ಮಂಗಳವಾರ, ಜುಲೈ 23, 2013

ಇಂದಿನಿರುಳಿನ ಕನಸಿನಲಿ ಬಂದು : Indinirulina Kanasinali Bandu

ಇಂದಿನಿರುಳಿನ ಕನಸಿನಲಿ ಬಂದು

ಕೀರ್ತನಕಾರರು : ಶ್ರೀಪಾದರಾಜರು
ರಾಗ : ಶುದ್ಧಸಾವೇರಿ
ತಾಳ : ಅಟ್ಟ

ಇಂದಿನಿರುಳಿನ ಕನಸಿನಲಿ ಬಂದು
ಮುಂದೆ ನಿಂದುದ ಕಂಡೆನೆ ಗೋವಳನ                ||ಪ||

ಆಣಿಮುತ್ತಿನ ಪೆಂಡೆಯದ ಕಾಲಂದುಗೆ ಗೆಜ್ಜೆ
ಜಾಣನಂಗಜನ ಪಿತನ ಕೈಯ ವೇಣು
ಮಾಣಿಕ್ಯದ ಕಂಕಣ ಹೊನ್ನುಡಿ ಘಂಟೆ
ವಾಣಿಯ ರಚನೆ ಎಲ್ಲಿಯು ಈ ಗೋವಳನ            ||೧||

ಮೊಲ್ಲೆ ಮಲ್ಲಿಗೆ ಜೊಲ್ಲೆಯದ ಚಲ್ಲಣದ ಶಿರ
ದಲ್ಲಿ ಗುಂಜಿಯ ದಂಡೆಯ ಚೆಲ್ವ ಕಂಗಳ
ಗೋಪಿಯರ ಮೇಲೆ ಕಡೆಗಣ್ಣ
ಚೆಲ್ಲುತೊಯ್ಯನೆ ನಡೆದ ಗೋವಳನ                ||೨||

ತಿತ್ತಿ ಮೌರಿ ಕೊಂಬು ಸುತ್ತಿದ ಕತ್ತ ತಾವಿಲಿ
ತುತ್ತೂರು ತೂರು ತೂರೆನುತ
ಚಿತ್ತವ ಮರುಳು ಮಾಡಿದನೆ ಪೊಂಗೊಳಲೂದಿ
ಮೊತ್ತದ ಗೋಪಿಯರನೆಲ್ಲ ಗೋವಳನ            ||೩||

ಎಸಳುಕಂಗಳ ಢಾಳ ಶಶಿ ನೊಸಲ ತಿಲಕ
ಎಸೆವ ಬಿಂಬಾಧರದ
ಪೊಸ ಮುತ್ತಿನೋಲೆ ಮೂಕುತಿ ಹೊನ್ನುಡಿ ಘಂಟೆ
ಎಸೆವ ನೂಪುರ ಹಾಹೆಯ ಗೋವಳನ                ||೪||

ಉಂಗುಟದಲಿ ಗಂಗೆಯಂಗಾಲಲವುಂಕೆ
ತುಂಗವೃಕ್ಷದ ಲಕ್ಷುಮೀ
ಮಂಗಳ ಮಹಿಮ ಭುಜಂಗಶಯನ ಸಿರಿ
ರಂಗವಿಠಲ ನೆರೆದ ಗೋವಳನ                    ||೫||


Labels: ಇಂದಿನಿರುಳಿನ ಕನಸಿನಲಿ ಬಂದು, Indinirulina Kanasinali Bandu, ಶ್ರೀಪಾದರಾಜರು, Sripadarajaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