ಜಗನ್ನಾಥದಾಸರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಜಗನ್ನಾಥದಾಸರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಸೆಪ್ಟೆಂಬರ್ 11, 2013

ರಾಯಬಾರೊ ತಂದೆತಾಯಿ ಬಾರೊ : Raya Baro Tande Tayi Baro

ರಾಯಬಾರೊ ತಂದೆತಾಯಿ ಬಾರೊ

ಕೀರ್ತನಕಾರರು : ಜಗನ್ನಾಥದಾಸರು
ರಾಗ : ಪೂರ್ವಿ
ತಾಳ : ಆದಿ

ರಾಯಬಾರೊ ತಂದೆತಾಯಿ ಬಾರೊ
ನಮ್ಮ ಕಾಯಿ ಬಾರೊ
ಮಾಯಿಗಳ ಮರ್ದಿಸಿದ ರಾಘವೇಂದ್ರ                          ||ಪ||

ವಂದಿಪ ಜನರಿಗೆ ಮಂದಾರ ತರುವಂತೆ
ಕುಂದದಭೀಷ್ಟೆಯ ಸಲಿಸುತಿಪ್ಪ ಸುರಮುನಿ
ಮಂದನ ಮತಿಗೆ ರಾಘವೇಂದ್ರ ರಾಯಬಾರೊ               ||೧||

ಭಾಸುರಚರಿತನೆ ಭೂಸುರವಂದ್ಯನೆ
ಶ್ರೀಸುಧೀಂದ್ರಾರ್ಯರ ವರಪುತ್ರನೆನಿಸಿದ
ದೇಶಿಕರೊಡೆಯ ರಾಘವೇಂದ್ರ ರಾಯಬಾ                     ||೨||

ರಾಮಪದಸರಸೀರುಹಭೃಂಗ ಕೃಪಾಂಗ
ಭ್ರಾಮಕಜನರ ಮತಭಂಗ ಮಾಡಿದ
ಧೀಮಂತರೊಡೆಯನೆ ರಾಘವೇಂದ್ರ ರಾಯಬಾರೊ         ||೩||

ಆರು ಮೂರೇಳು ನಾಲ್ಕೆಂಟು ಗ್ರಂಥಸಾರಾರ್ಥ
ತೋರಿಸಿದೆ ಸರ್ವರಿಗೆ ಸರ್ವಜ್ಞ
ಸೂರಿಗಳರಸನೆ ರಾಘವೇಂದ್ರ ರಾಯಬಾರೊ                 ||೪||

ಭೂತಳನಾಥನ ಭೀತಿಯ ಬಿಡಿಸಿದೆ
ಪ್ರೇತತ್ವ ಕಳೆದೆ ಮಹಿಷಿಯ ಶ್ರೀಜಗ
ನ್ನಾಥವಿಠಲನ ಪ್ರೀತಿಪಾತ್ರ ರಾಘವೇಂದ್ರ ರಾಯಬಾರೊ  ||೫||

Labels: ರಾಯಬಾರೊ ತಂದೆತಾಯಿ ಬಾರೊ, Raya Baro Tande Tayi Baro, ಜಗನ್ನಾಥದಾಸರು, Jagannathadasaru

