ಬುಧವಾರ, ಸೆಪ್ಟೆಂಬರ್ 11, 2013

ಎಂಥಾ ಬಲವಂತನೊ : Entha Balavantano

ಎಂಥಾ ಬಲವಂತನೊ ಕುಂತಿಯ ಸುಜಾತನೊ

ಕೀರ್ತನಕಾರರು : ಪುರಂದರದಾಸರು
ರಾಗ : ಶಹನ
ತಾಳ : ಆದಿ

ಎಂಥಾ ಬಲವಂತನೊ ಕುಂತಿಯ ಸುಜಾತನೊ                 ||ಪ||

ಭಾರತಿಗೆ ಕಾಂತನೊ ನಿತ್ಯ ಶ್ರೀಮಂತನೊ                      ||ಅ.ಪ||

ರಾಮಚಂದ್ರನ ಪ್ರಾಣನೊ ಅಸುರಹೃದಯಬಾಣನೊ
ಖಳರ ಗಂಟಲಗಾಣನೊ ಜಗದೊಳಗೆ ಪ್ರವೀಣನೊ             ||೧||

ಕುಂತಿಯ ಕಂದನೊ ಸೌಗಂಧಿಕವ ತಂದನೊ
ಕುರುಕ್ಷೇತ್ರಕೆ ಬಂದನೊ ಕೌರವರ ಕೊಂದನೊ                  ||೨||

ಭಂಡಿ ಅನ್ನವನುಂಡನೊ ಬಕನ ಪ್ರಾಣವ ಕೊಂಡನೊ
ಭೀಮ ಪ್ರಚಂಡನೊ ದ್ರೌಪದಿಗೆ ಗಂಡನೊ                     ||೩||

ವೈಷ್ಣವಾಗ್ರಗಣ್ಯನೊ ಸಂಚಿತಾಗ್ರಪುಣ್ಯನೊ
ದೇವವರೇಣ್ಯನೊ ದೇವಶರಣ್ಯನೊ                           ||೪||

ಮಧ್ವಶಾಸ್ತ್ರವ ರಚಿಸಿದನೊ ಸದ್ವೈಷ್ಣವರ ಸಲಹಿದನೊ
ಉಡುಪಿಲಿ ಕೃಷ್ಣನ ನಿಲಿಸಿದನೊ ಪುರಂದರವಿಠಲಗೆ ದಾಸನೊ   ||೫||

Labels: ಎಂಥಾ ಬಲವಂತನೊ, Entha Balavantano, ಪುರಂದರದಾಸರು, Purandaradasaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