ಶ್ರೀಪಾದರಾಜರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಶ್ರೀಪಾದರಾಜರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಜನವರಿ 8, 2014

ಲಾಲಿ ಗೋವಿಂದ ಲಾಲಿ : Laali Govinda Laali

ಲಾಲಿ ಗೋವಿಂದ ಲಾಲಿ

ಕೀರ್ತನಕಾರರು : ಶ್ರೀಪಾದರಾಜರು
ರಾಗ : ಆನಂದಭೈರವಿ
ತಾಳ : ಝಂಪೆ

ಲಾಲಿ ಗೋವಿಂದ ಲಾಲಿ ಕೌಸಲ್ಯ
ಬಾಲ ಶ್ರೀರಾಮ ಲಾಲಿ  ||ಪ||

ಲಾಲಿ ಮುನಿವಂದ್ಯ  ಲಾಲಿ  ಜಾನಕಿ
ರಮಣ  ಶ್ರೀ ರಾಮ  ಲಾಲಿ            ||ಅ. ಪ||

ಕನಕರತ್ನಗಳಲ್ಲಿ  ಕಾಲ್ಗಳನೆ ಹೂಡಿ
ನಾಲ್ಕು ವೇದಗಳನ್ನು ಸರಪಣಿಯ ಮಾಡಿ
ಅನೇಕ ಭೂಮಂಡಲವ ಹಲಗೆಯ ಮಾಡಿ
ಶ್ರೀಕಾಂತನ ಉಯ್ಯಾಲೆಯನು ವಿರಚಿಸಿದರು ||೧||

ಆಶ್ಚರ್ಯಜನಕವಾಗಿ  ನಿರ್ಮಿಸಿದ
ಪಚ್ಚೆಯ ತೊಟ್ಟಿಲಲ್ಲಿ
ಅಚ್ಯುತಾನಂತನಿರಲು  ತೂಗಿದರು
ಮತ್ಸ್ಯಾವತಾರ ಹರಿಯ                           ||೨||

ಧರ್ಮಸ್ಥಾಪಕನು ಎಂದು ನಿರವಧಿಕ
ನಿರ್ಮಲ ಚರಿತ್ರನೆಂದು
ಮರ್ಮ ಕರ್ಮಗಳ ಪಾಡಿ ತೂಗಿದರು
ಕೂರ್ಮಾವತಾರ  ಹರಿಯ                    ||೩||

ಸರಸಿಜಾಕ್ಷಿಯರೆಲ್ಲರು ಜನವಶೀ
ಕರ ದಿವ್ಯರೂಪನೆಂದು
ಪರಮ ಹರುಷದಲಿ ಪಾಡಿ ತೂಗಿದರು
ವರಾಹವತಾರ  ಹರಿಯ                   ||೪||

ಕರಿ ಕುಂಭಗಳ  ಪೋಲುವ ಕುಚದಲ್ಲಿ
ಹಾರ  ಪದಕವು ಹೊಳೆಯಲು
ವರವರ್ಣಿನಿಯರು ಪಾಡಿ ತೂಗಿದರು
ನರಸಿಂಹಾವತಾರ ಹರಿಯ           ||೫||

ಭಾಮಾಮಣಿಯರೆಲ್ಲರು ಯದುವಂಶ
ಸೋಮನಿವನೆಂದು ಪೊಗಳಿ
ನೇಮದಿಂದಲಿ ಪಾಡಿ ತೂಗಿದರು
ವಾಮನವತಾರ ಹರಿಯ              ||೬||

ಸಾಮಜವರದನೆಂದು ಅತುಳ ಭೃಗು
ರಾಮವತಾರನೆಂದು
ಶ್ರೀಮದಾನಂದ ಹರಿಯ ತೂಗಿದರು
ಪ್ರೇಮಾತಿರೇಕದಿಂದ         ||೭||

ಕಾಮನಿಗೆ ಕಾಮನೆಂದು ಸುರಸಾರ್ವ
ಭೌಮ ಗುಣಧಾಮನೆಂದು
ವಾಮನೇತ್ರೆಯರು ಪಾಡಿ ತೂಗಿದರು
ರಾಮಾವತಾರಿಯ ಹರಿಯ   ||೮||

ಸೃಷ್ಟಿಯ ಕರ್ತನೆಂದು ಜಗದೊಳಗೆ
ಶಿಷ್ಟ ಸಂತುಷ್ಟನೆಂದು
ದೃಷ್ಟಾಂತರಹಿತನೆಂದು ತೂಗಿದರು
ಕೃಷ್ಣಾವತಾರ  ಹರಿಯ           ||೯||

ವೃದ್ಧ  ನಾರಿಯರೆಲ್ಲರು ಜಗದೊಳಗೆ ಪ್ರ
ಸಿದ್ಧನಿವನೆಂದು ಪೊಗಳಿ
ಬದ್ಧಾನುರಾಗದಿಂದ ತೂಗಿದರು
ಬೌದ್ಧಾವಾತಾರಿಯ ಹರಿಯ           ||೧೦||

ತಲತಲಾಂತರದಿಂದ ರಂಜಿಸುವ
ಮಲಯಜಲೇಪದಿಂದ
ಜಲಜಗಂಧಿಯರು ಪಾಡಿ ತೂಗಿದರು
ಕಲ್ಕ್ಯಾವತಾರಿಯ ಹರಿಯ           ||೧೧||

ಕನಕಮಯ ಖಚಿತವಾದ ತಲ್ಪದಲಿ
ವನಜಭವ ಜನಕನಿರಲು
ವನಜನಾಭನ್ನ ಪಾಡಿ ತೂಗಿದರು
ವನಿತಮಣಿಯರೆಲ್ಲರು          ||೧೨||

ಪದ್ಮರಾಗವ ಪೋಲುವ ಹರಿಪಾದ
ಪದ್ಮವನುತ್ತಮ ಹೃದಯ
ಪದ್ಮದಲಿ ನಿಲ್ಲಿಸಿ ಪಾಡಿ ತೂಗಿದರು
ಪದ್ಮಿನೀ ಭಾಮಿನಿಯರು         ||೧೩||

