ಬುಧವಾರ, ಸೆಪ್ಟೆಂಬರ್ 11, 2013

ಜೋ ಜೋ ಶ್ರೀಕೃಷ್ಣ ಪರಮಾನಂದ : Jo Jo Sri Krishna Paramananda

ಜೋ ಜೋ ಶ್ರೀಕೃಷ್ಣ ಪರಮಾನಂದ

ಕೀರ್ತನಕಾರರು : ಪುರಂದರದಾಸರು
ರಾಗ : ಚಂದ್ರ
ತಾಳ : ಆದಿ

ಜೋ ಜೋ ಶ್ರೀಕೃಷ್ಣ ಪರಮಾನಂದ
ಜೋ ಜೋ ಗೋಪಿಯ ಕಂದ ಮುಕುಂದ ಜೋಜೋ       ||ಪ||

ಪಾಲಗಡಲೊಳು ಪವಡಿಸಿದವನೆ
ಆಲದೆಲೆಯ ಮೇಲೆ ಮಲಗಿದ ಶಿಶುವೆ
ಶ್ರೀಲತಾಂಗಿಯರ ಚಿತ್ತದೊಲ್ಲಭನೆ
ಬಾಲ ನಿನ್ನನು ಪಾಡಿ ತೂಗುವೆನಯ್ಯ ಜೋಜೋ            ||೧||

ಹೊಳೆವಂಥ ರನ್ನದ ತೊಟ್ಟಿಲ ಮೇಲೆ
ಥಳಥಳಿಸುವ ಗುಲಗಂಜಿಯ ಮಾಲೆ
ಅಳದೆ ನೀ ಪಿಡಿದಾಡೆನ್ನಯ ಮುದ್ದು ಬಾಲ
ನಳಿನನಾಭನೆ ನಿನ್ನ ಪಾಡಿ ತೂಗುವೆನು ಜೋಜೋ         ||೨||

ಯಾರ ಕಂದ ನೀನಾರ ನಿಧಾನಿ
ಆರ ರತ್ನವೊ ನೀನಾರ ಮಾಣಿಕವೊ
ಸೇರಿತು ಎನಗೊಂದು ಚಿಂತಾಮಣಿ ಎಂದು
ಪೋರ ನಿನ್ನನು ಪಾಡಿ ತೂಗುವೆನಯ್ಯ ಜೋಜೋ           ||೩||

ಗುಣನಿಧಿಯೆ ನಿನ್ನ ಎತ್ತಿಕೊಂಡಿದ್ದರೆ
ಮನೆಯ ಕೆಲಸವಾರು ಮಾಡುವರಯ್ಯ
ಮನಕೆ ಸುಖನಿದ್ರೆಯ ತಂದುಕೋ ಬೇಗ
ಫಣಿಶಯನನೆ ನಿನ್ನ ಪಾಡಿ ತೂಗುವೆನು ಜೋಜೋ         ||೪||

ಅಂಡಜವಾಹನ ಅನಂತಮಹಿಮ
ಪುಂಡರೀಕಾಕ್ಷ ಶ್ರೀ ಪರಮಪಾವನ
ಹಿಂಡು ದೈವದ ಗಂಡ ಉದ್ದಂಡನೆ
ಪಾಂಡುರಂಗ ಶ್ರೀ ಪುರಂದರ ವಿಠಲ ಜೋಜೋ          ||೫||

Labels: ಜೋ ಜೋ ಶ್ರೀಕೃಷ್ಣ ಪರಮಾನಂದ, Jo Jo Sri Krishna Paramananda, ಪುರಂದರದಾಸರು, Purandaradasaru

1 ಕಾಮೆಂಟ್‌: