ಶನಿವಾರ, ಆಗಸ್ಟ್ 31, 2013

ಸಾಮಾನ್ಯವಲ್ಲ ಶ್ರೀ ಹರಿಯ ಸೇವೆ : Samanyavalla Sri Hariya Seve

ಸಾಮಾನ್ಯವಲ್ಲ ಶ್ರೀ ಹರಿಯ ಸೇವೆ

ಕೀರ್ತನಕಾರರು : ಪುರಂದರದಾಸರು   
ರಾಗ : ಚಾರುಕೇಶಿ

ಸಾಮಾನ್ಯವಲ್ಲ ಶ್ರೀ ಹರಿಯ ಸೇವೆ
ಪಾಮರ ಜನರಿಗೆ ಸಾಮಾನ್ಯವಲ್ಲ                 ।।ಪ॥

ಸಾಮಜ ವರದನ ಪ್ರೇಮದಿ ನೆನೆವುದು
ತಾಮಸ ಬುದ್ಧಿಯ ತಾ ತಗ್ಗಿಸದೆ                    ।।ಅ.ಪ॥

ಅಂತರ ಮಲಿನವು ಅಳಿಯಬೇಕು
ಶ್ರೀಕಾಂತನ ಚರಿತ ಕೇಳಲು ಬೇಕು
ಸಂತತವಿರಬೇಕು ಸಂತ ಜನರ ಗುಣ
ನಿರಂತರದಲಿ ತಾ ಚಿಂತಿಸ ಬೇಕು                 ।।೧।।

ಸರ್ವಾಂತರ್ಯಾಮಿ ಶ್ರೀ ಹರಿಯೆಂದು
ಸರ್ವೇಶ್ವರನೆಂದು ಸ್ವರಮಣನೆಂದು
ಸರ್ವಾನುಗ್ರಹನೆಂದು ಪುರಂದರ ವಿಠಲನ
ಸರ್ವದಾ ಧ್ಯಾನಿಸಿ ಗರ್ವವಳಿಯಬೇಕು           ।।೨।।


Labels: ಸಾಮಾನ್ಯವಲ್ಲ ಶ್ರೀ ಹರಿಯ ಸೇವೆ, Samanyavalla Sri Hariya Seve, ಪುರಂದರದಾಸರು, Purandaradasaru

ಯಾದವ ನೀ ಬಾ ಯದುಕುಲನಂದನ : Yadava Nee Ba Yadukulanandana

ಯಾದವ ನೀ ಬಾ ಯದುಕುಲನಂದನ

ಕೀರ್ತನಕಾರರು : ಪುರಂದರದಾಸರು  
ರಾಗ :  ಕಾಂಬೋದಿ 
ತಾಳ : ಏಕ

ಯಾದವ ನೀ ಬಾ ಯದುಕುಲನಂದನ
ಮಾಧವ ಮಧುಸೂಧನ ಬಾರೋ                       ।।ಪ॥ 


ಸೋದರ ಮಾವನ ಮಧುರೆಲಿ ಮಡುಹಿದ
ಯಶೋದೆ ಕಂದ ನೀ ಬಾರೋ                           ।।ಅ.ಪ।।


ಶಂಖಚಕ್ರವು ಕೈಯಲಿ ಹೊಳೆಯುತ
ಬಿಂಕದ ಗೋವಳ ನೀ ಬಾರೋ
ಅಕಳಂಕ ಮಹಿಮನೆ ಆದಿನಾರಾಯಣ 

ಬೇಕೆಂಬ ಭಕುತರಿಗೊಲಿಬಾರೋ                        ।।೧।।

ಕಣಕಾಲಂದುಗೆ ಘಲುಘಲುರೆನುತಲಿ 

ಝಣಝಣ ವೇಣುನಾದದಲಿ
ಚಿಣಿಕೋಲು ಚೆಂಡು ಬುಗುರಿಯನಾಡುತ 

ಸಣ್ಣ ಸಣ್ಣ ಗೋವಳರೊಡಗೂಡಿ ಬಾರೋ              ।।೨।।

ಖಗವಾಹನನೇ ಬಗೆಬಗೆ ರೂಪನೇ 

ನಗುಮೊಗದರಸನೇ ನೀ ಬಾರೋ
ಜಗದೊಳು ನಿನ್ನಯ ಮಹಿಮೆಯ ಪೊಗಳುವೆ

ಪುರಂದರವಿಠಲ ನೀ ಬಾರೋ                            ।।೩।।

Labels: ಯಾದವ ನೀ ಬಾ ಯದುಕುಲನಂದನ, Yadava Nee Ba Yadukulanandana, ಪುರಂದರದಾಸರು, Purandaradasaru

ವಂದಿಪೆ ನಿನಗೆ ಗಣನಾಥಾ : Vandipe Ninage Gananatha

ವಂದಿಪೆ ನಿನಗೆ ಗಣನಾಥಾ

ಕೀರ್ತನಕಾರರು : ಶ್ರೀಪಾದರಾಜರು
ರಾಗ :  ನಾಟ 
ತಾಳ : ಆದಿ

ವಂದಿಪೆ ನಿನಗೆ ಗಣನಾಥಾ
ಮೊದಲೊಂದಿಪೆ ನಿನಗೆ ಗಣನಾಥಾ                 ||ಪ||
 

ಬಂದವಿಘ್ನಕಳೆ ಗಣನಾಥ                               ||ಅ.ಪ||
ಆದಿಯಲ್ಲಿ ಧರ್ಮರಾಜ ಪೂಜಿಸಿದ ನಿನ್ನ ಪಾದ
ಸಾಧಿಸಿದ ರಾಜ್ಯ ಗಣನಾಥ                             ||೧||

ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೆ
ಸಂದ ರಣದಲಿ ಗಣನಾಥ                                ||೨|||

ಮಂಗಳ ಮೂರುತಿ ಸಿರಿ ರಂಗವಿಟ್ಠಲನ್ನ ಪಾದ
ಭೃಂಗನೆ ಪಾಲಿಸೋ ಗಣನಾಥ                         ||೩||


Labels: ವಂದಿಪೆ ನಿನಗೆ ಗಣನಾಥಾ, Vandipe Ninage Gananatha, ಶ್ರೀಪಾದರಾಜರು, Sripadarajaru

ಶಕ್ತಿ ಸಹಿತ ಗಣಪತಿಂ : Shakti Sahita Ganapatim

ಶಕ್ತಿ ಸಹಿತ ಗಣಪತಿಂ 

ಕೀರ್ತನಕಾರರು : ಮುತ್ತುಸ್ವಾಮಿ ದೀಕ್ಷಿತರು
ರಾಗ : 
ಶಂಕರಾಭರಣಂ
ತಾಳ : ಏಕ

ಶಕ್ತಿ ಸಹಿತ ಗಣಪತಿಂ ಶಂಕರಾದಿ ಸೇವಿತಂವಿರಕ್ತ ಸಕಲ ಮುನಿವರ ಸುರ
ರಾಜ ವಿನುತ ಗುರುಗುಹಂ

ಭಕ್ತಾದಿ ಪೋಷಕಂ ಭವಸುತಂ ವಿನಾಯಕಂ
ಭುಕ್ತಿ ಮುಕ್ತಿ ಪ್ರದಂ ಭೂಷಿ ತಾಂಗಂ
ರಕ್ತ
ಪಾದಂಬುಜ ಭಾವಯಾಮಿ

Labels: ಶಕ್ತಿ ಸಹಿತ ಗಣಪತಿಂ, Shakti Sahita Ganapatim, ಮುತ್ತುಸ್ವಾಮಿ ದೀಕ್ಷಿತರು,, Muttuswamy Dikshitaru

ಪಾರ್ವತಿ ಪಾಲಿಸೆನ್ನ : Parvati Palisenna

ಪಾರ್ವತಿ ಪಾಲಿಸೆನ್ನ

ಕೀರ್ತನಕಾರರು : 
ಗೋಪಾಲ ದಾಸರು
ರಾಗ : 
ರೇವತಿ
ತಾಳ : ಆದಿ

ಪಾರ್ವತಿ ಪಾಲಿಸೆನ್ನ ಮಾನಿನಿ ರನ್ನೆ            ।।ಪ॥

ಪಾರ್ವತಿ ಭಕ್ತರ ಸಾರಥಿ ವಂದಿತೆ
ಸುರಪತಿ ಗಜಮುಖ ಮೂರುತಿ ಮಾತೆ        ।।೧।।


ಮನದಭಿಮಾನಿಯೇ ನೆನೆವೆನು ನಿನ್ನ
ಅನುಸರಿಸೆನ್ನನು ಅಂಬುಜ ಪಾಣಿ               ।।೨।।

ಮಂಗಳೆ ಮೃಡನ ಅಂತರಂಗಳೇ ಹರಿಪದ
ಭೃಂಗಳೆ ತೊಂಗಳೇ ಪನ್ನಗ ವೇಣಿ             ।।೩।।

ಗುಣ ಪೂರ್ಣ ವೇಣು ಗೋಪಾಲ
ವಿಠಲನ್ನ
ಕಾಣಿಸಿ ಕೊಡುವಂತ ಶೂಲಿಯ ರಾಣಿ          ।।೪।।


Labels: ಪಾರ್ವತಿ ಪಾಲಿಸೆನ್ನ, Parvati Palisenna, ಗೋಪಾಲ ದಾಸರು, Gopaladasaru

ಭೋ ಶಂಭೋ ಶಿವ ಶಂಭೋ : Bho Shambho Shiva Shambho

ಭೋ ಶಂಭೋ ಶಿವ ಶಂಭೋ ಸ್ವಯಂಭೋ

ಕೀರ್ತನಕಾರರು : ದಯಾನಂದ ಸರಸ್ವತಿ
ರಾಗ :  ರೇವತಿ
ತಾಳ : ಆದಿ
  
ಭೋ ಶಂಭೋ ಶಿವ ಶಂಭೋ ಸ್ವಯಂಭೋ       ।।ಪ॥

ಗಂಗಾಧರ ಶಂಕರ ಕರುಣಾಕರ
ಮಾಮವ ಭವ ಸಾಗರ ತಾರಕ                       ।।ಅ.ಪ॥

ನಿರ್ಗುಣ ಪರಬ್ರಹ್ಮ ಸ್ವರೂಪ
ಗಮ ಗಮ ಭೂತ ಪ್ರಪಂಚ ರಹಿತ
ನಿಜ ಗುಹ ನಿಹಿತ ನಿತಾಂತ ಅನಂತ
ಆನಂದ ಅತಿಶಯ
ಅಕ್ಷಯಲಿಂಗ                      ।।೧।।