ಹಸ್ತಭೂಷಣವ ಮೆರೆಯಲು ದಿವ್ಯತಾರ
ಹಸ್ತಳಗವಗಳಿಂದ
ಹಸ್ತಗಳ ಪಿಡಿದುಕೊಂಡು ತೂಗಿದರು
ಹಸ್ತಿನೀ ಭಾಮಿನಿಯರು         ||೧೪||

ಮತ್ತಗಜಗಾಮಿನಿಯರು ದಿವ್ಯತರ
ಚಿತ್ರ ವಸ್ತ್ರಗಳನುಟ್ಟು
ಚಿತ್ತ ಸಂತೋಷದಿಂದ ತೂಗಿದರು
ಚಿತ್ತಿನಿ ಭಾಮಿನಿಯರು     ||೧೫||

ಕಂಕಣ ಧ್ವನಿಗಳಿಂದ ರಂಜಿಸುವ
ಕಿಂಕಿಣೀಸ್ವರಗಳಿಂದ
ಪಂಕಜಾಕ್ಷಿಯರು ಪಾಡಿ ತೂಗಿದರು
ಶಂಕಿಣಿ ಭಾಮಿನಿಯರು     ||೧೬||

ಚೊಕ್ಕ ಕಸ್ತೂರಿ ಪಂಕದಿಂ ರಂಜಿಸುವ
ಮಾಕರಿಕಾ ಪತ್ರ ಬರೆದು
ಲಿಕುಚಸ್ತನಿಯರು ಪಾಡಿ ತೂಗಿದರು
ಅಕಳಂಕಚರಿತ ಹರಿಯ      ||೧೭||

ಪಲ್ಲವಧಾರೆಯರೆಲ್ಲ ಈ ಶಿಶುವು
ತುಲ್ಯವರ್ಜಿತವೆನುತಲಿ
ಸಲ್ಲಲಿತಗಾನದಿಂದ ತೂಗಿದರು
ಕಲ್ಯಾಣಿರಾಗದಿಂದ           ||೧೮||

ಆನಂದ ಸದನದೊಳಗೆ ಗೋಪಿಯರು
ಆ ನಂದಸುತನ ಕಂಡು
ಆನಂದಭರಿತರಾಗಿ ತೂಗಿದರು
ಆನಂದಭೈರವಿಯಿಂದ        ||೧೯||

ದೇವಾದಿದೇವನೆಂದು ಈ ಶಿಶುವು
ಭಾವನಾತೀತನೆಂದು
ದೇವಗಂಧರ್ವರು ಪಾಡಿ ತೂಗಿದರು
ದೇವಗಾಂಧಾರದಿಂದ            ||೨೦||

ನೀಲಘನಲೀಲ ಜೋ ಜೋ ಕರುಣಲ
ವಾಲ ಶ್ರೀಕೃಷ್ಣ ಜೋ ಜೋ
ಲೀಲಾವತಾರ  ಜೋ ಜೋ ಪರಮಾತ್ಮ
ಬಾಲಗೋಪಾಲ  ಜೋ ಜೋ      ||೨೧||

ಇಂಧುಧರಮಿತ್ರ ಜೋ ಜೋ ಶ್ರೀಕೃಷ್ಣ
ಇಂಧು ರವಿನೇತ್ರ ಜೋ ಜೋ
ಇಂಧು  ಕುಲಪುತ್ರ ಜೋ ಜೋ  ಪರಮಾತ್ಮ
ಇಂದಿರಾರಮಣ  ಜೋ ಜೋ         ||೨೨||

ತುಂಗ ಭವಭಂಗ  ಜೋ ಜೋ ಪರಮಾತ್ಮ
ರಂಗ  ಕೃಪಾಂಗ ಜೋ ಜೋ
ಮಂಗಳಾಪಾಂಗ ಜೋ ಜೋ ಮೋಹನಾಂಗ
ರಂಗವಿಠಲನೆ  ಜೋ ಜೋ         ||೨೩||


Labels: ಲಾಲಿ ಗೋವಿಂದ ಲಾಲಿ, Laali Govinda Laali, ಶ್ರೀಪಾದರಾಜರು, Sripadarajaru

ಸೋಮವಾರ, ಅಕ್ಟೋಬರ್ 7, 2013

ಚಿತ್ತಜನಯ್ಯನ ಚಿಂತಿಸು ಮನವೇ : Chittajanayyana Chintisu Manave

ಚಿತ್ತಜನಯ್ಯನ ಚಿಂತಿಸು ಮನವೇ

ಕೀರ್ತನಕಾರರು : ಶ್ರೀಪಾದರಾಜರು
ರಾಗ : ಕಾಂಬೋದಿ
ತಾಳ : ಆದಿ

ಚಿತ್ತಜನಯ್ಯನ ಚಿಂತಿಸು ಮನವೇ
ಹೊತ್ತು ಕಳೆಯದೆ ಸರ್ವೋತ್ತಮನ ನೆನೆ ಮನವೆ ||ಪ||

ಕಾಲನ ದೂತರು ನೂಲು ಹಗ್ಗವ ತಂದು
ಕಾಲು ಕೈಗಳ ಕಟ್ಟಿ ಮ್ಯಾಲೆ ಕುಟ್ಟಿ
ಕಾಲಪಾಶದೊಳಿಟ್ಟು ಶೂಲದಿಂದಿರುವಾಗ
ಪಾಲಿಸುವರುಂಟೆ ಜಾಲವ ಮಾಡದೆ ||೧||

ದಂಡಧರನ ಭಟರು ಚಂಡಕೋಪದಿ ಬಂದು
ಕೆಂಡದ ನದಿಯ ತಡೆಗೆ ಕೊಂಡೊಯ್ದು
ಖಂಡಖಂಡವ ಕಿತ್ತು ಕೆಂಡದೊಳಿಡುವಾಗ
ಹೆಂಡಿರು ಮಕ್ಕಳು ಬಂದು ಬಿಡಿಸಬಲ್ಲರೆ ಮರುಳೆ ||೨||

ಅಂಗಳಿಗೆ ಡಬ್ಬಣಂಗಳ ಸೇರಿಸಿ ಎರಡು
ಕಂಗಳಿಗೆ ಸೀಸವ ಕಾಸಿ ಪೊಯ್ಯಲು
ತಂಗಿ ಅಕ್ಕ ಬಂದು ಭಂಗವ ಬಿಡಿಸುವರೆ
ಅಂಗವು ಸ್ಥಿರವಲ್ಲ ರಂಗವಿಠಲ ಬಲ್ಲ ||೩||

