀಮನೆಂಬ ನಾಮ ಧರಿಸಿ ಸಂಗ್ರಾಮ ಧೀರನಾಗಿ ಜಗದಿ      ||೨||

ಮಧ್ಯಗೆಹನಲ್ಲಿ ಜನಿಸಿ ನೀ
ಬಾಲ್ಯದಲ್ಲಿ ಮತ್ಸರಿಯ ರೂಪಗೊಂಡೆ ನೀ
ಸತ್ಯವತಿಯ ಸುತನ ಭಜಿಸಿ ಸಮ್ಮುಖದಿ ಭಾಷ್ಯ ಮಾಡಿ
ಸಜ್ಜನರ ಪೊರೆವ ಮುದ್ದು ಪುರಂದರವಿಠಲನ ದಾಸ             ||೩||

Labels: ವೀರ ಹನುಮ ಬಹು ಪರಾಕ್ರಮಾ, Veera Hanuma Baru Parakrama, ಪುರಂದರದಾಸರು, Purandaradasaru

ವೆಂಕಟೇಶ ಬೇಡಿಕೊಂಬೆ : Venkatesha Bedikombe

ವೆಂಕಟೇಶ ಬೇಡಿಕೊಂಬೆ

ಕೀರ್ತನಕಾರರು : ಪುರಂದರದಾಸರು

ವೆಂಕಟೇಶ ಬೇಡಿಕೊಂಬೆ ಕೃಪೆಯ ಪಾಲಿಸೋ
ಬ್ರಹ್ಮಶಂಕರಾದಿ ವಂದ್ಯ ಎನಗೆ ಮುಕ್ತಿ ತೋರಿಸೊ    ||ಪ||

ನಷ್ಟ ಮೊದಲಾದಂಥ ಕಷ್ಟ ಬಿಡಿಸೊ
ನಿನ್ನ ಪಟ್ಟದ ರಾಣಿಗೆ ಹೇಳಿ ಪದವಿ ಕೊಡಿಸೊ
ಇಷ್ಟ ಭಕ್ತಜನರೊಳು ಎನ್ನ ಸೇರಿಸೊ
ಈ ಸೃಷ್ಟಿಯೊಳು ನಿನ್ನ ದಾಸಾನು ದಾಸನೆನಿಸೊ       ||೧||

ಉಟ್ಟು ಉಂಡು ಮಿಕ್ಕಿದ್ದೆಲ್ಲ ಎನಗೆ ಹಾಕಿಸೊ
ಪೊಂಬಟ್ಟಲೊಳಗಿನ ಹಾಲು ಉಚ್ಚಿಷ್ಟ ಹಾಕಿಸೊ
ಗಟ್ಯಾಗಿ ಸಕ್ಕರೆ ತುಪ್ಪ ರೊಟ್ಟಿ ಉಣ್ಣಿಸೊ
ಮುಂದೆ ಹುಟ್ಟಿ ಇಹ ಜನ್ಮಂಗಳ ಎನಗೆ ಬಿಡಿಸೊ       ||೨||

ಕಿಟ್ಟಗಟ್ಟಿದ ಕಬ್ಬಿಣಕ್ಕೆ ಪುಟವ ಹಾಕಿಸೊ
ಉತ್ಕೃಷ್ಟ ಬಂಗಾರದೊಳು ಎನ್ನ ಸೇರಿಸೊ
ಬೆಟ್ಟಿಗೆ ಉಂಗುರ ಮಾಡಿ ಎನ್ನ ಧರಿಸೊ ಸ್ವಾಮಿ
ದಿಟ್ಟ ಪುರಂದರ ವಿಠಲನೆ ದಯದಿ ಪಾಲಿಸೊ          ||೩||

