ಕಾಖಂಡಕಿ ಕೃಷ್ಣರಾಯರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕಾಖಂಡಕಿ ಕೃಷ್ಣರಾಯರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಆಗಸ್ಟ್ 19, 2013

ಹೋಗಲಿ ಬ್ಯಾಡವೋ ಕೃಷ್ಣಾ : Hogali Byadavo Krishna

ಹೋಗಲಿ ಬ್ಯಾಡವೋ ಕೃಷ್ಣಾ

ಕೀರ್ತನಕಾರರು : ಕಾಖಂಡಕಿ ಕೃಷ್ಣರಾಯರು  
ರಾಗ :  ಭೈರವಿ  
ತಾಳ : ದಾದರಾ

ಹೋಗಲಿ ಬ್ಯಾಡವೋ ಕೃಷ್ಣಾ ಹೋಗಲಿ ಬ್ಯಾಡವೋ
ಗೋ ಗೋಪಾಲರ ಗೋಪಿಯರೆಲ್ಲರ ತೊರೆದು ಪ್ರೀತಿಯ ಜರೆದು       ॥ಪ॥

ಚಿಕ್ಕತನಂಡಿ ನಿನ್ನಂಘ್ರಿಗೆ ಸೋತೆವು ಮಾನವ ಒಪ್ಪಿಸಿ ತನುವಾ 
ಠಕ್ಕಿಸಿ ಗಂಡರ ಮಕ್ಕಳ ಶೀಲದಿ ಕೆಟ್ಟು ಲಜ್ಜಿಯ ಬಿಟ್ಟು 
ಅಕ್ಕರದಲಿ ಕೊಳಲ ಧ್ವನಿಗೆ ಮರುಳಾಗಿ ನೆರೆದೇವು ಬಾಗಿ 
ನಿಕ್ಕರುಣಿಪ ತ್ಯಜಿಸೆಮ್ಮನು ಮಥುರೆಗೆ ಪೋಪುದುಚಿತವೆ ಭೂಪಾ       ।।೧।।

ರಾಸಕ್ರೀಡೆಗೆ ಇಬ್ಬರ ನಡುವಣ ನಿಂದೇ ಬಹು ರೂಪಿಂದೇ 
ಆ ಸತಿಯರ ಹೆಗಲಿಗಿರಿಸುತ ಕೈಯವ ಕುಣಿದೇ ಪಾಡುತ ನಲಿದೆ 
ಆಶೆಯ ಪೂರಿಸೆ ಬಾಲೆರಾನೀ ಷಣ್ಮಾಸಾದೋರಿದೆ ಈಶಾ 
ಬ್ಯಾಸರವಾಯಿತೆ ನಮ್ಮೊಳು ಸಾರಂಗ ಪಾಣಿ ದೀನಾಭಿಮಾನೀ         ।।೨।।

ಏನೆಂದೇಳಲಿ ಚಿತ್ಸುಖದಾಟವು ಇಂದೇ ಒಂದೆರಡೆಂದೇ 
ನೀನಿಲ್ಲದ ಗೋಕುಲವಾರಣ್ಯದ ಪರಿಯ ಎಂಬುದರಿಯಾ 
ನಾ ನಡು ದಾರಿಗೆ ಬೀಳುವೆ ರಥದಿಂ ತುಳಿಸು ಜೀವನಗ ಗಳಿಸು 
ಶ್ರೀನಿಧಿ ಗುರು ಮಹಿಪತಿಪ್ರಭು ಬಿಡದಿರು ಕೈಯ್ಯ ವಿಧಿಸ್ಮರರೈಯಾ     ।।೩।।

Labels: ಹೋಗಲಿ ಬ್ಯಾಡವೋ ಕೃಷ್ಣಾ , Hogali Byadavo Krishna, ಕಾಖಂಡಕಿ ಕೃಷ್ಣರಾಯರು,  Kakhandaki Krishnarayaru

ಸೋಮವಾರ, ಆಗಸ್ಟ್ 5, 2013

ಮೋಹ ಬೇಡಣ್ಣಾ ಸಂಸಾರದೊಳು : Moha Bedanna Samsaradolu

ಮೋಹ ಬೇಡಣ್ಣಾ ಸಂಸಾರದೊಳು

ಕೀರ್ತನಕಾರರು : ಕಾಖಂಡಕಿ ಕೃಷ್ಣರಾಯರು  
ರಾಗ :  ಮಾಂಡ 
ತಾಳ : ಕೇರವಾ 

ಮೋಹ ಬೇಡಣ್ಣಾ ಸಂಸಾರದೊಳು                ।।ಪ।।

ಎರವಿನ ಕಂಗಳು ಎರವಿನ ಶ್ರುತಿಯು 
ಎರವಿನ ನಾಸಿಕ ಎರವಿನ ನಾಲಿಗೆ 
ಎರವಿನ ಕರಗಳು ಎರವಿನ ಪಾದವು 
ಎರವಿನ ಬುದ್ಧಿ ಎರವಿನ ಬದುಕು                   ।।೧।।