Labels: ಚಿತ್ತಜನಯ್ಯನ ಚಿಂತಿಸು ಮನವೇ, Chittajanayyana Chintisu Manave, ಶ್ರೀಪಾದರಾಜರು, Sripadarajaru

ದುರಿತಗಜ ಪಂಚಾನನ ನರಹರಿಯೆ : Duritagaja Panchanana Narahariye

ದುರಿತಗಜ ಪಂಚಾನನ ನರಹರಿಯೆ

ಕೀರ್ತನಕಾರರು : ಶ್ರೀಪಾದರಾಜರು
ರಾಗ : ಕಾಂಬೋದಿ
ತಾಳ : ಆದಿ

ದುರಿತಗಜ ಪಂಚಾನನ ನರ-
ಹರಿಯೆ ದೇವರ ದೇವ ಕಾಯೊ ಗೋವಿಂದ    ||ಪ||

ಹೆಸರುಳ್ಳ ನದಿಗಳನೊಳಗೊಂಬ ಸಮುದ್ರನು
ಬಿಸುಡುವನೆ ಕಾಲುಹೊಳೆಗಳನು ಗೊವಿಂದ   ||೧||

ಒಂದು ಮೊಲಕೆ ಆರು ಹುಲಿ ಬಂದು ಕವಿದಿವೆ
ಬಂಧನ ಬಿಡಿಸೆನ್ನ ತಂದೆ ಗೋವಿಂದ  ||೨||

ಹೆತ್ತ ಮಕ್ಕಳು ಮರುಳಾದರೆ ತಾಯ್ತಂದೆ
ಎತ್ತದೆ ನೆಲಕೆ ಬಿಸುಡುವರೆ ಗೋವಿಂದ  ||೩||

ಮುನ್ನ ಮಾಡಿದ ಕರ್ಮ ಬೆನ್ನಟ್ಟಿ ಬಂದರೆ
ನಿನ್ನನ್ನು ಓಲೈಸಲ್ಯಾಕೆ ಗೋವಿಂದ  ||೪||

ಆಪತ್ತು ತಾಪತ್ರಯ ಬೆನ್ನ ಬಿಡದಿದ್ದರೆ
ಶ್ರೀಪತಿ ಶರಣೆನ್ನಲ್ಯಾಕೆ ಗೋವಿಂದ  ||೫||

ಅರಸು ಮುಟ್ಟಲು ದಾಸಿ ರಂಭೆಯಾದಳು ದೇವ
ಪರುಷ ಮುಟ್ಟಲು ಲೋಹ ಹೊನ್ನು ಗೋವಿಂದ ||೬||

ಮಾನಾಭಿಮಾನದೊಡೆಯ ರಂಗವಿಠಲ
ಜ್ಞಾನಿಗಳರಸನೆ ಕಾಯೋ ಗೋವಿಂದ   ||೭||

Labels: ದುರಿತಗಜ ಪಂಚಾನನ ನರಹರಿಯೆ, Duritagaja Panchanana Narahariye, ಶ್ರೀಪಾದರಾಜರು, Sripadarajaru

ವನಜನಯನನ ಮನವ ಮಧುಪ ನಂಬುವರೆ : Vanajanayanana Manava

ವನಜನಯನನ ಮನವ ಮಧುಪ ನಂಬುವರೆ

ಕೀರ್ತನಕಾರರು : ಶ್ರೀಪಾದರಾಜರು
ರಾಗ : ಆಹರಿ
ತಾಳ : ಝಂಪೆ

ವನಜನಯನನ ಮನವ ಮಧುಪ ನಂಬುವರೆ
ಮನದೆಗೆದ ಮದನಪಿತ ವಿಠಲರೇಯಾ                   ||ಪ||

ಅರಿಯದ ಬಾಲೇರಿಗೆ ತನ್ನ ಪರಿಯನರುಹಿಸಿ ಮುನ್ನ
ನೆರೆದು ರತಿಪತಿಯ ಸುಖ ನೆರೆದೋರಿದ
ತೊರೆದು ಬದುಕುವೆವೆಂತೋ ರತಿಪತಿಯ ಪಿತನಗಲಿ
ವಿರಹದುರಿ ತಾನಳವಡರಿ ಸುಡುತಿಹುದು               ||೧||

ನಡೆ ನಗೆಯ ತುದಿನೋಟ ಬಲೆಯನೆಮ್ಮೊಳು ಬೀಸಿ
ಬಿಡದೆಯೆಮ್ಮನು ತನ್ನ ವಶಮಾಡಿದ
ಪಡಿಯಿಲ್ಲದನುಭವದ ಸುಖದ ಸವಿಯನೆ ತೋರಿ
ಮಡದಿ ತಡೆದಳೊ ಮಧುರೆಯಲಿ ನಲ್ಲನ  ||೨||

ಎಂದೆಂದು ನಿಮ್ಮ ವಶದಲ್ಲಿಹೆನೆಂದಭಯವಿತ್ತು
ಇಂದುಮುಖಿ ನಾರಿಯರ ನೆರೆ ನಂಬಿಸಿ
ನಂದನಂದನ ನಮ್ಮ ಕಾನನದೊಳೀಡ್ಯಾಡಿ
ಇಂದು ಮಧುರೆಯ ನಾರಿಯರ ನೆಚ್ಚಿದ   ||೩||

ಇವನ ವಚನದ ಕಪಟ ತಿಳಿಯಲರಿಯದೆ ನಾವು
ನವ ಹರಿಣಿಯಂತೆ ಮರುಳಾಗಿ ಕೇಳಿ
ವಿವರವರಿಯದೆ ನಾವು ಕಡು ನೊಂದೆವೆಲೊ ಮಧುಪ
ಇವನ ಗುಣವರಿಯದೆ ಕಡು ಕರುಣಿ ಎಂಬುವರು ಬರಿದೆ ||೪||

ಪತಿಸುತರ ಭವಬಂಧನಗಳೆಲ್ಲ ಈಡ್ಯಾಡಿ
ಗತಿ ನಮಗೆ ಅವನೆಂದು ಮನಸೋತೆವೋ
ಕೃತಕವರಿಯದೆ ನಮ್ಮ ವನದೊಳು ನಿಲ್ಲಿಸಿ ಪೋದ
ಪತಿಯೊಡನೆ ಸಂಧಾನವೆಂತೊ ಎಲೊ ಮಧುಪ ||೫||

ಮರುಳುಗಳು ನಾವು ಶ್ರೀಪತಿಯ ಕೂಟವ ಬಯಸಿ
ಇರುಳು ಹಗಲು ಜರಿ ಜರಿದಳಲುವೆವು
ಸಿರಿಯವನ ಉಂಗುಟದ ಉಗುರು ಗುಣ ಕಾಣಳೆಲೊ
ಹರಿ ನಮ್ಮ ನೆರೆದುದಚರಿಯಲ್ಲವೇ ಜಗದಿ ||೬||

ತುಂಗಗುಣ ನಿಲಯ ಅಂಗಜನ ಪಿತನೆಂದು
ರಂಗನಿಗೆ ಮನಸೋತು ಮರುಳಾದೆವೋ
ಹಿಂಗು ಬದುಕುವುದೆಂತೋ ಘೃಂಗ ಮಧುರೆಗೆ ಪೋಗಿ
ರಂಗವಿಠಲನ ತಂದೆಮ್ಮನುಳುಹುವುದೋ ||೭||

Labels: ವನಜನಯನನ ಮನವ ಮಧುಪ ನಂಬುವರೆ, Vanajanayanana Manava, ಶ್ರೀಪಾದರಾಜರು, Sripadarajaru

ಶನಿವಾರ, ಆಗಸ್ಟ್ 31, 2013

ವಂದಿಪೆ ನಿನಗೆ ಗಣನಾಥಾ : Vandipe Ninage Gananatha

ವಂದಿಪೆ ನಿನಗೆ ಗಣನಾಥಾ

ಕೀರ್ತನಕಾರರು : ಶ್ರೀಪಾದರಾಜರು
ರಾಗ :  ನಾಟ 
ತಾಳ : ಆದಿ

ವಂದಿಪೆ ನಿನಗೆ ಗಣನಾಥಾ
ಮೊದಲೊಂದಿಪೆ ನಿನಗೆ ಗಣನಾಥಾ                 ||ಪ||
 

ಬಂದವಿಘ್ನಕಳೆ ಗಣನಾಥ                               ||ಅ.ಪ||
ಆದಿಯಲ್ಲಿ ಧರ್ಮರಾಜ ಪೂಜಿಸಿದ ನಿನ್ನ ಪಾದ
ಸಾಧಿಸಿದ ರಾಜ್ಯ ಗಣನಾಥ                             ||೧||

ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೆ
ಸಂದ ರಣದಲಿ ಗಣನಾಥ                                ||೨|||

ಮಂಗಳ ಮೂರುತಿ ಸಿರಿ ರಂಗವಿಟ್ಠಲನ್ನ ಪಾದ
ಭೃಂಗನೆ ಪಾಲಿಸೋ ಗಣನಾಥ                         ||೩||


Labels: ವಂದಿಪೆ ನಿನಗೆ ಗಣನಾಥಾ, Vandipe Ninage Gananatha, ಶ್ರೀಪಾದರಾಜರು, Sripadarajaru

ಸೋಮವಾರ, ಆಗಸ್ಟ್ 19, 2013

ಮರೆತೆಯೇನೋ ರಂಗ ಮಂಗಳಾಂಗ : Mareteyeno Ranga Mangalanga

ಮರೆತೆಯೇನೋ ರಂಗ ಮಂಗಳಾಂಗ

ಕೀರ್ತನಕಾರರು : ಶ್ರೀಪಾದರಾಜರು  
ರಾಗ :  ಕಾಂಬೋಧಿ  
ತಾಳ : ಝಂಪೆ  

ಮರೆತೆಯೇನೋ ರಂಗ ಮಂಗಳಾಂಗ 
ತುರುಕರ ಕಾಯ್ವಲ್ಲಿ ತೊಂಡನಾಗಿದ್ದೆನ್ನ                          ।।ಪ।।

ಕೋಲು ಕೈಯಲಿ ಕೊಳಲು ಜೋಲುಗಂಬಳಿ ಹೆಗಲ 
ಮ್ಯಾಲೆ ಕಲ್ಲಿಚೀಲಿ ಕೊಂಕಳಲ್ಲಿ 
ಕಾಲಗಡಗವನಿಟ್ಟು ಕಾಡೊಳಿಹ ಪಶುಹಿಂಡ 
ಲಾಲಿಸುವ ಬಾಲಕರ ಮ್ಯಾಳದೊಳಗಿದ್ದೆನ್ನ                     ।।೧।।

ಕಲ್ಲು ಮಣಿ ಕವಡೆಯನು ಕಾಡೊಳಿಹ ಗುಲಗಂಜಿ 
ಸಲ್ಲದೊಡವೆಯ ನೀನು ಸರ್ವಾಂಗಕೆ 
ಅಲ್ಲಲ್ಲೆಸೆಯೆ ಧರಿಸಿ ನವಿಲುಗರಿಗಳ ಗೊಂಡೆ 
ಅಲ್ಲಿ ಗೊಲ್ಲರ ಕೂಡ ಚಲ್ಲಾಟ ಮಾಡುತಲಿ                       ।।೨।।

ಸಿರಿದೇವಿ ಬಂದು ಸೇರಿದ ಬಳಿಕ ಲೋಕದಲಿ 
ಸಿರಿ ಅರಸನೆಂದು ಸೇವಕರರಿವರೋ 
ಶರಣಾಗತರ ಪೊರೆವ ಶ್ರೀ ರಂಗವಿಠಲಯ್ಯ 
ನರಸಿಂಗ ನೀನಿರುವ ಪರಿಯ ಮುಂದಿನ ಸಿರಿಯು             ।।೩।।

Labels: ಮರೆತೆಯೇನೋ ರಂಗ ಮಂಗಳಾಂಗ , Mareteyeno Ranga Mangalanga, ಶ್ರೀಪಾದರಾಜರು, Sripadarajaru