ವಿಠಲಯ್ಯ ವಿಠಲಯ್ಯ : Vithalayya Vithalayya

ವಿಠಲಯ್ಯ ವಿಠಲಯ್ಯ

ಕೀರ್ತನಕಾರರು : ಜಗನ್ನಾಥದಾಸರು

ವಿಠಲಯ್ಯ ವಿಠಲಯ್ಯ                             ||ಪ||

ತಟಿತ್ಕೋಟಿ ನಿಭಕಾಯ ಜಗನ್ನಾಥ           ||ಅ.ಪ||

ಭಜಿಸುವೆ ನಿನ್ನನು ಅಜಭವ ಸುರ ನುತ
ಭಜ ಕಾಮರ ತರಕುಜನ ಕುಠಾರ             ||೧||

ನೀಕರುಣಿಸದೆ ನಿರಾಕರಿಸಲು ಎನ್ನ
ಸಾಕುವರಾರೋ ದಯಾಪರ ಮೂರುತಿ     ||೨||

ಶರಣಾಗತರನು ಪೊರೆವೆನೆಂಬ ತವ
ಬಿರುದು ಕಾಯೋ ಕರಿವದನ ಜಗನ್ನಾಥ     ||೩||

Labels: ವಿಠಲಯ್ಯ ವಿಠಲಯ್ಯ, Vithalayya Vithalayya, ಜಗನ್ನಾಥದಾಸರು, Jagannathadasaru

ಸೋಮವಾರ, ಸೆಪ್ಟೆಂಬರ್ 9, 2013

ಅಪಮೃತ್ಯು ಪರಿಹರಿಸೋ : Apamrithyu Parihariso

ಅಪಮೃತ್ಯು ಪರಿಹರಿಸೋ

ಕೀರ್ತನಕಾರರು : ಜಗನ್ನಾಥದಾಸರು
ರಾಗ : ಕಾಂಬೋದಿ
ತಾಳ : ಝಂಪೆ

ಅಪಮೃತ್ಯು ಪರಿಹರಿಸೋ ಅನಿಲದೇವ
ಕೃಪಣವತ್ಸಲನೆ ಕಾವರ ಕಾಣೆ ನಿನ್ನುಳಿದು                 ||ಪ||

ನಿನಗಿನ್ನು ಸಮರಾದ ಅನಿಮಿತ್ತ ಬಂಧುಗಳು
ಎನಗಿಲ್ಲ ಆವಾವ ಜನುಮದಲ್ಲಿ
ಅನುದಿನದಲೆನ್ನುದಾಸೀನ ಮಾಡುವುದು
ನಿನಗೆ ಅನುಚಿತೋಚಿತವೆ ಸಜ್ಜನಶಿಖಾಮಣಿಯೆ          ||೧||

ಕರಣಾಭಿಮಾನಿಗಳು ಕಿಂಕರರು ಮೂರ್ಲೋಕದರಸು
ಹರಿಯು ನಿನ್ನೊಳಗಿಪ್ಪ ಸರ್ವಕಾಲ
ಪರಿಸರನೆ ಈ ಭಾಗ್ಯ ದೊರೆತನಕೆ ಸರಿಯುಂಟೆ
ಗುರುವರ್ಯ ನೀ ದಯಾಕರನೆಂದು ಪ್ರಾರ್ಥಿಸುವೆ        ||೨||

ಭವರೋಗ ಮೋಚಕನೆ ಪವಮಾನರಾಯ ನಿ
ನ್ನವರವನು ನಾನು ಮಾಧವಪ್ರಿಯನೆ
ಜವನ ಬಾಧೆಯ ಬಿಡಿಸೋ ಅವನಿಯೊಳು ಸುಜನರಿಗೆ
ದಿವಿಜಗಣ ಮಧ್ಯದಲಿ ಪ್ರವರ ನೀನಹುದೊ                ||೩||

ಜ್ಞಾನವಾಯುರೂಪಕನೆ ನೀನಹುದೊ ವಾಣಿ ಪಂಚಾ
ನನಾದ್ಯಮರರಿಗೆ ಪ್ರಾಣದೇವ
ದೀನವತ್ಸಲನೆಂದು ನಾ ನಿನ್ನ ಮರೆಹೊಕ್ಕೆ
ದಾನವಾರಣ್ಯಕೃಶಾನು ಸರ್ವದಾ ಎನ್ನ                    ||೪||

ಸಾಧನ ಶರೀರವಿದು ನೀ ದಯದಿಕೊಟ್ಟದ್ದು
ಸಾಧಾರಣವಲ್ಲ ಸಾಧುಪ್ರಿಯ
ವೇದವಾದೋದಿತ ಜಗನ್ನಾಥವಿಠಲನ
ಪಾದಭಕುತಿಯ ಕೊಟ್ಟು ಮೋದವನು ಕೊಡು ಸತತ   ||೫||