ಎರವಿನ ಹಣಗಳು ಎರವಿನ ಭೂಷಣ 
ಎರವಿನ ವಾಹನ ಎರವಿನ ಸಿರಿ ಸುಖ 
ಎರವಿನ  ತರುಣಿಯರು ಎರವಿನ ಸುತರು 
ಎರವಿನ ಬಂಧು ಎರವಿನ ಬಳಗಾ                 ।।೨।।

ಹರಿಯೇ ಕರ್ತನು ಹರಿಸೂತ್ರಾತ್ಮನು 
ಗುರುಮಹಿಪತಿ ಪ್ರಭು ಹರಿ ಪರವೆಂದು 
ಹರಿಯನೆ ಸ್ಮರಿಸಿ ಹರಿಯನೇ ಧ್ಯಾನಿಸಿ
ಹರಿಯನೆ ಪೂಜಿಸಿ ಹರಿ ಪದಹೊಂದು             ।।೩।।

Labels: ಮೋಹ ಬೇಡಣ್ಣಾ ಸಂಸಾರದೊಳು, Moha Bedanna Samsaradolu, ಕಾಖಂಡಕಿ ಕೃಷ್ಣರಾಯರು,  Kakhandaki Krishnarayaru

ಮಂಗಳವಾರ, ಜುಲೈ 23, 2013

ಅರಿತುಕೊಳ್ಳಿರೊ ಬ್ಯಾಗ : Aritukolliro Byaga

ಅರಿತುಕೊಳ್ಳಿರೊ ಬ್ಯಾಗ 

ಕೀರ್ತನಕಾರರು : ಕಾಖಂಡಕಿ ಕೃಷ್ಣರಾಯರು 
ರಾಗ : ಕಾಪಿ 
ತಾಳ : ತೀನ್ ತಾಲ 

ಅರಿತುಕೊಳ್ಳಿರೊ ಬ್ಯಾಗ ಹರಿಯ ನಾಮಾಮೃತ 
ದೊರಕುವುದಲ್ಲಿದು ನೋಡಿ ಸರ್ಕನೆ ಸರ್ವರಿಗೆಲ್ಲಾ           ।।ಪ।।

ಗುರುಕರುಣ ಕೃಪೆಯಿಂದ ಪರಮ ದಿವ್ಯಾಮೃತವು 
ಸುರಿಸುರಿದು ಚಪ್ಪರಿದು ಸೂರ್ಯಾಡಿ ಸಾರಸವ              ।।೧।।

ಅನುದಿನ ಸೇವಿಸುವ ಅನುಭವಿಗಳೂಟ 
ಏನೆಂದುಸುರಲಿ ನಾ ಆನಂದೋಬ್ರಹ್ಮವ                       ।।೨।।

ಎಂದಿಗೆ ಬಾಹುದು ನೋಡಿ ಸಂದಿಸಿ ಮಾನವಜನ್ಮ 
ಚಂದಮಾಡಿಕೊಳ್ಳಿರೋ ಬಂದ ಕೈಯಲಿ ಬೇಗ                 ।।೩।।

ಆಲಸ್ಯ ಮಾಡಬ್ಯಾಡಿ ವಾಲ್ಗೈಸಿಕೊಳ್ಳಲಿಕ್ಕೆ 
ಸುಲಲಿತವಾಗಿಹುದು ತಿಳಿದು ಕೊಂಬವರಿಗೆ                    ।।೪।।

ಇರುಳ್ಹಗಲ ಪೂರ್ಣ ಸುರವುತಿಹ ಅಮೃತ 
ತರಳ ಮಹಿಪತಿ ಪ್ರಾಣ ಹೊರೆವ ಸಂಜೀವನ                   ।।೫।।

Labels: ಅರಿತುಕೊಳ್ಳಿರೊ ಬ್ಯಾಗ, Aritukolliro Byaga, ಕಾಖಂಡಕಿ ಕೃಷ್ಣರಾಯರು,  Kakhandaki Krishnarayaru