ಭಾನುವಾರ, ಆಗಸ್ಟ್ 4, 2013

ಚಿಂತೆಯನು ಮಾಡದಿರು ಚದುರೆ : Chinteyanu Maadadiru Chadure

ಚಿಂತೆಯನು ಮಾಡದಿರು ಚದುರೆ 

ಕೀರ್ತನಕಾರರು : ಶ್ರೀಪಾದರಾಜರು 
ರಾಗ :  ಮೋಹನ
ತಾಳ : ಝಂಪೆ 
 
ಚಿಂತೆಯನು ಮಾಡದಿರು ಚದುರೆ ನಿನಗೆ ನಾನು 
ಕಂತುಪಿತನನು ತೋರುವೆ                                     ।।ಪ।।

ಸಂತೊಷದಿಂದ ಸರ್ವಾಭರಣವಿಟ್ಟುಕೊಂಡು 
ನಿಂತು ಬಾಗಿಲೊಳು ನೋಡೆ ಪಾಡೆ                           ।।ಅ.ಪ।।

ಒಂದು ಕ್ಷಣ ಪಾದಾರವಿಂದ ತೊಳೆದು ಕುಡಿದು 
ಮಂದಹಾಸದಲಿ ನಲಿದು 
ಒಂದೆ ಮನದಲಿ ದಿವ್ಯಗಂಧವನು ತಂದ್ಹಚ್ಚಿ
ನಂದದಿಂದವನ ಮೆಚ್ಚಿ
ಅಂದವಾದ ಕುಸುಮಹಾರವನು ಸುಖನಿಧಿಗೆ 
ಕಂಧರದಿ ನೀಡಿ ನೋಡಿ 
ಸಂದೇಹ ಬಿಟ್ಟು ಬಿಗಿದಪ್ಪಿ ಮನವೊಂದಾಗಿ 
ಎಂದೆಂದಿಗಗಲದಿರೆನ್ನ ರನ್ನೆ                                     ।।೧।।

ಆಸನವ ಕೊಟ್ಟು ಕಮಲಾಸನನ ಪಿತಗೆ ಸವಿ 
ಯೂಟಗಳನುಣ್ಣಿಸಿ 
ಲೇಸಾಗಿ ತಾಂಬೂಲ ತಬಕದಲಿ ತಂದಿಟ್ಟು 
ವಾಸನೆಗಳನೆ ತೊಟ್ಟು 
ಸೂಸುವ ಸುಳಿಗುರುಳುಗಳ ತಿದ್ದುತಲಿ ನಕ್ಕು 
ಶ್ರಿಶನ್ನ ಮರೆಯ ಹೊಕ್ಕು 
ಆ ಸಮಯದಲಿ ನಿನಗೆ ದಾಸಿ ಎನ್ನಯ ಮನದಿ 
ವಾಸವಾಗು ಬಿಡದೆ ಎನ್ನ ರನ್ನೆ                                   ।।೨।।

ಇಂತು ಈ ಪರಿಯಲ್ಲಿ ಶ್ರೇಕಾಂತನನು ಕೂಡಿ ಏ 
ಕಾಂತದಲ್ಲಿ ರತಿಯ ಮಾಡಿ 
ಸಂತೋಷವನು ಪಡಿಸಿ ಸಕಲ ಭೋಗವ ತಿಳಿಸಿ 
ಸಂತತ ಸ್ನೇಹ ಬೆಳೆಸಿ 
ಅಂತರಂಗಕ್ಕೆ ಹಚ್ಚಿ ಅವನಾಗಿ ತಾ ಮೆಚ್ಚಿ 
ಪ್ರೀತಿಯಿಂದಧರ ಕಚ್ಚಿ 
ಕಂತುಕೇಳಿಯೊಳು ಕಡು ಚೆಲ್ವ ರಂಗವಿಠಲ 
ಇಂತು ನಿನ್ನಗಲ ಕಾಣೆ ಜಾಣೆ                                      ।।೩।।

Labels: ಚಿಂತೆಯನು ಮಾಡದಿರು ಚದುರೆ, Chinteyanu Maadadiru  Chadure, ಶ್ರೀಪಾದರಾಜರು, Sripadarajaru

ಗುರುವಾರ, ಜುಲೈ 25, 2013

ಕೊಂಬು ಕೊಳಲನೂದುತ್ತ : Kombu Kolalanoodutta

ಕೊಂಬು ಕೊಳಲನೂದುತ್ತ

ಕೀರ್ತನಕಾರರು : ಶ್ರೀಪಾದರಾಜರು 
ರಾಗ : ಮಾಯಾಮಾಳವಗೌಳ 
ತಾಳ : ಅಟ್ಟ

ಕೊಂಬು ಕೊಳಲನೂದುತ್ತ  ನಂಬಿಸಿ ಪೋದೆನೆಯವ್ವಾ 
ಅಂಬುಜನಾಭಗೆ ಮನ ಹಂಬಲಿಸುತ್ತಿದೆಯವ್ವಾ            ।।ಪ।।

ನಡೆಯಲಾರೆನೆಯವ್ವಾ ಅಡಿಯಿಡಲೊಶವಿಲ್ಲ 
ಬೆಡಗುಗಾರನ ಕೊಡೆ ನುಡಿ ತೆರಳಿತ್ತೆಯವ್ವಾ               ।।೧।।

ಮಾತು ಮನಸು ಬಾರದವಾ ಸೋತೆವವ್ವಾ ಕೃಷ್ಣಗಾಗಿ 
ಆತನ ಕಾಣದೆ ಮನ ಕಾತರಿಸುತಿದೆಯವ್ವಾ               ।।೨।।

ಅನ್ನೋದಕ ಒಳ್ಳೆವವಾ ಕಣ್ಣಿಗೆ ನಿದ್ರೆ ಬಾರದು 
ಮನ್ನಣೆಗಾರನ ಕೂಡೆ ಹೆಣ್ಣು ಜನ್ಮ ಸಾಕೆಯವ್ವಾ          ।।೩।।

ಮನೆಮನೆ ವಾರುತೆಗೆ ಮನವೆಳಸದೆಯವ್ವಾ 
ಮನಸಿಜಪಿತನೊಡನೆ ಮನ ತೆರಳಿತೆಯವ್ವಾ              ।।೪।।

ಗೋಪಮ್ಮನ ವಾರುತೆಗೆ ತಾಪ ಹಿರಿಯದಾಯಿತವ್ವಾ 
ಗೋಪ ಜನರ ಕೂಡಿದ ಶ್ರೀಪತಿ ರಂಗವಿಠಲಾ              ।।೫।।

Labels: ಕೊಂಬು ಕೊಳಲನೂದುತ್ತ , Kombu Kolalanoodutta, ಶ್ರೀಪಾದರಾಜರು, Sripadarajaru

ಮಂಗಳವಾರ, ಜುಲೈ 23, 2013

ಇಟ್ಹಾಂಗೆ ಇರುವೆನೋ ಹರಿಯೇ : Ithange Iruveno Hariye

ಇಟ್ಹಾಂಗೆ ಇರುವೆನೋ ಹರಿಯೇ

ಕೀರ್ತನಕಾರರು : ಶ್ರೀಪಾದರಾಜರು
ರಾಗ : ಸಾವೇರಿ
ತಾಳ : ಆದಿ

ಇಟ್ಹಾಂಗೆ ಇರುವೆನೋ ಹರಿಯೇ                    ||ಪ||
ಸೃಷ್ಟಿವಂದಿತ ಪಾದಪದುಮ ಶ್ರೀಹರಿಯೇ            ||ಅ.ಪ||

ಸಣ್ಣ ಶಾಲ್ಯೋದನ ಬೆಣ್ಣೆ ಕಾಸಿದ ತುಪ್ಪ
ಚಿನ್ನದ ಹರಿವಾಣದಲ್ಲಿ ಭೋಜನ
ಘನ್ನಮಹಿಮ ನಿನ್ನ ಕರುಣ ತಪ್ಪಿದ ಮ್ಯಾಲೆ ಕ
ದನ್ನ ಕಾಣದೆ ಬಾಯ್ಬಿಡಿಸುವಿ ಹರಿಯೇ                ||೧||

ಕೆಂಪಿಲಿ ಪೊಳೆವ ಪೀತಾಂಬರ ಉಡಿಸುವಿ
ಸೊಂಪಿನಂಚಿನ ಶಾಲು ಹೊದಿಸುವಿಯೋ
ಕಪಿಲಹರೇ ನಿನ್ನ ಕೃಪೆಯು ತಪ್ಪಿದ ಮ್ಯಾಲೆ
ಕಪರ್ದಕ ಕೌಪೀನವು ದೊರೆಯದೊ ಹರಿಯೇ        ||೨||

ಚಂದ್ರಶಾಲೆಲಿ ಚಂದ್ರಕಿರಣದಂತೊಪ್ಪುವ
ಚಂದದ ಮಂಚದೊಳ್ಮಲಗಿಸುವಿ
ಮಂದರೋದ್ಧರ ನಿನ್ನ ಮಮತೆ ತಪ್ಪಲು ಧರ್ಮ
ಮಂದಿರದೊಳು ತೋಳ್ತಲೆಗಿಂಬು ಹರಿಯೇ            ||೩||

ನರಯಾನದೊಳು ಕ್ಷಣ ನರವರನೆನಿಸುವೆ
ವರಛತ್ರ ಚಾಮರ ಹಾಕಿಸುವೆ
ಕರುಣಾನಿಧೇ ನಿನ್ನ ಕರುಣ ತಪ್ಪಿದ ಮ್ಯಾಲೆ
ಚರಣರಕ್ಷೆಯು ದೊರೆಯದು ಶ್ರೀಹರಿಯೇ            ||೪||

ಗಂಗಾಜನಕ ಪಾಂಡುರಂಗ ನಿನ್ನಯ ಭಕ್ತರ
ಸಂಗವಿರಲಿ ದುಷ್ಟ ಸಂಗ ಬ್ಯಾಡ
ಅಂಗನೆಯರ ಕೂಡಿ ಅನಂಗಬಾಣಕೆ ಸಿಲುಕಿ
ಭಂಗವ ಪಡಲಾರೆ ಶ್ರೀರಂಗವಿಠಲ ಹರಿಯೇ        ||೫||


Labels: ಇಟ್ಹಾಂಗೆ ಇರುವೆನೋ ಹರಿಯೇ, Ithange Iruveno Hariye, ಶ್ರೀಪಾದರಾಜರು, Sripadarajaru

ಇನ್ನಿವನು ಈಗ ಬರಲಿದಕೆ : Innivanu Eega Baralidake

ಇನ್ನಿವನು ಈಗ ಬರಲಿದಕೆ

ಕೀರ್ತನಕಾರರು : ಶ್ರೀಪಾದರಾಜರು
ರಾಗ : ಮುಖಾರಿ
ತಾಳ : ಝಂಪೆ

ಇನ್ನಿವನು ಈಗ ಬರಲಿದಕೆ ಬಗೆಯೇನು
ಚೆನ್ನಾಗಿ ಪೇಳೆ ರಮಣಿ                                ||ಪ||

ಮನ್ನಿಸಿ ಮಮತೆಯಲಿ ಮನವ ಸೆಳೆಕೊಂಡೊಯ್ದು
ಅನ್ಯರನು ಕೂಡುವನೆ ಕೆಳದಿ ಕೆಳದಿ                    ||ಅ.ಪ||

ಬಣ್ಣದ ಗಿಣಿ ಬರೆದ ಸಣ್ಣ ಕುಪ್ಪಸವುಳ್ಳ
ಚಿನ್ನದ ಶ್ರೀರೇಖೆ ಸೀರೆ
ಬಿನ್ನಣವುಳ್ಳ ಬಿಳಿಯೆಲೆ ಅಡಿಕೆ ಕೆನೆಸುಣ್ಣ
ಕರ್ಪೂರ ಕಾಚಿನುಂಡೆ
ಕಣ್ಣಿಗಿಂಪಾದ ಕಡುಚೆಲ್ವ ಮಲ್ಲಿಗೆ ಮೊಗ್ಗೆ
ಉನ್ನತವಾದ ದಂಡೆ
ಇನ್ನು ಈ ಪರಿಮಳವು ಬಗೆಬಗೆಯ ಆಭರಣ
ರನ್ನ ಕೆತ್ತಿಸಿದ ಗೊಂಡೆ
ಮುನ್ನ ಸಿಂಗರ ಮಾಡಿ ಎದೆ ಹಿಡಿದು ಬಿಗಿಯಪ್ಪಿ
ನಿನ್ನ ಈ ವೇಳೆ ಕೂಡಿದೆ ದೃಢದೆ                        ||೧||

ಈಗಾಗ ಬಾಹನೆಂತಿರುವೆ ತಾನೂರಿದ್ದ
ಉಗುರು ಗುರುತನು ನೋಡುತ
ಸೋಗೆಗಣ್ಣಿನ ಕಾಡಿಗೆಯ ಕಲಕಿದನೆಂದು
ಬೇಗ ನಟನೆಯ ಮಾಡುತ
ರಾಗದಿಂದಲಿ ರವಿಕೆ ನೆರಿಯನು ಬದಲುಟ್ಟು
ಭೋಗಕ್ಕೆ ಅನುವಾಗುತ
ಹೀಗೆ ಸಿಂಗರಿಸಿಕೊಂಡಿಷ್ಟು ಹೊತ್ತನು ಕಳೆದೆ
ಹೇಗೆ ಸೈರಿಪೆ ಕೊಡದೆ ಮುಂದೆ                        ||೨||

ಇಂದಲ್ಲದಿರೆ ನಾಳೆ ಬಹನೆಂದು ಇದ್ದರೆ
ಕಂದರ್ಪ ಕಾಡುತಿಹನೆ
ತಂದು ತೋರಿಸು ತನ್ನ ತಂದೆಯನೆಂದು ಪೂ
ವಿಂದ ಬಾಣವ ಎಸೆವನೆ
ಇಂದುಬಿಂಬವು ಮಂದಮಾರುತವು ಸುಮದ ಮಳೆ
ಯಿಂದ ಸೆಕೆಗಾನಾರೆನೆ
ಒಂದು ನಿಮಿಷದಲಿ ಶ್ರೀರಂಗವಿಠಲನನ್ನು
ಹೊಂದಿಸೆನ್ನಗಲದಂತೆ ಕಾಂತೆ                            ||೩||


Labels: ಇನ್ನಿವನು ಈಗ ಬರಲಿದಕೆ, Innivanu Eega Baralidake, ಶ್ರೀಪಾದರಾಜರು, Sripadarajaru

ಇಂದಿನಿರುಳಿನ ಕನಸಿನಲಿ ಬಂದು : Indinirulina Kanasinali Bandu

ಇಂದಿನಿರುಳಿನ ಕನಸಿನಲಿ ಬಂದು

ಕೀರ್ತನಕಾರರು : ಶ್ರೀಪಾದರಾಜರು
ರಾಗ : ಶುದ್ಧಸಾವೇರಿ
ತಾಳ : ಅಟ್ಟ

ಇಂದಿನಿರುಳಿನ ಕನಸಿನಲಿ ಬಂದು
ಮುಂದೆ ನಿಂದುದ ಕಂಡೆನೆ ಗೋವಳನ                ||ಪ||

ಆಣಿಮುತ್ತಿನ ಪೆಂಡೆಯದ ಕಾಲಂದುಗೆ ಗೆಜ್ಜೆ
ಜಾಣನಂಗಜನ ಪಿತನ ಕೈಯ ವೇಣು
ಮಾಣಿಕ್ಯದ ಕಂಕಣ ಹೊನ್ನುಡಿ ಘಂಟೆ
ವಾಣಿಯ ರಚನೆ ಎಲ್ಲಿಯು ಈ ಗೋವಳನ            ||೧||

ಮೊಲ್ಲೆ ಮಲ್ಲಿಗೆ ಜೊಲ್ಲೆಯದ ಚಲ್ಲಣದ ಶಿರ
ದಲ್ಲಿ ಗುಂಜಿಯ ದಂಡೆಯ ಚೆಲ್ವ ಕಂಗಳ
ಗೋಪಿಯರ ಮೇಲೆ ಕಡೆಗಣ್ಣ
ಚೆಲ್ಲುತೊಯ್ಯನೆ ನಡೆದ ಗೋವಳನ                ||೨||

ತಿತ್ತಿ ಮೌರಿ ಕೊಂಬು ಸುತ್ತಿದ ಕತ್ತ ತಾವಿಲಿ
ತುತ್ತೂರು ತೂರು ತೂರೆನುತ
ಚಿತ್ತವ ಮರುಳು ಮಾಡಿದನೆ ಪೊಂಗೊಳಲೂದಿ
ಮೊತ್ತದ ಗೋಪಿಯರನೆಲ್ಲ ಗೋವಳನ            ||೩||

ಎಸಳುಕಂಗಳ ಢಾಳ ಶಶಿ ನೊಸಲ ತಿಲಕ
ಎಸೆವ ಬಿಂಬಾಧರದ
ಪೊಸ ಮುತ್ತಿನೋಲೆ ಮೂಕುತಿ ಹೊನ್ನುಡಿ ಘಂಟೆ
ಎಸೆವ ನೂಪುರ ಹಾಹೆಯ ಗೋವಳನ                ||೪||

ಉಂಗುಟದಲಿ ಗಂಗೆಯಂಗಾಲಲವುಂಕೆ
ತುಂಗವೃಕ್ಷದ ಲಕ್ಷುಮೀ
ಮಂಗಳ ಮಹಿಮ ಭುಜಂಗಶಯನ ಸಿರಿ
ರಂಗವಿಠಲ ನೆರೆದ ಗೋವಳನ                    ||೫||


Labels: ಇಂದಿನಿರುಳಿನ ಕನಸಿನಲಿ ಬಂದು, Indinirulina Kanasinali Bandu, ಶ್ರೀಪಾದರಾಜರು, Sripadarajaru

ಸೋಮವಾರ, ಏಪ್ರಿಲ್ 22, 2013

ಇದನಾದರು ಕೊಡದಿದ್ದರೆ : Idanadaru Kodadiddare


ಇದನಾದರು ಕೊಡದಿದ್ದರೆ

ಕೀರ್ತನಕಾರರು : ಶ್ರೀಪಾದರಾಜರು
ರಾಗ : ಕೇದಾರಗೌಳ
ತಾಳ : ಆದಿ

ಇದನಾದರು ಕೊಡದಿದ್ದರೆ ನಿನ್ನ
ಪದಕಮಲವ ನಂಬಿ ಭಜಿಸುವದೆಂತೊ ||ಪ||

ಗ್ರಾಸವಾಸಗಳಿಗೆ ಇಲ್ಲವೆಂದು ನಿನ್ನ
ಬೇಸರಿಸಿ ಬೇಡಬಂದುದಿಲ್ಲ
ವಾಸುದೇವನೆ ನಿನ್ನ ದಾಸರ ದಾಸರ
ದಾಸರ ದಾಸ್ಯವ ಕೊಡು ಸಾಕೆಂದರೆ ||೧||

