ಮಂಗಳವಾರ, ಆಗಸ್ಟ್ 13, 2013

ನನ್ನಿಂದ ನಾನೇ ಜನಿಸಿ ಬಂದೆನೆ : Nanninda Naane Janisi Bandene

ನನ್ನಿಂದ ನಾನೇ ಜನಿಸಿ ಬಂದೆನೆ 

ಕೀರ್ತನಕಾರರು : ಪುರಂದರದಾಸರು  
ರಾಗ :  ಮುಖಾರಿ 
ತಾಳ : ಅಟ್ಟ

ನನ್ನಿಂದ ನಾನೇ ಜನಿಸಿ ಬಂದೆನೆ ದೇವ 
ಎನ್ನ ಸ್ವತಂತ್ರವು ಲೇಶವಿದ್ದರು ತೋರು                ।।ಪ।।

ನಿನ್ನ ಪ್ರೇರಣೆಯಿಂದ ನಡೆದು ನುಡಿದ ಮೇಲೆ 
ನಿನ್ನದು ತಪ್ಪೊ ಎನ್ನದು ತಪ್ಪೊ ಪರಮಾತ್ಮ            ।।ಅ.ಪ।।

ಜನನಿಯ ಜಠರದಿ ನವಮಾಸ ಪರಿಯಂತ 
ಘನದಿ ನೀ ಪೋಷಿಸುತಿರೆ ನಾನು 
ಜನಿಸಲಾರೆನು ಎನೆ ಜನಿಸೆಂದಿಕ್ಕಳದಿಂದೆ 
ವನಜಾಕ್ಷ ನೂಕಿದವನು ನೀನಲ್ಲವೆ ದೇವ                ।।೧।।

ಅಂಧಕನ ಕೈಯಲಿ ಕೋಲಿತ್ತು ಕರೆದೊಯ್ವ 
ಮುಂದಾಳು ತಪ್ಪಿ ಗುಂಡಿಗೆ ಕೆಡಹಲು 
ಅಂಧಕನದು ತಪ್ಪೊ ಮುಂದಾಳಿನ ತಪ್ಪೊ 
ಹಿಂದಾಡಬೇಡ ಎನ್ನಲಿ ತಪ್ಪಿಲ್ಲವೋ ದೇವ                ।।೨।।

ಕಂದನ ತಾಯಿಯು ಆಡಿಸುತಿರೆ ಪೋಗಿ 
ಕಂದನು ಬಾವಿಯ ಅಂದು ನೋಡುತಿರೆ 
ಬಂದು ಬೇಗದಿ ಬಿಗಿದಪ್ಪದಿರಲು ಆ 
ಕಂದನ ತಪ್ಪೊ ಮಾತೆಯ ತಪ್ಪೊ ಪರಮಾತ್ಮ           ।।೩।।

ಭಾರವು ನಿನ್ನದೊ ದೂರು ನಿನ್ನದೊ ಕೃಷ್ಣ 
ನಾರಿ ಮಕ್ಕಳು ತನು ಮನ ನಿನ್ನವಯ್ಯ
ಕ್ಷೀರದೊಳದ್ದು ನೀರೊಳಗದ್ದು ಗೋವಿಂದ 
ಹೇರನೊಪ್ಪಿಸಿದ ಮೇಲೆ ಸುಂಕವೇತಕೆ ದೇವ             ।।೪।।

ಎಲವುಗಳ ಜಂತೆ ಮಾಡಿ ನರಗಳ ಹುರಿಯಿಂ 
ಹೊಲಿದು ಚರ್ಮವ ಹೊದಿಸಿ ದೇಹದೊಳು 
ಮಲಮೂತ್ರಕೆ ಹೊರದಾರಿ ನಿರ್ಮಿಸಿ ಹೃದಯದಲಿ 
ನೆಲಸಿ ಚೇತನವನಿತ್ತವ ನೀನಲ್ಲವೆ                           ।।೫।।

ಜನಿಸಿದಾರಭ್ಯದಿಂದ  ಇಂದಿನ ಪರಿಯಂತ 
ಘನಘನ ಪಾಪ ಸುಕರ್ಮಂಗಳನು 
ಮನಕೆ ಬೋಧಿಸಿ ಮಾಡಿಸಿ ಮುಂದೆ ಇದನೆಲ್ಲ 
ಅನುಭವಿಸುವುದು ಜೀವನೊ ನೀನೊ ದೇವ                ।।೬।।

ನ್ಯಾಯವಾದರೆ ದುಡುಕು ನಿನ್ನದೊ ಮತ್ತ-
ನ್ಯಾಯವಾದರೆ ಪೇಳುವರಾರು ?
ಕಾಯಜಪಿತ ಕಾಗಿನೆಲೆಯಾದಿಕೇಶವ 
ರಾಯ ನೀ ಕಾಯಯ್ಯ ತಪ್ಪುಗಳೆಣಿಸದೆ                       ।।೭।।


Labels: ನನ್ನಿಂದ ನಾನೇ ಜನಿಸಿ ಬಂದೆನೆ, Nanninda Naane Janisi Bandene, ಪುರಂದರದಾಸರು, Purandaradasaru

4 ಕಾಮೆಂಟ್‌ಗಳು: