ಶನಿವಾರ, ಆಗಸ್ಟ್ 31, 2013

ಆವ ಸಿರಿಯಲಿ ನೀನು ಎನ್ನ ಮರೆತೆ : Ava Siriyali Ninu Enna Marete

ಆವ ಸಿರಿಯಲಿ ನೀನು ಎನ್ನ ಮರೆತೆ 

ಕೀರ್ತನಕಾರರು : ಕನಕದಾಸರು 
ರಾಗ :  ಕಾಣದ  
ತಾಳ : ಆಟ 

ಆವ ಸಿರಿಯಲಿ ನೀನು ಎನ್ನ ಮರೆತೆ ?
ದೇವ ಜಾನಕಿರಮಣ ಪೇಳು ರಘುಪತಿಯೆ ?                      ।।ಪ॥ 

ಸುರರ ಸೆರೆಯನು ಬಿಡಿಸಿ ಬಂದನೆಂಬಾ ಸಿರಿಯೆ 
ಕರಿ ಮೊರೆಯ ಲಾಲಿಸಿದೆನೆಂಬ ಸಿರಿಯೆ ?
ಶರಧಿ ಸೇತುವೆಯ ಕಟ್ಟಿದೆನೆನ್ನುವಾ ಸಿರಿಯೆ 
ಸ್ಥಿರವಾಗಿ ಹೇಳೆನಗೆ ಹೇಳು ರಘುಪತಿಯೆ                           ।।೧।।

ಕಡಲೊಳಗೆ ಮನೆ ಮಾಡಿ ಮಲಗಿದೆನೆಂಬಾ ಸಿರಿಯೆ 
ಮೃಡ ನಿನ್ನ ಸಖನಾದನೆಂಬ ಸಿರಿಯೆ ?
ಬಿಡದೆ ದ್ರೌಪದಿ ಮಾನ ಕಾಯ್ದನೆಂಬ ಸಿರಿಯೆ 
ದೃಢವಾಗಿ ಹೇಳೆನಗೆ ದೇವಕೀಸುತನೆ                                ।।೨।।

ಭೂಮಿಯನು ಮೂರಡಿಯ ಮಾಡಿದೆನೆಂಬ ಸಿರಿಯೆ 
ಕಾಮ ನಿನ್ನ ಸುತನಾದನೆಂಬ ಸಿರಿಯೆ 
ಆ ಮಹಾಲಕುಮಿ ನಿನ್ನ ಸತಿಯಾದಳೆಂಬ ಸಿರಿಯೆ 
ಪ್ರೇಮದಲಿ ಹೇಳೆನಗೆ ಸ್ವಾಮಿ ಅಚ್ಯುತನೆ                            ।।೩।।

ಮನುಜರೆಲ್ಲರು ನಿನ್ನ ಸ್ತುತಿಸುವರೆಂಬ ಸಿರಿಯೆ 
ಹನುಮ ನಿನ್ನ ಬಂಟನಾದೆನೆಂಬ ಸಿರಿಯೆ 
ಬಿನುಗುದೈವಗಳು ನಿನಗೆಣೆಯಿಲ್ಲವೆಂಬ ಸಿರಿಯೆ 
ಅನುಮಾನ ಮಾಡದೆ ಪೇಳೋ ನರಹರಿಯೆ                        ।।೪।।

ಇಂತು ಸಿರಿಯಲಿ ನೀನು ಎನ್ನ ಮರೆತರೆ ಸ್ವಾಮಿ 
ಪಂಥವೇ ನಿನಗಿದು ಆವಾ ನಡತೆ 
ಕಂತುಪಿತ ಕಾಗಿನೆಲೆಯಾದಿಕೇಶವ ರಂಗ 
ಚಿಂತೆಯನು ಬಿಡಿಸಿ ಸಂತೋಷಪಡಿಸೊ                            ।।೫।।

Labels: ಆವ ಸಿರಿಯಲಿ ನೀನು ಎನ್ನ ಮರೆತೆ, Ava Siriyali Ninu Enna Marete, ಕನಕದಾಸರು, Kanakadasaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