ಧಿಮಿತ ಧಿಮಿತ ಧಿಮಿ ಧಿಮಿಕಿಟ ಕಿಟತೊಂ
ತೋಂ ತೋಂ ತರಿಕಿಟ ತರಿಕಿಟ ಕಿಟತೊಂ
ಮಾತಂಗ ಮುನಿವರ ವಂದಿತ ಈಶ
ಸರ್ವ ದಿಗಂಬರ ವೇಷ್ಟಿತ ವೇಷ
ನಿತ್ಯ ನಿರಂಜನ ನಿತ್ಯ ನಟೇಶ
ಈಶ ಸರ್ವೇಶ ಸರ್ವೇಶ                                 ।।೨।।


Labels: ಭೋ ಶಂಭೋ ಶಿವ ಶಂಭೋ, Bho Shambho Shiva Shambho, ದಯಾನಂದ ಸರಸ್ವತಿ, Dayananda Saraswati

ರಾಮಂ ಭಜೆ ಶ್ಯಾಮಂ ಮನಸಾ : Ramam Bhaje Shyam Manasa

ರಾಮಂ ಭಜೆ ಶ್ಯಾಮಂ ಮನಸಾ 

ಕೀರ್ತನಕಾರರು : ದಯಾನಂದ ಸರಸ್ವತಿ
ರಾಗ :  ದುರ್ಗಾ 
ತಾಳ : ಆದಿ

ರಾಮಂ ಭಜೆ ಶ್ಯಾಮಂ ಮನಸಾ 
ರಾಮಂ ಭಜೆ ಶ್ಯಾಮಂ ವಚಸ
ಸರ್ವ ವೇದ ಸಾರ ಭೂತಂ 

ಸರ್ವ ಭೂತ ಹೇತು ನಾತಂ                                     ।।ಪ॥ 

ವಿಭೀಷಣ ಅಂಜನೇಯ ಪೂಜಿತ ಚರಣಂ 

ವಸಿಷ್ಟಾದಿ ಮುನಿಗಣ ವೇದಿತ ಹೃದಯಂ
ವಶೀಕೃತ ಮಾಯಾಕಾರಿತ ವೇಷಂ 

ಈಶಂ ಪುರೇಶಂ ಸರ್ವೇಶಂ                                     ।।ಅ.ಪ॥ 

ನೀಲ ಮೇಘ ಶ್ಯಾಮಲಂ ನಿತ್ಯ ಧರ್ಮಚಾರಿಣಂ
ದಂಡಿನಂ ಕೋದಂಡಿನಂ ದುರಾಚಾರ ಖಂಡನಮ್
ಜನ್ಮ ಮೃತ್ಯು ಜರವ್ಯಾಧಿ ದುಖ ದೋಷ ಭವಹರಂ         ।।೧।।


Labels: ರಾಮಂ ಭಜೆ ಶ್ಯಾಮಂ ಮನಸಾ, Ramam Bhaje Shyam Manasa, ದಯಾನಂದ ಸರಸ್ವತಿ, Dayananda Saraswati

ಜೋ ಜೋ ರಾಮ ಆನಂದ ಘನ : Jo Jo Rama Ananda Ghana

ಜೋ ಜೋ ರಾಮ ಆನಂದ ಘನ 

ಕೀರ್ತನಕಾರರು : ತ್ಯಾಗರಾಜರು  
ರಾಗ :  ರೀತಿ ಗೌಳ
ತಾಳ : ಆದಿ

ಜೋ ಜೋ ರಾಮ ಆನಂದ ಘನ            ।।ಪ॥

ಜೋ ಜೋ ದಶರಥ ಬಲ ರಾಮ 
ಜೋ ಜೋ ಭೂಜ ಲೋಲ ರಾಮ            ।।ಅ.ಪ॥

ಜೋ ಜೋ ರಘುಕುಲ ತಿಲಕ ರಾಮ  

ಜೋ ಜೋ ಕುಟಿಲ ತರಲಕ ರಾಮ           ।।೧।।

ಜೋ ಜೋ ನಿರ್ಗುಣ ರೂಪ ರಾಮ  

ಜೋ ಜೋ ಸುಗುಣ ಕಲ್ಪ ರಾಮ              ।।೨।।

ಜೋ ಜೋ ರವಿ ಶಶಿ ನಯನ ರಾಮ  

ಜೋ ಜೋ ಫಣಿವರ ಶಯನ ರಾಮ          ।।೩।।

ಜೋ ಜೋ ಮೃದುತರ ಭಾಷ ರಾಮ  

ಜೋ ಜೋ ಮಂಜುಳಾ ವೇಷ ರಾಮ         ।।೪।।

ಜೋ ಜೋ ತ್ಯಾಗರಾಜಾರ್ಚಿತ ರಾಮ  

ಜೋ ಜೋ ಭಕ್ತ ಸಮಾಜ ರಾಮ              ।।೫।।

Labels: ಜೋ ಜೋ ರಾಮ ಆನಂದ ಘನ, Jo Jo Rama Ananda Ghana, ತ್ಯಾಗರಾಜರು, Tyagarajaru

ನೀನೆ ಪರಮ ಪಾವನಿ ನಿರಂಜನಿ : Neene Parama Pavani Niranjani

ನೀನೆ ಪರಮ ಪಾವನಿ ನಿರಂಜನಿ                        

ಕೀರ್ತನಕಾರರು : ಕಾಖಂಡಕಿ ಮಹಿಪತಿರಾಯರು 

ನೀನೆ ಪರಮ ಪಾವನಿ ನಿರಂಜನಿ                        ।।ಪ॥

ಆದಿ ನಾರಾಯಣಿ ಸಾಧು ಜನ ವಂದಿನಿ
ಸದಾನಂದ ರೂಪಿಣಿ ಸದ್ಗತಿ ಸುಖ ದಾಯಿನಿ           ।।ಅ.ಪ॥

ಲಕ್ಷುಮಿ ರೂಪಿಣಿ ಸಾಕ್ಷಾತ್ಕರಿಣಿ
ರಕ್ಷ ರಕ್ಷಾತ್ಮಿಣಿ ಅಕ್ಷಯ ಪದ ದಾಯಿನಿ                  ।।೧।।

ಅನಾಥ ರಕ್ಷಿಣಿ ದೀನೋದ್ಧಾರಿಣಿ
ಅನಂತಾನಂತ ಗುಣಿ ಮುನಿಜನ ಭೂಷಣಿ             ।।೨।।

ದಾರಿದ್ರ ಭಂಜನಿ ದುರಿತ ವಿಧ್ವಂಸಿನಿ
ಪರಮ ಸಂಜೀವಿನಿ ಸುರ ಮುನಿ ರಂಜನಿ              ।।೩।।

ಸ್ವಾಮಿ ಶ್ರೀ ಗುರುವಿನಿ ಬ್ರಹ್ಮಾನಂದ ರೂಪಿಣಿ
ಮಹಿಪತಿ ಕುಲ ಸ್ವಾಮಿನಿ ಪರಮ ಪಾವನಿ            ।।೪।।


Labels: ನೀನೆ ಪರಮ ಪಾವನಿ ನಿರಂಜನಿ, Neene Parama Pavani Niranjani, ಕಾಖಂಡಕಿ ಮಹಿಪತಿರಾಯರು, Kakhandaki Mahipatirayaru 

ಸರಸಿಜನಾಭ ಸೋದರಿ ಶಂಕರಿ ಪಾಹಿಮಾಂ : Sarasijanabhana Sodari

ಸರಸಿಜನಾಭ ಸೋದರಿ ಶಂಕರಿ ಪಾಹಿಮಾಂ

ಕೀರ್ತನಕಾರರು : ಮುತ್ತುಸ್ವಾಮಿ ದೀಕ್ಷಿತರು  
ರಾಗ :  ನಾಗಗಂಧಾರಿ
ತಾಳ : ರೂಪಕ 

ಸರಸಿಜನಾಭ ಸೋದರಿ ಶಂಕರಿ ಪಾಹಿಮಾಂ                   ।।ಪ॥

ವರದ ಅಭಯಕರ ಕಮಲೇ ಶರಣಾಗತ ವತ್ಸಲೇ              ।।ಅ.ಪ॥

ಪರಂಧಾಮ ಪ್ರಕೀರ್ತಿತೆ ಪಶುಪಾಶ ವಿಮೋಚಿತೆ
ಪನ್ನಗಾಭರಣಯುತೆ ನಾಗಗಾಂಧಾರಿ ಪುಜಿತಾಬ್ಜಪದೆ
ಸದಾ ನಂದಿತೆ ಸಂಪದೆ ವರ ಗುರುಗುಹ ಜನನಿ
ಮದಶಮನಿ ಮಹಿಷಾಸುರ ಮರ್ಧಿನಿ ಮಂದಗಮನಿ
ಮಂಗಳ ವರ ಪ್ರದಾಯಿನಿ                                            ।।೧।।


Labels: ಸರಸಿಜನಾಭ ಸೋದರಿ ಶಂಕರಿ ಪಾಹಿಮಾಂ, Sarasijanabhana Sodari, ಮುತ್ತುಸ್ವಾಮಿ ದೀಕ್ಷಿತರು, Muttuswamy Dikshitaru

ವೇಣುನಾದ ಪ್ರಿಯ ಗೋಪಾಲಕೃಷ್ಣ : Venunada Priya Gopalakrishna

ವೇಣುನಾದ ಪ್ರಿಯ ಗೋಪಾಲಕೃಷ್ಣ 

ಕೀರ್ತನಕಾರರು : ವಾದಿರಾಜರು

ವೇಣುನಾದ ಪ್ರಿಯ ಗೋಪಾಲಕೃಷ್ಣ          ।।ಪ॥

ವೇಣುನಾದ ವಿನೋದ ಮುಕುಂದ
ಗಾನವಿನೋದ ಶೃಂಗಾರ ಗೋಪಾಲ        ।।ಅ.ಪ॥

ವಂದಿತ ಚರಣ ವಸುಧೆಯ ಆಭರಣ
ಇಂದಿರ ರಮಣ ಇನ ಕೋಟಿ ತೇಜ
ಮಂದರಧರ ಗೋವಿಂದ ಮುಕುಂದ
ಸಿಂಧು ಶಯನ ಹರಿ ಕಂದರ್ಪ ಜನಕ          ।।೧।।

ನವನೀತ ಚೋರ ನಂದ ಕುಮಾರ
ಭುವನೇಕ ವೀರ ಬುದ್ಧಿ ವಿಸ್ತಾರ
ರವಿಕೊಟಿ ತೇಜ ರಘುವಂಶ ರಾಜ
ದಿವಿಜ ವಂದಿತ ಧನುಜಾರಿ ಗೋಪಾಲ        ।।೨।।

ಪರಮ ದಯಾಳು ಪಾವನ ಮೂರ್ತಿ
ವರಕೀರ್ತಿ ಹಾರ ಶೃಂಗಾರ ಲೋಲ
ಉರಗೇಂದ್ರ ಶಯನ ವರಹಯವದನ
ಶರಣು ರಕ್ಷಕ ಪಾಹಿ ಕೋದಂಡ ರಾಮ        ।।೩।।


Labels: ವೇಣುನಾದ ಪ್ರಿಯ ಗೋಪಾಲಕೃಷ್ಣ , Venunada Priya Gopalakrishna, ವಾದಿರಾಜರು, Vadirajaru

ಮಾತು ಮಾತಿಗೆ ಕೇಶವ ನಾರಾಯಣ : Matu Matige Keshava Narayana

ಮಾತು ಮಾತಿಗೆ ಕೇಶವ ನಾರಾಯಣ

ಕೀರ್ತನಕಾರರು : ವಾದಿರಾಜರು
ರಾಗ :  ರೇಗುಪ್ತಿ 
ತಾಳ : ಅಟ್ಟ 

ಮಾತು ಮಾತಿಗೆ ಕೇಶವ ನಾರಾಯಣ
ಮಾಧವ ಎನಬಾರದೆ ಹೇ ಜಿಹ್ವೆ                                         ।।ಪ॥

ಪ್ರಾತಃಕಾಲದೊಳೆದ್ದು ಪಾರ್ಥಸಾರಥಿಯೆಂದು
ಪ್ರೀತಿಲಿ ನೆನೆಯೆ ಸುಪ್ರೀತನಾಗುವ ಹರಿ                              ।।ಅ.ಪ॥

ಜಲಜನಾಭನ ನಾಮವು ಈ ಜಗಕ್ಕೆಲ್ಲ ಜನನ ಮರಣ ಹರವು
ಸುಲಭವೆಂದೆನಲಾಗಿ ಸುಖಕೆ ಕಾರಣವಿದು
ಬಲ್ಲಿದ ಪಾಪಗಳನ್ನೆಲ್ಲ ಪರಿಹರಿಸುವುದೆಂದು
ತಿಳಿದು ತಿಳಿಯದಿಹರೇ ಹೇ ಜಿಹ್ವೆ                                        ।।೧।।


ತರಳೆ ದ್ರೌಪದಿ ಸೀರೆಯ ಸೆಳೆಯುತಿರೆ ಹರಿ ನೀನೆ ಗತಿಯೆನಲು
ಪರಮಪುರುಷ ಭವಭಂಜನ ಕೇಶವ
ದುರುಳರ ಮರ್ದಿಸಿ ತರುಣಿಗಭಯವಿತ್ತ 

ಹರಿ ನಮ್ಮೊಡೆಯನಲ್ಲವೆ ಹೇ ಜಿಹ್ವೆ                                       ।।೨।।

ಹೇಮಕಶ್ಯಪಸಂಭವ ಈ ಜಗಕ್ಕೆಲ್ಲ ನಾಮವೆ ಗತಿಯೆನಲು
ವಾಮನ ನೀನೆಂದು ವಂದಿಸಿದವರಿಗೆ ಶ್ರೀಮದನಂತ
ಸ್ವಾಮಿ ಹಯವದನನು 

ಕಮಿಟ ಫಲವೀವನು ಹೇ ಜಿಹ್ವೆ                                          ।।೩।।

Labels: ಮಾತು ಮಾತಿಗೆ ಕೇಶವ ನಾರಾಯಣ, Matu Matige Keshava Narayana, ವಾದಿರಾಜರು, Vadirajaru

ದಯಮಾಡೆ ದಯಮಾಡೆ ತಾಯೆ ವಾಗ್ದೇವಿ : Dayamade Dayamade Taye Vagdevi

ದಯಮಾಡೆ ದಯಮಾಡೆ ತಾಯೆ ವಾಗ್ದೇವಿ 

ಕೀರ್ತನಕಾರರು : ಜಗನ್ನಾಥದಾಸರು

ದಯಮಾಡೆ ದಯಮಾಡೆ ತಾಯೆ ವಾಗ್ದೇವಿ               ।।ಪ॥

ದಯದಿಂದ ನೀನೆನ್ನ ನೋಡೆ ವಾಗ್ದೇವಿ                     ।।ಅ.ಪ॥

ಹಿತದಿ ಸನ್ಮತಿಯ ಶ್ರೀಮತಿದೇವಿ ನೀಡೆ
ವ್ರತತಿಜನೇತ್ರೆ ಭಾರತಿ ನೀ ದಯಮಾಡೆ                  ।।೧।।


ಸುಮುಖೀ ತ್ವಚ್ಚರಣಾಬ್ಜ ದ್ರುಮಛಾಯಶ್ರಿತರ
ಸುಮತಿಗಳೊಳಗಿಟ್ಟು ಮಮತೆಯಿಂ ಸಲಹೆ               ।।೨।।


ಜಗನ್ನಾಥವಿಠಲನ ಅಂಘ್ರಿಗಳ ಸೇವೆಯೊಳು
ಸುಗುಣೆ ಸನ್ಮತಿಕೊಟ್ಟು ಬೇಗೆನ್ನ ಸಲಹೆ                    ।।೩।।


Labels: ದಯಮಾಡೆ ದಯಮಾಡೆ ತಾಯೆ ವಾಗ್ದೇವಿ, Dayamade Dayamade Taye Vagdevi, ಜಗನ್ನಾಥದಾಸರು, Jagannathadasaru

ಬಾರೋ ಮುರಾರಿ ಬಾಲಕ ಶೌರಿ : Baro Murari Balaka Shouri

ಬಾರೋ ಮುರಾರಿ ಬಾಲಕ ಶೌರಿ

ಕೀರ್ತನಕಾರರು : ವಾದಿರಾಜರು
 
ಬಾರೋ ಮುರಾರಿ ಬಾಲಕ ಶೌರಿ
ಸಾರ ವಿಚಾರಿ ಸಂತೋಷಕಾರಿ                        ।।ಪ॥ 


ಆಟ ಸಾಕೇಳೋ ಮೈಯೆಲ್ಲ ಧೂಳೋ
ಊಟ ಮಾಡೇಳೊ ಕೃಷ್ಣ ಕೃಪಾಳೊ                  ।।ಅ.ಪ॥

ಅರುಣಾಬ್ಜಚರಣ ಮಂಜುಳಾಭರಣ
ಪರಮ ವಿತರಣ ಪನ್ನಗಶಯನ
ಮನೆಗೆದ್ದು ಬಾರೋ ಕೊನೆಗಯ್ಯ ತೋರೋ
ಚಿನ್ಮಯ ಬಾರೋ ನಗೆಮುಗ ತೋರೋ            ।।೧।।

ವೆಂಕಟರಮಣ ಸಂಕಟಹರಣ
ಕಿಂಕರಾಮರಗಣ ವಂದಿತಚರಣ
ಅರವಿಂದನಯನ ಶರದೇಂದುವದನ
ವರಯದುಸದನ ಸಿರಿ ಹಯವದನ                    ।।೨।।


Labels: ಬಾರೋ ಮುರಾರಿ ಬಾಲಕ ಶೌರಿ, Baro Murari Balaka Shouri, ವಾದಿರಾಜರು, Vadirajaru 

ಪವಮಾನ ಪವಮಾನ ಜಗದಾ ಪ್ರಾಣಾ : Pavamana Pavamana Jagada Prana

ಪವಮಾನ ಪವಮಾನ ಜಗದಾ ಪ್ರಾಣಾ 

ಕೀರ್ತನಕಾರರು : ವಿಜಯದಾಸರು
ರಾಗ : 
ಪಂತುವರಾಳಿ 
ತಾಳ : ಆದಿ 

ಪವಮಾನ ಪವಮಾನ ಜಗದಾ ಪ್ರಾಣಾ
ಸಂಕರುಷಣ ಭವಭಯಾರಣ್ಯ ದಹನ                          ।।ಪ॥

ಶ್ರವಣವೆ ಮೊದಲಾದ ನವವಿಧ ಭಕುತಿಯ
ತವಕದಿಂದಲಿ ಕೊಡು ಕವಿಗಳ ಪ್ರಿಯ                         ।।ಅ.ಪ॥

ಹೇಮ ಕಚ್ಚುಟ ಉಪವೀತ ಧರಿಪ ಮಾರುತಾ 

ಕಾಮಾದಿ ವರ್ಗರಹಿತಾ
ವ್ಯೋಮಾದಿ ಸರ್ವವ್ಯಾವೃತಾ ನಿರ್ಭೀತಾ 

ರಾಮಚಂದ್ರನ ನಿಜದೂತಾ 
ಯಾಮ ಯಾಮಕೆ ನಿನ್ನಾರಾಧಿಪುದಕೆ
ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ ಈ

ಮನಸಿಗೆ ಸುಖಸ್ತೋಮವ ತೋರುತ
ಪಾಮರ ಮತಿಯನು ನೀ ಮಾಣಿಪುದು
                       ।।೧।।

ವಜ್ರ ಶರೀರ ಗಂಭೀರ ಮುಕುಟಧರ 

ದುರ್ಜನವನ ಕುಠಾರ ನಿರ್ಜರ ಮಣಿದಯಾ 
ಪಾರಾವಾರ ಉದಾರಾ ಸಜ್ಜನರಘ ಪರಿಹಾರಾ 
ಅರ್ಜುನಗೊಲಿದಂದು ಧ್ವಜವಾಗಿ ನೀ ನಿಂದು
ಮೂರ್ಜಗ ಬಿರಿವಂತೆ ಗರ್ಜನೆ ಮಾಡಿದಿ
ಹೆಜ್ಜೆಹೆಜ್ಜೆಗೆ ನಿನ್ನಬ್ಜ ಪಾದಧೂಳಿ
ಮೂಜಗದಲಿ ಭವವರ್ಜಿತನೆನಿಸೊ
                           ।।೨।।

ಪ್ರಾಣ ಅಪಾನ ವ್ಯಾನೋದಾನ ಸಮಾನ 

ಆನಂದ ಭಾರತೀರಮಣ ನೀನೆ ಶರ್ವಾದಿ 
ಗೀರ್ವಾಣಾದ್ಯಮರರಿಗೆ ಜ್ಞಾನಧನ ಪಾಲಿಪ ವರೇಣ್ಯ
ನಾನು ನಿರುತದಲಿ ಏನೆಸಗುವೆ
ಮಾನಸಾದಿ ಕರ್ಮ ನಿನಗೊಪ್ಪಿಸಿದೆನೋ 

ಪ್ರಾಣನಾಥಾ ಶ್ರೀವಿಜಯವಿಠ್ಠಲನ
ಕರುಣಿಸಿ ಕೊಡುವ ಭಾನಪ್ರಕಾಶಾ                            ।।೩।।


Labels: ಪವಮಾನ ಪವಮಾನ ಜಗದಾ ಪ್ರಾಣಾ, Pavamana Pavamana Jagada Prana, ವಿಜಯದಾಸರು, Vijayadasaru

ಸದಾ ಎನ್ನ ಹೃದಯದಲ್ಲಿ : Sada Enna Hridayadalli

ಸದಾ ಎನ್ನ ಹೃದಯದಲ್ಲಿ

ಕೀರ್ತನಕಾರರು : ವಿಜಯದಾಸರು
ರಾಗ : 
ಪಂತುವರಾಳಿ 
ತಾಳ : ಆದಿ

ಸದಾ ಎನ್ನ ಹೃದಯದಲ್ಲಿ ವಾಸ ಮಾಡೋ ಶ್ರೀ ಹರಿ
ನಾದಮೂರ್ತಿ ನಿನ್ನ ಪಾದ ಮೋದದಿಂದ ಭಜಿಸುವೆನೋ             ।।ಪ।।

ಙ್ಞಾನವೆಂಬೋ ನವರತ್ನದ ಮಂಟಪದ ಮಧ್ಯದಲ್ಲಿ
ವೇಣುಗಾನ ಲೋಲನ ಕುಳ್ಳಿರಿಸಿ ಧ್ಯಾನದಿಂದ ಭಜಿಸುವೇನೋ     ।।೧।।

ಭಕ್ತಿರಸವೆಂಬೋ ಮುತ್ತು ಮಾಣಿಕ್ಯದಾ ಹರಿವಾಣದಿ 

ಮುಕ್ತನಾಗಬೇಕು ಎಂದು ಮುತ್ತಿನಾರತಿ ಎತ್ತುವೇನೋ               ।।೨।।

ನಿನ್ನ ನಾನು ಬಿಡುವನಲ್ಲ ಎನ್ನ ನೀನು ಬಿಡಲು ಸಲ್ಲ
ಘನ ಮಹಿಮ ವಿಜಯವಿಠಲ ನಿನ್ನ ಭಕುತರ ಕೇಳೋ ಸೊಲ್ಲ        ।।೩।।


Labels:
ಸದಾ ಎನ್ನ ಹೃದಯದಲ್ಲಿ, Sada Enna Hridayadalli, ವಿಜಯದಾಸರು, Vijayadasaru

ಗಜವದನ ಪಾಲಿಸೋ : Gajavadana Paliso

ಗಜವದನ ಪಾಲಿಸೋ

ಕೀರ್ತನಕಾರರು : ವಿಜಯದಾಸರು
ರಾಗ :  ಬೇಗದೆ


ಗಜವದನ ಪಾಲಿಸೋ
ತ್ರಿಜಗದೊಡೆಯ ಶ್ರೀ ಭುಜಗ ಭೂಷಣ                        ।।ಪ॥

ಏಸು ದಿನಕೆ ನಿನ್ನ ವಾಸವ ಪೊಗಳುವೆ
ಲೇಸ ಪಾಲಿಸೊ ನಿತ್ಯ ವಾಸವನುತನೆ                        ।।೧।।

ಭಕ್ತಿಯೊಳು ಭಜಿಪೆನು ರಕ್ತಾಂಬರಧರ
ಮುಕ್ತಿ ಪಥವೀಯೋ ಶಕ್ತಿ ಸ್ವರೂಪ                              ।।೨।।

ಪೊಡವಿಯೊಳಗೆ ನಿನ್ನ ಬಿಡುವರಾರೋ ರನ್ನ
ಕಡು ಹರುಷದಿ ಕಾಯೋ ವಿಜಯ ವಿಟ್ಟಲ ದಾಸ             ।।೩।।


Labels: ಗಜವದನ ಪಾಲಿಸೋ, Gajavadana Paliso, ವಿಜಯದಾಸರು, Vijayadasaru

ಲಾಲಿ ಪಾವನ ಚರಣ ಲಾಲಿ ಅಘಹರಣ : Lali Pavana Charana Lali

ಲಾಲಿ ಪಾವನ ಚರಣ ಲಾಲಿ ಅಘಹರಣ 

ಕೀರ್ತನಕಾರರು : ಕನಕದಾಸರು
ರಾಗ :  ಆನಂದಭೈರವಿ
ತಾಳ : ಆಟ


ಲಾಲಿ ಪಾವನ ಚರಣ ಲಾಲಿ ಅಘಹರಣ
ಲಾಲಿ ವೆಂಕಟರಮಣ ಲಲಿತ ಕಲ್ಯಾಣ                 ।।ಪ॥

ವನಜಾಕ್ಷ ಮಾಧವ ವಸುದೇವ ತನಯ
ಸನಕಾದಿ ಮುನಿವಂದ್ಯ ಸಾಧುಜನಪ್ರಿಯ
ಇನಕೋಟಿಶತತೇಜ ಮುನಿಕಲ್ಪ ಭೂಜ
ಕನಕಾದ್ರಿ ನಿಲಯ ವೆಂಕಟರಾಯ ಜಜೀಯ          ।।೧।।


ಜಗದೇಕನಾಯಕ ಜಲಜದಳನೇತ್ರ
ಖಗರಾಜ ವಾಹನ ಕಲ್ಯಾಣ ಚರಿತ
ಸಗರತನಯಾರ್ಚಿತ ಸನಕಾದಿ ವಿನುತ 

ರಘುವಂಶಕುತಿಲಕ ರಮಣೀಯಗಾತ್ರ                ।।೨।।
 

ನಂದಗೋಪ ಕುಮಾರ ನವನೀತ ಚೋರ
ಮಂದಾಕಿನೀ ಜನಕ ಮೋಹನಾಕಾರ
ಇಂದುಧರಸತಿ ವಿನುತ ವಿಶ್ವಸಂಚಾರ
ನಂದಗೋವಿಂದ ಮುಚುಕುಂದ ನುತಸಾರ          ।।೩।।
 

