ಮಂಗಳವಾರ, ಆಗಸ್ಟ್ 13, 2013

ಇದು ಏನೆಶೋದಾ : Idu Eneshoda

ಇದು ಏನೆಶೋದಾ

ಕೀರ್ತನಕಾರರು : ಹರಪನಹಳ್ಳಿ ಭೀಮವ್ವ

ಇದು ಏನೆಶೋದಾ 
ಇದು ಏನೆಶೋದಾ ದಧಿಯ ದಾಮೋದರ 
ಹೆದರಿಕಿಲ್ಲದೆ ಕುಡಿದೋಡಿ ತಾ ಪೋದ                     ।।ಪ।।

ಕೊಳಲನೂದುತಿರೆ ಆಕಳನೆ ಕಾಯುತಲ್ಹೋಗಿ 
ಕಳಲ ಗಡಿಗೆ ಸುತ್ತ ಕುಣಿದಾಡುವುದು                       ।।೧।।

ವತ್ಸ ಕಾಯುತ ವನದೊಳಗೆ ಆಡೆಂದರೆ 
ಕಿಚ್ಚುನುಂಗಿ ಸರ್ಪವ ತುಳಿಯುವುದು                       ।।೨।।

ಚೆಂಡನಾಡುತ ತುರುವ್ಹಿಂಡು ಕಾಯೆಂದರೆ
ಗಂಡನುಳ್ಳವರ‍್ಹಿಂದ್ಹಿಂದೆ ತಿರುಗುವುದು                      ।।೩।।

ವತ್ಸನಂದದಲಿ ಬಾಯ್‍ಹಚ್ಚಿ ಗೋವಿನ ಕ್ಷೀರವ 
ಅಷ್ಟು ಕುಡಿದನಾಶ್ಚರ್ಯ ನೋಡಮ್ಮ                       ।।೪।।

ಇಂದೆನ್ನ ಮನೆಯಲ್ಲೊಂದಿಷ್ಟು ಕ್ಷೀರಗಳಿಲ್ಲ 
ಗಂಡನತಿ ದುಷ್ಟೆನ್ನ ಕೊಲ್ಲುವನಮ್ಮ                         ।।೫।।

ಮೌನಗೌರಿಯ ನೋಟು ನೀರೊಳಗಿದ್ದೆವೆ 
ಮಾನಹೀನರ ಮಾಡಿ ಮರವನೇರುವುದು                ।।೬।।

ಬ್ಯಾಡೋ ಕೃಷ್ಣನೆ ಬಟ್ಟೆ ನೀಡೆಂದಾಲ್ಪರಿಯಲು 
ಜೋಡಿಸಿ ನಿಮ್ಹಸ್ತ ಮುಗಿಯಿರೆಂದಾಡುವುದು              ।।೭।।

ಬುದ್ಧಿಹೇಳೆಂದರೆ ಮುದ್ದುಮಾಡುವರೇನೊ 
ಕದ್ದುಬಂದರೆ ಕಾಲು ಕಟ್ಟಿ ಹಾಕಮ್ಮ                          ।।೮।।

ಅಂಧಕಾರದ ಮನೆಯೊಳಿಟ್ಟಿದ್ದ ದಧಿ ಬೆಣ್ಣೆ 
ಚಂದ್ರನಂತ್ಹೊಕ್ಕು ತಾ ತಿಂದ ನೋಡಮ್ಮ                  ।।೯।।

ಕೇರಿಮಕ್ಕಳ ನೋಡೋ ಮಹರಾಯ ಬಲರಾಮ 
ದೊಡ್ಡ ಮಗನು ಎಲ್ಲೆ ದೊರಕಿದನಮ್ಮ                       ।।೧೦।।

ಮೀಸಲ್ಹಾಕಿದ ಬೆಣ್ಣೆ ನೀ ಸವಿದೀಯೆಂದು 
ಲೇಸಾಗಿ ಹೇಳೆ ಭೀಮೇಶಕೃಷ್ಣನಿಗೆ                          ।।೧೧।।

Labels: ಇದು ಏನೆಶೋದಾ, Idu  Eneshoda,  ಹರಪನಹಳ್ಳಿ ಭೀಮವ್ವನವರು, Harapanahalli Bheemavvanavaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