Labels: ಅಪಮೃತ್ಯು ಪರಿಹರಿಸೋ, Apamrithyu Parihariso, ಜಗನ್ನಾಥದಾಸರು, Jagannathadasaru

ಶನಿವಾರ, ಆಗಸ್ಟ್ 31, 2013

ದಯಮಾಡೆ ದಯಮಾಡೆ ತಾಯೆ ವಾಗ್ದೇವಿ : Dayamade Dayamade Taye Vagdevi

ದಯಮಾಡೆ ದಯಮಾಡೆ ತಾಯೆ ವಾಗ್ದೇವಿ 

ಕೀರ್ತನಕಾರರು : ಜಗನ್ನಾಥದಾಸರು

ದಯಮಾಡೆ ದಯಮಾಡೆ ತಾಯೆ ವಾಗ್ದೇವಿ               ।।ಪ॥

ದಯದಿಂದ ನೀನೆನ್ನ ನೋಡೆ ವಾಗ್ದೇವಿ                     ।।ಅ.ಪ॥

ಹಿತದಿ ಸನ್ಮತಿಯ ಶ್ರೀಮತಿದೇವಿ ನೀಡೆ
ವ್ರತತಿಜನೇತ್ರೆ ಭಾರತಿ ನೀ ದಯಮಾಡೆ                  ।।೧।।


ಸುಮುಖೀ ತ್ವಚ್ಚರಣಾಬ್ಜ ದ್ರುಮಛಾಯಶ್ರಿತರ
ಸುಮತಿಗಳೊಳಗಿಟ್ಟು ಮಮತೆಯಿಂ ಸಲಹೆ               ।।೨।।


ಜಗನ್ನಾಥವಿಠಲನ ಅಂಘ್ರಿಗಳ ಸೇವೆಯೊಳು
ಸುಗುಣೆ ಸನ್ಮತಿಕೊಟ್ಟು ಬೇಗೆನ್ನ ಸಲಹೆ                    ।।೩।।


Labels: ದಯಮಾಡೆ ದಯಮಾಡೆ ತಾಯೆ ವಾಗ್ದೇವಿ, Dayamade Dayamade Taye Vagdevi, ಜಗನ್ನಾಥದಾಸರು, Jagannathadasaru

ಶನಿವಾರ, ಆಗಸ್ಟ್ 24, 2013

ಯಾತರವ ನಾನಯ್ಯ : Yatarava Nanayya

ಯಾತರವ ನಾನಯ್ಯ

ಕೀರ್ತನಕಾರರು : ಜಗನ್ನಾಥದಾಸರು
ರಾಗ :  ಕಾಂಬೋದಿ
ತಾಳ : ಝಂಪೆ


ಯಾತರವ ನಾನಯ್ಯ ಇಂದಿರೇಶ 
ಹೋತಾಹ್ವಯನೆ ನಿನ್ನಧೀನವೀ ಜಗವೆಲ್ಲ                         ।।ಪ॥ 

ಕಾಲಗುಣಕರ್ಮಸ್ವಭಾವಗಳ  ಮನೆಮಾಡಿ ಶ್ರೀ 
ಲೋಲ ನೀ ಸರ್ವರೊಳಗೆ ಇದ್ದು 
ಲೀಲೆಗೈಯುತ ಲಿಪ್ತನಾಗದೆ ನಿರಂತರದಿ 
ಪಾಲಿಸುವೆ ಸಂಹರಿಪೆ ದಿವಿಜದಾನವತತಿಯ                   ।।೧।।

ತಿಳಿಸಿಕೊಂಬುವ ನೀನೆ ಶ್ರುತಿಸ್ಮೃತಿಗಳೊಳಗಿದ್ದು 
ತಿಳಿಸುವವ ನೀನೆ ಉಪದೇಶಕರೊಳು 
ತಿಳಿವವನು ನೀನೆ ಬುದ್ಧ್ಯಾದಿಂದ್ರಿಯಗಳೊಳು 
ನೆಲೆಗೊಂಡು ನಿಖಿಳ ವ್ಯಾಪಾರಗಳ ಮಾಡುತಲಿಪ್ಪೆ           ।।೨।।

ಜಗದಿ ಜನ್ಮಾದಿಗಳಿಗೆಂತು ಕಾರಣನೆಂದು 
ನಿಗಮತತಿಗಳು ನಿತ್ಯಸ್ತುತಿಸುತಿಹವು 
ತ್ರಿಗುಣವರ್ಜಿತ ಜಗನ್ನಾಥವಿಠಲನು ನೀನು 
ಅಗಣಿತ ಕುಯೋನಿಮುಖದಲಿ ಬಂದವನು ನಾನು             ।।೩।।