ಪಕ್ಷಿವಾಹನ ವಿಷ್ಣುಪಾಹಿ ಪರಮೇಶ 
ರಕ್ಷ ಕೌಸ್ತುಭಭೂಷ ವೈಕುಂಠವಾಸ 
ಅಕ್ಷಯ ಫಲದಾಟ ಅಖಿಳ ಲೋಕೇಶ 
ಲಕ್ಷಣ ಪರಿಪೂರ್ಣ ಲಕ್ಷ್ಮಿಪ್ರಾಣೇಶ                      ।।೪।।

ನರಮೃಗಾಕಾರಿ ಹಿರಣ್ಯಕ ವೈರಿ
ಕರಿರಾಜ ರಕ್ಷಕ ಕಾರುಣ್ಯಮೂರ್ತಿ
ಹರಿ ಆದಿಕೇಶವ ಗುರು ಅಪ್ರಮೇಯ
ಶ್ರೀಧರ ಶೇಷಗಿರಿ ವರ ತಿಮ್ಮರಾಯ                  ।।೫।।


Labels: ಲಾಲಿ ಪಾವನ ಚರಣ ಲಾಲಿ ಅಘಹರಣ, Lali Pavana Charana Lali, ಕನಕದಾಸರು, Kanakadasaru

ಏಳು ನಾರಾಯಣ ಏಳು ಲಕ್ಷ್ಮೀರಮಣ : Elu Narayana Elu Lakshmiramana

ಏಳು ನಾರಾಯಣ ಏಳು ಲಕ್ಷ್ಮೀರಮಣ

ಕೀರ್ತನಕಾರರು : ಕನಕದಾಸರು
ರಾಗ :  ಬೌಳಿ
ತಾಳ : ಖಂಡಛಾಪು


ಏಳು ನಾರಾಯಣ ಏಳು ಲಕ್ಷ್ಮೀರಮಣ                 ।।ಪ॥

ಏಳು ಶ್ರೀಗಿರಿ ಒಡೆಯ ಶ್ರೀವೆಂಕಟೇಶ
ಏಳಯ್ಯ ಬೆಳಗಾಯಿತು                                     ।।ಅ.ಪ॥

ಕಾಸಿದ್ದ ಹಾಲನ್ನು ಕಾವಡಿಯೊಳು ಹೆಪ್ಪಿಟ್ಟು
ಲೇಸಾಗಿ ಕಡೆದು ಹೊಸಬೆಣ್ಣೆ ಕೊಡುವೆ
ಶೇಷಶಯನನೆ ಏಳು ಸಮುದ್ರ ಮಥನವ ಮಾಡು
ದೇಶ ಕೆಂಪಾಯಿತು ಏಳಯ್ಯ ಹರಿಯೇ                 ।।೧।।

ಅರಳು ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳ
ಸುರರು ತಂದಿದ್ದಾರೆ ಬಲು ಭಕುತಿಯಿಂದ
ಅರವಿಂದನಾಭ ಸಿರಿ ವಿಧಿಭವಾದಿಗಳೊಡೆಯ
ಹಿರಿದಾಗಿ ಕೋಳಿ ಕೂಗಿತೇಳಯ್ಯ ಹರಿಯೇ            ।।೨।।

ದಾಸರೆಲ್ಲರು ಬಂದು ಧೂಳಿ ದರ್ಶನ ಗೊಂಡು
ಲೇಸಾಗಿ ತಾಳ ದಂಡಿಗೆಯ ಪಿಡಿದು
ಶ್ರೀಶನೆಲೆಯಾದಿ ಕೇಶವ ನಿಮ್ಮ ಪಾದವನು
ಲೇಸಾಗಿ ಸ್ಮರಿಸಿ ಪೊಗಳುವರು ಹರಿಯೇ              ।।೩।।


Labels: ಏಳು ನಾರಾಯಣ ಏಳು ಲಕ್ಷ್ಮೀರಮಣ, Elu Narayana Elu Lakshmiramana, ಕನಕದಾಸರು, Kanakadasaru

ಎಲ್ಲಿರುವನೋ ರಂಗ : Elliravano Ranga

ಎಲ್ಲಿರುವನೋ ರಂಗ 

ಕೀರ್ತನಕಾರರು : ಕನಕದಾಸರು 
ರಾಗ :  ಮುಖಾರಿ
ತಾಳ : ಝಂಪೆ  

ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ                 ।।ಪ॥

ಎಲ್ಲಿ ಭಕ್ತರು ಕರೆಯೆ ಅಲ್ಲಿ ಬಂದೊದಗುವನು                 ।।ಅ.ಪ॥ 

 
ತರಳ ಪ್ರಹ್ಲಾದ ಹರಿ ವಿಶ್ವಮಯನೆಂದು
ಭರದೊದೆಯಲವನಪಿತ ಕೋಪದಿಂದ
ಸ್ಥಿರವಾದೊಳಿ ಕಂಭದಲಿ ತೋರು ತೋರೆನಲು
ಭರದಿಂದ ಬರಲದಕೆ ವೈಕುಂಠ ನೆರೆಮನೆಯೇ               ।।೧।।

 

ಕುರುಪತಿಯು ದ್ರೌಪದಿಯ ಸೀರೆಯನು ಸೆಳೆಯುತಿರೆ
ತರುಣಿ ಹಾ ಕೃಷ್ಣ ಎಂದರೆ ಕೇಳ್ದು
ಭರದಿಂದ ಅಕ್ಷಯಾಂಬರವೀಯೆ ಹಸ್ತಿನಾ
ಪುರಿಗೆ ದ್ವಾರಾವತಿಯು ಕೂಗಳತೆಯೇ                      ।।೨।।


ಅಣುಹೊತ್ತಿನೊಳೆಲ್ಲ ಪರಿಪೂರ್ಣ ವಿಶ್ವಮಯ
ಗಣನೆಯಿಲ್ಲದ ಮಹಾಮಹಿಮನೆನಿಪ
ಘನ ಕೃಪಾನಿಧಿ ಕಾಗಿನೆಲೆಯಾದಿಕೇಶವನು
ನೆನೆವರ ಮನದೊಳಿಹನೆಂಬ ಬಿರುದುಂಟಾಗಿ                 ।।೩।।


Labels: ಎಲ್ಲಿರುವನೋ ರಂಗ, Elliravano Ranga, ಕನಕದಾಸರು, Kanakadasaru

ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ : Nee Mayeyolago Ninnolu Mayeyo

ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ

ಕೀರ್ತನಕಾರರು : ಕನಕದಾಸರು
ರಾಗ :  ಕಾಂಬೋದಿ  
ತಾಳ : ಝಂಪೆ   


ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ                  ।।ಪ॥ 

ನೀ ದೇಹದೊಳಗೊ ನಿನ್ನೊಳು ದೇಹವೊ                          ।।ಅ.ಪ॥ 


ಬಯಲುಲೊಳಗೆ ಆಲಯವೊ ಆಲಯದೊಳಗೆ ಬಯಲೊ 
ಬಯಲು ಆಲಯವೆರಡು ನಯನದೊಳಗೊ
ನಯನ ಬುದ್ಧಿಯ ಒಳಗೊ ಬುದ್ಧಿ ನಯನದೊಳಗೊ
ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ                     ।।೧।।


ಸವಿಯು ಸಕ್ಕರೆಯೊಳಗೊ ಸಕ್ಕರೆಯು ಸವಿಯೊಳಗೊ
ಸವಿಯು ಸಕ್ಕರೆಗಳೆರಡು ಜಿಹ್ವೆಯೊಳಗೊ
ಜಿಹ್ವೆ ಮನಸಿನ ಒಳಗೊ ಮನಸು ಜಿಹ್ವೆಯ ಒಳಗೊ
ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ                     ।।೨।।


ಕುಸುಮದಲಿ ಗಂಧವೊ ಗಂಧದಲಿ ಕುಸುಮವೊ
ಕುಸುಮಗಂಧಗಳೆರಡು ಆಘ್ರಾಣದೊಳಗೊ
ಅಸಮಭವ ಕಾಗಿನೆಲೆಯಾದಿ ಕೇಶವರಾಯ
ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೊ ಹರಿಯೆ                   ।।೩।।  


Labels: ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ, Nee Mayeyolago Ninnolu Mayeyo, ಕನಕದಾಸರು, Kanakadasaru

ಕಂಡು ಕಂಡು ನೀ ಎನ್ನ ಕೈ ಬಿಡುವರೇ : Kandu Kandu Nee Enna

ಕಂಡು ಕಂಡು ನೀ ಎನ್ನ ಕೈ ಬಿಡುವರೇ

ಕೀರ್ತನಕಾರರು : ಪುರಂದರದಾಸರು
ರಾಗ :  ಕಾಂಬೋದಿ  
ತಾಳ : ಖಂಡಝಂಪೆ 


ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣಾ           ।।ಪ॥ 

ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ಹರಿ                 ।।ಅ.ಪ॥

ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ
ನಿಂದೆಯಲಿ ನೊಂದೆನೈ ನೀರಜಾಕ್ಷ
ತಂದೆತಾಯಿಯು ನೀನೆ ಬಂಧುಬಳಗವು ನೀನೆ
ಎಂದೆಂದಿಗೂ ನಿನ್ನ ನಂಬಿದೆನೋ ಕೃಷ್ಣಾ                 ।।೧।।

ಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿ
ಎಣಿಸಲಾರದ ಭವದಿ ಕಡುನೊಂದೆ ನಾನು
ಸನಕಾದಿ ಮುನಿವಂದ್ಯ ವನಜಸಂಭವ ಜನಕ
ಫಣಿಶಾಯಿ ಪ್ರಹ್ಲಾದಗೊಲಿದ ಶ್ರೀಕೃಷ್ಣಾ                    ।।೨।।

ಭಕ್ತವತ್ಸಲನೆಂಬೊ ಬಿರುದು ಪೊತ್ತಮೇಲೆ
ಭಕ್ತರಾಧೀನನಾಗಿರಬೇಡವೆ
ಮುಕ್ತಿದಾಯಕ ದೇವ ಪುರಂದರವಿಠಲನೆ 

ಶಕ್ತ  ನೀನಹುದೆಂದು ನಂಬಿದೆನೊ ಶ್ರೀಕೃಷ್ಣಾ             ।।೩।।

Labels: ಕಂಡು ಕಂಡು ನೀ ಎನ್ನ, Kandu Kandu Nee Enna, ಪುರಂದರದಾಸರು, Purandaradasaru 

ಆವ ಸಿರಿಯಲಿ ನೀನು ಎನ್ನ ಮರೆತೆ : Ava Siriyali Ninu Enna Marete

ಆವ ಸಿರಿಯಲಿ ನೀನು ಎನ್ನ ಮರೆತೆ 

ಕೀರ್ತನಕಾರರು : ಕನಕದಾಸರು 
ರಾಗ :  ಕಾಣದ  
ತಾಳ : ಆಟ 

ಆವ ಸಿರಿಯಲಿ ನೀನು ಎನ್ನ ಮರೆತೆ ?
ದೇವ ಜಾನಕಿರಮಣ ಪೇಳು ರಘುಪತಿಯೆ ?                      ।।ಪ॥ 

ಸುರರ ಸೆರೆಯನು ಬಿಡಿಸಿ ಬಂದನೆಂಬಾ ಸಿರಿಯೆ 
ಕರಿ ಮೊರೆಯ ಲಾಲಿಸಿದೆನೆಂಬ ಸಿರಿಯೆ ?
ಶರಧಿ ಸೇತುವೆಯ ಕಟ್ಟಿದೆನೆನ್ನುವಾ ಸಿರಿಯೆ 
ಸ್ಥಿರವಾಗಿ ಹೇಳೆನಗೆ ಹೇಳು ರಘುಪತಿಯೆ                           ।।೧।।

ಕಡಲೊಳಗೆ ಮನೆ ಮಾಡಿ ಮಲಗಿದೆನೆಂಬಾ ಸಿರಿಯೆ 
ಮೃಡ ನಿನ್ನ ಸಖನಾದನೆಂಬ ಸಿರಿಯೆ ?
ಬಿಡದೆ ದ್ರೌಪದಿ ಮಾನ ಕಾಯ್ದನೆಂಬ ಸಿರಿಯೆ 
ದೃಢವಾಗಿ ಹೇಳೆನಗೆ ದೇವಕೀಸುತನೆ                                ।।೨।।

ಭೂಮಿಯನು ಮೂರಡಿಯ ಮಾಡಿದೆನೆಂಬ ಸಿರಿಯೆ 
ಕಾಮ ನಿನ್ನ ಸುತನಾದನೆಂಬ ಸಿರಿಯೆ 
ಆ ಮಹಾಲಕುಮಿ ನಿನ್ನ ಸತಿಯಾದಳೆಂಬ ಸಿರಿಯೆ 
ಪ್ರೇಮದಲಿ ಹೇಳೆನಗೆ ಸ್ವಾಮಿ ಅಚ್ಯುತನೆ                            ।।೩।।

ಮನುಜರೆಲ್ಲರು ನಿನ್ನ ಸ್ತುತಿಸುವರೆಂಬ ಸಿರಿಯೆ 
ಹನುಮ ನಿನ್ನ ಬಂಟನಾದೆನೆಂಬ ಸಿರಿಯೆ 
ಬಿನುಗುದೈವಗಳು ನಿನಗೆಣೆಯಿಲ್ಲವೆಂಬ ಸಿರಿಯೆ 
ಅನುಮಾನ ಮಾಡದೆ ಪೇಳೋ ನರಹರಿಯೆ                        ।।೪।।

ಇಂತು ಸಿರಿಯಲಿ ನೀನು ಎನ್ನ ಮರೆತರೆ ಸ್ವಾಮಿ 
ಪಂಥವೇ ನಿನಗಿದು ಆವಾ ನಡತೆ 
ಕಂತುಪಿತ ಕಾಗಿನೆಲೆಯಾದಿಕೇಶವ ರಂಗ 
ಚಿಂತೆಯನು ಬಿಡಿಸಿ ಸಂತೋಷಪಡಿಸೊ                            ।।೫।।

Labels: ಆವ ಸಿರಿಯಲಿ ನೀನು ಎನ್ನ ಮರೆತೆ, Ava Siriyali Ninu Enna Marete, ಕನಕದಾಸರು, Kanakadasaru

ದುರಿತ ವಾರಿವಾಹ ಜಂಝಾನಿಳ ಶರಣು : Durita Varivaha Jamjhanila Sharanu

ದುರಿತ ವಾರಿವಾಹ ಜಂಝಾನಿಳ ಶರಣು

ಕೀರ್ತನಕಾರರು : ಗೋಪಾಲದಾಸರು
ರಾಗ :  ಕಾಂಬೋದಿ  
 
ತಾಳ : ಝಂಪೆ 

ದುರಿತ ವಾರಿವಾಹ ಜಂಝಾನಿಳ ಶರಣು
ಶರಣು ನಮ್ಮ ಗುರುವೆ ವಿಜಯರಾಯರು                  ||ಪ||

ಆಗಾಮಿ ಸಂಚಿತ ಅಖಿಳಕರ್ಮದೂರ
ರಾಜದ್ವೇಷಾದಿ ದುರ್ಗುಣವರ್ಜಿತ
ಭೋಗಪ್ರಾಶಬ್ಧ ಭುಂಜಿಸುವ ಭೂದೇವ
ಭಾಗವತರನ್ನ ಬಿಡದೆ ಭಜಿಸುವರ                           ||೧||

ಈಷಣತ್ರಯ ದೂರ ಇಳೆಯೊಳಗೆ ಪುಣ್ಯ
ದೇಶ ಸಂಚಾರ ಪಾವನ ಶರೀರ
ದಾಸರ ನಿಜಪ್ರಿಯ ದಮೆಶಮೆಯಾದಿ ಪಾವನ
ತೋಷಭರಿತ ನಿತ್ಯ ಕೊಂಡಾಡುವ ಜನರ                 ||೨||


ಅಧ್ಯಾತ್ಮ ಅಮಿತ ಗೋಪ್ಯತತ್ವವಿಚಾರ 
ಸ್ವಾಧ್ಯಾಯ ನಿಪುಣ ಸಕಲ ಜನ್ಮದಿ 
ಅದ್ವೈತಮತಕೋಲಾಹಲ ಅಮಲಶೀಲ
ಸಿದ್ಧಾಂತ ಜ್ಞಾನನಿಧಿಯೆ ನಿಜಾಶ್ರಿತರ                       ।।೩।।

ಕಾಮಾದಿ ಷಡುರಿಪುಗಳನ ಗೆಲಿದು ಹೃದಯ 
ವ್ಯೋಮದೊಳಗೆ ನಿತ್ಯದಿ ಪೂಜಿಸುವ ಮಹಿಮ
ನೇಮದಿಂದಲಿ ನಿಮ್ಮ ಸ್ಮರಿಸುವ ಜನರ                    ।।೪।।

ಭುವನ ಮಂಡಾಲಾಧಿಪ ಕವಿಗಳ ಶಿರೋರತುನ 
ಭವದೂರ ಭಾಗ್ಯನಿಧಿಯೆ ಭಕ್ತರ 
ಪವನಾಂತರ್ಗತ ನಮ್ಮ ಗೋಪಾಲವಿಠಲನ್ನ 
ಸುವನಜಚರಣಸೇವೆಯಲಿಟ್ಟ ಗುರುರನ್ನ                   ।।೫।।

Labels: ದುರಿತ ವಾರಿವಾಹ ಜಂಝಾನಿಳ ಶರಣು, Durita Varivaha Jamjhanila Sharanu, ಗೋಪಾಲ ದಾಸರು, Gopaladasaru

ಎಲ್ಲಿದ್ದರೇನು ಶ್ರೀಹರಿಗಲ್ಲದವನು : Ellidarenu Sriharigalladavanu

ಎಲ್ಲಿದ್ದರೇನು ಶ್ರೀಹರಿಗಲ್ಲದವನು

ಕೀರ್ತನಕಾರರು : ವಿಜಯದಾಸರು
ರಾಗ :  ಕಾಂಬೋದಿ  

ತಾಳ : ಝಂಪೆ 
 
ಎಲ್ಲಿದ್ದರೇನು ಶ್ರೀಹರಿಗಲ್ಲದವನು                           ।।ಪ।।

ನಿಲ್ಲದೆ  ಜಪಿಸಿದರೆ ಸಲ್ಲುವನೆ ಸದ್ಗತಿಗೆ 
ಕಪ್ಪೆ ಕಮಲದ ಬಳಿಯೆ ತಪ್ಪದೆ ಅನುಗಾಲ 
ಇಪ್ಪುದೈ ಒಂದು ಅರೆಘಳಿಗೆ ಬಿಡದೆ 
ಒಪ್ಪದಿಂದಲಿ ಅದರ ಪರಿಮಳದ ಸೊಬಗನೀ 
ಕಪ್ಪೆ ವಾಸನೆಗೊಂಡು ಹರುಷಪಡಬಲ್ಲುದೆ               ।।೧।।