Labels: ವೆಂಕಟೇಶ ಬೇಡಿಕೊಂಬೆ, Venkatesha Bedikombe, ಪುರಂದರದಾಸರು, Purandaradasaru

ಲಂಬೋದರ ಲಕುಮಿ ಕರಾ : Lambodara Lakumi Kara

ಲಂಬೋದರ ಲಕುಮಿ ಕರಾ

ಕೀರ್ತನಕಾರರು : ಪುರಂದರದಾಸರು
ರಾಗ : ಮಲಹರಿ
ತಾಳ : ರೂಪಕ

ಲಂಬೋದರ ಲಕುಮಿ ಕರಾ ಅಂಬಾ ಸುತ ಅಮರ ವಿನುತ         ||ಪ||

ಶ್ರೀ ಗಣನಾಥ ಸಿಂಧೂರ ವರ್ಣ ಕರುಣ ಸಾಗರ ಕರಿ ವಾದನ      ||೧||

ಸಿದ್ಧ ಚರಣ ಗಣ ಸೇವಿತ ಸಿದ್ಧಿ ವಿನಾಯಕ ತೇ ನಮೋ ನಮೋ   ||೨||

ಸಕಲ ವಿದ್ಯಾ ಆದಿ ಪೂಜಿತ ಸರ್ವೋತ್ತಮ ತೇ ನಮೋ ನಮೋ  ||೩||

Labels: ಲಂಬೋದರ ಲಕುಮಿ ಕರಾ, Lambodara Lakumi Kara, ಪುರಂದರದಾಸರು, Purandaradasaru

ವಂದಿಸುವದಾದಿಯಲಿ ಗಣನಾಥನ : Vandisuvadadiyali Gananathana

ವಂದಿಸುವದಾದಿಯಲಿ ಗಣನಾಥನ

ಕೀರ್ತನಕಾರರು : ಪುರಂದರದಾಸರು
ರಾಗ : ನಾಟ
ತಾಳ : ಖಂಡಛಾಪು

ವಂದಿಸುವದಾದಿಯಲಿ ಗಣನಾಥನ                    ||ಪ||

ಸಂದೇಹ ಸಲ್ಲ ಶ್ರೀ ಹರಿಯಾಜ್ಞೆಯಿದಕುಂಟು         ||ಅ.ಪ||

ಹಿಂದೆ ರಾವಣ ತಾನು ವಂದಿಸದೆ ಗಜಮುಖನ
ನಿಂದು ತಪವನು ಕೈದು ವರ ಪಡೆಯಲು
ಒಂದು ನಿಮಿಷದಿ ಬಂದು ವಿಘ್ನವನು ಆಚರಿಸಿ
ತಂದ ವರಗಳನೆಲ್ಲ ಧರೆಗೆ ಇಳಿಸಿದನು                ||೧||

ಅಂದಿನಾ ಬಗೆಯರಿತು ಬಂದು ಹರಿ ಧರ್ಮಜಗೆ
ಮುಂದೆ ಗಣಪನ ಪೂಜಿಸೆಂದು ಪೇಳೆ
ಒಂದೇ ಮನದಲಿ ಬಂದು ಪೂಜಿಸಲು ಗಣನಾಥ
ಹೊಂದಿಸಿದ ನಿರ್ವಿಘ್ನದಿಂದ ರಾಜ್ಯವನು               ||೨||

ಇಂದು ಜಗವೆಲ್ಲ ಉಮೆನಂದನನ ಪೂಜಿಸಲು
ಚೆಂದದಿಂದಲಿ ಸಕಲ ಸಿದ್ಧಿಗಳನಿತ್ತು
ತಂದೆ ಸಿರಿಪುರಂದರವಿಠಲನ ಸೇವೆಯೊಳು
ಬಂದ ವಿಘ್ನವ ಕಳೆದಾನಂದವನು ಕೊಡುವ            ||೩||

Labels: ವಂದಿಸುವದಾದಿಯಲಿ ಗಣನಾಥನ, Vandisuvadadiyali Gananathana, ಪುರಂದರದಾಸರು, Purandaradasaru

ರಾಮ ಮಂತ್ರವ ಜಪಿಸೋ : Rama Mantrava Japiso

ರಾಮ ಮಂತ್ರವ ಜಪಿಸೋ

ಕೀರ್ತನಕಾರರು : ಪುರಂದರದಾಸರು
ರಾಗ : ಜೌನ್ ಪುರಿ
ತಾಳ : ಆದಿ

ರಾಮ ಮಂತ್ರವ ಜಪಿಸೋ ಹೇ ಮನುಜ                 ||ಪ||

ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ
ಸೋಮಶೇಖರ ತನ್ನ ಭಾಮೆಗೆ ಪೇಳಿದ ಮಂತ್ರ       ||ಅ.ಪ||

ಕುಲಹೀನನಾದರು ಕೂಗಿ ಜಪಿಸುವ ಮಂತ್ರ
ಸಲೆ ಬೀದಿ ಬೀದಿಯೊಳು ನುಡಿವ ಮಂತ್ರ
ಹಲವು ಪಾಪಂಗಳ ಹತಗೊಳಿಸುವ ಮಂತ್ರ
ಸುಲಭದಿಂದಲಿ ಸ್ವರ್ಗ ಸೂರೆ ಕೊಂಬುವ ಮಂತ್ರ      ||೧||

ಜ್ಞಾನನಿಧಿ ನಮ್ಮ ಆನಂದತೀರ್ಥರು
ಸಾನುರಾಗದಿ ನಿತ್ಯ ಸೇವಿಪ ಮಂತ್ರ
ಭಾನುಕುಲಾಂಬುಧಿ ಸೋಮನೆನಿಪ ನಮ್ಮ
ದೀನರಕ್ಷಕ ಪುರಂದರವಿಠಲನ ಮಂತ್ರ                  ||೨||

Labels: ರಾಮ ಮಂತ್ರವ ಜಪಿಸೋ, Rama Mantrava Japiso, ಪುರಂದರದಾಸರು, Purandaradasaru