Labels: ಯಾತರವ ನಾನಯ್ಯ, Yatarava Nanayya, ಜಗನ್ನಾಥದಾಸರು, Jagannathadasaru

ಗುರುವಾರ, ಆಗಸ್ಟ್ 22, 2013

ಕೃಷ್ಣನ್ನ ನೋಡಿರೈ ಭಕ್ತಿಸಂತುಷ್ಟನ ಪಾಡಿರೈ : Krishanna Nodirai

ಕೃಷ್ಣನ್ನ ನೋಡಿರೈ ಭಕ್ತಿಸಂತುಷ್ಟನ ಪಾಡಿರೈ

ಕೀರ್ತನಕಾರರು : ಜಗನ್ನಾಥದಾಸರು  
ರಾಗ :  ಭೈರವಿ  
ತಾಳ : ಅಟ್ಟ 

ಕೃಷ್ಣನ್ನ ನೋಡಿರೈ ಭಕ್ತಿಸಂತುಷ್ಟನ ಪಾಡಿರೈ 
ಕೃಷ್ಣಗೆ ಒಲಿದತಿ ದುಷ್ಟರಾಯನ ತರಿದ ಜಗದೊಳು ಮೆರೆದ                     ।।ಪ॥ 

ನಂದವ್ರಜದಲ್ಲಿ ಕಂದನಾಗಿ ತಾ ಬೆಳೆದ ದೈತ್ಯರನಳಿದ 
ವೃಂದಾವನದೊಳು ಇಂದುಮುಖಿಯರನು ಕೂಡಿ ಪರಿಪರಿಯಾಡಿ 
ಒಂದೊಂದು ಪರಿ ಲೀಲೆ ಸಂದೋಹಗಳ ತೋರಿಸಿದ ಮೋಹ ಬೆರೆಸಿದ 
ಕಂದರ್ಪಪಿತ ತನ್ನ ಹೊಂದಿದ ಜನರನ್ನು ಕಾವ ವರಗಳನೀವ                    ।।೧।।

ಬಾಲೇರ ಮನೆಯಲ್ಲಿ ಪಾಲು ಮೊಸರುಗಳ ಕದ್ದ ತೀವ್ರದಿ ಮೆದ್ದ 
ಕಾಲಕಾಲದಲಿ ಗೋಪಾಲರ ಒಡಗೂಡಿ ಗೋವ ಕಾಯ್ದನು ದೇವ 
ಶೈಲವ ಬೆರಳಲಿ ತಾಳಿ ಗೋಕುಲವ ಪೊರೆದ ಗರುವ ಮುರಿದ 
ಶ್ರೀಲೋಲುಪನು ವಿಶಾಲ ಮಹಿಮೆಗಳ ತೋರಿದ ಸುರರಿಂದ ಮೆರೆದ        ।।೨।।

ಮಧುರಾಪಟ್ಟಣದಿ ಕದನ ಕರ್ಕಶರ ಕೊಂದ ಸಚ್ಚಿದಾನಂದ 
ಸದುಗುಣನಿಧಿಯ ಪಡೆದವಳ ಜನಕಗೆ ಪಟ್ಟಗಟ್ಟಿದ ದಿಟ್ಟ 
ಸುದತಿಯಗೋಸುಗ ಸುರಪನ ಪುರದಿಂದ ಸುರತರು ತಂದ 
ಪದುಮಜಾಂಡಧರ ಜಗನ್ನಾಥ ವಿಠಲನೀತ ತ್ರಿಗುಣಾತೀತ                      ।।೩।।

Labels: ಕೃಷ್ಣನ್ನ ನೋಡಿರೈ ಭಕ್ತಿಸಂತುಷ್ಟನ ಪಾಡಿರೈ , Krishanna Nodirai, ಜಗನ್ನಾಥದಾಸರು, Jagannathadasaru 

ಸೋಮವಾರ, ಆಗಸ್ಟ್ 5, 2013

ಆವಕಾರಣ ಮೊಗವ ತಿರುಹಿದ್ಯೋ : Avakaarana Mogava Tiruhidyo

ಆವಕಾರಣ ಮೊಗವ ತಿರುಹಿದ್ಯೋ

ಕೀರ್ತನಕಾರರು : ಜಗನ್ನಾಥದಾಸರು   
ರಾಗ :  ಕಾಂಬೋದಿ 
ತಾಳ : ಝಂಪೆ 

ಆವಕಾರಣ ಮೊಗವ ತಿರುಹಿದ್ಯೋ ಪೇಳು 
ಭೂವರಾಹ ಸ್ವಾಮಿಪುಷ್ಕರಣೀತೀರಗನೆ                      ।।ಪ।।