ಸತಿಸುತರುಗಳ ಸಹಿತನಾಗಿ ನಾ
ಹಿತದಿಂದ ಇರಬೇಕೆಂಬೊದಿಲ್ಲ
ಇತರ ವಿಷಯಂಗಳಿಗೆರಗಿಸದೆ ಮನಕೆ ನಿನ್ನ
ಕಥಾಮೃತವನೆ ಕೊಡು ಸಾಕೆಂದರೆ ||೨||

ಸಾಲವಾಯಿತೆಂದು ಸಂಬಳ ಎನಗೆ
ಸಾಲದೆಂದು ಬೇಡಬಂದುದಿಲ್ಲ
ನಾಲಗೆಯಲಿ ನಿನ್ನ ನಾಮದುಚ್ಚರಣೆಯ
ಪಾಲಿಸಬೇಕೆಂದು ಬೇಡಿದೆನಲ್ಲದೆ ||೩||

ಒಡವೆಗಳಿಲ್ಲ ಒಡ್ಯಾಣಗಳಿಲ್ಲೆಂದು
ಬಡವನೆಂದು ಬೇಡಬಂದುದಿಲ್ಲ
ಒಡೆಯ ನಿನ್ನಡಿಗಳಿಗೆರಗುವುದಕೆ ಮನ
ಬಿಡದಿಹದೊಂದನು ಕೊಡು ಸಾಕೆಂದರೆ ||೪||

ಆಗಬೇಕು ರಾಜ್ಯಭೋಗಗಳೆನಗೆಂದು
ಈಗ ನಾನು ಬೇಡಬಂದುದಿಲ್ಲ
ನಾಗಶಯನ ರಂಗವಿಠಲ ನಾ ನಿನ್ನ
ಬಾಗಿಲ ಕಾಯುವ ಭಾಗ್ಯ ಸಾಕೆಂದರೆ ||೫||

Labels: ಇದನಾದರು ಕೊಡದಿದ್ದರೆ, ಶ್ರೀಪಾದರಾಜರು,  Idanadaru Kodadiddare, Sripadarajaru, ಶ್ರೀಪಾದರಾಜರು, Sripadarajaru

ಶನಿವಾರ, ಏಪ್ರಿಲ್ 20, 2013

ಅಕಟಕಟ ಸಂಸಾರವನು ನೆಚ್ಚಿ ಕೆಡಬ್ಯಾಡ : Akatakata Samsaravanu


ಅಕಟಕಟ ಸಂಸಾರವನು ನೆಚ್ಚಿ ಕೆಡಬ್ಯಾಡ

ಕೀರ್ತನಕಾರರು : ಶ್ರೀಪಾದರಾಜರು
ರಾಗ : ಕಲ್ಯಾಣಿ
ತಾಳ : ಝಂಪೆ

ಅಕಟಕಟ ಸಂಸಾರವನು ನೆಚ್ಚಿ ಕೆಡಬ್ಯಾಡ
ವಿಕಟದಲಿ ಮಾನವರು ಕೆಟ್ಟರೆಲ್ಲರು ನಿಜ ||ಪ||

ಮುನ್ನ ನರಕಾಸುರನು ಬಡಿದು ಚಿಂತಾಮಣಿಯ
ತನ್ನ ಮನೆಯಲಿ ತಂದು ನಿಲ್ಲಿಸಿ ನೃಪರ
ಕನ್ನೆಯರ ಷೋಡಶಸಹಸ್ರವನೆ ತಂದಾತ
ಹೆಣ್ಣನೊಬ್ಬಳನೊಯ್ದುದಿಲ್ಲವೋ ನೋಡೋ ||೧||

ಸಾವಿರಾರು ಕರ ಪಡೆದ ಕಾರ್ತವೀರ್ಯಾರ್ಜುನನು
ಭೂವಲಯದೊಳಗೊಬ್ಬನೇ ವೀರನೆನಿಸಿ
ರಾವಣನ ಸೆರೆಯಿಟ್ಟು ಕಾಮಧೇನುವ ಬಯಸಿ
ಸಾವಾಗ ಏನು ಕೊಂಡೊಯ್ದನೋ ನೋಡೋ ||೨||

ಕೌರವನು ಧರೆಯೆಲ್ಲ ತನಗಾಗಬೇಕೆಂದು
ವೀರಪಾಂಡವರೊಡನೆ ಕದನಮಾಡಿ
ಮಾರಿಯ ವಶವೈದಿ ಹೋಹಾಗ ತನ್ನೊಡನೆ
ಶ್ಯಾರೆ ಭೂಮಿಯ ಒಯ್ದುದಿಲ್ಲವೋ ನೋಡೊ ||೩||

ವರಯಜ್ಞಗಳ ಮಾಡಿ ನಹುಷ ಸುರಪತಿಯೆನಿಸಿ
ಪರಮಮುನಿಗಳ ಕೈಲೆ ದಂಡಿಗೆಯ ಹೊರಿಸಿ
ಉರಗ ಜನುಮವನೈದಿ ಹೋಹಾಗ ತನ್ನೊಡನೆ
ಸುರಲೋಕದೊಳಗೇನ ಕೊಂಡ್ಹೋದ ನೋಡೋ ||೪||

ತುಂಗಗುಣ ಧ್ರುವ ವಿಭೀಷಣ ಹನುಮಾದಿಗಳು
ಮಂಗಳಾತ್ಮಕ ಹರಿಯನರಿತು ಭಜಿಸಿ
ಭಂಗವಿಲ್ಲದೆ ಹೊರೆದರೈ ಸಕಲ ಭಾಗ್ಯವನು
ರಂಗವಿಠಲರೇಯನ ನೆರೆ ನಂಬಿರೊ ||೫||

Labels: ಅಕಟಕಟ ಸಂಸಾರವನು ನೆಚ್ಚಿ ಕೆಡಬ್ಯಾಡ, Akatakata Samsaravanu Necchi Kedabyada, ಶ್ರೀಪಾದರಾಜರು, Sripadarajaru