ಹಾಲುಕೆಚ್ಚಲು ಬಳಿಯೆ ತೊಣಸಿ ಹತ್ತಿಕೊಂಡು 
ಕಾಲವನು ಕಳೆವ ಬಗೆ ಬಲ್ಲಿರೆಲ್ಲ 
ವೇಳೆ ವೇಳೆಗೆ ಹಸುವ ಕರೆದುಂಬ ನರನಂತೆ 
ಕೀಳು ತೊಣಸಿಯು ಉಂಡು ಹರುಷಪಡಬಲ್ಲುದೆ       ।।೨।।

ತುಳಸಿ ಸಾನ್ನಿಧ್ಯದಲಿ ನೀರುಳ್ಳಿಯನು ಹಾಕಿ 
ಹೊಲಸು ಹೋಗ್ವುದೆ ಹಲವು ಕಾಲಿದ್ದರೆ 
ತಿಳಿವಳಿಕೆ ಇಲ್ಲದವ ಸಿರಿ ವಿಜಯವಿಠ್ಠಲನ 
ಬಳಿಯಲಿದ್ದರೇನು ದೂರಿದ್ದರೇನು                         ।।೩।।

Labels: ಎಲ್ಲಿದ್ದರೇನು ಶ್ರೀಹರಿಗಲ್ಲದವನು, Ellidarenu Sriharigalladavanu, ವಿಜಯದಾಸರು, Vijayadasaru

ಶುಕ್ರವಾರ, ಆಗಸ್ಟ್ 30, 2013

ಹರಿಯ ಮರೆದುದಕಿಂತ ಪಾಪವಿಲ್ಲ, Hariya Maredudakinta Papavilla

ಹರಿಯ ಮರೆದುದಕಿಂತ ಪಾಪವಿಲ್ಲ

ಕೀರ್ತನಕಾರರು : ವಿಜಯದಾಸರು
ರಾಗ :  ಕಾಂಬೋದಿ
 
ತಾಳ : ಝಂಪೆ 

ಹರಿಯ ಮರೆದುದಕಿಂತ ಪಾಪವಿಲ್ಲ 
ಹರಿಸ್ಮರಣೆಯಿಂದಧಿಕ ಪುಣ್ಯ ಮತ್ತೊಂದಿಲ್ಲ            ।।ಪ॥ 

ಗೋಹತ್ಯ ಸುರಾಪಾನ ಕನಕತಸ್ಕರ ಸುಜನ-
ದ್ರೋಹ ಗುರುತಲ್ಪಗಮನ ಬಲು ಕಪಟ ವ್ಯಸನ 
ಬಾಹಿರವಾಗ್ ದ್ವೇಷ ಪರದಾರಗಮನ ವಿ-
ವಾಹಗಳ ಮಾಣಿಸುವ ಪಾಪಕಿಂತಲು ಮೇಲು        ।।೧।।

ಗಂಗಾನದಿಯಲ್ಲಿ ಸ್ನಾನ ಪ್ರಣವ ಆಚಮನ 
ಹಿಂಗದಲೆ ಗಾಯತ್ರಿಮಂತ್ರ ಮೌನ 
ತುಂಗ ದಾನ ಧರ್ಮ ವೃತ್ತಿಕ್ಷೇತ್ರ ರತುನ 
ಬಂಗಾರಯಿತ್ತಧಿಕ ಬಹಳ ಪುಣ್ಯ ಮೇಲು                ।।೨।।

ಹಾಸ್ಯವಿರೋಧ ಮದ ಮತ್ಸರ ಪರಕಾರ್ಯ 
ದಾಸ್ಯದಲಿ ಕೆಡಿಸುವ ಶಠನ ಲೋಭಿ 
ವೈಶ್ವದೇವಾಹಿತ ಅತಿಥಿಗಳ ನಿಂದ್ಯ ರ 
ಹಸ್ಯ ದೂರುವ ಬಲು ಪಾಪಕಿಂತಲು ಮೇಲು         ।।೩।।

ತೀರ್ಥಯಾತ್ರೆ ವೇದ ಭಾಗವತ ಪುರಾಣ 
ಸಾರ್ಥಕ್ಯವಾದ ಪ್ರವಚನ ಶಾಸ್ತ್ರ 
ಪ್ರಾರ್ಥನೆ ಸ್ತೋತ್ರಗೀತ ಸಾರ ಪ್ರಬಂಧ 
ಅರ್ಥ ಪೇಳುವ ಬಲು ಪುಣ್ಯಕಿಂತಲು ಮೇಲು           ।।೪।।

ಮಿತ್ರಘ್ನಗರಳಪ್ರಯೋಗ ಗರ್ಭಿಣಿವಧ 
ಗೋತ್ರಸಂಸರ್ಗ ಬಲು ಪ್ರಾಣಹಿಂಸಾ 
ಕ್ಷೇತ್ರ ಅಪಹಾರ ಕ್ಷುದ್ರವಾಣಿ ನಿಜಕ-
ಳತ್ರಾದಿ ದ್ರೋಹ ಬಲು ಪಾಪಕಿಂತಲು ಮೇಲು        ।।೫।।

ವೇದಾದಿ ಕರ ಸರ್ವದಲ್ಲಿ ಗಯಾಶ್ರಾದ್ಧ 
ಭೂಧರ ಸಮಾಗಮ ಸತ್ ಶ್ರವಣಾ 
ಆದಿತ್ಯಚಂದ್ರ ಉಪರಾಗ ಪರ್ವಣಿ ನಾನಾ-
ರಾಧನೆಯಲಿ ಬಲು ಪುಣ್ಯಕಿಂತಲು ಮೇಲು             ।।೬।।

ಆವಾವ ಪಾಪ ಪುಣ್ಯಗಳದರ ಕಿಂಕರವು 
ದೇವನ ನೆನೆಸಿದಂಥ ನೆನೆಯದಂಥ 
ಜೀವರೊಳಗೊಬ್ಬ ಮುಕ್ತನು ಒಬ್ಬ ತಮಯೋಗ್ಯ 
ಕೈವಲ್ಯಪತಿ ನಮ್ಮ ವಿಜಯವಿಠ್ಠಲ ಪ್ರೇರಕಾ           ।।೭।।

Labels: ಹರಿಯ ಮರೆದುದಕಿಂತ ಪಾಪವಿಲ್ಲ, Hariya Maredudakinta Papavilla, ವಿಜಯದಾಸರು, Vijayadasaru

ಹೇಳಿದ ಯಮಧರ್ಮ ತನ್ನಾಳಿಗೆ : Helida Yamadharma Tannalige

ಹೇಳಿದ ಯಮಧರ್ಮ ತನ್ನಾಳಿಗೆ

ಕೀರ್ತನಕಾರರು : ಪ್ರಸನ್ನ ವೆಂಕಟದಾಸರು
ರಾಗ :  ಸಾರಂಗ
 
ತಾಳ : ಆದಿ

ಹೇಳಿದ ಯಮಧರ್ಮ ತನ್ನಾಳಿಗೆ                        ।।ಪ॥ 

ಹೇಳಿದ ಯಮ ತನ್ನೂಳಿಗದವರಿಗೆ 
ಖೂಳ ದುರಾತ್ಮರಾಗಿ ಬಾಳುವರನು ತರ             ।।೧।।

ಹರಿ ಸಂಕೀರ್ತನೆಯ ನರನಾರಿಯರು ಆ-
ದರದಲಿ ಮಾಡಿದವರ ನಿಂದಿಪರ ತರ                 ।।೨।।

ಹರಿದಸರಿಗುಣಕರಿಯದೆ ಜನ್ಮಾಂತ 
ಒರಟು ಮಾತಿನ ಲುಬ್ಧ ನರನಲ್ಲದೇ ತರ              ।।೩।।

ಹರಿಕಥಾಮೃತ ಉಪಚಾರಕಾಗಿ ಕೇಳುವಾ 
ಪರನಾರೇರಾಳುವ ದುರುಳನ ಕಟ್ಟಿತರ               ।।೪।।

ಗುರುಹಿರಿಯರೊಳು ಪ್ರತ್ಯುತ್ತರ ಕೊಡುವರ 
ಮರುಳಾಗಿ ಮಮತೆಯಾ ಸತಿ ವಶದನ ತರ        ।।೫।।

ಅಂಬುಜಾಕ್ಷನೆ ಪೂಜೆ ಜಂಭದಿ ಮಾಡುವ 
ರಂಭೆಯರೊಡನಾಟದ ಡಂಭನ ಹಿಡಿತರ             ।।೬।।

ಒಳ್ಳೇದು ಹಳಿದು ತಾ ಬಲ್ಲವನೆನುವನ 
ಚೆಲ್ವಾ ಪ್ರಸನ್ವೆಂಕಟಾ ವಲ್ಲಭಾಗರಿತರ                 ।।೭।।

Labels: ಹೇಳಿದ ಯಮಧರ್ಮ ತನ್ನಾಳಿಗೆ, Helida Yamadharma Tannalige, ಪ್ರಸನ್ನ ವೆಂಕಟದಾಸರು, Prasanna Venkatadasaru