ರಥಸಮೂಹಗಳೇರಿ ಪ್ರಕಾಶಿಪ ಬಗೆಯೊ 
ಸತಿಯ ಲಾವಣ್ಯಾತಿಶಯವ ನೋಡುವ ಬಗೆಯೊ
ಮಿತಿಯಿಲ್ಲದಸುರರ ಉಪೇಕ್ಷೆ ಮಾಡುವ ಬಗೆಯೊ 
ಪತಿತಪಾವನ ಪೂರ್ಣಕಾಮ ನಿನಗೆ 
ನುತಿಸಿ ಬಿನ್ನೈಸುವೆನು ಪೇಳೊ                                 ।।೧।।

ಭಜಕರೆನ್ನನು ಬಿಡರೆಂಬ ಮನಸಿನ ಬಗೆಯೊ 
ಅಜಭವಾದಿಗಳ ಸಂಸ್ತುತಿಗಳಾಲಿಪ ಬಗೆಯೊ 
ರಜನೀಚರರ ಸದೆದು ನಾಟ್ಯವಾಡುವ ಬಗೆಯೊ 
ಭುಜಗಭೂಷಣಪೂಜ್ಯಚರಣ 
ತ್ರಿಜಗದ್ವಿಲಕ್ಷಣ ಸುರೂಪನಿರ್ಲೇಪ                             ।।೨।।

ಅನುಗರೊಶ ನೀನಾದಡೆಮ್ಮನು ಮರೆವರೆಂದು 
ವನಿತೆಗಾರರಿಯದಂತುಪದೇಶಿಸುವ ಬಗೆಯೊ 
ಘನಲಕ್ಷಣಮುಖಾಬ್ಜವನು ಚುಂಬಿಸುವ ಬಗೆಯೊ 
ವನಜಸಂಭವನಾಸ್ಯಜನೆ ಜಗ 
ಜ್ಜನಕ ಜಗನ್ನಾಥವಿಠಲ                                           ।।೩।।

Labels: ಆವಕಾರಣ ಮೊಗವ ತಿರುಹಿದ್ಯೋ, Avakaarana Mogava Tiruhidyo, ಜಗನ್ನಾಥದಾಸರು, Jagannathadasaru

ಭಾನುವಾರ, ಆಗಸ್ಟ್ 4, 2013

ಇದು ನಿನಗೆ ಧರ್ಮವೇ ಇಂದಿರೇಶ : Idu Ninage Dharmave Indiresha

ಇದು ನಿನಗೆ ಧರ್ಮವೇ ಇಂದಿರೇಶ

ಕೀರ್ತನಕಾರರು : ಜಗನ್ನಾಥದಾಸರು 
ರಾಗ :  ಕಾಂಬೋದಿ 
ತಾಳ : ಝಂಪೆ 

ಇದು ನಿನಗೆ ಧರ್ಮವೇ ಇಂದಿರೇಶ 
ಬದೆಗ ನೀನಾಗಿದ್ದು ಭೀತಿಪಡಿಸುವುದು                           ।।ಪ।।

ನಿನ್ನ ಗುಣಗಳ ತುತಿಸಿ ನಿನ್ನನೆ ಹಾರೈಸಿ 
ನಿನ್ನವರ ಪ್ರೀತಿಯನು ಸಂಪಾದಿಸಿ 
ಅನ್ಯರನು ಲೆಕ್ಕಿಸದೆ ಚೆನ್ನಾಗಿ ಬಾಳುವ 
ಮಾನವನ ಈ ಪರಿಯ ಬನ್ನಬಡಿಸುವುದು                       ।।೧।।

ದುರುಳನಲ್ಲವೊ ನಿನ್ನ ಚರಸೇವಕರವನೊ 
ಪರಿಪಾಲಿಸುವುದು ನಿನಗೆ ಪರಮಧರ್ಮ 
ಗುರುಗಳಂತರ್ಯಾಮಿ ಕರಮುಗಿದು ಬಿನ್ನೈಪೆ 
ಶರಣರ ಪಾಲಕನೆಂಬ ಬಿರುದು ಸುಳ್ಳಾಗುತಿದೆ                 ।।೨।।

ಶೋಕನಾಷಣ ವಿಗತಶೋಕನೆಂಬೊ ನಾಮ 
ನಾ ಕೇಳಿ ಮರೆಹೊಕ್ಕೆ ಲೋಕಬಂಧು 
ನೀಕರಿಸೆಮ್ಮ ನೀ ಸಾಕಬೇಕನುದಿನವು 
ವಾಕು ಮನ್ನಿಪುದು ಲೋಕೈಕರಕ್ಷಾಮಣಿ                          ।।೩।।

ಗುಣವೇ ನಿನ್ನದು ಬರಿದೆ ದಣಿಸುವುದು ಶರಣರನು 
ಪ್ರಣತಾರ್ತಿಹರ ವಿಭೀಷಣಪಾಲಕ 
ಕ್ಷಣಕನಂತಪರಾಧವೆಣಿಸುವಡೆ ಕಡೆಯುಂಟೆ 
ಮಣಿದು ಬಿನ್ನಹ ಮಾಳ್ಪೆ ದನುಜದಲ್ಲಣನೆ                        ।।೪।।

ನಮೋ ನಮೋ ಬ್ರಹ್ಮಣ್ಯದೇವರದೇವ 
ನಮೋ ನಮೋ ಧನ್ವಂತ್ರಿ ದುರಿತಹಂತ್ರೀ 
ನಮೋ ನಮೋ ಕಾರುಣ್ಯಶೀಲ ಸಜ್ಜನಪಾಲ
ನಮೋ ನಮೋ ಜಗನ್ನಾಥ ವಿಠಲ ವಿಖ್ಯಾತ                     ।।೫।।

Labels: ಇದು ನಿನಗೆ ಧರ್ಮವೇ ಇಂದಿರೇಶ, Idu Ninage Dharmave Indiresha, ಜಗನ್ನಾಥದಾಸರು, Jagannathadasaru

ಗುರುವಾರ, ಜುಲೈ 25, 2013

ಧನ್ಯನಾದೆ ವಿಠಲನ ಕಂಡು : Dhanyanaade Vithalana Kandu

ಧನ್ಯನಾದೆ ವಿಠಲನ ಕಂಡು

ಕೀರ್ತನಕಾರರು : ಜಗನ್ನಾಥದಾಸರು 
ರಾಗ :  ಪೂರ್ವಿ 
ತಾಳ : ತ್ರಿವಿಡೆ

ಧನ್ಯನಾದೆ ವಿಠಲನ ಕಂಡು                          ।।ಪ।।

ಧನ್ಯನಾದೆ ಕಾಮನಪಿತ ಲಾ 
ವಣ್ಯ ಮೂರಿತಿಯ ಕಣ್ಣಲ್ಲಿ ಕಂಡು                   ।।ಅ.ಪ।।

ದೇವವರೇಣ್ಯ ಸದಾವಿನೋದಿ ವೃಂ 
ದಾವನಸಂಕಾರ ಗೋಪನ ಕಂಡು                 ।।೧।।

ಮಂಗಳಾಂಗ ಕಾಳಿಂಗಮರ್ದನ ಮಾ 
ತಂಗವರದ ವರ ರಂಗನ ಕಂಡು                   ।।೨।।

ಹಾಟಕಾಂಬರ ಕಿರೀಟಸಾರಥಿ 
ತಾಟಾಕಾರಿ ವೈರಾಟನ ಕಂಡು                     ।।೩।।

ಚಿಂತಿತಫಲದ ಕೃತಾಂತನಾತ್ಮಜಾ
ದ್ಯಂತರಹಿತ ನಿಶ್ಚಿಂತನ ಕಂಡು                      ।।೪।।

ಮಾತುಳಾಂತಕ ವಿಧಾತಪಿತ ಜಗ 
ನ್ನಾಥವಿಠಲ ವಿಖ್ಯಾತನ ಕಂಡು                        ।।೫।।


Labels: ಧನ್ಯನಾದೆ ವಿಠಲನ ಕಂಡು, Dhanyanaade Vithalana Kandu, ಜಗನ್ನಾಥದಾಸರು, Jagannathadasaru