ದಯವಿರಲಿ ದಯವಿರಲಿ ದಾಮೋದರ : Dayavirali Dayavirali Damodara

ದಯವಿರಲಿ ದಯವಿರಲಿ ದಾಮೋದರ

ಕೀರ್ತನಕಾರರು : ಗೋಪಾಲದಾಸರು
ರಾಗ :  ಬಿಲಹರಿ
 
ತಾಳ : ಝಂಪೆ 

ದಯವಿರಲಿ ದಯವಿರಲಿ ದಾಮೋದರ                      ।।ಪ॥
ಸಯವಾಗಿ ಬಿಡದೆನ್ನ ಸಾಕುವ ಶ್ರೀಕ್ರಷ್ಣ                     ।।ಅ.ಪ॥ 

ಹೋಗಿ ಬರುವೆನಯ್ಯ ಹೋದ ಹಾಂಗೆಲ್ಲ 
ಸಾಗುವವನಲ್ಲನಾ ನಿನ್ನ ಬಿಟ್ಟು 
ತೂಗಿ ತೊಟ್ಟಿಲು ಕೊನೆಗೆ ಸ್ಥಳದಲ್ಲೆ ನಿಲ್ಲುವುದು 
ಹ್ಯಾಗೆ ನೀ ನಡೆದಂತೆ ಹಾಗೆ ನಾ ನಡಕೊಂಬೆ            ।।೧।।

ಇದ್ದಲ್ಲೆ ಎನ್ನನುದ್ಧರಿಪ ಶಕ್ತಿ ಅ-
ಸಾಧ್ಯ ನಿನಗೆಂದು ನಾ ಬಂದವನಲ್ಲ 
ನದ್ಯಾದಿ ಕ್ಷೇತ್ರಮೂರ್ತಿಗಳಲ್ಲ್ಲಿ ನಿಜ ಜ್ಞಾನ 
ವೃದ್ಧ ಜನರ ಹುಡುಕಿ ನಿನ್ನ ತಿಳಿಯಲು ಬಂದೆ             ।।೨।।

ಸತತ ಇದ್ದಲ್ಲೆ ಎನ್ನ ಸಲಹೊ ಅವರೊಳಗಾಗಿ
ಅತಿಶಯವು ಉಂಟು ವಿಭೂತಿಯಲ್ಲಿ 
ಗತಿಯು ಸಾಧನಕೆ ಅಭಿವ್ಯಕ್ತ ಸಂದರ್ಶನದಿ 
ಸ್ಮೃತಿಗೆ ವಿಶೇಷ ಮಾರುತಿರಮಣ ನಿನ್ನ                    ।।೩।।

ನೋಡಿದೆನೆ ನಾ ನಿನ್ನ ನೋಡದೆ ಎಂದೆಂದು 
ಪಾಡಿದೆನೆ ಆರಾರು ಪಾಡದೊಂದು 
ಮಾಡಿದೆನೆ ಅರ್ಚನೆಯ ಮೀಸಲಾದುದು ಒಂದು 
ಮೂಢಮತಿಯಲಿ ಮುಂದೆ ನಿಂದೆ ಕೈಮುಗಿದು            ।।೪।।

ಬಂದೆನೊ ನಾನಿಲ್ಲಿ ಬಹುಜನ್ಮದ ಸುಕೃತ-
ದಿಂದ ನಿನ್ನ ಬಳಿಗೆ ಇಂದಿರೇಶ 
ಒಂದು ಮಾತ್ರವು ಇಟ್ಟು ಸಕಲವು ಅರ್ಪಿಸಿದೆ 
ಬಂಧನ ಬಡಿವ ಭಕುತಿಯು ಜ್ಞಾನ ನೀಡುವುದು           ।।೫।।

ಬಿನ್ನಪವ ಕೇಳು ಸ್ವಾಮಿ ಎನ್ನನೋಬ್ಬನ್ನೆ ಅಲ್ಲ 
ಎನ್ನ ಹೊಂದಿ ನಡೆವ ವೈಷ್ಣವರನ 
ಇನ್ನವರಿಗೆ ಬಾಹೊ ದುಷ್ಕರ್ಮಗಳ ಕೆಡಿಸಿ 
ಘನಗತಿಗೈದಿಸುವ ಭಕುತಿ ಕೊಡು ಕರುನಾಡಿ             ।।೬।।

ರಾಜರಾಜೇಶ್ವರ ರಾಜೀವದಳನಯನ 
ಮೂಜಗದೊಡೆಯ ಮುಕುಂದಾನಂದ 
ಈ ಜೀವಕೀ ದೇಹ ಬಂದದ್ದಕ್ಕು ಎನಗತಿ ನಿ 
ರ್ವ್ಯಾಜದಿ ಸುರಗಂಗೆ ಸ್ನಾನವನು ಮಾಡಿಸೊ              ।।೭।।

ಎನಗೆ ಆವುದು ಒಲ್ಲೆ ಎಲ್ಲೆಲ್ಲಿ ಪೋದರು 
ಕ್ಷಣ ಬಿಡದೆ ನಿನ್ನ ನೋಳ್ಪ ಜ್ಞಾನವ ಕೊಡೊ 
ಚಿನುಮಯ ಮೂರುತಿ ಗೋಪಾಲವಿಠಲ 
ಘನಕರುಣಿ ಮಧ್ವಮುನಿ ಮನಮಂದಿರನಿವಾಸ             ।।೮।।

Labels: ದಯವಿರಲಿ ದಯವಿರಲಿ ದಾಮೋದರ, Dayavirali Dayavirali Damodara, ಗೋಪಾಲ ದಾಸರು, Gopaladasaru

ಕೈಲಾಸವಾಸ ಗೌರೀಶ ಈಶ : Kailasavasa Gourisha Isha

ಕೈಲಾಸವಾಸ ಗೌರೀಶ ಈಶ

ಕೀರ್ತನಕಾರರು : ವಿಜಯದಾಸರು

ಕೈಲಾಸವಾಸ ಗೌರೀಶ ಈಶ                                   ।।ಪ॥

ತೈಲಧಾರೆಯಂತೆ ಮನಸು ಕೊಡೊ ಹರಿಯಲ್ಲಿ            ।।ಅ.ಪ॥ 

ಅಹೋರಾತ್ರಿಯಲ್ಲಿ ನಾನು ಅನುಚರಾಗ್ರಣಿವಾಗಿ 
ಮಹಿಯೊಳಗೆ ಚರಿಸಿದೆನೊ ಮಹದೇವನೆ 
ಅಹಿಭೂಷಣನೆ ಎನ್ನವಗುಣಗಳೆಣಿಸಿದಲೆ 
ವಿಹಿತಧರ್ಮದಲಿಡು ವಿಷ್ಣುಭಕುತಿ ಕೊಡೊ ಶಂಭೋ     ।।೧।।

ಮನಸು ಕಾರಣವಲ್ಲ ಪಾಪಪುಣ್ಯಂಗಳಿಗೆ 
ಅನಲಾಕ್ಷ ನಿನ್ನ ಪ್ರೇರಣೆ ಅಲ್ಲದೆ 
ದನುಜ ಗಜ ಹಾರಿಯೆ ದಂಡ ಪ್ರಣಮವ ಮಾಳ್ಪೆ 
ಮಣಿಸು ಈ ಮನಸು ಸಜ್ಜನರ ಸಿರಿ ಚರಣದಲ್ಲಿ             ।।೨।।

ಭಾಗೀರಥೀಧರನೆ ಭಯವ ಪರಿಹರಿಸೊ ಲೇ-
ಸಾಗಿ ಒಲಿದು ನೀ ಸತತ ಶರ್ವದೇವ 
ಭಾಗವತಜನಪ್ರೀಯ ವಿಜಯವಿಠಲನಂಘ್ರಿ 
ಜಗು ಮಾಡದೆ ಭಾಜಿಪ ಭಾಗ್ಯವನು ಕೊಡೊ ಶಂಭೋ  ।।೩।।

Labels: ಕೈಲಾಸವಾಸ ಗೌರೀಶ ಈಶ, Kailasavasa Gourisha Isha, ವಿಜಯದಾಸರು, Vijayadasaru

ಎಂದಿಗಾಹುದೋ ನನ್ನ ದರುಶನ : Endihahudo Nanna Darushana

ಎಂದಿಗಾಹುದೋ ನನ್ನ ದರುಶನ 

ಕೀರ್ತನಕಾರರು : ವಿಜಯದಾಸರು
ರಾಗ :  ತೋಡಿ
 
ತಾಳ : ರೂಪಕ
 
ಎಂದಿಗಾಹುದೋ ನನ್ನ ದರುಶನ          ।।ಪ॥

ಇಂದಿರೇಶ ಮುಕುಂದ ಕೇಶವ              ।।ಅ.ಪ॥

ಗಾನಲೋಲನೆ ದೀನವತ್ಸಲ 
ಮಾನದಿಂದಲಿ ನೀನೆ ಪಾಲಿಸೋ          ।।೧।।

ಯಾರಿಗೆ ಮೊರೆ ಇಡುವೆ ಶ್ರೀಹರಿ 
ಸಾರಿ ಬಂದು ನೀ ಈಗಲೇ ಪೊರಿ          ।।೨।।

ಗಜವ ಪಾಲಿಸೊ ಗರುವದಿಂದಲಿ 
ಭುಜಗಶಯನ ಶ್ರೀ ವಿಜಯವಿಠಲಾ       ।।೩।।

Labels: ಎಂದಿಗಾಹುದೋ ನನ್ನ ದರುಶನ, Endihahudo Nanna Darushana, ವಿಜಯದಾಸರು, Vijayadasaru