ಬುಧವಾರ, ಜುಲೈ 24, 2013

ಅಂಬಾತನಯ ಹೇರಂಬ : Ambatanaya Heramba

ಅಂಬಾತನಯ ಹೇರಂಬ

ಕೀರ್ತನಕಾರರು : ಜಗನ್ನಾಥದಾಸರು
ರಾಗ : ಕಾಚ್
ತಾಳ : ಆದಿ


ಅಂಬಾತನಯ ಹೇರಂಬ 
ಕರುಣಾಂಬುಧೆ ತವ ಚರಣಾಂಬುಜಕೆರಗುವೆ           ।।ಪ।।

ದಶನ ಮೋದಕ ಪಾಶಾಂಕುಶ ಪಾಣಿ 
ಅಸಮ ಚಾರುದೇಷ್ಣ ಕುಸುಮನಾಭನ ಪುತ್ರ          ।।೧।।

ವೃಂದಾರಕವೃಂದವಂದಿತ ಚರಣಾರ-
ವಿಂದಯುಗಳ ದಯದಿಂದ ನೋಡೆನ್ನ                   ।।೨।।

ಯೂಥಪವದನ ಪ್ರದ್ಯೋತಸನ್ನಿಭ ಜಗ 
ನ್ನಾಥವಿಠಲನ ಸಂಪ್ರೀತಿ ವಿಷಯ                         ।।೩।।

Labels:  ಅಂಬಾತನಯ ಹೇರಂ, Ambatanaya Heramba, ಜಗನ್ನಾಥದಾಸರು, Jagannathadasaru

ಮಂಗಳವಾರ, ಜುಲೈ 23, 2013

ಯಾಕೆ ಮೂಕನಾದ್ಯೋ : Yake Mookanadyo

ಯಾಕೆ ಮೂಕನಾದ್ಯೋ

ಕೀರ್ತನಕಾರರು : ಜಗನ್ನಾಥದಾಸರು
ರಾಗ : ಪೂರ್ವಿಕಲ್ಯಾಣಿ 
ತಾಳ : ಮಠ್ಯ

ಯಾಕೆ ಮೂಕನಾದ್ಯೋ ಗುರುವೇ ನೀ
ನ್ಯಾಕೆ ಮೂಕನಾದ್ಯೋ                            ।।ಪ।।

ಲೋಕಪಾಲಕ ಎನ್ನ ಸಾಕುವರ್ಯಾರಯ್ಯ
ಶ್ರೀಕರ ರಾಘವೇಂದ್ರ                                  ।।ಅ.ಪ।।

ಹಿಂದಕ್ಕೆ ನೀ ಎನ್ನ ಮುಂದೆ ಸುಳಿದಾಡಿದೆ
ಮಂದಿಯೊಳಗೆನ್ನ ಮಂದನ್ನ ಮಾಡಿದ್ಯೂ          ।।೧।।

ಬೇಕಾಗದಿದ್ದರಿನ್ಯಾಕೆ ಕೈಯನು ಪಿಡಿದೆ
ಕಾಕುಜನರೊಳೆನ್ನ ನೂಕಿಬಿಟ್ಟು ನೀನು              ।।೨।।

ಹೀಂಗೆ ಪಾಲಿಸಿದರೆ ಯೋಗಿಕುಲವರ್ಯ ರಾಗ
ವೇಂದ್ರನೆ ಭವ ಸಾಗುವದ್ಹ್ಯಾಂಗಯ್ಯ                 ।।೩।।

ನಿನ್ನಂಥ ಕರುಣಿಲ್ಲ ಎನ್ನಂಥ ಕೃಪಣಿಲ್ಲ
ಘನ್ನಮಹಿಮ ನೀ ಎನ್ನನು ಬಿಟ್ಟೀಗ                     ।।೪।।

ಜನನಿಯು ನೀ ಎನ್ನ ಜನಕನಯ್ಯ
ಮನ್ನಿಸೊ ನೀ ನಿತ್ಯಾನನ್ಯ ಶರಣನೆ                    ।।೫।।

ಎಂದಿಗಾದರು ನಿನ್ನ ಪೊಂದಿಕೊಂಡವನೆಲೊ
ಇಂದು ನೀ ಕೈಬಿಟ್ಟರೆನ್ನ ಮುಂದೆ ಕಾಯುವರ್ಯಾರೊ       ।।೬।।

ನಾಥನು ನೀ ಅನಾಥನು ನಾನಯ್ಯ
ಪಾತಕರರಿ ಜಗನ್ನಾಥವಿಠಲದೂತ                    ।।೭।।

Labels:  ಯಾಕೆ ಮೂಕನಾದ್ಯೋ, Yake Mookanadyo, ಜಗನ್ನಾಥದಾಸರು, Jagannathadasaru